ಮಹಾದೇವ ಎಸ್ ಪಾಟೀಲ
ನಾನು ಬಾಡಿಗೆಗಾಗಿ
ಮನೆ ಕೇಳಿದೆ
ಅವರು ಕುಲ ಕೇಳಿದರು
ನಾಲ್ಕು ದಿನದವಾಸಕ್ಕೆಂದು
ಮನೆ ಕೇಳಿದೆ
ವೆಜ್ಜಾ, ನಾನ್ವೆಜ್ಜಾ ಎಂದು ಕೇಳಿದರು
ನಾನು ಡಬಲ್ ಬೆಡ್ ರೂಮ್
ಮನೆ ಕೇಳಿದೆ
ಸಿಂಗಲ್ಲಾ, ವಿವಾಹಿತ ಎಂದು ಕೇಳಿದರು
ಮಡದಿ, ಮಕ್ಕಳಿದ್ದಾರೆಂದು
ಮನೆ ಕೇಳಿದೆ
ಅವರು ಉದ್ಯೋಗ ಕೇಳಿದರು
ನಾನು ಶಾಲಾ ಶಿಕ್ಷಕನೆಂದು
ಮನೆ ಕೇಳಿದೆ
ಅವರು ಕುಡಿತ, ತುಡಿತ ಕೇಳಿದರು
ಕೈ ಮುಗಿದು ವಿನಂತಿಸಿ
ಮನೆ ಕೇಳಿದೆ
ಅವರು ಊರು, ಕೇರಿ ಕೇಳಿದರು
ನಾನು ಕೇರಿ ಹುಡಗನೆಂದು
ಎದೆ ತಟ್ಟಿ ಹೇಳಿದೆ
ಈಗ ಮನೆ ಖಾಲಿಯಿಲ್ಲ ಎಂದು ಹೇಳಿದರು.
0 ಪ್ರತಿಕ್ರಿಯೆಗಳು