ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಬಂತೋ ಮಳೆ..

ಮೊದಲ ಮಳೆ..

ಅನಿತಾ ನರೇಶ್ ಮಂಚಿ

ಚಿತ್ರಗಳು: ರಾಮ್ ನರೇಶ್ ಮಂಚಿ

ಈ ಮ ಮೊದಲ ಮಳೆ ಎನ್ನುವುದು ನಮ್ಮನ್ನು ಎಷ್ಟು ಆಟ ಆಡಿಸುತ್ತದೆ ನೋಡಿ!

ಬರುತ್ತೇನೆ ಖಂಡಿತಾ.. ನನಗಾಗಿ ಕಾದಿರು ಚೆಲುವಾ ಎಂದು ಎಸ್ಸೆಮ್ಮಿಸಿ ಬಾರದೆ ಉಳಿವ ಪ್ರಿಯತಮೆಯಂತೆ. ಮೊದಲೇ ಫೋನ್ ಮಾಡಿ ಸ್ವೀಟ್ ಮಾಡಿಸಿಟ್ಟು ಬರದೇ ಉಳಿವ ಅಪುರೂಪದ ನೆಂಟರಂತೆ..

ಮೋಡಗಳಾದರೂ ಅಷ್ಟೆ, ಗುಂಪು ಕೂಡಿ ಗರ್ಜಿಸಿ , ನಮ್ಮ ತೋಟದ ಮೇಲೇ ಸುರಿಯುತ್ತೇವೆಂದು ಭರವಸೆ ಮೂಡಿಸಿ, ನಂತರ ರಾಜಕಾರಿಣಿಗಳು ಆಶ್ವಾಸನೆ ಕೊಟ್ಟಂತೆ ಮರೆತೇ ಬಿಡುತ್ತವೆ. ನಮ್ಮಲ್ಲಿಗೆ ಸಾಂಕ್ಷನ್ ಆದ ಸಾಲ ಇನ್ನಾರೊ ವಶೀಲಿ ನಡೆಸಿ ಪಡೆದುಕೊಂಡಂತೆ ಬೇರೆಲ್ಲೊ ಹನಿಗರೆದು ನಮ್ಮನ್ನು ತೊರೆದು ಹೋಗಿಯೇ ಬಿಡುತ್ತವೆ.

ಈ ಸಮಯದಲ್ಲಿ ನೀವೇ ನೋಡಿರಬಹುದು ಕೆಲವು ದ್ವಿಚಕ್ರವಾಹನಿಗರನ್ನು.. ನೀವು ಬಿಸಿಲಲ್ಲಿ ಬೆವರುಕ್ಕಿಸುತ್ತಾ ನಿಂತಿದ್ದಾಗ ಅವರು ಒದ್ದೆ ಅಂಗಿಯ ಮೇಲೆ ರೈನು ಕೋಟೆಂಬ ದೊಗಲೆ ಅಂಗಿಯ ಧಾರಣೆ ಮಾಡಿ ನಿಮ್ಮ ಕಣ್ಣೆದುರಿಗೆ ಬುರ್ ಎಂದು ದೂಳೆಬ್ಬಿಸುತ್ತಾ ಸಾಗುವುದನ್ನು ..ಅಲ್ಲಲ್ಲಿ ಮಳೆ ಎಂಬ ಹವಾಮಾನದ ವರದಿ ನೆನಪಿಗೆ ಬಂದರೂ ಬಂದೀತು. ಇದು ಮೊದಲ ಮಳೆಯ ಚುಂಬನದ ಪ್ರಬಾವ..

ಇನ್ನೂ ಕೆಲವೊಮ್ಮೆ ನೀವು ಮಳೆರಾಯನ ಸ್ವಾಗತಕ್ಕೆ ಬಹುವಾಗಿ ತಯಾರಿ ಮಾಡಿರುತ್ತೀರಿ. ತೋಟದವರಾದರೆ, ಒಣಗಬೇಕಿದ್ದ ಬೆಳೆಗಳನ್ನು ಪ್ಲಾಸ್ಟಿಕ್ ಹೊದಿಕೆ ಹೊದೆಸಿ ಮಲಗಿಸಿ ಲಾಲಿ ಹಾಡಿರುತ್ತೀರಿ. ಪೇಟೆಯವರಾದರೆ ರಾತ್ರಿ ಒಗೆದ ಬಟ್ಟೆಗಳನ್ನೆಲ್ಲ,ವಿಕ್ರಮ ಮತ್ತು ಬೇತಾಳನ ಕಥೆಯಲ್ಲಿರುವ ಮರದಲ್ಲಿ ನೇತಾಡುವ ಬೇತಾಳನಂತೆ ಹ್ಯಾಂಗರ್ ಗಳಲ್ಲೇ ನೇಲಿಸಿರುತ್ತೀರಿ. ಇದನ್ನೆಲ್ಲ ನೋಡಿಯೇ ಮಳೆ ಹೆದರಿ ನಿಮ್ಮ ಕಡೆ ಸುಳಿಯುವುದೇ ಇಲ್ಲ. ಒಂದು ದಿನ ಉದಾಸೀನ ಮಾಡಿ ನೋಡಿ. ಆ ದಿನದ ಮಳೆಯ ಕೋಟಾ ನಿಮ್ಮ ಅಂಗಳಕ್ಕೇ..

ಮಕ್ಕಳಂತೂ ಕಾದು ಕಾದು ಕುತ್ತಿಗೆ ಉದ್ದ ಆಗಿರುತ್ತದೆ ಈ ಮಳೆಯ ಸಂಬ್ರಮಕ್ಕೆ. ರಜಾ ಕಾಲವೂ ಆದುದರಿಂದ ಮೊದಲ ಮಳೆಯಲ್ಲಿ ಕುಣಿದಾಡಲು ಸಾಕಷ್ಟು ಆಸೆಯಿಂದಲೇ ಇರುತ್ತಾರೆ.ದೊಡ್ಡವರ ಕಾಟಾಚಾರದ ಗದರಿಕೆಗೆ ಬಗ್ಗದೆ ನೀರು ನಿಲ್ಲುವ ಹೊಂಡಗಳ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿರುತ್ತಾರೆ. ಮಳೆ ಬರುವುದೇ ತಡ ಇವರ ದೋಣಿ, ಹಡಗುಗಳು ಸರತಿಯ ಸಾಲಿನಲ್ಲಿ ಹೊರಡುತ್ತವೆ.

ಮೊದಲ ಮಳೆಯ ಇನ್ನೂ ಒಂದು ಅವಾಂತರದ ಬಗ್ಗೆ ಕೇಳಿ, ಇದು ಇಂದಿನದಲ್ಲ.. ಹಿಂದಿನದು..

ನಾವು ಚಿಕ್ಕವರಿದ್ದಾಗಿದ್ದ ವಠಾರವದು.ಪಕ್ಕದ ಮನೆಯವರು ಹತ್ತಿರದ ನದಿಗೆ ಬಟ್ಟೆ ಒಗೆಯಲು ಎಂದಿನಂತೆ ಅಂದೂ ಹೊರಟಿದ್ದರು.ಬಟ್ಟೆಯನ್ನೆಲ್ಲ ನೆನೆಸಿಟ್ಟಾಗ ಸೋಪ್ ಮರೆತು ಹೋಗಿದ್ದು ಗೊತ್ತಾಯಿತು. ಕೂಗಳತೆಯಲ್ಲೇ ಇದ್ದ ತಮ್ಮಿಬ್ಬರು ಮಕ್ಕಳನ್ನು ಕರೆದು ಮನೆಯಿಂದ ಸೋಪ್ ತರಲು ಹೇಳಿದರು. ನೀರಲ್ಲಿ ಆಟ ಆಡುವುದರಲ್ಲೆ ಮಗ್ನರಾಗಿದ್ದ ಅವರು ಅಮ್ಮನ ಈ ಬಿಟ್ಟಿ ಕೆಲಸ ಮಾಡಲು ಸಿದ್ದರಿರಲಿಲ್ಲ. ಇನ್ನೊಮ್ಮೆ ಅಮ್ಮನ ಬೊಬ್ಬೆ ಕೇಳಿ ಇಬ್ಬರೂ ನೀನು ಹೋಗು, ನೀನು ಹೋಗು ಎಂದು ಜಗಳ ಸುರು ಮಾಡಿದರು.ಅದನ್ನು ಕಂಡು ಸಿಟ್ಟಿನಿಂದ ಅಲ್ಲೇ ಬಿದ್ದಿದ್ದ ಕೋಲನ್ನೆತ್ತಿಕೊಂಡು ಹೊಡೆಯಲು ಬಂದ ಅಮ್ಮನನ್ನು ಕಂಡು, ಸಿಕ್ಕಿದರೆ ಬೆನ್ನು ಪುಡಿಯಾಗುವುದರ ಬಗ್ಗೆ ಖಾತರಿ ಹೊಂದಿದ ಇಬ್ಬರೂ ಅವರ ಕೈಗೆ ಸಿಗದಂತೆ ಓಡಿದರು. ಕೈಯಲ್ಲಿ ಕೋಲು ಹಿಡಿದ ಅಮ್ಮ ಸುಮ್ಮನಿರುವುದುಂಟೆ..ಅವರೂ ಮಕ್ಕಳ ಹಿಂದಿನಿಂದ ಬಯ್ಯುತ್ತಾ ಬಂದರು.

ಏನೋ ವಿಚಿತ್ರ ಸ್ವರ ನದಿಯ ಕಡೆಯಿಂದ.. ಇವರು ನೋಡುತ್ತಿದ್ದಂತೇ ನದಿಯಲ್ಲಿ ನೀರು ರಭಸದಿಂದ ಮೇಲೆ ಬರತೊಡಗಿತು. ಒಗೆಯುವ ಕಲ್ಲಿನಲ್ಲಿ ಮುದ್ದೆ ಮಾಡಿಟ್ಟಿದ್ದ ಬಟ್ಟೆಗಳೆಲ್ಲಒಂದೊಂದಾಗಿ ತಮ್ಮ ಆಕಾರವನ್ನು ಮರಳಿ ಪಡೆದು ನೀರಲ್ಲಿ ಈಜಿ ಹೋಗತೊಡಗಿತು.

ಆದದ್ದಿಷ್ಟೇ.. ಗುಡ್ಡ ಪ್ರದೇಶದಲ್ಲಿ ಚೆನ್ನಾಗಿ ಮಳೆ ಬಿದ್ದಿತ್ತು. ಬಿಸಿಲು ಇನ್ನೂ ಮಾಸದೆ ಇದ್ದ ಇಲ್ಲಿ ನೀರು ಬಂದಾಗಲೇ ತಿಳಿದಿದ್ದು ಆ ವಿಷಯ. ಜೀವ ಉಳಿಸಿದ ಮಕ್ಕಳ ಜಗಳವನ್ನು ಈಗಲೂ ಬೊಚ್ಚು ಬಾಯಲ್ಲಿ ಹೇಳುತ್ತಿರುತ್ತಾರೆ.

ಮೊದಲ ಮಳೆಯ ಮಣ್ಣ ಕಂಪಿನ ಬಗ್ಗೆ ಯಾರಿಗೂ ವಿವರಿಸಬೇಕಾದ ಅಗತ್ಯವೇ ಇಲ್ಲ. ಯಾವ ರಾಯಲ್ ಸೆಂಟ್ ಕಂಪೆನಿಗೂ ಈ ಕಂಪನ್ನು ಕೋಪಿ ಮಾಡಲು ಸಾಧ್ಯವಾಗಿಲ್ಲ.

ಈಗ ಯಾರಿಗಾದರೂ ಫೊನ್ ಮಾಡಿ ನೋಡಿ. ಒಂದೆರಡು ಉಪಚಾರದ ಮಾತು ಮುಗಿದೊಡನೇ ಸುರು ಆಗುತ್ತದೆ ಪ್ರಶ್ನಾವಳಿ. ನಿಮ್ಮಲ್ಲಿ ಮಳೆ ಬಂತೇ? ಬರಿದೆ ಬಂದರೆ ಸಾಲದು ಎಷ್ಟು ಬಂತು?ಇನ್ನು ನಿಖರವಾಗಿಸಲು ಎಷ್ಟು ಗಂಟೆಗೆ ಬಂತು? ಎಂಬುದನ್ನೂ ಸೇರಿಸುತ್ತಾರೆ.

ಅಯ್ಯೊ! ನಾನಿಲ್ಲಿ ನಿಮ್ಮೊಂದಿಗೆ ಮಾತು ಬೆಳೆಸುತ್ತಾ ಇದ್ದೇನೆ.. ಹೊರಗೆ ಅಂಗಳದಲ್ಲಿ ನಾನು ಒಣಗಲು ಇಟ್ಟಿದ್ದ ಸಂಡಿಗೆಗೆ ಮಳೆ ಬೀಳುತ್ತಿದೆ. ಹುಶ್..! ಸ್ವಲ್ಪ ಸುಮ್ಮನಿರಿ ಮಳೆಯ ಸದ್ದು ಕೇಳಿಸುತ್ತಿದೆ. ನಾನು ಹೊರಟೆ ಮೊದಲ ಮಳೆಯನ್ನು ಸ್ವಾಗತಿಸಲು..

 

‍ಲೇಖಕರು G

22 July, 2011

10 Comments

  1. vijayraj

    +2 … 🙂 double like 🙂

  2. Tejaswini Hegde

    “ಮೊದಲ ಮಳೆಯ ಮಣ್ಣ ಕಂಪಿನ ಬಗ್ಗೆ ಯಾರಿಗೂ ವಿವರಿಸಬೇಕಾದ ಅಗತ್ಯವೇ ಇಲ್ಲ. ಯಾವ ರಾಯಲ್ ಸೆಂಟ್ ಕಂಪೆನಿಗೂ ಈ ಕಂಪನ್ನು ಕೋಪಿ ಮಾಡಲು ಸಾಧ್ಯವಾಗಿಲ್ಲ” – Double liked this line..

  3. ತಿರುಶ್ರೀಧರ

    ನಿಮ್ಮ ಮಳೆಯ ಬಗೆಗಿನ ಪ್ರೀತಿ, ಅದನ್ನು ಬಣ್ಣಿಸಲು ನೀವು ಉಪಯೋಗಿಸುವ ಪರಿಭಾಷೆ ಇವೆಲ್ಲಾ ನೋಡಿ ನಾನೂ ಪುಟ್ಟವನಾಗಿ ಮಳೆ ನೀರಿನಲ್ಲಿ ಕುಣಿದು ಕುಪ್ಪಳಿಸಿದ ಸುಮಧುರ ಅನುಭವವಾಯ್ತು. ಇಂತಹ ಸುಂದರ ಮಳೆ ಆಗಾಗ ಹನಿಯುತ್ತಿರಲಿ.

  4. Roopa DP

    ಮೊದಲ ಮಳೆಗೋಸ್ಕರ ಮಾಡುವ ತಯಾರಿಗಳು…, ಪಡೆಯುವ ಸಣ್ಣ-ಸಣ್ಣ ಖುಷಿಗಳು…,ಅನುಭವಿಸುವ ತೊಂದರೆಗಳು….., ಚೆನಾಗಿ ಬರೆದಿದ್ದೀರಿ!

  5. Nanjunda Raju

    ಶ್ರೀಮತಿ ಅನಿತಾ ನರೇಶ್ ಮಂಚೆಯವರೇ, ಮಳೆ ಬಂತು ಮಳೆ ಲೇಖನ ತುಂಬಾ ಚೆನ್ನಾಗಿದೆ. ಲೇಖನದಲ್ಲಿ ಉಪಮಾಲಂಕಾರ ಹೆಚ್ಚು ಉಪಯೋಗಿಸಿರುವುದರಿಂದ ಓದಲು ತುಂಬಾ ಆಸಕ್ತಿ ಬರುತ್ತದೆ. ಇನ್ನು ಓದೋಣವೆಂದರೆ ಮುಗಿದುಹೋಗಿರುತ್ತದೆ. ಇಂತಹ ಕಥೆಗಳು ಈಗ ವಿರಳವಾಗುತ್ತಿವೆ. ನಿಮ್ಮ ಲೇಖನದೊಂದಿಗೆ ಶ್ರೀ ರಾಮ್ ನರೇಶ್ ಮಂಚೆ ಇವರ ಸುಂದರವಾದ ಪ್ರಕೂರ್ತಿ ಚಿತ್ರಗಳು ಮನಸೆಳೆಯುತ್ತವೆ. ಇವುಗಳಿಂದ ಕಥೆಗೆ ಇನ್ನು ಹೆಚ್ಚಿನ ಕಳೆ ಬರುತ್ತದೆ. ಏನಾದರು ಕಥೆ ವಾಸ್ತವಕ್ಕೆ ಹತ್ತಿರವಿದ್ದು, ಚಿಕ್ಕ, ಚೊಕ್ಕ, ಸುಂದರ ಕಥೆ ಇದಾಗಿರುತ್ತದೆ. ಇಂಥಹ ಕಥೆಗಳು ಇನ್ನು ಹೆಚ್ಚು ನಿಮ್ಮಿಂದ ನಿರೀಕ್ಸಿಸಬಹುದೇ? ವಂದನೆಗಲೊಡನೆ,

  6. bharathi

    tumba chennagide anitha …

  7. ramaprasad

    ಲೇಖನ ತುಂಬಾ ಚೆನ್ನಾಗಿದೆ

  8. Ashoka Bhat

    ಕಣ್ಸೆಳೆಯುವ ಚಿತ್ರಗಳೊಂದಿಗೆ ಮನಸೆಳೆಯುವ ನಿಮ್ಮ ವಿಶಿಷ್ಟ ಶೈಲಿಯಲ್ಲಿ ಮೊದಲ ಮಳೆಯ ಬಗ್ಗೆ ಬರೆದ ಈ ಲೆಖನ ಬಹಳ ಕುಶಿ ನೀಡಿತು. Please keep posting more and more! Thank you.

  9. Sukhesh Makkikoppa

    ಮೊನ್ನೆ ಊರಿಗೆ ಹೋಗಿದ್ದಾಗ ತುಂಬಾ ಸಮಯದ ನಂತರ ಮಕ್ಕಳು ಮಳೆ ನೀರಲ್ಲಿ ದೋಣಿ ಬಿಡೋದನ್ನ ನೋಡಿದೆ. ಫುಲ್ ಖುಷಿಯಾಯ್ತು 🙂

  10. ವಾಸುದೇವ ನವಿಲೇಕರ್

    ಚಿತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.ಬರವಣಿಗೆಯೂ ಕೂಡ ಆಕರ್ಶಕವಾಗಿದೆ.ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading