ಅರುಣ್ ಜೋಳದ ಕೂಡ್ಲಿಗಿ
ಹೀಗೊಂದು ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಮೊನ್ನೆ ವೋಟ್ ಮಾಡಲೆಂದು ಕಾವ್ಯ ಮಗಳು ನಾನು ಜೋಳದಕೂಡ್ಲಿಗಿಗೆ ಹೋಗಿದ್ದೆವು. ನಾನು ಓಟ್ ಮಾಡಿ ಬಂದು ಮನೆ ಹತ್ತಿರದ ಚಿಕ್ಕ ಮಕ್ಕಳ ಲೋಕದಲ್ಲಿ ಮುಳುಗಿದ್ದೆ. ನನ್ನ ತಂಗಿ ಲಕ್ಷ್ಮಿಯ ಮಗಳು ಮೂರು ವರ್ಷದ ದೀಕ್ಷಿತ ನನ್ನ ಕೈಗೆ ವೋಟ್ ಮಾಡಿದ ಕರಿ ಇಂಕಿನ ಗುರುತು ನೋಡಿದಳು, ಏನೋ ನೆನಪಾದವಳಂತೆ `ಮಾಮಾ ನೀನು ಫೋಲಿಯೋ ಹನಿ ಹಾಕಿಸಿದಾ?’ ಅಂತ ಕೇಳಿದಳು. ನನಗೆ ಏನು ಉತ್ತರ ಹೇಳುವುದೋ ತಕ್ಷಣಕ್ಕೆ ಹೊಳೆಯಲಿಲ್ಲ.
ಚಿಕ್ಕ ಮಕ್ಕಳಿಗೆ ಫೋಲಿಯೋ ಹನಿ ಹಾಕಿದಾಗಲೂ ಗುರುತಿಗಾಗಿ ಮಕ್ಕಳ ಕೈಗೆ ಹೀಗೆ ಕರಿ ಇಂಕಿನ ಗುರುತು ಮೂಡಿಸುತ್ತಾರೆ. ಆಗ ಅವಳು ನನ್ನ ಬೆರಳ ಗುರುತು ನೋಡಿದ ದೀಕ್ಷಿತಾಳಿಗೆ ತಾನು ಫೋಲಿಯೋ ಹನಿ ಹಾಕಿಸಿಕೊಂಡಾಗ ಬೆರಳಿಗೆ ಹಾಕಿದ ಗುರುತು ನೆನಪಾಗಿದೆ. ಹಾಗಾಗಿ ನಾನೂ ಫೋಲಿಯೋ ಹನಿ ಹಾಕಿಸರಬೇಕು, ಹಾಗಾಗಿಯೇ ಈ ಗುರುತು ಹಾಕಿದ್ದಾರೆ ಎಂದು ತಿಳಿದಿದ್ದಳು. ನಂತರ ನನಗೂ ಫೋಲಿಯೋ ಹನಿ ಹಾಕಿಸು ಎಂದು ಹಟ ಹಿಡಿದಳು. ಏನೋನೋ ಹೇಳಿ ಫೋಲಿಯೋ ಹನಿಯ ನೆನಪನ್ನು ಮರೆಸಿದ್ದಾಯ್ತು.
ಮಕ್ಕಳ ಅಂಗವಿಕಲತೆಯನ್ನು ಹೋಗಲಾಡಿಸಲು ಭಾರತದಾದ್ಯಂತ ದೊಡ್ಡ ಚಳವಳಿಯ ರೂಪದಲ್ಲಿ ಫೋಲಿಯೋ ಹಾಕಿಸುವ ಕಾರ್ಯಕ್ರಮ ನಡೆಯಿತು. ಈ ಪರಿಣಾಮ ಆ ರೋಗ ಬಹುತೇಕ ಭಾರತದಿಂದ ತೊಲಗಿದೆ. ಈಗ ಲಕ್ಷಾಂತರ ಮಕ್ಕಳು ಫೋಲಿಯೋ ರೋಗ ಮುಕ್ತರಾಗಿದ್ದಾರೆ. ಇದನ್ನು ನೆನೆದರೆ ಬ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿಸಲು ಪ್ರಾಮಾಣಿಕರಿಗೆ ಓಟು ಹಾಕಿ ಅದರ ಗುರುತು ಬೆರಳಿಗೆ ಮೂಡಿಸಿಕೊಳ್ಳುವುದು ಯಾವಾಗಲೋ..ಎನ್ನುವ ಸಂಗತಿ ನನ್ನನ್ನು ಕಾಡಿತು. ನನ್ನ ಪುಟ್ಟ ಸೊಸೆ `ಮಾಮ ನೀನು ಫೋಲಿಯೋ ಹನಿ ಹಾಕಿಸಿದಾ?’ ಎಂದ ಮಾತು ನನ್ನಲ್ಲಿ ಹಲವು ಆಲೋಚನೆಯ ತರಂಗಗಳನ್ನೇ ಎಬ್ಬಿಸಿತು.







0 Comments