ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಳೆಯಲಿ, ಜೊತೆಯಲಿ..’, ಮಂಜುಳಾ ಬಬಲಾದಿ ಪ್ರವಾಸ ಕಥನ – ೧

ಭಾಗ ೧

ಮಂಜುಳಾ ಬಬಲಾದಿ

ಮೊದಲ ಬಾರಿಗೆ ಭಾರತದ ಬೇರೊಂದು ಮೂಲೆಗೆ ಹೋಗುತ್ತಿದ್ದರಿಂದ ಗ್ಯಾಂಗ್‍ಟಾಕ್ – ಬೈಗುನಿ ಪ್ರವಾಸವನ್ನು ನಾವು ಸುಸಜ್ಜಿತವಾಗಿ ಆಯೋಜಿಸೆದ್ದೆವು.

ಗೂಗಲ್ ಹುಡುಕಾಟ, ಸ್ನೇಹಿತರ ಜೊತೆ ಚರ್ಚೆ ಇತ್ಯಾದಿ. ವಾರಕ್ಕಾಗುವಷ್ಟು ಬಟ್ಟೆ, ಕೆಲವಷ್ಟು ಬೆಚ್ಚಗಿನ ಉಡುಪುಗಳು, ಕೊಡೆ, ರೇನ್‍ಕೋಟ್, ಸ್ವಲ್ಪ ತಿಂಡಿ-ತಿನಿಸುಗಳು, ಕ್ಯಾಮೆರ, ದುರ್ಬೀನು ಇವಷ್ಟು ಬ್ಯಾಗ್ ಸೇರಿದ ವಸ್ತುಗಳು.

ಅಂದ ಹಾಗೆ ಈ ಸ್ಥಳಗಳನ್ನು ಸಂದರ್ಶಿಸಲು ಅಕ್ಟೋಬರ್- ಮಧ್ಯ ಡಿಸೆಂಬರ್ ಹಾಗೂ ಮಾರ್ಚ್‍ನಿಂದ ಮೇ, ಬಹಳ ಪ್ರಶಸ್ತ ಸಮಯ. ಈ ಸಮಯದಲ್ಲಿ ನಿಸರ್ಗ ಸಹಕರಿಸುವುದಷ್ಟೇ ಅಲ್ಲದೇ ತನ್ನ ಸೊಬಗನ್ನೂ ಮೆರೆಯುತ್ತದೆ.

ಪ್ರವಾಸದ ಅನುಭವ – ಪ್ರಕೃತಿ ಸೌಂದರ್ಯ, ಸಾಹಸ, ಸೇನೆ, ಗಡಿಗಳು, ವಿಭಿನ್ನ ಭಾಷೆಗಳು, ಸಂಸ್ಕೃತಿ, ಧರ್ಮ ಹೀಗೆ ವಿವಿಧ ಮಜಲುಗಳ ಸಂಗಮವಾಗಿತ್ತು. ನನ್ನೊಳಗಿನ ಹೊಳಹು ಸ್ವಲ್ಪ ಬೆಳೆಯಿತು, ಸ್ವಲ್ಪ ಕಲಿಯಿತು, ಸ್ವಲ್ಪ ನಲಿಯಿತು… 🙂

ಗಗನ-ಅವನಿಯ ಪಯಣ… (ದಿನ – ೧)

(29-09-2012ರಂದು ನಮ್ಮ ಗ್ಯಾಂಗ್ಟಾನಕ್ ಪ್ರವಾಸದ ಮೊದಲ ದಿನದ ಮರುಕಳಿಕೆ)

ಹಲವು ಕಲ್ಪನೆಗಳು, ಯೋಚನೆಗಳನ್ನು ಹೊದ್ದು ಮಲಗಿದಾಗ ಆಗಲೇ ರಾತ್ರಿ ೧೦ ಘಂಟೆ… ದಿನವೂ ತಡ ಮಾಡದೇ ಆವರಿಸಿಕೊಳ್ಳುವ ನಿದ್ದೆ ಅಂದ್ಯಾಕೋ ಹತ್ತಿರ ಸುಳಿಯಲೂ ಪರದಾಡುತ್ತಿತ್ತು.. ರಾತ್ರಿ ೩:೩೦ಕ್ಕೆ ವಿಮಾನ ನಿಲ್ದಾಣಕ್ಕೆ ಹೊರಡಲು ಕಾರ್‌ನ ವ್ಯವಸ್ಥೆಯಾಗಲೇ ಆಗಿತ್ತು..ನಿದ್ದೆಯ ಶಾಸ್ತ್ರ ಮುಗಿಸಿ ೨:೩೦ಕ್ಕೆ ಎದ್ದು ತಯಾರಾಗಿದ್ದಾಯಿತು. ಅನುಭವಗಳ ಸರಮಾಲೆಗೆ ಪೋಣಿಸಿದ ಮೊದಲ ಮಣಿ – ಟ್ರಾಫಿಕ್ ರಹಿತ ಬೆಂಗಳೂರು ರಸ್ತೆಗಳಲ್ಲಿ, ತಂಗಾಳಿಯಲ್ಲಿ ವಿಮಾನ ನಿಲ್ದಾಣ ಸೇರಿದ ಅನುಭವ 🙂 ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ಗಿಂದತಲೂ ಮೊದಲು ನನ್ನನ್ನು ಆಹ್ವಾನಿಸಿದ್ದು (ನಮ್ಮವರು ಇದನ್ನು ಗಮನಿಸಿರಲಿಕ್ಕಿಲ್ಲ ಅಂತ ನನ್ನ ಗುಮಾನಿ ;-)) ಚಿಂವ್ ಚಿಂವ್ ಗುಬ್ಬಿ…! ಅವರು ಚೆಕ್ಇಂನ್ ವಿವರಗಳನ್ನು ವಿಚಾರಿಸುತ್ತಿದ್ದರೆ ನನಗೆ ರೇಡಿಯೋ ಗಾನ! ಮುಂದುವರೆದಂತೆ ಕಂಡಿದ್ದು ಮತ್ತಷ್ಟು, ಮಗದಷ್ಟು ಗುಬ್ಬಿಗಳು… ವಿಮಾನ ನಿಲ್ದಾಣದ ದುಬಾರಿ ಛಾ ಅಂಗಡಿಗಳಲ್ಲಿ, ಜಾರಿ ಬೀಳುವಂತಹ ನೆಲಹಾಸುಗಳ ಮೇಲೆ ಜಿಗಿದಾಡುತ್ತ, ಚಿಂವ್ಗುುಟ್ಟುತ್ತಿದ್ದ ಗುಬ್ಬಿಗಳನ್ನು ಕಂಡು ನನ್ನ ಮನಸಲಿ ಮೂಡಿದ ಫೇಸ್ಬುಗಕ್ ಸ್ಟೇಟಸ್ ’ಬೆಂಗಳೂರಿನ ಗುಬ್ಬಿಗಳೂ ಮಹತ್ವಾಕಾಂಕ್ಷಿಗಳು, ಊರು ಬಿಟ್ಟು ಸೇರಿವೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!’ ಆದರೆ ಪೋಸ್ಟ್ ಮಾಡಲಿಲ್ಲ ಅಷ್ಟೇ 😉

೬:೦೫ರ ಚುಮು-ಚುಮು ಮುಂಜಾವಿನಲ್ಲಿ, ರೆಕ್ಕೆಯಿಲ್ಲದೇ, ಪುಕ್ಕವಿಲ್ಲದೇ ಗಗನಕ್ಕೆ ಹಾರಿದ್ದಷ್ಟೇ! ಕೆಲವೇ ನಿಮಿಷಗಳಲ್ಲಿ ಬೇರೊಂದು ಲೋಕ…! ದೇವರ ಫೋಟೊಗಳೋ.., ’ನಾರಾಯಣ ನಾರಾಯಣ’ ನಾರದನ ಚಿತ್ರಣಗಳೋ… ಏನೋ ಗೊತ್ತಿಲ್ಲ, ತೇಲುವ ಮೋಡಗಳೊಡನೆ ತೇಲುವಾಗ ನನಗೆ ಯಾವಾಗಲೂ ಅನಿಸೋದು, ನಾವೆಲ್ಲ ಆ ಕ್ಷಣದಲ್ಲಿ ಕೈಲಾಸ ವಾಸಿಗಳು ಅಂತ! 😉 ನಿಮಿಷಗಳುರುಳಿದಂತೆ ಕಲ್ಪನೆಗಳು ಗರಿಗೆದರಿದ್ದವು…ಮೋಡಗಳು ಸಾಗರವಾಗಿ, ನದಿಯಾಗಿ, ಕಾಡಾಗಿ, ತೇಲುವ ಭಾವವಾಗಿ ಮನಸೂರೆಗೊಂಡಿದ್ದವು.. ಓಹ್…! ಆಗಲೇ ಕೋಲ್ಕತ್ತ ಬಂದಾಗಿತ್ತು.. ಕೈಲಾಸದಿಂದ ೨೯ ಡಿಗ್ರೀ ಸೆಲ್ಷಿಯಸ್^ನ ಧಗೆಯ ಧರೆಗೆ ಮರಳಿಯಾಗಿತ್ತು!

ಕೆಲ ಗಂಟೆಗಳ ಕಾಲ ಹರಣ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ… ಆ ಸಮಯದಲ್ಲಿ ಮನವನಾಳಿದ್ದು Paulo Coelhoರ The Witch of Portobello ಪುಸ್ತಕ… ಆಗ ಓದಿದ ಕೆಲವು ಅದ್ಭುತ ಸಾಲುಗಳು.. ” I watched you dancing. Well, I do the same thing, except that it’s the letters, not my body, that dance”. ನಂತರ ಕೋಲ್ಕತ್ತದಿಂದ ಭಾಗ್ಡೊ ಗ್ರ ವಿಮಾನ ನಿಲ್ದಾಣ ಚಿಟಿಕೆ ಹೊಡೆಯುವುದರಲ್ಲಿ ಬಂದು ಬಿಟ್ಟಿತ್ತು!

ಇಲ್ಲಿ ನನ್ನ ಪತಿರಾಯರಿಗೊಂದು ದೊಡ್ಡ ಧನ್ಯವಾದ ಅರ್ಪಿಸಲೇಬೇಕು! ನನ್ನೆಲ್ಲ ಅನುಭಗಳಿಗೆ ಅನುವು ಮಾಡಿ ಕೊಡುವವರೇ ಅವರು! ಮೊದಲೇ ಕಾದಿರಿಸಿದ ಆರಾಮದಾಯಕ Xyloನಲ್ಲಿ ಗ್ಯಾಂಗ್ಟಾಬಕ್ ಕಡೆಗೆ ಪಯಣ… ಕಣ್ಣರಳಿಸಿ ನೋಡುವುದೂ ಒಂದು ಕಲೆ! ನೋಡಿದಾಗ ಕಂಡಿದ್ದು… ಸಮತಟ್ಟು ನೆಲದಲ್ಲಿ ಬೆಳೆದ ಚಹಾ ಗಿಡಗಳು, ಸೀರೆಯುಟ್ಟು ಹೀರೊ ಸೈಕಲ್ ಏರಿದ ನೀರೆ, ಮೂರು ಗಾಲಿ ಸೈಕಲ್ ರಿಕ್ಷಾಗಳು, ಒಂದು ರಿಕ್ಷಾದ ಚಾಲಕನ ಆಸನಕ್ಕೆ ಅಂಟಿಸಿದ್ದ ಛತ್ರಿ (ಕೆಲಸ ಮುಖ್ಯ, ಸ್ವಯಂ ಕಾಳಜಿಯೂ ಅಷ್ಟೇ ಮುಖ್ಯ!)… ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ದಾರಿಗುಂಟ ನದಿ… ಆಹಾ! ನದಿಯೊಡನೆ ಓಡುವ ವಾಹನ.. (ದಿಕ್ಕು ಬೇರೆ, ಶೈಲಿ ಬೇರೆಯಾದರೂ!), ಹೆಜ್ಜೆಗೊಂದು River View ಹೋಟೆಲ್ಗದಳು!

೬ ಗಂಟೆಗೆಲ್ಲ ದಟ್ಟ ಕತ್ತಲು, ಕತ್ತಲಾವರಿಸುತ್ತಿದ್ದಂತೆ ಭೇಟಿಯಾದ ನದಿ ತೀಸ್ತಾ.. ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದೊಡ್ಡ, ಪವಿತ್ರ ನದಿ. ಹುಣ್ಣಿಮೆ ಹಿಂದೋ ಮುಂದೋ ಇತ್ತು ಅನ್ಸತ್ತೆ, ಬೆಳದಿಂಗಳ ಮಾಯೆ ನದಿಯ ಕಲರವದೊಡನೆ ಹರಿಯುತ್ತಿತ್ತು… ಕಪ್ಪು-ಕಪ್ಪು, ಎತ್ತರದ ಬೆಟ್ಟಗಳು, ಹಾಲು ಬೆಳದಿಂಗಳು, ಬೆಳದಿಂಗಳ ಕುಡಿದು ಜುಳು, ಜುಳು ಹರಿಯುತ್ತಿದ್ದ ತೀಸ್ತಾ! ಕವಿ ಮನಸಿಗೆ ಇನ್ನೊಂದು ಲೋಕ… ಅಬ್ಬಾ! ಒಂದೇ ಲೋಕದಲ್ಲಿ ಮತ್ತೆ ಅದೆಷ್ಟು ಲೋಕಗಳು…!!

ಕಳೆದು ಹೋಗಿ ಮತ್ತೆ ಮರಳಿ, ಕಳೆದು ಹೋಗಿ ಮತ್ತೆ ಮರಳಿ, ಗ್ಯಾಂಗ್ಟಾ್ಕ್ ತಲುಪಿದಾಗ ಗಂಟೆ ೮:೨೦, ಧೋ ಮಳೆಯ ಸ್ವಾಗತ! ಮಳೆಗೆ ಮನ ಹಿಗ್ಗಿದರೂ ಪ್ರವಾಸದ ಕಥೆಯೇನು ಅನ್ನೋ ಅಳುಕು ಹೀಗೆ ಬಂದು ಹಾಗೆ ಹೊಯ್ತು.. ಮಳೆ ಸ್ವಾಗತ ಕೋರಿದ ಪ್ರವಾಸಗಳೆಲ್ಲ ನನ್ನ ಅನುಭವದಲ್ಲಿ ಅದ್ಭುತವಾಗಿರುತ್ತವೆ… ಅದೇ ನಂಬಿಕೆಯೊಡನೆಯೇ ಕೋಣೆ ಸೇರಿ, ಬಿಸಿ-ಬಿಸಿ ಊಟವುಂಡು, ಬೆಚ್ಚಗೆ ಮಲಗಿದ್ದು.. ಮಳೆ ಸದ್ದಿಗೆ ಕಿವಿಯಾಗಿ!

ಉತ್ತರಗಳು, ಎತ್ತರಗಳು…

ಕತ್ತಲಾದಷ್ಟೇ ಬೇಗ ಬೆಳಕೂ ಆಗಿಬಿಟ್ಟಿತ್ತು… ೪:೪೫ ರ ಮುಂಜಾವಿನಲಿ ಕಣ್ಬಿಟ್ಟಿದ್ದು ತನ್ನಷ್ಟಕ್ಕೇ ತಾ ಹಾಡಿಕೊಳ್ಳುತ್ತಿದ್ದ ಹಕ್ಕಿಯ ಗಾನಕ್ಕೆ. ಯಾಂತ್ರಿಕ ದಿನಚರಿಯ ಹಂಗಿಲ್ಲದ ಆ ಬೆಳಗಿನಲ್ಲಿ, ಲಗು-ಬಗೆಯಿಂದ ತಯಾರಾಗಿ, ಕ್ಯಾಮೆರಾ ಜೋತು ಹಾಕಿಕೊಂಡು, ಬೆಳಗಿನ ವಾಯು ವಿಹಾರಕ್ಕೆ ಹೆಜ್ಜೆ ಕಿತ್ತಿಟ್ಟು ಹೊರ ನಡೆದಾಗ… ತಾಜಾ ಅನಿಸೋ ಮೌನ, ಚಿಲಿ-ಪಿಲಿ ಗಾನ, ರಾತ್ರಿ ಮಳೆಯ ನೆನಪು, ಎಲ್ಲ ತಳಕು ಹಾಕಿಕೊಂಡು ಆ ಮುಂಜಾವನ್ನು ಮತ್ತಷ್ಟು ಮಧುರವಾಗಿಸಿಬಿಟ್ಟಿದ್ದವು…ಈ ಥರ ಜಗದ ಚಿಂತೆ ಬಿಟ್ಟು ಪ್ರವಾಸಕ್ಕೆ ಹೊರಟಾಗೆಲ್ಲ ನಮ್ಮ ಮೂರನೇ ಕಣ್ಣು ತೆರೆದುಕೊಳ್ಳುತ್ತದೋ ಏನೋ.. ದಿನದ ಚೆಲುವನ್ನು ಆರಾಧಿಸುವ ಮನೋಭಾವ ತಾನೇ ತಾನಾಗಿ ಮೂಡಿಬಿಟ್ಟಿರುತ್ತದೆ! ದಾರಿಗುಂಟ ಅರಳಿದ ಹೂಗಳು, ಅವುಗಳ ಮೇಲಿನ ಮಂಜಿನ ಹನಿ, ಮಳೆಯಲ್ಲಿ ನೆಂದು ಬೆಳಗಿನ ಸೊಬಗಲ್ಲಿ ಮೈ ತೊಳೆದುಕೊಳ್ಳುತ್ತಿದ್ದ ಜೇಡರ ಬಲೆ, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಗುನುಗುನಿಸುತ್ತಾ, ವಾಯು ವಿಹಾರ ಮುಗಿಸಿ ರಿಸಾರ್ಟ್ನು ಹುಲ್ಲು ಹಾಸಿಗೆ ಮರಳಿದ ನನ್ನನ್ನು ಮರಳು ಮಾಡಿದ್ದು…’ಹನಿ, ಹನಿ, ಹನಿ, ಹನಿ…. ತುಂತುರು ಮಳೆ ಹನಿ!’

ರಾತ್ರಿಯೆಲ್ಲಾ ಧಾರಾಕಾರವಾಗಿ ಮಳೆ ಸುರಿದಿದ್ದರೂ ಆಗಲೇ ಎಳೆ ಬಿಸಿಲು ಮುಗುಳು ನಗುತ್ತಿತ್ತು (ನಮ್ಮ ಪುಣ್ಯ! :-)) ಜೊತೆಗೇ ನನ್ನ ಮಗ ಮತ್ತು ಅವರಪ್ಪನೂ (ಅಷ್ಟೊತ್ತಿಗಾಗಲೇ ಅವರೂ ರಿಸಾರ್ಟ್ ಅಲ್ಲೇ ವಿಹಾರಿಸಲು ಬಂದು ಬಿಟ್ಟಿದ್ದರು). ಊಂಹೂಂ… ನನ್ನ ಮಗನ ಮುಗುಳುನಗೆಗಿಂತ ಕ್ಷಣಗಳ ಹಿಂದೆ ನನ್ನ ಮರಳು ಮಾಡಿದ್ದ ಇಬ್ಬನಿ ಹನಿಯೋ/ಮಳೆ ಹನಿಯೋ ಗೊತ್ತಿಲ್ಲ…ಅದರ ಆಕರ್ಷಣೆ ವಿಪರೀತ! ಪ್ರತಿ ಹುಲ್ಲು ಗರಿಕೆಯ ಮೇಲೆ ಅಣಿಗೊಳಿಸಿದಂತಿದ್ದ ಹನಿ ಮಾಲೆಗಳು… ಮತ್ತೆ ಫೋಟೊ ತೆಗೆಯಲು ಮುಂದಾದೆ. ಒಂದೆರಡು ಫೋಟೊ ಕ್ಲಿಕ್ಕಿಸುವುದರಲ್ಲೇ ನನ್ನ ಕಣ್ಣು ಕಂಡಿದ್ದು ಅದ್ಭುತ…!

ರೋಮಾಂಚನವೋ, ಜ್ಞಾನೋದಯವೋ, ಅಂಥದ್ದೇ ಏನೋ ಆಗಿತ್ತು ನನಗೆ ಆ ಕ್ಷಣದಲ್ಲಿ…’ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ!’ ಹುಲ್ಲು ಗರಿಕೆಯಿಂದ ಕಣ್ತೆಗೆದಾಗ ನನಗೆ ಕಂಡಿದ್ದು ಎರಡು ಪುಟ್ಟ ಹಸಿರೆಲೆಗಳ ನಡುವೆ ಸಂತೃಪ್ತಿಯಿಂದ ಮಿಂಚುತ್ತಿದ್ದ ಸೌಂದರ್ಯ, ಮುದ್ದು ಬೆಳಕಿನ ಮಣಿ, ಅದೇ ಆ ಇಬ್ಬನಿ ಹನಿ! ಹಸಿರೆಲೆಗಳ ಬೊಗಸೆಯಲ್ಲಿ ಹಿತವಾಗಿ ನಗುತಿದ್ದ ಆ ಹನಿಯಲ್ಲಿ ಜಗವೆಲ್ಲ ಕಾಣುತ್ತಿತ್ತು… ಎಳೆ ಬಿಸಿಲ ಬೆಳಕ ಸಾರವನ್ನು ಹೀರಿ, ಮಿರಿ-ಮಿರಿ ಮಿಂಚುತ್ತಿದ್ದ ಹನಿ, ಸಂಪೂರ್ಣ ಪಾರದರ್ಶಕ! ವಜ್ರವೂ ನಾಚಬೇಕು ಅಂಥ ಹೊಳಹು… ಆ ಪುಟ್ಟ ಹನಿಯಲ್ಲಿ ಅದರ ಸುತ್ತಲಿನ ಹಸಿರು, ಬೆಳಗಿನ ಆ ಮುಗಿಲು, ಅಷ್ಟೇ ಯಾಕೆ? ಆ ರವಿಯೂ ಕೂಡ ಪ್ರತಿಫಲಿಸಿಬಿಟ್ಟಿದ್ದ… ಜಗವೊಂದು ಹನಿಯೊಳಗಂತೆ!

ಮನಸಿಲ್ಲದ ಮನಸಿನಿಂದ ಅಲ್ಲಿಂದ ಹೆಜ್ಜೆ ಕಿತ್ತು, ಮುಂದಿನ ಪ್ರವಾಸದೆಡೆಗೆ ಹೆಜ್ಜೆಯಿಡಬೇಕಾಯಿತು. ಆವತ್ತು ನಮ್ಮ ಪಯಣದ ಪಟ್ಟಿಯಲ್ಲಿದ್ದದ್ದು, ಕೇವಲ ಚಂಗು ಸರೋವರ, ಬಾಬಾ ಮಂದಿರ್ ಮತ್ತು ನಾಥುಲಾ ಪಾಸ್ (ಭಾರತ-ಚೀನಾ ಗಡಿ). ಗ್ಯಾಂಗ್ಟಾಿಕ್ನಿಂರದ ಈ ಸ್ಥಳಗಳೆಲ್ಲ ಒಂದು ೪೦-೫೦ ಕಿ.ಮೀ. ದೂರ. ಈ ಎಲ್ಲ ಸ್ಥಳಗಳು ಮಿಲಿಟರಿ ಸರಹದ್ದಿನಲ್ಲಿ ಬರುವ ಜಾಗಗಳು. ಹೀಗಾಗಿ ಅಲ್ಲಿ ಹೋಗಲು ಮಿಲಿಟರಿ ಅನುಮತಿ ಪಡೆಯಬೇಕಾಗುತ್ತದೆ. ಈ ಅನುಮತಿ ದೊರೆಯುವುದೂ ಒಂಥರ ಅದೃಷ್ಟದ ವಿಷಯವೇ! ನಮ್ಮ ಅದೃಷ್ಟಕ್ಕೆ, ನಮಗೆ ಚಂಗು ಸರೋವರ ಮತ್ತು ಬಾಬಾ ಮಂದಿರ್‌ಗೆ ಹೋಗಲು ಅನುಮತಿ ದೊರೆತಿತ್ತು. ನಾಥುಲಾ ಪಾಸ್ಗೆ್ ಹೋಗಲು ಅನುಮತಿ ದೊರೆಯಲಿಲ್ಲ. ಹಿಂದಿನ ದಿನದ ಮಳೆಯ ಪ್ರಭಾವದಿಂದಾಗಿ ಚಂಗು ಸರೋವರಕ್ಕೆ ಹೋಗಲು ಇದ್ದ ಸನಿಹದ ದಾರಿಯನ್ನು ಮುಚ್ಚಲಾಗಿತ್ತು (ಲ್ಯಾಂಡ್ ಸ್ಲೈಡ್ ಅಲ್ಲಿ ಸರ್ವೇ ಸಾಮಾನ್ಯ). ಹೀಗಾಗಿ ನಮ್ಮ ಕಾರ್ ಚಾಲಕ ಹೇಳಿದ್ದು, ನಾವು ಚಂಗು ಸರೋವರ ತಲುಪಲು ಕನಿಷ್ಟ ಒಂದು ೪-೫ ಗಂಟೆ ಬೇಕಾಗಬಹುದು ಅಂತ. ಆದದ್ದಾಗಲಿ ಅಂತ ನಾವೂ ಹೊರಟೇ ಬಿಟ್ಟೆವು.

ಮರೆವು ನನಗೊಂದು ವರ! 🙂 ದಾರಿ ದೂರ ಅಂತ ಗೊತ್ತಾಗಿಯೂ ಯಾವುದೇ ಪುಸ್ತಕವಿಲ್ಲದೇ ನಾ ಕಾರ್ ಏರಿದ್ದೆ. ನಿಸರ್ಗವನ್ನು, ಪಯಣವನ್ನು ಆಸ್ವಾದಿಸುವುದು, ಸಂಗೀತವನ್ನು ಆಲಿಸುವುದು ನನ(ಮ)ಗೆ ಇದ್ದ ಎರಡೇ ಆಯ್ಕೆಗಳು. ಹೀಗಾಗಿ ಆ ಕ್ಷಣದಲ್ಲೇ ಬದುಕಬೇಕಾದ ಅದ್ಭುತ ಅವಕಾಶ ಅಲ್ಲಿತ್ತು. ದಾರಿಗುಂಟ ಹಸಿರು, ಹೆಜ್ಜೆ-ಹೆಜ್ಜೆಗೂ ಎದುರಾಗುವ ಝುಳು-ಝುಳು ಝರಿಗಳು, ಆ ಪ್ರದೇಶದ ಜನ, ಬಣ್ಣ-ಬಣ್ಣದ ಧ್ವಜಗಳು (ಸಿಕ್ಕಿಂನಲ್ಲಿ, ಹುಟ್ಟು, ಸಾವು, ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ದೇವರ ಮಂತ್ರಗಳನ್ನೊಳಗೊಂಡ ಧ್ವಜಗಳನ್ನು ನೆಡುವ ಪರಿಪಾಠವಿದೆ.. ಇಷ್ಟು ನಾ ಮಾಡಿದ ವಿಚಾರಣೆಯಿಂದ, ನನಗೆ ಅರ್ಥವಾಗಿದ್ದು) ಹೀಗೇ ದಾರಿ ಸಾಗುತ್ತಿತ್ತು. ಭತ್ತ ಹೇಗೆ ಬಿಡುತ್ತದೆ ಎಂದು ನೋಡಬೇಕೆಂದುಕೊಂಡಿದ್ದ ನನ್ನ ಬಹಳ ದಿನದ ಕುತೂಹಲಕ್ಕೂ ಅಂದು ನನಗೆ ಉತ್ತರ ಸಿಕ್ಕಿತ್ತು…

ದಾರಿಯಲ್ಲಿ ಒಂದು ಮರದ ಕೆಳಗೆ ಬಸ್ಗಾ್ಗಿ ಕಾದಿದ್ದ ಅಜ್ಜಿಯೊಬ್ಬಳ ಫೋಟೊ ತೆಗೆಯಬೇಕೆಂದು ಬಹಳ ಮನಸಾಗಿತ್ತು.. ಆದರೆ ನಮ್ಮ ಕಾರ್‌ನ ಚಾಲಕ್ ನಾನ್-ಸ್ಟಾಪ್! ಅದ್ಯಾಕೋ ಗೊತ್ತಿಲ್ಲ ಸ್ವಲ್ಪ ದೂರದಲ್ಲಿ ಅವನು ಕಾರ್ ನಿಲ್ಲಿಸಿದ್ದ, ಏನೋ ವಿಚಾರಿಸಲು! ನಾನು ಹೇಳದೇ-ಕೇಳದೇ ಪರಾರಿಯಾದೆ… ಆದರೆ ಆ ಅಜ್ಜಿ ಕೂತಿದ್ದು ಬಹಳ ದೂರವಿತ್ತು ಅನ್ಸತ್ತೆ. ದಾರಿಯಲ್ಲಿ ಇನ್ನೊಬ್ಬ ಹೆಂಗಸು ಕಂಡಳು.. ’ನಿಮ್ಮ ಫೋಟೊ ತೆಗೀಲಾ?’ ನಾ ಕೇಳಿದೆ. ’ಮೊದಲು ದುಡ್ಡು ತೆಗಿ’ ಅವಳೆಂದಳು… ನಾ ದಂಗು! ಕಾರ್‌ಗೆ ಮರಳಿದ್ದು ಇಂಗು ತಿಂದ ಮಂಗು…!

ಪ್ರಶ್ನೆ ಕೇಳದೇ ಉತ್ತರಿಸಿದ್ದು ಪ್ರಕೃತಿ. ಪ್ರಶ್ನೆ ಕೇಳಿ ಉತ್ತರಿಸಿದ್ದು ಮಾನವಿ! ಕೆಲವು ಉತ್ತರಗಳೊಡನೆ, ಮತ್ತೆ ಕೆಲವು ಪ್ರಶ್ನೆಗಳೊಡನೆ ಎತ್ತರದೆಡೆಗೆ ಹೊರಟಿದ್ದ ನಾನು…

‍ಲೇಖಕರು G

15 October, 2012

18 Comments

  1. Gopaal Wajapeyi

    ಓದಿದೆ… ಚಿತ್ರಕಶಕ್ತಿಯ ಸರಳ ನಿರೂಪಣೆ… ಖುಷಿಯಾಗುತಿದೆ…

  2. Badarinath Palavalli

    ಉದಯೋನ್ಮುಖ ಸರಸ್ವತಿ ಮಂಜುಳಾ ಅವರು ಅವಧಿಯಲ್ಲಿ ಅಂಕಣಗಾರ್ತಿಯಾದದ್ದು ನಮಗೆಲ್ಲ ಖುಷಿಯ ವಿಚಾರ.

    ಅವರು ಇನ್ನಷ್ಟು ಜನಜನಿತರಾಗಲಿ ಎಂದು ನಮ್ಮೆಲ್ಲರ ಹಾರೈಕೆ.

    ಗ್ಯಾಂಗ್ಟಕ್ ಪ್ರವಾಸದ ವಿವರಗಳು ನನಗೆ ಖುಷಿ ಕೊಟ್ಟವು. ಒಳ್ಳೆಯ ಚಿತ್ರಗಳು ಹಾಕಿದ್ದಾರೆ. ನಮಗೂ ಅಲ್ಲಿಗೆ ಭೇಟಿ ನೀಡುವ ಹುರುಪು ಬಂದಿತು.

  3. Anitha Naresh Manchi

    ಬೇಗ ಬೇಗ ಬರಲಿ ಇನ್ನೊಂದು ಕಂತು.. 🙂

  4. samyuktha

    ನಾನೆ ಪ್ರವಾಸ ಮಾಡಿ ಬಂದಂತಾಯಿತು! 🙂

  5. RJ

    ಪ್ರಶ್ನೆ ಕೇಳದೇ ಉತ್ತರಿಸಿದ್ದು ಪ್ರಕೃತಿ. ಪ್ರಶ್ನೆ ಕೇಳಿ ಉತ್ತರಿಸಿದ್ದು ಮಾನವಿ!
    🙂
    ವೆರಿ ನೈಸ್.ಪ್ಲೀಸ್ ಕಂಟಿನ್ಯೂ..

  6. ಮಾಲಾ

    ಚೆನ್ನಾಗಿದೆ ನಿಮ್ಮ ಪ್ರವಾಸದ ವರ್ಣನೆ. ಸಹಜ ಸುಂದರ ಅಂತ ಇದೆಯಲ್ಲ ಹಾಗೆ. ಮುಂದಿನ ಕಂತಿಗೆ ಕಾಯುವೆ.

  7. Mohan V Kollegal

    ತುಂಬಾ ಮುದ್ದು ಮುದ್ದಾಗಿದೆ ಬರಹ… ಓದಿಸಿಕೊಳ್ಳುತ್ತದೆ… ನಾನೇ ವಿಮಾನದಲ್ಲಿ ಹಾರಾಡಿ ಆ ದೃಶ್ಯ, ಸಾದೃಶ್ಯವನ್ನು ಅನುಭವಿಸುತ್ತಿರುವಂತೆ ಭಾಸವಾಯಿತು… ಅವಧಿಯಲ್ಲಿನ ಈ ಅಂಕಣಕ್ಕೆ ಅಭಿನಂದನೆ ಅಕ್ಕ… ಸಾಗಲಿ…

  8. Veena Desai

    ಲೇಖನ ಓದಿ ತುಂಬಾ ಖುಷಿ ಅನಿಸ್ತು . ನಾನು ನಿಂಜೊತೆ ಪ್ರಯಾಣ ಮಾಡಿದ್ಹಾಗಿತ್ತು . ಮುಂದಿನ ಕಂತು ಬೇಗ ಬರಲಿ…..

  9. arathi ghatikaar

    ಮಂಜುಳಾ ನಿಮ್ಮ ಪ್ರವಾಸ ಕಥನ ಮುಂಜಾವಿನ ಮಂಜು… ,ಇಬ್ಬನಿಯಲ್ಲಿ ಮಿಂದ ಹಸಿರು ರಾಶಿಯಷ್ಟೇ ಸುಂದರವಾಗಿ. ಆಹ್ಲಾದಕರವಾಗಿ ಮೂಡಿ ಬಂದಿದೆ . ಎರಡೆನೆಯ ಕಂತಿಗೆ ಎದುರು ನೋಡುವೆ. ಅಭಿನಂದನೆಗಳು 🙂

  10. vikas hegde

    nice narration… interesting..

  11. ಜಯಲಕ್ಷ್ಮಿ ಶೇಖರ್

    ತುಂಬ ಚೆನ್ನಾಗಿ ಬರೀತೀರಪ್ಪ…ನೀವೇರಿದ ಎತ್ತರಕ್ಕೆ ನಮ್ಮನ್ನೂ ಕರೆದೊಯ್ಯಿರಿ

  12. Krishna

    ಮಂಜುಳಕ್ಕ ನಿಜವಾಗಿಯು ಈ ಲೇಖನವನ್ನು ಓದುತ್ತಿದ್ದರೆ ನನಗೆ ನಮ್ಮ ಶಿವಮೊಗ್ಗ ಮತ್ತು ಸಾಗರದ ನೆನಪಾಗುತ್ತದೆ…. ನಿಮ್ಮ ಅನುಭವಗಳನ್ನು ನಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು…. ಕಥನ ಹೀಗೆ ಮುಂದುವರೆಯಲಿ…

  13. ಮಂಜುಳಾ ಬಬಲಾದಿ

    ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಈ ಪ್ರವಾಸ ಕಥನ ಇನ್ನೂ ಕೆಲವು ದಿನ ಹೀಗೇ ಮುಂದುವರೆಯಲಿದೆ. ನಿಮ್ಮ ಓದು ಮುಂದುವರೆಯುತ್ತದೆಂದು ಆಶಿಸುತ್ತೇನೆ 🙂

  14. Ramachandra Babu

    Great…!!! ಪ್ರಕೃತಿಯೊಂದಿಗಿನ ನಿಮ್ಮ ಒಡನಾಟ ಮತು್ತ ತಾಳಬದ್ದವಾದ “ಶಬ್ದಗಳ ನೃತ್ಯ” ಮೆಚ್ಚತಕು್ಕದು…. ಬಂಡಿ ಓಡಲಿ ಮುಂದಿನ ಕಂತಿಗೆ…!!

  15. Sunaath

    ಯಾರನ್ನು ನಾವು ಅಮಾಯಕರು ಎಂದು ಭಾವಿಸಿರುತ್ತೇವೆಯೋ ಅವರೂ ಸಹ ಪ್ರವಾಸೋದ್ಯಮದಲ್ಲಿ ಸಿಲುಕಿ ಪಕ್ಕಾ ವ್ಯಾಪಾರಿಗಳಾಗಿರುವುದನ್ನು ತಿಳಿದು ಸೋಜಿಗವಾಯಿತು. ಕುತೂಹಲಪೂರ್ಣ ವಿವರಣೆಗಳು ಮುಂದುವರಿಯಲಿ

  16. Anuradha.rao

    ಪ್ರವಾಸ ಕಥನ ಚೆನ್ನಾಗಿದೆ …ಅಭಿನಂದನೆಗಳು

  17. ಮಂಜುಳಾ ಬಬಲಾದಿ

    ನಿಮ್ಮೆಲ್ಲರ ಮೆಚ್ಚಿನ ನುಡಿಗಳಿಗೆ ನನ್ನ ನಮ್ರ ನಮನಗಳು 🙂

  18. V Sagar

    Tumba sogasagi moodi bandide. Baravanige adbhuta!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading