ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ, ಜೂನಿಗಳು ಮತ್ತು ಶ್ವಾನದೋಸ್ತುಗಳು

DSC00648

ಮಂಜುನಾಯಕ್ ಚೆಲ್ಲೂರ್

ಮಳೆಗೂ ಮನಸಿಗೂ ಏನೋ ನಂಟು. ಇಲ್ದಿದ್ರೆ ಮನಸಾಗುತ್ತೆ ಯಾಕೆ ಮಳೆ ಸುರಿವಾಗ ಅಂಟಂಟು. ಸುಮ್ಮನೆ ಸುರಿವ ಸೋನೆಯ ನೋಡನೋಡುತ್ತ ತಣ್ಣಗೆ ಆವರಿಸಿಕೊಂಡುಬಿಡುತ್ತೆ ಯಾವುದೋ ಭಾವ. ಸಣ್ಣಗೆ ಹಾಡಲಿಕ್ಕೆ ಶುರುವಿಟ್ಟುಕೊಳ್ಳುತ್ತೆ ಜೀವ. ಏನಂತ ಹಾಡುತ್ತೋ? ಯಾಕಂತ ಹಾಡುತ್ತೋ? ಯಾರಿಗೆ ಗೊತ್ತು. ಆಗೆಲ್ಲ ಸಪ್ಪಳ ಮಾಡದೆ ತೆರೆದುಕೊಳ್ಳುತ್ತವೆ ಮನಸೊಳಗಿನ ಯಾವ್ಯಾವುದೋ ಫೈಲುಗಳು. ಎದೆಕಾರ್ಡ್ನ ತುಂಬ ನೂರೆಂಟು ಫೋಲ್ಡರ್ರುಗಳು. ಅವುಗಳೊಳಗೆ ತಾವಾಗಿಯೇ ಸೇವ್ ಆಗಿಬಿಟ್ಟಿರುತ್ತವೆ ಸಾವಿರಾರು ಸಂಗತಿಗಳು: ನೂರೊಂದು ಸಿಹಿ, ಕಹಿ, ಉಪ್ಪು, ಹುಳಿ, ಖಾರ ನೆನಪುಗಳು. ಹಸಿಬಿಸಿ ಹಗಲುಸಪನಾ, ಕನವರಿಕೆಗಳು. ರಾಜಿಯಾಗದೆ ಹಲ್ಲುಕಚ್ಚಿ ಹೆಂಗೋ ಉಳಿದುಕೊಂಡ ಒಂದೆರಡು ಕನಸು, ಮಹಾತ್ವಾಕಾಂಕ್ಷೆಗಳು. ದಿಕ್ಕು ತೋಚದೆ ಸುಮ್ಮನೆ ಕುಳಿತಿರುವ ಮತ್ತೆರಡು ಅನಾಥ ಕನಸುಗಳು . ಸಂತೆಯ ಮದ್ಯೆ ನಿಂತ ಪೋರನಂತೆ ಉಗುಳು ನುಂಗುತ್ತಾ ನಿಂತಿರುವ ಆಸೆ, ಅತಿಯಾಸೆಗಳು. ವೈರಸ್ಸಿನಂತ ಕೆಲವು ಹಳೇ ದ್ವೇಷ ಹೊಸಾ ಹೊಟ್ಟೆಕಿಚ್ಚುಗಳು. ಚಪ್ಪಲಿಯೊಳಗಿನ ಮುಳ್ಳುಗಳಂತ ಹಳೇ ನೋವುಗಳು. ಹೇಳದೆ ಕೇಳದೆ ಅರಳಿಕೊಂಡ ಪ್ರೀತಿ ಪಾರಿಜಾತ ಇತ್ಯಾದಿಗಳು… ಹಿಂಗೆ ಏನೇನೋ.. ಯಾವ ಘಳಿಗೆಯಲ್ಲಿ ಯಾವ ಫೋಲ್ಡರ್ರಿನ ಯಾವ ಫೈಲು ತೆರೆದುಕೊಳ್ಳುತ್ತೋ ಯಾವ ಹಾಡು ಹಾಡಿಕೊಳ್ಳುತ್ತೋ ಯಾವ ಚಿತ್ರ ನಕ್ಕುಬಿಡುತ್ತೋ ಬಲ್ಲೋರ್ಯಾರು? ಮೊದಲೇ ಹರಿವ ಮನಸಿಗುಂಟು ಸಾವಿರ ಕಾಲುಗಳು ಸಾವಿರ ದಿಕ್ಕುಗಳು.
ಒಮ್ಮೊಮ್ಮೆ ಹೀಗಾಗುತ್ತೆ. ಮಳೆ ಗಾಳಿಗಳಿಗೆ ತೊಯ್ದ ಮನಸು ಸೀದಾ ಬಾಲ್ಯದೂರಿಗೆ ಹೋಗಿಬಿಡುತ್ತೆ. ಪಾಟಿಚೀಲವನ್ನು ಅಲ್ಲೆಲ್ಲೋ ಎಸೆದು ಕನ್ನಡ ಶಾಲೆಯ ಅಂಗಿ ಚೊಣ್ಣಗಳನ್ನು ಕಳಚಿ ಕೈಗೆ ಸಿಕ್ಕ ಅಂಗಿ ಮತ್ತು ಯಡವಟ್ಟು ಜಿಪ್ಪಿನ ಬದಲು ಗುಂಡಿಗಳಿರುತ್ತಿದ್ದ ಚೊಣ್ಣವೊಂದನ್ನು ಏರಿಸಿಕೊಂಡು ಸಿದ್ದವಾಗಿಬಿಡುತ್ತೆ. ಎಲ್ಲಿಗೆ? ದಪ ದಪ ಸುರಿದ ಮಳೆಗೆ ರಾಡಿಯಾಗಿರುವ ಊರ ಬೀದಿಗಳಲ್ಲಿ ಒಂದು ಸುತ್ತು ಹಾಕಿಬರಲು. ಸಿದ್ದವಾಗಿದ್ದೇ ತಡ ಕಲ್ಪಿತ ಮೋಟಾರೊಂದನ್ನು ಕಿಕ್ಕು ಸ್ಟಾಟರ್ು ಮಾಡಿಕೊಂಡು ‘ಬುರ್’ ಅಂತ ಹೊರಟುಬಿಡುತ್ತೆ.
೨
ಆಗೆಲ್ಲ ಕೆಸರು ಹೊಂಡ ಮತ್ತೆ ಕಪ್ಪು ಕಾಲುವೆಗಳಲ್ಲಿ ಕಚಪಚ ಅಡ್ಡಾಡಿ ಮೊಣಕಾಲವರೆಗೂ ಕೆಸರು ಮೆತ್ತಿಕೊಂಡು ಬಿಡುತ್ತಿತ್ತ್ತು. ಹವಾಯಿ ಚಪ್ಪಲಿಗಳಿದ್ದರಂತೂ ಮುಗಿತು. ಚಟ ಪಟ ಮಾಡಿಕೊಂಡು ಅಂಗಿಯ ಬೆನ್ನಮೇಲೆ ಕೆಸರಿನ ಚಿತ್ತಾರವೊಂದು ಗ್ಯಾರಂಟಿ. ಹಾಗೆ ನೋಡಿದರೆ ಅವಾಗೆಲ್ಲ ಚಪ್ಪಲಿ ಹಾಕುತ್ತಿದ್ದುದೇ ರೇರು. ಮಳೆಗಾಲ ಬರುವವವರೆಗೂ ಎಲ್ಲಿರುತ್ತದ್ದವೋ ಏನೋ ಕೆಂಪು ಜೂನಿಗಳು? ಅಲಿಯಾಸ್ ಕೆಂಪು ಹೆಲಿಕ್ಯಾಪ್ಟರ್ ಚಿಟ್ಟೆಗಳು. ಹಳ್ಳದ ದಾರಿಯ ಕರಿಜಾಲಿಯ ಮೇಲೆಲ್ಲ ಸುಂದಾಗಿ ಕೂತುಕೊಂಡಿರುತ್ತಿದ್ದವು. ಚೂರೂ ಕಾಡಿಸದೆ ಆರಾಮಾಗಿ ಕೈಗೆ ಸಿಕ್ಕಿಬಿಡುತ್ತಿದ್ದ ಕೆಂಪುಜೂನಿಗಳ ಮೇಲೆ ನಮಗೆಲ್ಲ ಭಾರೀ ತಾತ್ಸಾರ. ಹಿಡಿದರೆ ಸೀಮೆಎಣ್ಣೆ ಜೂನಿಯನ್ನೇ ಹಿಡಿಯಬೇಕು ಅಂತ ಓಡಾಡುತ್ತಿದ್ದೆವು. ಅಲ್ಲೊಂದು ಇಲ್ಲೊಂದು ಕಾಣಸಿಗುತ್ತಿದ್ದ ಅವು ಅಷ್ಟು ಸುಲಭಕ್ಕೆ ಸಿಗುತ್ತಿರಲೂ ಇಲ್ಲ. ನಮ್ಮಿಂದ ಚುಮುಣೆಣ್ಣಿ ಜೂನಿ ಅಂತ ಕರೆಸಿಕೊಳ್ಳುತ್ತಿದ್ದ ಅವುಗಳನ್ನು ಹಿಡಿದವನದು ಭಾರಿ ಹವಾ ಅವಾಗೆಲ್ಲ. ಅವು ಸಿಕ್ಕದಿದ್ದಾಗ ಕೆಂಪುಜೂನಿಗಳಷ್ಟು ಸುಂದಾಗಿರದೆ ಚುರುಕಾಗಿರುತ್ತಿದ್ದ ಸಣ್ಣ ಸಣ್ಣ ಚಿಟಿಮಿ ಜೂನಿಗಳನ್ನು ಮತ್ತು ಟಾಪ್ ಸೆಕೆಂಡಿನಲ್ಲಿದ್ದ ಕರಿಜೂನಿಗಳನ್ನು ಹಿಡಿದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು. ತೀರಾ ಬರಗೆಟ್ಟಾಗ ಬೇರೆ ವಿಧಿ ಕಾಣದೆ ಅಲಕ್ಷಿತ ಕೆಂಪು ಜೂನಿಗಳನ್ನೇ ಹಿಡಿಯುತ್ತಿದ್ದೆವು. ಅವುಗಳ ಬಾಲಕ್ಕೆ ದಾರ ಕಟ್ಟಿ ಹಾರಾಡಿಸುತ್ತಾ ತಿರುಗಾಡುತ್ತಿದ್ದೆವು. ತಿರುಗಾಟ ಸಾಕಾದ ಮೇಲೆ ಮನೆ ಮುಂದಿನ ಗೇಟಿಗೆ ಕಟ್ಟಿಬಿಡುತ್ತಿದ್ದೆವು. ಇಲ್ಲಾ ರುಂಡ, ಮುಂಡ ಬಾಲಗಳನ್ನು ಬೇರೆ ಮಾಡಿ ಸಾಯಿಸಿಬಿಡುತ್ತಿದ್ದೆವು. ನಮ್ಮ ಈ ರಾಕ್ಷಸಪ್ರವೃತ್ತಿಗೆ ಎಷ್ಟು ಜೂನಿಗಳು ಬಲಿಯಾಗಿದ್ದಾವೇನೋ? ಪಾಪ ಅವು!
ಮಳೆಬಂದ ಮರುದಿನ ಶಾಲೆಯ ಮೈದಾನದಲ್ಲಿ ಪುಟ್ಟ ಪುಟ್ಟ ಹೊಂಡಗಳು ಸೃಷ್ಟಿಯಾಗಿರುತ್ತಿದ್ದವು. ಅವುಗಳಲ್ಲಿ ಕೈ ಹಾಕಿ ಇಷ್ಟಿಷ್ಟೇ ಇರುತ್ತಿದ್ದ ತಾಂಬೇಲುಗಳನ್ನು ಹಿಡಿಯುವ ಖುಷಿ ನಮಗೆಲ್ಲ. ಗೊಟರ್ ಗೊಟರ್ ಕೂಗುತ್ತಿದ್ದ ಹಸಿರು ಬಣ್ಣದ ಕಪ್ಪೆಗಳು ಅದೆಲ್ಲಿಂದಲೋ ಬಂದು ಬಿಟ್ಟಿರುತ್ತಿದ್ದವು. ಟಣಕ್ ಟಣಕ್ ಜಿಗಿಯುತ್ತ ಕಾಲಿಗೆ ತಾಕಿದಾಗೊಮ್ಮೆ ತಣ್ಣಗೆ ಕಚಗುಳಿಯಿಡುತ್ತಿದ್ದ ಮರಿಕಪ್ಪೆಗಳೂ ಕೂಡ. ಮಳೆ ದಿನಗಳಲ್ಲೇ ಇವೆಲ್ಲಾ ಪ್ರತ್ಯಕ್ಷ್ಯವಾಗುತ್ತಿದ್ದರಿಂದ ನಾವೆಲ್ಲ ಇವು ಆಕಾಶದಿಂದ ಮಳೆ ಜೊತೆಯಲ್ಲೇ ಬೀಳುತ್ತವೆ ಅಂತ ನಂಬಿಬಿಟ್ಟಿದ್ದೆವು!
ಮಳೆದಿನಗಳಲ್ಲಿ ಹಾಳೆದೋಣಿ ಮಾಡಿ ತೇಲಿಬಿಡುವ ಖುಷಿಯೂ ಜೊತೆಯಾಗುತ್ತಿತ್ತು. ಅಕ್ಕನ ಕಚ್ಚಾನೋಟುಬುಕ್ಕಿನ ಹಾಳೆಗಳೇ ಟೈಟಾನುಕ್ಕುಗಳಾಗುತ್ತಿದ್ದವು. ಮನೆ ಮುಂದೆ ಸೃಷ್ಟಿಯಾಗಿರುತ್ತಿದ್ದ ಸಣ್ಣ ಕಾಲುವೆಯೇ ಸಮುದ್ರವಾಗುತ್ತಿತ್ತು. ನಾವಿಕ ಚಾಲಕ ಪ್ರಯಾಣಿಕ ಎಲ್ಲಾ ನಾವೇ. ನಮ್ಮ ಪ್ರೀತಿಯ ಟೈಟಾನಿಕ್ಕುಗಳು ಅರ್ಧದಲ್ಲೇ ನೆಂದು ದುರಂತಕ್ಕೀಡಾಗದೆ ಯಶಸ್ವಿಯಾಗಿ ಗಟಾರಕ್ಕೆ ತಲುಪಿದಾಗ ಮಸ್ತು ಖುಷಿಯಾಗುತ್ತಿತ್ತು. ಕೆಲವೊಮ್ಮೆ ಕರಿಇರುವೆಗಳನ್ನು ತಂದು ದೋಣಿಗಳಲ್ಲಿ ಪ್ರಯಾಣಿಕರನ್ನಾಗಿ ಮಾಡುತ್ತಿದ್ದುದೂ ಉಂಟು. ಅವು ಸುಮ್ಮನೆ ಕೂರಿಸಿದಲ್ಲಿ ಕೂರದೆ ಗಾಂಚಾಲಿ ಮಾಡಿದರೆ ಪಟ್ ಅಂತ ಹೊಡೆದು ಕೊಂದು ಕೂರಿಸಿಬಿಡುತ್ತಿದ್ದೆವು. ಹೀಗೆ ಬಾಲ್ಯದಲ್ಲಿ ನಮ್ಮ ಕೈಗೆ ಸಿಕ್ಕು ಚಿತ್ರಹಿಂಸೆ ಅನುಭವಿಸಿದ ಜೀವ ಜಂತುಗಳನ್ನು ನೆನಪಿಸಿಕೊಂಡರೆ ಪಿಚ್ಚೆನ್ನಿಸಿಬಿಡುತ್ತೆ. ಕಲ್ಲು, ಕೋಲು, ಚಾಟರುಬಿಲ್ಲುಗಳನ್ನು ಹಿಡಿದು ಹಂದಿ ನಾಯಿ ಕೋಳಿಗಳನ್ನು ಓಡಾಡಿಸಿ ಸುಸ್ತು ಮಾಡಿಬಿಡುತ್ತಿದ್ದೆವು. ಮೂರು ರುಪಾಯಿಗೊಂದು ಸಿಕ್ತಿದ್ದ ಚಾಟರುಬಿಲ್ಲನ್ನೋ ಇಲ್ಲ ನಾವೇ ತಯಾರಿಸಿಕೊಂಡ ಬಿಲ್ಲನ್ನೋ ಹಿಡಿದುಕೊಂಡು ಅಡ್ಡಾಡುತ್ತಿದ್ದರೆ ನಮ್ಮನ್ನು ಕಂಡ ಹಂದಿ, ನಾಯಿ ಕೋಳಿಗಳು ಹೆದರಿ ಓಡುವಷ್ಟರ ಮಟ್ಟಿಗೆ ಅವಕ್ಕೆ ಉಪಟಳ ಕೊಟ್ಟಿದ್ವಿ. ನಮ್ಮ ಓಣಿಯ ಬೀದಿ ನಾಯಿಗಳಂತು ನಮ್ಮಿಂದ ಅನುಭವಿಸಿದ ಕಷ್ಟ ನಷ್ಟ, ಹಿಂಸೆಗಳು ಅಷ್ಟಿಷ್ಟಲ್ಲ.
ದೀಪಾವಳಿ ಸಮಯದಲ್ಲಿ ತೆಪ್ಪಗೆ ಮಲಗಿರುತ್ತಿದ್ದ ಅವುಗಳ ಪಕ್ಕ ಪಟಾಕಿ ಸಿಡಿಸಿ ದಿಕ್ಕಾಪಾಲಾಗಿ ಓಡುವಂತೆ ಮಾಡುತ್ತಿದ್ದೆವು. ಕುನ್ನಿಗಳ ಚುರುಕುತನ ಚೆಕ್ ಮಾಡಲು ಅವುಗಳ ಕಿವಿ ಜಗ್ಗಿ ಹಿಡಿದು ನೇತು ಬಿಡುತ್ತಿದ್ದೆವು. ಕೊಯ್ ಕೊಯ್ ಅಂತ ಅರಚಾಡುವ ಕುನ್ನಿಗಳು ಚುರುಕು ಅಂತಲೂ ನೇತಾಡುತ್ತಿದ್ದರೂ ಯಾವುದೇ ರಿಯಾಕ್ಷನ್ ತೋರಿಸದ ಕುನ್ನಿಗಳು ಮಬ್ಬು ಅಂತಲೂ ನಿರ್ಧರಿಸುತ್ತಿದ್ದೆವು. ಅವಾಗೊಮ್ಮೆ ಸಂತಣ್ಣನ ಸಾರಥ್ಯದಲ್ಲಿ ನಮ್ಮ ಆಟಿಕೆಗಳ ಸಂಗ್ರಹದಲ್ಲಿದ್ದ ಸಿರಿಂಜೂ ನೀಡಲ್ಲು ತೆಗೆದುಕೊಂಡು ಮುದಿನಾಯಿಯೊಂದಕ್ಕೆ ಇಂಜೆಕ್ಷನ್ ಮಾಡುವ ಸಾಹಸಕ್ಕೂ ಕೈ ಹಾಕಿದ್ದೆವು. ಸಂತಣ್ಣ ಕಡೆ ಘಳಿಗೆಯಲ್ಲಿ ಬೇಡ ಅಂದದ್ದಕ್ಕೇನೋ ಆ ನಾಯಿ ಬಚಾವಾಯಿತು. ಆಗ ಇಂಥ ಸೃಜನಶೀಲ ಐಡಿಯಾಗಳೆಲ್ಲ ಒಂದು ವರ್ಷ ದೊಡ್ಡವನಿದ್ದ ಸಂತಣ್ಣನಿಂದಲೇ ಬಂದಿರುತ್ತಿದ್ದವು. ಅವತ್ತು ಎಲ್ಲಾ ಪ್ಲ್ಯಾನ್ ಪ್ರಕಾರ ನಡೆದಿದ್ದರೆ ಅದೊಂದು ಭಯಾನಕ ಪ್ರಯೋಗವೂ ನಡೆದುಹೋಗುತ್ತಿತ್ತು. ಅದೇನಾದರು ಯಶಸ್ವಿಯಾಗಿದ್ದರೆ ನಾಯಿಗಳಿಗೆ ನಮ್ಮ ಓಣಿಯಲ್ಲಿ ಜೀವನವೇ ನರಕವಾಗಿ ಬೇರೊಂದು ಓಣಿಗೋ ಇಲ್ಲಾ ಊರಿಗೋ ವಲಸೆ ಹೋಗಿಬಿಡುತ್ತಿದ್ದವೇನೋ? ಪಾಪ ಅವು. ಹಂಗ್ಯಾಕೆ ಮಾಡುತ್ತಿದ್ದೆವೋ ನಾವು?.. ಅವನ್ನೆಲ್ಲ ಈಗ ನೆನಪಿಸಿಕೊಂಡರೆ ಒಂಥರಾ ಅನ್ನಿಸಿಬಿಡುತ್ತೆ. ನಮ್ಮ ಬಾಲ್ಯದಾಟಗಳಿಗೆ ಬಲಿಯಾಗಿ ಸೊರಗಿದ ‘ಶ್ವಾನದೋಸ್ತು’ಗಳಿಗೆ ಸಾರಿ ಕೇಳಿಬಿಡೋಣ ಅನ್ನುತ್ತೆ. ಅವುಗಳಿಗೆ ತಿಳಿಯುವಂತೆ ಸಾರಿ ಕೇಳುವುದು ಹೇಗಂತ ಗೊತ್ತಾಗುತ್ತಿಲ್ಲ. ರಂಜನೆಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದ ಸಂತಣ್ಣನನ್ನು ಕೇಳಿದರೆ ಗೊತ್ತಾಗಬಹುದೇನೋ?

‍ಲೇಖಕರು G

16 September, 2015

1 Comment

  1. ಬಂದೇನವಾಜ ಮ್ಯಾಗೇರಿ

    nice article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading