ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಮತ್ತು ಬಿಳಿ ಬಟ್ಟೆಯೆಂಬ ಚೊಚ್ಚಲ ಕೂಸು

ಸ್ಮಿತಾ ಅಮೃತರಾಜ್, ಸಂಪಾಜೆ

ಇತ್ತೀಚೆಗೆ ಕಥಾಲೋಕಕ್ಕೆ ಸೇರ್ಪಡೆಯಾದ  ಮತ್ತೊಂದು ಚೊಚ್ಚಲ ಕಥಾ ಕೂಸು ಆಶಾ ಜಗದೀಶರ ’ ಮಳೆ ಮತ್ತು ಬಿಳಿಬಟ್ಟೆಯೆಂಬ ’  ಕಥಾ ಸಂಕಲನ.

ಆಶಾ ಈಗಾಗಲೇ ಕವಿತೆ, ಪ್ರಬಂಧ, ಲೇಖನ, ಅಂಕಣ ,ಅಂತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.  ಕವಿತೆ ಮತ್ತು ಪ್ರಬಂಧಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದವರು. ತೀರಾ ಎಳೆ ವಯಸ್ಸಿನಲ್ಲಿಯೇ ಕನ್ನಡದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಿಕೊಂಡವರು.  

ಅವರ ಎಲ್ಲಾ ಬರಹಗಳನ್ನು ಆಸ್ಥೆಯಿಂದ ಓದಿ ಕೊಂಡು ಬಂದವಳು ನಾನು.  ಹಾಗಾಗಿ ಅವರ ಚೊಚ್ಚಲ ಕಥಾಸಂಕಲನದ ಕುರಿತು ನನಗೆ ಸಹಜವಾಗಿ ಕುತೂಹಲವಿತ್ತು. ಸಿಕ್ಕಾಕ್ಷಣ ಬೆರಗಿನಿಂದ ಓದುತ್ತಾ ಹೋದೆ. ಅಚ್ಚರಿಯಾಯಿತು.  ಈಗ ಆಶಾ ಕತೆಗಾರ್ತಿಯಾಗಿ ಕೂಡ ಸೈ ಅನ್ನಿಸಿಕೊಂಡದ್ದು ಅವರ ಸಾಹಿತ್ಯ ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.

ನೇಕಾರ ಪ್ರಕಾಶನ ಹೊರತಂದ ಆಶಾರ ’ ಮಳೆ ಮತ್ತು ಬಿಳಿ ಬಟ್ಟೆಯೆಂಬ ’  ಕಥಾಸಂಕಲನ ೧೫ ಕಥೆಗಳ ಗುಚ್ಚ.  ಇಲ್ಲಿಯ ಹೆಚ್ಚಿನ ಬರಹಗಳು ಹೆಣ್ಣಿನ ಅಂತರಂಗ, ಅವಳ ಒಳತೋಟಿ, ಶೋಷಣೆಯಂತ ಅವಳೊಳಗಿನ ಸುಪ್ತ ಪ್ರಪಂಚವನ್ನ ಇಲ್ಲಿಯ ಕತೆಗಳು ಬಗೆದು ತೋರಿಸುತ್ತವೆ. ಇಲ್ಲಿ ಶೋಷಣೆಗೆ ಎಷ್ಟೊಂದು ಮುಖಗಳು? ಎಷ್ಟೊಂದು ಆಯಾಮಗಳು? ಇವುಗಳು ಹೊರನೋಟಕ್ಕೆ ಸುಲಭಕ್ಕೆ ಗೋಚರಿಸುವಂತದ್ದಲ್ಲ. 

ಹೆಣ್ಣೊಬ್ಬಳು ಮಾತ್ರವೇ ಅನುಭವಿಸಬಹುದಾದ ಈ ಸಂಕಟಗಳನ್ನ ಇಣುಕಿ ನೋಡಿದರೆ ಬೆಚ್ಚಿ ಬೀಳಿಸುವಂತದ್ದು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೇಲಿ ಇರುವುದು, ಕಟ್ಟಳೆ ಇರುವುದು, ಅವುಗಳೊಳಗೆ ಇದ್ದೂ ಅಪಾದನೆ ಅನುಭವಿಸುವುದು ಹೆಣ್ಣೊಬ್ಬಳು ಮಾತ್ರ.  ಹಾಗಾದರೆ ಬೇಲಿ ಜಿಗಿದು, ಬದುಕನ್ನೇ ಬಯಲಾಗಿಸಿ ಸ್ವೇಚ್ಚೆಯಿಂದ  ಬದುಕಿದರೂ  ಗಂಡಿನ ಪಾತ್ರವನ್ನು ಯಾರೂ ಇಲ್ಲಿ ಚಕಾರ ಎತ್ತುವುದಿಲ್ಲ ಅನ್ನುವ ಕಟು ಸತ್ಯವನ್ನ ಇಲ್ಲಿಯ ಕತೆಗಳು  ಅನಾವರಣಗೊಳಿಸುತ್ತವೆ.

ಹೆಣ್ಮಕ್ಕಳೇ ಹಾಗೇ,  ನಮ್ಮ ಅನುಪಸ್ಥಿತಿಯಲ್ಲಿ ಇತರರ ಬದುಕು ದಡ ಕಾಣಲಾರದು ಅಂತ ವೃಥಾ ಕೊರಗುತ್ತಾ, ಮತ್ತೇನನ್ನೋ ಕಲ್ಪಿಸಿಕೊಳ್ಳುತ್ತಾ  ವ್ಯಥೆ ಪಡುತ್ತಿರುತ್ತಾರೆ. ಅಸಲಿಗೆ ಹಾಗೇನೂ ಘಟಿಸುವುದಿಲ್ಲ. ಆದರೆ ಯಾರೂ ಇರಲಿ, ಹೋಗಲಿ, ಬದುಕು ಕಾಲನ ಪ್ರವಾಹದಲ್ಲಿ ಸೆಳೆದುಕೊಂಡು ಹೋಗುತ್ತಲೇ ಇರುತ್ತದೆ.  

ಕಾಡಿದ ಘಟನೆಯೊಂದು ತಾನೇ ಎಂದು ಭ್ರಮಿಸುತ್ತಾ ಕನಸಿನಲ್ಲಿ ಇಲ್ಲಿ ಹುಟ್ಟುವ ಕತೆಯೊಂದು ವಾಸ್ತವ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ. ಬಹುಷ; ಇದು ಬಹುತೇಕರ ಬದುಕಿನಲ್ಲಿ  ಬಂದೆರಗುವ  ಘಟನೆಯೇ. ಆದರೆ ನಮ್ಮ ಭ್ರಾಮಕ ಜಗತ್ತಿಗೂ ತೆರೆದುಕೊಳ್ಳುವ ವಾಸ್ತವಕ್ಕೂ ಎಷ್ಟು ಅಜಗಜಾಂತರ ವ್ಯತ್ಯಾಸವಿರುತ್ತದೆ ಅಂದುಕೊಂಡಾಗ ಎದೆ ತಲ್ಲಣಿಸದೇ ಇರಲಾರದು.

ಹದಮೀರಿದರೆ ಮೋಹವೂ ದಾಹವಾಗಿಬಿಡುವ  ಸಂಗತಿಯನ್ನು  ಬೆಳಕು ಚೆಲ್ಲುತ್ತಲೇ  ಮೈ  ಮತ್ತು ಮನಸುಗಳ ದಾಹವನ್ನು ಇಲ್ಲಿಯ ಕತೆಗಳು ಪ್ರಕಟಪಡಿಸುತ್ತವೆ. ಇಲ್ಲಿಯ ಕತೆಗಳ ಕೇಂದ್ರ ಬಿಂದು ಸ್ರೀ ಜಗತ್ತೆ. ಹೆಣ್ಣೊಬ್ಬಳು ಅತ್ತ ಹುಟ್ಟಿದ ಮನೆಗೂ ಸಲ್ಲದೆ, ಇತ್ತ ಸೇರಿದ ಮನೆಗೂ ಸಲ್ಲದೆ ,ತನ್ನ ಮನೆಯಲ್ಲಿಯೇ ತನಗೊಂದು ಅಸ್ಥಿತ್ವವಿರದೆ  ಪಡಿಪಾಟಲು ಪಡುವ ಒಂದು ರೀತಿಯ ಘೋರ  ಚಿತ್ರಣಗಳನ್ನ ಆಶಾ ಕಣ್ಣಿಗೆ ಕಟ್ಟುವಂತೆ ತೆರೆದಿಡುತ್ತಾರೆ.

ಜೀವ ಸೆಲೆಯನ್ನು ಕಾಪಿಡುವ ಹಿತ್ತಲ ಬಾವಿಯಲ್ಲಿ ಅದೆಷ್ಟು ಹೆಣ್ಮಕ್ಕಳು ಸದ್ದಿಲ್ಲದೆ ಸಮಾಧಿಯಾಗಿ ಬಿಡುತ್ತಾರೆ? ಇಂತಹ ಕತೆಗಳನ್ನು ಇಲ್ಲಿ ಓದಿದಾಗ ಇಂತಹ ಮತ್ತಷ್ಟು್  ಕತೆಗಳು ನಮ್ಮ ಮುಂದೆ ತೆರೆದುಕೊಂಡು ಎದೆಭಾರವಾಗುತ್ತದೆ.  ಎಲ್ಲ ಸಂಕಟಗಳನ್ನ  ಮೀರಿ ದಿಟ್ಟವಾಗಿ ಬದುಕು ಕಟ್ಟಿಕೊಂಡ ಹೆಣ್ಮಕ್ಕಳಿಗೆ ನಮ್ಮ ಸಮಾಜದಲ್ಲಿ ಕುಹಕ, ನಿಂದನೆ ಬಿಟ್ಟರೆ ಬೇರೇನೂ ರಾಜೋಚಿತ ಸನ್ಮಾನ ಇಲ್ಲಿ ಸಿಗದು ಅನ್ನುದು ದಿಟ.

ಆಶಾರ ಕತೆಗಳು ಹೇಳುವುದು ಇದನ್ನೇ.  ಅವರ ಕತೆಯಲ್ಲಿ ಬರುವ  ’ ಗಂಡಿನ ಶೀಲ ಯಾವಾಗಲೂ ಪ್ರಶ್ನಾತೀತಾ, ಹೆಣ್ಣಿನ ಶೀಲ ಯಾವೊತ್ತೂ ಸಂದೇಹಾತೀತ ’ ಅನ್ನುವ ಮಾತುಗಳು ಎಷ್ಟು ನೈಜ ಸತ್ಯ, ಆಶಾಗೆ, ಬದುಕಿನ ಪ್ರತೀ ಘಟನೆಯನ್ನು  ತೀರಾ ಹತ್ತಿರಕ್ಕೆ ತಂದು ಮತ್ತು ಆಳವಾಗಿ  ನೋಡುವಂತಹ ಒಂದು ಮನಸ್ಥಿತಿಯಿದೆ.

ಹಾಗಾಗಿ ಕಂಡ ಒಂದು ಸಂಗತಿ, ಕಾಡಿದ ಒಂದು ಎಳೆ  ಅವರಿಗೆ ಕಥಾ ಹಂದರವಾಗುತ್ತದೆ.  ಪ್ರತಿಯೊಬ್ಬರ ಬದುಕು ಮೇಲು ನೋಟಕ್ಕೆ ಕಂಡಷ್ಟು ಸಲೀಸಲ್ಲ. ಅಗೆದರೆ ನೋವಿನ ಕಂದಕವೇ. ಅಲ್ಲಿ ಎಷ್ಟೊಂದು ನೋವಿನ ಕತೆಗಳು ಮುಲುಗುಟ್ಟುತ್ತವೆ? ಹೊರಬರಲಾರದೆ ಪರಿತಪಿಸಿಕೊಂಡಿರುತ್ತವೆ? ಅನ್ನುವಂತದ್ದು ಇಲ್ಲಿಯ ಕತೆಗಳಲ್ಲಿ ಹರವಿಕೊಂಡಿದೆ.

ಆಶಾ ಸಂವೇದನಾ ಶೀಲ ಬರಹಗಾರ್ತಿ.  ಬದುಕಿನ  ಸಂಗತಿಗಳು ಆಕೆಗೆ ತಟ್ಟದ  ವಿನ: ಆಕೆ ಬರಹಕ್ಕಿಳಿಯಲಾರರು. ಆದರೆ  ಆಕೆಗೆ ತುಸು ಹೆಚ್ಚೇ  ಭಾವುಕತೆ  ಇರುವ ಕಾರಣ  , ಅವರಿಗೆ ಅಲ್ಲಿ, ಇಲ್ಲಿ,  ಎಲ್ಲೋ ಕಂಡ  ದು:ಖ ಭರಿತ ಸನ್ನಿವೇಶಗಳು ಅವರನ್ನು ಬಾಧಿಸುತ್ತವೆ.  ಆ ಕಾರಣದಿಂದ ಆಕೆಗೆ  ಎಲ್ಲಾ ತಾಕುವ ಸಂಗತಿಗಳು ಬರಹಕ್ಕೆ ವಸ್ತುವೇ. 

ಇಂತಹ ಆರ್ಧ್ರ ಅಂತ:ಕರಣ ಕತೆಗಾರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಡೊಯ್ಯಬಲ್ಲದು.  ಆದರೆ  ಕೆಲವೊಮ್ಮೆ ಲೇಖಕಿ ಇಲ್ಲಿ ಪ್ರತೀ ಘಟನೆಯನ್ನು ಬರೇ ಪಾತ್ರವಾಗಿ ನೋಡದೆ,  ತಾವೇ ಮಧ್ಯ ಪ್ರವೇಶಿಕೆ ಮಾಡಿ ತಮ್ಮ ಅನಿಸಿಕೆ, ಸಮರ್ಥನೆ, ಸಿದ್ಧಾಂಥಗಳನ್ನ ಕೊಡುತ್ತಾ ಹೋಗುತ್ತಾರೆ. ಹಾಗಾಗಿ ಕತೆ ಕೆಲವೊಮ್ಮೆ ವಾಚಾಳಿಯಾಗಿ , ಬಂಧ ಸಡಿಲಾಗಿಬಿಡುವ  ಸಂಭವವೇ ಹೆಚ್ಚು.

ಇದು ಆಶಾರ ಚೊಚ್ಚಲ ಕತಾ ಸಂಕಲನ  ಮತ್ತು ಆರಂಭಿಕ ಕತೆಗಳು ಆದ ಕಾರಣ ಇದು  ಸಹಜ. ಮುಂದಿನ ಅವರ ಕಥಾ ಪ್ರಪಂಚ ಮತ್ತಷ್ಟು ವಿಸ್ತರಿಸಿಕೊಂಡು, ಹದಗೊಂಡು , ಮಾಗಿ, ಮತ್ತಷ್ಟು ಪಕ್ವತೆಯತ್ತ ಸಾಗಬಲ್ಲದು ಅನ್ನುವ ಭರವಸೆಯಿದೆ.  ಆಶಾ ಜಗದೀಶ್ ರಿಗೆ ಅಭಿನಂದನೆಗಳು.

‍ಲೇಖಕರು Avadhi

12 November, 2020

2 Comments

  1. Vasundhara k m

    ಚೆನ್ನಾಗಿ ವಿಶ್ಲೇಷಿಸಿರುವಿರಿ ಸ್ಮಿತಾ..

  2. Sangeetha raviraj

    ಅಭಿನಂದನೆಗಳು ಆಶಾರವರಿಗೆ. ಚೆನ್ನಾಗಿ ಬರೆದಿದ್ದಾರೆ ಸ್ಮಿತಕ್ಕ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading