ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾರ್ಗದರ್ಶಕರು ಕ್ಷೇತ್ರಕಾರ್ಯಕ್ಕೆ ಹೋಗೆಂದರೆ; ನಾ ಜೈಲಿಗೆ ಹೋಗಿದ್ದೆ…

ಅರವಿಂದ ಮಾಲಗತ್ತಿ

ನಿಮ್ಮ ಪಿ ಎಚ್ ಡಿ ಸಂಶೋಧನಾ ಮಾರ್ಗದರ್ಶಕರು ಯಾರು? ಎಂದು ಕೆಲವರು ಪ್ರಶ್ನಿಸಿದರೆ; ಇನ್ನು ಕೆಲವರು ‘ನಿಮ್ಮ ಮಾರ್ಗದರ್ಶಕರು ಡಾ.ಎಂ ಎಂ ಕಲಬುರ್ಗಿಯವರು ಅಲ್ಲವೇ?’ ಎಂದೂ ಪ್ರಶ್ನಿಸಿದ್ದೂ ಇದೆ. ಆದರೆ ನನ್ನ ಪಿ ಎಚ್ ಡಿ ಯ ಮಾರ್ಗದರ್ಶಕರು ಡಾ. ಸೋಮಶೇಖರ ಇಮ್ರಾಪುರ ಅವರು. ನಾನು ಕನ್ನಡ ಎಂ ಎ ಓದಿದ ವಿದ್ಯಾರ್ಥಿಯಲ್ಲ. ಕನ್ನಡ ಜಾನಪದದ ವಿಷಯದಲ್ಲಿ ಎಂ ಎ ಮಾಡಿದ್ದು.

ಆಗ ಕರ್ನಾಟಕ ವಿಶ್ವವಿದ್ಯಾನಿಲಯದ ಜಾನಪದ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ. ಸೋಮಶೇಖರ ಇಮ್ರಾಪುರ. ಇವರು ಸ್ಪರ್ಧಾತ್ಮಕವಾಗಿ ಜಾನಪದ ವಿಭಾಗವನ್ನು ಕಟ್ಟಿ ಬೆಳೆಸಿದವರು. ಇವರಲ್ಲಿ ಹಠ ಹಿಡಿದು ಇವರ ಮಾರ್ಗದರ್ಶನದಲ್ಲಿಯೇ ಡಾಕ್ಟರೇಟ್ ಪದವಿಯನ್ನು ಪಡೆದೆ. ಅವರು ‘ಮಾರ್ಗದರ್ಶನ ನನ್ನಿಂದ ಸಾಧ್ಯವಿಲ್ಲ’ ಎಂದು ಹೇಳಿದರೂ ನಾನು ಬೆನ್ನು ಬಿಟ್ಟಿರಲಿಲ್ಲ. ಬಹುಶ: ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ದಲಿತ ವಿದ್ಯಾರ್ಥಿ ನಾನೇ ಎನಿಸುತ್ತದೆ. ನನಗಿಂತ ಮೊದಲೇ ಪಿ ಎಚ್ ಡಿ ಗೆ ನೋಂದಣಿ ಮಾಡಿದ ದಲಿತ ಸಂಶೋಧನಾ ವಿದ್ಯಾರ್ಥಿಗಳು ಇದ್ದರೂ ಮೊದಲು ಮಹಾಪ್ರಬಂದವನ್ನು ಸಾದರಪಡಿಸಿದವ ನಾನಾಗಿದ್ದೆ. ನನಗಿಂತ ಹಿರಿಯರಾದ ಡಾ. ಪಿ ಕೆ ಖಂಡೋಬಾ ಅವರು ನನ್ನ ನಂತರ ಡಾಕ್ಟರೇಟ್ ಪದವಿಯನ್ನು ಪಡೆದರು. ನಮ್ಮಿಬ್ಬರ ಮಾರ್ಗದರ್ಶಕರು ಅವರೇ ಆಗಿದ್ದರು.

ಅಂದಿನ ದಿನಮಾನಗಳಲ್ಲಿ ದಲಿತರು ಪಿ ಎಚ್ ಡಿ ಸಂಶೋಧನೆಗೆ ಪ್ರವೇಶ ಮಾಡುವುದು ದುಸ್ಥಿತಿಯಲ್ಲಿತ್ತು. ಜಾತಿ ವ್ಯವಸ್ಥೆಯ ಬೇರುಗಳು ತುಂಬಾ ಬಿಗಿಯಾಗಿದ್ದ ಕಾಲವದು. ದಲಿತರಿಗೆ ಮಾರ್ಗದರ್ಶಕರು ದುರ್ಲಭವಾಗಿದ್ದ ಕಾಲ. ಯಾರೂ ಒಪ್ಪುತ್ತಿರಲಿಲ್ಲ. ಈಗಿನಂತೆ ದಲಿತರಿಗೆ ಸಂಶೋಧನೆಯಲ್ಲಿ ಆಗ ಮೀಸಲು ಸ್ಥಾನಗಳೂ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ನಮ್ಮ ಕೈಹಿಡಿದವರೇ ಡಾ. ಇಮ್ರಾಪುರ. ಅವರ ಪ್ರಗತಿಪರ ಚಿಂತನೆಯಿಂದಾಗಿ ನಮಗೆ ಅವಕಾಶ ದೊರಕಿತ್ತು. ನನಗೆ ಯುಜಿಸಿ ಫೆಲೋಶಿಪ್ ದೊರಕಿತ್ತು. ಅನಂತರದಲ್ಲಿ ಎಸ್ ಸಿ /ಎಸ್ ಟಿ ಗೆ – 2 ಮೀಸಲು ಸ್ಥಾನ ದೊರೆತವು.

ಡಾ.ಇಮ್ರಾಪುರ ಅವರು ಮಹತ್ವದ ಜಾನಪದ ವಿದ್ವಾಂಸರಲ್ಲಿ ಒಬ್ಬರು. ‘ಜಾನಪದ’ವನ್ನು ‘ವಿಜ್ಞಾನ’ವೆಂದು ಪರಿಗಣಿಸಬೇಕೆಂದು ವಾದಿಸಿದವರಲ್ಲಿ ಇವರು ಮೊದಲಿಗರು. ಈ ಕುರಿತು ಒಂದು ಪುಸ್ತಕವನ್ನು ಅವರು ಪ್ರಕಟಿಸಿದ್ದಾರೆ. ಇವರ ಪಿಎಚ್‌ಡಿ ಪ್ರಬಂಧ ‘ಜನಪದ ಒಗಟು’ಗಳಿಗೆ ಸಂಬಂಧಿಸಿದ್ದು. ತುಂಬಾ ವಿದ್ವತ್ಪೂರ್ಣವಾದ ಮಹಾ ಪ್ರಬಂಧ.

ಡಾ.ಇಮ್ರಾಪುರ ಅವರು ಜಾನಪದ ವಿದ್ವಾಂಸರಲ್ಲದೆ ಕನ್ನಡದ ಮಹತ್ವದ ಕವಿಗಳೂ ಹೌದು. ಇವರ ಕಾವ್ಯವು ಜನಪದ ಶೈಲಿಯನ್ನು ಒಳಗೊಂಡದ್ದು , ಡಾ.ಚಂದ್ರಶೇಖರ ಕಂಬಾರ ಮತ್ತು ಇವರು ಹೆಚ್ಚು ಕಡಿಮೆ ಒಂದೇ ಕಾಲಘಟ್ಟದಲ್ಲಿ ಬರಹವನ್ನು ಆರಂಭಿಸಿದವರು. ಇವರು ಬರೆದ ‘ಗಂಡ ಹೆಂಡರ ಜಗಳ ಗಂಧ ತೀಡಿದಾಂಗ’ ಕವನ ಸಂಕಲನ ತುಂಬಾ ಪ್ರಸಿದ್ಧವಾದದ್ದು. ಇದಕ್ಕೆ ಅಕಾಡೆಮಿಯ ಪ್ರಶಸ್ತಿ ಬಂದದೆ. ನನ್ನ ಅಣ್ಣ ಬಸವರಾಜ ಮಾಲಗತ್ತಿ ಕನ್ನಡ ಎಂ ಎ ಓದುವಾಗ ಇವರ ವಿದ್ಯಾರ್ಥಿಯೇ ಆದರೂ ಈತ ನಮ್ಮೂರ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ‘ಗಂಡ ಹೆಂಡರ ಜಗಳ ಗಂಗಾ ತೀಡಿದಾಂಗ’ ಎಂಬ ಶೀರ್ಷಿಕೆಯ ಹಾಡನ್ನೇ; ಗಂಡ ಹೆಂಡತಿಯ ಪಾತ್ರಗಳ ಮೂಲಕ ಅಭಿನಯಿಸುತ್ತಾ ಹಾಡಿದ್ದು; ನನಗೆ ಈಗಲೂ ಕಣ್ಣಲ್ಲಿ ಕಟ್ಟಿದಂತಿದೆ. ಅದೊಂದು ಅದ್ಬುತ ಗೀತೆ. ಇಂತಹ ಹಲವಾರು ಹಾಡುಗಳು ಆ ದಿನಗಳಲ್ಲಿ ಧಾರವಾಡ ಕ್ಯಾಂಪಸ್ಸಿನ ತುಂಬಾ ಮೊಳಗುತ್ತಿದ್ದವು. ಈ ಕವಿ ಆಗಲೇ ‘ಸ್ಟಾರ್ ವ್ಯಾಲ್ಯು’ ಗಿಟ್ಟಿಸಿಕೊಂಡಿದ್ದರು. ವಿಮರ್ಶಕರಾಗಿಯೂ ಗುರುತಿಸಿಕೊಂಡಿದ್ದರು.

ಇದೆಲ್ಲಕ್ಕೂ ಮಿಗಿಲಾಗಿ ಡಾ. ಇಮ್ರಾಪುರ ಅವರು ನಮ್ಮೂರ ಮುದ್ದೇಬಿಹಾಳದ ಗೌಡರಾದ ಶಿವಸಂಗಪ್ಪಗೌಡರ ( ಶ್ರೀ ಶಿವಸಂಗನಗೌಡ ಪಾಟೀಲ) ಮಗಳಾದ ಶಾಂತಾದೇವಿಯವರನ್ನು ಮದುವೆಯಾಗಿದ್ದು ನಮಗೆ ದೊಡ್ಡ ಹೆಮ್ಮೆಯ ಸಂಗತಿಯಾಗಿತ್ತು. ಶ್ರೀಮತಿ ಶಾಂತಾದೇವಿ ಅವರು ನನ್ನ ಸಹೋದರಿ ಸುಮಿತ್ರ ಅವರ ಸ್ನೇಹಿತೆ. ಮದುವೆಯಾದ ನಂತರ ಈ ದಂಪತಿಗಳು ನಮ್ಮ ಮನೆಗೆ ಬಂದಿದ್ದರು. ಅಸ್ಪೃಶ್ಯರಕೇರಿಗೆ ಈ ದಂಪತಿಗಳು ಬಂದದ್ದು ಅಂದಿನ ಕಾಲಕ್ಕೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಊರ ಗೌಡರ ಮಗಳು ಮತ್ತು ಅಳಿಯ ಹರಿಜನ ಕೇರಿಗೆ ಕಾಲಿಡುವುದು ಎಂದರೆ ಸಣ್ಣ ಸಂಗತಿಯೆ ?

ನಾನು ಚಿಕ್ಕವನಿದ್ದಾಗ ತಾಯಿಯೊಂದಿಗೆ ಹೊಲಕ್ಕೆ ಹೋಗುವುದು ಸಾಮಾನ್ಯ. ಗೌಡರ ತೋಟದ ಆಚೆಗೆ ನಮ್ಮದು ಒಂದು ಮಸಾರಿ ಹೊಲ. ಊಟಕ್ಕಾಗಿ ಗೌಡರ ತೋಟಕ್ಕೆ ಕರೆದೊಯ್ಯುತ್ತಿದ್ದಳು ನನ್ನವ್ವ. ಅವರ ಭಾವಿಯ ದಡದ ಬದಿಗೆ ಕುಳಿತು ಊಟ ಮಾಡುತ್ತಿದ್ದೆವು. ಶ್ರೀಮತಿ ಶಾಂತಾದೇವಿಯವರ ತಾಯಿ ಆಗಾಗ ತೋಟಕ್ಕೆ ಬರುತ್ತಿದ್ದರು. ನಾವು ಊಟಕ್ಕೆ ಕುಳಿತಾಗ ರೂಢಿಯಂತೆ, ಎತ್ತಿ ಹಾಕಿದ ತೆಳ್ಳನೆ ಬೆಳ್ಳನೆಯ ಪುಟ್ಟ ಬಿಳಿ ಜೋಳದ ರೊಟ್ಟಿಗಳು ಬಲು ಆಕರ್ಷಕ. ಆ ರೊಟ್ಟಿ ನಾನೇ ತಿನ್ನುತ್ತಿದ್ದೆ. ಆದರೆ ಅದರ ಮೇಲೆ ಹಾಕಿಕೊಡುವ ಬೇಳೆ ಮಾತ್ರ ನನ್ನಿಂದ ತಿನ್ನಲಾಗುತ್ತಿರಲಿಲ್ಲ. ಕಾರಣ ಅವರು ಬೇಳೆಗೆ “ಇಂಗು” ಹಾಕಿ ಮಾಡಿರುತ್ತಿದ್ದರು. ಆ ಪದ್ಧತಿ ನಮ್ಮ ಮನೆಯಲ್ಲಿ ಇರಲಿಲ್ಲ ಹೀಗಾಗಿ ಉಮ್ಮಳಿಕ್ಕೆ ಬರುತ್ತಿದ್ದರಿಂದ ನಾನು ತಿನ್ನುತ್ತಿರಲಿಲ್ಲ .

ಶ್ರೀಮತಿ ಶಾಂತಾದೇವಿಯವರೂ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಸ್ತ್ರೀವಾದಿ ಅಧ್ಯಯನ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಬಹುಮುಖ್ಯ ಹೆಸರು. 30ಕ್ಕೂ ಹೆಚ್ಚಿನ ಸ್ವತಂತ್ರ ಕೃತಿಗಳನ್ನು ಇವರು ನೀಡಿದ್ದಾರೆ. ಡಾ ಸೋಮಶೇಖರ ಇಮ್ರಾಪುರ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯವರು. ಇವರು ಪ್ರಕಟಿಸಿದ ಪ್ರಧಾನ ಕವನ ಸಂಕಲನಗಳೆಂದರೆ; ಬೆಂಕಿ, ಬಿರುಗಾಳಿ , ಬಿಸಿಲ ಹೂ, ಬೆಳದಿಂಗಳು, ಬೇವು ಬೆಲ್ಲ ಮುಂತಾದವು. ಇವರ ಕೃತಿಗಳಿಗೆ ಮತ್ತು ಸಮಗ್ರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ, ಜಾನಪದ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ನನ್ನ ಸಂಶೋಧನೆಯ ಸಂದರ್ಭದಲ್ಲಿ ಇವರೊಂದಿಗೆ ಮಾಡಿದ ಗುದ್ದಾಟಗಳು ಒಂದೆರಡಲ್ಲ. ಇವರಲ್ಲದೆ ಬೇರೆ ಯಾರಾದರೂ ನನಗೆ ಮಾರ್ಗದರ್ಶಕರಾಗಿದ್ದರೆ, ಸೀದಾ ಮನೆಗೆ ಕಳುಹಿಸುತ್ತಿದ್ದರು. ಬಹುಶಹ ನನ್ನ ಅಣ್ಣ ಬಸವರಾಜ ಒಲವಿನಿಂದಾಗಿ ನನಗೆ ರಿಯಾಯಿತಿಗಳು ಸಿಕ್ಕಿವೆ. ಕನ್ನಡ ಭಾಷಾಗೆ ಸಂಬಂಧಿಸಿದ “ಗೋಕಾಕ್ ಚಳುವಳಿ”ಯ ಹೋರಾಟದ ಸಂದರ್ಭದಲ್ಲಿ ನನಗೆ ಪಿ ಎಚ್ ಡಿ ಕ್ಷೇತ್ರಕಾರ್ಯದ ಕೆಲಸಕ್ಕಾಗಿ ಹೋಗಲು ಹೇಳಿದ್ದರು. ‘ನನಗೆ ಇನ್ನು ಮೇಲಿಂದ ಚಳವಳಿಯ ಹೋರಾಟಕ್ಕೆ ಬರಲಾಗದು’ ಎಂದು ಹೇಳಿ ಬರಲು ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ ಬಂದಿದ್ದೆ. “ನಾಳೆಯಿಂದ ‘ಜೈಲ್ ಭರೋ’ ಕಾರ್ಯಕ್ರಮಕ್ಕೆ ಬರುವವರು ಯಾರು ಹೆಸರು ಕೊಡಿ” ಎಂದು ಚಳವಳಿಯ ಹೋರಾಟ ಸಮಿತಿಯ ಕಾರ್ಯದರ್ಶಿಗಳಾಗಿದ್ದ
ಡಾ. ಚಂದ್ರಶೇಖರ ಪಾಟೀಲ ಅವರು ಕೇಳಿದ್ದರಿಂದ ನಾನು ಹಾಗೂ ನನ್ನ ಸ್ನೇಹಿತ ಡಾ. ಆನಂದ ಪಾಟೀಲ ಮೊದಲೇ ಹೆಸರು ಕೊಟ್ಟಿದ್ದೆವು.

ಕೊಟ್ಟ ಮಾತಿಗೆ ತಪ್ಪುವುದು ಹೇಗೆ? ಎಂದು ಮನಸ್ಸು ಪರಿವರ್ತನೆಯಾಗಿ; ಕ್ಷೇತ್ರಕಾರ್ಯದ ಕೆಲಸ ಕೈ ಬಿಟ್ಟು “ಜೈಲ್ ಭರೋ” ಹೋರಾಟಗಾರರ ಸಮೂಹದೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಹೋಗಿದ್ದೆ. ಆಗ ಅವರು ‘ನೀನು ನನ್ನ ವಿದ್ಯಾರ್ಥಿಯೂ ಅಲ್ಲ ನಾನು ನಿನ್ನ ಮಾರ್ಗದರ್ಶಕನೂ ಅಲ್ಲ ಹೋಗು ‘ ಎಂದು ಗದರಿದ್ದು ಮರೆಯಲಾಗದು. ಕ್ಷೇತ್ರಕಾರ್ಯಕ್ಕೆ ಹೋಗುವೆನೆಂದು ನಾನು ರಜೆಚೀಟಿ ಬರೆದು ಕೊಟ್ಟಿದ್ದೆ. ಅವರು ಕ್ಷೇತ್ರ ಕಾರ್ಯದ ಅನುಕೂಲಕ್ಕಾಗಿ ಪರಿಚಯ ಪತ್ರವನ್ನೂ ಕೊಟ್ಟಿದ್ದರು. ಅದು ಅವರಿಗೆ ಆಡಳಿತಾತ್ಮಕ ಸಮಸ್ಯೆಗಳ ಆತಂಕವನ್ನು ತಂದೊಡ್ಡಿತ್ತು. ಅವರ ಅಧಿಕಾರ ವಾಣಿಯ ಬೈಗಳ, ಕ್ಷಮೆಯ ಗುಣ ನನ್ನನ್ನು ಪರೋಕ್ಷವಾಗಿ ಬೆಳೆಯುವಂತೆ ಮಾಡಿವೆ.

ಭಾವಚಿತ್ರಗಳಲ್ಲಿ ಡಾ. ಸೋಮಶೇಖರ್ ಇಮ್ರಾಪುರ ಡಾ.ಶಾಂತಾದೇವಿ ಇಮ್ರಾಪುರ. ಹಾಗೂ ಶಾಂತಾದೇವಿಯವರ ತಂದೆ ಮತ್ತು ತಾಯಿ ನಮ್ಮೂರ ಗೌಡರು.

‍ಲೇಖಕರು avadhi

3 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading