ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತಿಗೂ ಮೊದಲು ‌ಹೆಸರು ತರ್ತಿದ್ದ..

-ನಂದಿನಿ ಹೆದ್ದುರ್ಗ

ಸಾಕಬೇಕಾದ  ಕವಿತೆಗಳು

ಎಫ್ ಬಿಯಲ್ಲಿ ಪರಿಚಯವಾದ ಹೆಂಡತಿ ಸತ್ತವ‌  ಮೆಸೆಂಜರ್ ನಲ್ಲಿ ತಿರುತಿರುಗಿ ಮೆಸೇಜು ಮಾಡಿದ.

‘ನನ್ ಗಂಡ  ಬದುಕಿದ್ದನಪಾ’ ಅಂತ‌ ಹೇಳುವ ಅನಿಸಿದ್ರೂ ಬೆಳೆದುಬಂದ ಹಾದಿ ಬಾಯಿ ಹೊಲೆದಿತ್ತು

ಹೇಗೋ ಗಿಟ್ಟಿಸಿದ ಫೋನ್ ನಂಬರಿನಲ್ಲಿ ವಾಟ್ಸಪ್ ಚ್ಯಾಟಿಗೂ ಬಂದ; ಊರಿಗೆ ಬಂದವ ನೀರಿಗೆ ಬಾರದಿರುತ್ತಾನೆಯೇ?

ಬೆಂಗಳೂರಿಗೆ ಬಂದಾಗ ಖಂಡಿತವಾಗಿ ಮುನ್ನ ತಿಳಿಸಿ,

ಒಮ್ಮೆ ಮನೆಗೆ ಬನ್ನಿ ಅಂತೇನೇನೊ ಹಲುಬಿದ.

ಮಜ ಕೊಡುತ್ತಿತ್ತಾದರೂ ಆರಿದ ನೀರೊಲೆಯ ಥರದ ಮುಖ; ಮುಖ್ಯ ಆಸಕ್ತಿ  ಹುಟ್ಟಲಿಲ್ಲ.

ಮೊನ್ನೆ ಮನೆಯಲ್ಲಿ ‌ಮಾರಾಮಾರಿ ; ಮನಸ್ಸು ಮೋರಿ.

ಎಂದೋ ಕಳಿಸಿದ್ದ ಅವನ‌ ಮೆಸೇಜಿಗೆ ಉತ್ತರಿಸಿದೆ.

‘ಮನೆಯಲ್ಲಿ ಯಾರೆಲ್ಲ ಇದ್ದೀರಿ’

‘ಮಗ ದುಬೈವಾಸಿ, ಮೊನ್ನೆ ಬಂದು‌ಹೋಗಿದ್ದಷ್ಟೆ

ಇನ್ನು ವರ್ಷ ಮೂರಾದರೂ ಬೇಕು ಮರಳಿ ಬರಲು

ಮತ್ತು ಮನೆಯ ದೇವರ ಪೂಜೆ ನಾನೇ ಮಾಡೋದು

ಏನು ಮಾಡೋದು ಹೇಳಿ ;ಹೆಣ್ಣು ದಿಕ್ಕಿಲ್ಲದ ಮನೆ’ ಅಂತಂದ

ಜಗಳ ತಾರಕಕ್ಕೇರಿದ ಆ ದಿನ ಕ್ಯಾಬಿನವನಿಗೆ ಅವನ ಮನೆಯ ಅಡ್ರೆಸ್ ಕೊಟ್ಟೆ.

ಮುಖಕ್ಕೆ ಕರ್ಚಿಫು ಹಾಸಿಕೊಂಡರೆ ಆಸಾಮಿ ಓಕೆ.

———–

ಇತ್ತಿತ್ತಲಾಗಿ ಅಪರೂಪವಾಗಿದೆ ಭಾಷಣಕ್ಕೆ ಕರೆಯುವುದು.

ಪಾಯಿಂಟ್ಸ್ ಬರ್ಕೊಬರ್ತಿನಿ ಅಂತಲೋ ಬಲಕ್ಕೆ ವಾಲ್ತಿನಿ ಅಂತಲೋ ಗ್ರಾಮ್ಯ ಜಾಸ್ತಿ ಅಂತಲೋ ಮೇಲ್ಸ್ ಅನ್ನು ಝಾಡಿಸ್ತಿನಿ ಅಂತಲೊ ಅವಕಾಶಗಳು ಕಡಿಮೆಯಾಗಿದ್ದವು

ಮನೆಯಲ್ಲಿ ಚಿತ್ರಹಿಂಸೆ ಕುರಿತು ಅವತ್ತು ವಿಷಯ ಇತ್ತು; 

ಪಾಪದ ಹೆಣ್ಮಕ್ಳು ಪತಿದೇವನ ಕೊಳಕು ಬಾಯಿ, ಒತ್ತಾಯಿಸುವ ಕೈಕೆಲಸ ಬಾಯ್ಕೆಲಸಗಳ ಕುರಿತು ಒಂದಿಷ್ಟೂ ಹಿಂಜರಿಕೆಯಿಂದಲೇ ಹೇಳಿಕೊಂಡರು.

ನಾನು ಉಗುಳು ನುಂಗಿಕೊಂಡೆ.

ಮುಟ್ಟದೆ ಮುದುಡಿಯೇ ಹೋದ ತೊಟ್ಟು.

ಹಾವಿನ ಗುರುತೇ ಸಿಗದ ಹುತ್ತ.

ವಾರೆ ಜಾರುಗಳನ್ನು ಎಂದೂ ಪರಿಚಯಿಸಿಕೊಳ್ಳದ ಆರೋಹಿ..

ಈ ಮೂರೂ 

ಸತ್ತ ಮುತೈದೆ ಬದುಕಿರುವ ನಿಚ್ಚ ಕುರುಹು

ಎಂದೇನಾದರೂ ಬರೆಯಬಹುದಿತ್ತು. 

ಯಾಕೋ ಗೊತ್ತಿಲ್ಲ,

ಒಂದು ಹೊರಸಂಚಾರಕ್ಕೆ ಮನಸ್ಸು ಹಾತೊರೆಯಿತು.

———

ಆ ಸಂಜೆ ಅಪರೂಪಕ್ಕೆ ಆದ ಭೇಟಿಯಲ್ಲಿ ರಮಿಸಿಕೊಂಡು ಮುಗಿದ ಮೇಲೆ ಅವನ ಮನಸ್ಸು ಮತ್ತೆಲ್ಲೊ ಇದೆ ಅಂತ ಗೊತ್ತಾಯಿತು.

ಇನ್ನಾರದ್ದೊ ನೆನಪಲ್ಲಿ ನನ್ನ ಗಿಲ್ಲುತಿದ್ದ,

ಏನೋ‌ ಹದದಲ್ಲಿ ಇಲ್ಲಿ ಮೆಲ್ಲುತ್ತಿದ್ದ.

ತಿಳಿಯದವಳಂತೆ ತಳುಕು ನಟಿಸುವುದು ಮೊದಲಿಂದಲೂ ಸಿದ್ಧಿಸಿದ ವಿದ್ಯೆ ನನಗೆ.

ದೂರದ ಮರ ತೋರಿಸಿ ಅದರ ಬಲಪಕ್ಕದ ದೊಡ್ಡ ಕವಲುಕೊಂಬೆಯ ಕೆಳಗಿನ ತೆಳುಹರೆಯ ಮೇಲೆ

ಕುಳಿತಿರುವ ಉದ್ದಕೊಕ್ಕಿನ ನೀಲಿಹಕ್ಕಿಯೆಡೆ ನೋಡಿ ಅದು ನಾನು ಎಂದೆ.

ಮಧುರ ಮೋಹದಲ್ಲಿ ಮೊಬೈಲು ತೀಡುತ್ತಿದ್ದವ ಫಕ್ಕನೆ ಎಚ್ಚರಾಗಿ ಬಹಿರಂಗಕ್ಕೆ ಬಂದು ಏನುಏನೆಂದ.

ಅದೋ ನೋಡು ಅಂದೆ.

‘ಮುದ್ದೂ’ಎಂದವ ಮತ್ತೊಂದು ಪರಿಚಿತವಲ್ಲದ ಮುತ್ತು ಕೊಟ್ಟ.

ಅದೇ ಮರದ ಕೆಳಗೆ ಅವರಿಬ್ಬರು ನಿಂತಿದ್ದಾಗ

ಕಾಗೆ ತಲೆಗೆ ಹಿಕ್ಕೆ ಹಾಕಿದ್ದು, ಹಲ್ಲಿ ಭುಜಕ್ಕೆ ಬಿದ್ದಿದ್ದು ಪಕ್ಕದಲ್ಲೇ ಸರ್ಪ ಸರಿದು ಹೋದದ್ದು, ತಪ್ಪಿ ನಾಯಿಕಕ್ಕ ತುಳಿದಿದ್ದು, ಅವಳ ಜೀನ್ಸಿನ ಝಿಪ್ಪು ಕೈಕೊಟ್ಟಿದ್ದನ್ನು ಸಾಕಷ್ಟು ಮಂದಿ ನೋಡಿದ್ದರು.

ಕ್ಷಮಿಸಿ… ನನಗೆ ಬ್ಲ್ಯಾಕ್ ಮ್ಯಾಜಿಕ್ಕಿನಲ್ಲಿ ಆಸಕ್ತಿಯಿಲ್ಲ.

———-

ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ‌ಅವರು ಸಿಕ್ಕಿದರು;  ಮೊನ್ನೆಯ ನನ್ನ ಕವಿತೆ ಓದಿದೆ ಎಂದರು. ಸಣ್ಣಗೆ ಖುಷಿಯಾಯ್ತು, ದೊಡ್ಡ ಕವಿ ಎಷ್ಟೇ ಆದರೂ. ಬಾಯಿಜೋರಿನ ಹೆಂಗಸಾದ್ದರಿಂದ ಜೊತೆಗೆ ಅಳುಕೂ ಇತ್ತು.

ತೆಗಿ ಆ ಪದ್ಯ ಅಂದರು, ಕೈನಡುಗಿದವು, ಓದು ಎಂದರು. 

ವಧು ಎಲ್ಲಿ ನಿಲ್ಲಿಸಿದ್ದೀಯಾ, ಒಬ್ಬಟ್ಟು ಪಕ್ಕಕ್ಕೆ ಏನಿದೆ, ದಂಡೆ ಮಲ್ಲಿಗೆ ದುಂಡು ಬೊಟ್ಟು ನಂತರ ಏನು ಬರಬಹುದಿತ್ತು ಹೇಳು, ತಾಳಿಗೀಳಿ ಆದ್ಮೇಲೆ ಏನಿರಬೇಕು,

ಕನ್ನಡ ಎಮ್ ಎ ನಾ ನೀನು ಅಂತೇನೇನೊ ಕೇಳಿದರು

ಮಂದುವರೆಸು ಎಂದರು. 

ನಾನು ಪ್ರಸ್ಥದ ವಿಷಯವೇ ಬರೆದಿರಲಿಲ್ಲ.

ಮುಗಿದಿದೆ ಎಂದೆ. 

ಏನೋ ಅರ್ಥವಾದವರಂತೆ ಪಕ್ಕಕ್ಕೆ ಒತ್ತಿಕೂತು ತಬ್ಬಿ ಹೆಗಲಿಗೆ ಆನಿಸಿಕೊಂಡರು. ನಾವು ಸಮಾನ ದುಃಖಿಗಳು‌ ಅನಿಸಿತು. 

———–

ಮಾತಿಗೂ ಮೊದಲು ‌ಹೆಸರು ತರ್ತಿದ್ದ. 

ನೋಡು ನೋಡು ಎಂತೆಂತಹ ಕವಿತೆ ಬರೆದಿದ್ದಾಳೆ ಎನ್ನುತ್ತ ಎಂಥದೋ ಕಳಿಸಿದ, 

‘ಸುಮ್ಮನೇ ದೊಡ್ಡ ಲೇಖಕಿ ಅನಿಸಿಕೊಳ್ಳೋದಾ ಬರಿಬೇಕು ನಮ್ ಪತ್ರಿಕೆಗೆ ಅಂತ ಬರೆಸಿದ್ದು ಇದು, ನೋಡು ಎಷ್ಟು ‌ಹದವಾಗಿ ಬರೆದಿದ್ದಾಳೆ ‘ ಅಂತ ಅವನು ನಿಭಾಯಿಸ್ತಿದ್ದ ಪುರವಣಿ ಪುಟ ಕಳಿಸಿದ.

ನಾನು ಕಳಿಸಿದ ಕವಿತೆ ಆರು ತಿಂಗಳಾದರೂ  ಪ್ರಕಟಣೆಯ ಕೃಪೆ ಕಂಡಿರಲಿಲ್ಲ. ಲೇಖನ ಇನ್ನೂ ಏನೋ ಬೇಕಿತ್ತು ಅಂತ ವಾಪಸು ಬಂದಿತ್ತು.

‘ಇಲ್ಲ ಮುದ್ದೂ, ಗುಣಗ್ರಾಹಿ ನಿಲುವು ನನ್ನದು. ಇನ್ನೂ ಪ್ರಯತ್ನಿಸು’ ಅಂದಿದ್ದ ಕಂಗೆಟ್ಟು ಕೇಳಿದಾಗ.

ಅದೆಂತದಪಾ ನಾನು ನೋಡ್ದೆ ಇರೊ ಕವಿತೆ ಅಂತ ಕಳಿಸಿದ್ದು ಓದಿದೆ. ಖಂಡಿತವಾಗಿ ಹೇಳಬಲ್ಲೆ. ಕವಿತೇನಾ ಕವಿತೆ ಅಂತ ಮಾತ್ರ ಓದಬಲ್ಲ ಗುಣ ನಂಗಿದೆ. ಬರೀ ಪದಗಳ ಆಡಂಬರ. ಉಪಮೆ ‌ನೋಡು ಪ್ರತಿಮೆ ನೋಡು ಅಂತೆಲ್ಲ ಬಡಬಡಿಸ್ತಲೇ ಇದ್ದವನ ಕರುಣೆಯಿಂದ ನೋಡಿ ಕವಿತೆಯಲ್ಲಿ ಪಳಗಿದವರಿಗೆ ಕಳಿಸಿ ಕಾದೆ.

‘ಎಲ್ಲೆಲ್ಲಿಂದಲೊ ಹೆಕ್ಕಿದ ಪದಗಳು ಇವು,

ಹೆಚ್ಚು ಗಮನಿಸಬೇಡ ಕಲುಷಿತವಾಗುತ್ತಿ’ ಅಂದರು

ನೇರಾನೇರ ಹಾಗೇ‌ ಹೇಳಿದೆ.

ನನಗೆ ಗೊತ್ತಿದೆ ನಿನಗೆ ‌ಅಸೂಯೆ‌ ಇಲ್ಲ ಅಂದ.

ನಿನಗೇನಾಗಬೇಕು ಅವಳು ಅಂದೆ. 

ಎದೆ ಢವಗುಡುತ್ತಿತ್ತು. ಕಣ್ಣು ಹೊಡೆದುಕೊಳ್ತಿದ್ದವು. 

ಆ ಹೊತ್ತಿಗಾಗಲೇ ಪ್ರೇಮದ ಉನ್ಮಾದವೇರಿಸಿಕೊಂಡಿದ್ದೆ.

ದತ್ತು ಮಗಳು ಅಂದ.  

ನಾನೆಂದೂ ಬಳಸದ ಒಂದು ಪದಕ್ಕೆ ವ್ಯಾಖ್ಯಾನ ದಕ್ಕಿತು. ಆ ದಿನದ ಲೇಖನದಲ್ಲಿ ದತ್ತು ಮಗಳ ಹಸಿವೆಯಿರುವ ಅರವತ್ತರ‌ ಅಪ್ಪಂದಿರು ವಿಷಯ ‌ಕೈಗೆತ್ತಿಕೊಂಡೆ.

———-

ಹೀಗೇ ಮೆಸೆಂಜರ್ರಿನಲ್ಲಿ ಸಿಕ್ಕಿದ್ದಂತೆ ಅವನೂ. ಎಂಥದ್ದೊ ನೋಡಿ ಇದು ನಮ್ಮೂರಾ ಅದು ನಿಮ್ಮೂರಾ ಅನ್ನೊ ಸಾಧಾರಣ ಸಂಭಾಷಣೆಯಷ್ಟೇ ನಡೆದಿದ್ದು ನಾಕಾರು ದಿನ ಅಂದಳು.

ನಡುವೆ ಒಂದು ಮೆಚ್ಚುಗೆಯ ಮಾತು ಬಂತು. ‘ಮೊದಲು ಆಡಿದ್ದೂ ನಾನೇ. ತಕ್ಕ ಪ್ರತಿಕ್ರಿಯೆ ದಕ್ಕಲಿಲ್ಲವಾದರೂ ಮೋಹ ಮೂಡಿಯಾಗಿದೆ ಕಣೇ, ನಿಷ್ಠಾವಂತ ಅನಿಸಿತು ‘ ಎನ್ನುವಾಗ ಕೆನ್ನೆ ಹೊಳೆದಿದ್ದು, ಕಣ್ಣು ಮಿನುಗಿದ್ದು ನೋಡಿ ‘ಎಲಾ…ಎಲಾ…ಮೂತಿ ನೋಡೊಣಾ ತೋರ್ಸು’ ಅಂದಿದ್ದೆ.

ಪೋಟೋ ನೋಡಿದ ಮೇಲೆ ಅವಳಿಗೊಂದು ಅನುಕೂಲಸ್ಥ ಟೇಸ್ಟೇ‌ ಇಲ್ಲ ಅನಿಸಿತ್ತು. ಆದರೂ ಗಂಡಸಿಗೆ ನಿಷ್ಠೆ ಇರುವುದು ,ಹೆಣ್ಣಿಗೆ ಆಸೆ ಹುಟ್ಟುವುದು ಎರಡೂ ನಿಗೂಢ ಅಂತ ಖಚಿತವಾಯ್ತು.

ಒಂದು ಶುಭಮೂಹೂರ್ತದಲ್ಲಿ ಒಂದು ಸಂಜೆ ಅಭ್ಯಂಗ ಎನ್ನುವ ಪದವೊಂದು ಸಂಭಾಷಣೆಯಲ್ಲಿ ಬಂದು ಮೆಸೇಜಿನಲ್ಲೆ ಪ್ರೇಮ ಪ್ರಸ್ತ ಪ್ರಸವ ಎಲ್ಲವೂ ಘಟಿಸಿ ಬೆಳಗಿನ ಹೊತ್ತಿಗೆ ದಣಿದು ಹೋದಳಂತೆ. ಬೆಳಗಿನ ಜಾವ ನಾಲ್ಕಕ್ಕೆ ಎಲ್ಲ ಮುಗಿದು‌ ಮಲಗಿದ್ದಂತೆ. ಹೇಳಿಕೊಳ್ಳುವ ಅವಸರದಲ್ಲಿ ಬೆಳಿಗ್ಗೆಯೇ ಮನೆಗೆ ಬಂದವಳು ಹೊಳೆಯುತ್ತಿದ್ದಳು. ‘ಇಲ್ಲೇ ಹಿಂಗೆ , ಇನ್ನು ‌ನೇರಾನೇರ ಹೆಂಗೆಂಗೊ’ ಅಂತೇನೇನೊ ಕನಸು‌ ನೇದಳು.

ಫೋನು ವಾಟ್ಸಪ್ಪಿನಿಂದ ಮರೆಯಾಗಿದ್ದವಳು ನಾಲ್ಕು ತಿಂಗಳು ಕಳೆದ ಮೇಲೆ ಅಚಾನಕ್ಕು ಆ ಸಂಜೆ ಕಾಫಿಗೆ ಕರೆದಳು. ಈಗ ಬಿಡ್ತೇನೊ ಪ್ರಣಯದ ದಾಳಿ ಅಂತಂದುಕೊಂಡು ಹೋದೆ. ಅದು ಇದು ಮುಗಿದು ಅಭ್ಯಂಗ ಸಂಗ ಹೇಗೆ ಸಾಗುತ್ತಿದೆ ಎಂದೆ.

ಕಿತ್ತು ಹೋದ ನನ್ಮಗ ಅಂದಳು. ಅದಾದ ಮೇಲೆ ಮತ್ಯಾವತ್ತೂ ಅವಳಿಗೆ ಮೆಸೇಜಿನಲ್ಲೂ ಮುತ್ತು ಕೊಡಲಿಲ್ಲವಂತೆ. ಅಸಲಿಗೆ ಏನು ಕೇಳಿದರೂ ಮಾತೇ ಇಲ್ಲವಂತೆ. ಸಿಕ್ಕಾಪಟ್ಟೆ ಅಂತರ್ಮುಖಿಯಾಗಿದ್ದಳು

ಹೊರಡುವ ಮುನ್ನ

ಅವನ ಪ್ರತಿ ರಾತ್ರಿಯ ಲಾಸ್ಟ್ ಸೀನೂ ಬೆಳಗಿನ ಜಾವ ಮೂರು ಅಥವಾ ನಾಲ್ಕು ಕಣೇ ಅಂದಳು.

….

ಅಪ್ಪ ತನ್ನ ಯೌವನದ ಫೋಟೋ ಹಾಕಿದ್ರು ಫ್ಯಾಮಿಲಿ ಗ್ರೂಪಿನಲ್ಲಿ.  

ಬೆಲ್ ಬಾಟಮ್ ಪ್ಯಾಂಟು ಹಿಪ್ಪಿ ಹೇರ್ಸು ಕಪ್ಪು ಶೂಸು.

ಅಮ್ಮನೂ ಜೊತೆಯಲ್ಲಿದ್ದರು. ಪಿನ್ನು ಬಿಗಿದು ಟೈಟಾಗಿ ಉಟ್ಟಿದ್ದ ಚಕ್ಸು ರೇಷ್ಮೆ ಸೀರೆ ,ಫ್ಲಕ್ಕು ಮಾಡಿ ತೀಡಿಕೊಂಡ ಹುಬ್ಬು, ಚೀಪು ಲಿಪ್ಸ್ಟಿಕ್ಕು  ಟ್ರ್ಯಾನ್ಸಪರೆಂಟ್ ಬ್ಲೌಸು, ತೇಟು ಹಳೆಸಿನೆಮಾದ ಆರತಿ.

ಗ್ರೂಪಿನಲ್ಲಿ ಮಕ್ಕಳು ಮರಿಮಕ್ಕಳ ಓಹೋ‌ ಆಹಾ,

ಅಜ್ಜಿ ರೆಟ್ರೊ ಪ್ಯಾಟ್ರನ್ನು, ನೋಡಿದ ತಾತ ಫುಲ್ ಸ್ಟನ್ನು; ಇತ್ಯಾದಿ ‌ಇತ್ಯಾದಿ…

ಅಪ್ಪ ಕಾದೂ ಕಾದೂ ನನಗೂ ಪರ್ಸನಲ್ಲಾಗಿ ಫೋಟೋ ಹಾಕಿದ್ರು.

ನೋಡಿದರೂ ಅಲ್ಲೇನೂ ಹಾಕಿರಲಿಲ್ಲ ನಾನು

ಈ ಫೋಟೋ ನೋಡಿಕೊಂಡಾಗಲಾದರೂ ನೀವು ಮಾಡಿದ್ದು ತಪ್ಪು ಅಂತ‌ ಗೊತ್ತಾಯ್ತಾ ಅಪ್ಪ ಅಂದೆ. ಆರು ತಾಸು ಕಳೆದ ಮೇಲೆ

ಇವಳದ್ದು ಇದ್ದಿದ್ದೆ ನಡೆ ಅಂತ ಅಪ್ಪ ಅಮ್ಮನ ಹತ್ರ ಗೊಣಗಿದ್ದಂತೆ. ಆಮೇಲೆ ‌ಕೆಲಸದವಳು ಹೇಳಿದ್ಳು.

ನಮ್ಮ ಮದುವೇಲಿ  ಜೋಡಿ ನೋಡ್ದವ್ರೆಲ್ಲಾ ಗಣೇಶಬೀಡಿಯಂಗವ್ನೆ ಗಂಡು ಅಂತಿದ್ರಂತೆ.

ಒಂದು ಕಡೆ ಹಾಳೆಗೂ ಒದಗಿಬರಲ್ಲ ಅಂತಿದ್ದ ಕಣೇ ಅಂತ ಗೆಳತಿ ನಕ್ಕಿದ್ದಾಗ ಅರ್ಥವಾಗದೆ ಕಣ್ಕಣ್ ಬಿಟ್ಟಿದ್ದೆ.

ಅನಿವಾರ್ಯ ಬ್ರಹ್ಮಚರ್ಯವೆಂಬುದು ಎಂಥ ನರಕ

ಅಂತ ನಿಮ್ಮಂತಹ ಮುದಿರಸಿಕರಿಗೆ ಹೇಗೆ ಗೊತ್ತಾಗಬೇಕು ಅಂತ ಅರಚಬೇಕು ಅನಿಸ್ತು.

ಅವನ ಬೆನ್ನು ತಿಕ್ಕಲು ಇವಳು ಒಳಹೋಗಿದ್ದು ನೋಡಿ

ಒತ್ತರಿಸಿ ಬಂದ ದುಃಖ ಕ್ಯಾಕರಿಸಿ ಉಗಿದು ಅಪ್ಪಂಥ ಗಂಡಸಿಗಾಗಿ ಎಫ್ ಬಿ ನೋಡಿದೆ

———-

ಮೆನೋಫಾಸಿನ ಸಮಸ್ಯೆ ಅತಿಯಾಗಿ ನನ್ನ ಮಾಮೂಲು ಡಾಕ್ಟರೂ ಸಿಕ್ಕದೇ ಇವಳ ಬಳಿಗೇ ಹೋದೆ. ಒಟ್ಟಿಗೆ ಓದುವಾಗ ಒಂದಿಷ್ಟು ಹೊಟ್ಟೆಕಿಚ್ಚು ಇತ್ತಾದರೂ ಈಗ ಮಾಗುವುದು ಮತ್ತು ಸಾಗುವುದು ಒಂದೇ ಗುರಿ.

ಅವಳ ಕಂಡು ಸಮಸ್ಯೆ ಹೇಳಿ ನಾಲ್ಕಾರು ಮಾತು ಮುಗಿಸಿದ ಮೇಲೆ ಅವಳ ಹೊಟ್ಟೆ ಆ ಮಟ್ಟಿಗೆ ಉಬ್ಬಿರಲು  ಹೊಟ್ಟೆಕಿಚ್ಚೇ ಕಾರಣ ಅಂತ ಸ್ಪಷ್ಟವಾಯ್ತು.

ಪ್ರಿಸ್ಕ್ರಿಪ್ಷನ್ ಬರೆಯುವಾಗ ಮಾಮೂಲಿನಂತೆ ಗಂಡ ಹೆಂಡತಿ ಕೂಡುವುದು ನಾರ್ಮಲ್ ಆಗಿದೆ ತಾನೇ ಕೇಳಿದಳು. ಸಿಕ್ಕಿದ ಅವಕಾಶ ಬಿಡದೆ ನಮ್ಮ ದಾಂಪತ್ಯದ ಪ್ರಣಯದಾಳಿಗಳ ಕುರಿತು ರಸವತ್ತಾಗಿ ಹೇಳಿದೆ. ಒಂದುದಿನವೂ ಏನಿಲ್ಲದೆ ಮಲಗಲು ಬಿಡುವುದಿಲ್ಲ. ಎಲ್ಲವೂ ಮೊದಲಿನಂತೇ ಆಗಬೇಕು. ಇಲ್ಲದಿದ್ದರೆ ಬರೀ ಮರಳಿ ಯತ್ನವ ಮಾಡು ಎನ್ನುತ್ತಾ ಹುಸಿನಾಚಿದೆ.

ಆದರೂ ಅದು ಇದ್ದರೆ ತಾನೇ ಸುಖಸಂಸಾರಕ್ಕೆ ಸರಿಯಾದ ಸೂತ್ರ ಸಿಗುವುದು ,ಅದೇ ತಾನೇ ಹಿಡಿದಿಟ್ಟುಕೊಳ್ಳುವುದರ ಗುಟ್ಟು ,ಸದ್ಯ

ಈ ಬ್ಲೀಡಿಂಗ್‌ ನದ್ದೆ ಸಮಸ್ಯೆ ಎಂದೆ.

ಅವಳ ಡಿವೋರ್ಸು ಕೇಸು ಸದ್ಯ ಇನ್ನೂ ನಡೆಯುತ್ತಿದ್ದಿದ್ದು ಗೊತ್ತಿತ್ತು.

ಒಂದೆರಡು ಮಾತ್ರೆ ಮದ್ದು ಬರೆದುಕೊಟ್ಟು ಯೋಗ ಪಥ್ಯ ಅಂತೆಲ್ಲ ಡಾಕ್ಟರಿಕೆ ಬೋಧಿಸಿದಳು.

ಎರಡು ತಿಂಗಳಾದರೂ ಗುಣ ಕಾಣದೆ ಕೊಟ್ಟ ಮದ್ದು ಕೆಲಸ ಮಾಡದೆ ನನ್ನ ಮಾಮೂಲು ಡಾಕ್ಟರ್ ಬಳಿ ಹೋದೆ. ಅದು ಇದು ಕೇಳಿ ‘ಕೂಡಿದ ಮೇಲೆ ಬ್ಲೀಡಿಂಗ್‌ ಇದೆಯಾ’ ಕೇಳಿದರು.

ನಮ್ಮ ನಡುವೆ ಅದು ನಿಂತು ಹತ್ತೂವರೆ ವರ್ಷವಾಗಿದೆ ಎಂದೆ.

———

‘ತೀರಾ ಮುತ್ತು ಕೊಡಬೇಕು ಅಂತ ಅರ್ಜಾದಾಗಲೂ ಒಂದು ಜೋಡಿ ತುಟಿಗಳು ಸಿಗದ ಬರಗಾಲ ಕಣೇ ಇದು’

ವೈಶಾಲಿ ಯಾಕೋ ತೀರಾ ಬೇಸರದಲ್ಲಿದ್ದಳು ಅಂದು.

ಹಳೆಯ ಗೆಳೆಯರನ್ನು ನೆನಪು ಮಾಡ್ಕೊ ಒಂದು ಕಾಲ್ ಬಿಸಾಡು ಎಂದೆ. ಅವಳ ಪ್ರಶ್ನಾರ್ಥಕ ಚಿಹ್ನೆಯ ಕಣ್ಣುಗಳನ್ನೇ ಮತ್ತೆಮತ್ತೆ ನೋಡುತ್ತಾ.

ವೈಶಾಲಿ ಇರುವುದೇ ಹಾಗೆ 

ಮಾತಾಡಿದರೆ ನಿಂತರೆ ಕೂತರೆ ಅತ್ತರೆ ಗೆದ್ದರೆ ಬಿದ್ದರೆ ಮಲಗಿದರೆ ಸುಮ್ಮನೇ ನೋಡಿದರೆ ಎಲ್ಲದರಲ್ಲೂ ಅವಳ ದೇಹ ಹೊಮ್ಮಿಸುವುದು ಪ್ರಶ್ನೆಯನ್ನೇ??!

ಇದೆಂತಕೆ ಹಿಂಗೆ ಅಂತ ಒಮ್ಮೆ ಕೇಳಿದಾಗ ಅದು ಪ್ರಶ್ನಾತೀತ ಅಂತ ಜೋರು ನಕ್ಕಿದ್ದಳು.

ಅಲ್ಲೂ ಮತ್ತೊಂದು ಪ್ರಶ್ನೆಯೇ ಚಿಮ್ಮಿ ಒಂಥರ ಸುಖವಾಗಿ ಕಂಗೆಟ್ಟು ಅವಳನ್ನು ಮುದ್ದಿಸಬೇಕು ಅನಿಸಿತ್ತು ಮೊದಲ ಬಾರಿಗೆ

ಆ ರಾತ್ರಿ ದೊಡ್ಡ ಮಂಚದ ತುಂಬಾ ನಾನೊಬ್ಬಳೇ ಮಲಗಿದ ಮೇಲೂ ಪ್ರಶ್ನಾರ್ಥಕ ಚಿಹ್ನೆಯ ವೈಶಾಲಿಯನ್ನು ಮುದ್ದಿಸಬೇಕು ಎನ್ನುವ ಕಲ್ಪನೆಯೇ ಬಂದು  how much practice makes perfect lesbians ಅಂತ ಯೂಟ್ಯೂಬ್ ನಲ್ಲಿ ಸರ್ಚಿಗೆ ಕೊಟ್ಟೆ.

ತುಟಿಗಳು ಮುತ್ತು ಕಂಡು ವರ್ಷಗಳಾದವು ಎನ್ನುವುದನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಶುದ್ಧ ಪತಿವ್ರತೆಯರು ನಾವು  ಅನ್ನುವ ಸಾಲೊಂದು ಕವಿತೆಯಾಗಲು ಹಂಬಲಿಸುತ್ತಿದೆ ಇತ್ತೀಚೆಗೆ. 

—–

ಹುಷಾರು ತಪ್ಪಿ ತಿಂಗಳಿಗೆ ಅಂತ ಮನೆಗೆ ಬಂದ ಮಗಳು ಹತ್ತೆ ದಿನಕ್ಕೆ ಮರಳಿ ಫ್ಲೈಟು ಬುಕ್ ಮಾಡಿಕೊಂಡಳು. ಕಾರಣ ಕೇಳಿದ್ದಕ್ಕೆ ಇತ್ಯಾದಿ ಗಿತ್ಯಾದಿಗಳನೆಲ್ಲಾ ಹುಡುಕಿ ಹೇಳಿ ಎಲ್ಲಾ ಹೇಳಕ್ಕಾಗಲ್ಲ ನಿಂಗೆ ಅಂತ ದಬಾಯಿಸಿದ್ದಳು.

ಒಂದಿಷ್ಟು ಅಸಮಧಾನ ಅಸಹನೆಯಲ್ಲೇ ಇದ್ದ ಅಮ್ಮನಿಗೆ ಅವಳು ಹೊರಡುವ ಮುನ್ನ ದಿನ ವಿಪರೀತ ಜ್ವರ.

ಮಗಳು ಉಪಚರಿಸುತ್ತಲೆ ಆಚೀಚೆ ಹೋಗಿ ಫೋನು ನೋಡಿ ಬರ್ತಿದ್ದಳು. ದುಗುಡವೂ ದಿಗಿಲೂ ಆಗಾಗ ಇಣುಕುತ್ತಿತ್ತು.

ಹೊರಟಾಗ ಜ್ವರ ಇಳಿದು ನಿಸೂರಾಗಿದ್ದ ಅಮ್ಮ ಅದು ಇದು ಬುದ್ದಿ ಹೇಳಿದಳು.

ಫ್ಲೈಟು ಇಳಿದು ತಲುಪಿದೆ ಅಂತ ಹೇಳಿದವಳು ‘ಓ ಥ್ಯಾಂಕ್ಯು ಹನೀ’  ಅಂತೇನೋ ಖುಷಿಯಲ್ಲಿ ಚೀರಿದ್ದು ಕೇಳಿತು.

ಪ್ರೇಮದ ಜೇನಿತ್ತು ಅವಳ ಧ್ವನಿಯಲ್ಲಿ. 

ಅಮ್ಮ ಹೊದ್ದು ಮಲಗುವ ಮುನ್ನ ಸಣ್ಣಗೆ ಮುಗುಳುನಕ್ಕಳು.

ಮತ್ತು ಅವಳಿಗೆ ಜ್ವರ ಬಂದ ದಿನ ಅವಳ ಗಂಡ ಮಾತಿಗೂ ಒಂದಕ್ಷರ ಕೇಳಿರಲಿಲ್ಲ.

——-

ತಿಂಗಳ ಹಿಂದೆಯೇ ನಿಗದಿ ಮಾಡಿಕೊಂಡಿದ್ದೆ.

ವರ್ಷವಾಗಿತ್ತು 

ಜೊತೆಯಲ್ಲಿ ಕುಂತು ಮಾತಾಡಿ, ದಿಟ್ಟಿ ಕೂಡಿ.

ಹೀಗೆ ಇಂತಲ್ಲಿ ಈ ಹೊತ್ತಿಗೆ ಭೆಟ್ಟಿ ಮತ್ತು ನಂತರದ ಹತ್ತಾರು ಸಂಗತಿಗಳ ನಿಶ್ಚಯಿಸಿಕೊಂಡೆ.

ಹಂಬಲಿಸಿ ಕಾಯುವುದೇ ಪ್ರೀತಿ, ಹೊರತು ಪ್ರೀತಿಗೆ ನಾಮಪದವಾಗಿ ಯಾವ ವಿಶೇಷಣವೂ ಇಲ್ಲ ಎನ್ನುವುದನ್ನು ಇನ್ನಾರದ್ದೊ ವಾಲಿನಲ್ಲಿ ಓದಿದ್ದು ನೆನಪಾಗಿ ಜೀವ ಮತ್ತಷ್ಟು ಬಿಸುಪು.

ಒಂದು ಸಾವಕಾಶದ ಸಂಜೆ ಮಾತು ತನ್ನ ಆರೋಹದಲ್ಲಿರುವಾಗ ತುಸು ಮೋಹ, ಹೆಚ್ಚೇ ಕಾವಿನಿಂದ ‘ಭೆಟ್ಟಿಗೆ ಬರುತ್ತಿದ್ದೇನೆ’ ಎಂದೆ.

ಜೀವದಲ್ಲಿ ಚೈತ್ರ, ಸುತ್ತೂ ವಸಂತ, ಅವನ ಉತ್ತರಕ್ಕೆ ‌ಕಾಯುವ ಅರೆ ನಿಮಿಷ ಶ್ರಾವಣ.

ಕೇಳಲೇ ಇಲ್ಲವೆಂಬಂತೆ 

ಇಸ್ರೇಲ್ ಯುದ್ಧ, ದುಬೈನ ತಂಗಿ, ನಿರಾಶ್ರಿತರ ಪುನರ್ವಸತಿ, ನಾದಿನಿಯ ಕಾಲುಬೇನೆ

ಕುರಿತು ಮಾತು ಮುಂದುವರೆಸಿದ.

ನನ್ನ ಧ್ವನಿ ಸದ್ದಾಗಿ ಹೊರಬರಲಿಲ್ಲವಾ ?

ಅವನಿಗೆ ಕೇಳಲಿಲ್ಲವಾ ಅಥವಾ ನಾನೇ ಹೇಳಲಿಲ್ಲವಾ  ಸಂದೇಹವಾಗಿ  ಬರುತ್ತಿದ್ದೇನೆ ಎಂದೆ. 

ಕೇಳಿಸಿದ್ದು ಖಾತರಿ ಪಡಿಸಿ 

ಬಲದವರ ದಗಲಬಾಜಿತನದ ಮಾತು ಮುಂದುವರೆಸಿದ.

——-

ಈ ನಂಬರಿನಲ್ಲಿ ಹುಟ್ಟಿದವರು ಈ ವರ್ಷ ತಪ್ಪು ಮಾಡ್ತಿದ್ರೆ ಸಿಕ್ಕಿಬೀಳ್ತಾರಂತೆ ಎಂದೆ.

ಸಾವಿತ್ರಿಯ ಗಂಡ ಸತ್ಯವಾನನ ಜೊತೆಗೆ

ಕಾಫಿಗೆ ಹೋಗಿದ್ದು ಆ ಸಂಜೆ.

ಅವನೂ ಒಂದು ಕಾಲದ ನನ್ನ ಪ್ರೇಮಿಯೇ.

‘ನಮ್ಮದು ದೇವರು ನಿಶ್ಚಯಿಸಿದ ಪ್ರೇಮ

ಪುಣ್ಯವಂತರಿಗಷ್ಟೇ‌ ಪ್ರಾಪ್ತಿಯಾಗುವಂಥದ್ದು’

ಅಂತ ಕಂಡಾಗೆಲ್ಲ ಬೊಂಬಡ ಬಾರಿಸ್ತಿದ್ದವ

ಇಡೀ ಒಂದು ವರ್ಷ ಕಣ್ಮರೆ!!

ಮಾರನೆ ವರ್ಷದ ಮೊದಲನೆಯ ದಿನವೇ

ಭೇಟಿ ಮಾಡಿ

‘ಈ ವರ್ಷ ಏನು ಹೇಳ್ತದೆ ಸಂಖ್ಯಾಶಾಸ್ತ್ರ’ ಎಂದ.

ನನಗೆ ಹೊಸ ಪ್ರೇಮಿ ಸಿಕ್ಕಿಯಾಗಿತ್ತು.

ಅದೇ ಮುಂದುವರೆಯುತ್ತಂತೆ ಎಂದೆ.

ಹ್ಯಾಪುಮೋರೆ ಹಾಕಿ ತಿರುಗಿದವನ ಕಂಡು

ಅಮೃತಮತಿಯ ಗಂಡನಿಗೊಂದು

ಮೆಸೇಜು ಬಿಸಾಡ್ದೆ

‍ಲೇಖಕರು Admin

30 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading