ಮಲ್ಲಿಕಾರ್ಜುನ ಹೊಸಪಾಳ್ಯ
1
ಶಿಶಿರ ಋತು
ಅಶ್ವಿನಿ ಮಳೆ ಅರ್ಧಪಾದ
ಚೈತ್ರ ಮಾಸ
ದ ಒಂದು ದಿನ
ಅರ್ಧರಾತ್ರಿ ಮೊಬೈಲಿನ ಸದ್ದು
ನಂಬರು ನೋಡಿದರೆ ಅಣ್ಣಂದು
ಅತ್ತಲಿಂದ ಕೇಳಿಸಿದ ಮೊದಲ ಮಾತೇ
“ಗಾಬರಿ ಆಗುವಂಥಾದ್ದು ಏನಿಲ್ಲ
ಅಮ್ಮಂಗೆ ಕೆಂದಸ ಒತ್ತಲಿಸಿ ಪಕ್ಕೆ ನೋವು
ನಿಮ್ಮುನ್ನೆಲ್ಲಾ ನೋಡಬೇಕಂತೆ”
ಐನೂರು ಮೈಲಿ ದಾರಿ
ಮೂರು ಬಸ್ಸು ಹತ್ತಿ ಮೂರು ಬಸ್ಸು ಇಳಿದು
ಮಾರನೇ ದಿನ ಮನೆ ತಲುಪಿದಾಗ
ಉರಿ ಬಿಸಿಲು “ಈಗ ಬಂದ್ರಾ ಚನಗಿದೀರಾ”
ಎಂದು ಎದುರಾದವರ ಮುಖಗಳ ದಿಟ್ಟಿಸಿದಾಗ
ಸಾವಿನ ಕಳೆ
ಇರಲಿಲ್ಲ ಸದ್ಯ, ಗಟ್ಟಿ ನಿಟ್ಟುಸಿರೊಂದು ನಿಡಿದಾಗಿ ಹೊರಬಿತ್ತಾಗ

ಸಿಂಗಲ್ ಕಾಟಿನ ಮೇಲೆ ಉದ್ದೂಕು ಮಲಗಿದ
ಅಮ್ಮ, ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಕೆತ್ತಿದ
ಎಳನೀರು ಬುರುಡೆ, ರವೆ ಗಂಜಿ ಲೋಟ
ಬಿಸಿ ನೀರಿನ ಫ್ಲಾಸ್ಕು, ಅರ್ಧ ತಿಂದ ಇಡ್ಲಿ
ಮಾತ್ರೆ ಕವರು, ಬಟ್ಟೆ ಬರೆ, ನೆಂಟರಿಷ್ಟರು
ಮುಖ ಕಂಡೊಡನೆ ಕೈಹಿಡಿದು ಅಳು ಅಳು ಅಳು
“ನಿನ್ನ ನೋಡದೆ ಎಲ್ಲಿ ಹೋಗಿಬಿಡ್ತೀನೋ”
ಅಂದುಕೊಂಡಿತ್ತಂತೆ
ಇನ್ನು ಮುಂದೆ ಯಾವಾಗ ಸತ್ತರೂ ಪರವಾಗಿಲ್ಲ
ಅಂತ ಎದ್ದು ಕುಂತು
ನಾಲ್ಕು ಸ್ಪೂನು ಗಂಜಿ, ಅರ್ಧ ಕಪ್ಪು ಎಳನೀರು
ಒಂದು ಮುಷ್ಟಿ ಮಾತ್ರೆ ನಲುಮಿ
ಸಂಜೆ ಮಕ್ಕತ್ತಲಾಗುವಷ್ಟರಲ್ಲಿ
ಕೊನೆಯಾಸೆಗಳ ವಿಲ್ಲು ಸುರುವಚ್ಚಿಕೊಂಡಿತು
ಕೆಬ್ಬೆ ಹೊಲದ ದೊಡ್ಡೊಂಗೆ ಮರದ
ಬುಡದಲ್ಲಿ ಮಣ್ಣು ಮಾಡಬೇಕು
ಕಲ್ಲೇನಳ್ಳಿ ಐನೋರನ್ನು ಕರೆಸಿ
ಕೆಂದಸುವಿಗೆ ಹುಟ್ಟಿದ ಹೆಣ್ಣುಗರುವನ್ನು
ದಾನ ಕೊಡಬೇಕು
ಯಾರು ಎಲ್ಲೇ ಇದ್ದರೂ ವರ್ಷಕ್ಕೊಂದು ಮಾರ್ನೋಮಿಗೆ
ಬಂದು ಹುವ್ವ ನೀರು ಇಡಬೇಕು
ಅನ್ನುತ್ತಲೇ ಓ ಅಳು ಬಿಕ್ಕಳಿಕೆ ಕಣ್ಣೀರು
ಗಳ ಕಟ್ಟೆಯೊಡೆದು ಇಟ್ಟಾಡಿದವು
2
ಅದಾಗಿ ವಸಂತ ಕಳೆದು
ಗ್ರೀಷ್ಮ ವರ್ಷ ಶರಧ ಹೋಗಿ
ಹೇಮಂತ ನಡೆಯುತ್ತಿದೆ
ಗಟ್ಟಿ ಜೀವ ತಿಂದುಂಡುಕೊಂಡು ಆರಾಮಾಗಿದೆ






0 Comments