ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆಯಲಿ ವಿದ್ಯಾರಶ್ಮಿ ಪೆಲತ್ತಡ್ಕ

ಮಳೆ ಕತೆಗಳು


ವಿದ್ಯಾರಶ್ಮಿ ಪೆಲತ್ತಡ್ಕ

 

ಕವಿ ಸಮಯ

ಜಿಟಿಜಿಟಿ ಮಳೆಗಾಲ. ಕಪ್ಪೆ ರಾತ್ರಿಯೆಲ್ಲ ವಟಗುಟ್ಟುತ್ತಿತ್ತು. ಕವಿತೆಗಾಗಿ ಧ್ಯಾನಿಸುತ್ತಿದ್ದ ಕವಿಗೆ ಈ ಕರ್ಕಶ ಸದ್ದು ಕೇಳಿ ಕಿರಿಕಿರಿಯಾಯಿತು. ಕಪ್ಪೆಗಿಷ್ಟು ಶಾಪ ಹಾಕಿ ರಪ್ಪೆಂದು ಕಿಟಕಿ ಮುಚ್ಚಿದ. ಕಪ್ಪೆಗೇನು ಗೊತ್ತಾಗುತ್ತದೆ ಕವಿವರ್ಯನ ಕಷ್ಟ? ಅದು ತನ್ನ ಗಂಟಲಿಗೆ ಕೆಲಸ ನೀಡುತ್ತಲೇ ಇತ್ತು. ಅದರ ಕೆಲಸ ವ್ಯರ್ಥವಾಗಲಿಲ್ಲ. ಇನ್ನೊಂದು ಕಪ್ಪೆ ಕುಪ್ಪಳಿಸಿ ಬಂತು. ಎರಡೂ ಕಪ್ಪೆಗಳು ಮಳೆಯಲ್ಲಿ ಮಿಂದವು, ರಮಿಸಿದವು, ಜೋಡಿಯಾದವು. ಸಾವಿರಾರು ಮರಿಕವನಗಳು ಹುಟ್ಟಿದವು.

 


ಮಳೆ ಲಾಲಿ

ಬೆಳಗ್ಗಿನಿಂದಲೂ ಜೋರು ಮಳೆ. ಅಮ್ಮ ಕಂದನನ್ನು ಸ್ನಾನ ಮಾಡಿಸಿ, ಹಾಲು ಕುಡಿಸಿ ತೊಟ್ಟಿಲಲ್ಲಿ ಮಲಗಿಸಿ ಅಡುಗೆ ಮನೆ ಹೊಕ್ಕಿದ್ದಳು. ಕೊಂಚ ಹೊತ್ತಾದ ಬಳಿಕ ಮಗುವಿಗೆ ಎಚ್ಚರವಾಯಿತು. ಮಳೆಯ ಸದ್ದಿನಲ್ಲಿ ಕಂದನ ಅಳು ಅಮ್ಮನಿಗೆ ಕೇಳಲಿಲ್ಲ. ಅದರ ಅಳುವಿಗೆ ಸ್ಪಧರ್ೆಯೆಂಬಂತೆ ಮಳೆ ಧೋ… ಎನ್ನುತ್ತಿತ್ತು. ಕೊಂಚ ಹೊತ್ತು ಅತ್ತ ಪಾಪು ಬಳಿಕ ಸುಮ್ಮನಾಗಿ ಮಳೆಯ ಸದ್ದನ್ನೇ ಕೇಳಲಾರಂಭಿಸಿತು. ಮಳೆಯ ಹಾಡು ಲಾಲಿಯಾಯಿತು. ಪುಟ್ಟಕೂಸು ಅದನ್ನೇ ಕೇಳುತ್ತ ಕೇಳುತ್ತ ನಿದ್ದೆ ಹೋಯಿತು.

 

ಗಗನ ಗಾನ

ಅವನು ಒಬ್ಬ ಸಂಗೀತಗಾರ. ಹೊಸ ಹೊಸ ರಾಗಗಳನ್ನು ಸಂಯೋಜಿಸುವುದು ಆತನ ಕೆಲಸ. ಮರುದಿನವೇ ಒಂದು ಹಾಡಿಗೆ ಹೊಸದೊಂದು ರಾಗ ಹಾಕಿ ಹಾಡಬೇಕಿತ್ತು ಆತ. ಅದಕ್ಕಾಗಿ ಹಲವು ದಿನಗಳಿಂದ ಧ್ಯಾನಿಸುತ್ತಾ ಕುಳಿತಿದ್ದರೂ ಹೊಸ ರಾಗ ಮೂಡಿಬರಲಿಲ್ಲ. ಅಂದು ರಾತ್ರಿಯೂ ರಾಗವೊಂದು ಹುಟ್ಟಬಹುದೆಂದು ಕಾಯುತ್ತಾ ಕುಳಿತಿದ್ದ. ತನ್ನ ಪಾಡಿಗೆ ಅದೇನೋ ಬರೆಯುತ್ತಾ ರಾಗಗಳ ಲೆಕ್ಕಾಚಾರ ಹಾಕುತ್ತಿದ್ದ. ಅಷ್ಟರಲ್ಲಿ ಮೋಡ ಆವರಿಸಿತು. ದೀಪ ನಂದಿಹೋಯಿತು. ತನ್ನ ಲೆಕ್ಕಾಚಾರಕ್ಕೆ ಭಂಗ ಬಂದುದಕ್ಕೆ ಸಿಟ್ಟಾಗಿ ಮನೆಯಿಂದ ಹೊರಬಂದ. ಆಗಸದಿಂದ ಒಂದೆರಡು ಹನಿಗಳು ಟಪಟಪನೆ ಕೆಳಕ್ಕೆ ಬಿದ್ದವು. ಅವನು ನಿಂತು ಗಗನವನ್ನು ನೋಡುತ್ತಲೇ ಇದ್ದ. ಮಳೆ ನಿಧಾನವಾಗಿ ಹೆಚ್ಚಿತು. ಮಂದ್ರದಿಂದ ತಾರಕಕ್ಕೇರಿತು. ಮತ್ತೆ ಮಂದ್ರವಾಯಿತು. ಜೀ.. ಎಂದು ಸುರಿಯುತ್ತಲೇ ಇತ್ತು. ಸಂಗೀತಗಾರನಿಗೆ ಮಳೆರಾಗ ಸಿಕ್ಕಿತು.

 

ಮಳೆದೋಣಿ

ಶಾಲೆಯಲ್ಲಿ ಪಕ್ಕದಲ್ಲಿ ಕೂರುವ ಗೆಳೆಯ ನಿನ್ನೆಯಷ್ಟೇ ಬೋಟಿಂಗ್ಗೆ ಹೋಗಿದ್ದನಂತೆ. ಹಾಗಾಗಿ ನಾನೂ ಬೋಟಿಂಗ್ ಹೋಗಬೇಕೆನ್ನುವುದು ಪುಟ್ಟನ ಹಟ. ಕೈಯಲ್ಲಿ ಕಾಸಿಲ್ಲ, ಇನ್ನು ಇವನನ್ನು ಬೋಟಿಂಗ್ಗೆ ಹೇಗೆ ಕರೆದುಕೊಂಡು ಹೋಗುವುದಪ್ಪಾ ಅಂತ ಅಮ್ಮನಿಗೆ ತಲೆಬಿಸಿ. ಸಾಕಷ್ಟು ಸಮಾಧಾನ ಮಾಡಿದಳು. ಊಹೂಂ, ಮಗ ಕೇಳಲಿಲ್ಲ. ಅಮ್ಮ ಕರೆದುಕೊಂಡು ಹೋಗುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತಲೇ ಪುಟ್ಟನಿಗೆ ನಿರಾಸೆಯಾಯಿತು. ನಿರಾಸೆ ಹೆಪ್ಪುಗಟ್ಟಿ ಅಳುವಾಗಿ ಸುರಿಯಿತು. ಇತ್ತ ಇವನು ಅಳುತ್ತಿದ್ದಂತೆ ಅತ್ತ ಆಕಾಶವೂ ಜೋರಾಗಿ ಅತ್ತಿತು. ಮನೆಯಂಗಳದಲ್ಲಿ ನೀರು ಹರಿಯಿತು. ಅಮ್ಮ ಮೆಲ್ಲಗೇ ಪುಟ್ಟನನ್ನು ಕರೆದು ಕಾಗದದ ದೋಣಿ ಬಿಟ್ಟಳು. ಪುಟ್ಟನಿಗೆ ಖುಷಿಯಾಯಿತು. ಅವನೂ ಮಳೆನೀರಿನಲ್ಲಿ ಬೋಟಿಂಗ್ ಮಾಡಿದ.

 

ಕ್ರೋಧ

ಹಿಂದೆ ದೇವರು ತುಂಬಾ ಒಳ್ಳೆಯವನಿದ್ದ. ಅವನಿಗೆ ಯಾರ ಮೇಲೂ ಸಿಟ್ಟು ಕೂಡ ಬರುತ್ತಿರಲಿಲ್ಲ. ಯಾರಾದರೂ ತಪ್ಪು ಮಾಡಿದರೆ ಅವರನ್ನು ಶಿಕ್ಷಿಸುವುದು ಹೇಗೆಂದೂ ಅವನಿಗೆ ಗೊತ್ತಿರಲಿಲ್ಲ. ದೇವರು ಇಷ್ಟು ಒಳ್ಳೆಯವನಿದ್ದ ಕಾರಣಕ್ಕೇ ಮನುಜರ ಉಪಟಳ ಹೆಚ್ಚಾಯಿತು. ತಮಗಿಷ್ಟ ಬಂದಂತೆ ಪ್ರಕೃತಿಯ ನಾಶಕ್ಕೆ ತೊಡಗಿದರು. ಮರಗಳನ್ನು ಕಡಿದರು, ಮಾಲಿನ್ಯ ಉಂಟುಮಾಡಿದರು. ಇದನ್ನು ನೋಡುತ್ತ ನೋಡುತ್ತ ದೇವರಿಗೆ ತುಂಬಾ ದುಃಖವಾಯಿತು. ಅವನು ಇದನ್ನು ತಡೆಯುವುದು ಹೇಗಪ್ಪಾ ಎಂದು ನೊಂದುಕೊಂಡು ಕಣ್ಣೀರು ಸುರಿಸಿದ. ಅದು ಆಕಾಶದಿಂದ ಭೂಮಿಯ ಮೇಲೆ ಸುರಿಯಿತು. ಮೊದಮೊದಲು ಶಾಖದಿಂದ ಬೆಂದಿದ್ದ ಜನರಿಗೆ ಈ ನೀರಿನಿಂದ ಖುಷಿಯಾಯಿತು. ಆದರೆ, ಮೇಲಿನಿಂದ ಸುರಿಯುತ್ತಿದ್ದ ಈ ನೀರು ಎಷ್ಟು ಹೊತ್ತಾದರೂ ನಿಲ್ಲಲಿಲ್ಲ. ನೀರು ಪ್ರವಾಹವಾಗಿ ಹರಿಯಿತು. ಎಲ್ಲೆಡೆ ನುಗ್ಗಿತು. ಜನರನ್ನೂ, ಮನೆಗಳನ್ನೂ ಕೊಚ್ಚುತ್ತಾ ಹೋಯಿತು.

 

ಮಳೆ-ಕೊಳೆ

ಆತನಿಗೆ ಮಳೆಯೆಂದರೆ ದ್ವೇಷ. ಒಂದು ದಿನ ಎಂದಿನಂತೆ ಮಳೆಗಾಲವನ್ನು ಶಪಿಸುತ್ತ ಹೊರಟ. ದಾರಿಯಲ್ಲಿ ಜಾರಿಬಿದ್ದು ಅವನ ಬಟ್ಟೆಯೆಲ್ಲ ಕೆಸರಾಯಿತು. ಅದನ್ನು ತೊಳೆಯೋಣವೆಂದರೆ ಎಲ್ಲಿಯೂ ನೀರು ಸಿಗಲಿಲ್ಲ. ನಿರ್ಜನವಾದ ಪ್ರದೇಶದಲ್ಲಿ ಅವನು ನಡೆಯುತ್ತಿದ್ದ ಸಾಗುತ್ತಿದ್ದ. ಬಹುಮುಖ್ಯವಾದ ಕೆಲಸದ ಮೇಲೆ ಹೊರಟಿದ್ದರಿಂದ ಆತ ಹೋಗುವುದನ್ನು ರದ್ದು ಮಾಡುವಂತೆಯೂ ಇರಲಿಲ್ಲ, ಮನೆಗೆ ತಿರುಗಿ ಬರುವಷ್ಟು ಸಮಯವೂ ಇರಲಿಲ್ಲ. ತನ್ನ ಕೊಳೆಯಾದ ಬಟ್ಟೆಯನ್ನು ನೋಡಿ ಯಾರಾದರೂ ಗೇಲಿ ಮಾಡಿದರೆ ಎಂಬ ಸಂಕೋಚದಿಂದಲೇ ಆತ ಮುಂದುವರೆಯುತ್ತಿದ್ದ. ಅಷ್ಟರಲ್ಲಿ ಬಿರುಮಳೆ ಸುರಿಯಲಾರಂಭಿಸಿತು. ಛತ್ರಿಯೂ ಬಿರುಗಾಳಿಗೆ ಹಾರಿಹೋಯಿತು. ಸ್ವಲ್ಪ ಹೊತ್ತಿನಲ್ಲಿ ಮಳೆ ನಿಂತಿತು. ಬಿಸಿಲೂ ಬಂತು. ಆತ ನಡೆಯುತ್ತಾ ತನ್ನ ಗಮ್ಯ ತಲುಪುವಷ್ಟರಲ್ಲಿ ಮೈಯೆಲ್ಲಾ ಒಣಗಿತ್ತು. ಅಂಗಿಯಲ್ಲಿನ ಕೊಳೆಯೂ ತೊಳೆದು ಹೋಗಿ ಸ್ವಚ್ಛವಾಗಿತ್ತು. ಅಂದಿನಿಂದ ಅವನೂ ಮಳೆಯನ್ನು ಪ್ರೀತಿಸಲಾರಂಭಿಸಿದ.

 

ಶಿಕ್ಷೆ

ಮಳೆ ಜೋರಾಗಿ ಬರುತ್ತಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ಗೆದ್ದಲೊಂದು ಆ ಮರ ಹತ್ತಿತು. ಅದನ್ನು ನೋಡಿದಾಕ್ಷಣ ಮರದ ರೆಂಬೆಗಳೆಲ್ಲ ಹೇಳಿದವು, ‘ಮರವೇ, ಈ ಗೆದ್ದಲಿಗೇಕೆ ಆಶ್ರಯ ಕೊಟ್ಟೆ? ಅದು ನಿನ್ನನ್ನೇ ನಾಶಮಾಡೀತು.’ ಮರ ಹೇಳಿತು, ‘ಪ್ರಕೃತಿಯ ನಿಯಮ ಹಾಗೇ ಇದ್ದರೆ ಅದರಂತೆಯೇ ಆಗಲಿ, ಅದನ್ನು ತಡೆಯುವುದಕ್ಕೆ ನಾನ್ಯಾರು?’ ರೆಂಬೆಗಳೆಲ್ಲ ಸುಮ್ಮನಾದವು.

ಮಳೆ ನಿಂತಿತು. ಗೆದ್ದಲು ಮರ ಇಳಿದು ತನ್ನ ದಾರಿ ಹಿಡಿಯಿತು. ರೆಂಬೆಗಳೆಲ್ಲ ಲೆಕ್ಕ ಹಾಕಿದಂತೆಯೇ ತನ್ನ ಪರಿವಾರವನ್ನು ಕರೆತಂದು ಮರದಲ್ಲಿ ಬೀಡುಬಿಡಲು ಯೋಚಿಸುತ್ತಾ ಹೊರಟಿತ್ತದು. ಅಷ್ಟರಲ್ಲಿ ಮತ್ತೆ ಜೋರಾಗಿ ಮಳೆ ಬಂತು. ಗೆದ್ದಲಿಗೆ ಈಗ ಯಾವ ಆಶ್ರಯವೂ ಸಿಗಲಿಲ್ಲ. ಅದು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು.

 

ರಂಗೋಲಿ

ಆ ಪುಟ್ಟ ಹುಡುಗಿ ಅದಾಗಷ್ಟೇ ರಂಗೋಲಿ ಹಾಕಲು ಕಲಿತಿದ್ದಳು. ಅಂಗಳದಲ್ಲಿ ತಾನು ಬಿಡಿಸಿದ ರಂಗೋಲಿ ಚೆಂದವಾಗಿ ಮೂಡಿದ್ದನ್ನು ನೋಡಿ ನೋಡಿ ಖುಷಿಪಡುತ್ತಿದ್ದಳು ಆಕೆ. ಇದ್ದಕ್ಕಿದ್ದಂತೆ ಗಾಳಿ ಮಳೆ ಬಂತು. ಅವಳು ಹಾಕಿದ ರಂಗೋಲಿ ಎಲ್ಲ ಮಳೆನೀರಿಗೆ ತೊಳೆದು ಹೋಯಿತು. ಅವಳು ದುಃಖದಿಂದ ಅತ್ತಳು. ಮಳೆ ನಿಂತಾಗ ಮತ್ತೆ ರಂಗೋಲಿ ಹಾಕಲೆಂದು ಅಂಗಳಕ್ಕಿಳಿದಳು. ಅವಳು ರಂಗೋಲಿ ಹಾಕುವ ಜಾಗದ ಮೇಲೆ ನೀರು ಬೀಳುತ್ತಿತ್ತು. ನೀರು ಎಲ್ಲಿಂದ ಬೀಳುತ್ತದೆ ಎಂದು ಕತ್ತೆತ್ತಿ ನೋಡಿದಾಗ ಗಿಡಗಳು ಕಂಡವು. ಗಿಡಗಳ ಎಲೆಗಳ ಮೇಲೆಲ್ಲ ನೀರ ಬಿಂದುಗಳು… ಆಹ್, ಮಳೆಯೂ ಎಷ್ಟು ಚೆಂದ ರಂಗೋಲಿ ಇಟ್ಟಿದೆಯಲ್ಲಾ ಎನ್ನುತ್ತ ಅವಳು ಬೆರಗಾದಳು. ಅವಳ ದುಃಖ ಮರೆಯಿತು.

ಇವುಗಳಲ್ಲಿ ೪ ಕಥೆಗಳು ಈಗಾಗಲೇ vijaya next ನಲ್ಲಿ ಮಳೆ issue ನಲ್ಲಿ ಬಂದಿವೆ.

 

 

 

 

 

 

 

‍ಲೇಖಕರು G

21 June, 2011

16 Comments

  1. ugamasrinivas

    ಇಲ್ಲಿ ಸಣ್ಣ ಮಳೆ. ದೊಡ್ಡ ಮೋಡ. ನಮ್ಮ ಕಚೇರಿ ಕೆಳಗಿನ ಲಾಯರ್ ಆಫೀಸಿನಲ್ಲಿ ಹಚ್ಚಿಟ್ಟಿದ್ದ ಗಮ್ಮೆನ್ನುವ ಗಂಧದ ಕಡ್ಡಿ ವಾಸನೆ ಮೂಗಿಗೆ ಆವರಿಸಿಕೊಳ್ಳುತ್ತಿರುವ ಹೊತ್ತಲ್ಲೇ `ಅವಧಿ’ಯಲ್ಲಿ ವಿದ್ಯಾರಶ್ಮಿ ಪೆಲತ್ತಡ್ಕ ರ `ಮಳೆ ಕಥೆ’ ಗಳು ಆಪ್ತವಾಗಿತ್ತು. `ಕವಿ ಸಮಯ’, `ಮಳೆ ಲಾಲಿ’, `ಗಗನ ಗಾನ’ `ಮಳೆದೋಣಿ’ `ರಂಗೋಲಿ’ ಮುಂತಾದ ಶೀಷಿ೯ಕೆಗಳು ಇಷ್ಟವಾಯ್ತು. ಒಂದು ಅಥ೯ಪೂಣ೯ ದಿವಸಕ್ಕೆ ಪೆಲತ್ತಡ್ಕ ಬರೆಹ ಮುನ್ನುಡಿಯಾಯ್ತು. ಅವಧಿಗೂ, ವಿದ್ಯಾಗೂ ಅಭಿನಂದನೆ.
    -ಉಗಮ ಶ್ರೀನಿವಾಸ್

  2. madhu

    male kathegalu muddagive madam….

  3. malathi S

    good ones. liked it
    🙂
    ms

  4. MANIKANTH

    PUTTAKKA,
    MALE KATHEGALU CHENNAAGIVE.ABHINANDANEGALU

  5. vijayanand

    MALE KATHEGALA HABBA. KATHE ODULE RAJJA HOTHU MATHRA IPPAVAKKE (DUNDIRAJANA HANIKAVANAGALA HANGE)IBBANI KATHEGO.

  6. Umesh Kumar Shimladka

    Vijay nextnalli odide..avadhiyalli mattomme odide.. chennagive.. 🙂 vidya jai ho.. avadhi jai ho..

  7. jogi

    ಮೋಡಗಟ್ಟಿದ ಮನಸ್ಸು. ಕಣ್ಣ ಮಿಂಚು, ಮೂಗುತಿ ಬೆಳಕು ಇಲ್ಲದ ಮುಂಜಾನೆ. ಲ್ಯಾಪುಟಾಪಿನ ವಿಂಡೋ ತೆರೆದರೆ
    ಕತೆ ಹೇಳುವ ಮಳೆ. ಮಳೆ ಹೇಳಿದ ಕತೆ.
    ಕಣ್ಣ ಮಿಂಚು. ಮೂಗುತಿ ಬೆಳಕು.
    ಮತ್ತು ಒದ್ದೆ ಒದ್ದೆ ಮನಸ್ಸು.

  8. ಸುರೇಶ್ ಕೆ.

    ಮಳೆ ಕತೆಗಳನ್ನು ಓದುತ್ತಾ ಓದುತ್ತಾ ಮನಸ್ಸು ಖುಷಿಯಿಂದ ಕುಪ್ಪಳಿಸಿ ಒದ್ದೆ ಮುದ್ದೆಯಾಯ್ತು!!

  9. Sushrutha

    aaah! maLe maLe maLe maLe maLe! 🙂

  10. Vidyarashmi Pelathadka

    ಓದಿದವರಿಗೆ, ಮೆಚ್ಚುಗೆ ವ್ಯಕ್ತಪಡಿಸಿದವರಿಗೆ ಎಲ್ಲರಿಗೂ ಥ್ಯಾಂಕ್ಸ್…

    • D.RAVIVARMA

      madam,nimma malekathegalu tumba chennagive,specially aa doni kathe nanu geleyorottige mamma maneya mundina morigalli malebandaga doni biduttiddu adarahindeye oduttidu adu munigidaga besarisikondaddu nenapu bantu male ondu prakrutiya adbutha srusti adu manukulakkaste alla pasu pakshi p jalachara galeevu maleyinda shakthi spoorthi padeyuttave nammakade male illadiddare gule ennuva matide,idi kutumbave januvarugala jote gule hoguva drushya manakaragisuttade nimma maleyamulaka nammannu toysidderi,bara cinema dalli janardan hadiruva huyyo huyyo maleraya ennuva hadu omme keli d.ravivarma hospet

  11. Pramod

    ಮಳೆ, ಕಥೆಗಳು ಬಹಳ ಚೆ೦ದ 🙂

  12. Savitha R K

    Male kathegalu muda needidavu.Chennagide.

  13. vivek

    nice

  14. nutana

    ee malehanigalige kode hidiyade nendu bidona annisitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading