ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಳೆಯಲಿ, ಜೊತೆಯಲಿ..’, ಮಂಜುಳಾ ಬಬಲಾದಿ ಪ್ರವಾಸ ಕಥನ – ೪

ಪೂರ್ವ ಧೃವದಿಂ ದಕ್ಷಿಣ ಧೃವಕೆ (ದಿನ ೪)

ಇಲ್ಲಿವರೆಗೆ

– ಮಂಜುಳಾ ಬಬಲಾದಿ

ಅಕ್ಟೋಬರ್ ೨, ಗಾಂಧಿ ಜಯಂತಿಯಂದು ಗ್ಯಾಂಗ್ಟಾಕ್ನಲ್ಲಿ ನಾವು ತಂಗಿದ್ದ ರೆಸಾರ್ಟ್ನಿಂದ ನಮ್ಮ ಚೆಕ್ಔಟ್. ಗ್ಯಾಂಗ್ಟಾಕ್ನಲ್ಲಿನ ಕಡೆಯ ಕೆಲವು ಗಂಟೆಗಳು. ಚೆಕ್ಔಟ್ ನಂತರ ನಾವು ಹೊರಟಿದ್ದು ಪೂರ್ವ-ನಿರ್ಧಾರಿತವಾಗಿದ್ದ ರಂಟೆ(ತೆ)ಕ್ ಮೊನಾಸ್ಟರಿ ಕಡೆಗೆ. ಮಳೆ, ಅಂತೀರಾ? ಮಳೆ ಇರಲಿಲ್ಲ, ಅಂದು ಬರೀ ಮೋಡ ಕವಿದಿತ್ತು… ಗ್ಯಾಂಗ್ಟಾಕ್ಗೆ ಹೊರಡುವ ಮೊದಲೇ ಗೂಗಲ್ ಗುರುವಿನಿಂದ ಪಡೆದ ಜ್ಞಾನದ ಪ್ರಕಾರ ಗ್ಯಾಂಗ್ಟಾಕ್ನ ಸುತ್ತ-ಮುತ್ತ ಎಂಶೆ ಮೊನಾಸ್ಟರಿ, ರಂಟೆ(ತೆ)ಕ್ ಮೊನಾಸ್ಟರಿ, ಘುಮ್ ಮೊನಾಸ್ಟರಿ ಸೇರಿದಂತೆ ಹಲವಾರು ಬೌದ್ಧ ಮಠಗಳಿವೆ ಎಂದು ಓದಿ ತಿಳಿದದ್ದಾಗಿತ್ತು. ನಾವು ಗ್ಯಾಂಗ್ಟಾಕ್ನಿಂದ ೨೪ ಕಿ.ಮೀ ದೂರದಲ್ಲಿರುವ ರಂಟೆ(ತೆ)ಕ್ ಮೊನಾಸ್ಟರಿ, ಧರ್ಮ ಚಕ್ರ ಸೆಂಟರ್ ಕಡೆಗೆ ನಮ್ಮ ಪಯಣ ಬೆಳೆಸಿದ್ದೆವು. ಕೊನೆಯ ಸಾರಿಗೆ ಎನ್ನುವಂತೆ ದಾರಿಗುಂಟ ಗ್ಯಾಂಗ್ಟಾಕ್ ಅನ್ನು ಕಣ್ಣಲ್ಲಿ ತುಂಬಿಕೊಂಡಿದ್ದೇ, ತುಂಬಿಕೊಂಡಿದ್ದು. ಅಲ್ಲಲ್ಲಿ ಕಾಣುತ್ತಿದ್ದ ಬ್ಲ್ಯಾಕ್ ಕ್ಯಾಟ್ ಸೇನೆಯ ಸೈನಿಕರನ್ನು ತಿರು-ತಿರುಗಿ ನೋಡಿದ್ದೇ ನೋಡಿದ್ದು.

ಸ್ವಲ್ಪ ಸಮಯದಲ್ಲೇ ನಾವಾಗಲೇ ರಂಟೆ(ತೆ)ಕ್ ಮೊನಾಸ್ಟರಿ ತಲುಪಿದ್ದೆವು. ಈ ಸುಂದರ, ಪ್ರಸಿದ್ಧ ಬೌದ್ಧ ಮಠ, ಟಿಬೆಟನ್ ಬೌದ್ಧ ಧರ್ಮದ, ಕಗ್ಯು ಪಂಥದ ಹದಿನಾರನೇ ಕರ್ಮಪ ರ್ಯಾಂೆಗ್ಯುಂಗ್ ರಿಗ್ಪ ದೋರ್ಯ(Karmapa Rangjung Rigpe Dorje) ಇವರ ಕನಸಿನ ಕೂಸು. ೧೯೬೦ನೇ ಇಸವಿಯಲ್ಲಿ ಅವರು ಈ ಧರ್ಮ ಚಕ್ರ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಮಹಾಯಾನ ಬೌದ್ಧ ಧರ್ಮದ, ಕರ್ಮ ಕಗ್ಯು ಪಂಥದ ಅಂತರಾಷ್ಟೀಯ ಪ್ರಧಾನ ಕಛೇರಿ. ಸಿಕ್ಕಿಂ ರಾಜ್ಯದ ಅತಿ ದೊಡ್ದ ಮೊನಾಸ್ಟರಿಯಾಗಿರುವ ರಂಟೆ(ತೆ)ಕ್ ಧರ್ಮ ಚಕ್ರ ಸಂಸ್ಥೆ, ಹಲವಾರು ಕರ್ಮ ಕಗ್ಯು ಪಂಥದ ವಿರಕ್ತ ಭಿಕ್ಷುಗಳ ವಾಸಸ್ಥಾನ. ಈ ಮೊನಾಸ್ಟರಿಯ ಪ್ರಮುಖ ದೇವಸ್ಥಾನದ ಪ್ರವೇಶ ದ್ವಾರ ತಲುಪಲು ಸ್ವಲ್ಪ ದೂರ ನಡೆಯಬೇಕು. ಆ ಮಾರ್ಗದ ಗುಂಟ ಟಿಬೆಟನ್ ಬೌದ್ಧ ಧರ್ಮದ ಪ್ರಾರ್ಥನಾ ಚಕ್ರಗಳ ಸಾಲು-ಸಾಲು. ಈ ಚಕ್ರಗಳನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿದರೆ ಮಂತ್ರ ಪಠಣ ಮಾಡಿದಷ್ಟೇ ಪುಣ್ಯ ಬರುತ್ತದಂತೆ. ರಸ್ತೆಗುಂಟ ನಾವೆಲ್ಲರೂ ಅವನ್ನು ತಿರುಗಿಸುತ್ತಲೇ ನಡೆದೆವು.

ಸೆಕ್ಯುರಿಟಿ ಚೆಕ್ ಮುಗಿಸಿ ಒಳ ನಡೆದಾಗ ಕಂಡಿದ್ದು ವಿಶಾಲವಾದ ಪ್ರಾಂಗಣದಲ್ಲಿ, ಪ್ರಶಾಂತ ಮೌನದಲ್ಲಿ ಎತ್ತರವಾಗಿ ನಿಂತಿದ್ದ, ನಾಲ್ಕು ಮಹಡಿಗಳ ಸುಂದರ ಕಟ್ಟಡ. ಇದೇ ಇಲ್ಲಿನ ಪ್ರಮುಖ ಮಂದಿರ. ಮಂದಿರದ ಪ್ರವೇಶ ದ್ವಾರದ ಸುತ್ತಲೆಲ್ಲ ಟಿಬೆಟನ್ ವಾಸ್ತು ವಿನ್ಯಾಸದಿಂದ ಪ್ರಭಾವಿತ ಬಣ್ಣ-ಬಣ್ಣದ ಕಲಾ ಕುಸುರಿ. ಟಿಬೆಟನ್ ಸಾಂಪ್ರದಾಯಿಕ ಶೈಲಿಯಲ್ಲಿ ಬಿಡಿಸಿರುವ ಭಿತ್ತಿ ಚಿತ್ರಗಳು -ಜೀವ ತುಂಬಿದ ಬಣ್ಣಗಳು. ಪ್ರವೇಶದ್ವಾರದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬ್ರಹ್ಮಾಂಡ ರಕ್ಷಕರ ವರ್ಣ ಚಿತ್ರಗಳು. ಸೂರಿನ ಮೇಲೆ, ಗೋಡೆಗಳ ಮೇಲೆ, ಕಣ್ಣು ಹರಿಸಿದಲ್ಲೆಲ್ಲ ಬಣ್ಣಗಳ ಕಲಾಕುಸುರಿ. ಇವುಗಳೆಲ್ಲದರ ನಡುವೆ, ಅಲ್ಲಿರುವ ಗಣೇಶನ ಭಿತ್ತಿ ಚಿತ್ರ ಗಮನ ಸೆಳೆಯುವಂತಿತ್ತು!ದ್ವಾರದೊಳಗೆ ಹೋದರೆ ಅನುಭವಕ್ಕೆ ನಿಲುಕುವಂಥ ಮೌನ. ಎತ್ತರದ ಕೆಂಪು ಬಣ್ಣದ ಕಂಬಗಳು, ಥಂಕಾ ವರ್ಣಚಿತ್ರಗಳು, ಕಗ್ಯು ಪರಂಪರೆಯ ಚಿತ್ರಗಳು, ಎಂಟು ಭೋದಿ ಸತ್ವಗಳು, ಕಂಗ್ಯೂರ್ & ತಂಗ್ಯೂರ್ ಧಾರ್ಮಿಕ ಗ್ರಂಥಪಾಠಗಳು, ಇವಿಷ್ಟು ಮಂದಿರದೊಳಗೆ ಕಂಡು ಬರುವ ಸೂಕ್ಮ ವಿವರಗಳು. ಮಂದಿರದ ಕೇಂದ್ರಬಿಂದು, ಗ್ಯಾಲ್ವ ಕರ್ಮಪ ಅವರ ಸಿಂಹಾಸನ, ಅದರ ಹಿಂದೆ, ಶಕ್ಯಮುನಿ ಬುದ್ಧನ ದೊಡ್ಡದಾದ ವಿಗ್ರಹ. ಇದಲ್ಲದೇ ಜೇಡಿಮಣ್ಣಿನಿಂದ ಮಾಡಿದ, ಬಂಗಾರ ಬಣ್ಣ ಲೇಪಿತ ಸಾವಿರ ಚಿಕ್ಕ-ಚಿಕ್ಕ ಬುದ್ಧ ವಿಗ್ರಹಗಳನ್ನು, ಈ ಯುಗದಲ್ಲಿ ಸಂಭವಿಸುವ ಸಾವಿರ ಬುದ್ಧರ ಆಗಮನದ ಸಂಕೇತವಾಗಿ ಇಲ್ಲಿ ಇರಿಸಲಾಗಿದೆ.

ಮಂದಿರದಿಂದ ಹೊರಬಂದ ನಂತರ ಪ್ರಾಂಗಣದ ಸುತ್ತಲಿರುವ ಭಿಕ್ಷುಗಳ ಕೋಣೆಗಳ ಹೊರ ನೋಟ ಪಡೆದು, ಹಲವು ಫೋಟೊಗಳನ್ನು ತೆಗೆದು, ಹಲವಾರು ನಿಮಿಷ ಮೌನವಾಚರಿಸಿ, ಇಲ್ಲಿನ ಇನ್ನೊಂದು ವಿಶೇಷವಾದ ಸುವರ್ಣ ಸ್ತೂಪದೆಡೆಗೆ ತೆರಳಿದೆವು. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ, ಈ ಸ್ತೂಪಗಳು, ಗುರುಗಳ ಬೃಂದಾವನದಂತೆ, ಬೌದ್ಧ ಧರ್ಮದಲ್ಲಿ ಇವಕ್ಕೆ ’ಸ್ತೂಪ’ ಎಂದು ಹೆಸರು. ರಂಟೆ(ತೆ)ಕ್ ಮೊನಾಸ್ಟರಿನಲ್ಲಿರುವ ಸುವರ್ಣ ಸ್ತೂಪ, ಹದಿನಾರನೇ ಗ್ಯಾಲ್ವ ಕರ್ಮಪ ರ್ಯಾಂೊಗ್ಯುಂಗ್ ರಿಗ್ಪ ದೋರ್ಯ ಗುರುಗಳ ಬೃಂದಾವನ. ೧೩ ಅಡಿ ಎತ್ತರದ ಈ ಸುವರ್ಣ ಸ್ತೂಪ, ಪುಷ್ಯರಾಗ ಮಣಿ ಮತ್ತು ಹವಳಗಳಿಂದ ಅಲಂಕೃತವಾಗಿದ್ದು, ನಾಜೂಕಾದ ಕಲಾ ಕುಸುರಿಯನ್ನು ಹೊಂದಿದೆ. ಇದಲ್ಲದೇ ಎರಡಡಿ ಎತ್ತರದ ಇನ್ನೊಂದು ಚಿಕ್ಕ, ಸಂಪೂರ್ಣ ಚಿನ್ನದಿಂದ ಮಾಡಿದ ಸ್ತೂಪ, ಗುರುಗಳ ಹೃದಯ, ನಾಲಿಗೆ ಮತ್ತು ಕಣ್ಣುಗಳನ್ನು ಒಳಗೊಂಡಿದೆಯಂತೆ.

ಸುವರ್ಣ ಸ್ತೂಪವಿರುವ ಕಟ್ಟಡದ ಎದುರುಗಡೆ ಇರುವ ಕಟ್ಟಡವೇ ಕರ್ಮ ಶ್ರೀ ನಳಂದ ಇನ್ಸ್ಟಿಟ್ಯೂಟ್ ಫಾರ್ ಹೈಯರ್ ಬುದ್ಧಿಸ್ಟ್ ಸ್ಟಡೀಸ್. ೧೯೮೧ ರಲ್ಲಿ ಪ್ರಾರಂಭವಾದ ಈ ಬೌದ್ಧ ವಿದ್ಯಾ ಸಂಸ್ಥೆ, ಅದರ ಪ್ರಾರಂಭಿಕ ವರ್ಷದಲ್ಲಿ ೪೫ ಶಿಷ್ಯರನ್ನು ಹೊಂದಿತ್ತು. ದಿನೇ-ದಿನೇ ಹೆಚ್ಚಿದ ಇದರ ಪ್ರಸಿದ್ಧಿಯಿಂದ ಈ ಕಟ್ಟಡವನ್ನು ವಿಸ್ತರಿಸಲಾಯಿತು, ಮತ್ತು ಈ ಸಂಸ್ಥೆಯಲ್ಲಿ ಅಭ್ಯಸಿಸಬಹುದಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳ ತರಲಾಯಿತು. ಇಂದಿಗೂ ಇದೊಂದು ಗೌರವಾನ್ವಿತ ಬೌದ್ಧ ಶಿಕ್ಷಣ ಸಂಸ್ಥೆಯಾಗಿದೆ.

ಬೌದ್ಧ ಧರ್ಮದ ಬಗ್ಗೆ ಪಡೆದ ಈ ಹೊಸ ತಿಳುವಳಿಕೆಯ ಬಗ್ಗೆ ಯೋಚಿಸುತ್ತ, ಬೌದ್ಧ ಧರ್ಮದ ಕುರಿತು ಹೊಸದೊಂದು ಕುತೂಹಲ ಬೆಳೆಸಿಕೊಂಡು ಅಲ್ಲಿಂದ ಮರಳಿದ ಮೇಲೆ ಮತ್ತೆ ನಮ್ಮ ಪಯಣ ಮುಂದುವರೆದಿತ್ತು ಬೈಗುನಿಯೆಡೆಗೆ. ಬೈಗುನಿಗೆ ಹೋಗುವ ರಸ್ತೆಯಲ್ಲಿ ಮತ್ತೆ ಎದುರಾದಳು ತೀಸ್ತಾ. ಕಳೆದ ವರ್ಷವಷ್ಟೇ ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ಗೆಂದು ದಾಂಡೇಲಿಗೆ ಹೋದಾಗ ಕಮರಿದ ಕನಸು ಮತ್ತೆ ಚಿಗುರಿತು. ಮನಸು ಅದೆಷ್ಟು ಬೇಗ ಬದಲಾವಣೆಗಳಿಗೆ ಹೊಂದಿಕೊಂಡುಬಿಡುತ್ತದೆ, ಸ್ಪಂದಿಸತೊಡಗುತ್ತದೆ! ಆಧ್ಯಾತ್ಮದಿಂದ ಸಾಹಸದೆಡೆಗೆ ಕ್ಷಣಾರ್ಧದಲ್ಲೇ ಮನಸು ವಾಲಿತ್ತು. ರಸ್ತೆ ಬದಿಯಲ್ಲಿ, ತೀಸ್ತಾ ನದಿ ದಂಡೆಯಲ್ಲಿ ಕಂಡ ರಿವರ್ ರಾಫ್ಟಿಂಗ್ ಜಾಹೀರಾತು ನೋಡಿದ ತಕ್ಷಣ ನಮ್ಮ ನಾನ್-ಸ್ಟಾಪ್ ಕಾರ್ ಚಾಲಕನನ್ನು ತಡೆದು ನಿಲ್ಲಿಸಿಬಿಟ್ಟೆವು. ಆ ದಿನ ಹೆಚ್ಚಿನ ಗಡಿಬಿಡಿ ಇರದ ಕಾರಣ ಅವನೂ ಆರಾಮಾಗಿ ನಮ್ಮ ಬೇಡಿಕೆಗೆ ಒಪ್ಪಿಕೊಂಡು ಕಾರ್ ನಿಲ್ಲಿಸಿಬಿಟ್ಟ. ಮತ್ತೊಮ್ಮೆ ಮನದಲ್ಲಿ ಹೊಸ ಉತ್ಸಾಹದ ಬುಗ್ಗೆ. ರಸ್ತೆಯಿಂದ ಕೆಳಗಿಳಿದು ನದಿ ತೀರ ಸೇರಿದಾಗ, ಏನೋ ಒಂಥರ ಪುಳಕ. ಮೊದಲ ಅನುಭವದ ಮಧುರ ಮೊದಲ ಕ್ಷಣಗಳು, ಈ ಬದುಕಲ್ಲಿ ಇನ್ನೂ ಅವೆಷ್ಟೋ? 🙂 ರಾಫ್ಟಿಂಗ್ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು, ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದ ರಿವರ್ ರಾಫ್ಟಿಂಗ್ ತಂಡದ ಇಬ್ಬರು ಹುಡುಗರು, ನಮ್ಮನ್ನು (ನಂದನ್ನೂ ಸೇರಿದಂತೆ) ದೋಣಿಯೇರಿಸಿ ತಾವೂ ದೋಣಿಯೆರಿದರು. ಶುರುವಾಯಿತು, ’ದೋಣಿ ಸಾಗಲಿ, ಮುಂದೆ ಹೋಗಲಿ’ ಗಾನ.

ಊಂಹೂಂ ಆ ಹಾಡಿನಂಥ ಶಾಂತ ಅನುಭವವನ್ನಲ್ಲ ರಿವರ್ ರಾಫ್ಟಿಂಗ್ನಿಂದ ಜನ ಬಯಸೋದು! ಕೆಲ ಕ್ಷಣಗಳಲ್ಲೇ ಪರಿಸ್ಥಿತಿ ಬದಲಾಗಿತ್ತು. ದೂರದಿಂದ ಮನೋಹರವಾಗಿ ಕಾಣುತ್ತಿದ್ದ ತೀಸ್ತಾ ನದಿಯ ಹರಿವಿನ ನಿಜ ರೂಪ ಅನುಭವಕ್ಕೆ ಬರಲು ಶುರುವಾಗಿತ್ತು. ರಾಫ್ಟಿಂಗ್ ತಂಡದವರು ಹೇಳಿದ ಪ್ರಕಾರ, ನದಿಯ ಪ್ರವಾಹ ಬಹಳವಿದ್ದುದರಿಂದ ಹಿಂದಿನ ದಿನದವರೆಗೂ ರಿವರ್ ರಾಫ್ಟಿಂಗ್ ಅನ್ನು ನಿಲ್ಲಿಸಲಾಗಿತ್ತಂತೆ, ಮತ್ತು ಅಂದಷ್ಟೇ ಮತ್ತೆ ಶುರು ಮಾಡಲಾಗಿತ್ತಂತೆ. ಹಾಕಿದ ಪ್ರತಿ ಹುಟ್ಟಿನಲ್ಲೂ ನದಿಯ ರಭಸದ ಅರಿವಾಗುತ್ತಿತ್ತು. ಅಲ್ಲಿಯವರೆಗೂ ಸಮುದ್ರದಲೆಗಳು ಉಕ್ಕಿ ಬರುವುದಷ್ಟನ್ನೇ ಕಂಡವಳಿಗೆ ಪ್ರತಿ ರ್ಯಾ ಪಿಡ್ನಲ್ಲಿ ಉಕ್ಕಿ ಬರುವ ನದಿಯಲೆ(?)ಯನ್ನು ಕಂಡ ಮೊಟ್ಟ ಮೊದಲ ಅನುಭವ ಮತ್ತು ಪುಳಕ! ಆ ಕ್ಷಣದಲ್ಲೇ ಮೈ ಮೇಲೇ ಬಂದೆರಗೋ ನದಿ, ಮಂಜಿನಂತೆ ತಂಪಾದ ನೀರಿನ ವೃಷ್ಟಿ, ಉಲ್ಲಸಿತಗೊಳ್ಳುವ ತನು-ಮನ! ಮಾರ್ಗ ಮಧ್ಯದಲ್ಲಿ ರಾಫ್ಟಿಂಗ್ ತರಬೇತುದಾರ ನನಗೆ ಹುಟ್ಟು ಹಾಕುವುದನ್ನು ಬಿಟ್ಟು ‘Kneel Down’ ಅಂತ ಹೇಳಿದ. ಅಂದರೆ ಮೊಣಕಾಲೂರಿ, ಮುಂದೆ ಮುಖ ಮಾಡಿ ಆ ದೋಣಿಯಲ್ಲಿ ಕೂರುವುದು. ಹೀಗೆ ಕೂತಾಗ ಮೇಲೆರಗುವ ನದಿಯ ಅಲೆಯಲ್ಲಿ ನಾವು ಮುಳುಗೇಬಿಡುತ್ತಿವೇನೋ ಎಂದೆನಿಸುವ ರೋಮಾಂಚಕ ಅನುಭವ. ಅದಾದ ನಂತರ ನಾ ಹುಟ್ಟು ಹಾಕಿದ್ದಕ್ಕಿಂತ… ಮುಳು-ಮುಳುಗಿ ಮೇಲೆದ್ದದ್ದೇ ಹೆಚ್ಚು.

ಹನ್ನೊಂದು ಕಿ.ಮೀ. ಉದ್ದದ ರಿವರ್ ರಾಫ್ಟಿಂಗ್ ಮಾರ್ಗದ ಮಧ್ಯದಲ್ಲಿ ರಂಗೀತ್ ಮತ್ತು ತೀಸ್ತಾ ನದಿಗಳ ಸಂಗಮವೂ ನಮಗೆ ನೋಡಲು ದೊರೆಯಿತು. ರಾಫ್ಟಿಂಗ್ ಅನುಭವವನ್ನು ನಮಗಿಂತ ಮುಕ್ತ ಮನಸಿನಿಂದ ಆಸ್ವಾದಿಸಿದ್ದು ನಂದನ್. ನಾವದನ್ನು ನಿರೀಕ್ಷಿಸಿಯೇ ಇರಲಿಲ್ಲ. ಹೀಗಾಗಿ ಸಂಪೂರ್ಣ ರಾಫ್ಟಿಂಗ್ ಅನುಭವ ಅದ್ಭುತ, ಮತ್ತು ರೋಮಾಂಚಕಾರಿಯಗಿತ್ತು. ಅರ್ಧ ಗಂಟೆಯಷ್ಟರಲ್ಲೇ ರಿವರ್ ರಾಫ್ಟಿಂಗ್ನ ಅಂತಿಮ ಕ್ಷಣಗಳು ಅದಾಗಲೇ ಬಂದುಬಿಟ್ಟಿದ್ದವು. ಬಹಳ ಆಹ್ಲಾದಮಯ ಅನುಭವದೊಟ್ಟಿಗೆ ದೋಣಿಯಿಂದ ಕೆಳಗಿಳಿದಾಗ, ಮತ್ತೆ ರಸ್ತೆಗೆ ಹೋಗಿ ಸೇರಲು ಜೀಪ್ ಒಂದು ಅಣಿಯಾಗಿ ನಿಂತಿತ್ತು. ನದಿ ದಂಡೆಗೆ ಬಂದ ನನಗೆ ಕ್ಷಣದಲೇ ಮನಸಾಗಿದ್ದು ನುಣು-ನುಣುಪಾದ ಸಮೆಕಲ ಕಲ್ಲುಗಳ ಮೇಲೆ. ಭಾರ-ಭಾರವಾದ ನುಣು-ನುಣುಪಾದ ಸಮೆಕಲ ಕಲ್ಲುಗಳನ್ನು ಚಿಕ್ಕ ಮಗುವಿನಂತೆ ಹುಡುಕಿ-ಹುಡುಕಿ ಆಯ್ದುಕೊಂಡು ಖುಶಿ-ಖುಶಿಯಾಗಿ ಜೀಪ್ ಏರಿ, ರಸ್ತೆ ತಲುಪಿದ ಮೇಲೆ ಇವರು,ರಾಫ್ಟಿಂಗ್ ಮತ್ತು ಛಾಯಾಗ್ರಹಣ ಶುಲ್ಕದ ವಿಷಯ ಬಗೆ ಹರಿಸಿದರು. ನಾ ನಂದನ್ನ ಬಟ್ಟೆ ಬದಲಿಸಿ, ಪಕ್ಕದ ರಿವರ್ ವ್ಯೂ ಹೋಟೆಲ್ನ ಕೋಣೆಯೊಂದರಲ್ಲಿ ಬಟ್ಟೆ ಬದಲಿಸಿ ಬಂದು ಬೆಚ್ಚಗೆ ಕೂತೆ. ಭಾರ ಕಂಗಳ ಮನಸು ಚಿಟ್ಟೆಯಾಗಿತ್ತು!

ಇಷ್ಟೆಲ್ಲ ಸಂಭ್ರಮಿಸಿ ನಾವು ಬೈಗುನಿ ತಲುಪಿದಾಗ್ಯೂ ಸಮಯ ಕೇವಲ ೬-೬:೩೦ ರ ಆಸು-ಪಾಸಿನಲ್ಲಿತ್ತು. ಬೈಗುನಿ ಜನಪ್ರಿಯ ಪ್ರೇಕ್ಷಣೀಯ ಸ್ಥಳವಲ್ಲ. ಅದೊಂದು ಅತಿ ಪುಟ್ಟ ಹಳ್ಳಿ, ಜನ-ಜೀವನವೇ ಇಲ್ಲವೇನೋ ಅನ್ನುವಷ್ಟು ನೀರವ ಮೌನ. ಸುತ್ತಲೆಲ್ಲ ಕಾಡು, ಬೆಟ್ಟ-ಗುಡ್ಡಗಳಿಂದಾವೃತ ಕಣಿವೆಯಲ್ಲಿ, ನಾವು ತಂಗಲು ನಿರ್ಧರಿಸಿದ್ದ ರೆಸಾರ್ಟ್. ಅದೊಂದೇ ಬೈಗುನಿಗೆ ಹೋಗಲು ನಮಗಿದ್ದ ಮುಖ್ಯ ಕಾರಣ. ರೆಸಾರ್ಟ್ ಗೇಟ್ ತಲುಪಿದಾಗ ಅನಿಸಿದ್ದು, ‘ಓಹ್! ಇಷ್ಟೇನಾ?’ ಇಳಿಜಾರಿಳಿದು ರೆಸಾರ್ಟ್ನ ಸ್ವಾಗತ ಕಛೇರಿ ತಲುಪಿದಾಗಲೇ ಕೇಳಿದ್ದು, ರಂಗೀತ್ ನದಿಯ ಕಲರವದ ಸ್ವಾಗತ! ಓಹ್! ಹೌದು ಮರೆತೇ ಹೋಗಿತ್ತು, ನಮ್ಮ ರೆಸಾರ್ಟ್ ಇದ್ದದ್ದು ರಂಗೀತ್ ನದಿ ತೀರದಲ್ಲಿ… ಮತ್ತೆ ಹುರುಪಾಯಿತು ಮನ.

ನಮ್ಮ ಕೋಣೆ ತಲುಪಿ, ನಮ್ಮ ಸಾಮಾನು-ಸರಂಜಾಮುಗಳನ್ನೆಲ್ಲ ಇರಿಸಿ, ಬಹಳವೇ ಹೊತ್ತು ವಿಶ್ರಾಂತಿ ಪಡೆದದ್ದಾಯಿತು.. ದೇಹಕ್ಕೆ ಸುಸ್ತೆನಿಸಿದರೂ ಮನಸು ಉಲ್ಲಸಿತವಾಗೇ ಇತ್ತು. ಹಾಗೆಂದೇ, ಮೇಲೆದ್ದು ರೆಸಾರ್ಟ್ನ ಒಂದು ಸುತ್ತು ಹೊಡೆದು ಬರಲು ಹೋದಾಗ ಹೆಜ್ಜೆ-ಹೆಜ್ಜೆಗೂ ಹಿಂಬಾಲಿಸಿದ್ದು ನದಿಯ ಕಲರವ! ರೆಸಾರ್ಟ್ನಲ್ಲಿಯ ಗ್ರಂಥಾಲಯ. ಸಿಕ್ಕಿಂಗೆ ಸಂಬಂಧಿಸಿದ ಹಲವು ಪುಸ್ತಕಗಳು, ಅಮಿತಾವ್ ಘೋಷ್, ಎ.ಪಿ.ಜೆ. ಅಬ್ದುಲ್ ಕಲಾಂ ಆಜ಼ಾದ್, ಪಾಲೊ ಕೋಯೆಲೋ ಇವರೆಲ್ಲರ ಉತ್ತಮ ಸಂಗ್ರಹ ಅಲ್ಲಿತ್ತು. ನದಿಯ ಝುಳು-ಝುಳು ಗಾನ ಅಲ್ಲಿಂದ ಇನ್ನೂ ಜೋರಾಗೇ ಕೇಳುತ್ತಿತ್ತು… ನೆಮ್ಮದಿಯಿಂದ, ಎಲ್ಲವನ್ನೂ ಮರೆತು ಓದಲು ಕುಳಿತುಕೊಳ್ಳಲು ಪ್ರಶಾಂತವಾದ ಸ್ಥಳ, ಇನ್ನೇನು ರಾತ್ರಿಯೆಲ್ಲ ಅಲ್ಲೇ ಬೇರೂರುವ ಯೋಚನೆಯಲ್ಲಿದ್ದ ನನ್ನನ್ನು’ನಾಳೆ ನಿಮ್ಮ ಸೈಟ್ ಸೀಯಿಂಗ್ ಎಲ್ಲಿ ಮೇಡಂ, ಡಾರ್ಜೀಲಿಂಗ್ಗಾ?’ ಅಂತ ಕೇಳಿದ ರೆಸಾರ್ಟ್ ಹುಡುಗನ ಪ್ರಶ್ನೆ ಬಡಿದೆಬ್ಬಿಸಿತ್ತು. ಡಾರ್ಜೀಲಿಂಗ್ ಅನ್ನು ನಮ್ಮ ಪ್ರವಾಸ ಪಟ್ಟಿಯಿಂದ ದೂರವಿಟ್ಟಿದ್ದೆವು ನಾವು. ಗಡಿಬಿಡಿಯ ಪ್ರವಾಸ ಬೇಕಿರಲಿಲ್ಲ ನಮಗೆ. ’ಡಾರ್ಜೀಲಿಂಗ್ ಇಲ್ಲಿಂದ ದೂರ ಅಲ್ಲವಾ? ಒಂದು ೪ ಗಂಟೆ ಬೇಕಾಗಬಹುದಾ ಹೋಗಿ ತಲುಪಲು? ಆಮೇಲೆ ಅಲ್ಲಿ ನೋಡುವುದೇನು, ಒಂದೇ ಒಂದು ದಿನದಲ್ಲಿ?’ ನಾ ಮರು ಪ್ರಶ್ನಿಸಿದೆ. ಅದಕ್ಕೆ ಆ ಹುಡುಗ ’ಇಲ್ಲಿಂದ ಡಾರ್ಜೀಲಿಂಗ್ ತಲುಪಲು ಎರಡು ಮಾರ್ಗಗಳಿವೆ. ನೀವು ಬಳಸು ಮಾರ್ಗದಿಂದ ಹೋದರೂ ಎರಡೂವರೆ ಗಂಟೆಗಿಂತ ಹೆಚ್ಚು ಬೇಕಾಗುವುದಿಲ್ಲ. ನಮ್ಮ ರೆಸಾರ್ಟ್ಗೆ ಬರುವ ಹೆಚ್ಚಾನು ಹೆಚ್ಚು ಜನ ಡಾರ್ಜೀಲಿಂಗ್ ಸಂದರ್ಶಿಸಿಯೇ ಮರಳುವುದು’ ಎಂದ. ಬೇಡದ ಮನಸಿನಿಂದ ಡಾರ್ಜೀಲಿಂಗ್ ಅನ್ನು ನಮ್ಮ ಪಟ್ಟಿಯಿಂದ ತೆಗೆದು ಹಾಕಿದ್ದ ನನಗೆ ಆ ಕ್ಷಣದಲ್ಲಿ ಹೊಸ ಸಾಧ್ಯತೆ ಮತ್ತೆ ಕಂಡಿತ್ತು.. ಕಣ್ಣು ಮಿನುಗಿದವು. ಆ ಹುಡುಗನಿಗೆ ನಾ ಹೇಳಿದೆ ’ಥ್ಯಾಂಕ್ಸ್. ನಾವು ಇದರ ಬಗ್ಗೆ ಯೋಚಿಸ್ತೇವೆ’.

ನಂತರ ನಡೆದ ಹಲವಾರು ವಿಚಾರಣೆಗಳಲ್ಲಿ, ಮತ್ತೆ ಅದೇ ಸತ್ಯ ಮರು ಸ್ಪಷ್ಟವಾಗಿತ್ತು. ನಮ್ಮವರನ್ನು ಮನವರಿಕೆ ಮಾಡಲು ಮನಸಾಗಲೇ ಅಣಿಯಾಗಹತ್ತಿತ್ತು, ಯೋಜನೆ ಹಾಕುತ್ತಲಿತ್ತು 😉 ಮತ್ತೆ ಮರುಕಳಿಸಿದ ನನ್ನ ಹಠಾತ್ ಬೇಡಿಕೆಯಿಂದ, ಇವರು ಎಂದಿನಂತೆ ಇರುಸು-ಮುರುಸಾದರು. ಆದರೆ ಚರ್ಚೆ ಅಂತ್ಯ ತಲುಪಲಿಲ್ಲ! ನೆನ್ನೆ-ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ಎಂದು ಮುಸುಕೆಳೆದು ಮಲಗಿದ್ದಾಯ್ತು. ಕೊನೆಗಾಣದ ಮನದ ಚಡಪಡಿಕೆಗೆ ರಾತ್ರಿಯೆಲ್ಲ ನಾ ಬರಿ ಮಗ್ಗಲು ಬದಲಿಸಿದ್ದೇ ಆಯ್ತು!

‍ಲೇಖಕರು G

18 October, 2012

3 Comments

  1. ಜಯಲಕ್ಷ್ಮಿ ಶೇಖರ್

    ಬೌಧ್ದ ಮಠದ ಮೌನವನ್ನು ಸವಿಯಬೇಕೆನಿಸುತ್ತಿದೆ ಮನಸ್ಸು….river rafting ವಿಷಯ ಕುತೂಹಲಕಾರಿಯಾಗಿದೆ

  2. Mohan V Kollegal

    ಈ ಪ್ರಯಾಣವನ್ನು, ಬೌದ್ಧ ಮಂದಿರ, rafting ನನ್ನು ನೀವು ವಿವರಿಸಿದ್ದು ನೋಡಿದರೆ ನೀವು ಈ ಪ್ರವಾಸವನ್ನು ಎಷ್ಟು ಖುಷಿಯಿಂದ ಕಳೆದಿದ್ದೀರಿ ಎಂಬುದು ಗೊತ್ತಾಗುತ್ತದೆ… ಚೆನ್ನಾಗಿದೆ ಲೇಖನ…

  3. ಮಂಜುಳಾ ಬಬಲಾದಿ

    ಧನ್ಯವಾದಗಳು ಜಯಲಕ್ಷ್ಮಿ ಮತ್ತು ಮೋಹನ್.. ಮೆಚ್ಚಿದ ಎಲ್ಲ ಮನಗಳಿಗೂ ವಂದನೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading