ಮಹಾಮನೆ ಅಂಕಣ – ಮುತ್ತು ರತ್ನಗಳ ಮಡಿಲಿಗೆ ಮೊಗೆಮೊಗೆದು ಸುರಿದ ಹಾಗೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

17

ನನ್ನ ಭಾವಿ ಮಾವನ ಮನೆಯಲ್ಲಿ ನನಗೆ ಆತಿಥ್ಯ ಮುಂದುವರಿಯಿತು.

ನನ್ನ ಮುಂದೆ ಕಾಫಿ ಕಫ್ ಹಾಗೂ ಚಕ್ಲಿ, ನಿಪ್ಪಟ್ಟು, ಕೋಡುಬಳೆ, ರವೆಉಂಡೆಯ ಪ್ಲೇಟ್ ಬಂದು ಕುಳಿತ್ತಿತು.

ಬಿಸಿನೀರಿನ ಕಾವಿಗೆ ಬೆದರಿ ಕುಳಿತಿದ್ದ ನಾನು ಈ ನಿಪ್ಪಟ್ಟಿನಲ್ಲಿ ಯಾವ ಭೂಚಕ್ರ ಇದೆಯೋ… ಈ ಕೋಡಬಳೆಯಲ್ಲಿ ಮತ್ಯಾವ ಸುರ್‌ಸುರ್‌ಬತ್ತಿ ಇದೆಯೋ…. ಈ ಚಕ್ಲಿಯಲ್ಲಿ ಯಾವ ಹಾವು ಪಟಾಕಿ ಇದೆಯೋ ಭಯಭೀತಿಯಿಂದ… ಈ ರವೆ ಉಂಡೆಯೊಳಗೆ ಆಟಂಬಾಬ್ ಇದೆಯೋ ದೇವ… ಈ ಕಾಫಿಯೊಳಗೆ ಇನ್ನೇನು ಅಡಗಿದೆಯೋ ಎಂದು ಲೆಕ್ಕಾಚಾರ ಹಾಕುತ್ತಾ ಭಯಭೀತಿಯಿಂದ ಅಲ್ಲಾ ಬರಿ ಬಿಸಿನೀರೇ ನನ್ನ ಜಂಗಾಬಲವನ್ನೆಲ್ಲಾ ಗುಡುಗಿಸಿರಬೇಕಾದರೆ ಇನ್ನೂ ಈ ಎಲ್ಲಾ ತಿನಿಸುಗಳು ಇನ್ನೇನು ಮಾಡುತ್ತವೋ ಶಿವನೆ ಎನ್ನುತ್ತಾ ಹಿಂದೂ ಮುಂದು ಎಣಿಸುತ್ತಾ ಸುಮ್ಮನೆ… ಆ ಲೋಟ… ಆ ತಟ್ಟೆಯನ್ನೇ ನೋಡುತ್ತಾ ಕುಳಿತಿದ್ದೆ.

'ತಕ್ಕಳ್ಳಿ... ಬಿಸಿ ಹಾರ‍್ಯೋತ್ತದೆ... ತಣ್ಣಗಾಗ್ಬಿಟ್ರೆ ಕಾಫಿ ಚೆಂದಾಗರ‍್ಲಿಕ್ಕಿಲ್ಲ ಕಣ... ತಕ್ಕಳಿ' ಎಂದರು ಯಜಮಾನತಿ ಲಿಂಗಮ್ಮನವರು...

‘ಭಾವನಿಗೆ… ಗಂಗನನ್ನು ಬಿಟ್ಟು ತಿನ್ನಕ್ಕ ಮನಸಾಗುತ್ತಿಲ್ವೇನೋ ಕಣ್ಣಮ್ಮ….’ ಎಂದು ಕಿಸಕ್ಕನೆ ನಕ್ಕು ನನ್ನ ತಮಾಷೆ ಮಾಡಿದಳು ರೇಣುಕಾ… ಹೂಂ ಇರಬೇಕೇನೋ ಗಂಗಕ್ಕ ನೆನಪಾಗಿರಬೇಕು... ಅದಕ್ಕೆ ಸುಮ್ಮನೆ ಕೂತವರೆ ಭಾವ ಎಂದು ಪ್ರೇಮಾಳೂ ನಗಲು ಪ್ರಾರಂಭಿಸಿದಳು.

ಏನ್ರಮ್ಮ… ಮನೆಗೆ ಬಂದೂರತ್ರ ನಿಮ್ಮ ನಗಸಾರ’ ಎಂದು ಗಡುಸಾದರು ಯಜಮಾನರು…

ಇರಲಿ ಬಿಡಿ’ ಎಂದೆ ನಾನು ಇನ್ನೂ ಹುಡುಗಾಟ ಇವಕ್ಕೆ... ಏನಂಗ್ ನಗೋದು ಸುಮ್ನಿರಿ... ಎಂದು ತಮ್ಮ ಹೆಣ್ಣುಮಕ್ಕಳನ್ನು ಗದರಿದರು... ಯಜಮಾನತಿ... ಈ ಎಲ್ಲಾ ವ್ಯಾಪಾರಗಳನ್ನು ಅಜ್ಜಿ ನಂಜಮ್ಮನವರು ತಮ್ಮ ಕಣ್ಣನ್ನು ಪಿಳಿಪಿಳಿ ಬಿಡುತ್ತಾ ನನ್ನನ್ನೇ ನೋಡುತ್ತಾ ಅವಲೋಕಿಸುತ್ತಿದ್ದರು.

ತಿಂಡಿ ತಟ್ಟೆಗೆ ಕೈ ಹಾಕಿ ನಿಪ್ಪಟ್ಟನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಮೆಲ್ಲಗೆ ಕುರುವ ತೊಡಗಿದೆ... ಭಾವಿ ಮಾವನ ಮನೆಯಲ್ಲಿ ಸಲುಗೆಯಿಂದ... ಬಿಡುಬೀಸಾಗಿ ತಿನ್ನುವುದನ್ನು ಎಂಜಾಯ್ ಮಾಡುತ್ತಾ ತಿನ್ನುವ ಹಾಗಿಲ್ಲವಲ್ಲ... ತುಂಬಾ ಗಾಂಭೀರ್ಯದಿAದ ಇರಬೇಕು ನೋಡಿ... ಅದಕ್ಕೆ ಮೆಲ್ಲಗೆ ಶಬ್ದ ಮಾಡದಂತೆ ತಿನ್ನತೊಡಗಿದೆ. ಚಕ್ಕಲಿಯ ಚೂರನ್ನು ಬಾಯಿಗಿಟ್ಟೆ... ಸದ್ದು ಮಾಡದಂತೆ ತಿನ್ನಲು ಆಗಲೇಇಲ್ಲ... ನನ್ನ ಘನ ಗಾಂಭೀರ್ಯವನ್ನು ಬದಿಗಿಟ್ಟು... ಆ ಮನೆಯ ಅಳಿಯ ಆಗಲಿರುವವನೂ ಎಂಬುದನ್ನು ಮರೆತು ಕಟಂ ಕಟಂ ಎಂದು ತಿನ್ನಲೇ ಬೇಕಾಯಿತು... ಒಮ್ಮೊಮ್ಮೆ ನನ್ನ ಬಲಪ್ರಯೋಗದ ಪ್ರದರ್ಶನವೂ ಆಗುತ್ತಿತ್ತು... ಹಾಗಾಗಿ ಮತ್ತೊಮ್ಮೆ ಚಕ್ಕಲಿ ಚೂರನ್ನು ಬಾಯಿಗೆ ಹಾಕಿಕೊಳ್ಳಲಿಲ್ಲ... ಕೋಡುಬಳೆ ಬಾಯಲ್ಲಿ ಕರಗಿತು. ರವೆ ಉಂಡೆಯ ಸವಿ ಚೆನ್ನಾಗಿತ್ತು... ಅದನ್ನು ಸವಿಸವಿದು ತಿಂದೆ... ಸ್ವಲ್ಪ ನೀರು ಬೇಕೆನಿಸಿತ್ತು. ಕುದಿದ ಬಿಸಿನೀರಿನ ನೆನಪಾಗಿ ಮತ್ತೆ ನೀರು ಕೇಳಲಿಲ್ಲ... ಕಾಫಿಯನ್ನೇ ಕುಡಿದರಾಯಿತು. ಎಂದು ಕಾಫಿಲೋಟಕ್ಕೆ ಕೈ ಹಾಕಿದೆ. ಅಷ್ಟರಲ್ಲಾಗಲೇ ಸ್ವಲ್ಪ ತಣ್ಣಗಾಗಿತ್ತು... ಕಾಫಿಯಲ್ಲಿ ಮಂಡ್ಯದ ಸಕ್ಕರೆ ಫ್ಯಾಕ್ಟರಿಯೇ ಇತ್ತು... ಆದರೆ ಏನೂ ತೋರ್ಪಡಿಸದೇ ಕುಡಿದೆ.

ಎಲ್ಲಾ ಚೆನ್ನಾಗಿತ್ತಾ ಭಾವ…’ ಎಂದು ಒಳಮನೆಯಿಂದ ಬಂದ ರೇಣು ಕೇಳಿದಳು…. ಹೂಂ ಕಣಮ್ಮ… ನೀ ಮಾಡಿದ್ದ ಎಂದೆ ನಾನು… ಚಕ್ಲಿಯನ್ನು ನಾನೇ ಮಾಡಿದ್ದು ಭಾವ ಕಾಫಿಯನ್ನು ಈಗ ಪ್ರೇಮ ಮಾಡಿದ್ದು… ಉಳಿದಿದ್ದೆಲ್ಲ ಅಮ್ಮ ಮಾಡಿದ್ದರು ಭಾವ… ಚೆನ್ನಾಗಿತ್ತ ಭಾವ…’’ ಎಂದು ಮತ್ತೊಮ್ಮೆ ಕೇಳಿದಳು ರೇಣುಕಾ… ತುಂಬಾ ಚೆನ್ನಾಗಿತ್ತಮ್ಮ… ಚಕ್ಲಿಯಂತೂ ಬಾಯಲ್ಲಿ ಕರಗಿ ಹೋಯಿತು ಕಣಮ್ಮ… ಕಾಫಿಯಂತೂ ಸೊಗಸಾಗಿತ್ತು ಎಂದು ಭೇಷ್‌ಗಿರಿ ಕೊಟ್ಟೆ.

ನನ್ನ ಮಾತು ಕೇಳಿದ ರೇಣುಕಾ ನಲಿದಳು… ನುಲಿದಳು…

ಕಟಂ ಕಟಂ ಚಕ್ಕುಲಿ
ಕುರುಂ ಕುರುಂ ನಿಪ್ಪಟ್ಟು
ಬಾಯಲಿ ಕರಗಿತು ಕೋಡುಬಳೆ
ಸವಿ ಸವಿಯಾಗಿತ್ತು ರವೆಯಾ ಉಂಡೆ
ಸಕ್ಕರೆ ಮೂಟೆಯೇ ಕರಗಿತ್ತು ಅಲ್ಲಿ ಕಾಫಿಯಲಿ
ಸದ್ದಿಲ್ಲದೆ ತಿಂದೆನು ಸಿಹಿ ಭಾವದಲಿ
ಪಿಟಿಪಿಟಿ ಎನ್ನದೆ ಸುಮ್ಮನೆ ಕುಡಿದೆನು ಸಿಹಿಕಡಲ ಕಾಫಿಯನು.

ನನ್ನ ಸ್ಥಿತಿ ಹಾಗಿತ್ತು… ಭಾವಿ ಅಳಿಯನಾಗುವವನು ಭಾವಿ ಮಾವನ ಮನೆಯಲ್ಲಿ ಹೀಗೆ ಇರಬೇಕು ಕಣ್ರೀ… ಬಹಳ ಗಂಭೀರವಾಗಿ… ಘನತೆಗೆ ಗೌರವಕ್ಕೆ ಚ್ಯುತಿ ಬರದಂತೆ… ಮುಖದ ಸ್ನಾಯುಗಳು ಅಲುಗಾಡದಂತೆ… ಅನಾವಶ್ಯಕವಾಗಿ ತುಟಿ ಬಿರಿಯದಂತೆ… ಆಮೇಲೆ ಕೊಟ್ಟಿದ್ದನ್ನು ಸದ್ದು ಮಾಡದೆ ಅದು ಬೇಡ – ಇದು ಬೇಡ ಎನ್ನದೆ ತಿನ್ನಬೇಕು ಹಾಗೂ ಕುಡಿಯಬೇಕು ಕಣ್ರೀ… ಆ ಮೆಳ್ಳಗಣ್ಣಿಯ ಮನೆಯಲ್ಲಿ ಅಂದು ನನ್ನ ಪರಿಸ್ಥಿತಿ ಹಾಗೆಯೇ ಇತ್ತು… ಏನ್ಮಾಡ್ಲಿ? ಇಬ್ಬರು ನಾದಿನಿಯರ ಕೈಗೆ ಸಿಕ್ಕಿಹಾಕಿಕೊಂಡಿದ್ದೆ… ಅದಕ್ಕೆ ಮೊದಲು ಆ ಶ್ವಾನ ಮಹಾರಾಜನ ಕೈಗೆ ಸಿಕ್ಕಿಹಾಕಿಕೊಂಡಿದ್ದಾಗಿತ್ತು… ಈಗ ನನ್ನ ಭಾವಿ ಮಾವ ಭಾವಿ ಅತ್ತೆ, ಆಮೇಲೆ ತುಂಬಾ ಹಿರಿಯರಾದ ಮೆಳ್ಳಗಣ್ಣಿಯ ಅಜ್ಜಿ… ಇವರ ಮುಂದೆಲ್ಲ ತುಂಬಾ ಘನವಂತನAತೆ ಪೋಸ್ ಕೊಡ್ಲೆಬೇಕಲ್ಲಾ… ಇನ್ನೇನು ಮಾಡ್ಲಿ… ಹಾಗೇ ನಡೆದುಕೊಂಡೆ…

ಅವರು ಕೊಟ್ಟ ತಿಂಡಿ, ಕಾಫಿ ಕುಡಿದು. ಲಗ್ನ ಕಟ್ಟಿಸಬೇಕಾದ ದಿನಾಂಕ ಅದರ ವಿವರಗಳು ಆ ದಿನಕ್ಕೆ ಬರುವ ಬಂಧು-ಬಳಗ ಇತ್ಯಾದಿಗಳನ್ನೆಲ್ಲ ಯಜಮಾನರು… ಯಜಮಾನತಿಯ ಬಳಿ ಮಾತಾಡಿ ಅಜ್ಜಿ ನಂಜಮ್ಮನವರ ಕಾಲಿಗೆ ನಮಸ್ಕರಿಸಿ ನನ್ನ ಮನೆಗೆ ಹೊರಡುತ್ತೇನೆಂದು ಎಂದು ತಿಳಿಸಿ ಹೊರಡಲು ಎದ್ದೆ…

ಅಯ್ಯೋ... ಅಯ್ಯೋ... ಎಲ್ಲಾದರೂ ಉಂಟೇ. ಊಟದ ಟೇಮಲ್ಲಿ ಊಟ ಮಾಡ್ದೆ ಅಂಗೇ ಹೋದೀರಾ... ನಿಮ್ಮ ಅಂಗೇ ಕಳ್ಸಕ್ಕಾದತ್ತಾ... ಕೂತ್ಕೋಳ್ಳಿ... ಕೂತ್ಕೋಳ್ಳಿ... ಬಿಸಿಬಿಸಿ ಮುದ್ದೇನೂ ಮಳೇಹುಳ್ಳಿ ಸಾರೂ ಊಟ ಮಾಡ್ಕೊಂಡು ಹೋಗಿವ್‌ರಂತೆ ಕನ’ ಎಂದು ನನ್ನ ಭಾವಿ ಅತ್ತೆಯವರು ತಡೆದರು... ಭಾವಿ ಮಾವ ಮತ್ತು ನಾದಿನಿಯರು ದನಿಗೂಡಿಸಿದರು.

ಬಿಸಿಬಿಸಿ ಮುದ್ದೆ ಮಳೇಹುಳ್ಳಿ ಸಾರು ಆಹಾ... ಕಿವಿ ನೆಟ್ಟಗಾದವು... ಬಾಯಲ್ಲಿ ನೀರಾಡಿತು. ಸುಮ್ನೆ ಕುಂತು ಉಂಡ್ಬಿಟ್ಟು ಎದ್ಹೋಗು ಎಂದು ಮನ ಹೇಳಿತು. ಊಟ ಮಾಡೇ ಹೋಗೋಣವೆಂದು ನಿರ್ಧರಿಸಿ ಕೂತೇ... ಮನೆಗ್ಹೋಗಿ ಚಿತ್ರಾನ್ನ ಮಾಡಿ ತಿನ್ನೋದು ಇನ್ನೆಷ್ಟೊತ್ತಿಗೋ... ಏನೋ ದಿನಾ ಇದ್ದೇ ಇದೇ ಚಿತ್ರಾನ್ನ ತಿನ್ನೋದು ಅಂದುಕ್ಕೊಂಡು ಮುದ್ದೆಯ ಆಸೆಗೆ ಅಲ್ಲೇ ಕುಂತ್ಬಿಟ್ಟೇ ಕಣ್ರೀ...

ನನಗೆ ಮುದ್ದೆ ಅಂದ್ರೇ ಪಂಚಪ್ರಾಣ... ಅದರಲ್ಲೂ ಬಸ್ಸಾರು... ಸೊಪ್ಸಾರು... ಅವರೇಕಾಳು ಉಪ್ಸಾರು... ಮೊಸೊಪ್ಪು... ಮಳೇಹುಳ್ಳಿ ಸಾರು... ಇದರ ಜೊತೆಗೆ ಬಿಸಿಬಿಸಿ ಮುದ್ದೆ ಆಹಾ... ಆಹಾ... ಮೇಲೆ ಒಂದ್ಸೊಲ್ಪ ತುಪ್ಪ... ಅದರ ರುಚಿಯೇ... ಹೋ... ಹೋ... ಅದರ ಗಮಲೆ... ಅರೆರೆರೇ ಅದರ ಸವಿಯೇ... ಅದನ್ನು ಉಂಡವರಿಗೇ ಗೊತ್ತು...ಹೀಟ್ಮೇಲ್‌ ಅವರೇಕಾಳ್…’ ಊಟವನ್ನು ಆಸ್ವಾದಿಸಬೇಕು ಕಣ್ರೀ…

ಪ್ರಿಯ ಓದುಗರೆ… ನಿಮ್ಮ ಬಾಯಲ್ಲಿ ನೀರ್ ರ‍್ತಾಇದೆಯಾ…
ನಾನು ಕೂತೆ… ಇಲ್ಲೇ ಊಟ ಮಾಡಿ ಹೋಗುವುದು ಎಂದು…
ಅಲ್ಲೇ ಝಂಡಾ ಊರಿದೆ.

ಹೋ ಹೋ... ಬನ್ನಿ ಬನ್ನಿ’ ಎಂದು ಯಜಮಾನರು ಯಾರನ್ನೋ ಕರೆದ ಹಾಗಾಯಿತು.

ನಮ್ಮ ಗಂಗನ್ನು ಮದುವೆ ಆಗೋ ಹುಡ್ಗ ಬಂದಿದಾರೆ ಅಂತ ಯಾರೋ ಅಂದ್ರು ಅದಕ್ಕೆ ನೋಡ್ಕೊಂಡು… ಮಾತಾಡಸ್ಕೊಂಡು ಹೋಗೋನಾ ಅಂತ ಬಂದೆ ಸಿದ್ಧಲಿಂಗಯ್ಯ…’ ಎನ್ನುತ್ತಾ ಹಿರಿಯರೊಬ್ಬರು ಮನೆ ಒಳಗೆ ಬಂದರು. ಆ ಹಿರಿಯರು ನನ್ನೊಡನೆ ಮಾತಾಡಲು ಪ್ರಾರಂಭಿಸಲು ತೊಡಗಬೇಕು ಅಷ್ಟೊತ್ತಿಗೆ ಲಿಂಗಮ್ಮ... ಮನೇಲಿ ಇದ್ದಿಯಾ... ಮನೆಗೆ ಅಳಿಯ ಬತ್ತಾನೆ ಅಂತ ಸಿರಿ ನಿನಗೆ...’ ಎನ್ನುತ್ತಾ ಮಹಿಳೆಯೊಬ್ಬರು ಬಂದರು. ಅವರ ಹಿಂದೆಯೇ ಮತ್ತೊಬ್ಬ ಪುರುಷ... ಮತ್ತೊಂದು ಮಹಿಳೆ... ಬಂದರು. ತುಸು ನಿಮಿಷ ಕಳೆದು ಮತ್ತೊಬ್ಬರು ಹಿರಿಯ ಮಹಿಳೆ ಮನೆಗೆ ಆಗಮಿಸಿದರು.

ಅವರೆಲ್ಲಾ ಹೇಳಿದ್ದು ಒಂದೇ...

ಗಂಗನ್ನು ಮದುವೆ ಆಗುವ ಹುಡುಗ ಬಂದಿದರಂತೆ... ನೋಡ್ಕೊಂಡು ಹೋಗೋಣ ಅಂತ ಬಂದೇ ಅಂತಾನೇ...

ನನಗೊಂದು ಅನುಮಾನ ಕಾಡೋಕ್ಕೆ ಪ್ರಾರಂಭವಾಯಿತು...

ಅಲ್ಲಾ... ನನ್ನೋಡೋದು ಎಂಥದಿದ್ದೆ ಅಂಥ... ನಾನೇನು ಷೋಕೇಸ್ ಗೊಂಬೆನಾ... ಅಥವಾಜೂ ಗಾರ್ಡನ್’ಗೆ ಹೊಸದಾಗಿ ಬಂದಿರುವ ಪ್ರಾಣೀನಾ ಅಥವಾ ಅನ್ಯಲೋಕದಿಂದ ಭೂಗ್ರಹಕ್ಕೆ ಇಳಿದು ಬಂದು ಬೆಂಗಳೂರಿನ ಕುರುಬರ ಹಳ್ಳಿಯ ಆ ಮೆಳ್ಳಗಣ್ಣಿಯ ಮನೆಯಲ್ಲಿ ಕುಳಿತಿರುವ ‘ಎಲಿಯನ್ನಾ’… ಹೀಗೆ ಒಬ್ಬರಾದ ಮೇಲೊಬ್ಬರು ಬಂದು ನನ್ನ ನೋಡಲು… ಅಂತ ನನಗೆ ಅನ್ನಿಸಿದರೋ, ವಾಸ್ತವತೆ ಬೇರೆ ರೀತಿಯೇ ಇರುತ್ತದೆ…

ನಮ್ಮಳ್ಳಿ ಕಡೆ ಹೀಗೆಯೇ ಊರಿಗೆ ಯಾರಾದರೂ ಹೊಸಬರು ಬಂದರೆ… ಅಥವಾ ಹೆಣ್ಣು ನೋಡಕ್ಕೆ ಅಂತ ಗಂಡು ಬಂದರೇ… ಅಥವಾ ಹೊಸದಾಗಿ ಮದುವೆಯಾದ ಹೆಣ್ಣು ಗಂಡು ರಸ್ತೆಯಲ್ಲಿ ಹೋಗುತ್ತಿದ್ದರೆ ಅವರನ್ನು ನೋಡಲಿಕ್ಕೆ ಬಾಗಿಲಲ್ಲಿ ಮರೆಯಾಗಿ… ಕಿಟಕಿಯಲ್ಲಿ ಇಣುಕಿ… ನೋಡುತ್ತಾರೆ. ಕೆಲವರು ಬೆರಗಾಗಿಯೂ… ಕುತೂಹಲದಿಂದಲೂ ಊರಿಗೆ ಹೊಸದಾಗಿ ಬಂದ ವ್ಯಕ್ತಿಗಳನ್ನೇ ನೋಡುತ್ತಾ ನಿಂತುಬಿಡುತ್ತಾರೆ. ಇದು ಹಳ್ಳಿಗಳಲ್ಲಿ ಸಹಜ ಅಥವಾ ಬೇರೆ ಊರಿನಿಂದ ಯಾರೊದೋ ಮನೆಗೆ ಯಾರಾದರೂ ಹೊಸಬರು ಬಂದರೆ ಏನಾದರೂ ನೆಪ ತೆಗೆದುಕೊಂಡು. ಬಂದವರನ್ನು ನೋಡಲು… ಮಾತಾಡಿಸಲು ಜನ ಬರುತ್ತಾರೆ… ಹಳ್ಳಿಗರ ಕುತೂಹಲವೇ ಹಾಗೇ… ಇದರೊಟ್ಟಿಗೇ ಯಾರಾದರೂ ಮನೆಗಳಲ್ಲಿ ಶುಭ ಕಾರ್ಯಗಳು ಜರುಗಿದರಂತೂ ಹಳ್ಳಿಯ ಅಷ್ಟೋ ಜನ ಸಂಭ್ರಮಿಸುತ್ತಾರೆ. ಆ ಶುಭ ಕಾರ್ಯದಲ್ಲಿ ಸಂತಸದಿಂದ ಪಾಲುದಾರರಾಗುತ್ತಾರೆ… ಭಾಗವಹಿಸುತ್ತಾರೆ… ಹೊಸದಾಗಿ ಬಂದವರನ್ನು ತಮ್ಮವರೇ ಎಂದು ಭಾವಿಸಿ ಭಾವಣಿಸುತ್ತಾರೆ. ಬಹುಬೇಗ ತಮ್ಮವರನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಕುರುಬರ ಹಳ್ಳಿಯು ಹಳ್ಳಿಗಳೇ ಲೀನವಾಗಿರುವ ಬೆಂಗಳೂರು ಎಂಬ ನಗರದಲ್ಲಿ ಲೀನವಾಗಿರುವ ಹಳ್ಳಿಯಲ್ಲವೇ ಆಗಾಗಿ ಇಲ್ಲಿಯ ಜನರ ನಡಾವಳಿಗಳು ನಮ್ಮ ಹಳ್ಳಿಯಂತೆಯೇ… ಆಗಾಗಿ ನನಗೆ ಕುರುಬರ ಹಳ್ಳಿಯ ಮನೆಯಲ್ಲೂ ಅದೇ ಅನುಭವವಾಯಿತು…

ಪ್ರೀತಿ ಸ್ನೇಹಗಳೇ ಹಾಗೆ
ಮುತ್ತು ರತ್ನಗಳ ಮಡಿಲಿಗೆ
ಮೊಗೆಮೊಗೆದು ಸುರಿದ ಹಾಗೆ
ಶಿರದ ಮೇಲೆ ಪನ್ನೀರ ಸಿಂಚಿಸಿದ ಹಾಗೆ
ಹೊಂಗೆ ಚಿಗುರಿನ ಹಾಗೆ
ಮಲ್ಲಿಗೆಯ ಮಲರಿನ ಹಾಗೆ
ಗಂಧದ ಸುಗಂಧದ ಹಾಗೆ
ನಮ್ಮೂರ ತೇರಿಗೆ
ಶೃಂಗಾರ ಮಾಡಿದ ಹಾಗೆ

ಅಲ್ಲೊಂದು ಬಾಂಧವ್ಯ ಇರುತ್ತೆ… ಅಲ್ಲೊಂದು ಭಾವಣಿಕೆ ಇರುತ್ತೆ… ಅಲ್ಲೊಂದು ಸಂಭ್ರಮ ಇರುತ್ತೆ… ಅಲ್ಲೊಂದು ಮಮಕಾರ ಇರುತ್ತೆ… ಇದು ಬೇರೆಯದ್ದಲ್ಲ… ಅದು ನನ್ನದು ಎಂಬ ಭಾವ ಇರುತ್ತೆ… ಇವೆಲ್ಲವೂ ಸೇರಿ… ಎಲ್ಲವೂ ಕೂಡಿದ… ಹೊಸದೊಂದ್ದನ್ನು ಕಾಣುವ ಮೊದಲು ಇರುವ ಸಹಜ ಕುತೂಹಲವಿರುತ್ತದೆ.

ಆ ಮೆಳ್ಳಗಣ್ಣಿಯ ಮನೆಯಲ್ಲಿ ನನಗೂ ಅದೇ ಅನುಭವವಾಯಿತು.

ಆದರೆ

ಆ ಸರೋಜಮ್ಮ ಎನ್ನುವವರು… ನನಗೊಂದು ಪ್ರಶ್ನೆ ಹಾಕಿದಳು.

‍ಲೇಖಕರು Admin

September 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: