ಕನ್ನಡದ ಹಿರಿಯ ಲೇಖಕರಾದ ಬಿ.ಎಂ. ರೋಹಿಣಿ ಅವರ ಸಾಹಿತ್ಯಿಕ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸಲು ಮಂಗಳೂರಿನಲ್ಲಿ ನಾಳೆ (ಫೆ.21) ನಾಗರಿಕ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗುತ್ತಿದೆ. ಖ್ಯಾತ ಲೇಖಕರಾದ ಮುಂಬೈನ ಶ್ಯಾಮಲಾ ಮಾಧವ ಅವರು ಈ ಸಂದರ್ಭಕ್ಕೆ ಬರೆದ ಒಂದು ವಿಶೇಷ ಲೇಖನ ಇಲ್ಲಿದೆ-

-ಶ್ಯಾಮಲಾ ಮಾಧವ
*
ಶಿಕ್ಷಕಿಯಾಗಿ, ಸಾಹಿತಿಯಾಗಿ, ಶ್ರೇಷ್ಠ ಚಿಂತಕಿಯಾಗಿ, ಮಹಿಳಾಭ್ಯುದಯದ ಹರಿಕಾರಳಾಗಿ ಸಮಾಜವನ್ನು ಬೆಳಗುತ್ತಿರುವವರು, ನಮ್ಮ ಪ್ರಿಯ ಲೇಖಕಿ ಬಿ.ಎಂ. ರೋಹಿಣಿ ಅವರು. ಜೀವನದ ವೈಭವವು ಪ್ರೀತಿ ನೀಡುವುದರಲ್ಲಿದೆ, ಬಯಸುವುದರಲ್ಲಿಲ್ಲ; ದಾನ ಮಾಡುವುದರಲ್ಲಿದೆ, ಸ್ವೀಕರಿಸುವುದರಲ್ಲಿಲ್ಲ; ಸೇವೆ ಮಾಡುವುದರಲ್ಲಿದೆ, ಅಪೇಕ್ಷಿಸುವುದರಲ್ಲಿಲ್ಲ ಎಂಬ ಸತ್ಯವನ್ನು ಸಾರಿದ ದಾರ್ಶನಿಕರವರು. ಶಿಕ್ಷಕಿಯಾಗಿ ತಾನು ಕಲಿಸುವ ಮಕ್ಕಳ ಬಗ್ಗೆ, ಮಹಿಳೆಯಾಗಿ ಸಮಾಜದ ಸ್ತ್ರೀಯರ ಸ್ಥಿತಿ ಗತಿಯ ಬಗ್ಗೆ, ಸಂಶೋಧಕಿಯಾಗಿ ಹಲವು ಮಹತ್ವಪೂರ್ಣ ವಸ್ತು ವಿಷಯಗಳ ಬಗ್ಗೆ ಆಳವಾಗಿ ಚಿಂತಿಸಿ, ತಾವು ಕಂಡುಕೊಂಡ ವಿಚಾರದೀಪ್ತಿಯನ್ನು ತನ್ನನ್ನು ರೂಪಿಸಿದ ಸಮಾಜಕ್ಕೇ ಬರಹದ ಮೂಲಕ ಬಳುವಳಿಯಾಗಿ ಇತ್ತವರು, ಬಿ.ಎಂ. ರೋಹಿಣಿ.
ಸಾವಿರದ ಒಂಬೈನೂರ ನಲ್ವತ್ನಾಲ್ಕು ಎಪ್ರಿಲ್ ತಿಂಗಳ ಆರರಂದು ಬಂಗ್ರ ಮಂಜೇಶ್ವರದ ತಾಯಿಯ ತಂದೆಯ ಮನೆಯಲ್ಲಿ ಜನಿಸಿದ ರೋಹಿಣಿ, ತನ್ನ ತಂದೆ ಕೊಗ್ಗಪ್ಪನಂತೆ ಮಕ್ಕಳನ್ನು ಪ್ರೀತಿಸುವ ತಂದೆಯನ್ನು ತಾನಂತೂ ಕಂಡಿಲ್ಲ, ಎಂದಿದ್ದಾರೆ. ಪುರುಷ ಪ್ರಧಾನ ಸಮಾಜದ ಮಾದರಿಯಾಗಿ ತನ್ನ ತಂದೆ ಇದ್ದರೆ, ಕಳೆದ ಶತಮಾನದ ಹೆಣ್ಣುಗಳು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳಿಗೆ ತನ್ನಮ್ಮ ಮಾದರಿ, ಎಂದೂ ಅವರಂದಿದ್ದಾರೆ. ಕಾಣೆಮಾರಿನ ಗೇಣಿಯ ಕೃಷಿಭೂಮಿಯ ಸಮೃಧ್ಧ ಜೀವನವನ್ನು ಕೈ ಬಿಟ್ಟು, ಮಂಗಳೂರ ಬಿಕರ್ನಕಟ್ಟೆಯ ಬಂಧುಗಳ ಆಶ್ರಯದಲ್ಲಿ ಕಳೆದ ಬಡತನದ ಬಾಲ್ಯ ಈ ಲೇಖಕಿಯನ್ನು ರೂಪಿಸಿತೆಂದೇ ಹೇಳಬೇಕು. ಕಣ್ಣು ಹಾಯಿಸಿದಷ್ಟು ದೂರ ಗದ್ದೆಗಳು ಅದರಾಚೆ ಹಸಿರಿನ ಗುಡ್ಡಗಳು, ಕೊಟ್ಟಿಗೆ ತುಂಬ ಹಸು, ಕೋಣಗಳು, ಕೃಷಿ ಕೆಲಸದ, ಬೆಲ್ಲ ತಯಾರಿಯ ಆಳುಗಳು ಹೀಗೆ ತುಂಬಿಕೊಂಡಿದ್ದ ಮನೆಯಲ್ಲಿ ಒಂದು ಹೊತ್ತಿಗೆ ಅನ್ನ ಬೇಯಿಸುತ್ತಿದ್ದ ಮಡಕೆಯೇ ದೊಡ್ಡ ಹಂಡೆಯಂತಿತ್ತು ಎಂದು ಕಾಣೆಮಾರಿನ ಆ ಮನೆ, ಪ್ರಕೃತಿ, ಪರಿಸರವನ್ನು ಅವರು ಸ್ಮರಿಸಿದ್ದಾರೆ. ಮಗಳನ್ನು ಮಾನಸಿಕವಾಗಿ, ಬೌಧ್ಧಿಕವಾಗಿ, ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಿದವರು ತನ್ನ ತಂದೆ ಎಂದು ತಮ್ಮ ಆತ್ಮಕಥನ, ʻನಾಗಂದಿಗೆಯೊಳಗಿಂದʼ ಕೃತಿಯಲ್ಲಿ ತಮ್ಮ ಆತ್ಮೀಯ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.
ಬಿಕರ್ನಕಟ್ಟೆಯ ಬಡ್ಡೋಡಿಗುಡ್ಡದ ಹುಲಿಕಾಟದ ಬಗ್ಗೆ, ಅಪ್ರತಿಮ ಈಡುಗಾರರಾಗಿದ್ದ ಡಾ, ಉಮಾನಾಥ ಸುವರ್ಣರು ಕೊಂದ ಆ ಹುಲಿಯನ್ನು ಊರ ಜನರು ಅವರ ಕಾರಿನ ಮೇಲೆ ಮೆರವಣಿಗೆಯಲ್ಲಿ ಒಯ್ದ ಬಗ್ಗೆ; ಕಲ್ಯಾಣಪ್ಪನ ಕಾಟುಕಾಯಿ ದಂಗೆಯಲ್ಲಿ ಸೆರೆ ಹಿಡಿದ ಬಂಗರಸನನ್ನು ಬ್ರಿಟಿಶರು ಗಲ್ಲಿಗೇರಿಸಿದ ಬಂಗರಪದವು ಗುಡ್ಡವು ತಮ್ಮ ಮನೆಯ ಎಡಕ್ಕೇ ಇದ್ದ ಬಗ್ಗೆ; ವರ್ಷ ವರ್ಷವೂ ಮಗುವನ್ನು ಹೆರುತ್ತಿದ್ದ ಚಿಕ್ಕಿ, ಗಂಡನನ್ನು ದೂರವಿರಿಸಲು ದೇವಿಯನ್ನು ಆವಾಹಿಸಿಕೊಂಡ ಫ್ಯಾಮಿಲಿ ಪ್ಲಾನಿಂಗ್ ವಿಧಾನದ ಬಗ್ಗೆ; ದುರ್ಬಲ ಗಂಡಸರ ನಡುವೆ ತಮ್ಮ ದಾರಿಯಲ್ಲೇ ನಡೆದ, ಜೀವನಪ್ರೀತಿ ಮತ್ತು ಜೀವನೋಲ್ಲಾಸ ತುಂಬಿದ ಅಲ್ಲಿನ ಸಾಮಾನ್ಯ ಮಹಿಳೆಯರ ಬಗ್ಗೆ; ತನ್ನ ಸೋದರ ಮಾವ ರಾಮಯ್ಯ ಮಾಷ್ಟ್ರು ದಲಿತೋಧ್ಧಾರಕ್ಕಾಗಿ ದುಡಿದುದರಿಂದ ತಮ್ಮ ಕುಟುಂಬ ಬಹಿಷ್ಕತವಾದ ಬಗ್ಗೆ – ಹೀಗೆಲ್ಲ ಅವರ ನಿರೂಪಣೆ ಮನಮುಟ್ಟುವಂತಿದೆ.
ಯಾರೂ ಮರೆಯಲಾಗದ ಶಿಷ್ಯ ವಾತ್ಸಲ್ಯದ ಹೆಲೆನ್ ಟೀಚರ್ ಬಗ್ಗೆ, ತನ್ನ ಸುಂದರ ಕೈ ಬರಹಕ್ಕೆ ಕಾರಣರಾದ ಭಟ್ ಮಾಸ್ಟ್ರ ಬಗ್ಗೆ, ಹಿಂದಿ ಕಲಿಸಿದ ಮಾಷ್ಟ್ರು ಸಂಜೀವ ರಾಯರ ಬಗ್ಗೆ, ಹೀಗೆ ಹೃದಯ ತುಂಬಿ ತನ್ನ ಉಚ್ಛ್ರಾಯಕ್ಕೆ ಕಾರಣರಾದ ಗುರುಗಳನ್ನು ಅವರು ನೆನೆದಿದ್ದಾರೆ. ದೇವರು, ದೇವಸ್ಥಾನ, ಗುರುಪೀಠಗಳನ್ನು ತಮ್ಮ ಬದುಕಿನ ವಲಯದಿಂದಾಚೆಗೆ ಬಹಿಷ್ಕರಿಸಿ, ಒಳ್ಳೆಯತನ ಮತ್ತು ಸತ್ಕಾರ್ಯಗಳಲ್ಲೇ ನೆಮ್ಮದಿಯನ್ನು ಕಂಡ ಪ್ರಾತಃಸ್ಮರಣೀಯ ನೆಟ್ಟಾರ್ ಭಟ್ಟರನ್ನು ಸ್ಮರಿಸಿದ್ದಾರೆ. ತಮ್ಮೂರಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಾದ ಮಹಾನುಭಾವರುಗಳ ಬಗ್ಗೆ ಬರೆದಿದ್ದಾರೆ. ಅವರಲ್ಲಿ ಇಂದು ಮರೆಯಾಗಿಯೇ ಹೋದ, “ಕಲ್ಲ್ ಕುಟ್ಟಿ ಪಾಡೆರೆ ಉಂಡಾ? ,”ಗುವೆಲ್ಡ್ ಕೊಡಪಾನ ದೆಪ್ಪೆರೆ ಉಂಡಾ?” ಎಂದು ಬರುತ್ತಿದ್ದ ದನಿಗಳೂ ಸೇರಿವೆ. ಪರಮ ಆತ್ಮೀಯರಾಗಿದ್ದ ಡ್ಯಾನ್ಸರ್ ಸೀತಾ ಮತ್ತು ಕೆ. ಲೀಲಾವತಿ ಅವರ ವ್ಯಕ್ತಿತ್ವದ ವಿಶಿಷ್ಟ ಚಿತ್ರಣವೂ ಇಲ್ಲಿದೆ. ತಮ್ಮ ಬಾಳಿಗೆ ಕಲ್ಪವೃಕ್ಷವಾದ, ಮಾನವೀಯತೆಯ ಸಾಕಾರವಾದ ಲಕ್ಷ್ಮಿ ಟೀಚರ ಬಗ್ಗೆ ಬಹಳ ಆಪ್ಯಾಯಮಾನವಾಗಿ ಬರೆದಿದ್ದಾರೆ. ದೇವರನ್ನು ಸೃಷ್ಟಿಸಿದ ನಾವೇ ಅವನನ್ನು ದೇವಾಲಯದೊಳಗೆ ಬಂಧಿಸಿ, ವಿವಿಧ ಧರ್ಮ, ಪಂಥದ ಆವರಣದಲ್ಲಿ ಬಂಧಿತರಾಗಿದ್ದೇವೆ. ನಾವು ದೇವರ ತಂಟೆಗೆ ಹೋಗದಿದ್ದರೆ ಅವನೂ ನಮ್ಮ ತಂಟೆಗೆ ಬರಲಾರ ಎಂಬ ಸತ್ಯವನ್ನು ತಾನು ಲಕ್ಷ್ಮೀ ಟೀಚರ ಒಡನಾಟದಲ್ಲಿ ಅರಿತೆನೆಂದ ರೋಹಿಣಿ ಅವರು, ತನ್ನ ದೇಹ, ಮನಸ್ಸು, ಬುಧ್ಧಿ ಎಲ್ಲವೂ ಆರೋಗ್ಯದಿಂದಿರುವಂತೆ ಕಾಪಾಡಿದ ಅವರ ಪ್ರೀತಿಗೆ ನಮಿಸಿದ್ದಾರೆ.

ʻಮಂದಾರ ರಾಮಾಯಣʼ ಮಹಾಕಾವ್ಯ ರಚಿಸಿದ ಕುಡುಪು ಮಂದಾರ ಕೇಶವ ಭಟ್ಟರ ಬಗೆಗೆ ಹಾಗೂ ಅವರಿಂದ ಕೃತಾರ್ಥವಾದ ಕುಡುಪು ಮಹಿಳಾ ಮಂಡಳಿಯ ಬಗ್ಗೆ ಪ್ರೀತಿ ತುಂಬಿ ಸ್ಮರಿಸಿದ್ದಾರೆ.
ಶಿಕ್ಷಕಿಯಾಗಿ ರೋಹಿಣಿ ಅವರ ಸಾಧನೆ ಅಮೋಘವಾದುದು. ಮಕ್ಕಳ ಒಲವಿಗೆ ಪ್ರೀತಿಯೊಂದೇ ದಾರಿ, ಎನ್ನುವ ಅವರು, ಶಿಕ್ಷಕಿಯನ್ನು ಮಕ್ಕಳು ಪ್ರೀತಿಸಿದರೆ ಮಾತ್ರ ಅವರು ಕಲಿಸುವ ಪಾಠವನ್ನೂ ಪ್ರೀತಿಸುತ್ತಾರೆ, ಎಂಬ ಸತ್ಯವನ್ನು ಕಂಡುಕೊಂಡವರು. ಶಿಕ್ಷಕಿ ಹಾಗೂ ಹೆತ್ತವರು ಹೇಗಿರಬೇಕೆಂದು ಮಕ್ಕಳು ಬಯಸುವರೆಂಬುದನ್ನು ಮಕ್ಕಳಿಂದಲೇ ಮುಕ್ತವಾಗಿ ಬರೆಸಿ ಅದನ್ನೋದಿ ಜೀರ್ಣಿಸಿ ತನ್ನನ್ನು ತಿದ್ದಿಕೊಂಡವರು. ಮಕ್ಕಳು ಯಾವುದೇ ಮುಲಾಜಿಲ್ಲದೆ ಬರೆದು ತಿಳಿಸಿದ್ದರಿಂದ ತನ್ನ ಮೆದುಳಲ್ಲಿ ತುಂಬಿದ್ದ ಕಳೆ, ಕೊಳೆಯನ್ನು ತೊಳೆದು ಶುಧ್ಧಗೊಳಿಸುವುದು ಸಾಧ್ಯವಾಯ್ತು, ತನ್ನ ಮಾತು, ವರ್ತನೆಯಲ್ಲಿದ್ದ ರೋಷ, ದರ್ಪ, ಅಹಂಕಾರಗಳೆಲ್ಲ ಕ್ರಮೇಣ ಬದಲಾಯ್ತು ಎಂದು ಪ್ರಾಂಜಲವಾಗಿ ಒಪ್ಪಿಕೊಂಡಿದ್ದಾರೆ. ಮಕ್ಕಳಲ್ಲಿ ವೈಚಾರಿಕ ಚಿಂತನೆಯನ್ನು ಬಿತ್ತಲು ಯತ್ನಿಸಿದ ರೋಹಿಣಿ ಅವರು, ಮಕ್ಕಳಿಂದ ಕಲಿತ ತಾನು, ಮಾಸ್ತರಿಕೆಯ ಗತ್ತು ತೊರೆದು, ಆಪ್ತ ಸಮಾಲೋಚಕಿಯ ಕರ್ತವ್ಯ ಪ್ರಜ್ಙೆಯನ್ನು ಬೆಳೆಸಿಕೊಂಡೆ, ಎಂದಿದ್ದಾರೆ.
ನಗರದ ಬಂದರಿನ ಮುಸ್ಲಿಂ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದಾಗ, ಅದುವರೆಗೆ ತಾನು ಅರಿಯದಿದ್ದ ಸಮುದಾಯವನ್ನು ಹತ್ತಿರದಿಂದ ಅರಿಯುವ, ಆ ಮುಗ್ಧ, ಬುಧ್ಧಿವಂತ ಮಕ್ಕಳೊಡನೆ ಒಡನಾಡುವ, ಅವರಿಂದ ಕಲಿಯುವ ಅವಕಾಶವೊದಗಿದ್ದನ್ನೂ ಸ್ಮರಿಸಿದ್ದಾರೆ.
ಶಿಕ್ಷಣ ಇಲಾಖೆಯ ಅವ್ಯವಹಾರಗಳ ಬಗ್ಗೆ ಇಲಾಖೆಗೆ, ಸಚಿವರಿಗೆ, ಮುಖ್ಯಮಂತ್ರಿಯವರಿಗೆ ತಾನು ಪತ್ರ ಬರೆದ ಬಗ್ಗೆ ಮೀಟಿಂಗ್‌ನಲ್ಲಿ ವಿಚಾರಣೆ ನಡೆದಾಗ, ಉತ್ತರಿಸುತ್ತಾ, “ಅನ್ಯಾಯವನ್ನು ಕಂಡಾಗಲೆಲ್ಲ ನನ್ನ ಮಿತಿಯಲ್ಲಿ ಬರೆಯುತ್ತಾ ಬಂದಿದ್ದೇನೆ; ಈಗಲೂ ಬರೆಯುತ್ತಿದ್ದೇನೆ., ಮುಂದೆಯೂ ಬರೆಯುತ್ತೇನೆ“, ಎಂದು ಸ್ಪಷ್ಟವಾಗಿ ತನ್ನ ನಿಲುವನ್ನು ಸಾರಿದವರು, ರೋಹಿಣಿ. ಶಿಕ್ಷಕವೃತ್ತಿಯ ತಮ್ಮ ಅನುಭವಗಳನ್ನು, ʻಅಧ್ಯಾಪಿಕೆಯ ಅಧ್ವಾನಗಳು.ʼ ಎಂಬ ಕೃತಿಯಾಗಿ ಅವರು ರೂಪಿಸಿದ್ದಾರೆ. ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ, ಕೆಲವಂ ಬಲ್ಲಿದರಿಂದ ಕಲಿತು, ಕೆಲವಂ ಶಾಸ್ತ್ರಗಳನೋದುತ, ಕೆಲವಂ ಮಾಳ್ಪವರಿಂದ ಕಲಿತು, ಕೆಲವಂ ಸುಜ್ಞಾನದಿಂ ನೋಡುತ, ಕೆಲವಂ ಸಜ್ಜನ ಸಂಗದಿಂ ಕಲಿಯುತ್ತಾ ಬೆಳೆಯುವುದೇ ಶಿಕ್ಷಕ ವೃತ್ತಿಗೆ ಗೌರವ ತಂದುಕೊಡುವ ಪರಿ, ಎಂದಿದ್ದಾರೆ.
ರೋಹಿಣಿ ಅವರ ಸಾಮಾಜಿಕ ಚಿಂತನೆಗಳಿಂದ ರೂಪುಗೊಂಡ ಅವರ ಲೇಖನಗಳ ಸಂಕಲನ ೨೦೦೭ರಲ್ಲಿ ʻಸಾಮಾಜಿಕ ತಲ್ಲಣಗಳುʼ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡವು. ನಮ್ಮ ಸಾಮಾಜಿಕ ಸ್ಥಿತಿ, ಗತಿ, ಅದಕ್ಕೆ ಕಾರಣಗಳು, ಆಗಬೇಕಾದ ಪರಿವರ್ತನೆಗಳು, ಭಾಷೆ, ಶಿಕ್ಷಣ, ಮತ, ಧರ್ಮ, ಕುಟುಂಬ ವ್ಯವಸ್ಥೆ ಹೀಗೆ ಹತ್ತು ಹಲವು ವಿಷಯವಾಗಿ ತೋಡಿಕೊಂಡ ಅವರ ಮನದಾಳದ ಚಿಂತನೆಗಳು ಇಲ್ಲಿ ಪ್ರಕಟವಾಗಿವೆ. ʻಸ್ತ್ರೀ – ಭಿನ್ನ ಮುಖಗಳುʼ, ʻಸ್ತ್ರೀ ಸಂವೇದನೆʼ, ʻಸ್ತ್ರೀ – ಶಿಕ್ಷಣ – ಸಂಸ್ಕೃತಿʼ, ʻಆರಾಧನಾ ರಂಗದಲ್ಲಿ ಸ್ತ್ರೀʼ, ʻಪ್ರತಿಸ್ಪಂದನʼ, ʻಸಮೀಕ್ಷೆʼ ಇವರ ಇತರ ಲೇಖನ ಸಂಕಲನಗಳು.
ʻತುಳುನಾಡಿನ ಮಾಸ್ತಿಕಲ್ಲುಗಳು ಮತ್ತು ವೀರಗಲ್ಲುಗಳುʼ ರೋಹಿಣಿ ಅವರು ಶಶಿಲೇಖಾ ಬಿ. ಅವರೊಡನೆ ಕೈಕೊಂಡ ಸ್ವಯಂಪ್ರೇರಿತ ಸಂಶೋಧನಾ ಕೃತಿ. ಈ ಸಂಶೋಧನೆಯ ಕ್ಷೇತ್ರಕಾರ್ಯದಲ್ಲಿ ಅವರ ದಣಿವರಿಯದ ಶ್ರಮ, ಶ್ರಧ್ಧೆ ಅಸದೃಶ! ವಿಶ್ವವಿದ್ಯಾಲಯವೊಂದು ನಡೆಸಬಹುದಾದ ಈ ಮಹತ್ವದ ಶೋಧಕಾರ್ಯವನ್ನು ಸರಕಾರ ಇಲ್ಲವೇ ಯಾವುದೇ ವಿದ್ಯಾಸಂಸ್ಥೆಯ ನೆರವಿಲ್ಲದೆ ಕೇವಲ ತಮ್ಮ ಇಚ್ಛಾಶಕ್ತಿಯಿಂದ ಸಾಧ್ಯವಾಗಿಸಿದವರು, ಬಿ.ಎಂ. ರೋಹಿಣಿ ಅವರು. ಸತಿಪಧ್ಧತಿ ಇರದಿ!ದ್ದ ತುಳುನಾಡಿನಲ್ಲಿ ಸತಿಕಲ್ಲುಗಳು ಇರಲಾರವೆಂದೇ ನಂಬಿದ್ದಾಗ, ಅವರ ಸಂಶೋಧನೆಗೆ ಸಿಕ್ಕ ಕಲ್ಲುಗಳು ಅಸಂಖ್ಯ! ತುಳುನಾಡಿನಲ್ಲಿ ಮಾಸ್ತಿ ಎಂದರೆ ಕುಟುಂಬದ ರಕ್ಷಣೆ ಮಾಡುವ ಸ್ತ್ರೀ ಎಂದರ್ಥವೆಂದೂ, ಮಾತೃಪ್ರಧಾನ ಸಂಸ್ಕೃತಿಯಲ್ಲಿ ತುಳುವ ಹೆಣ್ಣು ಆಸ್ತಿಗೆ ಹಕ್ಕುದಾರಳಾದ್ದರಿಂದ, ಅವಳ ಬಾಳು ಶೋಚನೀಯವಾಗಿರಲಿಲ್ಲ ಎಂದೂ ಅವರು ಬರೆದಿದ್ದಾರೆ. ಕೃತಿಯ ಕೊನೆಗೆ ತಮ್ಮ ಸಂಶೋಧನೆಯಲ್ಲಿ ಸಿಕ್ಕ ಕಲ್ಲುಗಳ ವರ್ಣಚಿತ್ರಗಳೂ, ಕ್ರಮಬಧ್ಧವಾದ ತಖ್ವೆಯೂ, ಬಳಸಿದ ಆಕರಗ್ರಂಥಗಳ ಹೆಸರಿನ ಪಟ್ಟಿಯೂ ಹಲವು ಪುಟಗಳಲ್ಲಿ ಮುದ್ರಿತವಾಗಿವೆ.
ಅವರ ಸಣ್ಣ ಕಥೆಗಳ ಸಂಕಲನ, ʻಕರ್ತವ್ಯʼ, ೧೯೯೬ ರಲ್ಲೂ ʻಗರಿಕೆಯ ಕುಡಿಗಳುʼ ೨೦೧೪ರಲ್ಲೂ, ʻಒಂದು ಹಿಡಿ ಮಣ್ಣುʼ ೨೦೧೬ರಲ್ಲೂ ಬೆಳಕು ಕಂಡಿತು. ಮೂವತ್ತು ವರ್ಷಗಳಿಂದ ಅವರು ಬರೆಯುತ್ತಾ ಬಂದಿದ್ದ ಇಪ್ಪತ್ತೇಳು ಕಥೆಗಳ ಸಂಕಲನವದು. ʻಹಿರಿಯರ ಜೀವನ ಕಥನಗಳುʼ, ಮಕ್ಕಳಿಗಾಗಿ ಅವರು ರಚಿಸಿದ ಕೃತಿ. ವೈಚಾರಿಕ ಲೇಖನ, ಸಂಶೋಧನೆ, ಅಧ್ಯಯನಗಳಲ್ಲಿ ತೊಡಗಿ ತಾನು ಕತೆಗಳನ್ನು ಕೈ ಬಿಟ್ಟೆನೆಂದು ಅವರಂದಿದ್ದಾರೆ.
ʻಸಮಾಜಸೇವಕಿ ಹಿಲ್ಡಾ ರಾಯಪ್ಪನ್ʼ, ʻವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯʼ, ʻಸಂಗೀತ ವಿದ್ವಾನ್ ಎನ್.ಕೇಶವ ಭಟ್;, ʻಲಲಿತಾ ಆರ್. ರೈ; ಅವರು ರಚಿಸಿದ ವ್ಯಕ್ತಿಚಿತ್ರಗಳು.
ʻಅವಿವಾಹಿತ ಮಹಿಳೆಯರ ಸಮಾಜೋ ಸಾಂಸ್ಕೃತಿಕ ಅಧ್ಯಯನ;ʼ- ಡಾ. ಸಬೀಹಾರೊಂದಿಗೆ ರೋಹಿಣಿ ಅವರು ಕೈಗೊಂಡ ಸಂಶೋಧನೆಯಿಂದ ೨೦೦೮ರಲ್ಲಿ ಮೂಡಿ ಬಂದ ಕೃತಿ. ಭಾವನಾತ್ಮಕವಾಗಿ ಶೋಷಿತರಾದ, ಮಾನಸಿಕವಾಗಿ ಏರುಪೇರುಗಳಿಗೊಳಗಾದ ಕೆಲವರು ಅವಿವಾಹಿತ ಮಹಿಳೆಯರ ಭೇಟಿ ಎಷ್ಟು ಕಷ್ಟವಾಗಿತ್ತೆಂದೂ, ಈ ಶೋಧಕಾರ್ಯದ ಮೂರುವರ್ಷಗಳ ತಮ್ಮ ಅನುಭವ ಎಷ್ಟು ವರ್ಣನಾತೀತವೆಂದೂ ಅವರು ಹೇಳಿಕೊಂಡಿದ್ದಾರೆ. ಈ ಕೃತಿ ಹೊರಬಂದ ಬಳಿಕ ನಾನವರನ್ನು ಮಂಗಳೂರಿನ ನನ್ನ ಪ್ರಿಯ ಆಂಟಿಯರು– ಇಂಗ್ಲಿಷ್ ಪ್ರಧ್ಯಾಪಕಿಯರಾಗಿದ್ದ ಲೀನಾ ಹಾಗೂ ಫ್ಲೇವಿ ಅಲೋಶಿಯಸ್ ಅವರ ಬಳಿಗೆ ಕರೆದೊಯ್ದಿದ್ದೆ. ಪ್ರಗಲ್ಭ ಭಾಷಾ ಪಾಂಡಿತ್ಯ, ಸ್ನೇಹ, ಸೌಜನ್ಯದ ಈ ಅವಿವಾಹಿತ ಶ್ರೇಷ್ಠರ ಬಗ್ಗೆ ಬರೆವ ಅವಕಾಶ ನಷ್ಟವಾಯ್ತೆಂದು ಅವರು ಪರಿತಪಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ಗುಲಾಬಿ ಬಿಳಿಮಲೆ ಅವರೊಂದಿಗೆ ರೋಹಿಣಿ ಅವರು ಕೈಗೊಂಡ ಸಂಶೋಧನೆಯಿಂದ ಮೂಡಿ ಬಂದ ಕೃತಿ. ತಮ್ಮ ಈ ಶೋಧ ಕಾರ್ಯಕ್ಕಾಗಿ ನಗರದ ಜೈಲಿಗೆ ಅಡಿಗಡಿಗೆ ಭೇಟಿನೀಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ ಮಹಿಳೆಯರ ಬಗೆಗಿನ ದಾಖಲೆಗಳಿಗಾಗಿ ಅವರು ಅರಸಿದ್ದಾರೆ. ಹಲವರು ಬಂಧಿತರು ಮತ್ತೆ ಕಣ್ಣೂರು ಜೈಲಿಗೆ ಸ್ಥಳಾಂತರಗೊಂಡಿದ್ದರಿಂದ ಈ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಸಿಗಲಿಲ್ಲವೆಂದು ಅವರಂದಿದ್ದಾರೆ.
ʻವೇಶ್ಯಾವಾಟಿಕೆಯ ಕಥೆ–ವ್ಯಥೆʼ ರೋಹಿಣಿ ಅವರು ಏಕಾಂಗಿಯಾಗಿಯೇ ಕೈಗೊಂಡ ಅಧ್ಯಯನದಿಂದ ರೂಪುಗೊಂಡ ಕೈತಿ. ೨೦೨೨ ರಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್‌ನಿಂದ ಪ್ರಕಟವಾದ ಈ ಕೃತಿ, ವೇಶ್ಯಾವೃತ್ತಿಯಲ್ಲಿರುವ ಸಮಾಜದ ಅಭಾಗಿನಿಯರ ನೋವು, ತಲ್ಲಣಗಳಿಗೆ ಸ್ಪಂದಿಸಿ, ನಾಲ್ಕೈದು ವರ್ಷಗಳ ಶೋಧ, ಅಧ್ಯಯನ, ಸಂದರ್ಶನ, ವಿಚಾರಮಂಡನೆಯಿಂದ ರೂಪುಗೊಂಡ ವಿಶಿಷ್ಟ ಕೃತಿ. ಲೈಂಗಿಕ ಕಾರ್ಯಕರ್ತೆಯರನ್ನು, ಪೊಲೀಸ್ ಠಾಣೆಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು, ಸಂಸ್ಥೆಗಳನ್ನು ಸಂಪರ್ಕಿಸಿ ವೇಶ್ಯಾವೃತ್ತಿಯಲ್ಲಿರುವವರ ಕಥೆ, ವ್ಯಥೆಯನ್ನು ದಾಖಲಿಸಿದ್ದಾರೆ, ರೋಹಿಣಿ. ಇತಿಹಾಸದ ಪುಟಗಳಿಂದ ತೊಡಗಿ ವರ್ತಮಾನದ ವರೆಗೆ ಸಂಶೋಧನಾತ್ಮಕವಾಗಿ ಮೂಡಿ ಬಂದ ಕೃತಿಯಿದು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿರುವ ಕನ್ಯಾಮಠಗಳ ಹಿಂದಿನ ಚರಿತ್ರಯನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ,ʻ ಭಾರತೀಯರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವ ಧರ್ಮಭಗಿನಿಯರುʼ ಎಂಬ ಕೃತಿಯನ್ನು ಲೇಖಕಿ ಮೋಲಿ ಮಿರಾಂಡಾ ಜೊತೆಗೂಡಿ ರಚಿಸಿದ್ದು, ೨೦೨೪ ರಲ್ಲಿ ಬೆಂಗಳೂರಿನ ಧ್ಯಾನವನ ಪ್ರಕಾಶನದಿಂದ ಬೆಳಕು ಕಂಡಿದೆ. ವಂದನೀಯ ಗುರು ಜೋಕಿಂ ಫೆರ್ನಾಂಡಿಸ್ ಅವರ ಸಲಹೆ, ಸಹಕಾರವನ್ನು, ಪ್ರತಿ ಅಧ್ಯಾಯಕ್ಕೂ ಛಾಯಾಚಿತ್ರಗಳನ್ನೊದಗಿಸಿದ ಫಾದರ್ ಅನಿಲ್ ಫೆರ್ನಾಂಡಿಸ್ ಅವರನ್ನೂ, ಸಹಕರಿಸಿದ ಗೆಳತಿಯರನೇಕರನ್ನೂ ಸ್ಮರಿಸಿದ್ದಾರೆ. ಹದಿನಾಲ್ಕು ಧರ್ಮಪ್ರಾಂತ್ಯಗಳಿರುವ ಕರ್ನಾಟಕದಲ್ಲಿ ಕೇವಲ ಎರಡು ಧರ್ಮಪ್ರಾಂತ್ಯಗಳ ಕನ್ಯಾಮಠಗಳಿಗೆ ಭೇಟಿಯಿತ್ತು, ಅವರ ಈ ಸಮಾಜಸೇವಾ ದೀಪ್ತಿಯಿಂದ ಕನ್ನಡ ಸಾಹಿತ್ಯಕ್ಷೇತ್ರವನ್ನು ಬೆಳಗಿದ್ದಾರೆ, ಈ ಲೇಖಕಿಯರು.
೧೯೯೨ ರಲ್ಲಿ ಮಿತ್ರರೊಂದಿಗೆ ಸೇರಿ ಪರಿಸರ ಸಂರಕ್ಷಣೆಗಾಗಿ ಸ್ಥಾಪಿಸಿದ ವಾಲಂಟರಿ ಎನ್‌ವಾಯರ್ನ್‌ಮೆಂಟ್ ಡೆವೆಲಪ್‌ಮೆಂಟ್ ಆಕ್ಷನ್– ವೇದಾ – ಸಂಸ್ಥೆ, ಪ್ಲಾಸ್ಟಿಕ್ ನಿರ್ಮೂಲನದ ತನ್ನ ಧ್ಯೇಯದಲ್ಲಿ ಯಶಸ್ವಿಯಾಗದೆ, ಕೆಲವರ್ಷಗಳಲ್ಲೇ ಸ್ಥಗಿತವಾದುದು ವೇದದ ಸೋಲಲ್ಲ, ಈ ಸಮಾಜದ ಸೋಲು, ಎಂದಿರುವರು ರೋಹಿಣಿ. ವೇದಾದ ರೂವಾರಿ ಗೋಕುಲ್ ದಾಸ್ ಶೆಟ್ಟಿ ಅವರು ಪರಿಚಯಿಸಿದ ಸೆಸ್ಕಾ – ಸೆಂಟರ್ ಫಾರ್ ಸೋಶಿಯಲ್ & ಕಲ್ಚರಲ್ ಆಕ್ಷನ್- ತಂಡ ಹಾಗೂ ಅದರ ನಿರ್ದೇಶಕ ಎಸ್ಕೆ ಅವರ ನಿರ್ದೇಶನದಲ್ಲಿ ಕಲೆ, ಸಾಹಿತ್ಯ, ಸಮಾಜಸೇವೆಯೇ ಉಸಿರಾಗಿ ಕಳೆದ ಸಾರ್ಥಕ ವರ್ಷಗಳನ್ನೂ ನೆನೆಯುತ್ತಾರೆ. ಸೆಸ್ಕಾದೊಡನೆ ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಎರಡು ದಿನಗಳ ಕಾಲ ಉಳ್ಳಾಲದಲ್ಲಿ ನಡೆಸಿದ ಸ್ತ್ರೀವಾದಿ ಸಿದ್ಧಾಂತಗಳ ವಿಚಾರ ಸಂಕಿರಣ, ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾವ್ಯಕಮ್ಮಟ, ಹಳ್ಳಿಗಳಲ್ಲಿ ಮಹಿಳೆ, ಮಕ್ಕಳಿಗಾಗಿ ತರಬೇತಿ ಕಮ್ಮಟ ಹೀಗೆ ಕಾರ್ಯಪ್ರವೃತ್ತವಾಗಿದ್ದ ಸಂಸ್ಥೆ, ಬೆಳೆದಷ್ಟೇ ವೇಗದಲ್ಲಿ ನಿಷ್ಕ್ರಿಯವಾದುದನ್ನು ಕಂಡು ನೊಂದಿದ್ದಾರೆ. ಸಮಾಜವನ್ನು, ಕುಟುಂಬವನ್ನು ಅದರ ಎಲ್ಲ ಮಗ್ಗುಲುಗಳಿಂದ ನೋಡಲು ಸಾಧ್ಯವಾದುದು, ತನ್ನ ಸಾಹಿತ್ಯ ಪ್ರೀತಿ, ಅಧ್ಯಯನ, ಸಂಶೋಧನೆಯ ಹವ್ಯಾಸದಿಂದ ಎಂದಿದ್ದಾರೆ, ರೋಹಿಣಿ.
ಸಮಾಜಸೇವೆಯಲ್ಲಿ ತೊಡಗಿದ ಸ್ವಯಂಸೇವಾ ಸಂಸ್ಥೆ, ವೆಲೊರೆಡ್ ಹಾಗೂ ಅದರ ಸ್ಥಾಪಕ ಡೆಸ್ಮಂಡ್ ಆಬ್ರಿಯೋ ಅವರಿಂದ ಸಮಾಜಸೇವೆಯ ತಿರುಳನ್ನರಿತ ರೋಹಿಣಿ ಅವರು ಮಕ್ಕಳ ಶಿಕ್ಷಣಕ್ಕಾಗಿ ಪಡಿ, ಡೀಡ್ಸ್ ಸಂಸ್ಥೆಗಳೊಡನೆ ಗಾಢವಾಗಿ ಬೆಸೆದ ತಮ್ಮ ಸಂಬಂಧ, ಅನುಬಂಧದಿಂದ ಕೃತಾರ್ಥರಾದವರು .ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಬೆನ್ನೆಲುಬೇ ಆದ ಅವರು, ʻಗಾನ್ ವಿತ್ ದ ವಿಂಡ್ʼ ನಿಂದ ತೊಡಗಿ ಅಲ್ಲಿ ನನ್ನ ಕೃತಿಗಳ ಲೋಕಾರ್ಪಣೆ ಆದಂದಿನಿಂದ ಸ್ನೇಹ, ಸಾಂಗತ್ಯದಿಂದ ನನ್ನನ್ನೂ ಬೆಳೆಸಿದವರು. ಲೇಖಕಿಯರ ಸಂಘದ ʻಲೇಖ ಲೋಕʼಕ್ಕಾಗಿ ನಾವು ಮಂಗಳ ಗಂಗೋತ್ರಿಯಲ್ಲಿ ಜೊತೆಯಾಗಿಯೇ ನಮ್ಮ ಪ್ರಬಂಧಗಳನ್ನು ಮಂಡಿಸಿದ್ದೆವು. ಮುತ್ತಿನಂತಹ ಅಕ್ಷರಗಳ ಅವರ ಪತ್ರ ಸಂವಹನ ಬೆಸೆದ ನಮ್ಮ ಪ್ರೀತಿಯ ನಂಟು, ಆ ಪತ್ರಗಳಲ್ಲಿನ ಅವರ ವಿಚಾರಸೆಲೆ ಹೃದಯಕ್ಕೆ ತಂಪೆರೆದಿದೆ. ಸಂದೇಶ ಪ್ರಶಸ್ತಿ, ಅಬ್ಬಕ್ಕ ಪ್ರಶಸ್ತಿಗಳಿಂದ ಅವರು ಸಮ್ಮಾನಿತರಾದಾಗ ಅಲ್ಲಿ ಹಾಜರಿದ್ದು, ಅದನ್ನು ಕಣ್ತುಂಬಿಕೊಳ್ಳುವ ಭಾಗ್ಯ ನನ್ನದಾಗಿತ್ತು. ಸ್ತ್ರೀಶಕ್ತಿ, ಶಿಕ್ಷಣ, ವಿಚಾರಪ್ರಜ್ಞೆ, ಮಾನವೀಯತೆಯ ಬೆಳಕು, ನಮ್ಮ ರೋಹಿಣಿ.






ಥ್ಯಾಂಕ್ಯೂ ಅವಧಿ! ರೋಹಿಣಿ ಅವರ ಅಭಿನಂದನಾ ಸಮಾರಂಭಕ್ಕೆ ಸರಿಯಾಗಿ ಇಲ್ಲಿ ಅವರ ವ್ಯಕ್ತಿ ವಿಶೇಷ ಬೆಳಕು ಕಾಣುವ ಅವಕಾಶವಿತ್ತಿರುವಿರಿ. ಕೃತಜ್ಞೆ ನಾನು.