
ಮೂಲ – ಕೇದಾರನಾಥ್ ಸಿಂಹ್
ಹಿಂದಿ ಸಾಹಿತ್ಯದ ಆಧುನಿಕ ಯುಗದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಕೇದಾರನಾಥ ಸಿಂಹ್, ಜುಲೈ 7, 1934 ರಂದು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಚಾಕಿಯಾ ಗ್ರಾಮದಲ್ಲಿ ಜನಿಸಿದರು. ಅವರು ಅಲ್ಲಿಯೇ ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ವಾರಣಾಸಿಗೆ ತೆರಳಿದರು. ಆಚಾರ್ಯ ಹಜಾರಿ ಪ್ರಸಾದ್ ದ್ವಿವೇದಿ ಅವರ ಮಾರ್ಗದರ್ಶನದಲ್ಲಿ ಅವರು “ಆಧುನಿಕ್ ಹಿಂದಿ ಕವಿತಾ ಮೆ ಬಿಂಬ್ ವಿಧಾನ್” ಎಂಬ ತಮ್ಮ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿ, ಪಿಎಚ್. ಡಿ. ಪದವಿ ಪಡೆದರು. ಆಚಾರ್ಯ ದ್ವಿವೇದಿಯವರಿಂದ ಪ್ರೇರಿತರಾಗಿ ಕೇದಾರನಾಥ್ ಸಿಂಹ್ ಅವರು ಬಂಗಾಲಿ ಭಾಷೆಯನ್ನು ಕಲಿತು ರವೀಂದ್ರನಾಥ ಟ್ಯಾಗೋರ್ ಅವರ ಬಂಗಾಲಿ ಸಾಹಿತ್ಯವನ್ನು ಓದಲು ಪ್ರಯತ್ನಿಸಿದರು. ಅವರು ಬ್ರಿಟಿಷ್ ಕವಿ ಡಿಲನ್ ಥಾಮಸ್, ಅಮೇರಿಕನ್ ಕವಿ ವಾಲೆಸ್ ಸ್ಟೀವನ್ಸ್ ಮತ್ತು ಫ್ರೆಂಚ್ ಕವಿ ರೆನೆ ಶಾರ್ ಅವರ ಅಭಿಮಾನಿಯೂ ಆಗಿದ್ದರು ಮತ್ತು ಅವರ ಕೆಲವು ಕವಿತೆಗಳನ್ನು ಹಿಂದಿಗೆ ಅನುವಾದಿಸಿದರು.
ಕೇದಾರನಾಥ ಸಿಂಹ್ ಅವರ ಕಾವ್ಯ ಪ್ರಯಾಣವು ಗೀತರಚನೆಕಾರರಾಗಿ ಪ್ರಾರಂಭವಾಯಿತು. ‘ಅಜ್ಞೇಯ’ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ, ಹಿಂದಿ ಸಾಹಿತ್ಯದ ‘ಪ್ರಯೋಗವಾದ್’ ಯುಗಕ್ಕೆ ನಾಂದಿ ಹಾಡಿದ ತಾರ್ ಸಪ್ತಕ್ ಸಂಗ್ರಹಗಳಲ್ಲಿ ಒಂದಾದ ತೀಸ್ರಾ ಸಪ್ತಕ್-ನಲ್ಲಿ (1959) ಕೇದಾರನಾಥ್ ಸಿಂಹ್ ಅವರ ಕವನಗಳು ಪ್ರಕಟವಾಯಿತು. ತೀಸ್ರಾ ಸಪ್ತಕ್ ನಲ್ಲಿನ ಏಳು ಕವಿಗಳಲ್ಲಿ ಕೇದಾರನಾಥ್ ಸಿಂಹ್ ಅವರು ಒಬ್ಬರಾಗಿದ್ದರು. ‘ಪ್ರಯೋಗವಾದ್’ ಕಾಲಾನಂತರದಲ್ಲಿ ‘ನಯೀ ಕವಿತಾ’ (ಹೊಸ ಕಾವ್ಯ) ಚಳುವಳಿಯಾಗಿ ವಿಕಸನಗೊಂಡಿತು. ತೀಸ್ರಾ ಸಪ್ತಕ್-ನಲ್ಲಿ ಪ್ರಕಟವಾದ ಅವರ ಹಾಡುಗಳು ಮತ್ತು ಕವಿತೆಗಳು ಅವರನ್ನು ಸಾಹಿತ್ಯ ಜಗತ್ತಿಗೆ ಪರಿಚಯಿಸಿದವು. ಅವರ ಮೊದಲ ಕವನ ಸಂಕಲನ ಅಭೀ, ಬಿಲ್ಕುಲ್ ಅಭೀ 1960-ರಲ್ಲಿ ಪ್ರಕಟವಾಯಿತು. ಈ ಸಂಗ್ರಹದಲ್ಲಿನ ಕವಿತೆಗಳ ನವೀನತೆ ಮತ್ತು ಗಂಭೀರತೆ ಅವರಿಗೆ ತಕ್ಷಣವೇ ಮನ್ನಣೆಯನ್ನು ಗಳಿಸಿತು.
ಅವರ ಎರಡನೆಯ ಕವನ ಸಂಕಲನ ಮೀನ್ ಪಕ್ ರಹೀ ಹೈ 1980-ರಲ್ಲಿ ಇಪ್ಪತ್ತು ವರ್ಷಗಳ ದೀರ್ಘ ಅಂತರದ ನಂತರ ಹೊರಬಂದಿತು. ಈ ಸಂಗ್ರಹದೊಂದಿಗೆ, ಅವರು ಸಮಕಾಲೀನ ಕಾವ್ಯದ ಗೌರವಾನ್ವಿತ ಕವಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಸರಳ ಭಾಷೆ ಮತ್ತು ಆಕರ್ಷಕ ಸಂವಹನವನ್ನು ಹೊಂದಿರುವ, ಪ್ರತಿಮೆ ಮತ್ತು ಕರಕುಶಲತೆಯ ವಿಶಿಷ್ಟ ಕವಿ ಎಂದು ಅವರನ್ನು ಪರಿಗಣಿಸಲಾಯಿತು. ಪ್ರತಿಮೆಗಳ ನವೀನತೆ, ವಿಶಿಷ್ಟ ಭಾರತೀಯ ಸಂಕೇತಗಳ ಅತ್ಯಾಧುನಿಕ ಬಳಕೆ, ನಿರೂಪಣೆಗಳು ಮತ್ತು ರೂಪಕಗಳ ಬಳಕೆ, ಸಂಭಾಷಣೆಯ ಹರಿವು ಮತ್ತು ಮುಕ್ತ ಪದ್ಯದಲ್ಲಿಯೂ ಸಹ ಭಾವಗೀತಾತ್ಮಕ ಲಯ ಇವರ ಕವಿತೆಗಳ ವಿಶಿಷ್ಟ ಲಕ್ಷಣಗಳಾಗಿವೆ. ಅವರ ಕಾವ್ಯಾತ್ಮಕ ಸಂವೇದನೆಯಲ್ಲಿ, ಅವರು ಭಾರತೀಯ ನಾಗರಿಕ ಮತ್ತು ಉತ್ತರ ಪ್ರದೇಶದ ಪೂರ್ವಭಾಗದ ಹಾಗೂ ಜಾಗತಿಕ ನಾಗರಿಕರಾಗಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅವರ ಕವಿತೆಗಳು ನಂತರದ ಪೀಳಿಗೆಗಳ ಮೇಲೆ ಸಮತೋಲಿತ ಪ್ರಭಾವ ಬೀರಿವೆ.
ಕೇದಾರನಾಥ ಸಿಂಹ್ ಒಬ್ಬ ಶಿಕ್ಷಕರಾಗಿದ್ದರು. ಹಲವಾರು ಕಾಲೇಜುಗಳಲ್ಲಿ ಬೋಧಿಸಿದ ನಂತರ, ಅವರು 1976-ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಕೇಂದ್ರಕ್ಕೆ ಸೇರಿದರು, ಅಲ್ಲಿ ಅವರು ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರ ಕಾವ್ಯದ ಬಗ್ಗೆ ಸಂಶೋಧನೆ ನಡೆದಿದೆ. ಅವರ ಕವಿತೆಗಳನ್ನು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೆ ಹಾಗೂ ಇಂಗ್ಲಿಷ್, ಜರ್ಮನ್, ರಷ್ಯನ್ ಮತ್ತು ಸ್ಪ್ಯಾನಿಷ್‌ನಂತಹ ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ.
ಅವರ ಕವನ ಸಂಕಲನಗಳಲ್ಲಿ ಅಭೀ, ಬಿಲ್ಕುಲ್ ಅಭೀ (1960), ಮೀನ್ ಪಕ್ ರಹೀ ಹೈ (1980), ಯಹಾಂ ಸೆ ದೇಖೋ (1983), ಅಕಾಲ್ ಮೆ ಸಾರಸ್ (1988), ಉತ್ತರ್ ಕಬೀರ್ ಔರ್ ಅನ್ಯ ಕವಿತಾಯೇಂ (1995), ಬಾಘ್ (1996), ಟಾಲ್‌ಸ್ಟಾಯ್ ಔರ್ ಸಾಯ್ಕಿಲ್ (2005), ಮತ್ತು ಸೃಷ್ಟಿ ಪರ್ ಪಹರಾ (2014) ಸೇರಿವೆ. ಅವರು ಕಲ್ಪನಾ ಔರ್ ಛಾಯಾವಾದ್, ಆಧುನಿಕ್ ಹಿಂದಿ ಕವಿತಾ ಮೆ ಬಿಂಬ್-ವಿಧಾನ್, ಮೆರೆ ಸಮಯ್ ಕೆ ಶಬ್ದ ಮತ್ತು ಕಬ್ರಿಸ್ತಾನ್ ಮೆ ಪಂಚಾಯತ್ ಇವರ ಗದ್ಯ ಪ್ರಬಂಧ ಸಂಕಲನಗಳಾವೆ. ಇದಲ್ಲದೆ, ತಾನಾ-ಬನಾ (ಆಧುನಿಕ ಭಾರತೀಯ ಕಾವ್ಯದಿಂದ ಆಯ್ದ ಕವನಗಳು), ಸಮಕಾಲೀನ್ ರೂಸೀ ಕವಿತಾಯೇಂ, ಕವಿತಾ ದಶಕ, ಸಖಿ (ಸಾಹಿತ್ಯ ಪತ್ರಿಕೆ), ಮತ್ತು ಶಬ್ದ್ (ಸಾಹಿತ್ಯ ಪತ್ರಿಕೆ) ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ.
ಕೇದಾರನಾಥ ಸಿಂಹ್ ಅವರ ಕವಿತೆಗಳ ಪ್ರಣಯ “ಆತ್ಮೀಯತೆ” ಅವರನ್ನು ವಿಶಾಲ ಕಾವ್ಯಪ್ರಿಯ ಓದುಗ ಸಮುದಾಯದೊಂದಿಗೆ ಜೋಡಿಸುತ್ತದೆ. ಅದಕ್ಕಾಗಿಯೇ, ಇಂಟರ್ನೆಟ್ ಬಳಕೆ ಮತ್ತು ಸಾಮಾಜಿಕ ಮಾಧ್ಯಮದ ಆಗಮನದಿಂದ, ಕೇದಾರನಾಥ ಸಿಂಹ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಅವರು ಸಾಹಿತ್ಯ-ಕಾವ್ಯದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರು. ಅವರ ಕೆಲವು ಕವಿತೆಗಳು/ಸಾಲುಗಳು ಆಧುನಿಕ ಹಿಂದಿ ಕಾವ್ಯದ ಅತಿಹೆಚ್ಚು ಉಲ್ಲೇಖಿಸಲಾದ ಸಾಲುಗಳಲ್ಲಿ ಸೇರಿವೆ. ಹಲವಾರು ಸಾಹಿತ್ಯ ಪುರಸ್ಕಾರಗಳಿಂದ ಸನ್ಮಾನಿತರಾದ ಕೇದಾರನಾಥ್ ಸಿಂಹ್ ಅವರಿಗೆ ಅಕಾಲ್ ಮೆ ಸಾರಸ್ ಕವನ ಸಂಕಲನಕ್ಕಾಗಿ 1989-ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ 2014-ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಕನ್ನಡಕ್ಕೆ – ಎಸ್ ಜಯಶ್ರೀನಿವಾಸ ರಾವ್
ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.
ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿ, ಅವಧಿ, ಕೆಂಡಸಂಪಿಗೆ, ಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು.
‘ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು. ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದವರು.
—
1. ತೂ ಫೂ ಮತ್ತು ಲೀ ಪೆಯ್ (ಹಿಂದಿ ಮೂಲ: ತೂ ಫೂ ಔರ್ ಲೀ ಪೆಯ್)
ಮೊದಲು ಕುದುರೆಗಳು
ಒಂದನ್ನೊಂದು ಗುರುತಿಸಿದವು
ನಂತರ ಲೀ ಪೆಯ್ ದೂರದಿಂದಲೆ
ತೂ ಫೂ-ನ ಗಡ್ಡದ ಬಿಳುಪನ್ನು ಗುರುತಿಸಿದ
ಈ ರೀತಿಯಾಗಿ ದೀರ್ಘ ಯಾತ್ರೆಯೊಂದರ ಆಕಸ್ಮಿಕ ತಿರುವಿನಲ್ಲಿ
ಭೇಟಿಯಾದರು ಇಬ್ಬರು ಅಲೆಮಾರಿ ಕವಿಗಳು
ಇದು ಎಂಟನೆಯ ಶತಮಾನದ ಯಾವುದೋ ಒಂದು ಸಂಜೆಯಾಗಿದ್ದಿರಬೇಕು
ಆದಾಗ್ಯೂ ಇತಿಹಾಸದಲ್ಲಿ ಇದರ ಯಾವುದೇ ಉಲ್ಲೇಖವಿಲ್ಲ.
ತೂ ಫೂ-ನನ್ನು ಭೇಟಿಯಾಗುತ್ತಲೇ ಲೀ ಪೆಯ್ ಕೇಳಿದ –
“ಗೆಳೆಯಾ, ಸ್ವಲ್ಪ ಕ್ಷೀಣಿಸಿದಂತೆ ಕಾಣಿಸುತ್ತಿರುವೆ,
ಕವಿತೆಯ ರೋಗವೇನಾದರೂ ನಿನ್ನನ್ನು ಜರ್ಜರಿಸಿದೆಯಾ?”
ತೂ ಫೂ ನಗುತ್ತಾನೆ,
ಹೇಳುತ್ತಾನೆ – “ಆ ಜ್ವರವಂತೂ ಇಬ್ಬರಿಗೂ ತಗುಲಿದೆ, ಪ್ರಿಯ ಮಿತ್ರಾ,
ಬಹುಶಃ ಅಷ್ಟೇ ತೀವ್ರವಾಗಿ!
ಆದರೆ ಯಾಕೋ ಮನಸ್ಸಿಗೆ ನೆಮ್ಮದಿಯಿಲ್ಲ, ಇದಕ್ಕೇನು ಮಾಡುವುದು
ಅಲೆದಾಡುತ್ತಿರುವೆ ನಾನು ಉತ್ತರದಿಂದ ದಕ್ಷಿಣಕ್ಕೆ
ದಕ್ಷಿಣದಿಂದ ಉತ್ತರಕ್ಕೆ
ಬೇಯ್ಜಿಂಗ್-ನಿಂದ ನಾನ್ಕಿಂಗ್-ಗೆ
ನಾನ್ಕಿಂಗ್-ನಿಂದ ಹಳದಿ-ನದಿಯ ಕಡೆ …
ಯಾಕೋ ಮನಸ್ಸಿಗೆ ನೆಮ್ಮದಿಯಿಲ್ಲ, ಬೇರೇನಿಲ್ಲ.”
ಇದನ್ನು ಕೇಳಿ ಲೀ ಪೆಯ್ ಮೌನವಾಗುತ್ತಾನೆ
ಆ ಮೌನವನ್ನು ಮುರಿಯುತ್ತಾ
ತೂ ಫೂ ಕೇಳುತ್ತಾನೆ,
“ಅದಿರಲಿ, ನೀನು ಹೇಗಿದ್ದಿ ಮಾರಾಯಾ,
ನಿನ್ನ ಸಂಗತಿ ಏನಾದರೂ ಸ್ವಲ್ಪ ಹೇಳು.”
“ನನ್ನದೇನಿದೆ ಮಾರಾಯಾ’ – ಲೀ ಪೆಯ್ ಹೇಳಿದ
“ದಾರಿಯಲ್ಲಿ ಹೋಗುತ್ತಿರುವಾಗ
ಒಂದು ಮರ ಕಂಡರೂ ಸಾಕು
ಒಬ್ಬ ಭಿಕ್ಕು
ಒಬ್ಬ ಕುರುಬ ಯಾ
ಒಬ್ಬ ಹುಚ್ಚ ಸಿಕ್ಕರೂ ಸಾಕು
ನಾನು ಖುಷಿಪಡುತ್ತೇನೆ,
ಇನ್ನೇನು ಬೇಕು!”
ತೂ ಫೂ ಸ್ವಲ್ಪ ಅವಸರದಲ್ಲಿದ್ದ,
ಕುದುರೆಯನ್ನು ಹಿಮ್ಮಡಿಯಿಂದ ತಿವಿಯುತ್ತಾ ಹೇಳಿದ,
“ಗೆಳೆಯಾ, ಹೋಗುವ ನಿರ್ಧಾರವಂತೂ ಮಾಡಿದ್ದೇನೆ,
ಆದರೆ, ಏಳು ವರ್ಷಗಳೇ ಕಳೆದಿವೆ,
ಮಕ್ಕಳು ಗುರುತು ಹಿಡಿಯುವರೋ ಇಲ್ಲವೋ ಗೊತ್ತಿಲ್ಲ.”
“ಈ ವಿಷಯದಲ್ಲಿ ಬಹುಶಃ ನಿನ್ನ ಕುದುರೆ
ನಿನಗೆ ಸಹಾಯಮಾಡಬಹುದೇನೊ,” ನಗುತ್ತಾ ಹೇಳಿದ ಲೀ ಪೆಯ್
ಮತ್ತೆ, ಜತೆಗೆ ಇದನ್ನೂ ಸೇರಿಸಿದ,
“ಎಲ್ಲಾ ಅಂದಮೇಲೆ, ನಾವು ಸಹ ಅವರಿಗೆ
ಕುದುರೆಗಳೇ ಅಲ್ವಾ,
ಅದೂ ಬಹುಶಃ ಮರದ ಕುದುರೆಗಳು!”
ಕವಿಗಳಿಬ್ಬರೂ ನಕ್ಕರು
ಎರಡು ಪರ್ವತಗಳು ನಕ್ಕಂತೆ
ಅವರಿಗನಿಸಿತು ಅವರ ಕುದುರೆಗಳು
ಸಹ ನಗುತ್ತಿವೆಯೆಂದು!
2. ಜೂತಿಗಳು (ಹಿಂದಿ ಮೂಲ: ಜೂತೆ)
ಸಭೆ ಎದ್ದಿತು
ಉಳಿದಿವೆ ಈ ಜೂತಿಗಳು
ಈ ನಿರ್ಜನ ಸಭಾಂಗಣದಲ್ಲಿ
ಎರಡು ಚಕಿತ ದುಃಖಿತ
ಧೂಳು ಕವಿದ ಜೂತಿಗಳು
ಬಾಯ್ತೆರೆದ ಜೂತಿಗಳು
ಯಾರೂ ಇಲ್ಲ ಇವಕ್ಕೆ ವಾರಸುದಾರರು
ಚೌಕೀದಾರ ಬಂದ
ನೋಡಿದ ಜೂತಿಗಳನ್ನ ಆತ
ಬಹಳ ಹೊತ್ತು ನಿಂತಿದ್ದ ಆತ
ಬಾಯ್ತೆರೆದ ಜೂತಿಗಳ ಮುಂದೆ
ಯೋಚಿಸುತ್ತಿದ್ದ –
ಎಷ್ಟೊಂದು ವಿಚಿತ್ರವಿದು
ಭಾಷಣಕಾರರು ಹೋಗಿಬಿಟ್ಟರು
ಎಲ್ಲಾ ಚರ್ಚೆಗಳು ಮುಗಿದು
ಕೊನೆಗೆ ಉಳಿದಿವೆ ಈ ಜೂತಿಗಳು
ಹೇಳುವುದಕ್ಕೆ ಈಗ ಏನೂ ಉಳಿದಿಲ್ಲದ
ಈ ನಿರ್ಜನ ಸಭಾಂಗಣದಲ್ಲಿ
ಎಷ್ಟೆಲ್ಲಾ ಎಷ್ಟೆಲ್ಲಾ
ಹೇಳಿಬಿಟ್ಟಿವೆ ಈ ಜೂತಿಗಳು
3. ಮಹಾನಗರದಲ್ಲಿ ಕವಿ (ಹಿಂದಿ ಮೂಲ: ಮಹಾನಗರ್ ಮೆ ಕವಿ)
ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಎಲ್ಲೋ ಇದ್ದಾನೆ ಒಬ್ಬ ಕವಿ
ಅವನಿರುವನು ಬಾವಿಯಲ್ಲಿರುವ ಮೌನದ ಹಾಗೆ
ಮೌನದಲ್ಲಿರುವ ಶಬ್ದಗಳ ಹಾಗೆ
ಶಬ್ದದಲ್ಲಿರುವ ರೆಕ್ಕೆಬಡಿತಗಳ ಹಾಗೆ
ಅವನು ಇರುವನು ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಆದರೆ ಎಂದೂ ಏನೂ ಹೇಳಲ್ಲ
ಮಾತ್ರ ಯಾವಾಗಲೋ ಒಮ್ಮೆ
ಕಾರಣವಿಲ್ಲದೆ
ಪ್ರಕ್ಷುಬ್ಧನಾಗುತ್ತಾನೆ ಅವನು
ಆಗ ಎದ್ದು
ಹೊರಗೆ ಬರುತ್ತಾನೆ
ಎಲ್ಲಿಂದಲೋ ಹುಡುಕಿ ತರುತ್ತಾನೆ ಒಂದು ಸುಣ್ಣದಕಡ್ಡಿ
ಎದುರಿಗಿರುವ ಹೊಳೆಯುವ ಖಾಲಿ ಗೋಡೆಯ ಮೇಲೆ
ಬರೆಯುತ್ತಾನೆ ‘ಕ’
ಒಂದು ಸಣ್ಣ
ಸಾಧಾರಣ ‘ಕ’
ಬಹಳ ಹೊತ್ತಿನವರೆಗೆ ಇಡೀ ಶಹರದಲ್ಲಿ ಪ್ರತಿಧ್ವನಿಸುತ್ತದೆ
‘ಕ’ ಎಂದರೇನು
ಮುದುಕಿಯೊಬ್ಬಳು ಸೈನಿಕನನ್ನು ಕೇಳುವಳು
ಸೈನಿಕ
ಮೇಷ್ಟ್ರನ್ನು ಕೇಳುವನು
ಮೇಷ್ಟ್ರು ಕೇಳುವನು
ಕ್ಲಾಸಿನ ಅತಿ ಶಾಂತ ವಿದ್ಯಾರ್ಥಿಯನ್ನು
‘ಕ’ ಎಂದರೇನು
ಇಡೀ ಶಹರು ಕೇಳುತ್ತೆ
ಮತ್ತೆ ಈ ಇಷ್ಟೊಂದು ದೊಡ್ಡ ಶಹರದಲ್ಲಿ
ಯಾರಿಗೂ ಈ ವಿಷಯ ಗೊತ್ತಿಲ್ಲ
ಅದೇನೆಂದರೆ
ಆ ಕವಿ ಇದ್ದಾನಲ್ಲ
ಪ್ರತಿ ಸಲವೂ
ಕೈ ಎತ್ತಿದಾಗ
ಆ ಹೊಳೆಯುವ ಖಾಲಿ ಗೋಡೆಯ ಮೇಲೆ
‘ಕ’ ಬರೆದಾಗ
ಅವನ ಕೊಲೆಯಾಗುತ್ತಾದೆಂದು!
ಅಷ್ಟೇ, ಇದಷ್ಟೇ ಸತ್ಯ
ಉಳಿದದ್ದೆಲ್ಲಾ ಧ್ವನಿ
ಅಲಂಕಾರ
ರಸ-ಭೇದ
ಇದಕ್ಕಿಂತ ಹೆಚ್ಚು ಅವನ ಬಗ್ಗೆ
ನನಗೆ ಬೇರೇನೂ ಗೊತ್ತಿಲ್ಲ
ಎಂದು ವಿಷಾದದಿಂದ ಹೇಳುವೆನು ನಾನು.
4. ಹಸ್ತಾಕ್ಷರ (ಹಿಂದಿ ಮೂಲ: ಹಸ್ತಾಕ್ಷರ್)
ಹೊಯಿಗೆಯ ಮೇಲೆ ಗಾಳಿಯ
ಅಗಣಿತ ಹಸ್ತಾಕ್ಷರಗಳಿದ್ದವು
ಇದನ್ನು ಕಂಡು
ನನ್ನ ಹಸ್ತಾಕ್ಷರ
ಗಾಳಿಯ ಹಸ್ತಾಕ್ಷರವನ್ನು
ಎಷ್ಟು ಹೋಲುತ್ತಿದೆಯಲ್ಲ
ಎಂದು ಬೆರಗಾದೆ ನಾನು
ಹೇಗಾಯ್ತು ಇದು ಹೀಗೆ?
ನಾನೇನಾದರೂ ಗಾಳಿಯನ್ನು
ನಕಲು ಮಾಡಿದೆನಾ?
ಅಥವಾ ಗಾಳಿಯೇನಾದರೂ
ನನ್ನ ಹಸ್ತಾಕ್ಷರವನ್ನು ಕದ್ದಿದೆಯಾ?
ಈ ಎರಡರಲ್ಲಿ ಯಾವುದೋ ಒಂದು
ನಕಲಯಾಗಿರುವುದಂತೂ ಖಂಡಿತ
ಎಂದು ಅನಿಸಿತು
ಆದರೆ ಈಗ ಪ್ರಶ್ನೆ ಏನೆಂದರೆ
ಹೇಗೆ ಇದನ್ನು ನಿರ್ಧರಿಸಬೇಕು
ಮತ್ತೆ, ಯಾವ ನ್ಯಾಯಾಲಯದಲ್ಲಿ
ತೀರ್ಮಾನಿಸಬೇಕು
ಯಾರ ಹಸ್ತಾಕ್ಷರ ನಕಲಿಯೆಂದು
ನನ್ನದಾ
ಗಾಳಿಯದ್ದಾ?
5. ದೇವರು ಮತ್ತು ಈರುಳ್ಳಿ (ಹಿಂದಿ ಮೂಲ: ಈಶ್ವರ್ ಔರ್ ಪ್ಯಾ)ಜ಼್
ದೇವರು ಏನಾದರು ಈರುಳ್ಳಿ ತಿನ್ನುವನಾ?
ಒಂದಾನೊಂದು ದಿನ ಅಮ್ಮ ಕೇಳಿದಳು ನನ್ನನ್ನು
ಮದ್ಯಾಹ್ನ ಊಟದ ಮುನ್ನ
ನಾನು ಈರುಳ್ಳಿಯ ಸಿಪ್ಪೆ ಸುಲಿಯುತ್ತಿರುವಾಗ
ಯಾಕೆ ತಿನ್ನಬಾರದಮ್ಮ – ಹೇಳಿದೆ ನಾನು
ಈ ಲೋಕವನ್ನು ಅವನೇ ಮಾಡಿರಬೇಕಾದರೆ
ಕ್ಯಾರೆಟ್ ಮೂಲಂಗಿ ಈರುಳ್ಳಿ ಬೀಟ್‌ರೂಟ್ –
ಇವೆಲ್ಲವನ್ನೂ ಅವನೇ ಮಾಡಿರಬೇಕಲ್ವಾ
ಮತ್ತೆ ಅವನ್ಯಾಕೆ ಈರುಳ್ಳಿ ತಿನ್ನಬಾರದು?
ವಿಷಯ ಅದಲ್ಲ –
ಹಿಂದೂಗಳು ಈರುಳ್ಳಿ ತಿನ್ನಲ್ಲ
ಅಂತ ಮೆತ್ತಗೆ ಹೇಳಿದಳು ಅಮ್ಮ
ಅಂದರೆ ದೇವರು ಹಿಂದೂನಾ, ಅಮ್ಮ?
ಅಂತ ನಗುತ್ತಾ ಕೇಳುವೆ ನಾನು
ಅಮ್ಮ ಅವಾಕ್ಕಾಗಿ ನೋಡುವಳು ನನ್ನನ್ನು
ಅಲ್ಲಿ ಸಿಪ್ಪೆ ಸುಲಿದ ನಂತರ
ಈಗ ಭೂಮಿಯಾಕಾರಾದ ಕಂದು ಬಣ್ಣದ ಈರುಳ್ಳಿ
ನನ್ನ ಕೈಯಲ್ಲಿತ್ತು
ಮತ್ತೆ, ದೇವರು ಬೇರೆಲ್ಲಾದರೂ ಇದ್ದನೋ ಇರಲಿಲ್ಲವೋ
ಆ ಕಣ್ಗಳಲ್ಲಿ ಆ ವೇಳೆ ಎಲ್ಲೋ ಖಂಡಿತವಾಗಿಯೂ ಇದ್ದ
ನನ್ನ ಕೈಯಲ್ಲಿದ್ದ ಸಣ್ಣ ಈರುಳ್ಳಿಯಲ್ಲಿ
ತನ್ನ ಅಸ್ತಿತ್ವವನ್ನು ಹುಡುಕುತ್ತಿದ್ದ
6. ಚಳಿಗಾಲದ ಶುರುವಿನಲ್ಲಿ ಆಲೂಗಡ್ಡೆ (ಹಿಂದಿ ಮೂಲ: ಜಾಡೋಂ ಕೆ ಶುರು ಮೇ ಆಲೂ)
ನೆಲದಿಂದ ಹೊರಬರುತ್ತದೆ ಅದು
ನೇರವಾಗಿ ಬಜಾರಿಗೆ ಬಂದು ಬಿಡುತ್ತದೆ
ಎಂತಹ ಒಂದು ಸಾಮರ್ಥ್ಯ ಅದರದ್ದು
ನನ್ನಲ್ಲಿ ಆಗಾಗ ಭಯವ ತುಂಬಿಸಿಬಿಡುವಂತಹದ್ದು
ಅದು ಬರುತ್ತದೆ, ಬರುತ್ತಲೆ ಬಜಾರನ್ನು ತುಂಬಲಾರಂಭಿಸುತ್ತದೆ
ಒಂದು ವಿಚಿತ್ರ ಕೋಲಾಹಲ
ವಿಚಿತ್ರ ವದಂತಿಗಳು
ಬಹಳ ಹೊತ್ತಿನವರೆಗೆ ನಾನು ಅದರ ಸುತ್ತ ಸುತ್ತಾಡುವೆ
ಕೊನೆಗೆ ಅದರ ಎದುರು ನಿಂತು ಬಿಡುವೆ
ಅದರ ಕೋಟೆಯಂತಹ ಗಟ್ಟಿಯಾದ ಗೋಡೆಯನ್ನು ಸ್ಪರ್ಶಿಸುವೆ
ಅದರ ಸಿಪ್ಪೆಯ ಏರಿಸಿ ನೋಡುವೆ ನಾನು
ಒಳಗೆ ಇಣುಕಿ ಕೇಳುವೆ ನಾನು – ನನ್ನ ಮನೆ,
ಎಲ್ಲಿದೆ ನನ್ನ ಮನೆ?
ಅದು ಬಜಾರಿನೊಳಗೆ ಬೆಂಕಿಯನ್ನು ತರುತ್ತದೆ
ನಂತರ ಬಜಾರು ಹೊತ್ತಿಕೊಂಡು ಉರಿಯತೊಡಗಿದಾಗ
ಅದು ಗೋಣಿಗಳ ಒಳಗೆ ನೆಗೆಯಲಾರಂಭಿಸುತ್ತದೆ
ಪ್ರತಿಯೊಂದು ಚಾಕುವಿನ ಮೇಲೆ ಬೀಳಲು ಸಿದ್ಧ
ಪ್ರತಿಯೊಂದು ಉಪ್ಪಿನಲ್ಲಿ ತೊಳೆದುಕೊಳ್ಳಲು ತಯಾರು
ಬಹಳಷ್ಟು ವಸ್ತುಗಳು ನಿರಂತರವಾಗಿ
ಮುರಿದು ಬೀಳುತ್ತಿರುವ ಸಮಯದಲ್ಲಿ
ಅದು ಬರುತ್ತದೆ ಪ್ರತಿ ಸಲವೂ,
ಬಂದು, ಕಳೆದ ಋತುವಿನ ಸ್ವಾದದೊಂದಿಗೆ
ಸೇರಿ ಬಿಡುತ್ತದೆ.
7. ಒಂದು ಮುರಿದು ಬಿದ್ದ ಲಾರಿ (ಹಿಂದಿ ಮೂಲ: ಟೂಟಾ ಹುವಾ ಟ್ರಕ್)
ಕಳೆದ ಮಳೆಗಾಲದಿಂದ ಅದನ್ನು ನೋಡುತ್ತಲಿರುವೆ
ಹಾಗೇ ನಿಂತಿದೆ ಅದು ಅಲ್ಲಿ
ಮುರಿದು ಹೋಗಿ, ಹೈರಾಣವಾಗಿ
ಈಗ ಅದು ಕಣ್ಣೀರು ಸುರಿಸುತ್ತಿದೆ
ಕಾಣಿಸುತ್ತದೆ ನನಗೆ
ಒಂದು ಪುಟ್ಟ ಬಳ್ಳಿ
ಸ್ಟಿಯರಿಂಗ ಚಕ್ರದ ಕಡೆ ಸರಿಯುತ್ತಿದೆ
ಒಂದು ಸಣ್ಣ ಎಲೆ
ಹಾರನ್ನಿನ ಪಕ್ಕದಲ್ಲಿ ಬಾಗಿದೆ
ಅದನ್ನು ಬಾರಿಸಲು ಬಯಸಿದಂತೆ
ಬಲು ಸೂಕ್ಷ್ಮವಾದ ಸದ್ದಿಲ್ಲದ ಬಡಿತವೊಂದು
ಇಡೀ ಲಾರಿಯಲ್ಲಿ ಎಡೆಬಿಡದೆ ಬಡಿಯುತಿದೆ
ಯಾವುದೋ ನಟ್-ನ್ನು ಬಿಚ್ಚಲಾಗುತ್ತಿದೆ
ಯಾವುದೋ ವಯರನ್ನು ಬಿಗಿಯಲಾಗುತ್ತಿದೆ
ಮುರಿದು ಬಿದ್ದಿರುವ ಲಾರಿಯನ್ನು
ಸಂಪೂರ್ಣವಾಗಿ ಹುಲ್ಲಿನ ವಶಕ್ಕೆ
ಒಪ್ಪಿಸಲಾಗಿದೆ
ಈಗ ಹುಲ್ಲು ಚಿಂತೆಯಲ್ಲಿದೆ
ಚಕ್ರಗಳನ್ನು ಬದಲಿಸುವ ಬಗ್ಗೆ
ನಾಳೆ ಬೆಳಗ್ಗೆ ಎಲ್ಲ ಸರಿಯಾಗುವುದು
ನಾನು ನಿದ್ದೆಯಿಂದ ಏಳುವೆ
ಅಚಾನಕ್ಕಾಗಿ ಹಾರನ್ನಿನ ಶಬ್ದ ಕೇಳಿಬರುತ್ತೆ
ದರದರಾಂತ ಲಾರಿ ಹೊರಡುತ್ತದೆ
ತಿನ್‌ಸುಕಿಯಾ ಅಥವಾ ಬೋಕಾಜಾನ್ ನಗರದ ಕಡೆಗೆ
ಹೀಗೆ ಯೋಚಿಸಿವುದರಲ್ಲಿ ಎಷ್ಟೊಂದು ಖುಷಿಯಿದೆ
ಸಂಜೆಯಾಗುತ್ತಲಿದೆ
ಮುರಿದು ಬಿದ್ದಿರುವ ಲಾರಿ ಅಲ್ಲಿಯೇ ನಿಂತಿದೆ
ನನ್ನನ್ನು ದುರುಗುಟ್ಟಿ ನೋಡುತ್ತಿದೆ
ಅನಿಸುತಿದೆ ನನಗೆ
ಈ ಹೊತ್ತಿನಲ್ಲಿ ಒಂದು ವೇಳೆ ಅದು ಅಲ್ಲಿ ಇಲ್ಲದೇ ಇದ್ದಿದ್ದರೆ
ಇದು ನನ್ನ ಊರೆಂದು
ಇವರು ನನ್ನ ಜನರೆಂದು
ಮತ್ತೆ ಅಗೋ, ಅದು …
ಅದು ನನ್ನ ಮನೆಯೆಂದು
ಗುರುತುಹಿಡಿಯುವುದು ಎಷ್ಟು
ಕಷ್ಟವಾಗುವುದು ನನಗೆ!
8. ಬೇಸಿಗೆಯಲ್ಲಿ ಒಣಗುತ್ತಿರುವ ಬಟ್ಟೆಗಳು (ಹಿಂದಿ ಮೂಲ: ಗರ್ಮಿ ಮೆ ಸೂಖ್ತೆ ಹುವೆ ಕಪಡೆ)
ಒಣಗುತ್ತಿವೆ ಬಟ್ಟೆಗಳು
ಸಾವಿರ ಸಾವಿರ
ನನ್ನದು ಯಾ ಮತ್ತಿನ್ಯಾರದೋ ಬಟ್ಟೆಗಳು
ಹಗ್ಗಗಳ ಮೇಲೆ ನೇತಾಡುತ್ತಿವೆ
ಒಣಗುತ್ತಿವೆ
ಕಳೆದ ಸುಮಾರು ದಿನಗಳಿಂದ
ಶಹರದಲ್ಲಿ ಬಟ್ಟೆಗಳು ಒಣಗುವುದನ್ನು ನೋಡುತ್ತಿರುವೆ
ಗಾಳಿಯನ್ನು ನೋಡುತ್ತಿರುವೆ
ಅದು ಕಳೆದ ಸುಮಾರು ದಿನಗಳಿಂದ ಬಟ್ಟೆಗಳನ್ನು ಒಣಗಿಸುತ್ತಿದೆ
ಅವುಗಳನ್ನು ಮತ್ತೆ ದಾರವಾಗಿ ಹತ್ತಿಯಾಗಿ ಬದಲಿಸುತ್ತಾ
ಬಟ್ಟೆಗಳನ್ನು ಹಿಂಜುತ್ತಿದೆ ಗಾಳಿ
ಮತ್ತೆ ನೇಯಲಾಗುತ್ತಿದೆ ಬಟ್ಟೆಗಳನ್ನು
ಮತ್ತೆ ಕತ್ತಿರಿಸಿ ಮತ್ತೆ ಹೊಲಿಯಲಾಗುತ್ತಿದೆ ಬಟ್ಟೆಗಳನ್ನು
ಮನುಷ್ಯನ ಕೈ
ಮತ್ತು ಮೊಣಕಾಲುಗಳಿಗೆ ಸರಿಯಾಗುವಂತೆ
ನಾನು ನೋಡುತ್ತಿರುವೆ
ಬಹಳ ಹೊತ್ತಿನಿಂದ ಬಿಸಿಲು ಕಬ್ಬಿಣವನ್ನು ಬಿಸಿಮಾಡುತ್ತಿದೆ
ಕೈ ಮತ್ತು ಮೊಣಕಾಲುಗಳನ್ನು
ಸಮನಾಗಿ ಮಾಡಲು
ಬಟ್ಟೆಗಳು ಒಣಗುತ್ತಿವೆ
ಮತ್ತೆ ಬೆಳಗ್ಗಿನಿಂದ ಮೆಲ್ಲ ಮೆಲ್ಲನೆ
ಬಿಸಿಯಾಗುತ್ತಿದೆ ಕಬ್ಬಿಣ






0 Comments