ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳ್ಳೂರಲ್ಲೊಂದು ದೆವ್ವ ಬಿಡಿಸಿದ ಪ್ರಸಂಗ

ಡಾ.ಎಸ್.ಬಿ.ಜೋಗುರ

ಕಾಶೀಬಾಯಿ ಒಂದು ಸವನ ಅಡ್ರಾಸಿ ಓಡಿ ಬಂದವ್ಳೇ ಚನ್ನಯ್ಯ ಮುತ್ಯಾನ ಜೇಜಿಯೊಳಗ ಕುಕ್ಕರ ಬಡದಳು. ಚನ್ನಯ್ಯನೋರು ಮನಿಯೊಳಗ ಇರಲಿಲ್ಲ. ಅವನ ಹೆಂಡತಿ ಶಿವಗಂಗವ್ವ ಈ ಕಾಶೀಬಾಯಿ ಏದುಸಿರು ಬಿಡೂದು ನೋಡಿ, ಇದು ಮತ್ತದೇ ಗಾಳಿ..ದೆವ್ವಂತ ಹೊಡಕೊಂಡು ಬಂದಿರತೈತಿ ಅಂತ ಅಡಗಿ ಮನ್ಯಾಗೇ ಲೆಕ್ಕಾ ಹಾಕಿ ತನ್ನ ಕೆಲಸದಾಗ ತಾ ಇದ್ದಳು. ಆಕಿ ಹಂಗ ಅಡ್ರಾಸಿ ಓಡಿ ಬಂದ ರವ್ವ ನೋಡದರ ನಡೀಬಾರದ್ದು ನಡದೈತಿ ಅನ್ನೂವಂಗ ಇತ್ತು. ಅಗಲಾಗಿ ಕಾಲ ಕಿಸಗೊಂಡು ಕುಂತು ತಲಿ ಮ್ಯಾಗಿನ ಸೆರಗ ತಗದು ಅದರಲೆನೇ ಉಶ್..ಉಶ್.. ಅಂತ ಗಾಳಿ ಹಾಕತಿದ್ದಳು. ಆಕಿ ಹಂಗ ಕಿಸ್ಕೊಂಡು ಕುಂತಿದ್ದು ನೋಡಿ ಶಿವಗಂಗವ್ವನ ಅತ್ತಿ ಶರಣಮ್ಮ ಸಿಟ್ಟೀಲೇ ‘ಏ ಖೋಡಿ, ಮಂದಿ ಮಕ್ಕಳು ಬರೂ ಮನಿ ಹಂಗ ಎದಿ ಮ್ಯಾಲಿನ ಸೆರಗ ತಕ್ಕೊಂಡು ಸೊಟ್ಟ ಮೊಲಿ ತೋರಸಕೊಂತ ಕುಂತರ ಚಂದ..? ಚಾರ…..? ಸೆರಗ ಹಾಕೊ’ ಅಂತ ಕವಕವ ಮಾಡಿದ್ದೇ ಕಾಶೀಬಾಯಿ ಜೀವ ಏಕದಮ್ ಖಜೀಲಿ ಆದಂಗ ಆಗಿ ‘ ಯವ್ವ.. ಇಲ್ಯಾರು ಗಂಡ ಮಕ್ಕಳಾದರ..? ಇದ್ದಿದ್ದು ನಾವೇ ಹೌದಿಲ್ಲ್ಲೊ.. ತುಸು ಖುದಿ ಆದಂಗ ಆಯ್ತು ಅದಕ್ಕೇ..’

‘ ಅದು ಬಿಡು… ಮತ್ತೇನು ಹೊಡಕೊಂಡು ಬಂದಿ..?’

‘ಯಾಕವ್ವ ಹಂಗ ಅಂತಿ..? ಒಂದು ಸಣ್ಣ ತಾಯತ ಕಟ್ಟದರೂ ಹನ್ನೊಂದು ರೂಪಾಯಿ ಕೊಟ್ಟಿರತೀನಿ’
‘ಅಲ್ಲ ಕಾಶವ್ವ, ಹನ್ನೊಂದು ರೂಪಾಯಿ ಕಾಲ ಹೊಯ್ತು..’
‘ ನನ್ನ ಕಡೀಂದ ನೀಗುವಷ್ಟು ಕೊಡಕ್ಕಿ. ಚನ್ನಯ್ಯ ಮುತ್ಯಾ ಎಂದೂ ಅಂದಿಲ್ಲ ನಿಂದೇ ಬಾಳ ಆಯ್ತು ನೊಡು’
‘ಅಂವಾ ಬಲ ನೀ ಬಲಾ ಅಂವ ಬಂದ ಮ್ಯಾಲ ಬಾ’ ಅತ್ತಿ ಹಂಗ ಖಂಡತುಂಡಾಗಿ ಮಾತಾಡಿದ್ದು ಕೇಳಿ ಶಿವಗಂಗಮ್ಮ
‘ಏನತ್ತಿ..? ಯಾರದು..?’
‘ಅದೇ ಹಿಂದಿನ ಮನಿ ಕಾಶವ್ವ’
‘ ಏನಂತ..?’
‘ ನನ್ನ ಮುಂದ ಹೇಳಲ್ಲಂತ’ ಅಡುಗಿ ಮನಿಯೊಳಗಿಂದ ಶಿವಗಂಗಮ್ಮ ಸೀದಾ ಜೇಜಿ ಕಡೆ ಬಂದು ಹಸಿ ಕೈ ಸೆರಗಿಗಿ ಒರಸಕೊಂತ
‘ಏನು ಕಾಶೀಬಾಯಿ ಏನಾಯ್ತು..?’
‘ಯಕ್ಕಾ ಅದೇ ನನ್ನ ಸೊಸಿ ಲಿಗಾಡು. ಯಮನವ್ವ ಇವತ್ತ ಮುಂಜಮುಂಜಾನೆನೆ ಚೀರಾಡಲಿಕ್ಕ ಶುರು ಮಾಡ್ಯಾಳ. ವತ್ತಲಕ ನೀರು ಕಾಯ್ಸು ಅಂದದ್ದೇ ತಡ ಆ ತಪೇಲಿ ಎತ್ತಿ ವಗದು, ರಂಡಿ.. ಶಂಕರಿ.. ನಿನ್ನ ಕುತಗಿ ಹಿಚುಕೇ ತೀರತೀನಿ. ನನಗ ಬೆಂಕಿ ಹಚ್ಚಿ ಸುಟ್ಟೆಲ್ಲಾ..? ನಿನ್ನೂ ಹಂಗೇ ಸುಡತೀನಿ ಅಂತ ಒಲಿಯೊಳಗಿನ ಕೊಳ್ಳಿ ತಗೊಂಡು ಬೆನ್ನೇ ಹತ್ತದಳು. ಆಕಿ ಕಡಿಂದ ತಪ್ಪಿಸಿಕೊಂಡು ಎದ್ದಿನೋ… ಬಿದ್ದಿನೋ ಅಂತ ಇಲ್ಲಿಗಿ ಬರೂಮಟ ಸಾಕು ಸಾಕಾಯ್ತು.’
‘ ಅಯ್ಯ, ಮೊನ್ನೆ ಬಾವಿ ಮ್ಯಾಲ ಸಿಕ್ಕಿದ್ದಳು ಚುಲೊನೇ ಮಾತಾಡಿದ್ದಳಲ್ಲ..?’
‘ ಹಂಗ ಚುಲೋನೇ ಮಾತಾಡ್ತಾಳ.. ಇದ್ದಕ್ಕಿದ್ದಂಗ ಹಿಂಗ ನಿಗರಿ ನಿಂತು ಬಿಡ್ತಾಳ. ಮಣ್ಣೆತ್ತಿನ ಅಮವಾಶೆ ದಿನ ಬ್ಯಾಡ ಬ್ಯಾಡ ಅಂದರೂ ರಾತ್ರಿ ಬಯಲಕಡಿಗಿ ಹೋದಳು. ಆವತ್ತೇ ಚಾವಡಿ ಹಿಂದಿನ ಚಂಡ್ರವ್ವ ಇಕಿಗಿ ಬಡಕೊಂಡಾಳಂತ ಮುಲ್ಲಾಗೋಳ ಬಾಷಾಸಾಬ ಹೇಳಿದ್ದ. ದರ್ಗಾದೊಳಗಿನ ಬೂದಿ ಹಣಿಗಿ ಹಚ್ಚಿದ್ದ. ಒಂದು ವಾರ ಎಲ್ಲಾ ಪಾಡಿತ್ತು. ಈಗ ಇದ್ದಕ್ಕಿದ್ದಂಗ ಮತ್ತ ಸುರು ಆಗೈತಿ. ಆಕಿ ಕೂದಲ ಹರಕೋಳೂದು..ಚೀರೂದು ನೆನಸಿಕೊಂಡರ ಒಂಥರಾ ರಾವ್ ಅನಸತೈತಿ”
‘ ಅಂದ್ರ ಖರೆನೆ ಆಕಿಗಿ ಗಾಳಿ ಆಗೈತಿ ಅಂತಿಯನೂ..?’

‘ ಹೂಂ ಯಕ್ಕಾ ಆಕಿ ಆಡೂದು ನೋಡಬೇಕು. ಮೊನ್ನೆ ಬುಟ್ಟಿಯೊಳಗಿನ ನಾಕೈದು ಹಸಿ ಮೆಣಸಿನ ಕಾಯಿ ಕರಕರ ಅಂತ ತಿಂದಳು. ಮಾತಿಗೊಮ್ಮ ರಂಡಿ ಶಂಕರಿ ನಿನ್ನ ಸಾಯಸದೇ ಬಿಡುವಂಗಿಲ್ಲ… ಅಂತ ಚೀರ್ತಾಳ ಕೈಗಿ ಏನು ಸಿಗತೈತೋ ಅದರಿಂದಲೇ ಹೊಡಿತಾಳ. ಉಳ್ಳಾಗಡ್ಡಿ ಕತ್ತರಸಲಿಕ್ಕ ಈಳಗಿ ಮ್ಯಾಲ ಕುಂತಕ್ಕಿ ಈಳಿಗೆಯಿಂದೇ ಕಟ್ ಅಂತ ನನ್ನ ಕಾಲಿಗಿ ಒಂದು ಏಟು ಕೊಟ್ಟಳು. ಪುಣ್ಯಕ್ಕ ಅದು ಚುಚ್ಚಲಿಲ್ಲ. ಇಲ್ನೋಡು’ ಅಂತ ಕಾಲಿಗಿ ಬಿದ್ದ ಕಚ್ಚ್ ತೋರಸಿ ಕನಿಕರ ಪಡಕೊಂಡಳು. ಶಿವಗಂಗಮ್ಮ ‘ ನಿಂದೊಂಥರಾ ಕತೀನೇ ಬ್ಯಾರೇ ಐತಿ ಬಿಡು. ಈ ಮಳ್ಳೂರಾಗ ಇಂಥಾ ಕತಿ ಮತ್ತ ಯಾರ ಮನ್ಯಾಗೂ ಇಲ್ಲ. ಮಗನ ಮೈಯಾಗ ನೋಡದರ ದೇವರ ಬರತೈತಿ , ಸೊಸಿ ಮೈಯಾಗ ನೋಡದರ ಚಂಡ್ರವ್ವನ ದೆವ್ವ ಬರತೈತಿ ಎರಡೂ ಒಂದೇ ಮಾನ್ಯಾಗ. ಅದೂ ಎದುರಾ ಬದುರು ಬಾಳ ವಿಚಿತ್ರ ಐತಿ.’

‘ ಯವ್ವಾ, ಅವರು ಇರೂಮಟ ಎಲ್ಲಾ ಚಂದ ಇತ್ತು. ಅವರು ಹೋದ ವರ್ಷ ಒಪ್ಪತ್ತಿನೊಳಗ ಹಿಂಗೆಲ್ಲಾ ಸುರು ಆಯ್ತು. ಇದ್ದೊಬ್ಬ ಮಗ ಕಲೀಲಿ ಅಂತ ಅವನಪ್ಪ ಬೇಕಾದಷ್ಟು ಖರ್ಚು ಮಾಡದರೂ ಮಗಾ ಓದಲಿಲ್ಲ. ಮುಂದ ಅವನಿಗಿ ಕನ್ಯಾ ಕೊಡಾಕೂ ಯಾರೂ ಮುಂದ ಬರಲಿಲ್ಲ. ಓದಲಾರದ ಹುಡುಗಗ ಯಾರು ಕನ್ಯಾ ಕೊಡ್ತಾರಂತ ಒಳಗಿನ ಸಂಬಂಧದೊಳಗೇ ಈ ಯಮನವ್ವಳನ್ನ ಮಗಗ ಗಂಟ ಹಾಕದರ, ಈಗ ತೋಬಾ ತೋಬಾ ಅನ್ನೂವಂಗ ಆಗೈತಿ. ಹ್ಯಾಂಗ ಮಾಡಬೇಕು ಅಂತ ತಿಳಿಲಾರದಂಗ ಆಗೈತಿ. ಚಲೊ ಜಮೀನ ಅದನ್ನ ಮಾಡವರಿಲ್ಲಾರದಕ್ಕ ಬೀಳು ಬಿದ್ದ ಪಡಾ ಆಗೈತಿ.’ ಅಂತ ಕಾಶೀಬಾಯಿ ಕಣ್ಣೀರ ಸುರಸ್ತಾ ಕತಿ ಹೇಳಿದ್ದಳು.

‘ ಯಾಕ ಅಳ್ತಿ ಅಳಬ್ಯಾಡ ಎಲ್ಲಾ ಚುಲೊ ಆಗತೈತಿ.. ಅಗಾ.. ಅವರೂ ಬಂದರು ನೋಡು’ ಅಂತಾ ಇದ್ದಂಗ ಕಾಶೀಬಾಯಿ ಹುರುಪಾಗಿ ಚನ್ನಯ್ಯ ಮುತ್ಯಾನ ಕಾಲಿಗಿ ಬಿದ್ದು:

‘ ಮುತ್ಯಾ, ಸೊಸಿ ಮತ್ತ ಸುರು ಮಾಡ್ಯಾಳ. ಮನ್ಯಾಗ ನಿಲ್ಲಾಕ ಆಗೂವಂಗಿಲ್ಲ ಆ ಪರಿ ಚೀರೂದು.. ಕೈಗಿ ಸಿಕ್ಕಿದ್ದು ಎತ್ತಿ ಒಗಿಯೂದು ಮಾಡ್ತಾಳ. ಹ್ಯಾಂಗ ಮಾಡಬೇಕು ಅಂತ ತಿಳಿಲಾರದಂಗ ಆಗೈತಿ.. ಅದೇನೋ ತಿಳಿಲಾರದ ಮಾತ ಮಾತಾಡ್ತಾಳ ಕೇಳಾಕ ಮುಸುಲರು ಮಾತಾಡದಂಗ ಇರತೈತಿ.’ ಅಂದಾಗ ಚನ್ನಯ್ಯ ಜೇಜಿಯೊಳಗಿರೋ ಆರಾಮ ಖುರ್ಚಿ ಮ್ಯಾಲ ಕುತಗೊಂಡು, ತುಸು ಹೊತ್ತ ಕಣ್ಣ ಮುಚ್ಚದಂಗ ಮಾಡಿ, ದೊಡ್ದ ನಿಟ್ಟುಸಿರು ಬಿಟ್ಟು ದಿಟ್ಟಿಸಿ ಗ್ವಾಡಿ ಮ್ಯಾಲಿನ ದೇವರ ಫೋಟೊ ನೋಡಿ ಏನೋ ಗುನು ಗುನು ಅಂತ ಮಂತ್ರ ಹೇಳದಂಗ ಮಾಡಿ, ಕಾಶೀಬಾಯಿ ಮುಖ ನೋಡಿ ‘ನೀ ಆ ದರ್ಗಾಕ ಆಕಿನ್ನ ಕರಕೊಂಡು ಹೋಗಬಾರದಿತ್ತು. ಆ ಮುಲ್ಲಾಗ ಅದರಾಗ ಏನು ಮಣ್ಣ ತಿಳಿತೈತಿ.. ಇಷ್ಟು ವರ್ಷ ಆಯ್ತು ನನಗೇ ಇನ್ನೂ ಏನೂ ಹತ್ತೂವಲ್ದು ಇನ್ನ ಅದು ಹುಚಬಾರಗಿ ಅದಕ್ಕೇನು ತಿಳಿತೈತಿ..? ಯವ್ವಾ ನೀನು ಮತ್ತ ಆಕಿ ಒಳಗ ನಡೀರಿ’ ಅಂದ.

ಶರಣಮ್ಮ ಮತ್ತ ಶಿವಗಂಗಮ್ಮ ಒಳಗ ಹೋದರು. ಚನ್ನಯ್ಯ ಎರಡೊ ಅಂಗೈಗಳನ್ನ ಗಚ ಗಚ ಅಂತ ತಿಕ್ಕಿ, ದೇವರ ಮಾಡಿಯೊಳಗ ಹೂವಿನ ಬುಟ್ಟಿಯೊಳಗಿರೋ ವಿಭೂತಿ ತಗೊಂಡು ನೆಲದ ಮ್ಯಾಲ ಒಂದು ಒಂದು ಮಂತ್ರ ಬರದು ಅದರ ಸುತ್ತಾಲಕ ಗೆರಿ ಹೊಡದ. ಅದರ ಮ್ಯಾಲ ಕಾಶೀಬಾಯಿಗಿ ಕೂಡಾಕ ಹೇಳದ. ಕಾಶೀಬಾಯಿ ತನ್ನ ಎರಡೂ ಕೈ ಮುಕ್ಕೊಂಡು ಹೆದರಕೊಂತ ಹಗೂರಕ ಆ ಗೆರಿ ಒಳಗ ಕುತಗೊಂಡಳು. ಆಕಿ ಹಣಿಗಿ ವಿಭೂತಿ ಹಚಗೊಳಾಕ ಹೇಳದ. ಆಕಿ ಅಂವಾ ಹೇಳಿದ್ದೆಲ್ಲಾ ಮಾಡತಾ ಹೋದಳು. ಚಕ್ಕಬಕ್ಕಳ ಹಾಕೊಂಡು ಕಣ್ಣ ಮುಚ್ಕೊಂಡು ಕುಂತಳು. ಏನೋ ಮಂತ್ರ ಹೇಳದಂಗ ಗುನುಗುನು ಅಂದ. ಅಂವಾ ಏನಂದ ಅಂತ ಖುದ್ದಾಗಿ ಅಂವಗೂ ಗೊತ್ತಿರಲಿಲ್ಲ. ಕಿಡಕಿಯೊಳಗ ಇಣುಕಿ ನೋಡತಿರೋ ಅವ್ವ ಶರಣಮ್ಮಗ ಆಕಿ ಗಂಡ ಶಿವರುದ್ರಯ್ಯನೂ ಹಿಂಗೇ ಮಾಟ ಮಂತ್ರ ಮಾಡತಿದ್ದ. ಥೇಟ್ ಅವರಪ್ಪನಂಗೇ ಮಾಡ್ತಾನ ಅಂತ ಒಳಗೊಳಗೇ ಮಗನ ಮಂತ್ರ ತಂತ್ರದ ಬಗ್ಗೆ ಬೀಗತಿದ್ದಳು. ಸ್ವಲ್ಪ ಹೊತ್ತು ಆದ ಮ್ಯಾಲ ಕಾಶೀಬಾಯಿಗಿ ಕಣ್ಣ ಬಿಡಾಕ ಹೇಳಿ ಆಕಿ ಹಣಿ ಮ್ಯಾಲ ಬೂದಿ ಹಚ್ಚದ. ಒಂದಷ್ಟು ಬೂದಿ ತಗೊಂಡು ಐದು ಸಣ್ಣ ಸಣ್ಣ ಪೇಪರ ತುಂಡಿನೊಳಗ ಚೀಟಕಟ್ಟಿ, ಮನಿಯೊಳಗ ಐದೂ ಮೂಲಿಯೊಳಗ ಇಡಾಕ ಹೇಳದ. ಔಡಲ ಎಲಿಯೊಳಗ ಶಾವಿಗಿ ಬೆಲ್ಲ ಒಯ್ದು ಐತವಾರ ದಿವಸ ಸುಡಗಾಡದಾಗ ಇಟ್ಟು ಬರಾಕ ಹೇಳದ. ಮುಂದ ಒಂದೆರಡು ನಿಂಬು ಹಣ್ಣ ಮಂತ್ರಿಸಿ ಕೊಡಬೇಕು ಅಂತ ಮಾಡಿದ್ದ.

ಅಷ್ಟರೊಳಗ ಕಾಶೀಬಾಯಿ ಹನ್ನೊಂದು ರೂಪಾಯಿ ಚನ್ನಯ್ಯನ ಪಾದದ ಬಳಿ ಇಟ್ಟು ನಮಸ್ಕಾರ ಮಾಡಿದ್ದೇ ಚನ್ನಯ್ಯ ನಿಂಬೀಕಾಯಿ ಐಡಿಯಾನೇ ಕೈ ಬಿಟ್ಟಿದ್ದ. ಅಂವಾ ಕೊಟ್ಟಿರೋ ಬೂದಿ ಹಣಿಗಿ ಹಚ್ಕೊಂಡು, ಆ ಚೀಟಗಳನ್ನ ಸೆರಗಿನ ಪದರದೊಳಗ ಗಂಟ ಕಟಗೊಂಡು ನಡದಳು. ಬರೂಮುಂದ ಅಂದಕೊಂಡಂಗ ಯಾವ ಯಾವ ಮೂಲಿಯೊಳಗ ಆ ಬೂದಿ ಇಡಬೇಕು ಅಂದಕೊಂಡಿದ್ದಳೋ ಅಲ್ಲೆಲ್ಲಾ ಇಟ್ಟಿದ್ದೂ ಆಯ್ತು. ಹಗೂರಕ ಸೊಸಿ ಕಡಿ ಬಂದಳು. ಸೊಸಿಗಿ ಅತ್ತಿ ಎಲ್ಲಿಂದ ಬಂದಳು.. ಏನೇನು ಮಾಡದಳಂತ ಎಲ್ಲಾ ಗೊತ್ತಿತ್ತು. ಹಂಗಾಗಿ ಚೀರೂದು.. ಬೈಯೂದು ಬಿಟ್ಟು ಬಾಳ ಬದಲ್ ಆದಂಗ ಮಾತಾಡಲಿಕ್ಕ ಸುರು ಮಾಡದಳು. ಗಂಡ ಬಸವರಾಜು ಸದಾ ದೇವರ ಕೋಲಿಯೊಳಗ ದೇವರ ಮುಂದ ಪೂಜೆ ಮಾಡ್ತಾ ಕೂಡತಿದ್ದ. ಎರಡು ತಾಸಿಗೊಮ್ಮ ಗಂಟಿ ಬಾರಸತಿದ್ದ. ಮೊದಲಿಂದಲೂ ಅಂವಾ ಕೆಲಸ ಮಾಡದವನಲ್ಲ. ಒಬ್ಬನೇ ಮಗ ಅಂತ ಅವರೂ ಅವನಿಗಿ ಏನೂ ಹಚ್ಚಿರಲಿಲ್ಲ. ಬಾಳ ಅಂದ್ರ ಯಾವಾಗರೇ ಒಮ್ಮ ಹೊಲಕ್ಕ ಹೋಗಿ ಬುತ್ತಿ ಕೊಟ್ಟು ಬರೂದು ಬಿಟ್ಟರ ಮತ್ತ ಬ್ಯಾರೇ ಏನೂ ಕೆಲಸ ಮಾಡ್ತಿರಲಿಲ್ಲ. ಕಾಶೀಬಾಯಿ ಗಂಡ ಗಿರಿಮಲ್ಲಪ್ಪ ದೆವ್ವ ದುಡದಂಗ ದುಡಿಯವನು. ಬಾರೀಕಾಲ ಹೊಲದಾಗೇ ಬಿದ್ದಕೋಳವನು.

ಆ ವರ್ಷ ಬ್ಯಾಸಗಿಯೊಳಗ ಮಡ್ದಿ ಹೊಲದೊಳಗ ಬಾವಿ ಹೊಡಿಸೋ ಮುಂದ ಕಾಲು ಜಾರಿ ಬಿದ್ದು, ತಲಿ ಪೆಟ್ಟಾಗಿ ಅದೇ ನೆಪದೊಳಗ ಅಂವಾ ಖಾಲಿಯಾಗಿದ್ದ. ಆವತ್ತಿನಿಂದ ಕಾಶೀಬಾಯಿಗಿ ಏನು ಮಾಡಬೇಕಂತ ತಿಳಿಲಾರದಂಗ ಆಯ್ತು. ಒಕ್ಕಲತನ ಮಾಡವರು ಯಾರೂ ಇರಲಾರದಕ್ಕ ಹೊಲಾನ್ನ ಗೇಣಿಗಿ ಹಚ್ಚಿದ್ದಳು. ಓಣ್ಯಾನ ಹಿರೇರ ಮಾತು ಕೇಳಿ ಮಗ ಸೈರಪಟ್ಟ ತಿರಗೂದು ಬಿಡ್ಲಿ ಅಂತ ಅವನಿಗೊಂದು ಮದವಿ ಮಾಡಿದಳು. ಆದರೂ ಅಂವಾ ಬದಲ್ ಆಗಲಿಲ್ಲ. ಮದುವಿ ಆದ ಮೂರು ತಿಂಗಳೊಳಗೇ ಅವನ ಮೈಯಾಗ ದೇವರು ಬರಾಕ ಸುರು ಆಯ್ತು. ಓಣ್ಯಾಗಿನ ಮಂದಿ ಯಾರೂ ಅವನ ಬಗ್ಗೆ ತುಟಿ ಪಿಟ್ ಅಂತಿರಲಿಲ್ಲ. ಹೇಳಿ ಕೇಳಿ ಅವನ ಮೈಯಾಗ ದೇವರು ಬರತೈತಿ ಶಾಪ ಗೀಪ ಕೊಟ್ಟಾನು ಅಂತ ಎಲ್ಲಾರೂ ಅವನ ಕಂಡದ್ದೇ ಕೈ ಮುಗದು ಸುಮ್ಮ ಇರತಿದ್ದರು. ಬಸವರಾಜುನ ಮೈಯಾಗ ದೇವರು ಬಂದಾಗ ಓಣ್ಯಾಗಿನ ಮಂದಿ ದೇವರ ಕೇಳಾಕ.. ಮಳಿ ಬೆಳಿ ಹ್ಯಾಂಗ ಅಂತ ತಿಳಕೊಳಾಕ ಸಾಲಕ ಕೈಮುಗಿದು ನಿಲ್ಲತಿದ್ದರು.

ಕಾಶೀಬಾಯಿ, ಸೊಸಿ ಯಮನವ್ವ ಈಗ ತುಸು ಸುಧಾರಿಸ್ಯಾಳ ಅಂತ ಗೊತ್ತಾಗಿ ಹೋಳಿ ಹುಣ್ಣಿವಿ ದಿವಸ ‘ ತಂಗಿ ಇವತ್ತ ನೀನೇ ಹೋಳಿಗಿ ಮಾಡು’ ಅಂದದ್ದೇ ಯಮನವ್ವ ಗದಗದಗದ ಹಲ್ಲ ಕಡದು ‘ಲೇ ಹುಚರಂಡಿ, ನಿನ್ನನ್ನ ಸಾಯಸದೇ ಬಿಡಲ್ಲಲೇ..’ ಅನ್ಕೊಂತ ಹೂರಣದ ಬೇಳೆ ಇರೋ ಬಗೋಣಿಯನ್ನ ಎತ್ತಿ ಒಲಿ ಮುಂದ ಬೀಸಾಕಿದಳು. ಅತ್ತಿ ಕಾಶಿಬಾಯಿಗಿ ಸಿಟ್ಟು ಬಂದು ಅಡುಗಿಮನಿ ಮೂಲಿಯೊಳಗಿನ ವಡಗಟಗಿ ತಗೊಂಡು ‘ ಬೋಸ್ಡಿ ಹಳಾ ಬೋಸ್ಡಿ, ನಿನಗೆ ನನ್ನ ಸೊಸಿನೇ ಬೇಕಿತ್ತನೂ.. ?’ ಅಂತ ಹೊಡಿಲಿಕ್ಕ ಹೋದಳು. ಯಮನವ್ವ ವಿಕಾರವಾಗಿ, ಜೋರಾಗಿ ನಕ್ಕೊಂತ ‘ನನ್ನನ್ನ ಬರೀ ಮುಟ್ಟಲೇ ನೊಡಮ್ಮು..’ ಅನ್ಕೊಂತ ಆಕಿನ್ನ ನುಗಸಿಕೊಟ್ಟಳು. ಕಾಶೀಬಾಯಿ ಹೋಗಿ ದಪ್ಪಂತ ಮೂಲ್ಯಾಗ ಬಿದ್ದಳು.

ಆಗ ಕೊಕ್ಕೊಕ್ಕ ಅಂತ ನಕ್ಕೊಂತ ‘ ನಾನು ಯಾರಂತ ಮಾಡೀಯಲೇ ಚಂಡಿ, ಚಂಡ್ರವ್ವ..ನಿನ್ನನ್ನ ಮುಗಸದೇ ಹೋಗಲ್ಲಲೇ..’ ಅನ್ಕೊಂತ ತುಂಬಿದ ಕೊಡ ಎತ್ತಿ ಕಾಶೀಬಾಯಿ ಮ್ಯಾಲ ಒಗಿಲಾಕ ಹೋಗಿದ್ದೇ ತಡ ದೇವರು ಕೋಲಿಯೊಳಗ ಮಗನ ಮೈಯಾಗ ದೇವರು ಎದ್ದು ಬಿಟ್ತು. ಕಾಶಿಬಾಯಿ ಮಗನ ಸನ್ಯಾಕ ಹೋಗಿ ‘ದೇವರ, ಆ ದೆವ್ವನ್ನ ಆಕಿ ಮೈಯಾಗಿಂದ ಓಡಸು..’ ಅಂದಾಗ ಮಗ ಬಸವರಾಜು ‘ ಏ ಕಾಶೀಬಾಯಿ, ನೀನು ಆ ದುಷ್ಟ ಶಕ್ತಿಯ ಸಹವಾಸಕ್ಕ ಹೋಗಬ್ಯಾಡ, ಹುಷಾರಿಗಿರು. ಅದನ್ನ ತಡವಬ್ಯಾಡ.’ ಅಂದದ್ದೇ ಕಾಶೀಬಾಯಿ ಸೀದಾ ಮತ್ತ ಚನ್ನಯ್ಯ ಮುತ್ಯಾನ ಮನಿಗಿ ನಡದಳು.

ಮಗನ ಮದುವಿ ಮಾಡಿದ್ದೇ ಸೊಸಿ ಬಂದ ಮ್ಯಾಲ ತುಸು ಆರಾಮ ಸಿಕ್ಕೀತು ಅಂತ ಲೆಕ್ಕಾ ಹಾಕಿರೋ ಕಾಶೀಬಾಯಿ ಹಣೆಬರಹ ಹಿಂಗಲಿಲ್ಲ. ದಿನ್ನಾ ತಾನೇ ಕೆಲಸ ಮಾಡಬೇಕಿತ್ತು. ಹಬ್ಬ ಹುಣ್ಣವಿ ಇದ್ದಾಗ ಮಗನ ಮೈಯಾಗ ದೇವರು, ಸೊಸಿ ಮೈಯಾಗ ದೆವ್ವ ಏಳೂದು ನೋಡಿ ಆಕಿಗಿ ಗಮತ್ ಅನಸತಿತ್ತು. ಇದ್ಯಾಕ ಹಿಂಗ ಅಂತ ತಿಳಿಲಾರದಂಗ ಆಗಿತ್ತು. ಓಣ್ಯಾನ ಮಂದಿ ಕಾಶೀಬಾಯಿಗಿ ಪಾಪ ಏನೋ ಕಾಡಾಟ ಸುರು ಆಗೈತಿ ಯಾಕಂದರ ಮಗನ ಮೈಯಾಗ ದೇವರು, ಸೊಸಿ ಮೈಯಾಗ ದೆವ್ವ, ಬರೂದು ಚಲೋ ಲಕ್ಷಣಂತೂ ಅಲ್ಲ. ಆ ಮನಿತನಕ್ಕ ಶಾಪ ಇದ್ದಂಗ ಐತಿ ಅಂತ ಮಾತಾಡೊದು ಕೇಳಿ ಇದಕ್ಕ ಏನು ಮಾಡಬೇಕು ಅಂತ ಆಕಿಗೂ ತಿಳಿಲಾರದಂಗ ಆಯ್ತು. ಚನ್ನಯ್ಯ ಮಂತ್ರಿಸಿ ಕೊಟ್ಟ ತಾಯತ, ಬೂದಿ, ಲಿಂಬು, ಅಕ್ಕೀ ಕಾಳು ಯಾವುದೂ ಕೆಲಸಕ್ಕ ಬರಲಿಲ್ಲ. ಆ ಮಳ್ಳೂರಲ್ಲಿ ಮಾತ್ರ ಅಲ್ಲ, ಸುತ್ತ ಹತ್ತು ಹಳ್ಳಿಗೂ ಕಾಶೀಬಾಯಿ ಮಗ ಮತ್ತು ಸೊಸಿ ಸುದ್ದಿ ಆಗಿದ್ದರು.

ಅವತ್ತೊಂದಿನ ಟಿ.ವಿ. ಯವರು ಈ ದೇವರು ಬರೋ ಮಗ, ದೆವ್ವ ಹಿಡದಿರೋ ಸೊಸಿಯನ್ನ ಕಿರು ತೆರೆಯಲ್ಲಿ ತಾಸಗಟ್ಟಲೆ ತೋರಿಸಿದ್ದೇ ಇಡೀ ರಾಜ್ಯದ ತುಂಬಾ ಸುದ್ದಿ ಆಗಿ, ಮರುದಿನ ಆ ಮಳ್ಳೂರಿಗೆ ಗುಲಬರ್ಗಾದಿಂದ ಸುರೇಶ ಅನ್ನೋ ಹೆಸರಿನ ವಿಜ್ಞಾನಿಯೊಬ್ಬ ತನ್ನ ಮೂರ್ನಾಲ್ಕು ಹುಡುಗರೊಂದಿಗೆ ಆ ಮುಳ್ಳೂರಿಗೆ ಬಂದು ಟೆಂಟ್ ಹಾಕಿದ. ಮಳ್ಳೂರಿನ ಬಾಜೂ ಹಳ್ಳಿ ಮೂಡೂರಿನೊಳಗ ನಡಿಯೋ ಬಾನಾಮತಿಯನ್ನ ಬಯಲು ಮಾಡಿ, ಭೇಷ ಅನಸಿಕೊಂಡಿರೋ ಈ ಸುರೇಶಗೆ ಈ ಕಾಶೀಬಾಯಿ ಮನಿಯೊಳಗ ಮುಖಾಮುಖಿಯಾಗಿರೋ ದೆವ್ವ ಮತ್ತ ದೇವರನ್ನ ನೋಡೊ ಅವಕಾಶ ಸಿಕ್ಕತು. ಮೊದಮೊದಲ ಏನು ಮಾಡದರೂ ಮಾತಾಡಲಿಕ್ಕ ಒಲ್ಲೆ ಅಂದ ಕಾಶೀಬಾಯಿ, ಊರಾಗಿನ ಮಂದಿ ಸುರೇಶನ ಬಗ್ಗೆ ಬಾಳ ಹೇಳದ ಮ್ಯಾಲ ಹುಂ ಅಂದಳು. ಆಕಿ ಬಾಯಿಂದ ಎಲ್ಲಾ ಕೇಳದ ಮ್ಯಾಲ ಸುರೇಶ ಒಬ್ಬನೇ ನಗಾಕ ಸುರು ಮಾಡದ. ಕಾಶೀಬಾಯಿ ತನ್ನ ಸೊಸಿ ಮತ್ತ ಇಂವಗ ಎಲ್ಲೆರೆ ಬಡದಳೊ ಹ್ಯಾಂಗಂತ ಗಾಭರಿಯಾಗಿ ‘ಸಾಯೇಬರ ಯಾಕ ನಗಾಕತ್ತೀರಿ..?’

‘ದೇವರು ..ದೆವ್ವ ಎರಡೂ ಒಂದೇ ಮನಿಯೊಳಗ..?’

‘ ಹೌದರಿ ಸೈಬರ ನಾ ಯಾಕ ಸುಳ್ಳು ಹೇಳಲಿ..?’

‘ ನಿಮ್ಮ ಊರಿಗಿ ಮಳ್ಳೂರು ಅಂತ ಯಾಕ ಹೆಸರ ಬಂತು..?’

‘ ನನಗೂ ಗೊತ್ತಿಲ್ಲರಿ.. ನಾ ನಿಮ್ಮಷ್ಟು ಓದದಕ್ಕಿ ಅಲ್ಲರಿ.’

‘ ಅದನ್ನ ಬಿಡ್ರಿ.. ನನಗ ನಿಮ್ಮ ಮನಿಯೊಳಗ ನಾಕು ದಿನ ಇರಾಕ ಜಾಗಾ ಬೇಕು’

‘ ಆಯ್ತು ಇರ್ರಿ..’

‘ ನಿಮ್ಮ ಮನ್ಯಾಗ ಬ್ಯಾಡ, ನಿಮ್ಮ ಪಕ್ಕದ ಮನ್ಯಾಗ ಇರ್ತೀವಿ’

‘ ನೀವು ಹೆಂಗ ಅಂತೀರಿ ಹಂಗ. ಅದೇನು ಬ್ಯಾರೇ ಅಲ್ಲ ಅದೂ ನಮ್ಮ ಮೈದಂದು’

‘ ನಿಮ್ಮ ಮೈದ ಬಿಟ್ರ ನಾವು ಅಲ್ಲಿ ಇರೂದು ಯಾರಿಗೂ ಗೊತ್ತಾಗಬಾರದು’

‘ಆಯತರಿ ನೀವು ಹ್ಯಾಂಗ ಅಂತೀರಿ ಹಂಗ’

‘ ನೋಡ್ರಿ ಕಾಶೀಬಾಯಿ ನಾಕು ದಿಂದಾಗ ಈ ದೆವ್ವ..ದೇವರು ಎರಡರ ಹಕೀಕತ್ ಹೇಳ್ತೀವಿ’

‘ಅಟ್ಟು ಮಾಡಿ ಪುಣ್ಯಾ ಕಟಗೋರಿ ನಮಗೂ ಸಾಕಾಗೈತಿ’

ನಾಕು ದಿನ ಅಲ್ಲೇ ಬಾಜೂ ಮನಿಯೊಳಗ ಉಳದು ಅತ್ತಿ, ಸೊಸಿ, ಮಗ ಮಾತಾಡೂದನ್ನ ಲಕ್ಷಗೊಟ್ಟು ಕೇಳತಿದ್ದರು. ಅಗತ್ಯ ಬಿದ್ದಲ್ಲಿ ರೆಕಾರ್ಡಿಂಗ್ ಮಾಡಿದ್ದರು. ಸೊಸಿ ಮೈಯಾಗ ದೆವ್ವ ಬಂದಿದ್ದು, ಮಗನ ಮೈಯಾಗ ದೇವರು ಎರಡನ್ನೂ ಕೇಳಿದ್ದರು. ಅಲ್ಲೇನೂ ರಹಸ್ಯ ಇರಲಿಲ್ಲ. ಎಲ್ಲಾ ನಿಚ್ಚಳ ಇತ್ತು. ಖರೆ ಹಕೀಕತ್ ಏನಂದರ ಕಾಶೀಬಾಯಿ ಮಗ ಮತ್ತು ಸೊಸಿ ಇಬ್ಬರೂ ಮುಗ್ಗಲಗೇಡಿಗಳು. ಕೆಲಸ ಮಾಡಿ ಗೊತ್ತೇ ಇಲ್ಲದವರು. ಮನಿಯೊಳಗ ಸ್ವಲ್ಪ ಕೆಲಸ ಹೆಚ್ಚಾಗಿದ್ದೇ ಸೊಸಿ ಮೈಯೊಳಗ ದೆವ್ವ ಬರತಿತ್ತು. ಅಲ್ಲಿಗಿ ಹೋಗಿ ಬಾ.. ಕೆಲಸ ಮಾಡು, ಹೊಲಕ್ಕೆ ಹೋಗಿ ಬಾ ಅಂದದ್ದೇ ಮಗನ ಮೈಯೊಳಗ ದೇವರು ಬರತಿತ್ತು. ಅಲ್ಲಿ ಇನ್ನೊಂದು ವಿಷಯಾನೂ ಇತ್ತು. ಬಸವರಾಜು ಲಗ್ನ ಆಗಿ ಎರಡು ವರ್ಷ ಮ್ಯಾಲ ಆಗಿತ್ತು. ಇನ್ನೂ ಮಕ್ಕಳಾಗಿರಲಿಲ್ಲ. ಅಂವಾ ಮದುವಿ ಒಲ್ಲೆ ಒಲ್ಲೆ ಅಂದರೂ ಕಾಶೀಬಾಯಿ ಗಂಟ ಹಾಕಿದ್ದಳು. ಅಂವಗ ಲೈಂಗಿಕ ವಿಷಯದೊಳಗ ಮೊದಲಿಂದಲೂ ಆಸಕ್ತಿ ಕಡಿಮಿ ಅನ್ನೋದು ಅವನ ಚಿಕ್ಕಪ್ಪನ ಮಗನ ಮಾತು.

ಒಂದು ಕಡಿ ಆ ಕೀಳರಿಮೆ, ಇನ್ನೊಂದು ಕಡಿ ಸೋಂಬೇರಿತನ. ಇವೆರಡರ ನಡುವ ಅವನಿಗೆ ಕಂಡ ಹಾದಿ ಮೈಯೊಳಗ ದೇವರು ಬರೋದು. ಮಗ್ಗಲು ಹೊಅರಳಿಸಿ ಮಲಗೋ ಗಂಡ, ಮನೆಗೆಲಸದ ಒತ್ತಡ ಇವೆರಡರ ನಡುವ ಸೊಸಿ ಯಮನವ್ವಗ ಕಂಡ ಹಾದಿ ದೆವ್ವ ಬಡದಿರೋ ನಾಟಕ. ಇವರಿಬ್ಬರ ನಡುವ ಕಾಶೀಬಾಯಿ ಹಿಡದ ಹಾದಿ ಚನ್ನಯ್ಯನ ತಾಯತ, ಬೂದಿ, ಲಿಂಬು ಇತ್ಯಾದಿ ಇತ್ಯಾದಿ. ಕಾಶೀಬಾಯಿನ್ನ ಕರಸಿ, ಹಕೀಕತ್ ಎಲ್ಲಾ ಹೇಳದ. ಆಕಿಗಿ ಒಂದೇ ಸಾರಿ ನಂಬಾಕ ಆಗಲಿಲ್ಲ. ತನ್ನ ಸೊಸಿ ಇದ್ದಕ್ಕಿದ್ದಂಗ ಸಿಡಿದು ಬೀಳೂದು..ಚೀರಾಡೂದು, ಮಗನ ಮೈಯಾಗ ದೇವರು ಬರೋದು.. ಮಳಿ ಬೆಳಿ ಹೇಳೂದು ನೆನಪಾಗಿ, ಸುರೇಶ ಹೇಳೊ ಮಾತಿಗೂ ಅವರ ಆ ಮೊಂಡಾಟಗಳಿಗೂ ಸಂಬಂಧವಿದ್ದರೂ ಇದ್ದೀತೆಂದು ಅನಸಾಕ ಸುರು ಆಯ್ತು. ಸುರೇಶ ಹೇಳೋ ಮಾತು ಖರೆನೋ ಸುಳ್ಳೊ ಅನ್ನೂದು ಗೊತ್ತಾಗಬೇಕಂದ್ರ ಒಂದಷ್ಟು ದಿನ ತಾನು ತೋಟದ ಮನಿಯೊಳಗೆ ಉಳಿಯುವದೇ ಚಲೊ ಅನ್ನೋ ತೀರ್ಮಾನಕ್ಕ ಕಾಶೀಬಾಯಿ ಬಂದಿದ್ದಳು.

ಒಂದೆರಡು ತಿಂಗಳು ಆದ ಮ್ಯಾಲ ಮನಿ ಎದುರಿನ ಜಾನೂಬಾಯಿ ಕಾಶೀಬಾಯಿಗೆ ಸಿಕ್ಕು ‘ಯಕ್ಕಾ, ನೀ ಮನಿ ಬಿಟ್ಟಿದ್ದೇ ಬಂತು, ಮಗನ ಮೈಯಾಗ ದೇವರೂ ಬರಾಕತ್ತಿಲ್ಲ.. ಸೊಸಿ ಮೈಯಾಗ ಗಾಳೀನೂ ಇಲ್ಲ. ಎರಡೂ ಬಯಲಾಗ್ಯಾವ’ ಅಂತ ಹೇಳೂದು ಕೇಳಿ ಕಾಶೀಬಾಯಿಗಿ ನಂಬಿಕಿ ಬರಲಿಲ್ಲ. ‘ನೀನೀಗ ಬಂದು ಅವರ ಜೊತೆ ಉಳಿ’ ಅಂತ ಪಕ್ಕದ ಮನೆಯ ಜಾನವ್ವ ಹೇಳಿದ್ದೇ ತಡ, ಕಾಶೀಬಾಯಿಗೆ ಸುರೇಶ ಹೇಳಿದ್ದ ಮಾತು ನೇನಪಾಯ್ತು. ‘ಇಲ್ಲ ಇಲ್ಲ ನಾನು ಬರುವಂಗಿಲ್ಲ. ಹಂಗೇನಾದರೂ ಬಂದ್ರೆ ಮತ್ತ ಮಗನ ಮೈಯಾಗ ದೇವರು, ಸೊಸಿ ಮೈಯಾಗ ದೆವ್ವ ಎರಡೂ ಎದ್ದು ಕುಣಿಯಾಕ ಸುರು ಮಾಡ್ತಾವ. ಕುತ್ಗೊ ಚಾ ಮಾಡ್ತೀನಿ’ ಅಂತ ಕಾಶೀಬಾಯಿ ಒಳಗ ನಡದಳು. ಜಾನವ್ವಗ ಆಕಿ ಮಾತು ಒಗಟಿನ ತರಾ ಅನಿಸಿತ್ತು. ತಿಳಕೋಳಾಕ ಹೋದಷ್ಟು ಅದು ಬಾಳ ಬಿರಿ ಅನಸತಿತ್ತು.

‍ಲೇಖಕರು avadhi

27 June, 2013

1 Comment

  1. Gopaal Wajapeyi

    ಜೋಗೂರ ಸಾಹೇಬ್ರ… ಏನ್ ಗಮ್ಮತ್ಲೇ ಬರ್ದೀರೀ ಎಪ್ಪಾ… ನನಗ ನಮ್ಮ ಓಣೀ ಕರಡೀಕಾಲ್ ಎಲ್ಲವ್ವ ಮತ್ತ ಆಕಿ ಸೋಸಿ ಕರಿಂಡಿ ಕಳ್ಳಿ ಕಮಲವ್ವನ ನೆಪ್ಪು ಬಂತ್ ನೋಡ್ರಿ… ಬೇಶ್ ಬರದೀರಿ ಬಿಡ್ರಿ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading