ಮಾಯಾಲಾಂದ್ರದಲ್ಲಿ ಕಥೆ ಹುಟ್ಟುವ ಸಮಯ

ಒಂದು ಕತೆಯ ವರ್ತುಲದಲ್ಲಿ ಎಷ್ಟೆಲ್ಲ ಪರಿಮಳ..

raghavendra joshi

ರಾಘವೇಂದ್ರ ಜೋಶಿ

ಕತೆ ಅನ್ನುವದೆಲ್ಲ ಹೇಗೆ ಹುಟ್ಟುತ್ತದೆ?

ಕತೆಯೊಂದು ಹುಟ್ಟುವ ಘಳಿಗೆ ಆಕಸ್ಮಿಕವಾದದ್ದು. ಹಾಗೆಯೇ ಅಂತ್ಯ ಕೂಡ. ಎಷ್ಟೋ ಸಲ ಮನದಲ್ಲಿ ಮೊದಲೇ ಘೋಷಿಸಿಕೊಂಡು ಬರೆಯುವ ಕತೆ ಮುಂದೆ ಚಲಿಸಿದಂತೆಲ್ಲ ತನ್ನಲ್ಲಿರುವ ಗುಟ್ಟುಗಳನ್ನು ಬಿಟ್ಟುಕೊಡುತ್ತ ಧೈರ್ಯಶಾಲಿಯಾಗುತ್ತ ಹೋಗುತ್ತದೆ. ಇಲ್ಲದಿದ್ದಲ್ಲಿ ಕೇವಲ ಪಾಂಡವರ ಮತ್ತು ಕೌರವರ ಜೀವನ ಶೈಲಿಯನ್ನು ಬಿಂಬಿಸಬಹುದಾಗಿದ್ದ ಮಹಾಭಾರತ ನೂರೊಂದು ಟಿಸಿಲುಗಳಾಗಿ ಒಡೆಯುತ್ತಿರಲಿಲ್ಲ. ಬರೆಯುವ ಮುನ್ನ ಚಂಚಲೆಯಂತಿರುವ ಕತೆಯೊಂದು ಬರಬರುತ್ತ ತನ್ನೆಲ್ಲ ಭಯಗಳನ್ನು ಮೆಟ್ಟಿನಿಂತು ಕೊನೆಗೊಮ್ಮೆ ಬಟಾಬಯಲಾಗುವದು ಹೀಗೆ.

212ನಾನು ಕತೆಗಾರನಲ್ಲ. ಹೀಗಾಗಿ ಕತೆಯ ಶೈಲಿ, ತಂತ್ರ, ಪ್ರಕಾರ, ಉಪಸಂಹಾರಗಳ ಬಗ್ಗೆ ಮಾತನಾಡುತ್ತಿಲ್ಲ. ಇಷ್ಟಕ್ಕೂ ಕತೆ ಅಂದರೆ ಏನು? ಅದು ಎಲ್ಲಿರುತ್ತದೆ? ಅನ್ನುವದರ ಬಗ್ಗೆ ಯೋಚಿಸುತ್ತಿದ್ದೇನೆ. ಕತೆ ಅಂದರೆ ಘಟಿಸಿದ ಅಥವಾ ಕಲ್ಪನೆಯ ವಸ್ತುಗಳು- ಅಂತನ್ನುವ ಒಂದು ಸಾಲಿನ ನಿಘಂಟಿನ ಉತ್ತರಗಳಲ್ಲಿ ನನಗೆ ನಂಬಿಕೆ ಇಲ್ಲ. ಕತೆ ಅಂದರೆ ಸುದ್ದಿ ಮಾಡಬಲ್ಲಂಥ ಸರಕುಗಳು ಅನ್ನುವ ಮಾತಿನಲ್ಲೂ ನಂಬಿಕೆಯಿಲ್ಲ. ಹಾಗೆಯೇ ಪೂರ್ವಯೋಜಿತ ಕ್ರಮಗಳು ಅಥವಾ ಕ್ರಮಬದ್ಧವಾಗಿ ಜೋಡಿಸಿಟ್ಟ ಶಬ್ದಗುಚ್ಛಗಳೇ ಕತೆಗಳು ಅಂತೆಲ್ಲ  ಅನ್ನುವದೇ ನಿಜವಾದರೆ  ಕತೆಯೊಂದನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದಂತೆ.

ತಮಾಷೆಯೆಂದರೆ, ಇದನ್ನೆಲ್ಲ ಅಕಾಡೆಮಿಕ್ ಆಗಿ ವಿವರಿಸ ಹೋದರೆ ಅದು ಕೆಟ್ಟುಹೋಗುವ ಸಂಭವಗಳೇ ಹೆಚ್ಚು. ಯಾಕೆಂದರೆ, “ಕಾಡಿನಲ್ಲೊಂದು ಮರ ಬಿತ್ತು..” ಅಂತ ಶುರುವಾಗುವ ಕತೆಯೊಂದರ ಸಾಧಾರಣ ವಾಕ್ಯದ ಹಿಂದೆಯೇ ಅತ್ಯಂತ ದಾರುಣವಾದ ರುದ್ರ ಕತೆಯಿರಬಹುದು. ಆದರೆ ಅದು ಇನ್ ವಿಸಿಬಲ್. ಹೀಗಾಗಿ ಕತೆಯ ಶುರುವಾತು ಎಂಬುದು ಕತೆಯ ನಿಜವಾದ ಆರಂಭವೇ ಅಲ್ಲದಿರಬಹುದು. ಹಾಗಾದಾಗ ಕತೆಯ ಹುಟ್ಟು, ಶುರುವಾತು ಎಲ್ಲಿ ಅನ್ನುವ ಯೋಚನೆ ಶುರುವಾಗುತ್ತದೆ. ನಿಜವಾದ ಸಮಸ್ಯೆ ಇರುವದು ಇಲ್ಲಿ: ನಾನು ಹಾಗೆ ಕತೆ  ಹೇಳುತ್ತಿರುವಾಗ ಕೇಳಿಸಿಕೊಳ್ಳಲು ಯಾರೂ ಇಲ್ಲವೆಂದರೆ ಕತೆಯ ಗತಿ ಏನು? ಹೀಗಾಗಿ, ಕತೆ ಎಲ್ಲೋ ನಿಗೂಢ ಏಕಾಂತದಲ್ಲಿ ಹುಟ್ಟುವದಿಲ್ಲ ಅನ್ನುವದೇ ಅಚ್ಚರಿಯ ಸಂಗತಿ. ಅದು ಹುಟ್ಟುವದು ಹೇಳುಗ ಮತ್ತು ಕೇಳುಗನ ಮಧ್ಯೆ. ಇಲ್ಲಿ ಹೇಳುಗ ಯಾವಾಗಲೂ  ಮೂರ್ತ. ಕೇಳುಗ ಒಮ್ಮೊಮ್ಮೆ ಮೂರ್ತ; ಆಗೀಗ ಅಮೂರ್ತ.

ಬಾಲ್ಯದಲ್ಲಿ ಅಮ್ಮ ಕತೆ ಹೇಳುತ್ತಿದ್ದಳು. ನಾನು ಕೇಳುತ್ತಿದ್ದೆ. ಕಾಡಿನಲ್ಲೊಂದು ಆಲದಮರವಿತ್ತು ಅಂತ ಶುರುವಾಗುತ್ತಿದ್ದ ಈ ಕತೆಯಲ್ಲಿ ಬ್ರಹ್ಮರಾಕ್ಷಸ ಬರುತ್ತಿದ್ದನೋ ಅಥವಾ ಲಕ್ಷ್ಮಿ ಬರುತ್ತಿದ್ದಳೋ ಅನ್ನುವದೆಲ್ಲ ನನ್ನ ನಗು ಅಥವಾ ಗಾಬರಿ ಅಥವಾ ಅಳುವಿನ ಮೇಲೆ ನಿರ್ಧಾರಿತವಾಗುತ್ತಿತ್ತು. ನಾನು ಊಟ ಮಾಡದಿದ್ದರೆ ಬ್ರಹ್ಮರಾಕ್ಷಸ ಬರುತ್ತಿದ್ದ. ಹೋಂ ವರ್ಕ್ ಮಾಡಿದ್ದರೆ ಲಕ್ಷ್ಮಿ ಬರುತ್ತಿದ್ದಳು! ಇದು ಕತೆಯೊಂದು ಬಣ್ಣ ಬದಲಿಸುವ ಬಗೆ. ಅಥವಾ ತನ್ನ ವರ್ತುಲದಲ್ಲಿನ ಪರಿಸರವನ್ನು ಸಂತೈಸುವ ಬಗೆ. ಅಥವಾ ಹಾಗೆ ಮಾಡುತ್ತಲೇ  ತನ್ನನ್ನು ತಾನು ಶಕ್ತಿಶಾಲಿಗೊಳಿಸಿಕೊಳ್ಳುವ ಬಗೆ.

ಯಾವುದೋ ಕಾಲದಲ್ಲಿ ಒಬ್ಬ ಗೆಳೆಯನಿದ್ದ. ಪ್ರತಿದಿನ ಸಂಜೆ ನಾವೆಲ್ಲ ಸೇರಿದಾಗ ಆವತ್ತು ಬೆಳಗಿನಿಂದ ಏನೇನೆಲ್ಲ ನಡೆಯಿತು ಅಂತ ಕತೆ ಮಾಡಿ ಹೇಳುತ್ತಿದ್ದ. ಹಾಗೆ ಹೇಳುತ್ತಿರುವಾಗ ಗುಂಪಿಗೆ ಹೊಸದಾಗಿ ಇನ್ನಿಬ್ಬರು ಬಂದು ಸೇರಿಕೊಂಡಾಗ ಆವತ್ತಿನ ಕತೆಯನ್ನು ಅಲ್ಲಿಗೇ ಬಿಟ್ಟು ಹಿಂದಿನ ರಾತ್ರಿ ಏನೇನೆಲ್ಲ ನಡೆಯಿತು ಎಂಬುವದರೊಂದಿಗೆ ಹೊಸದಾಗಿ ಶುರು ಮಾಡುತ್ತಿದ್ದ. ಸೋತು ಬಳಲಿ ನಿಂತ ಕತೆಗೆ ಫೀಡ್ ಮಾಡುವ ಬಗೆಯಿದು. ಯಾವುದೋ ಗುಂಪಿನಲ್ಲಿ ನಿಂತ ಚೆಲುವೆಯೊಬ್ಬಳು ಏನೋ ಹೇಳುತ್ತಿರುವಾಗ ಇದ್ದಕ್ಕಿದ್ದಂತೆಯೇ pause ಕೊಡುತ್ತಿದ್ದಾಳೆ ಅಂದರೆ ಬಹುಶಃ ಅವಳ ಕತೆ ಮತ್ತಷ್ಟು ಶೃಂಗಾರಗೊಳ್ಳುತ್ತಿರಬಹುದು. ಅವಳ ಸಖ ಆಗಷ್ಟೇ ಗುಂಪಿಗೆ ಹಾಜರಿ ಹಾಕಿರಬಹುದು. ಹೀಗೆ ನೀರಸ ಕತೆಯೊಂದಕ್ಕೆ ಉನ್ಮಾದದ ಸಡಗರ ಎಲ್ಲಿಂದ ಬರುತ್ತದೆ ಅಂತ ಹೇಳುವದು ಕಷ್ಟ. ಕಾರು ಬೇಕು, ಮನೆ ಬೇಕು, ಹೆಂಡತಿ ಬೇಕು, ಊಟ ಬೇಕು ಅಂತೆಲ್ಲ ಬಡಿದಾಡಿಕೊಂಡು ಮುನ್ನಡೆಯುವ ಈ ಬದುಕಿನಲ್ಲಿ ಕೊನೆಗೆ ಎಲ್ಲವನ್ನೂ ಬಿಟ್ಟು ಹೋಗುತ್ತೇವೆ; ಕತೆಯೊಂದನ್ನು ಬಿಟ್ಟು. ಮುಂದೊಮ್ಮೆ ಹೆಂಗಿದ್ದ, ಹೆಂಗಾದ, ಏನೇನೆಲ್ಲ ಮಾಡಿದ ಅಂತ ಮಾತನಾಡುವವರ ನಾಲಿಗೆಯಲ್ಲಿ ಕೊನೆಗೂ ಜೀವಿತವಾಗಿ ಉಳಿಯುವದು ನಮ್ಮ ಕತೆಯೇ ಅಂತನ್ನುವದು ಎಷ್ಟು ವಿಚಿತ್ರವೋ ಅಷ್ಟೇ ಸತ್ಯವೂ ಹೌದು.

ಇದೊಂದು ವಿಚಿತ್ರ ಥಿಯರಿ. ಕತೆಗೆ ಹಸಿವಾಗುವದಿಲ್ಲ. ಆದರೆ ಕತೆಗೆ ಊಟ ಬೇಕೇ ಬೇಕು. ಇಂಥದ್ದು, ಅಂಥದ್ದು ಅಂತೇನಿಲ್ಲ. ಆದರೆ ಊಟ ಬೇಕು. ಹಾಗೆ ಅದಕ್ಕೆ 121ಫೀಡ್ ಮಾಡಿದ ಮೇಲೆಯೇ ಕತೆ ನಮಗೆ ಬೇಕಾಗಿದ್ದ ಊಟವನ್ನು ನಮ್ಮೆದುರಿಗೆ ತಂದಿಡುತ್ತದೆ. ಜೊತೆಗೆ ಖುಷಿಯೆಂಬ ಬೋನಸ್ಸನ್ನೂ. ನನಗೆ ಇವತ್ತಿಗೂ ಒಂದು ವಿಷಯ ಅರ್ಥವಾಗಿಲ್ಲ. ಕತೆ ಊಟ ಕೇಳುತ್ತದೆ ನಿಜ. ಆದರೆ ಅದರದ್ದು ಒಂದೇ ಬಿನ್ನಹ: ನಿನಗೆ ಏನು ಗೊತ್ತಿದೆಯೋ, ಏನನ್ನು ಮಾಡಲು ಬರುತ್ತದೋ, ಅದನ್ನು ಮಾತ್ರ ನನಗೆ ಬಡಿಸು. ಹಾಗಾದಾಗ ಮಾತ್ರ ನಿನಗೆ ಗೊತ್ತಿಲ್ಲದ ಹೊಸದಾದ ಅದ್ಭುತ ರುಚಿಯೊಂದನ್ನು ನಿನ್ನೆದುರಿಗೆ ತಂದು ಹರಡುವೆ. ಹಾಗೊಂದು ವೇಳೆ ನೀನು ನಿನಗೇ ಗೊತ್ತಿರದ ಪಾಕವನ್ನು ನನಗೆ ತಿನ್ನಿಸಿದರೆ ನನ್ನ ಹೊಟ್ಟೆ ಕೆಡಬಹುದು..

ಇಷ್ಟಕ್ಕೂ ನಮಗೆ ‘ಗೊತ್ತಿರುವ ಪಾಕ’ ಎಂಥದ್ದು ಅನ್ನುವದನ್ನು ನಿಜಕ್ಕೂ ನಮ್ಮಲ್ಲಿ ಎಷ್ಟು ಜನ ಬಲ್ಲರು? ನಮಗೆ ಗೊತ್ತಿರುವ ಪಾಕವನ್ನೇ ನಮ್ಮ ಕತೆಗೆ ತಿನ್ನಿಸುತ್ತಿದ್ದೇವೆ ಅಂತ ಎಷ್ಟು ಜನ ಹೇಳಬಲ್ಲರು? ಜಗತ್ತಿನ ಜನಸಂಖ್ಯೆ ಆರುನೂರು ಕೋಟಿ. ಎಲ್ಲರಲ್ಲೂ ಒಂದೊಂದು ಪಾಕ. ಎಲ್ಲರಲ್ಲೂ ಒಂದೊಂದು ಕತೆ. ಮೆಜೆಸ್ಟಿಕ್  ಬಸ್ ನಿಲ್ದಾಣದಲ್ಲಿ ಮೂಗಿನಿಂದ ಕೊಳಲನೂದುತ್ತಿರುವ ಅಂಧನೊಬ್ಬನ ಕತೆ,  ಹದಿಹರೆಯದಲ್ಲಿ ವಯಸ್ಕರ ಸಿನೆಮಾ ನೋಡುವಾಗ ಇಂಟರ್ ವಲ್’ನಲ್ಲಿ ಪರಿಚಯದ ಯಾರಾದರೂ ನೋಡಿಯಾರೆಂಬ ಭಯದಿಂದ  ಸುಳ್ಳುಸುಳ್ಳೇ ನೆಗಡಿಯ ನೆಪದಲ್ಲಿ ಕರ್ಚೀಫಿನಿಂದ ಮುಖ ಮುಚ್ಚಿಕೊಂಡವರ ಕತೆ, ಶಾಲೆಗೆ ಚಕ್ಕರ್ ಹಾಕಲೆಂದು ಹೊಟ್ಟೆನೋವು ಬರಿಸಿಕೊಂಡವರ ಕತೆ, ತಡವಾಗಿ ಮನೆಗೆ ಬಂದ ಮೇಲೆ ಗಂಡ ಹೇಳುವ ಮೀಟಿಂಗುಗಳ ಕತೆ, ಪ್ರಸಾಧನಗೃಹದಲ್ಲಿ ಮಿಂದು ಬಂದ ಹೆಂಡತಿಯ ಕತೆ, ಪಾರ್ಕಿನಲ್ಲಿ ಅವಲತ್ತುಗೊಳ್ಳುತ್ತಿರುವ ಅತ್ತೆಯ ಕತೆ. ಅಲ್ಲಿಗೆ ಒಟ್ಟು ಎಷ್ಟು ಕತೆ? ಆದರೆ ಆಯಾ ಕತೆ ಯಾವ ಊಟದಿಂದ ಸದೃಢಗೊಂಡಿತು ಅನ್ನುವದು ಅದು ಎಡವಿ ಬಿದ್ದ ಅಥವಾ ಸಾಗಿಹೋದ ಮೈಲುಗಲ್ಲುಗಳೇ ಸಾಕ್ಷಿ. ಆದರೆ ಒಂದಂತೂ ನಿಜ, ಜಗತ್ತಿನ ಅತ್ಯುತ್ತಮ ನಾಯಕರೆಲ್ಲ ಅತ್ಯುತ್ತಮ ಕತೆಗಾರರೇ. ಅವರಲ್ಲಿ ಹಲವರು ಬರೆದರು, ಇನ್ನುಳಿದವರು ಹೇಳಿದರು.

ಹಾಗೆ ನೋಡಿದರೆ ಕೃತಿಕಾರನಿಗೆ ಇದೊಂದು ರೋಮಾಂಚನದ ಮತ್ತು ದಿಗಿಲು ಬೀಳಿಸಬಲ್ಲ ಅನುಭವ. ಅನೇಕ ಸಲ ಕತೆ ಎನ್ನುವದು ಕೋಳಿಗಳ ಅಮ್ಮನಂತೆ. ಹೆಂಟೆಯಂತೆ. ತಾನು ಸೃಷ್ಟಿಸಿದ ಕತೆಯ ಗೋಜಲಿನೊಳಗೆ ಸಿಕ್ಕು ಒದ್ದಾಡುವ ಕತೆಗಾರನಿಗೆ ಕತ್ತಲ ಸುರಂಗದಾಚೆ ಇರುವ ಬೆಳಕಿನ ಬಿಂದುವನ್ನು ತೋರಿಸಬಲ್ಲ ಕತೆ ನಿಜಕ್ಕೂ ಕರುಣಾಮಯಿ. ಇಂಥದ್ದೇ ಅನುಭವಕ್ಕೆ ತುತ್ತಾದ ಅನೇಕರು ತಮ್ಮದೇ ಕೃತಿಗೆ ತಾವೇ ಮನಸೋತಿದ್ದೂ ಉಂಟು. ವಿನೀತರಾಗಿ ಬಾಗಿದವರೂ ಉಂಟು. ಅದು ಧಿಮಾಕಲ್ಲ. ಅದೊಂದು ಶರಣಾಗತ ಘಳಿಗೆ. ಇಂಥ ಬಹುತೇಕ ಸಂದರ್ಭಗಳಲ್ಲಿ ಕತೆಯನ್ನು ಹೆಂಟೆಯಂತೆಯೂ, ಕೃತಿಕಾರನನ್ನು ಪಿಳ್ಳೆಗಳಂತೆಯೂ ಭಾವಿಸಬಹುದಾದರೆ ಈ ಸಂದರ್ಭಕ್ಕೆ ಹುವಾಯಿಯನ್ ಹಾಯ್ಕುವೊಂದು ನೆನಪಾಗುತ್ತಿದೆ. ಅದನ್ನೇ ಮರುಸೃಷ್ಟಿಸುವ ಈ ಹೊತ್ತಿನಲ್ಲಿ ಒಂದು ಅನುಪಮ ಚಿತ್ರ ನನ್ನ ಕಣ್ಣ ಮುಂದೆ ತೇಲುತ್ತಿದೆ:

ಎಲೈ ಹೆಂಟೆಯೇ,

ಹಿಂಬಾಲಿಸುತ್ತಿರುವ 

ಪಿಳ್ಳೆಗಳಿಗೆ ನೀನೇ 

ಅಲ್ಪವಿರಾಮ 

ಪೂರ್ಣವಿರಾಮ 

ಮತ್ತು ಉದ್ಗಾರವಾಚಕ!

 

‍ಲೇಖಕರು admin

October 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: