ನಾ ದಿವಾಕರ
ಭಾರತದ ಪ್ರಜಾತಂತ್ರ ವ್ಯವಸ್ಥೆಯ ದುರಂತವೆಂದರೆ ಆರು ದಶಕಗಳ ಗಣತಂತ್ರ ಆಳ್ವಿಕೆಯ ನಂತರವೂ ಇಲ್ಲಿ ಮಾನವ ಹಕ್ಕುಗಳ ಪರಿಕಲ್ಪನೆ ಜನಸಾಮಾನ್ಯರಲ್ಲಿ ಸ್ಪಷ್ಟವಾಗಿ ಮೂಡಿಲ್ಲ. ಮಾನವ ಹಕ್ಕುಗಳು ಎಂದಾಕ್ಷಣ ಕೋಮುವಾದ, ಭಯೋತ್ಪಾದನೆ ಮತ್ತು ಜಾತಿ ದೌರ್ಜನ್ಯಗಳ ಘಟನೆಗಳು ಮತ್ತು ಅವುಗಳ ಸುತ್ತ ಕೆಲವು ಸಂಘಟನೆಗಳು ಮಂಡಿಸುವ ವಾದ ವಿವಾದಗಳು ಧುತ್ತನೆ ಪ್ರತ್ಯಕ್ಷವಾಗುತ್ತವೆ. ಆಳುವ ವರ್ಗಗಳಿಗೆ ಮಾನವ ಹಕ್ಕು ಸಂಘಟನೆಗಳು ಮಗ್ಗುಲ ಮುಳ್ಳುಗಳಂತೆ ಗೋಚರಿಸುತ್ತವೆ. ರಾಜಕೀಯ ಪಕ್ಷಗಳಿಗೆ ಈ ಸಂಘಟನೆಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಹುದಾದ ಅಸ್ತ್ರಗಳಾಗಿವೆ. ಬಿಜೆಪಿ ಆಳ್ವಿಕೆಯಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆಗಳನ್ನು ವಿರೋಧಿಸಿ ಹೋರಾಡುವ ಮಾನವ ಹಕ್ಕು ಕಾರ್ಯಕರ್ತರು ಕಾಂಗ್ರೆಸ್ ಮತ್ತಿತರ ಪಕ್ಷಗಳ ದೃಷ್ಟಿಯಲ್ಲಿ ಹೀರೋಗಳಾಗುತ್ತಾರೆ. ಆದರೆ ಇದೇ ಹೀರೋಗಳು ಕಾಂಗ್ರೆಸ್ ಆಡಳಿತದಲ್ಲಿನ ಉಲ್ಲಂಘನೆಗಳನ್ನು ಪ್ರತಿಭಟಿಸಿದಾಗ ವಿಲನ್ಗಳಾಗಿಬಿಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಪರಿಕಲ್ಪನೆಯನ್ನೇ ಅಲ್ಲಗಳೆಯುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗಿಬಿಡುತ್ತವೆ. ಉದಾಹರಣೆಗೆ ಛತ್ತಿಸ್ಘಡ.
ಏಕೆಂದರೆ ಅಲ್ಲಿ ಮಾನವ ಹಕ್ಕು ಸಂಘಟನೆಗಳು ಮಾವೋವಾದಿಗಳ ವಿರುದ್ಧ ನಡೆಯುವ ಪ್ರಭುತ್ವದ ದೌರ್ಜನ್ಯವನ್ನು ಪ್ರತಿಭಟಿಸುತ್ತವೆ. ಈ ಪ್ರತಿಭಟನೆಯನ್ನು ಮಾವೋವಾದದ ಸಮರ್ಥನೆ ಎಂದು ಪ್ರಭುತ್ವ ಭಾವಿಸುತ್ತದೆ. ಈ ಭಾವನೆಗೆ ಆಳುವ ವರ್ಗಗಳು ಕಾನೂನಿನ ಚೌಕಟ್ಟನ್ನು ಒದಗಿಸಿ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಕರಾಳ ಶಾಸನಗಳನ್ನು ರೂಪಿಸುತ್ತವೆ. ಇದೇ ಸನ್ನಿವೇಶವನ್ನು ನಕ್ಸಲ್ ಬಾಧಿತ ಎಲ್ಲ ರಾಜ್ಯಗಳಲ್ಲೂ ಕಾಣಬಹುದು. ಸಕರ್ಾರದ ಈ ಧೋರಣೆ ನಕ್ಸಲ್ ವಿದ್ಯಮಾನಕ್ಕೆ ಮಾತ್ರ ಸಂಬಂಧಿಸುವುದಿಲ್ಲ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಂಘಪರಿವಾರದ ಕೋಮುವಾದಿ ರಾಜಕಾರಣವನ್ನು ವಿರೋಧಿಸುವ ಮತ್ತು ಸಂಘಪರಿವಾದ ಸಾಂಸ್ಕೃತಿಕ ಆರಕ್ಷಕರ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರತಿಭಟಿಸುವ ಸಂಘಟನೆಗಳು, ಕಾರ್ಯಕರ್ತರು ಆಳ್ವಿಕರ ದೃಷ್ಟಿಯಲ್ಲಿ ದ್ರೋಹಿಗಳಾಗಿಬಿಡುತ್ತಾರೆ. ಅಥವಾ ದೇಶದ್ರೋಹದ ಆರೋಪ ಎದುರಿಸಬಹುದಾದ ಅಪರಾಧಿಗಳಾಗಿಬಿಡುತ್ತಾರೆ. ಕಮ್ಯುನಿಸ್ಟ್ ಪಕ್ಷಗಳ ಆಳ್ವಿಕೆ ಇದ್ದ ರಾಜ್ಯಗಳಲ್ಲಿ ಮಾನವ ಹಕ್ಕು ಕಾರ್ಯಕರ್ತರು ವಿದೇಶಿ ಅಥವಾ ಅಮೆರಿಕದ ಏಜೆಂಟರಾಗಿಬಿಡುತ್ತಾರೆ.
ಹಾಗಾಗಿ ಭಾರತದಲ್ಲಿ ಮಾನವ ಹಕ್ಕುಗಳ ಪರಿಕಲ್ಪನೆ ಆಳುವ ಪಕ್ಷಗಳ ನೆಲೆಗಟ್ಟಿನಲ್ಲಿ ಮತ್ತು ವಿರೋಧ ಪಕ್ಷಗಳ ದೃಷ್ಟಿಕೋನದಲ್ಲಿ ಸಾಕಾರಗೊಂಡಿದೆಯೇ ಹೊರತು, ಮಾನವನ ಮೂಲಭೂತ ಹಕ್ಕುಗಳ ನೆಲೆಯಲ್ಲಿ ಸ್ಥಾಪಿತವಾಗಿಲ್ಲ. ಟಾಡಾ, ಪೋಟಾ ಮುಂತಾದ ಕರಾಳ ಶಾಸನಗಳು ಮನುಕುಲದ ಮೂಲಭೂತ ಲಕ್ಷಣವನ್ನೇ ಕಂಗೆಡಿಸುವಂತಹ ಕಾನೂನುಗಳು. ಈ ಕಾಯ್ದೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದನ್ನು ಕಾಣಬಹುದು. ಆಡಳಿತಾರೂಢ ಪಕ್ಷಗಳು ತಮ್ಮ ವಿರೋಧಿಗಳ ದನಿ ಅಡಗಿಸಲು ಈ ಶಾಸನಗಳನ್ನು ಬಳಸಿದರೆ, ಇದೇ ಪಕ್ಷಗಳು ಅಧಿಕಾರ ಕಳೆದುಕೊಂಡಾಗ ಈ ಶಾಸನಗಳನ್ನು ವಿರೋಧಿಸತೊಡಗುತ್ತವೆ, ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡುತ್ತವೆ. ಕಾಂಗ್ರೆಸ್ನಿಂದ ಹಿಡಿದು ಕೆಜೆಪಿಯವರೆಗೂ ಎಲ್ಲ ರಾಜಕೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುತ್ತವೆ. ಕಮ್ಯುನಿಸ್ಟ್ ಪಕ್ಷಗಳನ್ನೂ ಸೇರಿದಂತೆ.
ಏಕೆ ಹೀಗೆ ಎಂದು ಯೋಚಿಸಿದಾಗ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಈ ದೇಶದ ಮೂಲ ಸಂಸ್ಕೃತಿ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಹೊಂದಿದ್ದರೂ, ದೇಶದ ಸಂಸ್ಕೃತಿಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿರುವ ಸಾಂಸ್ಕೃತಿಕ ಪರಿಚಾರಕರು ಪ್ರಭುತ್ವವನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ. ಈ ಸಂಸ್ಕೃತಿಯ ಆರಾಧಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವೂ ಇಲ್ಲ, ವಿಶ್ವಾಸವೂ ಇಲ್ಲ. ಇದೇ ಶಕ್ತಿಗಳು ದೇಶದ ಪ್ರಭುತ್ವದ ಮೇಲೆ ಹಿಡಿತ ಸಾಧಿಸಿವೆ. ಹಾಗಾಗಿಯೇ ಖಾಪ್ ಪಂಚಾಯತ್ಗಳು ಶಿಕ್ಷೆಗೊಳಪಡುವುದಿಲ್ಲ. ಜಾತಿ ದೌರ್ಜನ್ಯದ ಹರಿಕಾರರಿಗೆ ಶಿಕ್ಷೆಯಾಗುವುದಿಲ್ಲ. ಬತಾನಿತೋಲ, ಚೆಂಡೂರು, ಕಂಬಾಲಪಲ್ಲಿಯಂತಹ ಪ್ರಕರಣಗಳಲ್ಲೂ ಅಪರಾಧಿಗಳು ಶಿಕ್ಷೆಗೊಳಗಾಗದೆ ಪಾರಾಗುತ್ತಾರೆ. ಕಾರಣ ಸ್ಪಷ್ಟ, ಪ್ರಭುತ್ವ ಮತ್ತು ಆಳ್ವಿಕರ ದೃಷ್ಟಿಯಲ್ಲಿ ಜಾತಿ ದೌರ್ಜನ್ಯ ಮಾನವ ಹಕ್ಕು ಉಲ್ಲಂಘನೆಯಾಗುವುದೇ ಇಲ್ಲ. ಇದು ಸಾಮಾಜಿಕ ಸಮಸ್ಯೆಯಾಗಿ ಮಾತ್ರ ತೋರುತ್ತದೆ.
ಮಾನವ ಹಕ್ಕುಗಳ ಪರಿಕಲ್ಪನೆಯ ಮೂಲ ಇರುವುದು ಮಾನವನ ಘನತೆಯಲ್ಲಿ. ಪ್ರಜಾತಂತ್ರ ವ್ಯವಸ್ಥೆ ಇರಲಿ, ಸವರ್ಾಧಿಕಾರ ಇರಲಿ ಜನತೆಯ ಜೀವದ ಬೆಲೆ ಒಂದೇ ಆಗಿರುತ್ತದೆ. ಸಾಮಾಜಿಕ ಸ್ಥಿತ್ಯಂತರಗಳು ಹೇಗೇ ಇದ್ದರೂ ಮನುಜ ಜೀವ ತನ್ನ ಮೌಲ್ಯ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಪ್ರಭುತ್ವ ಅಥವಾ ಆಳ್ವಿಕರು ಕಾನೂನು ಪಾಲನೆಯ ನೆಪದಲ್ಲಿ ಅಥವಾ ಸಾಮಾಜಿಕ ಸ್ವಾಸ್ಥ್ಯದ ನೆಪದಲ್ಲಿ ಜನತೆಯ ಜೀವ ಹರಣ ಮಾಡುವ ಹಕ್ಕು ಹೊಂದಿರುವುದಿಲ್ಲ. ಅಪರಾಧ ಸಂಹಿತೆಗಳ ಸ್ವರೂಪ ಹೇಗೇ ಇದ್ದರೂ ಪ್ರಭುತ್ವಕ್ಕೆ ಅಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪರಾಧಿಯ ಜೀವಕ್ಕೆ ಕುತ್ತು ತರುವ ಹಕ್ಕು ಇರುವುದಿಲ್ಲ. ಮರಣದಂಡನೆಯಂತಹ ಶಿಕ್ಷೆ ಅಥವಾ ಕರಾಳ ಶಾಸನಗಳು ಈ ದೃಷ್ಟಿಯಿಂದಲೇ ಪ್ರಶ್ನಾರ್ಹವಾಗುತ್ತವೆ. ಭಯೋತ್ಪಾದನೆ, ಕೋಮುವಾದ ಮತ್ತಿತರ ವಿದ್ಯಮಾನಗಳನ್ನು ದಾಟಿ ನೋಡಿದಾಗ ಭಾರತದಲ್ಲಿ ಪ್ರತಿ ಕ್ಷಣವೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಸರ್ವವಿಧಿತ.
ಇಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಸಾಮಾಜಿಕ ಕಾರ್ಯಕರ್ತರ ದಮನ ಇವೆಲ್ಲವೂ ಸವರ್ೇ ಸಾಮಾನ್ಯವಾದ ಸಂಗತಿಗಳಾಗಿವೆ. ದೇಶದ ಪ್ರಜೆಗಳಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲೂ ಸಾಧ್ಯವಾಗದೆ ಆಳ್ವಿಕರು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಶೋಷಿತ, ದಮನಿತ ಜನಸಮುದಾಯಗಳ ಪರವಾಗಿ ಹೋರಾಡುವ ನಿಸ್ವಾರ್ಥ ಕಾರ್ಯಕರ್ತರು ಆಳ್ವಿಕರ ದೃಷ್ಟಿಯಲ್ಲಿ ಕೋವಿ ಹಿಡಿದ ಹಿಂಸಾವಾದಿಗಳಾಗಿ ಕಾಣುವುದು ದುರಂತವಲ್ಲವೇ ? ತಮ್ಮ ಸ್ವಾರ್ಥ ಸಾಧನೆಗಾಗಿ ಲಕ್ಷಾಂತರ ಜನರನ್ನು ನಿರ್ಗತಿಕರನ್ನಾಗಿ ಮಾಡುವ ಕ್ರೂರಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ, ಔದ್ಯಮಿಕ ಮಿತ್ರರ ರೂಪದಲ್ಲಿ. ಆದರೆ ಈ ನಿರ್ಗತಿಕರ ಆಕ್ರಂದನಕ್ಕೆ ದನಿ ನೀಡುವ ಜನಸಾಮಾನ್ಯರು ಅಪರಾಧಿಗಳಾಗಿಬಿಡುತ್ತಾರೆ. ಬಿನಾಯಕ್ ಸೆನ್ ಒಂದು ನಿದರ್ಶನವಷ್ಟೆ. ಇಂತಹ ಒಂದು ವಿಶಿಷ್ಟ ಸಂದರ್ಭದಲ್ಲೇ ಇಂದು ಮಾನವ ಹಕ್ಕು ದಿನಾಚರಣೆ ಆಚರಿಸಲಾಗುತ್ತಿದೆ. ನವೀನ್ ಸೂರಿಂಜೆ ಈ ದಿನದ ಸಂದರ್ಭದಲ್ಲಿ ದುರಂತ ನಿದರ್ಶನವಾಗಿ ಕಂಡುಬಂದರೆ ಅಚ್ಚರಿಯೇನಿಲ್ಲ.






0 Comments