ಮಾಕಾಡಿ ರಾಮನ ಹಂದಿ ಬೇಟೆ

ಮಾಕಾಡಿ ರಾಮನ ಹಂದಿ ಬೇಟೆ

ಬಿ ಗೋಪಿನಾಥ ರಾವ್

“ಏಯ್ ಪುಳಿಚಾರ್ ಮೇಲೆ ಬರಬೇಡ ಮುಳ್ಳೂ ಜಾಸ್ತಿ ಇವೆ, ಅಲ್ಲದೇ ನಿಂಗೆ ಮರ ಹತ್ತಲು ಬರಲ್ಲವಲ್ಲ..”
ಶೀನ ಮೇಲಿಂದ ಕೂಗಿ ಹೇಳಿದ.
ಅವನ ಮರದ ಮೂರು ನಾಲ್ಕು ಕೊಂಬೆಯ ಮೇಲಿದ್ದ.
ಅವನ ಮಾತು ಕೇಳಿ ನನಗೆ ಎಲ್ಲ್ಲಿಲ್ಲದ ಸಿಟ್ಟು ಬಂತು.
ಯಾಕೆ ಹತ್ತಲಾಗುವುದಿಲ್ಲ..? ನೀನೊಬ್ಬನೇ ಏನು. ಮಹಾ… ?
ಮತ್ತೆ ಮೊದಲು ಈಜು ಕಲಿತ ಹಾಗಾಗಬಾರದಲ್ಲ…!!
ಮರ ಹತ್ತ ಬೇಕೆಂಬ ನನ್ನ ಆಸೆಯೂ ಜರ್ರನೆ ಕೆಳಗಿಳಿದು ಬಿಟ್ಟಿತು. ಕಾರಣ ಚಾಂಪಿ ಮರದಲ್ಲಿನ ಮುಳ್ಳು ಮಾತ್ರವಲ್ಲ.. ಈ ಹಿಂದೆ ಇಂತದ್ದೇ ಪಯಣದಲ್ಲಿ ಈಜು ಕಲಿಸಿ ಕೊಡುವೆನೆಂದು ನನ್ನನ್ನು ಹೊಳೆಯಲ್ಲಿ ಮುಳುಗಿಸಿ ನೀರು ಕುಡಿಸಿ ಇನ್ನೇನು ಪರಲೋಕಕ್ಕೆ ಕಳುಹಿಸಿಯೇ ಬಿಟ್ಟಿದ್ದ ಮಹಾಶಯ. ಆ ದಿನ ಅವನಣ್ಣ ಪಿಣಿಯ ಬಾರದೇ ಹೋಗಿದ್ದಲ್ಲಿ ಈ ಕಥೆ ನಿಮಗೆ ತಿಳಿಯುತ್ತಿರಲಿಲ್ಲ.
ಚಾಂಪಿ ಹಣ್ಣಿನ ಬಣ್ಣವೂ ಅದರ ರುಚಿಯ ಹಾಗೇ ಬಲು ಗಾಢ…ಕೆಂಪು.
ಮರದ ಹಣ್ಣುಗಳೇನೋ ನನ್ನನ್ನು ಆಕರ್ಷಿಸಿದ್ದವು. ಆದರೆ ಅವನ ಹಾಗೆ ಮರ ಹತ್ತಲು ಹೆದರಿಕೆ ಕಾರಣ ಮರದಲ್ಲಿದ್ದ ಮುಳ್ಳುಗಳು .
ಹಣ್ಣುಗಳಿಂದ ತುಂಬಿದ ಚಿಕ್ಕ ಚಿಕ್ಕ ಗೆಲ್ಲುಗಳನ್ನು ಆಯ್ದು ತುಂಡು ಮಾಡಿ ಕೆಳಕ್ಕೆ ಬೀಳಿಸಿದ.
ಆಗಲೇ ಪಕ್ಕದಲ್ಲೇನೋ ಸದ್ದಾಯ್ತು.
ನಾವಿಬ್ಬರೂ ರಕ್ಷಿತ ಅಭಯಾರಣ್ಯದಲ್ಲಿದ್ದೆವು. ದೊಡ್ಡ ದೊಡ್ಡ ಕಿರು ಬೋಗಿ ಹಿರೇ ಭೋಗಿ ಧೂಪ ದೇವದಾರು ಮರಗಳು, ಅವುಗಳ ಅಗಾಧ ಹರವಿನಿಂದ ಕೆಳಗಿಳಿದ ಬಳ್ಳಿಗಳು, ಬುಡಗಳಲ್ಲಿ ಚಿಕ್ಕ ದೊಡ್ಡ ಹಸಿರು ಗಿಡ ಪೊದೆಗಳಿಂದ ಆವ್ರತವಾಗಿದ್ದು ಸೂರ್ಯನ ಬಿಸಿಲೂ ಕೋಲಿನಂತೆ ಮಾತ್ರ ಒಳ ಬರುವ ಹಾಗಿತ್ತು. ನಡೆಯುವಷ್ಟು ದಾರಿ ಮಾತ್ರ ಬಿಟ್ಟು ಮತ್ತೆಲ್ಲಾ ಹಸಿರಿನಿಂದಾವ್ರತ. ಶೀನನಿಗೆ ಎಲ್ಲವೂ ಕರತಲಾಮಲಕ.
ಕಾಡು ಪ್ರಾಣಿಯಾದರೆ…? ಎಂಬ ಹೆದರಿಕೆ ಆಕ್ಷಣದಲ್ಲಿ ಮೈ ಮನ ಆವರಿಸಿಕೊಂಡಿತು.
ಯಾ..ವುದೋ ಶಬ್ದ ಬರುತ್ತಿದೆ.. ಶೀನನಿಗೆಂದೆ..
ನಾನು ತೋರಿಸಿದ ಕಡೆ ನೋಡಿದ ಶೀನ….
ಹೌದು ಹಂದಿ ಇದ್ದ ಹಾಗೆ ಇದೆ…
ಆತ ನಕ್ಕ ಹಾಗೆ ಕಂಡಿತು…
ಕಾಡು ಹಂದಿಗಳ ಕೋರೆ ಹಲ್ಲುಗಳು ತುಂಬಾನೇ ಅಪಾಯಕಾರಿ ಅಂತ ಓದಿದ್ದೆ…
ಏನೋ ಮಾಡೋದು..?
ನೀನೇನೂ ಮಾಡೋದು ಬೇಡ, ಅದೇನಿದ್ದರೂ ಅದೇ ಮಾಡಿ ಮುಗಿಸುತ್ತೆ…ಬಿಡು
ಇನ್ನಷ್ಟು ಹೆದರಿಸಿ ತನ್ನ ಮಾತು ಮುಂದುವರಿಸಿದ.. ಅದು ಪಕ್ಕನೆ ಅಡ್ಡಕ್ಕೆ ತಿರುಗಲಾರದು ಬಿಡು…ಅದರ ಬೆನ್ನು ಮೂಳೆಯೇ ಹಾಗಿದೆ. ಅದು ನಿನ್ನ ನೇರಕ್ಕೆ ಬರುತ್ತದೆ ಅಂತ ನಿನಗನ್ನಿಸಿದರೆ ಪಕ್ಕದ ಪೊದೆಯಲ್ಲಿ ಅಡಗಿಕೋ.
ಆತ ತಮಾಷೆ ಮಾಡಿದನೆಂದು ಆ ಕ್ಷಣ ಅನ್ನಿಸಲಿಲ್ಲ. ಅದಕ್ಕೇ ಪಕ್ಕಕ್ಕೆ ಓಡಿದೆ ನನ್ನೆದೆ ಬಡಿತ ನಿಂತಿರಲಿಲ್ಲ.
ನಿಜ ಅವನೆಂದದ್ದು. ಬೆಳೆದ ಕಾಡು ಹಂದಿಯದು, ಅದರ ಮುಖವೇ ವಿಕಾರವಾಗಿತ್ತು ಕೆಳದವಡೆ ಒಡೆದು ರಕ್ತ ಒಸರುತ್ತಿದ್ದ ಬಾಯಿ, ದೊಡ್ಡ ದೊಡ್ದ ಕೋರೆ ಹಲ್ಲುಗಳು ಒಟ್ಟಾರೆಯಾಗಿ ನೋಡಲು ಭಯ ಹುಟ್ಟಿಸುವಂತಿತ್ತು. ಬಂದ ನೇರಕ್ಕೇ ಓಡಿತದು.
ಇಂತಹ ದಟ್ಟ ಕಾಡಿನಲ್ಲಿ ದಾರಿ ಅನ್ನೋದು ನಮಗೆ ಮಾತ್ರ, ಕಾಡು ಪ್ರಾಣಿಗಳಿಗಲ್ಲ.
ಈಚೆಗೆ ಬಂದೆ.
ಯಾಕೋ ಅದರ ಬಾಯಲ್ಲಿ ರಕ್ತ ಕಣೋ..
ನನ್ನ ಎದೆ ಬಡಿತ ಇನ್ನೂ ನಿಂತಿರಲಿಲ್ಲ.
ಅದು ಕಂಬಳ ಗದ್ದೆಯ ಮನೆಯವರು ಇಟ್ಟ ಸಿಡಿ ಮದ್ದು.
ಪಾಪ….. ಯಾಕೆ..?

ಯಾಕೆಂದರೆ ಮಾಕಾಡಿ ನೀರೊಣಮಕ್ಕಿ ಕಂಬಳಗದ್ದೆ ಎಲ್ಲಾ ಕಡೆಯ ಕಬ್ಬು ಗೆಣಸು ಆಲೂ ಗಡ್ಡೆ, ಬತ್ತ ಎಲ್ಲವನ್ನೂ ಇಂತಹಾ ಕಾಡು ಪ್ರಾಣಿಗಳು ಹಾಳು ಮಾಡಿದರೆ ಇನ್ನೇನು ಮಾಡುತ್ತಾರೆ ಪಾಪ.. ಕಂಬಳಗದ್ದೆ ನಾಣಿ ಹೇಳುತ್ತಿದ್ದ ಮದ್ದಿಟ್ಟಿದ್ದಾರೆ ಅಂತ.
ಯಾಕೋ ಹಂದಿ ಪಾಪದ ಪ್ರಾಣಿ ಅನ್ನಿಸಿತು. ಆಹಾರ ಹುಡುಕಿ ಕೊಳೋದು ಅದರ ಧರ್ಮ..
ಅಲ್ಲಾ ಅದು ನಮ್ಮ ಗದ್ದೆಯ ಕಡೆ ಓಡಿತಲ್ಲಾ..?
ಹೌದು ಈ ಸಾರಿ ಅದು ನಮ್ಮ ಬೇಟೆ ಹಾಗಾದರೆ…
ಶೀನ ಹೇಳಿದ್ದು ನನಗೆ ಸರಿಯಾಗಿ ಅರ್ಥ ಆಗಲಿಲ್ಲ…..
ಈಗ ಮತ್ತೊಮ್ಮೆ ಸದ್ದಾಯ್ತು…
ಮುಳ್ಳಿನಿಂದಾವ್ರತವಾದ ಆ ಚಾಂಪಿ ಮರವನ್ನು ಏರಬೇಕೋ ಅಥವಾ ಎಲ್ಲಿಯಾದರೂ ಓಡಿ ಹೋಗಬೇಕೋ ಅಂತ ಯೋಚಿಸುವಷ್ಟರಲ್ಲಿ ಸದ್ದು ನನ್ನೆಡೆಗೇ ಬರುತ್ತಿದ್ದುದು ತಿಳಿಯಿತು.
ಅದರ ಜತೆಯಲ್ಲೇ ದಡದಡ ಓಡಿ ಬರುತ್ತಿದ್ದ ಒಂದು ಕಡಸು ( ದನ) ಅದರ ಹಿಂದೆ ಕೋಲು ಹಿಡಿದು ಓಡಿಸುತ್ತಿದ್ದ ಮುತ್ತನೂ ಕಂಡು ಬಂದರು.
ಆ ಕಡೆಯೇ ನೋಡುತ್ತಿದ್ದ ಶೀನ ದೊಪ್ಪನೆ ಮರದಿಂದ ಕೆಳಗೆ ಬಿದ್ದ ಅದೂ ಓಡುತ್ತಾ ಬರುತ್ತಿದ್ದ ದನದ ಇದಿರು. ದನ ಒಮ್ಮೆಗೇ ಗಾಬರಿಗೊಂಡು ತನ್ನ ವೇಗಕ್ಕೆ ಬ್ರೇಕ್ ಹಾಕಿ ತಾನು ಬಂದ ದಾರಿಯಲ್ಲೇ ತಿರುಗಿ ಓಟಕಿತ್ತಿತು.
ಪಕ್ಕದ ಪೊದೆಯಿಂದ ಒಂದು ಮೊಲ ಟಣ್ಣನೆ ಜಿಗಿದು ಟುಣು ಟುಣು ಓಡಿತು.
ಮುತ್ತ ಕೂಗಿ ಹೇಳಿದ ಹಿಡ್ಕೋ ಅದನ್ನ…
ಆಗಲ್ಲ ಬಿಡು ಮೊಲನ ಹಿಡಿಯಬೇಕಾದರೆ ಇಳಿಜಾರಿನಲ್ಲೇ ಓಡಿಸಬೇಕು.. ಅದರ ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕವು.
ಬಿದ್ದಲ್ಲಿಂದ ಎದ್ದ ಶೀನ
ಪಿಣಿಯಣ್ಣ ಮತ್ತು ರಾಮಣ್ಣ ಮಾತಾಡಿಕೊಳ್ಳುತ್ತಿದ್ದರು. ಆ ಹಂದಿಯನ್ನು ಹೊಡೆಯದೇ ಉಳೀಗಾಲ ಇಲ್ಲ ಅಂತ… ಅಂದರೆ ಮಾಕಾಡಿಯ ಕಡೆಯಿಂದ ಅವರೆಲ್ಲಾ ನಮ್ಮ ಕಡೆ ಓಡಿಸಿದ್ದಾರೆ ಅಂತ ಅರ್ಥ.
ಹ್ಯಾಗೋ ಆ ಗಡವ ಹಂದಿಯನ್ನು ಹೊಡೆಯೋದು..?
ಅದೇ ಕೋವಿ ತಕಂಡು ಅದನ್ನ ಹೊಡೆಯೋದು….!”
ಆತ ತೀರಾ ಸಾಧಾರಣವೆಂಬಂತೆ ಹೇಳಿದ್ದ.
ಪ್ರಾಣಿ ಹಿಂಸೆ ಮಹಾ ಪಾಪ ಅಲ್ಲವಾ..? ನಾನು ಸಸ್ಯಾಹಾರಿಯಾದುದರಿಂದ ಹಾಗೆಂದೆ.
ಪುಸ್ತಕದ ಬದನೆಕಾಯಿ, ಕೊಂದ್ ಪಾಪ ತಿಂದ್ ಪರಿಹಾರ ಎಂದು ಹೇಳಿ ನಕ್ಕ ಶೀನ.
ಅಂದರೆ..?
ಕಾಡು ಹಂದಿ ಮಾಂಸ ಎಂತ ರುಚಿ ಗೊತ್ತಾ ನಿಂಗೆ . ಕೇಳಿದನಾತ.
ಮತ್ತೆ ಹೇಗೆ ಕೊಲ್ತಾರೆ..?
ಕೋವಿಯಲ್ಲಿ
ಅದೆಲ್ಲಿದೆ..?
ನಿಮ್ಮ ಮನೆಯಲ್ಲೇ ಇದೆಯಲ್ಲಾ ಅಷ್ಟೂ ಗೊತ್ತಿಲ್ವಾ ಅನ್ನುವ ಹಾಗೆ ಮುಖ ಮಾಡಿದ್ದ.
ನೆನಪಾಯ್ತು.
ಹೌದು, ನಮ್ಮ ಮನೆಯಲ್ಲೊಂದು ನಾಡ ಕೋವಿಯಿತ್ತು ಆಗ.
ಸುತ್ತ ಮುತ್ತಲೂ ಕಾಡೇ ಕಾಡಾದುದರಿಂದ ಆಗಾಗ್ಗೆ ಅಲ್ಲಿಂದ ಕಾಡು ಪ್ರಾಣಿಗಳು ಗದ್ದೆಯಲ್ಲಿ ಬಂದು ಧಾಳಿ ಇಡೋದು ಮಾಮೂಲು ಕೂಡಾ, ಅವುಗಳಲ್ಲಿ ಹಂದಿ, ದೊಡ್ಡ ಗಡವ ಮಂಗ ( ನಾವೆಲ್ಲಾ ಅವಕ್ಕೆ ಬುಕ್ಕಎನ್ನುತ್ತಿದ್ದೆವು) ಮೊಲ ಜಿಂಕೆ ನವಿಲು ಕಿರುಬ, ತೋಳ, ನರಿ ಹೀಗೆ. ಕಾಡಿಗೇ ಹೋಗಿ ಬೇಟೆಯಾಡುವ ಸಂಪ್ರದಾಯ ಇಲ್ಲದಿದ್ದರೂ ನಮ್ಮ ಬೆಳೆಗಳಿಗೆ ಹಾನಿಯಾಗುವದನ್ನು ತಪ್ಪಿಸಲು. ಆ ಕೋವಿಯನ್ನು ಉಪಯೋಗಿಸುತ್ತಿದ್ದರು.
ಯಾರು ಬೇಟೆಯಾಡ್ತಾರೆ..?
ನಮ್ಮ ಮಾಕಾಡಿ ರಾಮಣ್ಣ….
ಆಗಲೇ ಒಂದು ಶಬ್ದ ಕೇಳಿಸಿತು
ಕೂಊಊಊಊಊಊಊಊಊಊಊಊಊಊಊ,
ಇನ್ನು ಮನೆಗೆ ಹೊರಡೋಣ ನಡಿ, ಕೆಲಸ ಬೇಕಾದಷ್ಟಿದೆ ಎಂದ ಶೀನ.
#########
 
ಇಷ್ಟರಲ್ಲೇ ನಿಮಗೆ ಬಾಲ್ಯದ ವಿಷಯ ಹೇಳುತ್ತಿದ್ದೇನೆ ಅಂತ ಅರ್ಥವಾಗಿರಬೇಕು.
ಹಳ್ಳಿಯಲ್ಲಿ ಬೇಸಗೆ ರಜ ಮಕ್ಕಳಿಗೆ ಅಪ್ಯಾಯಮಾನ.
 
ನಾವಿದ್ದ ಚೌತಿಪಾಲು ಬೆಟ್ಟು ಅನ್ನೋದು ಸುಮಾರು ಹತ್ತು ಹದಿನೈದು ಊರುಗಳಿಂದ ಸುತ್ತುವರಿದ ಬೆಳ್ಳಾಲ ಗ್ರಾಮದ ಒಂದು ಭಾಗ. ಇಲ್ಲಿ ನೀರಾವರಿ ಇಲ್ಲದೇ ಇದ್ದುದರಿಂದ ಮಳೆ ನೀರಿನ ಮೇಲೇ ಕೃಷಿ ಎಲ್ಲಾ ಅವಲಂಬನ, ಬರೇ ಕಬ್ಬು, ಬತ್ತ ಮುಖ್ಯ ಬೆಳೆಯಾಗಿ ಬೆಳೆಸುತ್ತಾ ಮಧ್ಯೆ ದ್ವಿದಳ ಧಾನ್ಯಗಳನ್ನೂ ತರಕಾರಿಗಳನ್ನೂ ಬೆಳೆಯುವರು. ನಮ್ಮ ಮನೆ ಇರೋದು ಬೆಟ್ಟು ಅಂದೆನಲ್ಲ, ಮನೆಯ ಹಿಂದಿನ ಭಾಗವೆಲ್ಲಾ ಗುಡ್ಡವಾಗುತ್ತಾ ಹೋಗಿ ಮುಂದುವರಿಯುತ್ತದೆ. ಆದರೆ ಇದಿರು ಭಾಗ ಇಳಿಜಾರಾಗಿ ಬಯಲಾಗುತ್ತಾ ಸಾಗಿ ಗುಡ್ಡ ಹಾಗೂ ಬಯಲಿನ ಕಾಂಬಿನೇಶನ್ ನಲ್ಲೇ ಹರಡಿಕೊಂಡು ಮನೆಯಿಂದ ನಮ್ಮ ಶಾಲೆಗಿರೋ ನಾಲ್ಕು ಮೈಲನ್ನು ಆವರಿಸಿರುತ್ತದೆ. ನಮ್ಮ ಪ್ರಪಂಚ ಆಗ ಇಷ್ಟೇ. ಬಯಲಾಗುತ್ತಾ ಹೋದ ಜಾಗವು ಮುಂದೆ ಕೆರೆ, ತೋಡು ಹಾಗೂ ಮುಂಗಳಿಕೆಯ ನೀರಿನಿಂದಾಗಿ ಎರಡು ಬೆಳೆಗೆ ಮುಂದುವರಿದಿದೆ.
ಹಳ್ಳಿ ಜನರ ಒಗ್ಗಟ್ಟು ಸ್ವಾವಲಂಬನೆಯ ದಾರಿಯಲ್ಲಿ ಮಹತ್ವದ್ದು. ಅಲ್ಲಿನ ಜೀವನ ಶೈಲಿಯೇ ಹಾಗೆ ಪರಸ್ಪರ ಅವಲಂಬನೆ ಮತ್ತು ಸಹ ಜೀವನ ಪ್ರಕೃತಿದತ್ತ .
ಪಿಣಿಯ ನಮ್ಮ ಮನೆಯ ಹೆಂಗಸು ಮಕ್ಕಳೆಲ್ಲರನ್ನೂ ಅಪಾಯ ರಹಿತ ಆಯಕಟ್ಟಿನ ಜಾಗವೊಂದನ್ನು ಆಯ್ಕೆ ಮಾಡಿ ನಿಲ್ಲಿಸಿದ್ದ.
ಎಲ್ಲರೂ ಉಸಿರು ಬಿಗಿ ಹಿಡಿದು ನಿಂತಿದ್ದೆವು. ನನ್ನ ಅಕ್ಕ ನನ್ನ ಕಿವಿಯಲ್ಲಿ ಉಸಿರಿದಳು, ಗೋಪೂ ಹಂದಿ ತಿರುಗಿ ನಮ್ಮ ಮೇಲೇ ಬಂದರೆ..?
ತಕ್ಷಣ ಒಂದು ಅಕಾಸ್ಮಾತ್ ಮಿಂಚಿದ ಭಯ ನಮ್ಮೆಲ್ಲರಲ್ಲಿ ಹರಡಿಕೊಂಡಿತು. ಆಗ ಸೀನ ಹೇಳಿದ್ದ ಮಾತು ನೆನಪಿಗೆ ಬಂತು. ನಾವಿದ್ದದ್ದು ಕೆಳಗಿನ ಗದ್ದೆಯಲ್ಲಿ, ಹಂದಿ ಕಂಡಿದ್ದು ಮೇಲಿನ ತೋಡಿನಲ್ಲಿ. ಅದು ಓಡಿದರೆ ಸೀದಾ ತೋಡಿನಲ್ಲಿ ( ತೊರೆ) ಮುಂದಕ್ಕೆ ಓಡಬೇಕೇ ಹೊರತೂ ಹಿಂದಕ್ಕಲ್ಲ. ಅಲ್ಲದೇ ಮುಂದೆ ಹೋದಾಗಲೆಲ್ಲ ತೊರೆಯ ಆಳ ಕಡಿಮೆಯಾಗುತ್ತಾ, ಸುತ್ತಲಿನ ವಾತಾವರಣವೇ ನಿಧಾನವಾಗಿ ಗುಡ್ಡವಾಗುತ್ತಾ ಹೋಗುತ್ತದೆ. ಮಾಕಾಡಿ ರಾಮ ದೂರದಲ್ಲಿನ ಒಂದು ಕಾಸರಕನ ಮರದ ಮೊದಲಿನ ರೆಂಬೆಯ ಮೇಲೇ ಅಟ್ಟ ಮಾಡಿಕೊಂಡು ನಮ್ಮ ಕೋವಿ ಹಿಡಿದು ಕಾಯುತ್ತಿದ್ದ. ಅದು ಆತನ ಕಣ್ಣಿಗೆ ಕಂಡರೆ ಆತ ಕೊಲ್ಲದೇ ಬಿಡಲಾರ. ಹಾಗಾಗಲ್ಲ ಬಿಡು ಶೀನನೆಂದ ಮಾತು ಅವಳಿಗೆ ತಿಳಿಸಿದೆ.
 
ಆಗಲೇ ನಮ್ಮ ಎಡ ಗಡೆಯಿಂದ ಸದ್ದು ಕೇಳಿಸಿತು . ಮುತ್ತ ಶೀನ ಪಿಣಿಯರ ಗುಂಪು ನಗಾರಿ, ಡಬ್ಬಿ ಬಡಿಯುತ್ತಾ, ಕೂಗಿಕೊಂಡು ಗಲಾಟೆ ಮಾಡುತ್ತಾ ಬರುತ್ತಿದ್ದ ಶಬ್ದವದು. ದನಿಯೂ ಜೋರಾದಂತೆಲ್ಲಾ ನಿಧಾನ ನಿಧಾನವಾಗಿ ಅವರೆಲ್ಲರ ಅಸ್ಪಷ್ಟ ರೂಪವೂ ಸ್ಪಷ್ಟವಾಗತೊಡಗಿತು. ಅಟ್ಟಿಸಿಕೊಂಡು ಬರುತ್ತಿದ್ದ ಗುಂಪಿನ ಮತ್ತು ಹಂದಿಯ ಶಬ್ದ ನಮಗೆ ಸ್ಪಷ್ಟವಾಗಿ ಗೋಚರಿಸುವಷ್ಟು ಮತ್ತು ಕೇಳಿಸುವಷ್ಟು. ಜತೆಯಲ್ಲೇ ನಾಲ್ಕಾರು ನಾಯಿಗಳು ಕೂಡಾ, ಅದರಲ್ಲೊಂದು ನಮ್ಮದೇ ನಾಯಿ ಕೂರ. ಈಗ ನಮಗೆ ಅವರೆಲ್ಲರಿಗಿಂದ ಮುಂದೆ ಮುಂದೆ ಓಡಿ ಬರುತ್ತಿದ್ದ ಕಪ್ಪು ಬಣ್ಣದ ಸೂಕರ ಕಂಡಿತು. ಅದರ ಮುಖವೆಲ್ಲಾ ರಕ್ತ ಸಿಕ್ತವಾಗಿತ್ತು. ನೆನಪಿಗೆ ಬಂತು ನೀರ್ಮಕ್ಕಿಯಲ್ಲಿ ಕಬ್ಬಿನ ಗದ್ದೆಯಲ್ಲಿಟ್ಟಿದ್ದ ಗರ್ನಾಲು ಪಾಪ ಅದರ ತಿನ್ನುವ ಆಸೆಯನ್ನೇ ಒಡೆದು ಚಿಂದಿ ಮಾಡಿತ್ತು. ಆ ಕಾಡತೂಸು ತುಂಬಿದ ತಿಂಡಿಯನ್ನು ಜಗಿದರೆ… ಮತ್ತೇನಾದೀತು.
 
ಆಗಲೇ ಢಮ್ ಅಂತ ಮೊದಲ ಶಬ್ದ ಕೇಳಿಸಿತು. ಅದು ಹಂದಿಯ ಮೈಯ್ಯನ್ನು ಹೊಕ್ಕಿದ್ದರೂ ಪ್ರಾಯಶಃ ಹೆದರಿ ನಾಗಾಲೋಟದಲ್ಲಿ ಓಡಿ ಬರುತ್ತಿದ್ದ ಹಂದಿಯ ಮೈಯ್ಯ ಕಸುವು ಅದನ್ನು ನಿಲ್ಲಗೊಡಲಿಲ್ಲ. ಪ್ರಾಣದ ಮೇಲಿನ ಆಸೆ… ಜತೆಯಲ್ಲೇ ಇನ್ನೊಂದು ಗುಂಡಿನ ಮೊರೆತ. ಸ್ವಲ್ಪ ದೂರ ಹಾಗೇಯೇ ಅದೇ ನೇರದಲ್ಲಿ ಓಡಿದ ಹಂದಿ ದೊಪ್ಪನೆ ಕೆಳಗೆ ಬಿತ್ತು. ಹೊರಳಾಡುತ್ತಿದ್ದ ಅದು ಸ್ವಲ್ಪ ಹೊತ್ತಿನಲ್ಲೇ ನಿಶ್ಟೇಚಿತವಾಯ್ತು.
ಅದು ಪೂರ್ತಿಯಾಗಿ ಸತ್ತಿತೆಂದು ಖಚಿತವಾದ ಮೇಲೇಯೇ ರಾಮ ಮರದ ಮೇಲಿನಿಂದ ಕೆಳಗಿಳಿದ, ಆದರೂ ಅವನ ಕೈಯ್ಯ ಕೋವಿ ಸಿದ್ಧವಾಗಿಯೇ ಇತ್ತು ಮತ್ತೆ ಬೇಕಿದ್ದಲ್ಲಿ ಗುಂಡು ಹೊಡೆಯಲು. ಆತ ಒಳ್ಳೆಯ ಹೆಸರಾಂತ ಗುರಿಕಾರ.
ಮುಂದಿನ ಕ್ಷಣದಲ್ಲಿ ಅಲ್ಲೊಂದು ಜನ ಸಾಗರವೇ ನೆರೆಯಿತು. ಒಂದು ಅಗಲದ ಕೊಂಬೆಯನ್ನು ಕತ್ತರಿಸಿ ಹಂದಿಯನ್ನು ಅದರ ಮೇಲೆ ಇಟ್ಟು ಕಟ್ಟಿ ಎಲ್ಲರೂ ಎಳೆಯುತ್ತಾ ಕಂಬಳಗದ್ದೆಯ ಬಳಿಯ ವಿಶಾಲ ಆಲದ ಮರದ ಬಳಿ ಕೊಂಡು ಹೋದರು. ಎಲ್ಲರಿಗೂ ಸಮಪಾಲು ಹಂಚಲು.
ಅಲ್ಲಿಗೆ ಈಗ ಮಕ್ಕಳಿಗೆ ಹೋಗಲು ಸಾಧ್ಯವಿಲ್ಲ ಔಟ್ ಆಫ್ ಬಾಂಡ್…
 
ಮಾರನೆಯ ದಿನ ಶೀನ ಖುಷೀಯಲ್ಲಿ ಹೇಳಿದ್ದ, ನಮ್ಮ “ಕೋವಿ”ಯ ಪಾಲಿನ ಹಂದಿಯ ಮಾಂಸವನ್ನೂ ಅವನ ಮನೆಯವರೆಲ್ಲರೂ ಸೇರಿ ಚಪ್ಪರಿಸಿದ್ದರಂತೆ.
ಎಂತ ರುಚಿ ಗೊತ್ತಾ..?
ನಾನು ಸುಮ್ಮನೇ ನಕ್ಕೆ ಯಾಕೋ ಬೇಸರವೆನಿಸಿತ್ತು
 

‍ಲೇಖಕರು G

February 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: