-ಪ್ರೊ ಜಿ ಎನ್ ಉಪಾಧ್ಯ
ಕರ್ನಾಟಕ ಹಾಗೂ ಮಹಾರಾಷ್ಟ್ರ ಇವೆರಡು ನೆರೆಯ ರಾಜ್ಯಗಳು. ಕನ್ನಡ ಮತ್ತು ಮರಾಠಿ ಭಾಷೆಗಳ ಬಾಂಧವ್ಯ ಅನಾದಿ. ಲಾಗಾಯ್ತಿನಿಂದಲೂ ಈ ಉಭಯ ರಾಜ್ಯಗಳ ನಡುವೆ ಸಾಂಸ್ಕೃತಿಕ ಕೊಳುಪಡೆ ಅವ್ಯಾಹತವಾಗಿ ನಡೆದಿದೆ. ಹಾಗೆಯೇ ಈ ಎರಡು ಭಾಷಾ ಪ್ರದೇಶಗಳು ಅಂಟಿಕೊಂಡು ಜೊತೆಯಾಗಿವೆ. ಕನ್ನಡ ಮರಾಠಿ ಭಾಷೆ, ಸಂಸ್ಕೃತಿಗಳ ನಡುವಣ ನಂಟಿಗೆ ಶತಮಾನಗಳ ಇತಿಹಾಸವಿದೆ.
ಗೋದಾವರಿ ನದಿಯನ್ನು ದಾಟಿ ನರ್ಮದಾ ನದಿಯವರೆಗೆ ಆಡಳಿತ ನಡೆಸಿದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ದೇವಗಿರಿಯ ಸೇವುಣರು ಹಾಗೂ ಅವರ ಮಾಂಡಲಿಕರು ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಕಾಪಾಡಿದ್ದರೆಂಬುದು ಅಭಿಮಾನದ ಸಂಗತಿ. ಕರ್ನಾಟಕ, ಕನ್ನಡಿಗ, ಕನ್ನಡ ಈ ಮೂರೂ ಘಟಕಗಳಿಗೆ ಇಲ್ಲಿನ ಆಳರಸರು ಘನತೆ ಗೌರವಗಳನ್ನು ಗಳಿಸಿಕೊಟ್ಟದ್ದು ಈಗ ಇತಿಹಾಸ. ಅವರು ಕನ್ನಡ ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯನ್ನು ಶಕ್ತಿ ಮೀರಿ ಪ್ರೋತ್ಸಾಹಿಸಿದರು. ಶಿಲಾಹಾರರು, ದೇವಗಿರಿಯ ಸೇವುಣರು ಮತ್ತು ಕಲಚುರಿಗಳ ಇತಿಹಾಸವೆಂದರೆ ಕರ್ನಾಟಕ ಮಹಾರಾಷ್ಟ್ರದ ಜನ ಸಮೂಹದ ಸಮ್ಮಿಶ್ರವಾದ ಇತಿಹಾಸವೇ ಆಗಿದೆ. ಇವರು ಸ್ನೇಹಿತರಾಗಿ ಬಾಳಿದುದು, ಸ್ಪರ್ಧಿಗಳಾಗಿ ಹೋರಾಡಿದುದೂ ಐತಿಹಾಸಿಕ ಸತ್ಯ.
ಕನ್ನಡ ನಾಡಿಗೆ, ಮಹಾರಾಷ್ಟ್ರದ ರಾಜಕೀಯ ಹಿನ್ನೆಲೆ,ಇತಿಹಾಸ, ಸಾಹಿತ್ಯ ಚರಿತ್ರೆಗಳಿಗಿಂತ ಹೆಚ್ಚಿನ ಹಳಮೆಯಿದೆ. ಸರ್ವಭಾಷಾಮಯಿಯಾದ ಸರಸ್ವತಿಯ ಉಪಾಸಕರಾದ ಅಂದಿನ ಕನ್ನಡ ಅರಸರ ಆಶ್ರಯದಲ್ಲಿ (ದೇವಗಿರಿಯ ಸೇವುಣರ ಕಾಲದಲ್ಲಿ) ಮರಾಠಿ ಭಾಷೆಗೆ ವಿಶೇಷ ಮನ್ನಣೆ ಪ್ರಾಪ್ತವಾಯಿತು. ಕನ್ನಡ ಕವಿತಾ ಸಂಪ್ರದಾಯವನ್ನು ಮೆಚ್ಚಿ ಅನುಸರಿಸಿ ಕಾವ್ಯಕೃಷಿಯನ್ನು ಮಾಡಿದ ಮರಾಠಿ ಕವಿಗಳೂ ಇದ್ದಾರೆ. ಹೀಗೆ ಹನ್ನೊಂದು ಹನ್ನೆರಡನೆಯ ಶತಮಾನದಲ್ಲೇ ಕನ್ನಡದ ಜೊತೆಗೆ ಮರಾಠಿ ಭಾಷೆ ಹಾಗೂ ಸಾಹಿತ್ಯವನ್ನು ಪೋಷಿಸಿದ ಕನ್ನಡ ದೊರೆಗಳು, ನಮ್ಮಲ್ಲಿರಬೇಕಾದ ಸಾರಸ್ವತ ಮೈತ್ರಿಗೆ ನಾಂದಿ ಹಾಡಿದ್ದರೆಂ ಬುದು ಗಮನಾರ್ಹ ಸಂಗತಿ.
ರಾಜಕೀಯ ಕಾರಣಗಳಿಂದಾಗಿ ಆಗಾಗ ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆಯ ಗಲಾಟೆ ತಾರಕಕ್ಕೇರಿದರೂ ಸಾಹಿತ್ಯಕವಾಗಿ, ಭಾಷಿಕವಾಗಿ ಇವೆರಡು ರಾಜ್ಯಗಳ ನಡುವಿನ ಸಂಬಂಧ ‘ಹೊಕ್ಕಳ ಬಳ್ಳಿಯ ಸಂಬಂಧ’ವೇ ಆಗಿದೆ. ವಿವಿಧ ಅರಸು ಮನೆತನಗಳ ಆಳ್ವಿಕೆ, ಜೈನಧರ್ಮ,ವೀರಶೈವ ಧರ್ಮ ಮೊದಲಾದ ಧರ್ಮಗಳ ಪ್ರಭಾವ, ಜ್ಞಾನೇಶ್ವರ, ತುಕಾರಾಮ, ಪುರಂದರದಾಸ, ಕನಕದಾಸ, ಮಹಿಪತಿದಾಸ ಮುಂತಾದ ಸಂತ ಶ್ರೇಷ್ಠರ ಪ್ರೇರಕ ಸಂಬಂಧಗಳಿಂದಾಗಿ ಇವೆರಡು ರಾಜ್ಯಗಳ ನಡುವಿನ ಸಾಮರಸ್ಯ, ಅನ್ಯೋನ್ಯತೆ ಹೆಚ್ಚಿದೆ.
ಮಹಾರಾಷ್ಟ್ರದ ಹಲವಾರು ದೇವತೆಗಳು ಮೂಲದಲ್ಲಿ ಕನ್ನಡಿಗರ ದೇವತೆಗಳೆಂಬುದರಲ್ಲಿ ಎರಡು ಮಾತಿಲ್ಲ.ಪಂಡರಪುರದ ‘ವಿಠ್ಠಲ ‘ ಕನ್ನಡಿಗರ ದೇವರೆಂಬ ಸಂಗತಿಯನ್ನು ಮರಾಠಿ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮಿಯೂ ಕನ್ನಡಿಗರ ದೇವತೆಯೇ.ಇದೇ ದೇವತಾ ಪರಂಪರೆಗೆ ಮೈಲಾರ ದೇವನೂ ಸೇರಿಕೊಳ್ಳುತ್ತಾನೆ. ಉತ್ತರ ಕರ್ನಾಟಕದ ಆರಾಧ್ಯ ದೈವ ಮೈಲಾರನನ್ನು ಮರಾಠಿಗರು ‘ಖಂಡೋಬಾ’ ಎಂದು ಕರೆದು ಪೂಜಿಸಿ ತಮ್ಮವನನ್ನಾಗಿ ಮಾಡಿಕೊಂಡರು. ನೆಲ-ಜಲ- ಭಾಷೆ ಈ ಮೂರೂ ಅಂಶಗಳು ಕನ್ನಡ-ಮರಾಠಿ ಬಂಧುತ್ವವನ್ನು ಬೆಸೆದಿವೆ. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಅನೇಕ ಸ್ಥಿತ್ಯಂತರ ವೈರ-ವೈಷಮ್ಯಗಳು ತಲೆದೋರಿದರೂ ಕರ್ನಾಟಕ ಮಹಾರಾಷ್ಟ್ರದ ಜನರ ನಡುವೆ ಅನ್ಯೋನ್ಯತೆ ಗಾಢವಾಗಿಯೇ ಇದೆ. ಕನ್ನಡ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಭಾಷೆ. ಮರಾಠಿಯೋ ಆರ್ಯನ್ ಭಾಷಾ ವರ್ಗದ್ದು. ಹೀಗಿದ್ದೂ ಈ ಉಭಯ ಭಾಷೆಗಳ ನಡುವಿನ ಆದಾನ ಪದಾನ ಯಾರನ್ನೂ ಬೆರಗುಗೊಳಿಸುವಂತೆ ಮಾಡಿದೆ.
ಮರಾಠಿ ಸಂತ ಕವಿ ರಾಮದಾಸರಂತೂ ಕರ್ನಾಟಕ ಎಂಬ ಶಬ್ದಕ್ಕೆ ಕೊಡುವ ವಿವರಣೆ ಸಾಕಷ್ಟು ಕುತೂಹಲಕರವಾಗಿದೆ. ಕರ್ನಾಟಕವನ್ನು ಕುರಿತು ಅವರು ‘ಚಿತ್ರಕಲಾ ನಾಟಕ ಮಣನಿ ನಾಮ ಕರ್ನಾಟಕ’ (ಚಿತ್ರಕಲೆ, ನಾನಾ ಕಲಾ ನಾಟಕ ಪ್ರಕಾರಗಳು ಇರೋದರಿಂದಾಗಿ ಕರ್ನಾಟಕ ಎಂಬ ಹೆಸರು ಬಂದಿದೆ) ಎಂದು ಉದ್ಗಾರವೆತ್ತಿದ್ದಾರೆ. ಮರಾಠಿ ಸಂತ ಸಾಹಿತ್ಯಕ್ಕೆ ನಾಂದಿ ಹಾಡಿದ ಜ್ಞಾನೇಶ್ವರರು ‘ಕಾನಡಾ ಹೋ ವಿಠ್ಠಲ ಕರ್ನಾಟಕು, ವಿಠ್ಠಲ ಕರ್ನಾಟಕ ಮೂಲದವನು ಎಂಬ ಸತ್ಯವನ್ನು ಘಂಟಾ ಘೋಷವಾಗಿ ಸಾರಿದ್ದಾರೆ. ಅವರು ಕನ್ನಡದಲ್ಲಿ ಕೆಲವು ಅಭಂಗಗಳನ್ನು ರಚಿಸಿದ್ದಾರೆ. ಮರಾಠಿ ಸಂತ ಕವಿಗಳು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯೊಂದಿಗೆ ಆತ್ಮೀಯ ಸಂಪರ್ಕವನ್ನಿಟ್ಟುಕೊಂಡಿದ್ದರು.
ಏಕನಾಥರದು ಮರಾಠಿ ಸಂತ ಪರಂಪರೆಯಲ್ಲಿ ಎದ್ದು ಕಾಣುವ ಹೆಸರು. ಅವರು ‘ನಮೋ ಕಾನಡಿ ಭಾಷಾ’ (ಕನ್ನಡ ಭಾಷೆಗೆ ನಮಸ್ಕಾರ) ಎಂದು ಕರೆದು ವಿಶೇಷವಾದ ಪ್ರೀತ್ಯಾದರವನ್ನು ವ್ಯಕ್ತಪಡಿಸಿರುವುದು ಗಮನೀಯ ಅಂಶ. ಏಕನಾಥರು ಸಹ ಕನ್ನಡದಲ್ಲಿ ಅಭಂಗಗಳನ್ನು ರಚಿಸಿದ್ದಾರೆ. ಕನಕದಾಸರ ಮಂಡಿಗೆಗಳ ಪ್ರಭಾವ ಏಕನಾಥರ ರಚನೆ ಗಳ ಮೇಲಾದುದು ಅಷ್ಟೇ ಸತ್ಯ. ಏಕನಾಥರ ಮೊಮ್ಮಗ ಮುಕೇಶ್ವರ. ಗದಗ ಡಂಬಳ
ಪ್ರಾಂತ್ಯದಲ್ಲಿ ಮುಕ್ತೇಶ್ವರರು ಜನಪ್ರಿಯತೆ ಗಳಿಸಿದ್ದರು.
ತುಂಗಭದ್ರಾ ನದೀತೀರದ ಚೌಡದಾನಪುರದಲ್ಲಿ ಮುಕೇಶ್ವರರ ದೇವಾಲಯವಿರುವುದನ್ನು ನಾವು ಕಾಣಬಹುದು
ಮರಾಠಿ ಸಾಹಿತ್ಯ ಲೋಕದಲ್ಲಿ ಕವಿ ಚಂದ್ರಾತ್ಮಜ ರುದ್ರನಿಗೆ ಎತ್ತರದ ಸ್ಥಾನವಿದೆ. ಅವರು ಗೋಕಾಕ ತಾಲೂಕಿನ ಮೂಡಲಗಿಯವರು. ಕುಮಾರವ್ಯಾಸನ ಕಾವ್ಯವನ್ನು ಮರಾಠಿಗೆ ಅನುವಾದಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನನಗೆ ಸಂಸ್ಕೃತ ಅಭ್ಯಾಸವಿಲ್ಲ. ಕರ್ನಾಟಕ ಕವಿ ಕುಮಾರವ್ಯಾಸನ ಕೃತಿಯನ್ನು ಆಧರಿಸಿ ತಾನು ಕಾವ್ಯ ರಚಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಚಂದ್ರಾತ್ಮಜ ರುದ್ರ ಅವರು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಪದ್ಯಗಳು ಲಭ್ಯವಾಗಿವೆ. ಕಾಖಂಡಕಿ ಮಹಿಪತಿರಾಯರು ಕನ್ನಡ ಮರಾಠಿ ಭಾಷಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಕನ್ನಡದಲ್ಲಿ645ಹಾಗೂ ಮರಾಠಿಯಲ್ಲಿ 45 ಕೀರ್ತನಗಳನ್ನು ಅಭಂಗಗಳನ್ನು ರಚಿಸಿದ ಮಹಿಪತಿದಾಸರು ಭಾಷೆ ಯಾವುದಾದರೇನು? ದೇವರನ್ನು ಕಾಣುವ, ಅವನನ್ನು ಅರ್ಥಮಾಡಿಕೊಳ್ಳುವ ದಾರಿ ಒಂದೇ ಎಂದು ಸಾರಿದರು. ಕರ್ನಾಟಕದ ಹರಿದಾಸರು ಮರಾಠಿಯ ಸಂತರು ಪಂಡರಾಪುರದ ವಿಠ್ಠಲನ ಪರಮಭಕ್ತರಾಗಿದ್ದರು. ಪಂಡರಾಪುರ ವಿಠ್ಠಲ ಭಕ್ತರನ್ನು ತನ್ನೆಡೆಗೆ ಸೆಳೆಯುವ ಶಕ್ತಿ ಕೇಂದ್ರವಾಗಿದ್ದದ್ದೂ ಐತಿಹಾಸಿಕ ಸತ್ಯ. ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಬಗೆಗೆ ಮರಾಠಿ ಸಂತರು, ಕವಿಗಳು, ಲೇಖಕರು, ಇತಿಹಾಸಕಾರರು ಅಪಾರವಾದ ಗೌರವ ಆದರವನ್ನು ತೋರುತ್ತಾ ಬಂದುದು ಚಾರಿತ್ರಿಕ ಸಂಗತಿ.
ಆಧುನಿಕ ಕಾಲಘಟ್ಟದಲ್ಲಿಯೂ ಈ ಪರಂಪರೆ ಮುಂದುವರಿದಿದೆ.
1869ರಲ್ಲಿ ಚುರುಮುರಿ ಶೇಷಗಿರಿರಾಯರು ಕನ್ನಡದಲ್ಲಿ ಮೊತ್ತ ಮೊದಲಬಾರಿಗೆ ಶಾಕುಂತಲ ನಾಟಕವನ್ನು ಅನುವಾದಿಸಿ ಪ್ರಕಟಿಸಿದರು. ಈ ನಾಟಕವನ್ನು ಆಧರಿಸಿ ಮರಾಠಿ ನಾಟಕಕಾರ ಅಣ್ಣಾಕಿರ್ಲೋಸ್ಕರ್ ಇದೇ ತರದ ಸಂಗೀತ ನಾಟಕ ರಚಿಸಿ ಆಧುನಿಕ ಮರಾಠಿ ರಂಗಭೂಮಿಯ ಪಿತಾಮಹ ಎಂಬ ಕೀರ್ತಿಗೆ ಭಾಜನರಾದರು. ಅಣ್ಣಾ ಕಿರ್ಲೋಸ್ಕರ್ ಹಾಗೂ ಚುರುಮುರಿ ಶೇಷಗಿರಿರಾಯರು ಪರಮ ಮಿತ್ರರಾಗಿದ್ದರೆಂಬುದು ಅಷ್ಟೇ ಮುಖ್ಯವಾದ ಮಾತು. ಕನ್ನಡ ಶ್ರೀಕೃಷ್ಣ ಪಾರಿಜಾತವನ್ನು ಆಧರಿಸಿ ಕಿರ್ಲೋಸ್ಕರ್ ಮರಾಠಿಯಲ್ಲಿ ಶ್ರೀಕೃಷ್ಣ ಪಾರಿಜಾತವನ್ನು ರಚಿಸಿ ಜನಪ್ರಿಯರಾದರು. ಅಣ್ಣಾ ಕಿರ್ಲೋಸ್ಕರ್ ಕನ್ನಡ ನಾಡಿನ ಜಾನಪದ ಸಾಹಿತ್ಯದಿಂದ ಸ್ಫೂರ್ತಿ ಪಡೆದು ಕೃತಿರಚನೆ ಮಾಡಿದ್ದು ಉಲ್ಲೇಖನೀಯ ಅಂಶ.
ಮೂಲತಃ ವಿಜಾಪುರ ಜಿಲ್ಲೆಯ ಜಮಖಂಡಿಯವರಾದ ಹಿರಿಯ ವಿದ್ವಾಂಸ ಪ್ರಗತಿ ಪರಚಿಂತಕ ವಿಠ್ಠಲ ರಾಮಜಿ ಶಿಂದೆ ಅವರು ಕನ್ನಡ- ಮರಾಠಿ ಭಾಷೆ ಹಾಗೂ ವ್ಯಾಕರಣ ಗಳಿಗೆ ಇರುವ ಮಧುರ ಬಾಂಧವ್ಯ ಮತ್ತು ಕೊಳುಪಡೆಯನ್ನು ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿ ಉಭಯ ಭಾಷೆಗಳ ನಂಟಿನ ಬಿಗಿತನವನ್ನು ಬಹಿರಂಗಪಡಿಸಿದ್ದಾರೆ. ಲೋಕಮಾನ್ಯ ತಿಲಕ್ ಅವರೂ ಸಹ ಕರ್ನಾಟಕ ಮಹಾರಾಷ್ಟ್ರಗಳ ಬಾಂಧವ್ಯವನ್ನು ಎತ್ತಿಹಿಡಿದು ಹೇಳಿರುವ ಮಾತು ಯಾವತ್ತೂ ಸ್ಮರಣೀಯ ಅಂಶ. ‘ಮಹಾರಾಷ್ಟ್ರ ಮತ್ತು ಕರ್ನಾಟಕ ಬೇರೆ ಬೇರೆ ಅಲ್ಲ; ಇಬ್ಬರಲ್ಲಿಯೂ ಒಂದೇ ನೆತ್ತರು ಹರಿದಾಡುತ್ತಲಿದೆ. ಇಬ್ಬರ ಭಾಷೆಯೂ ಒಂದೇ ಎಂದರೆ ಕನ್ನಡವೇ ಆಗಿತ್ತು ಎಂಬುದನ್ನು ಮರಾಠಿಯಲ್ಲಿ ಹೇಳಿರುವುದು ಗಮನೀಯ ಅಂಶ .ಮರಾಠಿ ಸಾಹಿತ್ಯದ ಪುರುಷೋತ್ತಮ ಪು.ಲ, ದೇಶಪಾಂಡೆ ಅವರ ತಾಯಿಯ ತವರೂರು ಕಾರವಾರ. ಪು.ಲ.ಅವರಿಗೆ ಕನ್ನಡದ ಋಣಾನುಬಂಧ ಹುಟ್ಟಿನಿಂದಲೇ ಬಂದಿತು. ಬೆಳಗಾವಿಯಲ್ಲಿ ಅವರು ಕೆಲಕಾಲ ಮರಾಠಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕುರಿತು ಬಹಳ ಪ್ರೀತಿ ಗೌರವದಿಂದ ಮಾತನಾಡಿದ್ದಾರೆ.
ಕರ್ನಾಟಕ ರಾಜ್ಯ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳು ಮರಾಠಿಗರ ಮೇಲೆ ಬಹಳಷ್ಟು ಪ್ರಭಾವ ಬೀರಿ ಅವರ ಸಂಸ್ಕೃತಿಯನ್ನು ಬೆಳೆಸಿದೆ ಎಂಬ ಅಂಶವನ್ನ ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ರಾಜವಾಡೆ, ರಾನಡೆ, ರಾಮಚಂದ್ರ ಚಿಂತಾಮಣಿ ಡೇರೆ, ಇರಾವತಿ ಕರ್ವೆ ಮೊದಲಾದವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಕನ್ನಡದ ಹಿರಿಯ ಕವಿ ಬೇಂದ್ರೆ ಅವರು ಕನ್ನಡ ಮರಾಠಿ ಭಾಷೆಗಳ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಿದರು.ಅವರು ಮಹಾರಾಷ್ಟ್ರದ ಸಂಬಂಧವು ಕರ್ನಾಟಕಕ್ಕೆ ನಿಕಟವಾಗಿದೆ, ಈ ಎರಡೂ ರಾಜ್ಯಗಳು ಜನಗಳು ಭಾಷೆಗಳು ಭಾರತ ಮಾತೆಯ ವಾತ್ಸಲ್ಯ ಸಾಮ್ರಾಜ್ಯದಲ್ಲಿ ಸೋದರ ಜೀವಗಳು ಎಂದಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಕನ್ನಡ ಭಾಷೆ ಸಾಹಿತ್ಯದ ಸಂಪರ್ಕ ಉಂಟಾಗಿತ್ತು. ಅವರಿಗೆ ಸಂಸ್ಕೃತ ಕಲಿಸಿಕೊಟ್ಟವರು ಮುಂಬೈ ಕನ್ನಡಿಗರಾದ ನಾಗಪ್ಪ ಶಾಸ್ತ್ರಿಗಳು. ಮುಂಬೈನ ಖಾಲ್ಸಾ ಕಾಲೇಜಿನಲ್ಲಿ ಕನ್ನಡ ವಿಭಾಗವನ್ನು ಆರಂಭಿಸಲು ಅಂಬೇಡ್ಕರ್ ಪತ್ರ ಬರೆದು ಅಂದಿನ ಮುಂಬೈ ಸರಕಾರವನ್ನು ಒತ್ತಾಯಿಸಿದರು. ಬಳಿಕ ಅಲ್ಲಿ ಕನ್ನಡ ವಿಭಾಗ ಸ್ಥಾಪನೆಯಾಯಿತು.ಇಂದಿಗೂ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಗೆಗೆ ಮರಾಠಿ ಸಹೃದಯರು ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ಇದು ಆಶಾದಾಯಕ ಸಂಗತಿ.
(ಹೆಚ್ಚಿನ ಮಾಹಿತಿಗೆ ನೋಡಿ. ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬಯಿ)






0 Comments