ಮರಗಳಿಗಾಗಿ ಬಿಷ್ಣೋಯಿಗಳ ಪ್ರಾಣತ್ಯಾಗದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಅಂದೊಮ್ಮೆ ಎಲ್ಲೋ ಹೋಗುತ್ತಿದ್ದಾಗ, ಮಹಾರಾಷ್ಟ್ರದ ಯಾವುದೋ ಪುಟಾಣಿ ಊರಲ್ಲಿ ತಂಗಿದ್ದೆ. ಬೆಳ್ಳಂಬೆಳಗ್ಗೆ ಎದ್ದು ಹೊರಡಬೇಕಾಗಿ ಬಂದಾಗ ನಾನು ಉಳಿದುಕೊಂಡಿದ್ದ ಹೊಟೇಲಿನ ಎದುರಿದ್ದ ಕಟ್ಟಡವೊಂದು ನನ್ನ ಗಮನ ಸೆಳೆದಿತ್ತು. ಅದರ ಮೇಲ್ಛಾವಣಿಯ ಹೆಂಚನ್ನು ಸೀಳಿಕೊಂಡು ಹೊರಬಂದ ಮರವೊಂದು ಬೃಹದಾಕಾರವಾಗಿ ಬೆಳೆದಿತ್ತು. ಕಟ್ಟಡದ ಮಧ್ಯಭಾಗದಲ್ಲಿದ್ದ ಮರವನ್ನು ಕಡಿಯದೆ ಹಾಗೇ ಬಿಟ್ಟು, ಆ ಪರಿಸರದಲ್ಲಿಯೇ ಅದು ಬಹಳ ಡಿಫರೆಂಟಾಗಿ ಎದ್ದು ಕಾಣುತ್ತಿತ್ತು. ಮರವನ್ನು ಕಡಿಯದೆ, ಮಧ್ಯದಲ್ಲೇ ಉಳಿಸಿಕೊಂಡು ಮನೆ ಕಟ್ಟಿದ್ದ ಆ ಪುಣ್ಯಾತ್ಮರು ಯಾರೆಂದು ಗೊತ್ತೇ ಇಲ್ಲದಿದ್ದರೂ ಅವರ ಮೇಲೆ ಗೌರವವೂ ಮೂಡಿತು.

ಅಗತ್ಯವಿರಲಿ ಇಲ್ಲದಿರಲಿ, ಬಹಳ ಸುಲಭವಾಗಿ ಆಗಸದೆತ್ತರಕ್ಕೆ ಬೆಳೆದು ನಿಂತ ಮರ ಕಡಿದುಹಾಕಿಬಿಡುವವರ ಮಧ್ಯೆ ಇಂಥದ್ದೊಂದು ಅಪರೂಪದ ದೃಶ್ಯ ನನಗೆ ಅಪ್ಯಾಯಮಾನವಾಗಿ ಕಂಡಿತ್ತು. ಸುಮ್ಮನೆ ಆ ಮನೆಯ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಮುನ್ನಡೆದಿದ್ದೆ.

ಇದು ಇಲ್ಲಿ ನೆನಪಾಗಲು ಕಾರಣವಿದೆ. ಕೆಲವೊಮ್ಮೆ ಬಹಳ ಪ್ಲ್ಯಾನು ಮಾಡಿ ಹೋದರೂ ದಕ್ಕದ ಅನುಭವಗಳು ಅಚಾನಕ್‌ ಭೇಟಿಗಳಲ್ಲಿ ಸಿಗುತ್ತದೆ. ಹಾಗೆಯೇ ಆಯ್ತು ಜೋಧ್‌ಪುರದ ಆ ಹಳ್ಳಿಯ ಭೇಟಿ. ಅಲ್ಲಿಗೆ ಹೋಗುವ ಯೋಜನೆಯೇನೂ ಮೊದಲೇ ಇರಲಿಲ್ಲ. ಜೋಧ್‌ಪುರಕ್ಕೆ ಹೋಗಿದ್ದ ಸಂದರ್ಭ, ನಗರದ ಹೊಟೇಲ್ಲಿನ ವಾಸವೇ ಏಕೆ, ಇಲ್ಲೇ ಹತ್ತಿರ ಏನಾದರೂ ಹಳ್ಳಿ, ಮರುಭೂಮಿ ವಾಸ, ಅಥವಾ ಏನಾದರೂ ಆಸಕ್ತಿದಾಯಕ ಜಾಗಗಳಿವೆಯೇ ಎಂದು ಅದೇ ಜೋಧ್‌ಪುರದಲ್ಲಿ ಕೂತು ನೆಟ್‌ ಜಾಲಾಡಿದಾಗ, ಗಮನಕ್ಕೆ ಬಂದು ಹೋದ ಹಳ್ಳಿಯಿದು.

ʻಬನ್ನಿ ಹಳ್ಳಿ ಸುತ್ತಿ ಬರುವʼ ಛೋಟಾರಾಮ ಜೀಪು ಹತ್ತಿ ಕರೆದಿದ್ದ. ಅಂದು ಛೋಟಾರಾಮನ ಡೆಸರ್ಟ್‌ ಸಫಾರಿ ಹೆಸರಿನಡಿ, ಸಂಜೆ ಹೊತ್ತು ಸಾಲಾವಾಸ್‌ ಹಳ್ಳಿಯಿಡೀ ಒಂದು ರೌಂಡು ಸುತ್ತು ಹಾಕಿಕೊಂಡು ಬರುವ ಪ್ಲಾನಿತ್ತು. ಜೊತೆಗೆ ಹಳ್ಳಿಯ ಕೆಲವು ನೇಕಾರರ ಮನೆಗೂ. ತೀರಾ ಪೋಸ್ಟರ್‌ ಚಿತ್ರಗಳಂತೆ ರಮ್ಯವಾಗಿ ಎಲ್ಲೆಲ್ಲೂ ಮರಳೋ ಮರಳು, ಒಂಟೆಗಳೋ ಒಂಟೆಗಳು ಕಾಣುವ ಜಾಗವಂತೂ ಖಂಡಿತ ಅದಲ್ಲ. ಒಣಭೂಮಿ, ಧೂಳು ಹಾರುವ ನೆಲ.

ಮುಳ್ಳಿನ ಕುರುಚಲು ಸಸ್ಯಗಳು, ದೂರದೂರದಲ್ಲಿ ಮರಗಳು, ಅಲ್ಲಲ್ಲಿ ಈ ಕುರುಚಲು ಸಸ್ಯಗಳ ಎಡೆಯಲ್ಲಿ ಮೇಯಲು ಬಿಟ್ಟ ಬಡಕಲು ಒಂಟೆಗಳು ಕತ್ತುದ್ದ ಮಾಡಿ ಸಿಕ್ಕಿದ್ದನ್ನು ತಿನ್ನುತ್ತಿದ್ದುದು ಬಿಟ್ಟರೆ ಎಲ್ಲೋ ಅಪರೂಪಕ್ಕೆ ಅಲ್ಲಲ್ಲಿ ಕಣ್ಣಿಗೆ ತಂಪು ನೀಡುವ ಪುಟ್ಟ ಪುಟಾಣಿ ಎಳ್ಳಿನ ಗದ್ದೆಗಳೂ, ಸಾಸಿವೆ ಗದ್ದೆಗಳೂ. ಹಾಗೆ ಯೋಚಿಸಿದರೆ, ಆರಾಮವಾಗಿ ಸಮಯ ಕಳೆಯಬಹುದಾದ, ಬೆಳಗ್ಗೆ ಎದ್ದ ಕೂಡಲೇ ನಯನ ಮನೋಹರ ದೃಶ್ಯ ಕಾಣುವ ʼಹಾಲಿಡೇʼ ಕಲ್ಪನೆಯ ಹಳ್ಳಿಯಂತೂ ಅಲ್ಲವೇ ಅಲ್ಲ.

ಫಲವತ್ತಲ್ಲದ ನೆಲ, ಬೇಸಗೆಯಲ್ಲಿ ೫೦ ಡಿಗ್ರಿಯವರೆಗೂ ಏರುವ ಉಷ್ಣತೆಯಿರುವ, ಗಂಟೆಗೆ ೧೫೦ ಕಿಮೀ ವೇಗದಲ್ಲಿ ಬೀಸುವ ಮರಳನ್ನೇ ಹೊತ್ತೊಯ್ಯುವ ಸುಡುಸುಡು ಗಾಳಿ, ನಿಗಿನಿಗಿ ಬಿಸಿಲು, ಕೊರೆವ ಚಳಿಯ ಚಳಿಗಾಲಗಳ ಇಂತಹ ಊರಿಗೆ ಯಾರೂ ಬಯಸಿ ಬಯಸಿ ವಲಸೆ ಹೋಗಲಾರರು. ಅಂಥಾ ಹಳ್ಳಿ. ಆದರೂ ಆ ಹಳ್ಳಿ ಒಂದೇ ನೋಟದಲ್ಲಿ ನನಗೆ ಇಷ್ಟವಾಗಿಬಿಟ್ಟಿತ್ತು.

ಇಂಥ ಹಳ್ಳಿಗೂ ಈ ಕುರುಚಲು ಖೇಜ್ರಿ (ಬನ್ನಿ) ಮರಗಳಿಗೂ ಒಂದು ಬಿಡಿಸಲಾಗದ ನಂಟಿದೆ ಎಂದು ಅರ್ಥವಾದದ್ದು ಛೋಟಾರಾಮನ ಮಾತಿನಿಂದಲೇ. ಇದೇ ಮರ ನೋಡಿ. ಖೇಜ್ರಿ ಮರ ಅಂತಿದ್ನಲ್ಲಾ? ಅದೇ ಮರ. ನಾವು ಬಿಷ್ಣೋಯಿಗಳಿಗಿದು ದೇವರ ಹಾಗೆ. ನಾವು ಕಡಿಯೋದೇನು? ಒಂದು ಗಾಯ ಮಾಡುವುದೂ ಕ್ಷಮಿಸಲಾಗದ ತಪ್ಪೆಂದು ಭಾವಿಸುತ್ತೇವೆ. ಅದೊಂದು ಘಟನೆ ನಡೀತಲ್ವಾ, ಆಮೇಲೆ ಇದನ್ನು ಮುಟ್ಟುವ ಸಾಹಸ ಯಾರೂ ಮಾಡೋದು ಇಲ್ಲʼ ಎಂದು ಆತ ಹೇಳಿದ್ದ. ನೋಡಿ, ಈ ಮರಕ್ಕಾಗಿ ಅಂದು ಅವರು ಹೋರಾಟ ಮಾಡದಿದ್ದರೆ, ಇಂಥ ಮರುಭೂಮಿಯಲ್ಲಿ ಇಷ್ಟಾದರೂ ಮರಗಳಿರುತ್ತಿತ್ತಾ? ನೀವೇ ಹೇಳಿʼ ಎಂದ. ಆತನ ಮಾತು ಎಷ್ಟು ನಿಜ ಅಲ್ವಾ ಅನಿಸಿತು.

ನಾನಿದ್ದ ಆ ಹಳ್ಳಿಯೂ ಸೇರಿದಂತೆ, ಸುತ್ತಮುತ್ತಲಿರೋದೆಲ್ಲ ಬಿಷ್ಣೋಯಿಗಳ ಹಳ್ಳಿಗಳೇ. ಈ ಘಟನೆ ನಡೆದ ಖೇಜಾರ್ಲಿ ಕೂಡಾ ನಾನಿದ್ದಲ್ಲಿಂದ ಒಂದು ೧೦-೨೦ ಕಿಮೀ ದೂರ ಅಷ್ಟೇ. ಆದರೆ, ಅದೊಂದು ಹಳ್ಳಿಗೆ ಮಾತ್ರ ಈ ಘಟನೆ ಸೀಮಿತ ಅಲ್ಲ. ಇಡೀ ಬಿಷ್ಣೋಯಿ ಜನಾಂಗವೇ ಇಂದಿಗೂ ಕೂಡಾ ಈ ನಡೆಯನ್ನೇ ಗೌರವಿಸುತ್ತದೆ. ಪ್ರಕೃತಿಯನ್ನೇ ದೇವರೆಂದು ನಂಬುವ ಪಂಗಡ ಈ ಬಿಷ್ಣೋಯಿಗಳು. ಗುರು ಜಾಂಬೇಶ್ವರರಿಂದ ಸುಮಾರು ೧೫ನೇ ಶತಮಾನದಲ್ಲಿ ಸ್ಥಾಪಿತವಾದದ್ದು. ೨೯ ಸಿದ್ದಾಂತಗಳನ್ನು ಅನುಸರಿಸುವ ಈ ಪಂಗಡದ ಹೆಸರೇ, ಬೀಸ್‌ (೨೦) ಮತ್ತು ನೊಯ್‌(೯) ಎಂಬ ಎರಡು ಶಬ್ದಗಳ ಜೋಡಣೆಯಿಂದ ಬಂದಿದೆ.

ಪರಿಸರ ರಕ್ಷಣೆಯೇ ಇವರ ಮೂಲಮಂತ್ರ. ರಾಜಸ್ಥಾನದಲ್ಲಿ ಇದು ಜನ್ಮ ತಾಳಿದ್ದಾದರೂ, ಈ ಪಂಥವನ್ನು ಅನುಸರಿಸುವವರು, ರಾಜಸ್ಥಾನವಲ್ಲದೆ, ಹರ್ಯಾಣ, ಪಂಜಾಬ್‌, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿಗೂ ವಿಸ್ತರಿಸಿದ್ದಾರೆ.

ನಾವು ಜೂನ್ ೫ರಂದು ನಾವು ವಿಶ್ವ ಪರಿಸರ ದಿನ ಎಂದು ಆಚರಿಸುತ್ತೇವೆ. ಆದರೆ, ನಮ್ಮ ದೇಶದ ಚರಿತ್ರೆಯಲ್ಲಿ ಸೆಪ್ಟೆಂಬರ್‌ ೧೧ರ ಮಹತ್ವ ತಿಳಿದವರು ಬಹಳ ಕಡಿಮೆ. ಇಂಥದ್ದೊಂದು ಪರಿಸರ ಚಳುವಳಿಯ ರಕ್ತಸಿಕ್ತ ಅಧ್ಯಾಯ ಯಾರ ಹಾಗೇ ಕಣ್ಣಿಗೂ ಕಾಣದೆ ಉಳಿದಿದೆ. ೧೭೩೦ನೇ ಇಸವಿಯಷ್ಟು ಹಿಂದೆ ಅಂದರೆ, ಸುಮಾರು ೩೦೦ ವರ್ಷಗಳಷ್ಟು ಹಿಂದೆ ಪರಿಸರಕ್ಕಾಗಿ ಇಂಥದ್ದೊಂದು ಮಾರಣಹೋಮ ನಮ್ಮ ನೆಲದಲ್ಲಿ ನಡೆದಿತ್ತು ಎಂಬುದೂ ಬಹಳ ಜನರಿಗೆ ಗೊತ್ತಿಲ್ಲ. ರಾಜಸ್ಥಾನದಂಥ ಬೆಂಗಾಡಿನಲ್ಲಿ ಇಂದಿಗೂ ಮರಗಳು ಉಳಿದಿದ್ದಾವೆಂದರೆ ಅದರ ಶ್ರೇಯಸ್ಸು ಈ ಬಿಷ್ಣೋಯಿಗಳಿಗೇ ಸಲ್ಲಬೇಕು.

ಅದು ೧೭೩೦. ಅಂದಿನ ಮಹಾರಾಜ ಅಭಯ್‌ ಸಿಂಗ್‌ನ ಮಂತ್ರಿ ಗಿರಿಧರ ಭಂಡಾರಿ ರಾಜನ ಆಜ್ಞೆಯಂತೆ ರಾಜ್ಯಕ್ಕೆ ಹೊಸ ಅರಮನೆ ಕಟ್ಟಿಸಲು ಅಗತ್ಯವಾದ ಮರಮುಟ್ಟುಗಳಿಗಾಗಿ, ಒಂದಿಷ್ಟು ಖೇಜ್ರಿ ಮರಗಳನ್ನು ಕಡಿಯುವ ಆದೇಶವನ್ನು ಹೊತ್ತು ಹಳ್ಳಿಯೊಂದಕ್ಕೆ ತನ್ನ ಸೈನ್ಯದೊಂದಿಗೆ ಬರುತ್ತಾನೆ. ಖೇಜ್ರಿ ಮರವೆಂದರೆ ದೇವರೆಂದು ಪೂಜಿಸುವವರು ಈ ಗ್ರಾಮದ ಮಂದಿ. ಅಂಥ ಸಂದರ್ಭ ಮರ ಕಡಿಯಲು ಹೊರಟ ಮಂತ್ರಿಯ ಉದ್ದೇಶವನ್ನು ತಡೆಯುವ ಸಲುವಾಗಿ, ತನ್ನ ಮನೆಯಿಂದ ಓಡಿ ಬಂದು ಮರವನ್ನಪ್ಪಿ ನಿಲ್ಲುತ್ತಾಳೆ ಅದೇ ಊರಿನ ನಿವಾಸಿ ಅಮೃತಾ ದೇವಿ.

ಆಕೆಗೆ ಬೆಂಬಲ ನೀಡಲು ಆಕೆಯ ಮೂವರು ಹೆಣ್ಣುಮಕ್ಕಳೂ ಒಂದೊಂದು ಮರವನ್ನು ಅಪ್ಪಿ ನಿಂತರು. ಆದರೆ, ಇದ್ಯಾವುದೂ ಮಂತ್ರಿಯ ಉದ್ಧಟತನಕ್ಕೆ ಸವಾಲಾಗಲಿಲ್ಲ. ಆತ, ಮರದ ಜೊತೆಗೆ ಅಪ್ಪಿ ನಿಂತವರ ರುಂಡವನ್ನೂ ಹಾರಿಸಿಬಿಡುತ್ತಾನೆ. ನಾಲ್ವರ ರುಂಡ ಕೆಳಕ್ಕೆ ಬಿದ್ದರೂ ಮಂತ್ರಿಗೆ ತನ್ನ ತಪ್ಪಿನ ಅರಿವಾಗುವುದಿಲ್ಲ. ರಾಶಿಗಟ್ಟಲೆ ಮರಕಡಿವ ಉದ್ದೇಶದಿಂದ ಬಂದ ಅವನಿಗೆ ಜನರ ಭಾವನೆ ಹೇಗೆ ಒಳಗಿಳಿದೀತು?

ಕಥೆ ಇಲ್ಲಿಂದ ಬೇರೆಯದೇ ಹಾದಿ ಹಿಡಿಯುತ್ತದೆ. ಅಮೃತಾ ದೇವಿಯ ಬಲಿದಾನದ ವಿಚಾರ ಊರಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿಬಿಟ್ಟಿತ್ತು. ಸುತ್ತಮುತ್ತಲ ೮೪ ಹಳ್ಳಿಗಳ ಬಿಷ್ಣೋಯಿಗಳೆಲ್ಲ ಒಟ್ಟು ಸೇರಿದರು. ಪ್ರಾಣಕ್ಕೇ ಸಂಚಕಾರ ಬಂದರೂ ತಮ್ಮ ನಂಬಿಕೆಯನ್ನು ಬಿಡಲು ಒಪ್ಪದ ಮಂದಿ ಅಮೃತಾ ದೇವಿಯ ನಡೆಯನ್ನೇ ಬೆಂಬಲಿಸಿ ವೃಕ್ಷಗಳ ಉಳಿವಿಗಾಗಿ ಪಣತೊಟ್ಟರು. ಮೊದಲು, ಹಿರಿಯ ಜೀವಗಳು ಮಾತ್ರ ಈ ಚಳುವಳಿಯಲ್ಲಿ ಭಾಗವಹಿಸುವುದೆಂದು ನಿರ್ಧಾರ ಮಾಡಿದ್ದರು. ಆದರೆ ಇದ್ಯಾವುದೂ ಅಷ್ಟಾಗಿ ಪರಿಣಾಮ ಬೀರಲಿಲ್ಲ.

ಇಂದೋ ನಾಳೆಯೋ ಸಾಯಲು ಬಿದ್ದ ಮುದುಕರು ಸುಮ್ಮನೇ ಬಲಿದಾನದ ಹೆಸರಿನಲ್ಲಿ ಸಾಯುತ್ತಿದ್ದಾರಷ್ಟೆ ಎಂದು ಮಂತ್ರಿ ಟೀಕಿಸುವುದರ ಜೊತೆಗೆ ತನ್ನ ಕಾರ್ಯ ಮುಂದುವರಿಸಿದ್ದಕ್ಕೆ ಗ್ರಾಮಕ್ಕೆ ಗ್ರಾಮವೇ ಟೊಂಕ ಕಟ್ಟಿ ನಿಂತವು. ಕೇವಲ ಹಿರಿ ಜೀವಗಳಲ್ಲದೆ, ಯುವಕರು, ಯುವತಿಯರು, ಮಕ್ಕಳು ಮರಿಗಳೆಲ್ಲರೂ ಮರವನ್ನು ತಬ್ಬಿ ನಿಂತರು. ಮರಗಳ ಜೊತೆಗೇ ೩೬೩ ಬಿಷ್ಣೋಯಿಗಳ ಹೆಣ ಬಿದ್ದಿತ್ತು!

ಮರಗಳ ಜೊತೆಗೆ ೩೬೩ ಮನುಷ್ಯರ ಹೆಣ ಬೀಳುವುದೆಂದರೆ! ಊಹಿಸಿ ನೋಡಿ. ರಾಜ, ಮತ್ತವನ ಮಂತ್ರಿಯ ದರ್ಪದ ಎದುರೂ ತಮ್ಮ ನಿಲುವು ಬಿಟ್ಟುಕೊಡದ ಪ್ರಜೆಗಳ ಒಗ್ಗಟ್ಟು ಮುಂದುವರಿದಿತ್ತು. ಭಾರತದ ಇತಿಹಾಸ ಪುಟದಲ್ಲಿ ಸಿಗುವ ಪರಿಸರ ಹೋರಾಟದ ರಕ್ತಸಿಕ್ತ ಅಧ್ಯಾಯವಿದು. ಇಷ್ಟೊಂದು ರುಂಡ ಚೆಂಡಾಡಿದ ಮೇಲಷ್ಟೆ, ಮಂತ್ರಿಗೆ ಪರಿಸ್ಥಿತಿ ವಿಕೋಪಕ್ಕೆ ಹೋದದ್ದರ ಅರಿವಾಗಿತ್ತು. ಸುದ್ದಿ ಕೇಳಿದ ರಾಜ, ಮರ ಕಡಿವ ಈ ಸಾಹಸವನ್ನು ಮುಂದುವರಿಸುವುದು ಬೇಡವೆಂದು ಆಜ್ಞೆ ಹೊರಡಿಸಿದ.

ಜೊತೆಗೆ ಇನ್ನು ಮುಂದೆ ಯಾರೂ ಈ ಮರವನ್ನು ಕಡಿಯುವ ಹಾಗಿಲ್ಲ ಎಂದೂ ಆದೇಶ ಹೊರಡಿಸಿದ. ತನ್ನ ಕಾರ್ಯವನ್ನು ಅರ್ಧಕ್ಕೇ ಬಿಟ್ಟು ಮಂತ್ರಿ ಜೋಧ್ಪುರಕ್ಕೆ ಮರಳಿದ. ಆದರೆ ಅಷ್ಟರಲ್ಲಾಗಲೇ, ಮರಕ್ಕಾಗಿ ಬಲಿದಾನ ಕೊಟ್ಟ ಈ ಘಟನೆ ಇತಿಹಾಸದಲ್ಲಿ ಸೇರಿ ಹೋಗಿಯಾಗಿತ್ತು. ಖೇಜ್ರಿ ಮರಕ್ಕಾಗಿ ಬಲಿದಾನಗೈದ ಊರಿನ ಹೆಸರೇ ಖೇಜ್ರಾಲಿಯಾಗಿ ಹೋಯಿತು ಹೋಯಿತು.

ಈ ಸ್ಥಳ ಇಂದಿಗೂ ಬಿಷ್ಣೋಯಿಗಳಿಗೆ ಪವಿತ್ರ ಸ್ಥಳ. ಈ ಕರಾಳ ದಿನದ ನೆನಪಿನಲ್ಲೊಂದು ಸ್ಮಾರಕವೂ ಇದೆ. ಈ ಬಲಿದಾನದ ನೆನಪಿನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಇಲ್ಲಿ ಉತ್ಸವವೂ ನಡೆಯುತ್ತದೆ. ಭಾರತ ಸರ್ಕಾರ ಅಮೃತಾ ದೇವಿಯ ಹೆಸರಿನಲ್ಲಿ ಅಮೃತಾ ದೇವಿ ಪರಿಸರ ಸಂರಕ್ಷಣಾ ಪ್ರಶಸ್ತಿ ಹಾಗೂ, ಬಲಿದಾನಗೈದ ದಿನವಾದ ಸೆಪ್ಟೆಂಬರ್‌ ೧೧ನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಇದೇ ಬಲಿದಾನದ ಕಥೆಯೇ ಮುಂದೆ ಉತ್ತರಾಖಂಡದಲ್ಲಿ ಆರಂಭವಾದ ಚಿಪ್ಕೋ ಚಳುವಳಿಗೂ ಪ್ರೇರಣೆಯಾಯ್ತು. ರಾಜಸ್ಥಾನದ ಅಧಿಕೃತ ರಾಜ್ಯ ವೃಕ್ಷವೂ ಇದೇ ಖೇಜ್ರಿಯೇ.

ಎಂಥಾ ಬಲಿದಾನದ ಕಥೆ ಅಲ್ವಾ ಇದು! ಅಂತ ಸುಮ್ಮನೆ ಯೋಚಿಸುತ್ತಿದ್ದೆ. ಒಂದೇ ಓಟದಲ್ಲಿ ಆ ಕುರುಚಲು ಕಾಡಿನ ಹೊಯ್ಗೆ ಮೇಲೆ ಏರಿಳಿಯುತ್ತಾ ಜೀಪು ಓಡಿಸುತ್ತಿದ್ದ ಛೋಟಾರಾಮ ಗಕ್ಕನೆ ಜೀಪು ನಿಲ್ಲಿಸಿದ. ಜೀಪಿಗೆ ತಾಗಿಕೊಂಡ ಮುಳ್ಳುಗಿಡದ ಮುಳ್ಳು ತನಗಡ್ಡ ಬಂದ ಜೀಪನ್ನು ತಪ್ಪಿಸಿಕೊಳ್ಳಲು ಹೆಣಗಾಡಿ ಕೊನೆಗೆ ಒಳಗೆ ಕೂತಿದ್ದ ನನ್ನ ಕೈಗೆ ಪರಚಿತು. ಇಷ್ಟುದ್ದಕ್ಕೆ ಬಿಂದುಬಿಂದುವಾಗಿ ರಕ್ತ ಜಿನುಗಿತು. ಮುಳ್ಳಿಗೆ ತಾಗಿದ ಈ ನನ್ನ ಬಿಂದು ರಕ್ತವೆಲ್ಲಿ… ಇದೇ ನೆಲದ ಅಂದಿನ ಆ ರಕ್ತದೋಕುಳಿಯೆಲ್ಲಿ! ಆಹ್… ಎಂದು ನೋವಿನಿಂದ ಕೈಯುಜ್ಜಿಕೊಂಡು ಛೋಟಾರಾಮನನ್ನು ಜೀಪು ನಿಲ್ಲಿಸಿದ್ದು ಯಾಕೆಂಬಂತೆ ನೋಡಿದರೆ, ʻಓ ಆ ಹುಲ್ಲುಗಾವಲಲ್ಲಿ ಯಾವಾಗಲೂ ಹುಲ್ಲೆಗಳೂ, ಕೃಷ್ಣಮೃಗಗಳೂ ಕಾಣಸಿಗುತ್ತವೆ.

ಸ್ವಲ್ಪ ಹೊತ್ತು ಕೂತಿರುವ. ಕಾಣಿಸಿಕೊಳ್ಳುವ ಛಾನ್ಸಿದೆ ಎಂದ. ನಾನು ಮೆತ್ತಗೆ ಸದ್ದಾಗದಂತೆ ಜೀಪಿಳಿದು ಮುಳ್ಳನ್ನು ನನ್ನ ದಾರಿಯಿಂದ ಆಚೆ ಸರಿಸುತ್ತಾ ಸಮತಟ್ಟಾದ ಮರುಭೂಮಿಯ ಹುಲ್ಲುಗಾವಲಿನುದ್ದಕ್ಕೂ ದೃಷ್ಟಿ ಹಾಯಿಸುತ್ತಾ ನಿಂತೆ.

ʻಅಲ್ನೋಡಿ, ನೋಡಿ ಕಾಣಿಸ್ತಾ ಇದೆಯಲ್ಲ ಕೃಷ್ಣಮೃಗಗಳುʼ ಸ್ವಲ್ಪ ಹೊತ್ತಿನ ನಂತರ ಛೋಟಾರಾಮ ಬಂದು ಮೆತ್ತಗೆ ಹೇಳಿದ. ಸಾಸಿವೆ ಬಿದ್ದರೂ ಕೇಳುವಷ್ಟು ಮೌನವಿತ್ತು. ಸೂರ್ಯ ನಿಧಾನವಾಗಿ ಪಶ್ಚಿಮಕ್ಕೆ ಜಾರುತ್ತಿದ್ದ ಕೆಂಪಿನಲ್ಲಿ ಹುಲ್ಲೆಗಳ ಹಿಂಡೂ, ನಾಲ್ಕೈದು ಕೃಷ್ಣಮೃಗಗಳೂ ಸ್ವಚ್ಛಂದವಾಗಿ ಮೇಯುತ್ತಿದ್ದವು. ಆಗೀಗ ಸದ್ದು ಕೇಳಿದಂತೆ ಮೇಯುವುದನ್ನು ನಿಲ್ಲಿಸಿ ನೆಟ್ಟಗೆ ನಿಂತು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದುದು ಕಾಣುತ್ತಿತ್ತು. ಈ ಬಾರಿ ನಾನು ಕ್ಯಾಮರಾ ತಂದಿರಲಿಲ್ಲ. ಮೊಬೈಲಿನ ಕ್ಯಾಮರಾಕ್ಕೆ ನಿಲುಕದಷ್ಟು ದೂರವಿದ್ದವು ಎಂಬಲ್ಲಿಗೆ ಒಂದು ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗದೆ ಒದ್ದಾಡಿದೆ.

ಸ್ವಲ್ಪ ಹೊತ್ತು ಅಲ್ಲೇ ನಿಂತು ನೋಡಿ, ಮತ್ತೆ ಜೀಪು ಹತ್ತಿದೆ. ವಾಪಾಸು ಬರುತ್ತಾ ಜೀಪಿನ ಸದ್ದನ್ನು ಬೇಧಿಸುತ್ತಾ ಛೋಟಾರಾಮ ಉಸುರಿದ. ಇಲ್ಲೇ ನೋಡಿ, ಸಲ್ಮಾನ್‌ ಖಾನ್‌ ಕೃಷ್ಣಮೃಗದ ಪ್ರಕರಣವೂ ನಡೆದದ್ದು! ಇಂಥ ಬಿಷ್ಣೋಯಿಗಳ ನಾಡಿನಲ್ಲಿ ವೃಕ್ಷ, ಮೃಗ ಯಾವುದಕ್ಕೂ ಆಪತ್ತು ಬಂದರೆ ಬಿಷ್ಣೋಯಿಗಳು ಯಾರನ್ನೇ ಆದರೂ ಸುಮ್ಮನೆ ಬಿಡುತ್ತಾರೆ ಅನಿಸುತ್ತಾ ನಿಮಗೆ?ʼ ಅಂದ. ಛೋಟಾರಾಮ ಅಂದು ಮೂರ್ನಾಲ್ಕು ವರ್ಷದ ಹಿಂದೆ ನನಗೆ ಕೇಳಿದ ಈ ಪ್ರಶ್ನೆ ನಿಜಕ್ಕೂ ಆತನ ಹೃದಯದಿಂದಲೇ ಬಂದಿದ್ದು ಎಂದು ನನಗೆ ಗೊತ್ತಿತ್ತು. ಈಗ ಅದು ಇನ್ನೂ ದೃಢಪಟ್ಟಿದೆ.

ವರ್ಷದ ಹಿಂದೆ, ಇದೇ ಬಿಷ್ಣೋಯಿ ಪಂಗಡದ ಹತ್ತನೇ ತರಗತಿ ಓದುವ ಹದಿಹರೆಯದ ಮುಕೇಶ್‌ ಬಿಷ್ಣೋಯಿ ಎಂಬ ಬಾಲಕನೊಬ್ಬ ಕೃಷ್ಣಮೃಗ ಬೇಟೆಯಾಡಲು ಬಂದವರ ಹೆಡೆಮುರಿ ಕಟ್ಟಿ ಪೊಲೀಸರಿಗೊಪ್ಪಿಸಿದ್ದ. ಬಂದೂಕುಧಾರಿಗಳಾಗಿದ್ದ ಅವರನ್ನು ಯಾವುದೇ ಶಸ್ತ್ರಾಸ್ತ್ರಗಳಿಲ್ಲದ ಈ ಹುಡುಗ ಅಕ್ಷರಶಃ ಸಿನಿಮೀಯ ಮಾದರಿಯಲ್ಲಿ ಹೋರಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿಬಿಟ್ಟಿದ್ದ. ಬಲಿದಾನವೇನಿದ್ದರೂ ಅಂದಿನ ಕಥೆ, ಈಗಿನವರಿಗೇನು ಗೊತ್ತು ಅದರ ಬೆಲೆ ಎಂದು ಹೇಳುವವರಿಗೆ ಯುವ ಬಿಷ್ಣೋಯಿಗಳ ಉತ್ತರವಿದು. ಅದು ಅವರ ರಕ್ತದಲ್ಲೇ ಬಂದಿದೆ ಎಂಬುದಕ್ಕೆ ಈಗಿನ ಯುವಮಂದಿಯೂ ಪರಿಸರದ ಉಳಿವಿಗಾಗಿ ಕಟಿಬದ್ಧರಾಗಿರುವುದೇ ಸಾಕ್ಷಿ.

ಹೌದು. ನಾವು ಈ ಬಿಷ್ಣೋಯಿಗಳಿಂದ ಕಲಿಯುವುದು ಬಹಳಷ್ಟಿದೆ!

‍ಲೇಖಕರು ರಾಧಿಕ ವಿಟ್ಲ

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: