‘ಮಹಾಕಾವ್ಯ’ಗಳ ಬಗ್ಗೆ ಚರ್ಚೆಯಾಗಲಿ ..

ಸುಬ್ರಾಯ ಚೊಕ್ಕಾಡಿ

ವೀರಪ್ಪ ಮೊಯ್ಲಿಯವರ ಬಾಹುಬಲಿ ಕುರಿತಾದ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಲದ ಪುರಸ್ಕಾರ ಲಭಿಸಿದೆ. ಇದರೊಂದಿಗೆ ಮಹಾಕಾವ್ಯಗಳ ಕುರಿತಾದ ಮರು ಚರ್ಚೆಯೊಂದು ನಡೆಯಬಹುದೆಂಬ ಅಥವಾ ನಡೆಯಬೇಕೆಂಬ ನಿರೀಕ್ಷೆಯಲ್ಲಿ ನಾನಿದ್ದೇನೆ.

ಹಿಂದೆ ನಮ್ಮಲ್ಲಿ ಭಾವಗೀತೆಗಳ ಯುಗ ಆರಂಭವಾದಾಗ ಮತ್ತು ಮುಂದುವರಿದು ನವ್ಯ ಕಾಲದಲ್ಲಿ ಮಹಾಕಾವ್ಯಗಳ ಕಾಲ ಇದಲ್ಲ, ಆ ಯುಗ ಮುಗಿದು ಹೋಯಿತು ಎನ್ನುವ ಮಾತುಗಳು ಸಾಹಿತ್ಯ ವಲಯದಲ್ಲಿ ಓಡಾಡುತ್ತಿದ್ದವು. ಸುಮಾರಾಗಿ ಆ ಸಮಯದಲ್ಲೇ ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯವು ಪ್ರಕಟವಾಯಿತು. ನಿಧಾನವಾಗಿಯಾದರೂ ಕ್ರಮೇಣ ಗೋಕಾಕ್, ಪುತಿನ, ಸುಜನಾ, ಮಲ್ಲಿಕಾ ಕಡಿದಾಳ್ ಅವರ ಮಹಾಕಾವ್ಯಗಳು ಪ್ರಕಟವಾದವು.

ಈಚೆಗೆ ಈ ಪ್ರಕ್ರಿಯೆಯು ಇನ್ನಷ್ಟು ವೇಗವನ್ನು ಪಡೆದುಕೊಂಡು, ವೀರಪ್ಪ ಮೊಯ್ಲಿ, ಚೆನ್ನಣ್ಣ ವಾಲೀಕಾರ, ಎಚ್.ಎಸ್. ವೆಂಕಟೇಶ ಮೂರ್ತಿ, ಲತಾ ರಾಜಶೇಖರ್, ಪ್ರದೀಪ್ ಕುಮಾರ್ ಹೆಬ್ರಿ, ಹಂಪ.ನಾಗರಾಜಯ್ಯ ಮೊದಲಾದವರ ಅನೇಕ ಮಹಾಕಾವ್ಯಗಳು ಪ್ರಕಟವಾದವು. ಇವರ ಪೈಕಿ ಕೆಲವರು ಬಿಡಿ ಕವಿತೆಗಳನ್ನು ಬರೆಯದೆ, ಮಹಾ ಕಾವ್ಯಗಳನ್ನು ಮಾತ್ರ ಬರೆದವರು.

ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳ ಬಗ್ಗೆ ಹೇಳಬೇಕು ಅನಿಸುತ್ತದೆ. ಮಹಾಕಾವ್ಯಗಳೇನೋ ಬಂದವು. ಆದರೆ, ಕುವೆಂಪು ಕಾವ್ಯದ ಹೊರತಾಗಿ ಉಳಿದ ಮಹಾ ಕಾವ್ಯಗಳ ಬಗ್ಗೆ ನಮ್ಮಲ್ಲಿ ಚರ್ಚೆಯಾದದ್ದು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವ ಹಾಗಿದೆ. ಇದಕ್ಕೇನು ಕಾರಣ? ಈ ಬಗ್ಗೆ ಯೋಚಿಸುವ ಅಗತ್ಯವಿದೆ.

ಮೊದಲನೇಯದಾಗಿ ಈ ಕಾವ್ಯಗಳಿಗೆ ಕವಿಗಳು ಆರಿಸಿಕೊಂಡ ವಸ್ತುವೆಂದರೆ ಈಗಾಗಲೇ ಪ್ರಚಲಿತವಿದ್ದ, ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಕಥೆಗಳು ಅಥವಾ ವಿವೇಕಾನಂದ, ಬಾಹುಬಲಿ, ಬುದ್ಧ, ಬಸವೇಶ್ವರ ಮೊದಲಾದ ಪೌರಾಣಿಕ ಅಥವಾ ಐತಿಹಾಸಿಕ ಮಹಾ ಪುರುಷರ ಕಥೆಗಳು. ಅವು ಮಹತ್ವದ ಕಥೆಗಳೇ ನಿಜ. ಆದರೆ ಅದನ್ನೇ ಮತ್ತೆ ಹೇಳುವ ಅಗತ್ಯವಿದೆಯೇ? ಹಾಗೆ ಮತ್ತೆ ಹೇಳಬೇಕಾದರೆ ಆ ಮತ್ತೆ ಹೇಳಿದ ಕಥೆ ಹೇಗಿರಬೇಕು ಎಂಬುದರ ಬಗ್ಗೆ ಚಿಂತನೆ ಅಗತ್ಯ. ಅದಕ್ಕೆ ನಾವು ಹಿಂದೆ ಬಂದ ಮಹಾ ಕಾವ್ಯಗಳತ್ತ ಕಣ್ಣು ಹಾಯಿಸಬೇಕು.

ಆದಿ ಕವಿ ವಾಲ್ಮೀಕಿ ಅದಾಗಲೇ ಪ್ರಚಲಿತವಿದ್ದ ರಾಮನ ಕಥೆಯನ್ನು ಕಾವ್ಯವಾಗಿಸಿದ. ಅವನು ಆದರ್ಶ ಪುರುಷನೊಬ್ಬನ ಹುಡುಕಾಟ ನಡೆಸಿದ್ದ. ಅದಕ್ಕೆ ಉತ್ತರವಾಗಿ ರಾಮನ ಕಥೆಯನ್ನು ಅವನು ಬಳಸಿಕೊಂಡ. ಅದೇ ಕಥೆಯನ್ನು ತುಲಸೀದಾಸ ಮೊದಲಾದವರು ಭಿನ್ನ ಉದ್ದೇಶಗಳಿಗಾಗಿ ಬಳಸಿಕೊಂಡು ಕಾವ್ಯ ರಚಿಸಿದರು. ಕನ್ನಡದಲ್ಲಿ ನಾಗಚಂದ್ರನಿಗೆ ಪ್ರತಿನಾಯಕನೊಬ್ಬನ ಚಿತ್ರಣದ ಅಗತ್ಯ ಕಂಡು ರಾಮಚಂದ್ರ ಚರಿತ ಪುರಾಣವನ್ನು ರಚಿಸಿದ.

ವ್ಯಾಸ ತನ್ನದೇ ವಂಶದ ಪತನದೊಂದಿಗೆ ಯುಗದ ಪತನದ ವ್ಯಾಕುಲತೆಯನ್ನೂ ಜೋಡಿಸಿ ಕಾವ್ಯವನ್ನು ರಚಿಸಿದರೆ, ಪಂಪ ಅದೇ ಕಥೆಯನ್ನು ತನ್ನ ಕಾಲದ ಪ್ರಧಾನ ಲಕ್ಷಣವಾದ ವೀರತ್ವವನ್ನು ದಾಖಲಿಸಲು ವಿಕ್ರಮಾರ್ಜುನ ವಿಜಯವನ್ನು ರಚಿಸಿದ. ರನ್ನ ಇವನಿಗಿಂತ ಭಿನ್ನವಾಗಿ ಪ್ರತಿನಾಯಕನ ಕಥೆಯಾಗಿಸಿ ಸಾಹಸ ಭೀಮ ವಿಜಯವನ್ನು ರಚಿಸಿದರೆ, ಕುಮಾರವ್ಯಾಸನು ಅದೇ ಕಥೆಯನ್ನು, ತನ್ನ ಕಾಲದ ಮುಖ್ಯಗುಣವಾದ ಭಕ್ತಿಯ ಅಭಿವ್ಯಕ್ತಿಯಾಗಿ, ತನ್ನ ಆರಾಧ್ಯ ದೈವವಾದ ಕೃಷ್ಣಕಥೆಯಾಗಿ ಮಾರ್ಪಡಿಸಿದ. ಅಲ್ಲದೆ ತನ್ನ ಕಾಲದ ಜಾನಪದ ಕಾವ್ಯದ ಗೇಯಗುಣವನ್ನು ಅದಕ್ಕೆ ಜೋಡಿಸಿದ.

ಈ ಕೆಲವು ಉದಾಹರಣೆಗಳ ಮೂಲಕ ನಾವು ತಿಳಿಯಬಹುದಾದ ಸಂಗತಿಯೆಂದರೆ ಒಂದು ಕಥೆಯನ್ನು ಮತ್ತೆ ಬರೆಯುವುದೆಂದರೆ ಅದೇ ಕಥೆಯನ್ನು ಮತ್ತೆ ಒಂದಷ್ಟು ವರ್ಣನೆ ಇತ್ಯಾದಿಗಳೊಂದಿಗೆ ಹೇಳುವುದಲ್ಲ; ಬದಲಾಗಿ ಮೂಲಕತೆಯನ್ನು ತನ್ನ ಕಾಲದ ಪ್ರಧಾನ ಲಕ್ಷಣಕ್ಕನುಗುಣವಾಗಿ ಮುರಿದು ಕಟ್ಟುವ ಮೂಲಕ ಹೊಸದಾಗಿ ರಚಿಸುವುದು.

ಹಾಗೆ ತನ್ನ ಕಾಲಕ್ಕೆ ತಕ್ಕ ವ್ಯಾಖ್ಯಾನವಾಗಿಸುವ ಮೂಲಕ ತನ್ನ ಕಾವ್ಯವನ್ನು ತನ್ನ ಕಾಲಕ್ಕೆ ಕನ್ನಡಿಯಾಗಿಸುವುದು; ಹೊಸ ತಿಳವಳಿಕೆಯ ದೀಪವಾಗಿಸುವುದು. ಹಾಗೆ ಮಾಡಿದ್ದರಿಂದಲೇ ವ್ಯಾಸ, ಪಂಪ ಕುಮಾರವ್ಯಾಸರ ಕಾವ್ಯಗಳು ಮೂಲ ಕಥೆಯನ್ನು ಬಳಸಿಯೂ ಭಿನ್ನ ಭಿನ್ನವಾಗಿ ಕಾಣಿಸುತ್ತವೆ. ಹಾಗೇನೇ ರಾಮಾಯಣದ ಕಥೆಯನ್ನೊಳಗೊಂಡ ಅನೇಕ ಕಾವ್ಯಗಳು ಭಿನ್ನ ರೀತಿಯದಾಗಿಯೇ ಕಾಣಿಸುತ್ತವೆ. ವಸ್ತು ಅದೇ, ರೂಪ ಆಶಯಗಳು ಅಭಿವ್ಯಕ್ತಿಯ ರೀತಿಗಳು ಬೇರೆ ಬೇರೆಯೇ. ಆ ಕಾವ್ಯಗಳು ಹೊಳೆಯಿಸುವ ದರ್ಶನವೂ ಬೇರೆ ಬೇರೆಯೇ. ಅವನ್ನು ಮರು ಸೃಷ್ಟಿ ಎನ್ನಬಹುದೇನೋ.

ಈ ಕಾಲದಲ್ಲಿ ಮಹಾಕಾವ್ಯಗಳ ಕ್ವಾಂಟಿಟಿ ನೋಡಿದರೆ ಸಾಕಷ್ಟು ಇದೆ. ಆದರೆ ಇದೇ ಮಾತನ್ನು ಕ್ವಾಲಿಟಿಯ ಕುರಿತೂ ಹೇಳಲು ಸಾಧ್ಯವೇ? ಈ ಹಿನ್ನೆಲೆಯಲ್ಲಿ ಈಗ ಬರುತ್ತಿರುವ ಮಹಾಕಾವ್ಯಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನನಗನಿಸುತ್ತದೆ. ಜತೆಗೇ ನಮ್ಮ ಕಾಲದ ಸ್ವತಂತ್ರ ಕಥೆಯನ್ನೊಳಗೊಂಡ ಮಹಾಕಾವ್ಯ ಯಾಕೆ ಬರಲಿಲ್ಲ? ಇಂದಿನ ಮಹಾಕಾವ್ಯವು ಕಾದಂಬರಿ ರೂಪದಲ್ಲಿರುವಂಥದೇ ಎಂಬುದರ ಚರ್ಚೆಯೂ ಅಗತ್ಯ ಎಂದು ನನಗನಿಸುತ್ತದೆ.

‍ಲೇಖಕರು Avadhi

March 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.M.Nadaf

    “ಮಹಾಕಾವ್ಯಗಳ ಬಗ್ಗೆ ಚರ್ಚೆಯಾಗಬೇಕು,” ನಾಡಿನ ಹಿರಿಯ ಕವಿ ಚೊಕ್ಕಾಡಿಯವರು ಸಾಂದರ್ಭಿಕವಾದ ವಿಷಯ ಪ್ರಸ್ತಾಪಿಸಿದ್ದಾರೆ.
    ಈ ಸಂದರ್ಭದಲ್ಲಿ ನನ್ನ ಅಲ್ಪ ಅನುಭವ ಮತ್ತು ಅಲ್ಪ ಅಧ್ಯಯನದಲ್ಲಿ ಹೇಳುವದಾದರೆ ಕಾವ್ಯದ ಗಂಭೀರತೆ ಕಾಣಬೇಕಾದರೆ ನಾವು ಮಹಾಕಾವ್ಯಗಳನ್ನು ಓದಬೇಕು. ಆದರೆ ಇಂದಿನ ಹಿರಿಯರು ಸೇರಿದಂತೆ ಯುವಕರು ಮಹಾಕಾವ್ಯದ ಗಂಭೀರ ಓದುಗರಾಗುತ್ತಿಲ್ಲ.
    ನಮ್ಮ ಕಲ್ಬುರ್ಗಿಯ ಕವಿ ಚೆನ್ನಣ್ಣ ವಾಲೀಕಾರರು ಬರೆದ “ಯೋಮಾ ಯೋಮ”
    ಕುರಿತು ಕಲಬುರಗಿ ವಿದ್ವಾಂಸರೇ ಸರಿಯಾದ ಚರ್ಚೆ ನಡೆಸಲಿಲ್ಲವೆಂಬ ವಿಷಾದವಿದೆ.
    ಡಿ.ಎಂ.ನದಾಫ;
    ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: