ಜಗತ್ತು ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ಭಾರತದ ಸಂದರ್ಭದಲ್ಲಿ ಈ ದಿನ ಕೇವಲ ಆಚರಣೆಯ ದಿನವಾಗದೆ ಆತ್ಮಾವಲೋಕನದ ದಿನವಾಗಲಿದೆ. ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ಸಮಾಜ ಭಾರತೀಯ ಸಂದರ್ಭದಲ್ಲಿ ಇತ್ತೀಚೆಗೆ ಮಹಿಳೆಯರ ದೇಹವನ್ನು ಬಳಸಿ ಬಿಸಾಡುವ ವಸ್ತುವಿನಂತೆ ಕಾಣುತ್ತಿರುವುದು ವಿಪಯರ್ಾಸ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ದೇಶದ ಮಾನವ ಹೃದಯಗಳನ್ನೇ ಕಲಕಿದ್ದರೂ ಹೆಣ್ಣಿನ ಮೇಲಿನ ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಅತ್ಯಾಚಾರಿಗಳಿಗೆ ಯಾವ ಶಿಕ್ಷೆ ನೀಡಬೇಕು ಎಂಬ ವಾದ ವಿವಾದಗಳು ಪರಾಕಾಷ್ಠೆ ತಲುಪುತ್ತಿರುವಂತೆಯೇ ಮಹಿಳೆಯರ ಮೇಲಿನ ದೌರ್ಜನ್ಯಗಳೂ ಪರಾಕಾಷ್ಠೆ ತಲುಪುತ್ತಿವೆ. ಕಾನೂನಿನ ನಿಯಂತ್ರಣಗಳಿಗೆ ನಾವು ಬಗ್ಗುವವರಲ್ಲ ಎಂದು ಈ ದೇಶದ ಪುರುಷ ಸಮಾಜದ ಹೆಮ್ಮೆಯಿಂದ ಕೂಗಿ ಹೇಳುತ್ತಿದ್ದಂತಿದೆ.
ದೆಹಲಿ ಪ್ರಕರಣ ರಾಜಧಾನಿಯಲ್ಲಿ ನಡೆದ ಕಾರಣಕ್ಕೋ ಅಥವಾ ಘಟನೆಯ ಬರ್ಬರತೆಯಿಂದಲೋ ಅಥವಾ ಮಾದ್ಯಮಗಳ ಪ್ರಭಾವದಿಂದಲೋ ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ದೇಶದ ಪ್ರಜ್ಞಾವಂತ ಜನತೆ ಮೈಗೊಡವಿ ಎದ್ದುನಿಲ್ಲುವಂತೆ ಮಾಡಿತ್ತು. ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ದೆಹಲಿ ಘಟನೆ ಈ ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಒಂದು ಸಣ್ಣ ಕಿಡಿ ಅಷ್ಟೇ. ಈ ದೇಶದ ಆಳ್ವಿಕರ ದೃಷ್ಟಿಯಲ್ಲಿ ಭಯೋತ್ಪಾದನೆ ಮತ್ತು ಮಾವೋವಾದ ದೇಶದ ಅಖಂಡತೆಗೆ ಭಂಗ ತರುವ ವಿದ್ಯಮಾನಗಳಾಗಿ ಕಾಣುತ್ತದೆ. ಹಾಗಾಗಿ ಈ ಎರಡೂ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳಾಗಿ ಕಾಣುತ್ತವೆ. ಆದರೆ ಈ ದೇಶದ ಮಹಿಳೆಯರಿಗೆ ಇಡೀ ಪುರುಷ ಸಮಾಜವೇ ಭಯೋತ್ಪಾದಕರಂತೆ ಕಾಣುತ್ತಿದ್ದರೆ ಅಚ್ಚರಿಯೇನಲ್ಲ. ಬಾಂಬ್ ಸ್ಫೋಟಿಸದೆ, ಶಸ್ತ್ರಾಸ್ತ್ರ ಪ್ರಯೋಗಿಸದೆ ಅಮಾಯಕ ಮಹಿಳೆಯರ ಜೀವನವನ್ನೇ ವಿನಾಶದ ಅಂಚಿಗೆ ಸೆಳೆದೊಯ್ಯುತ್ತಿರುವ ಪುರುಷ ಸಮಾಜದ ದುಷ್ಕೃತ್ಯಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲ ಸಂವೇದನಾಶೀಲ ನಾಗರಿಕ ಸಮಾಜಕ್ಕೇ ಒಂದು ಸವಾಲಾಗಿದೆ.

ದೆಹಲಿ ಘಟನೆಯ ನಂತರದಲ್ಲಿ ಅತ್ಯಾಚಾರದ ಸುದ್ದಿ ಇಲ್ಲದ ದಿನವೇ ಇಲ್ಲವೆಂದು ಹೇಳಬಹುದು. ಶಾಲಾ ಶಿಕ್ಷಕ, ಪೊಲೀಸ್ ಅಧಿಕಾರಿ, ವೈದ್ಯ, ವಕೀಲ ಹೀಗೆ ಗೌರವಯುತ ವೃತ್ತಿಗಳಲ್ಲಿರುವವರೂ ಸಹ ಹಸುಳೆಗಳ ಮೇಲೆ, ಬಾಲಕಿಯರ ಮೇಲೆ ಅತ್ಯಾಚಾರ ಎಸಗುತ್ತಿರುವುದು ಕಂಡುಬರುತ್ತಿದೆ. ಹೆಣ್ಣುಮಕ್ಕಳನ್ನು ಪುರುಷ ಶಿಕ್ಷಕರು ಇರುವ ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂಜರಿದರೆ ಅಚ್ಚರಿಯೇನಲ್ಲ. ಅತ್ಯಾಚಾರಕ್ಕೊಳಗಾದರೂ ಪೊಲೀಸ್ ಠಾಣೆಗೆ ಹೋಗಲು ಮಹಿಳೆಯರು ಹೆದರಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಕಾನೂನು ರಕ್ಷಕರು ಕಾನೂನು ಭಂಜಕರಾಗಿದ್ದಾರೆ, ಶಿಕ್ಷಣ ನೀಡುವ ಗುರುಗಳು ಪಾಶವೀ ಗುರುಗಳಾಗಿ ಪರಿಣಮಿಸುತ್ತಿದ್ದಾರೆ. ಇಲ್ಲಿ ಪುರುಷ ಸಮಾಜವನ್ನು ಇಡಿಯಾಗಿ ದೂಷಿಸಲಾಗುವುದಿಲ್ಲವಾದರೂ ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಭಾರತೀಯ ಪುರುಷ ವರ್ಗದಿಂದ ಒಂದು ಸಂವೇದನಾತ್ಮಕ ಸ್ಪಂದನೆ ದೊರೆಯದಿರುವುದು ವಿಪಯರ್ಾಸ.
ಈ ಪವಿತ್ರ ಭರತ ಭೂಮಿಯಲ್ಲಿ, ಭಾರತ ಮಾತೆಯ ಮಡಿಲಲ್ಲಿ ಮೂರು ವರ್ಷದ ಹಸುಳೆಯೂ ಅತ್ಯಾಚಾರಕ್ಕೊಳಗಾಗುತ್ತದೆ. 70 ವರ್ಷದ ವೃದ್ಧೆಯೂ ಅತ್ಯಾಚಾರ ಎದುರಿಸುತ್ತಾರೆ. ಪ್ರಚೋದಕ ಉಡುಪು ಧರಿಸುವ ಯುವತಿಯೂ ಹಲ್ಲೆಗೊಳಗಾಗುತ್ತಾಳೆ.. ಬಿಚ್ಚೋಲೆ ಗೌರಮ್ಮನಂತಿರುವ ಬಾಲಕಿಯ ಮೇಲೂ ದೌರ್ಜನ್ಯ ನಡೆಯುತ್ತದೆ. ಸುಶಿಕ್ಷಿತ ಮಹಿಳೆಯ ಮೇಲೆ ನಡೆಯುವಂತೆಯೇ ಅಕ್ಷರ ಜ್ಞಾನವಿಲ್ಲದ ಗ್ರಾಮೀಣ ಮಹಿಳೆಯೂ ಅತ್ಯಾಚಾರಕ್ಕೊಳಗಾಗುತ್ತಾಳೆ. ಸಂಪ್ರದಾಯವಾದಿಗಳ ದೃಷ್ಟಿಯಲ್ಲಿ ಮಹಿಳೆಯೇ ಈ ಕೃತ್ಯಗಳಿಗೆ ಕಾರಣಳಾಗುತ್ತಾಳೆ. ಏಕೆಂದರೆ ಪುರುಷ ಸಮಾಜದ ಮನೋ ನಿಗ್ರಹವನ್ನು ಕಾಪಾಡುವ ಹೊಣೆಗಾರಿಕೆ ಮಹಿಳೆಯ ಮೇಲಿದೆ. ಪುರುಷರು ತಮ್ಮ ನಿಯಂತ್ರಣ ಕಳೆದುಕೊಳ್ಳದಂತೆ ಎಚ್ಚರ ವಹಿಸಿ ಮಹಿಳೆಯರು ತಮ್ಮ ವಸ್ತ್ರಧಾರಣೆ ಮಾಡಬೇಕಿದೆ. ಪ್ರಚೋದಕ ಉಡುಪು ಧರಿಸಿದರೆ, ಪುರುಷ ವರ್ಗಕ್ಕೆ ಮೂಲಭೂತ ಹಕ್ಕಿನಂತೆ ಒದಗಿ ಬಂದಿರುವ ಪ್ರಚೋದನೆಯ ಹಕ್ಕು ಲಭಿಸುತ್ತದೆ. ಈ ಸಂದರ್ಭದಲ್ಲಿ ನಡೆಯುವ ಅತ್ಯಾಚಾರ ಸಮಾಜಕ್ಕೆ ಸ್ವೀಕಾರಾರ್ಹವಾಗಿಬಿಡುತ್ತದೆ. ಏಕೆಂದರೆ ಮಹಿಳೆ ಸಂತ್ರಸ್ತಳೂ ಆಗಿರುತ್ತಾಳೆ, ಅಪರಾಧಿಯೂ ಆಗಿರುತ್ತಾಳೆ.
ಇಲ್ಲಿನ ನ್ಯಾಯ ವ್ಯವಸ್ಥೆಯಲ್ಲಿ ಮೇಲ್ಜಾತಿಯವರೆಂಬ ಕಾರಣಕ್ಕೆ ಅತ್ಯಾಚಾರ ಎಸಗಿದ ಕ್ರೂರಿಗಳು ನ್ಯಾಯಾಂಗದಿಂದ ಕ್ಲೀನ್ ಚಿಟ್ ಪಡೆಯುತ್ತಾರೆ. ಮತ್ತೊಂದು ಘಟನೆಯಲ್ಲಿ ಬಾಲಕಿಯೊಬ್ಬಳ ಮೇಲೆ ಅವ್ಯಾಹತವಾಗಿ ತಿಂಗಳಗಟ್ಟಳೆ ಸಾಮೂಹಿಕ ಅತ್ಯಾಚಾರ ನಡೆದರೂ ಆ ಬಾಲಕಿಯ ನಡತೆ ಪ್ರಶ್ನಾರ್ಹವಾಗಿ ಎಲ್ಲ ಅತ್ಯಾಚಾರಿಗಳೂ ಖುಲಾಸೆಯಾಗುತ್ತಾರೆ. ದೆಹಲಿ ಘಟನೆಯಲ್ಲೂ ಆಗಲೇ ಪ್ರತ್ಯಕ್ಷದಶರ್ಿಯಾಗಿದ್ದ ವ್ಯಕ್ತಿ ಭಿನ್ನರಾಗ ಹಾಡತೊಡಗಿದ್ದಾನೆ. ಚಿಕ್ಕ ಹಸುಳೆಗಳ ಮೇಲೆ ಅತ್ಯಾಚಾರ ಎಸಗುವ ದುಷ್ಕಮರ್ಿಗಳು ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮುಕ್ತರಾಗುತ್ತಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಶೀಲ ಪ್ರಶ್ನಾರ್ಹವಾಗುತ್ತದೆ ಆದರೆ ಅತ್ಯಾಚಾರ ಎಸಗಿದ ಪುರುಷರಿಗೆ ಶೀಲ ಎನ್ನುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಇದು ಈ ದೇಶದ ಪರಂಪರೆ ಎಂದರೆ ತಪ್ಪಲ್ಲ. ಕಾರಣ ಮಹಿಳೆಯರ ಮೇಲಿನ ಅತ್ಯಾಚಾರ ಕೇವಲ ಕಾಮತೃಷೆಯ ಸಂಕೇತವಲ್ಲ. ಇದು ಪ್ರಾಬಲ್ಯವನ್ನು ಸ್ಥಾಪಿಸುವ ಒಂದು ಯತ್ನ.
ಹಾಗಾಗಿಯೇ ಮಾನ್ಯ ಗುರೂಜಿಯೊಬ್ಬರು ದೆಹಲಿ ಘಟನೆಯ ಸಂದರ್ಭದಲ್ಲಿ, ಅತ್ಯಾಚಾರಕ್ಕೊಳಗಾದ ಮಹಿಳೆ ದೈನ್ಯತೆಯಿಂದ ಬೇಡಿಕೊಂಡಿದ್ದರೆ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಹೇಳುತ್ತಾರೆ. ಅಂದರೆ ದೈನ್ಯತೆ ತೋರದೆ ಹೋದರೆ ಪುರುಷ ಸಮಾಜಕ್ಕೆ ಅತ್ಯಾಚಾರ ಎಸಗಲು ಸಾಂವಿಧಾನಿಕ (?) ಹಕ್ಕು ಇದೆ ಎಂದರ್ಥವೇ ? ದೇಶದ ಆಳ್ವಿಕರಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಆಡಳಿತ ಯಂತ್ರ ಎದುರಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿ ಕಾಣುತ್ತಿರುವುದೇ ಹೊರತು, ಈ ದುಷ್ಕೃತ್ಯಗಳು ಮನುಕುಲದ ಮೇಲೆ ನಡೆಯುತ್ತಿರುವ ಪಾಶವೀ ಕೃತ್ಯವಾಗಿ ಗೋಚರಿಸುತ್ತಿಲ್ಲ. ಹಾಗಾಗಿಯೇ ಇಡಿ ಸಮಸ್ಯೆಯನ್ನು ಕಾನೂನಿನ ಕನ್ನಡಿಯಿಂದಲೇ ನೋಡಲಾಗುತ್ತಿದೆ. ವರ್ಮ ಸಮಿತಿಯ ವರದಿಯನ್ನು ಪೂರ್ಣವಾಗಿ ಸ್ವೀಕರಿಸಲು ಸಕರ್ಾರ ಎದುರಿಸುತ್ತಿರುವ ಗೊಂದಲಗಳಲ್ಲೇ ನಮ್ಮ ಆಳ್ವಿಕರ ಮೂಲಭೂತವಾದಿ ಮತ್ತು ಸಾಂಪ್ರದಾಯಿಕ ಧೋರಣೆ ಎದ್ದು ಕಾಣುತ್ತದೆ. ಭವ್ಯ ಭಾರತೀಯ ಪರಂಪರೆಯ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಧರ್ಮ ರಕ್ಷಕರು ಈ ಸಂದರ್ಭದಲ್ಲಿ ಸಕರ್ಾರದಿಂದ ಯಾವುದೇ ಕಠಿಣ ಧೋರಣೆಯನ್ನು ಅಪೇಕ್ಷಿಸದಿರುವುದನ್ನು ನೋಡಿದರೆ ಭಾರತವನ್ನು ಆಳುತ್ತಿರುವುದು ಪ್ರಜಾಸತ್ತಾತ್ಮಕ ಸಂವಿಧಾನವಲ್ಲ, ಸಾಂಪ್ರದಾಯಿಕ ಮೂಲಭೂತವಾದಿ ಸಂವಿಧಾನ ಎಂದು ಅರಿವಾಗುತ್ತದೆ.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಹಲವಾರು, ವಿಭಿನ್ನ ಮತ್ತು ಗಂಭೀರವೂ ಹೌದು. ಆದರೆ ಈ ಸಮಸ್ಯೆಗಳು, ಸವಾಲುಗಳು ಆಳ್ವಿಕರ ಅರಿವಿಗೆ ಬರುತ್ತಿಲ್ಲ. ಶಾಸನಗಳ ಮೂಲಕ ಮಾನವ ಸಂವೇದನೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಆಳ್ವಿಕರು ಮೂಲ ಸಮಸ್ಯೆಯನ್ನೇ ಬದಿಗೆ ತಳ್ಳುತ್ತಿರುವುದು ಸ್ಪಷ್ಟವಾಗಿದೆ. ಮಹಿಳೆಯರ ರಕ್ಷಣೆಗೆ ಕಾನೂನು, ಶಾಸನ ಮತ್ತು ಪುರುಷ ಸಮಾಜದ ಮನೋ ನಿಗ್ರಹವನ್ನು ನಂಬಿ ಕೂಡುವ ಕಾಲ ಮಿಂಚಿಹೋಗಿದೆ. ತಮ್ಮ ರಕ್ಷಣೆಗೆ ತಾವೇ ಸಜ್ಜಾಗಲು ಮಹಿಳೆಯರು ಸಿದ್ಧತೆ ನಡೆಸುವುದು ಅತ್ಯಗತ್ಯ. ನಿಮ್ಮೊಡನೆ ನಾವಿದ್ದೇವೆ ಎಂಬ ಸಂವೇದನಾಶೀಲ ಪುರುಷರ ಆಶ್ವಾಸನೆಯ ನಡುವೆಯೇ ಮಹಿಳೆಯರು ತಮಗೆ ಯಾವುದೇ ಆಸರೆ ಬೇಕಿಲ್ಲ ಎಂದು ನಿರೂಪಿಸುವ ಕಾಲ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರು ಎದುರಿಸುತ್ತಿರುವ ದ್ವಂದ್ವ ಮತ್ತು ಗೊಂದಲಗಳಿಗೆ ಪರಿಹಾರ ಕ್ರಾಂತಿಕಾರಿ ಮಹಿಳಾ ಸಂಘಟನೆಗಳ ಹೋರಾಟದಲ್ಲೇ ಅಡಗಿದೆ. ಮಹಿಳೆಯರು ಮತ್ತು ವಿಶೇಷವಾಗಿ ದಲಿತ-ಅಲ್ಪಸಂಖ್ಯಾತ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಮತ್ತು ಚಿತ್ರಹಿಂಸೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಸಂವೇದನಾಶೀಲ ಸಮಾಜ ಸ್ಪಂದಿಸದೆ ಹೋದರೆ ಭಾರತವನ್ನು ನಾಗರಿಕ ದೇಶ ಎನ್ನಲಾಗುವುದಿಲ್ಲ.







article sandharbikavagi chennagi bandide
ಎಂಥ ಬರಹ ಸರ್… ನಮನ ನಿಮಗೆ
ಮಹಿಳೆಯರು ಮತ್ತು ವಿಶೇಷವಾಗಿ ದಲಿತ-ಅಲ್ಪಸಂಖ್ಯಾತ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಮತ್ತು ಚಿತ್ರಹಿಂಸೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಸಂವೇದನಾಶೀಲ ಸಮಾಜ ಸ್ಪಂದಿಸದೆ ಹೋದರೆ ಭಾರತವನ್ನು ನಾಗರಿಕ ದೇಶ ಎನ್ನಲಾಗುವುದಿಲ್ಲ.”” ಎಷ್ಟು ಸತ್ಯ..