ಮಹಾಮನೆ ಅಂಕಣ – ಅಪ್ಪಾಜಿಯ ‘ಸಾಕ್ಷಿ’ ಕೇಳಿ ನಮಗೆಲ್ಲ ನಗುವೋ ನಗು… ಅಮ್ಮನೂ ನಕ್ಕಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

24

ಹೆಣ್ಣಿಗೆ ಒಡವೆ ಮಾಡಿಸಬೇಕೆಲ್ಲ… ಮತ್ತೆ ಚಿಕ್ಕಪೇಟೆಗೆ ಹೋಗಬೇಕಾಯಿತು. ಅಮ್ಮ ಅವರ ಅಕ್ಕ ಅಂದರೆ ನನ್ನ ದೊಡ್ಡಮ್ಮ ವೀರಾಂಬ ಹಾಗೂ ಅವರ ಪತಿ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾಗಿದ್ದ ಬಿ.ಎಸ್. ಮುದ್ದಪ್ಪನವರೊಡಗೂಡಿ ಚಿಕ್ಕಪೇಟೆಯ ಅವಿನ್ಯೂ ರಸ್ತೆಯಲ್ಲಿರುವ ಪವನ ಜ್ಯೂಯಲರ್ಸ್ ಬರುವುದೆಂತಲೂ ನಾನೂ ನನ್ನ ಕೆಲಸ ಮುಗಿಸಿ ಅವಿನ್ಯೂ ರಸ್ತೆಯ ಅದೇ ಅಂಗಡಿಗೆ ನಿಗದಿಯಾದ ವೇಳೆಗೆ ಬರುವುದೆಂತಲೂ ಮಾತಾಗಿತ್ತೂ ಅದರಂತೆ ಅವರೆಲ್ಲ ಆ ಅಂಗಡಿ ತಲುಪಿ ಆಗಿತ್ತು. ನಾನು ಅವಿನ್ಯೂ ರಸ್ತೆಯ ಒಳಹೊಕ್ಕೆ ರಾಜಾಮಾರ್ಕೆಟ್… ಅವಿನ್ಯೂರಸ್ತೆ ಸರ್ಕಲ್ ಆ ನಂತರ ಆ ರಸ್ತೆಯ ಇಕ್ಕೆಲಗಳಲ್ಲಿ ಚಿನ್ನ, ಬೆಳ್ಳಿ ಅಂಗಡಿಗಳು ಸಾಲು ಸಾಲಾಗಿವೆ.

ಅವಿನ್ಯೂ ರಸ್ತೆಯಲ್ಲಿರುವ ಕಾಮತ್ ಹೋಟೆಲ್ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯದವರೆಗೂ ಪುಸ್ತಕದಂಗಡಿಗಳು ಹಾಗೂ ಚಿನ್ನದಂಗಡಿಗಳದೇ ಸಾಮ್ರಾಜ್ಯ ಪುಟ್ಟ ಪುಟ್ಟ ಅಂಗಡಿಗಳಿಂದ ಹಿಡಿದು ಮಳಿಗೆ ಮಾದರಿಯ ಅಂಗಡಿಯವರೆಗೆ ಚಿನ್ನದ ವಹಿವಾಟು ನಡೆಯುತ್ತದೆ. ಅದೇ ಚಿಕ್ಕಪೇಟೆಯ ಸಣ್ಣ ಸಣ್ಣ ಒಳಗಲ್ಲಿಗಳಲ್ಲಿ ಪುಟ್ಟ ಪುಟ್ಟ ಮನೆಗಳಲ್ಲಿ ಚಿನಿವಾರರು ಚಿನ್ನಗೆಲಸ ಮಾಡುತ್ತಾ ತಲೆ ತಲಾಂತರದಿಂದ ಕುಲುಮೆಗಳಲ್ಲಿ ತಮ್ಮ ಬದುಕನ್ನು ಸವೆಸಿದ್ದಾರೆ. ಮೊದಲೆಲ್ಲ ನಮ್ಮ ಕಡೆ ಈ ಕೆಲಸ ಮಾಡುತ್ತಿದ್ದವರು ಆಚರ‍್ರುಗಳು… ಅಂದರೆ ವಿಶ್ವಕರ್ಮರು… ಈಗಲೂ ಹಳ್ಳಿಗಳಲ್ಲಿ ಅವರೇ ಚಿನ್ನಗೆಲಸಗಳನ್ನು ಮಾಡುವುದು. ಆದರೆ ಈಗ ಬೆಂಗಳೂರಿನ ಕುಲುಮೆಗಳಲ್ಲಿ ಕೆಲಸ ಮಾಡುವರು ಬಹುತೇಕರು ಗುಜರಾತಿಗಳು… ಉತ್ತರ ಪ್ರದೇಶದವರು. ಅಲ್ಲೋ ಇಲ್ಲೋ ಒಬ್ರೊ… ಇಬ್ರ‍್ರೊ ಆಚಾರ್‌ಗಳು ಇರಬಹುದೇನೋ… ಇದ್ದರೂ ಅಪರೂಪ ಕಣ್ರೀ.

ಮೊದಲಿಗೆ ಚಿನ್ನಬೆಳ್ಳಿಯ ವ್ಯಾಪಾರವೆಲ್ಲ ಶೆಟ್ಟರ ಅಂದರೆ ಕೋಮಟಗರ ಕೈಯಲ್ಲಿತ್ತು. ನಮ್ಮ ಕಡೆ ಊರಿಗೆ ಎರಡು ಮೂರು ಅಥವಾ ಐದಾರು ಕುಳ ಶೆಟ್ಟರು ಇರುತ್ತಿದ್ದರು… ವ್ಯಾಪಾರವೆಲ್ಲವನ್ನು ಅವರೇ ಮಾಡುತ್ತಿದ್ದರು. ಲಿಂಗಾಯತರಲ್ಲೂ ಕೆಲವರು ಈ ವ್ಯಾಪಾರ ಮಾಡುತ್ತಿದ್ದರು. ಆದರೆ ಅದು ಅವರಿಗೆ ಮುಖ್ಯ ಕಸುಬಾಗಿರುತ್ತಿರಲಿಲ್ಲ. ಕೃಷಿ… ಕಿರಾಣಿ…. ಜವಳಿ… ಲೇವಾದೇವಿ ಜೊತೆಗೆ ಚಿನ್ನ, ಬೆಳ್ಳಿ ವ್ಯಾಪಾರವು ಇರುತ್ತಿತ್ತು… ಆದರೆ ಕೋಮಟಿಗರು ಚಿನ್ನ ಬೆಳ್ಳಿ ವ್ಯಾಪಾರವನ್ನೇ ಮುಖ್ಯ ಕಸುಬಾಗಿ ಮಾಡುತ್ತಿದ್ದರು. ಮೊದಲಿಗೆ ಬೆಂಗಳೂರಿನ ಬಹುತೇಕ ವ್ಯಾಪಾರವೆಲ್ಲ ವಿ.ವಿ. ಪುರಂನಲ್ಲಿ ಹರಡಿಕೊಂಡಿದ್ದ ಶೆಟ್ಟರುಗಳ ಕೈಯಲ್ಲೇ ಇತ್ತು. ಅಥವಾ ತಮಿಳುನಾಡು ಕಡೆಯಿಂದ ಬಂದ ಚೆಟ್ಟಿಯಾರ್‌ಗಳು ಹಾಗೂ ಆಂಧ್ರದ ಕಡೆಯಿಂದ ಬಂದ ಕೊಮಟಿಗಳ ಕೈಯಲ್ಲಿತ್ತು. ಆದರೆ ಈಗ ಬೆಂಗಳೂರಿನ ವ್ಯಾಪಾರ ವಹಿವಾಟು ಎಲ್ಲವೂ ಮಾರವಾಡಿಗಳ ಕೈ ಸೇರಿದೆ.

ನಾನು ಹಿಂದಿನ ಮಾಲಿಕೆಯಲ್ಲಿ ಹೇಳಿದಂತೆ ಇಡೀ ಚಿಕ್ಕಪೇಟೆ ರಾಜಸ್ಥಾನಿಗಳು, ಗುಜರಾತಿಗಳು ಹೀಗೆ ಉತ್ತರ ಭಾರತೀಯರ ಕೈವಶವಾಗಿದೆ. ಅಲ್ಲಿ ತಮ್ಮ ಸ್ವತಃ ಮನೆಗಳಲ್ಲಿ ವಾಸಿಸುತ್ತಿದ್ದ ಸ್ಥಳೀಯರ ಮನೆಗಳನ್ನು ಈ ಉತ್ತರ ಭಾರತೀಯರು ಕೊಂಡು ಅಲ್ಲೇ ತಮ್ಮ ವಾಸಸ್ಥಾನಗಳನ್ನು… ಮಳಿಗೆಗಳನ್ನು… ಜಿನಮಂದಿರಗಳನ್ನು ಸಮುದಾಯ ಭವನಗಳನ್ನು ಮಾಡಿಕೊಂಡು ಆರಾಮ ಜೀವನ ನಡೆಸಿದ್ದಾರೆ. ಆದರೆ ಸ್ಥಳೀಯರು ತಮ್ಮದೆಲ್ಲವನ್ನು ಇವರಿಗೆ ಮಾರಿಕೊಂಡು ಬಂದ ಅಷ್ಟೋ ಇಷ್ಟೋ ಹಣವನ್ನು ಅಣ್ಣ ತಮ್ಮಂದಿರು ಹಂಚಿಕೊಂಡು ಬೆಂಗಳೂರಿನ ಹೊಸ ಬಡಾವಣೆಗಳಿಗೆ ವಲಸೆ ಹೋಗಿದ್ದಾರೆ… ಬುದ್ಧಿವಂತರು ಆಗೋ ಹೀಗೋ ಬದುಕು ಸಾಗಿಸಿದ್ದಾರೆ. ಹಲವರಂತೂ ಬಂದ ಹಣವನ್ನು ಪೋಲು ಮಾಡಿ ಬೆಂಗಳೂರಿನ ಯಾವುದೋ ರೆವಿನ್ಯೂ ಬಡಾವಣೆಗಳು ಕೂಳಿ ಗೂಡಿನತ್ತಾ ಸೀಟ್ ಮನೆಗಳಲ್ಲಿ ಉಸಿರು ಬಿಗಿಹಿಡಿದು ಜೀವನ ತಳ್ಳುತ್ತಾ ಇದೇ ಮಾರವಾಡಿಗಳ… ಗುಜರಾತಿಗಳ ಅಂಗಡಿಗಳಲ್ಲಿ… ಅವರು ಕೊಡುವ ಸಂಬಳಕ್ಕೆ ಕಾಯುತ್ತ ತಮ್ಮದೇ ನೆಲಗಳಲ್ಲಿ ನೆಲೆ ಕಳೆದುಕೊಂಡು ಜೀತಾ ಮಾಡುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿದ್ದ ಕೃಷಿಯನ್ನು ನಂಬಿಕೊಂಡಿದ್ದ ನಮ್ಮ ರೈತರ ಸ್ಥಿತಿಯೂ ಇದೇ ಆಗಿದೆ… ತಮ್ಮ ಹೊಲ-ಗದ್ದೆಗಳನ್ನು ಮಾರಿಕೊಂಡು ಕೊಂಡುಕೊಂಡವರ ಬಳಿಯೇ ದಿನವಿಡೀ ದುಡಿದು ದುಡಿದು ಪಗಾರಕ್ಕೆ ಕೈಯೊಡ್ಡುವ ಸ್ಥಿತಿ ಬಂದಿದೆ ಕಣ್ರೀ… ನನಗಂತೂ ಮನಸ್ಸು ಕಿನ್ನವಾಗುತ್ತೆ…. ನೋವಾಗುತ್ತೆ…

ನಮ್ಮೂರು ದೇವಲಾಪುರದಂತಾ ಗ್ರಾಮೀಣ ಪ್ರದೇಶಗಳಲ್ಲೂ ಇವತ್ತು ಮಾರ್ವಾಡಿಗಳು ಎಲ್ಲ ರೀತಿಯ ಅಂಗಡಿಗಳನ್ನು ತೆರೆದಿದ್ದಾರೆ. ಮೊದಮೊದಲು ಅವರು ಗಿರಿವಿ ಅಂಗಡಿಗಳ ಮೂಲಕ ಪ್ರವೇಶ ಮಾಡಿದವರು. ಈಗೀಗ ಎಲ್ಲ ವ್ಯಾಪಾರ ವ್ಯವಹಾರಗಳಲ್ಲೂ ಆವರಿಸಿಕೊಂಡಿದ್ದಾರೆ. ನಾನು ಈ ಬೆಳವಣಿಗೆಯನ್ನು ಸರಾಸಗಟಾಗಿ ವಿರೋಧಿಸುವುದಿಲ್ಲ. ಭಾರತೀಯನಾದವನು ಭಾರತದ ಯಾವುದೇ ಪ್ರದೇಶದಲ್ಲಿದ್ದರೂ… ಯಾವ ಯಾವ ಮೂಲೆಯಲ್ಲಾದರೂ ತನ್ನ ಬದುಕನ್ನು ಕಂಡುಕೊಳ್ಳಬಹುದು ರೂಪಿಸಿಕೊಳ್ಳಬಹುದು… ಅದಕ್ಕೆ ನಮ್ಮ ಸಂವಿಧಾನದಲ್ಲಿ… ನಾವೆಲ್ಲ ಒಪ್ಪಿಕೊಂಡಿರುವ ಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಗೆಯೂ ಇದೆ… ಆದರೆ ಮುಂದೊಂದು ದಿನ ಇಲ್ಲಿಯ ಸ್ಥಳೀಯರ ಬದುಕಿನ ಪ್ರಶ್ನೆ ಇಲ್ಲಿದೆ. ಭಾಷೆಯ… ಸಂಸ್ಕೃತಿಯ ಅಸ್ಮಿತೆಯ ಪ್ರಶ್ನೆ ಇಲ್ಲಿದೆ. ಭಾಷೆ… ಸಂಸ್ಕೃತಿಗಳ ಅಸ್ಮಿತೆಗಳು ಉಳಿಯಬೇಕು.

ಮುಂದಿನ ಪೀಳಿಗೆಗೆ ಅದು ಮುಂದುವರಿಯಬೇಕೆಂದರೆ ಬದುಕಿನ ಬಹುಮುಖ್ಯ ಅಂಗ ಜನಜೀವನದಲ್ಲಿ ಹಾಸುಹೊಕ್ಕಿರಬೇಕು. ಎಲ್ಲಾ ರಂಗಗಲ್ಲಿಯೂ ಅದರ ಹೆಜ್ಜೆಗಳು ಮೂಡುತ್ತಿರಬೇಕು. ಅದು ಹುಬ್ಬುತ್ತಿರಬೇಕು. ಇಲ್ಲಿಗೆ ಅಥವಾ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬದುಕು ಕಂಡುಕೊಳ್ಳಲು ಹೋದವರು ಅಲ್ಲಿಯ ಹಾಗೂ ಯಾವುದೇ ಸ್ಥಳೀಯ ಅಸ್ಮಿತೆಯನ್ನು ಒಪ್ಪಿಕೊಂಡು ಬದುಕಲು ಬಂದವರು ಇಲ್ಲಿಯ ಯಾವುದೇ ಸ್ಥಳೀಯ ಅಸ್ಮಿತೆಯನ್ನು ಒಪ್ಪಿಕೊಂಡು ಅದನ್ನು ತಮ್ಮದೂ ಆಗಿಸಿಕೊಂಡು ಅದರಲ್ಲಿ ಬೆರತು ಹೋಗಬೇಕು… ಆಗ ಆ ಸ್ಥಳೀಯ ಅಸ್ಮಿತೆ ಉಳಿಯುತ್ತದೆ… ಅಲ್ಲಿಯ ಸ್ಥಳೀಯ ಉದ್ಯೋಗಿಗಳಿಗೆ ಪೆಟ್ಟ ಬೀಳಲ್ಲ… ಜೀವನದ ಎಲ್ಲಾ ಕ್ಷೇತ್ರಗಳಿಗೂ ಹಾನಿಯಾಗುವುದಿಲ್ಲ.

ನೋಡಿ ಮೊದಮೊದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗಿರಿವಿ ಅಂಗಡಿಗಳನ್ನು ಪ್ರಾರಂಭಿಸಿದ ಮಾರ್ವಾಡಿಗಳು ಈಗ ಸ್ಥಳೀಯ ವ್ಯಾಪಾರ ವಹಿವಾಟುಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಇಲ್ಲಿಯ ಕುಲಕಸುಬು ಮಾಡಿಕೊಂಡಿದ್ದ ಕುಶಲ ಕರ್ಮಿಗಳಾದ ಚನಿವಾರರು ಮಾಯವಾಗಿದ್ದಾರೆ. ಅವರ ಪರಂಪರಾನುಗತ ಕೆಲಸಗಳನ್ನು ಕಳೆದುಕೊಂಡಿದ್ದಾರೆ ಅಲ್ವೇ ಮಿತ್ರರೇ… ವಾತಾವರಣ ಇದೆಯಲ್ಲವೇ… ನಮ್ಮೂರಿನಲ್ಲೇ ಇದ್ದ ಬಸವಾಚಾರಿ, ಸಿದ್ಧಚಾರಿ, ಸೀತಾಚಾರಿ, ಚಿನ್ನಾಚಾರಿ ಇವರೆಲ್ಲ ಇಂದು ಮಾರ್ವಾಡಿಗಳ ಮುಂದೆ ನಿಲ್ಲಲಾಗುತ್ತಿಲ್ಲ. ಇವರೆಲ್ಲ ತಮ್ಮ ಕಸುಬುಗಳನ್ನು ಕಳೆದುಕೊಂಡಿದ್ದಾರೆ. ಅಲ್ಲೇ… ಮಿತ್ರರೇ ಇದು ನನ್ನೂರಿನದೊಂದೇ ಪ್ರಶ್ನೆಯಲ್ಲ ನಿಮ್ಮ ನಿಮ್ಮ ಊರುಗಳಲ್ಲೂ ಇದೇ ವಾತಾವರಣ ಇದೆಯಲ್ಲವೆ ಹೀಗಾದಾಗ ಇಲ್ಲಿಯ ಭಾಷೆ ಹಾಗೂ ಸಂಸ್ಕೃತಿಯ ಅಸ್ಮಿತೆಗೆ ಕೊಡಲಿಪೆಟ್ಟು… ಇದು ನನ್ನ ಅಳಲು… ಇದು ನಿಮ್ಮ ಅಳಲೂ ಸಹ ಎಂದು ನಾನು ಭಾವಿಸಿದ್ದೇನೆ…

‘ಬಸವಚಾರಿ’ ಅಂದಾಗ ನೆನಪಾಯಿತು ಒಂದು ಪ್ರಸಂಗ. ಅದನ್ನು ತಮಗ್ಹೇಳಿ ನಾನು ಮುಂದೆ ಸಾಗುತ್ತೇನೆ.

ಬಸವಚಾರರ ಮನೆ ನಮ್ಮೂರ ಗ್ರಾಮದೇವತೆ ಪಟ್ಟಲದಮ್ಮನ ಗುಡಿಗೆ ಹೋಗುವ ರಸ್ತೆಯಲ್ಲಿತ್ತು. ಆ ರಸ್ತೆಯು ಮುಂದುವರೆದು ತೂಬಿನಕೆರೆ… ಕುರುಬರ ಕೊಪ್ಪಲು… ದೇವನಹಳ್ಳಿ ಉಪ್ಳ…. ಹರದನಹಳ್ಳಿ ಹೀಗೆ ಟಿಸಿಲೊಡೆದು ಮುಂದೆ ಸಾಗಿ ಮಾರ್ಕೋನಹಳ್ಳಿ ತಲುಪಿ ಯಡೆಯೂರಿನವರೆಗೂ ಸಾಗಿತ್ತು… ತೇರುಬೀದಿಯಿಂದ ಹೊರಟ ಆ ರಸ್ತೆ ನಾಲಕ್ ರಾಟೆ ಬಾವಿಯನ್ನು ಹಿಂದಿಕ್ಕಿ ಪಟೇಲರ ತೋಟ ಅದರಿಂದಾಚೆಗೆ ಪಟ್ಲದಮ್ಮನಗೂಡಿ ಹೀಗೆ ಮುಂದುವರೆಯುತ್ತದೆ. ಈ ನಾಲಕ್ ರಾಟೆ ಬಾವಿಗೆ ಇನ್ನು ಕೆಲವು ದೂರ ಇದ್ಹಾಗೆ ಬಸವಚಾರರ ಮನೆ… ಆ ಮನೆಯ ಎದುರಿಗೆ ಸೇಂದಿ ರಾಮಕೃಷ್ಣಯ್ಯನ ಮನೆ… ಆ ಮನೆಯ ಮಗ್ಗಲಿಗೆ ಒಂದು ಒಳರಸ್ತೆ… ಆ ರಸ್ತೆ ಒಲ ಮಗ್ಗಲಿಗೆ ತಮ್ಮಣ್ಣಚಾರಿ ಮನೆ… ಅದರ ಮಗ್ಗಿಲಿಗೆ ಸಿದ್ದಾಚಾರಿ ಮನೆ… ಅದರ ಮಗ್ಗಲಿಗೆ ಚಾಪೆ ನರಸಿಂಹಯ್ಯನ ಮನೆ…

ಈ ಸಿದ್ದಾಚರ‍್ರು ನಮ್ಮೂರ ವಲ್ಡ್ ಪೇಮಸ್ ಟೈಲರ್… ಬೆಂಗಳೂರಿನಿಂದ ಬಂದ ಮಾಡ್ರನ್ ಟೈಲರ್ಸ್ ’ ನಮ್ಮೂರಲ್ಲಿ ತಳವೂರುವುದಕ್ಕೆ ಮೊದಲು ಇವರ ಟೈಲರ್ ಅಂಗಡಿಯೇ ಪೇಮಸ್ ರೀ… ಇವರ ಮನೆಯ ಮಗ್ಗಲಿದ್ದ ಚಾಪೆ ನರಸಿಂಹಯ್ಯನು ಈಚಲು ಚಾಪೆ… ಕಡ್ಡಿ ಚಾಪೆ… ಒಂಟಿ ಚಾಪೆ… ಪಂಕ್ತಿಚಾಪೆ ಹೀಗೆ ತರಾವರಿ ಚಾಪೆಗಳನ್ನು ಅದೆಲ್ಲಿಂದಲೋ ತಂದು ಸುತ್ತಮುತ್ತ ಆಗುವ ಸಂತೆಗಳಲ್ಲಿ ಮಾರಾಟ ಮಾಡುವುದು ಈತನ ಕಾಯಕ… ಈತನ ಮನೆಯವರಿಗೂ ಸಿದ್ದಾಚರ‍್ರು ಮನೆಯವರಿಗೂ ಜಗಳ ನಡೆಯುತ್ತಲೇ ಇರುತ್ತಿತ್ತು. ನಿಮ್ಮನೆ ಬಚ್ಚಲು ನೀರು ನಮ್ಮನೆ ಬಾಗಿಲಿಗೆ ಬತ್ತದೆ’ ಅಂಥನು… ನಿನ್ನ ಮನೆಯ ತೆಂಗಿನ ಮರದ ಗರಿ ನನ್ನ ಮನೆ ನಾಯಿಮರಿ ಮೇಲೆ ಬಿತ್ತು… ನಿನ್ನ ಕಣ್ಣು ಇಂಗೋಗವ… ಗರಿನಾ ಮೊದಲೆ ಕಿತ್ತಾಕಕ್ಕೇನು… ನಿನ್ನ ಗಂಡ ತರೋ ಘನಂದಾರಿ ಚಾಪೆನೆಲ್ಲ ನನ್ನ ಮನೆ ಮುಂದೆ ಒಣಗಾಗುತ್ತಿಯಲ್ಲ… ನಿಮ್ಮವ್ವನ ಕೋಣೆಯಿಂದ ಹೋಡಾಡಬೇಕಾ ನಾವು.’ ನೀ ಸಾಕಿದ ದರ್ಬೇಸಿ ನಾಯಿ ನನ್ನ ಮನೆ ಬಾಗಿಲಲ್ಲಿ ಬಂದ ಹೇತದೆ… ಯಾವೋಳು ಬಳಿತರೆ ಅದನ್ನ… ಆ ಕುನ್ನಿಯ ಕಟ್ಟಕಕ್ಕೆ ಯೋಗ್ತೆ ಇಲ್ಲದ ಮ್ಯಾಲೆ ನೀನು ಒಬ್ಬಳು ಹೆಂಗ್ಸ…’ ನಿನ್ನ ಮಗ ನನ್ನ ಮಗಳನ್ನು ದುರುಟ್ಕೊಂಡು ನೋಡ್ತಿದ್ದ…. ಚಮ್ಡ… ಚಮ್ಡ ಸುಲಿದುಬಿಡ್ತೀನಿ ನೋಡ್ತಾಯಿರು’ ಹೀಗೆ… ಇಂತಹ ಹಲವು ಕಾರಣಗಳಿಗೆ ಜಗಳ ನಡೆಯುತ್ತಲೇ ಇರುತ್ತಿತ್ತು… ಒಮ್ಮೊಮ್ಮೆ ಮನೆಯಲ್ಲಿ ಗಂಡಸರೂ ವಿರಾಜಮಾನರಾಗಿದ್ದಾಗಲೂ ಜಗಳ ನಡೆಯುತ್ತಿತ್ತೋ… ಆ ಜಗಳ ಇನ್ನು ರಂಗೇರುತ್ತಿತ್ತು… ಹಾದಿ ಬೀದಿಯಲ್ಲಿ ಹೋಗುವವರು. ಸ್ವಲ್ಪ ನಿಂತು ಜಗಳ ನೋಡಿ ಮನರಂಜನೆ ತೆಗೆದುಕೊಂಡು ಮುಂದ್ಹೋಗುತ್ತಿದ್ದರು… ಹಾಗೆಯೇ ಬಸವಚಾರಿ ಅಂಗಡಿಯಲ್ಲಿ ಕುಳಿತ ಗಿರಾಕಿಗಳು ಹಾಗೂ ಬಸವಾಚಾರಿಯ ಜೊತೆಗೆ ಹರಟೆ ಹೊಡೆಯಲು ಬರುತ್ತಿದ್ದ ಅವರ ಸಮಕಾಲೀನರೂ ಸಹ ಅಲ್ಲಿ ಕುಳಿತು ಆ ಜಗಳ ನೋಡಿ ಮಜಾ ತೆಗೆದುಕೊಳ್ಳುತ್ತಿದ್ದರು… ಊರಿನವರಿಗೂ ಇವರ ಜಗಳನ್ನು ಬಿಡಿಸಿ ಬಿಡಿಸಿ… ಸಮಾಧಾನಗೊಳಿಸಿ ಶಾಂತಿ ಸ್ಥಾಪನೆ ಮಾಡಿ ಮಾಡಿ ಸಾಕಾಗಿ ಹೋಗಿತ್ತು…

ಅಂದು ಸಂಜೆ ನನ್ನ ಅಪ್ಪಾಜಿಯೂ ಬಸವಾಚಾರಿ ಅಂಗಡಿಯ ಮುಂದಲ ಜಗತಿಯಲ್ಲಿ ಕುಳಿತು ನಕ್ಕ ಹಾಕುತ್ತಿದ್ದರು… ಬಸವಾಚಾರಿಯರು ಅಂಬಾಳ್ ನಶ್ಯ’ವಾದರೆ ಅಪ್ಪಾಜಿಯದು ನಂಜನಗೂಡಿನ ಪುಡಿ ನಶ್ಯ… ಇಬ್ಬರೂ ನಶ್ಯವನ್ನು ಶೇರ್ ಮಾಡಿಕೊಳ್ಳುತ್ತಾ ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದಾರೆ. ಸಿದ್ಧಾಚಾರಿಯ ಕೊನೆ ಮಗನು ಚಾಪೆ ನರಸಿಂಹಯ್ಯನ ಮನೆ ಮುಂದೆ ಹಾಕಿದ್ದ ತೆಂಗಿನ ಮರದ ಬುಡಕ್ಕೆ ಉಚ್ಚೆ ಉಯ್ಯುತ್ತಿದ್ದನೆಂಬ ಕಾರಣಕ್ಕೆ ಜಗಳ ಶುರುವಾಗಿದೆ. ಮೊದಮೊದಲು ಹೆಂಗಸರು ಹೆಂಗಸರ ನಡುವೆ ಪ್ರಾರಂಭವಾದ ಜಗಳ ಮಕ್ಕಳುಗಳ ಪ್ರವೇಶಾನಂತರ ಆ ಜಗಳ ಸ್ವಲ್ಪ ರಂಗೇರಿತು. ಅಸ್ತ್ರ -ಪ್ರತಿ ಅಸ್ತ್ರಗಳು… ಬೈಗುಳ ಪ್ರತಿಬೈಗುಳಗಳು… ಎರಚಾಡಿದವು… ಕಿರುಚಾಟಗಳ ಅರಚಾಟಗಳ ಮೇಳ ಕಟ್ಟಿತು… ಮನುಷ್ಯರ ಜೊತೆಗೆ ಸಿದ್ದಚಾರಿಯ ನಾಯಿಯೂ ಓಹೋ ಎಂದು ಬೊಗಳಾಡುತ್ತಿತ್ತು… ‘ಇಷ್ಟೊತ್ತೂ ತಮ್ಮ ಪಾಡಿಗೆ ತಾವು ಮನೆಯೊಳಗೆ ಮಲಗಿದ್ದ ಸಿದ್ದಾಚಾರಿಯೂ… ಚಾಪೆ ನರಸಿಂಹಯ್ಯನೂ ಆಖಾಡಕ್ಕೆ ಇಳಿದರು… ಮಾರಾಮಾರಿ ಜಗಳ… ಬಡಿದಾಟ… ಗುದ್ದಾಟಗಳೂ ಆದವು ಒಬ್ಬರಿಗೊಬ್ಬರು ಬಡಿದಾಡಿದರು… ಹೀಗೆ ಪರಸ್ಪರ ಬಟ್ಟೆಗಳು ಹರಿದವು… ಜನಿವಾರಗಳು ಎಳೆದಾಟದಲ್ಲಿ ಕಿತ್ಹೋದವು. ಹೀಗೆ ಒಂದು ರಣಕೇಕೆಯಿಂದ ಪ್ರಾರಂಭವಾದ ಕದನ ತಾರಕಕ್ಕೆ ತಲುಪಿ ಕೊನೆಗೆ ಎರಡೂ ಮನೆಯವರೂ ಯುದ್ಧ ನಿಲ್ಲಿಸಿ ಬೈದಾಡಿಕೊಳ್ಳುತ್ತಾ ಮನೆ ಸೇರಿದರು.

ಈ ಜಗಳ ತೆಗೆದುಕೊಂಡು ಚಾಪೆ ನರಸಿಂಹಯ್ಯನು ಪಂಚಾಯಿತಿ ಕಟ್ಟೆ ಏರಿದಾ… ಸಾಕ್ಷಿಗೆ ಬಸವಚಾರರು ಹಾಗೂ ನಮ್ಮ ಅಪ್ಪಾಜಿಯ ಬಳಿ ಬಂದ. ಬಸವಚಾರರು ಉಪಾಯವಾಗಿ ನುಣಚಿಕೊಂಡರು…

ನಮ್ಮ ಅಪ್ಪಾಜಿಯವರು ‘ನಿನ್ನ ಹಿಡಕೊಂಡು ಸಿದ್ದಾಚಾರಿ ಹೊಡೆದದ್ದು ನಾನೇ ನನ್ನ ಕಾಣರೆ ನೋಡಿದ್ದೀನಿ… ನನಗೇನು ಕಷ್ಟ… ನಡೆದುದ್ದನ್ನು ನಡೆದಂಗೆ ಹೇಳಕ್ಕೆ… ನಾನೇನು ಸುಳ್ಳಾ ಹೇಳ್ಬೇಕಾ… ಸತ್ಯಾನೇ ಹೇಳ್ತೀನಿ ಚಾಪೆ’ ಎಂದು ‘ಸರಿ ಅಲ್ಲೇನ್ರೀ ಬಸವಾಚಾರರೆ…. ಇದ್ದದ್ದ ಇದ್ಹಂಗೆ ಹೇಳಕೆ ನನಗೇನು’ ಎಂದು ಬಸವಾಚಾರ ಕಡೆಗೆ ತಿರುಗಿದರು. ಅವರು ಅದೇನೋ ನೋಡಿ ಮೇಸ್ಟ್ರೇ … ನನಗೆ ಮೊದಲೇ ದೂರದೃಷ್ಟಿ ಇಲ್ಲ… ಅದೇನೋ ಹೇಳಿ’ ಎಂದು ಬಸವಾಚಾರಿಯ ಈ ಗುಳ್ಳೆನರಿ ಮಾತಿನ ಹಿಂದೆ ಆತನ ಜಾಣ್ಮೆ ಹಾಗೂ ಸಿದ್ದಾಚಾರಿಯ ಮೇಲೆದ್ದ ಹಳೆಯ ದ್ವೇಷ ಕಾರಣವಾಗಿ ಏನಾದರೂ ಮಾಡಿ ಸಿದ್ಧಾಚಾರಿನ ಮಟ್ಟ ಹಾಕಬೇಕು ಎಂಬ ಹಿಕ್ಮತ್ ಕೆಲಸ ಮಾಡಿತ್ತು… `ನೀನು ನಡಿ ಚಾಪೆ… ಅದ್ಯಾವ ಪಂಚಾಯತಿಯಾಗಲಿ… ಸ್ಟೇಷನ್ನೇ ಆಗಲಿ ನಾನು ರ‍್ತೀನಿ ಕಣ ಸಾಕ್ಷೀ ಹೇಳಕ್ಕೆ’ ಎಂದರು ಅಪ್ಪಾಜಿ.

ಹೀಗೆ ಅಪ್ಪಾಜಿಯು ಚಾಪೆ ನರಸಿಂಹಯ್ಯ ಪರವಾಗಿ ಸಾಕ್ಷೀ ನೀಡುವುದು ಊರಿನಲ್ಲಿ ಸುದ್ದಿಯಾಯಿತು. ಅದು ನಮ್ಮ ಮನೆಯವರೆಗೂ ಬಂದಿತು… ಅಮ್ಮನ ಕಿವಿಗೂ ತಾಕಿತು…

‘ನಿಮಗ್ಯಾಕೆ ಬೇಕೆ ಅವರಿವರ ಮನೆಯ ಸಮಾಚಾರ… ಊರಿನ ಉಸಾಬರಿಯಲ್ಲೆನೂ ಕಟ್ಕೊಂಡು ಅದನ್ನೆಲ್ಲ ಮನೆಯೊಳಗೆ ತರುತ್ತೀರ… ಅದರಿಂದ ನಮ್ಮನೆ ಪರಿಸ್ಥಿತಿ ಏನಾಗುತ್ತಾ ಯೋಚನೆ ಮಾಡಿದ್ದೀರಾ… ನಮ್ದೇ ನಮಗೆ ಹಾಸಿ ಹೋದೆಯೊಷ್ಟು ಇದೆ… ಅದೇನು ಸಾಕ್ಷೀ… ನ್ಯಾಯ… ಇದೆಲ್ಲ ಯಾಕೆ…’ ಎಂದು ಅಮ್ಮ ಅಪ್ಪಾಜಿಗೆ ತಿಳಿ ಹೇಳಹತ್ತಿದರು… ಅಪ್ಪಾಜಿ ನಿನಗೆ ಅದೆಲ್ಲ ತಿಳಿಯಲ್ಲ… ನಾನು ಕಂಡಿರೋದನ್ನು ಹೇಳ್ತೀನಿ… ತಪ್ಪಾ… ಹೀಗೆಂದರು… ಅಮ್ಮ ಅಪ್ಪಾಜಿಯ ನಡುವೆ ಮಾತಿನ ಚಖಾಮುಖಿಯೂ ನಡೆಯಿತು.’

ಇಂತಹ ಹಲವು ಅವಗಡಗಳನ್ನು ಆಗಾಗ ಅಪ್ಪಾಜಿ ಮಾಡಿಕೊಳ್ಳುತ್ತಿದ್ದರು. ಇಲ್ಲದ ತರಲೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಬಳ್ಳೆಯ ಮೇಷ್ಟ್ರು ಅನ್ನಿಸಿಕೊಂಡಿದ್ದ ಅಪ್ಪಾಜಿ… ಒಟ್ಟು ಕುಟುಂಬದಲ್ಲಿದ್ದಾಗ ತುಂಬಾ ದುಡಿಮೆಗಾರನೆಂತಲೂ… ಬುದ್ಧಿವಂತರೂ ಅನ್ನಿಸಿಕೊಂಡಿದ್ದ ಅಪ್ಪಾಜಿ… ದೊಡ್ಡಮನೆಯಿಂದ ಹೊರಬಂದಾದ ಮೇಲೆ ತಮ್ಮ ಎಂದಿನ ರೀತಿಯೇ ವ್ಯವಹಾರ ಮಾಡಲು ಹೋಗಿ ಸೋತು ಹೋಗಿದ್ದರು. ಆ ಸೋಲು ಅವರನ್ನು ಹಲವು ಅವಘಡಗಳಿಗೆ ಸಿಲುಕಿಕೊಳ್ಳಲು… ಆ ಸೋಲಿನಿಂದಾದ ಜರ್ಜರಿತ ಮನಸ್ಥಿತಿ ಅವರ ವ್ಯವಹಾರ ಜ್ಞಾನವನ್ನು ಕಡಿಮೆ ಮಾಡಿತೋ ಏನೋ ತಿಳಿಯದು… ಆದರೆ ಇಂತಹ ಹಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇದ್ದರು ಅಪ್ಪಾಜಿ…

ಸಾಕ್ಷಿ ವಿಚಾರದಲ್ಲಿ ಅಮ್ಮನ ಮಾತು ಅಪ್ಪಾಜಿಗೆ ಜ್ಞಾನ ತೋರಿತು… ‘ಆಯ್ತು ಬಿಡು ಸಿದ್ದಾಚಾರಿ ಹಾಗೂ ಚಾಪೆ ನರಸಿಂಹಯ್ಯ ಇಬ್ಬರ ಪರವಾಗಿಯೂ ಮತ್ತೆ ವಿರುದ್ಧವಾಗಿಯೂ ಮಾತಾಡದೆ… ಪಂಚಾಯ್ತಿಯನ್ನು ನಾನು ಹೇಗೂ ನಿಭಾಯಿಸುತ್ತೇನೆ’ ಎಂದು ಅಮ್ಮನಿಗೆ ಅಪ್ಪಾಜಿ ಭರವಸೆ ಕೊಟ್ಟರು. ಒಂದು ರಾತ್ರಿ ಊರಿನಲ್ಲಿ ಪಂಚಾಯಿತಿ ಸೇರಿತು. ಊರಿನ ಪಟೇಲರು… ಶಾನುಭೋಗರು… ಶೆಟ್ಟರು ಅವರು ಇವರು ಎಲ್ಲರೂ ಸಭೆಯಲ್ಲಿದ್ದರು… ಒಂದು ಕಡೆ ಸಿದ್ಧಾಚಾರಿಯೂ ಅವರ ಹೆಂಡತಿಯೂ… ಮತ್ತೊಂದು ಕಡೆ ಚಾಪೆ ನರಸಿಂಹಯ್ಯ ಅವರ ಹೆಂಡತಿಯೂ ನಿಂತಿದ್ದರು… ಅಪ್ಪಾಜಿಗೂ ಬುಲಾವ್’ ಬಂದಿತು… ಹಿರಿಯರ ಮಾತುಕತೆ ಪ್ರಾರಂಭವಾಯಿತು… ವಾದ ಪ್ರತಿವಾದಗಳು ನಡೆದವು… ಆರೋಪ ಪ್ರತಿ ಆರೋಪಗಳ ಪರಿಶೀಲನೆ ಆಯಿತು… ಕೊನೆಗೆ ಸಾಕ್ಷಿ…

ಪಂಚಾಯ್ತಿಯ ಪಟೇಲರು : ಮೇಷ್ಟ್ರೇ ಇವರ ಜಗಳ ಆಡೋವಾಗ ನೀವೆಲ್ಲಿದ್ರೀ…
ಅಪ್ಪಾಜಿ : ಬಸವಾಚಾರರ ಅಂಗಡಿ ಹತ್ರ ಇದ್ದೆ ಪಟೇಲರೇ.
ಶಾನುಭೋಗರು : ಇವರು… ಇವರ ಮನೆಯವರೆಲ್ಲ ಜಗಳ ಆಡುತ್ತಿದ್ದದ್ದು ನಿಜವೋ?
ಅಪ್ಪಾಜಿ : ಹೌದು ಸ್ವಾಮಿ.
ಪಟೇಲರು : ಮೇಷ್ಟ್ರೇ… ಇವರಿಬ್ಬರೂ ಬೈದಾಡಿದ್ದ ನೀವು ಕೇಳಿಸಿಕೊಂಡಿದ್ದಿರಾ… ಅದೇನು ಬೈದಾಡ್ತಾ ಇದ್ರೋ ಹೇಳಿ…?
ಅಪ್ಪಾಜಿ : ಅದೇನು ಅಂತ ನನಗೆ ಸರಿಯಾಗಿ ಕೇಳುಸ್ತಾ ರ‍್ಲಿಲ್ಲ… ದೂರ ಇದ್ನಲ್ಲಾ… ಕಿರುಚಾಡೋದ ಮಾತ್ರ ಕೇಳಿಸೋದು…
ಶಾನುಭೋಗರು : ರೀ ಆಚರ‍್ರೇ… ಇವರು ಜಗಳ ಆಡ್ತಿದ್ದ ನೋಡಿದ್ರೇನ್ರೀ…?
ಬಸವಾಚಾರಿ : ಇಲ್ಲ ಸ್ವಾಮಿ… ನಾನು ಅಂಗಡಿ ಒಳಗಿದ್ದೆ… ಏನೋ ಕಾಣುತ್ತ ಇರಲಿಲ್ಲ.
ಶಾನುಭೋಗರು : ಹೋಗಲಿ ಬೈದಾಡಿದ್ದಾರಾ ಕೇಳುತ್ತಾ ರ‍್ಲಿಲ್ವಾ…?
ಬಸವಾಚಾರಿ : ಇಲ್ಲ ಸ್ವಾಮಿ… ನನಗೆ ಸ್ವಲ್ಪ ಕಿವಿ ಮಂದ… ಏನೂ ಕೇಳಿಸ್ತಿರಲಿಲ್ಲ ಸ್ವಾಮಿ.
ಪಟೇಲರು : ಬಸೆಟ್ಟಪ್ಪಾ… ಇವರಿಬ್ಬರೂ ಜಗಳ ಮಾಡ್ತಾ ಮಾಡ್ತಾ ಚಾಪೆ ನರಸಿಂಹಯ್ಯನಿಗೆ ಸಿದ್ದಾಚಾರಿ ಹೂಡಿದ್ದನ್ನು ಆ ಹೊಡೆತಕ್ಕೆ ಚಾಪೆ ನರಸಿಂಹಯ್ಯನ ತುಟಿಯಿಂದ ರಕ್ತ ಕಡ್ದು ಬಂದಿದ್ದನ್ನು ನೀವು ನೋಡಿದ್ರೆನಪ್ಪಾ…?
ಅಪ್ಪಾಜಿ : ಅದನ್ನು ನೋಡ್ಲಿಲ್ಲ ಪಟೇಲರೇ…
ಶಾನುಭೋಗರು : ಅಲ್ಲೇ ಕಂತಿದ್ದಂತಲ್ಲಪ್ಪಾ ನೀನು… ಆಗಂತ ಚಾಪೆ ನರಸಿಂಹಯ್ಯ ಹೇಳ್ತಾನೆ…?
ಅಪ್ಪಾಜಿ : ಹೂಂ… ಕೂಂತಿದ್ದೆ… ಆದ್ರೆ ನೋಡ್ಲಿಲ್ಲ.
ಶಾನುಭೋಗರು : ಮತ್ತೆ… ಅಲ್ಲೇ ಕುಂತಿದ್ಮೇಲೆ ನೋಡಿರಲೇಬೇಕಲ್ಲ ನೀನು…?
ಅಪ್ಪಾಜಿ : ಅಲ್ಲೇ ಕುತಿದ್ದಂತೂ ಸತ್ಯ ಸ್ವಾಮಿ… ಆದರೆ ಸಿದ್ಧಾಚಾರಿ… ನರಸಿಂಹಯ್ಯನಿಗೆ ಹೊಡೆದದ್ದು ನೋಡ್ಲಿಲ್ಲ ಸ್ವಾಮಿ.
ಪಟೇಲರು : ಅದ್ಹೆಂಗಪ್ಪಾ… ರವೋಷ್ಟು ಬಿಡ್ಸಿ ಹೇಳಪ್ಪಾ.
ಅಪ್ಪಾಜಿ : ಇವರು ಜಗಳ ಆಟೋ ಟೈಮ್‌ಗೆ ಸರಿಯಾಗಿ ಸುಂಟರಗಾಳಿ ಎದ್ದು… ನನ್ನ ಕಣ್ಣಗೆ ದೂಳ್ ತುಂಬ್ಕೊಂಡು ಅಲ್ಲಿ ಏನ್ ನಡೀತಾದೆ ಅನ್ನೋದು ಏನೂ ಕಾಣ್ತಾ ರ‍್ಲಿಲ್ಲ… ಕೂಗೊಡೋ ಶಬ್ದ ಮಾತ್ರ ಕೇಳೋದು ಅಷ್ಟೇ… ಹಂಗಾಗಿ ನನಗೇನು ತಿಳಿದೂ ಸ್ವಾಮಿ… ಕೂಗಾಟ ಕಿರುಚಾಟ ಮಾತ್ರ ಕೇಳಿಸ್ತಿತ್ತು… ಏನೂ ಕಾಣಿಸಲಿಲ್ಲ… ಪಟೇರ‍್ರೇ…
ಇಡೀ ಸಭೆ ಗೊಳ್ಳೆಂದು ನಗೆಯಲ್ಲಿ ತೇಲಿತು…
ಸಭೆಯಲ್ಲಿದ್ದ ಒಬ್ಬ : ಐನಾತಿ ಕಣ್ಣಯ್ಯ ನೀನು…
ಮತ್ತೊಬ್ಬ : ಸಾಕ್ಷಿಯ ಸರಿಯಾಗೇ ಹೇಳ್ದೆ ಬುಡು ಬಸೆಟ್ಟಪ್ಪಾ…
ಮಗದೊಬ್ಬ : ಸಾಕ್ಷಿ ಹೇಳಕ್ಕೆ ನಿನ್ನಂತೋನ್ನೆ ರ‍್ಕೊಂಡು ರ‍್ಬೇಕು ಬುಡಪ್ಪಾ…

ಪಂಚರು : ಸದ್ದು ಸದ್ದು… ಬಸೆಟ್ಟಪ್ಪ ಮೇಷ್ಟ್ರು ಹೇಳಿದ ಸಾಕ್ಷಿಗೆ ಯಾವುದೇ ಪುರಾವೆಗಳನ್ನು ಸಮಂಜಸವಾಗಿ ಒದಗಿಸಲಾಗದೇ ಹೋದದ್ದರಿಂದ ಯಾರೊಬ್ಬರ ಪರವಾಗಿಯೂ ತೀರ್ಪು ನೀಡಲಾಗದು. ಈವರೆಗೂ ಪದೇ ಪದೇ ಜಗಳವಾಡಬಾರದೆಂದು ತಾಕೀತು ಮಾಡಿ… ಪರಸ್ಪರ ಸ್ನೇಹದಿಂದ ಕೂಡಿ ಬಾಳಬೇಕೆಂದು ಸಿದ್ದಾಚಾರಿ ಹಾಗೂ ನರಸಿಂಹಯ್ಯನಿಗೆ ಬುದ್ಧಿ ಹೇಳುತ್ತಾ ಸಭೆಯನ್ನು ಬರಕಾಸ್ತ ಮಾಡಲಾಗುವುದು… ಹೀಗೆ ಹಲವಾರು ಬಾರಿ ಜಗಳವಾಡಿ ಊರಿನ ಗೌರವಕ್ಕೆ ಧಕ್ಕೆ ತಂದ ಕಾರಣದಿಂದ ಇಬ್ಬರಿಗೂ ಹತ್ತು ಹತ್ತು ರೂಪಾಯಿಗಳನ್ನು ದಂಡ ಹಾಕಿ ಇನ್ನು ಮೂರು ದಿನಗಳಲ್ಲಿ ಆ ಹಣವನ್ನು ಪಂಚಾಯಿತಿಗೆ ತಂದೊಪ್ಪಿಸಬೇಕೆಂದು ತೀರ್ಪಿತ್ತು ಸಭೆಯನ್ನು ಬರಖಾಸ್ತು ಮಾಡಲಾಗಿದೆ… ಎಂದು ಹೇಳಿ ಪಂಚರು ಪಂಚಾಯ್ತಿಯನ್ನು ಮುಗಿಸಿದ್ದರು. ಅಪ್ಪಾಜಿ ಹೇಳಿದ ಸಾಕ್ಷಿಯ ಕಥೆ ಮನೆಯವರಿಗೂ ಮುಟ್ಟಿತು.

ಅಮ್ಮನಿಗೆ ಮಾತು ಕೊಟ್ಟಂತೆ ಅಪ್ಪಾಜಿ ನಡೆದುಕೊಂಡಿದ್ದರು…

ಅಪ್ಪಾಜಿಯೂ ಸಾಕ್ಷಿ ಕೇಳಿ ನಮಗೆಲ್ಲ ನಗುವೋ ನಗು… ಅಮ್ಮನೂ ನಕ್ಕಿದ್ದಳು…

ಇಂತಹ ಅನೇಕ ಅವಘಡಗಳು… ತರಲೆ ತಾಪತ್ರಯಗಳು… ಇಲ್ಲದ ಉಸಾಬರಿಗಳನ್ನು ಅಪ್ಪಾಜಿ ತಂದುಕೊಳ್ಳುತ್ತಲೆ ಇದ್ದರು…

ಅಪ್ಪಾಜಿಗೆ ವ್ಯವಹಾರ ಜ್ಞಾನ ಇರಲಿಲ್ಲವೇ? ಅಥವಾ ಕಡಿಮೆ ಇತ್ತಾ? ನನಗೂ ತಿಳಿಯದು…

ಹಾಗಾಗಿ… ಮನೆಯ ಮುಖ್ಯ ವಿಚಾರಗಳಲ್ಲಿ… ಮುಖ್ಯ ತೀರ್ಮಾನಗಳಲ್ಲಿ ಅಮ್ಮನ ಮಾತೆ ಕೊನೆಯಾಗಿರುತ್ತಿತ್ತು… ಹಾಗೂ ಯಾವುದೇ ವ್ಯವಹಾರಗಳಿಗೂ ಅಪ್ಪಾಜಿಯೂ ತಲೆ ಹಾಕುತ್ತಿರಲಿಲ್ಲ.

ಈ ಕಾರಣದಿಂದ ಮದುವೆಗೆ ಒಡವೆ ಮಾಡಿಸಲು ನಾನು ಅಮ್ಮನೇ ಹೋಗಬೇಕಾಯಿತು… ದೊಡ್ಡಪ್ಪಾಜಿಗೆ ಪರಿಚಯವಿದ್ದ… ನಂಬಿಕಸ್ಥರಾದ ಕಿಲಾರಿ ರಸ್ತೆಯ ಸನಿಹದಲ್ಲಿದ್ದ ಪವನ ಜ್ಯೂಯಿರ‍್ಸ್ನಲ್ಲಿ ನಾವು ಕುಳಿತೆವು… ದೊಡ್ಡಪ್ಪಾಜಿ ದೊಡ್ಡಮ್ಮನು ನಮ್ಮ ಜೊತೆಗೆ ಇದ್ದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: