ನನ್ನ ಕಾಡುವ ಆ 'ಮೇ ದಿನ'

mahantesh k

ಕೆ ಮಹಾಂತೇಶ

 
ನನ್ನ ಬಾಲ್ಯದ ದಿನಗಳಲ್ಲಿ ಪ್ರತಿ ವರ್ಷ ನನ್ನೂರಿನಲ್ಲಿ ಆಚರಿಸಲ್ಪಡುತ್ತಿದ್ದ ವಿಜೃಂಭಣೆಯ ಮೇ ದಿನಾಚರಣೆ ಒಂದು ರೀತಿಯ ಜಾತ್ರೆಯೇ ಸರಿ. ಬೆಂಗಳೂರು ಸೇರಿ 15 ವರ್ಷಗಳ ಬಳಿಕಾವೂ ಹತ್ತಾರು ಊರುಗಳಲ್ಲಿ ಮೇ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿ ಮತ್ತು ಆ ಕುರಿತು ಲೇಖನ ಬರೆದಾಗಿಯೂ.. ಚಿಕ್ಕವಯಸ್ಸಿನಲ್ಲಿ ನಮ್ಮೂರಿನಲ್ಲಿ ನಡೆಯುತ್ತಿದ್ದ ಮೇ ದಿನವೇ ನನಗೀಗಲೂ ಹಚ್ಚ ಹಸಿರು.
‘ಮೇ ದಿನದ ಕಾರ್ಯಕ್ರಮ ನಡೆಯುತ್ತಿದ್ದ ಆ ಜಾಗ ನನಗೆ ಮಾತ್ರವಲ್ಲ ನನ್ನೂರಿನಲ್ಲಿ ನನ್ನೊಂದಿಗೆ ಬೆಳೆದ ಎಲ್ಲಾ ಹುಡುಗ ಹುಡುಗಿಯರಿಗೂ ಆ ಎರಡು ದಿನ ಹಬ್ಬದ ಸಿಹಿ ಊಟ ಮಾಡಿ ಬಡಿಸುವ ತಾಣವೇ ಆಗಿರುತ್ತಿತ್ತು. ಪ್ರತಿವರ್ಷದ ಏಪ್ರಿಲ್ 30 ರ ಮಧ್ಯಾನ್ಹದಿಂದಲೇ ಊರ ಹೊರಗಿನ ‘ಐಗೂರು’ ಹಳ್ಳದ ಬಳಿಯ ಸುರೇಶ-ಶೇಖರಪ್ಪ ಸಮಾಧಿ ಬಳಿ ಬೃಹದಾಕಾರವಾಗಿ ಹಾಕಲಾಗುತ್ತಿದ್ದ ಪೆಂಡಾಲ್ ನಮಗೆಲ್ಲಾ ಎರಡು ದಿನದವರೆಗೂ ಕುಣಿದು ಕುಪ್ಪಳಿಸುವ ಮೈದಾನ.
mayday_iww01ರಾಶಿ ರಾಶಿ ಬಂದು ಬೀಳುತ್ತಿದ್ದ ಅಕ್ಕಿ, ಬೇಳೆ, ಎಣ್ಣೆ, ರವೆ, ಅಕ್ಕಿ, ಸಕ್ಕರೆ ಪದಾರ್ಥಗಳು ಹಾಗೂ ಈರುಳ್ಳಿ, ಟೊಮೆಟೋಯಾದಿಯಾಗಿರುತ್ತಿದ್ದ ತರಕಾರಿಗಳು ಮರುದಿನ ಮರವಣಿಗೆಯಲ್ಲಿ ಬಂದು ಸಮಾವೇಶಗೊಳ್ಳುವ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳ ಹೊಟ್ಟೆ ತುಂಬಿಸುತ್ತಿತ್ತು. ಸಾಲದೆಂಬಂತೆ ನಮಗೆ ಹಾಗೂ ನಮ್ಮೂರಿನ ಬಹುತೇಕ ಮನೆಗಳಿಗೆಲ್ಲಾ ತಿಂಡಿ ರಾತ್ರಿ ಊಟದಿಂದ ಹಿಡಿದು ಎರಡು ದಿನಗಳ ನಿರಂತರ ದಾಸೋಹವೆಲ್ಲಾ ಸಾಗುತ್ತಿದ್ದು ಅಲ್ಲೆ.
ಕೆಂಬಾವುಟಗಳ ಕಲರವ..
ದಾವಣಗರೆಯ ಮೇ ದಿನವೆಂದರೆ… ಅಕ್ಷರಶಃ ಕೆಂಬಾವುಟಗಳ ಕಲರವ. ಅಂದು ಹೆಚ್ಚು ಕಡಿಮೆ ಆ ಇಡೀ ಗಿರಣಿ ನಗರವೆಲ್ಲಾ ಕೆಂಪಂಗಿ ಹಾಗೂ ಖಾಕಿ ಪ್ಯಾಂಟ್ ತೊಟ್ಟ ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತು. ಇದರಿಂದಾಗಿ ಒಂದು ರೀತಿಯಲ್ಲಿ ಅಲ್ಲಿನ ವ್ಯವಹಾರವೇ ಸ್ಥಬ್ಧಗೊಳ್ಳುತ್ತಿತ್ತು. ಇದಕ್ಕೆ ಪ್ರಮುಖ ಕಾರಣ 1970 ರಲ್ಲಿ ಇಲ್ಲಿನ ಕಾರ್ಮಿಕ ಚಳುವಳಿಯಲ್ಲಿ ಉಂಟಾದ ಸೈದ್ದಾಂತಿಕ ಬಿರುಕಿನ ಪರಿಣಾಮ ಉಂಟಾದ ಘರ್ಷಣೆ ಇದರಿಂದಾಗಿ ಎರಡು ಹಿರಿಯ ನಾಯಕರ ಹತ್ಯೆ. ನಂತರ 1972 ರಲ್ಲಿ ಸಂಭವಿಸಿದ ಕಾಟನ್ ಮಿಲ್ ಮ್ಯಾನೇಜರ್ ಬಿ.ಪಿ ಶೆಟ್ಟಿ ಎಂಬುವರ ಕೊಲೆ, ಇದಾದ ನಂತರ ಏಕ ಸಂಘ ಮತ್ತು ಪಕ್ಷದ ಅಧಿಪತ್ಯ ಸ್ಥಾಪನೆ. ಹೀಗಾಗಿ ಒಂದು ರೀತಿಯಲ್ಲಿ ಕಾರ್ಮಿಕ ಚಳವಳಿಗಳೆಂದರೆ ಭಯದ ವಾತಾವರಣವೇ ಇಲ್ಲಿಯ ವ್ಯಾಪಾರಸ್ಥರ ನಡುವೆ ಮನೆ ಮಾಡಿತ್ತು. ಇಲ್ಲಿಯ ಕಾರ್ಮಿಕ ವರ್ಗಕ್ಕೂ ಅದೊಂದು ತಮ್ಮ ಮೇಲಿನ ಶೋಷಣೆ ವಿರುದ್ದ ಹಾಗೂ ಹಕ್ಕಿಗಾಗಿ ನಡೆಯುವ ಹೋರಾಟವೇ ಆಗಿದ್ದರಿಂದ ಅದು ಸಹಜವಾಗಿಯೇ ಕ್ರಾಂತಿಕಾರಿ ಮೇ ದಿನವೇ ಆಗಿ ಪರಿವರ್ತಿತವಾಗಿತ್ತು.
ಪ್ರತಿ ಮೇ ದಿನದಂದು ಡಾಂಗೆ ಪಾರ್ಕ್ ಬಳಿ ಇರುವ ಸುರೇಶ ಹಾಗೂ ಶೇಖರಪ್ಪ ನವರ ನೆನಪಿನಲ್ಲಿ ಸ್ಥಾಪಿತವಾಗಿದ್ದ ವ್ಯಾಯಾಮ ಶಾಲೆಯಿಂದ ಅವರ ಬೃಹತ್ ಕಟೌಟ್ ಗಳನ್ನು ನಂತರ ಕಾರ್ಲ್ ಮಾರ್ಕ್ಸ್, ಲೆನಿನ್, ಎಂಗೆಲ್ಸ್ ಅವರ ಬೃಹತ್ ಭಾವಚಿತ್ರಗಳನ್ನೊತ್ತ ಟ್ರಾಕ್ಟರ್ ಗಳು.. ಮೆರವಣಿಗೆ ಸಾಗಿದರೆ ಅದರ ಮುಂದೆ ಕೆಂಪು ಸಮವಸ್ತ್ರಧಾರಿ ಸ್ವಯಂ ಸೇವಕರ ಪಥ ಸಂಚಲನ ನಂತರ.. ಕೆಂಪು ಸಮವಸ್ತ್ರಧಾರಿ ಬ್ಯಾಂಡ್, ಅವರ ಹಿಂಭಾಗ…ಕೆಂಪಂಗಿ ಹಾಗೂ ಕೆಂಪುಸೀರೆ ತೊಟ್ಟು ಸಾಗುವ ಕಾರ್ಮಿಕರು ಅವರೆಲ್ಲರ ಜೊತೆ ತಟ್ಟೆಯಲ್ಲಿ ಕುಂಕುಮವನ್ನು ಹಿಡಿದು ಮೆರವಣಿಗೆ ತುಂಬೆಲ್ಲಾ ತೂರುತ್ತಾ ಇಡೀ ರಸ್ತೆಯನ್ನೆಲ್ಲಾ ಕೆಂಪಾಗಿಸುತ್ತಿದ್ದ ಕಾರ್ಮಿಕರು… ಮುಂಭಾಗದಲ್ಲಿ ಭಾರೀ ಗಾತ್ರದ ಕೆಂಪು ಧ್ವಜಗಳೊಂದಿಗೆ ಮೆರವಣಿಗೆ ಮುನ್ನಡೆಸುತ್ತಿದ್ದ ನಾಯಕರು… ಹಾಗೂ ಇದೆಲ್ಲವೆನ್ನು ರಸ್ತೆಯ ಇಕ್ಕೆಲದಲ್ಲಿ ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದ ಸಾರ್ವಜನಿಕರು…
ಹೀಗೆ ಇಡೀ ನಗರವನ್ನು ಸುಮಾರು 4-5 ಗಂಟೆಗಳ ಕಾಲ ಸುತ್ತಾಡಿದ ನಂತರ ಪ್ರಧಾನ ಕೇಂದ್ರವಾದ ನಮ್ಮೂರು ಆವರಗೆರೆಗೆ ಬಂದು ತಲುಪುವ ಹೊತ್ತಿಗೆಲ್ಲಾ ಮಧ್ಯಾನ್ಹವಾಗಿ ಬೇಸಿಗೆಯ ಸೂರ್ಯ ನೆತ್ತಿನಯ ಮೇಲೆ ಝಳಪಿಸುತ್ತಿದ್ದ. ಅಷ್ಟೊತ್ತಿಗೆ ಸುಸ್ತಾಗಿ ಕೆಂಪು ಮಿಶ್ರಿತ ಬೆವರನ್ನು ಮೈತುಂಬಾ ಇಳಿಸಿಕೊಳ್ಳುತ್ತಲೇ ಅಲ್ಲಿ ಬಿಸಿ ಬಿಸಿಯಾಗಿ-ಸವಿ ಸವಿಯಾಗಿ ಕೊಪ್ಪರಿಗೆಗಳಲ್ಲಿ ತಯಾರಾಗಿದ್ದ ರವೆ ಪಾಯಸ, ಕೋಸಂಬರಿ, ಅನ್ನ ಸಾಂಬರ್ ಅಂತೆಲ್ಲಾ ಚಪ್ಪರಿಸುತ್ತಿರುವಾಗಲೇ ಕಾಮ್ರೇಡ್ ಪಂಪಾಪತಿಯವರು ದೊಡ್ಡದಾದ ಧ್ವನಿಯಲ್ಲಿ ಮೈಕ್ ನಲ್ಲಿ ಮಾತನಾಡುತ್ತಾ ಮೇ ದಿನದ ಮಹತ್ವ ಹಾಗೂ ಶುಭಾಶಯ ತಿಳಿಸುತ್ತಿದ್ದರು.
ಹೀಗೆ ಮೇ ದಿನಾಚರಣೆಯ ಮೆರವಣಿಗೆ, ಊಟ ನಂತರ ಭಾಷಣ ಮುಗಿಸಿದ ಜನರು ಅಲ್ಲೇ ಪಕ್ಕದ್ಲಲೇ ಹರಿಯುತ್ತಿದ್ದ ಹಳ್ಳದಲ್ಲೇ ಕೈ ತೊಳೆದು ನಂತರ ಆ ಬಿಸಿಲ ಬೇಗೆಯನ್ನು ಹಾಗೂ ಊಟದ ಭಾರ ಎರಡನ್ನೂ ಇಳಿಸಿಕೊಳ್ಳಲು ಹರಿಯುತ್ತಿದ್ದ ಆ ಹಳ್ಳದಲ್ಲಿ ಕುಟುಂಬ ಸಮೇತ ಮೀಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಜಾಡಿ ಮತ್ತೇನಾದರೂ ಹಸಿವಾದರೆ ಮತ್ತೆ ಉಳಿದ ಪಾಯಸವನ್ನು ಹೊಟ್ಟೆಗಿಳಿಸಿಕೊಂಡೇ ಹಿಂತಿರುಗುತ್ತಿದ್ದರು. ಕೆಲವಂತೂ ಮನೆಗ್ಹೋಗಿ ಸಣ್ಣ ಪುಟ್ಟ ಪಾತ್ರೆ ತಂದು ರಾತ್ರಿ ಊಟಕ್ಕೂ ಬೇಕಾಗುವ ಪಾಯಸ ಅನ್ನ ಸಾಂಬಾರ್ ಕೊಂಡೊಯ್ದು ಭರ್ಜರಿಯಾಗಿಯೇ ಆಚರಿಸುತ್ತಿದ್ದರು.
ಕರ್ನಾಟಕದ ಮ್ಯಾಂಜೆಸ್ಟರ್..!
mayday_flagcropಇದು ಹೀಗೆಯೇ… ಬಹುತೇಕ 90 ರ ದಶಕದವರೆಗೂ ಒಂದು ಕಾಲದ ಕರ್ನಾಟಕದ ಮ್ಯಾಂಜೆಸ್ಟರ್ ಎಂಬ ಖ್ಯಾತಿವೆತ್ತಿದ್ದ ದಾವಣಗೆರೆ ನಗರದಲ್ಲಿ ಹಲವು ದಶಕಗಳ ಕಾಲ ನಿರಂತರವಾಗಿ ನಡೆಯುತ್ತಿದ್ದ ಮೇ ದಿನಾಚರಣೆ ಎಂಬ ಸೋಜಿಗ. ದಾವಣಗೆರೆಯಲ್ಲಿ 60 ರಿಂದ 90 ದಶಕದ ಅವಧಿವರೆಗೆ ದಾವಣಗೆರೆ ಕಾಟನ್ ಮಿಲ್, ಚಂದ್ರೋದಯ, ಗಣೇಶ, ಆಂಜನೇಯ, ಶಂಕರ್, ಸಿದ್ದೇಶ್ವರ ಎಲ್ಲಮ್ಮ, ಚಿಗಟೇರಿ ಎನ್ನುವ ಹತ್ತಿ ಗಿರಣಿಗಳಿದ್ದವು. ಇದರ ಜೊತೆ ರವಿ ಹಾಗೂ ಬಿ.ಟಿ ಎನ್ನುವ ಎಣ್ಣೆ ಮಿಲ್ ಗಳಿದ್ದವು. ಆದರೆ ಬಟ್ಟೆ ತಯಾರಾಗುತ್ತಿದಿದ್ದು ದಾವಣಗೆರೆ ಕಾಟನ್ ಮಿಲ್ (ಡಿಸಿಎಂ)ನಲ್ಲಿ ಮಾತ್ರ. ಉಳಿದ ಮಿಲ್ ಗಳಲ್ಲಿ ಬಟ್ಟೆ ತಯಾರಿಕೆಗೆ ಅಗತ್ಯವಾದ ನೂಲನ್ನು ಮಾತ್ರವೇ ತಯಾರಿಸಲಾಗುತ್ತಿತ್ತು. ಅಂದಿನ ಕಾಲಕ್ಕೆ ದಾವಣಗೆರೆ ಕಾಟನ್ ಮಿಲ್ (ಡಿಸಿಎಂ) ಬಟ್ಟೆಗಳೆಂದರೆ ಭಾರೀ ಹೆಸರುವಾಸಿ.
ಅದರಲ್ಲೂ ಇಲ್ಲಿ ತಯಾರಾಗುತ್ತಿದ್ದ ಅತ್ಯಂತ ಮೃದುವಾದ ಟವೆಲ್ ಮತ್ತು ಬಿಳಿ ಬಟ್ಟೆಗೆ ಇಂಗ್ಲೆಂಡ್ ನಲ್ಲಿ ವಿಪರೀತ ಬೇಡಿಕೆ ಇತ್ತು. ಇನ್ನೂ ಇಲ್ಲಿನ ಬಿ.ಟಿ. ಮಿಲ್ ನಲ್ಲಿ ತಯಾರಾಗುತ್ತಿದ್ದ ವನಸ್ಪತಿ ಆಯಿಲ್ ಗೆ ಮುಂಬೈನಲ್ಲಿ ಉತ್ತಮ ಮಾರುಕಟ್ಟೆ ಹೊಂದಿತ್ತು. ಹೀಗೆ ಉತ್ತಮ ವ್ಯಾಪಾರ ಮತ್ತು ವಹಿವಾಟು ನಡೆಸುತ್ತಿದ್ದ ಇಲ್ಲಿ ಮಾಲೀಕರು ಸಹಜವಾಗಿಯೇ ದುರಾಶೆಗೆ ಬಿದ್ದು ಕಾರ್ಮಿಕರ ಶೋಷಣೆ ಮಾಡುತ್ತಾ ತಮ್ಮ ಲಾಭವನ್ನು ತೀವ್ರಗೊಳಿಸಿಕೊಂಡರು.
ಅತ್ಯಲ್ಪ ಕೂಲಿ, ತೀವ್ರರೀತಿಯ ಶೋಷಣೆ ಮತ್ತು ಅತಂತ್ರ ಬದುಕಿನ ನೊಗದಲ್ಲಿ ಸಿಲುಕಿಕೊಂಡಿದ್ದ ಇಲ್ಲಿನ ಐವತ್ತು ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರಿಗೆ ‘ಕಾರ್ಮಿಕ ಸಂಘ’ವೆಂಬುದು ಅವರ ಬದುಕನ್ನು ವಿಮೋಚನೆಗೊಳಿಸುವ ಅಸ್ತ್ರವಾಗಿ ದೊರಕಿತು. ಹೀಗಾಗಿಯೇ ಅದು ರಾಜ್ಯದಲ್ಲಿಯೇ ಒಂದು ಪ್ರಬಲ ದುಡಿಯುವ ವರ್ಗದ ಬಲಿಷ್ಟ ಕೇಂದ್ರವಾಗಿ ಗಮನ ಸೆಳೆಯಿತು ಮಾತ್ರವಲ್ಲ ಅಲ್ಲಿ ಬೆಳೆದು ಬಂದ ಬೃಹತ್ ಕಾರ್ಮಿಕ ಚಳವಳಿ ಅಕ್ಷರಶಃ ಮಾಲೀಕ ವರ್ಗವನ್ನು ಹಲವು ದಶಕಗಳ ತನ್ನ ಹಿಡಿತದಲ್ಲೇ ನಿಯಂತ್ರಿಸಿತು. ರಾಜಕೀಯವಾಗಿಯೂ ಎರಡು ಬಾರಿ ಪಂಪಾಪತಿ ಎಂಬ ಸಾಮಾನ್ಯರಲ್ಲಿ ಸಾಮಾನ್ಯನಾದ ಕಾರ್ಮಿಕನನ್ನು ತನ್ನ ನಾಯಕನನ್ನಾಗಿ ಹಾಗೂ ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡ ಹೆಮ್ಮೆ ದಾವಣಗೆರೆ ಎಂಬ ನಗರದ್ದು.
ಅಷ್ಟೇ ಅಲ್ಲ ಬಹುತೇಕ ಕಾರ್ಮಿಕರಿಂದಲೇ ಹುಟ್ಟಿಕೊಂಡ ಇಲ್ಲಿನ ಕೆಟಿಜೆ ನಗರ, ಭಾರತ್ ಕಾಲೋನಿ, ನಿಟುವಳ್ಳಿ, ಜಾಲಿನಗರ ಎಂಬ ಪ್ರದೇಶಗಳು ಹಲವು ದಶಕಗಳ ಕಾಲ ನಿರಂತರವಾಗಿ ಕಾರ್ಮಿಕ ಪ್ರತಿನಿಧಿಗಳನ್ನೇ ಇಲ್ಲಿನ ನಗರ ಸಭೆಗೆ ಆಯ್ಕೆ ಮಾಡುತ್ತಾ ನಗರಾಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದ ಇತಿಹಾಸವನ್ನು ಈ ಕಾರ್ಮಿಕ ನಗರ ಹೊಂದಿತ್ತು. ಹೆಚ್ಚಾಗಿ ಅನಕ್ಷರಸ್ಥ ಕಾರ್ಮಿಕನೇಿ ಮುಖಂಡರನ್ನಾಗಿ ಬೆಳಸಿ ನಂತರ ಅವರುಗಳನ್ನು ನಗರಸಭೆಗೆ ಸದಸ್ಯರುಗಳನ್ನಾಗಿ ಚುನಾಯಿಸಿ ದಾವಣಗೆರೆ ನಾಗರೀಕರಿಗೆ ಅವಶ್ಯವಾಗಿದ್ದ ಉಚಿತ ವಸತಿ, ಕುಡಿಯುವ ನೀರು, ತಂಪಾದ ಪಾರ್ಕ್ ಗಳು ಹಾಗೂ ಸಾಲುಮರಗಳ ಮೂಲಕ ಹಸಿರು ವಾತಾವರಣವನ್ನು ಉಣಬಡಿಸಿದ್ದು ಕಮ್ಯೂನಿಸ್ಟ್ ರು ಎಂಬ ಸಂಗತಿಯನ್ನು ಇಲ್ಲಿನ ಜನ ಈಗಲೂ ಮೆಲುಕು ಹಾಕುತ್ತಾರೆ.
ಸೋವಿಯತ್ ಜೊತೆಗಿನ ಸಂಬಂಧ
ಹೌದು.. ದಾವಣಗರೆಗೂ ಹಾಗೂ ಸೋವಿಯತ್ ರಷ್ಯಾಕ್ಕೂ ಸಾವಿರಾರು ಮೈಲಿ ದೂರ. ಆದರೆ ಆ ದೂರದಲ್ಲಿ ನಡೆಯುವ ಮತ್ತು ಘಟಿಸುವ ಪ್ರತಿ ಬೆಳವಣಿಗಳು ಪ್ರತಿ ತಿಂಗಳು ನಮ್ಮನ್ನು ತಲುಪುತ್ತಿದ್ದವು.. ಹೇಗಂತೀರಾ..? ಅದೇ ‘ಸೋವಿಯತ್ ದೇಶ ಅಥವಾ ಸೋವಿಯತ್ ಲ್ಯಾಂಡ್’ ಎನ್ನುವ ಪತ್ರಿಕೆ ಮೂಲಕ. ನಮ್ಮ ಮನೆಗೆ ಪ್ರತಿ ತಿಂಗಳು ತಪ್ಪದೆ ಆ ಪತ್ರಿಕೆ ಅಂಚೆ ಮೂಲಕ ತಲುಪುತ್ತಿತ್ತು. ಬಹು ವರ್ಣದ ಆ ಪತ್ರಿಕೆ ಮೂಲಕವೇ ನಾವು ಅಂದಿನ ಮಾಸ್ಕೋ, ಲೆನಿನ್ಗ್ರಾಡ್, ನಗರಗಳು ಅಲ್ಲಿ ಕಟ್ಟಲ್ಪಟ್ಟಿದ್ದ ಗಗನಚುಂಬಿ ಕಟ್ಟಡಗಳು ಹಾಗೂ ದೀಪಾಲಂಕೃತ ಝಗಝಗಿಸುವ ರಸ್ತೆಗಳನ್ನು ನೋಡಿ ರೋಂಮಾಚನಗೊಳ್ಳುತ್ತಿದ್ದೆವು. ಅಂದು ನಾವು ನೋಡಿದ ಆ ಚಿತ್ರಗಳು ಈಗಲೂ ನನ್ನ ಸ್ಮೃತಿಪಟಲದಲ್ಲಿ ಹಾಗೆ ಉಳಿದುಕೊಂಡಿವೆ.
may dayದಾವಣಗೆರೆಯ ಬಹುತೇಕ ಈಗಿರುವ ಪ್ರಮುಖ ನಾಯಕರು ಸೇರಿದಂತೆ ಹಿಂದಿನವೆರೆಲ್ಲಾ ಸೋವಿಯತ್ ರಷ್ಯಾಕ್ಕೇ ತಿಂಗಳುಗಟ್ಟಲೇ ಹೋಗಿ ಬಂದಿರುವುದನ್ನು ಕೇಳಿದ್ದೇನೆ. ಈಗ ದಾವಣಗೆರೆಯಲ್ಲಿ ಕಮ್ಯೂನಿಸ್ಟರೆಂದರೆ ಬೇರೆ ಪಕ್ಷಕ್ಕೂ ಇವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಅಸಹ್ಯಪಡುವವರನ್ನು ನಾನು ಕಂಡಿದ್ದೇನೆ. ಇದರ ಹೊರತಾಗಿಯೂ ಅವರಿಗೆ ಸಿಕ್ಕ ಹಲವು ವರ್ಷಗಳ ಕಾಲದ ಆಡಳಿತದ ಅವಕಾಶ ಬಳಸಿ ದಾವಣಗರೆಯಲ್ಲಿ ಸೋವಿಯತ್ ಮಾದರಿಯಲ್ಲೇ ವ್ಯಾಯಾಮ ಶಾಲೆ, ಪಾರ್ಕ್ ಗಳು, ಜನರಿಗೆ ವಸತಿ, ಸ್ವಚ್ಚತೆಯಂತಹ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿದ್ದು ಅದರ ಜೊತೆ ವೇತನ ಹಾಗೂ ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ತೀವ್ರ ರೀತಿಯ ಶೋಷಣೆಗೆ ಕಡಿವಾಣ ಹಾಕಲು ಶ್ರಮಿಸಿದ್ದು ಅತ್ಯುತ್ತಮ ಸಾಧನೆಯೇ.
ಕೊನೆಯದಾಗಿ… ನಿಜ ಅಂದಿನ ಮೇ ದಿನದಂತೆ ಇಂದಿಲ್ಲ ಮೇ ದಿನ. ದಾವಣಗೆರೆಯ ಎಲ್ಲಾ ಹತ್ತಿಗಿರಣಿಗಳು ನಾಮಾವಶೇಷಗೊಂಡಿವೆ. ಇದಕ್ಕೆಲ್ಲಾ ಕಮ್ಯೂನಿಸ್ಟರೇ ಕಾರಣ ಎಂಬ ಆರೋಪವನ್ನು ಬಂಡವಾಳಿಗರ ಬೆಂಬಲಿಗರದ್ದು. ಆದರೆ ಸರ್ಕಾರದ ಉದಾರೀಕರಣ ನೀತಿಗಳು ಇಲ್ಲಿನ ಮಿಲ್ ಗಳನ್ನು ಕಾರ್ಮಿಕರನ್ನು ಇಲ್ಲವಾಗಿಸಿವೆ ಎಂಬ ಸತ್ಯವನ್ನು ಅವರು ಮರೆ ಮಾಚುತ್ತಾರೆ. ಕಾರ್ಮಿಕರ ಸಂಖ್ಯೆ ಹಾಗೂ ಕಾರ್ಮಕ ಸಂಘಗಳು ಕ್ಷೀಣವಾಗಿದ್ದರಿಂದ ನನ್ನೂರಿನಲ್ಲಿ ನಡೆಯುತ್ತಿದ್ದ ಮೇ ದಿನಾಚರಣೆಯು ಎಂದೋ ದಾವಣಗರೆ ನಗರಕ್ಕೇ ಮಾತ್ರ ಸೀಮಿತಗೊಂಡು ಮೊದಲಿನ ತನ್ನ ಸೊಬಗನ್ನು ಕಳೆದುಕೊಂಡಿದೆ.
ಆದರೂ ಮೇ ದಿನ ಯಾವತ್ತಿದ್ದರೂ ಜಗದಗಲದಂತೆ ನನಗೂ ಸ್ಪೂರ್ತಿಯೇ ಆಗಿದೆ.
ಇಂತಹ ವಾತವರಣದಲ್ಲಿ ಬೆಳೆದ ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ.

‍ಲೇಖಕರು G

May 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. anand rugvedi

    ಮಹಾಂತೇಶ್ ರ ಬರಹ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು. ಬೇಸಿಗೆ ರಜೆಗೆಂದು ದಾವಣಗೆರೆಗೆ ಬರುತ್ತಿದ್ದ ಆ ದಿನಗಳಲ್ಲಿ ಮೇ ದಿನದ ಬೃಹತ್ ಮೆರವಣಿಗೆ ರೋಮಾಂಚಗೊಳಿಸುತ್ತಿತ್ತು, ಈಗ ಅದು ಸವಿನೆನಪು. ಈಗಿನ ದಾವಣಗೆರೆಯ ಸ್ಥಿತಿಗೆ ನೂರಾರು ಕಾರಣಗಳಿವೆ. ನಾವೆಲ್ಲಾ ಒಂದು ವಾದಕ್ಕೇ ಜೋತು ಬೀಳದೇ, ಪ್ರಾಂಜಲವಾಗಿ ವಾಸ್ತವವನ್ನು ಒಪ್ಪಲೇಬೇಕು.

    ಪ್ರತಿಕ್ರಿಯೆ
  2. ಚಿದನಂದ ಮಾಸನಕಟ್ಟಿ

    ಈ ವರುಷದ ಮೇ 1ಕ್ಕೆ ನಾನು ಪ್ರೊ. ಗಣೇಶ ಎನ್ ದೇವಿ(ಭಾಷಾವಿಜ್ಞಾನಿಗಳು, ಇಂಗ್ಲಿಷ್ ಪ್ರೊಪೇಸರ್, ಬರೋಡಾ) ಅವರು ಧಾರವಾಡದಲ್ಲಿ ಆರಂಭಿಸಿದ ‘ತ್ರಿಜ್ಯಾ’ ಎಂಬ ಹೊಸ ಚಿಂತನಾ ಸಭೆಯನ್ನು ಸೇರಿದೆ. ಅಲ್ಲಿ ಕಾರ್ಮಿಕರ ಕುರಿತು ವಿಶೇಷ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ನಿಮ್ಮ ಅನುಭವ ಅದಕ್ಕೆ ಪೂರಕವೆನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: