ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತಾ ರಾವ್ ಓದಿದ ‘ತುಳಸಿಯ ಕತೆಗಳು’

ಮಮತಾ ರಾವ್

ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಣ್ಣಕಥೆಗಳಿಗೆ ಹೊಸ ಆಯಾಮವನ್ನು ನೀಡಿದವರಲ್ಲಿ ತುಳಸಿ ವೇಣುಗೋಪಾಲರೂ ಒಬ್ಬರು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂವೇದನಾಶೀಲ ಕಥೆ, ಕವನಗಳನ್ನು ಬರೆದು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ತುಳಸಿ ಅವರು ಮೂಲತಃ ಕವಿಯತ್ರಿ. ಅವರನ್ನು ಕಥೆಗಾರ್ತಿಯನ್ನಾಗಿ ರೂಪಿಸಿದ್ದು ಮುಂಬಯಿ ಮಹಾನಗರದ ಮಧ್ಯಮ ವರ್ಗೀಯ ಜನರ ಸಂಕೀರ್ಣ ಬದುಕು.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ತುಳಸಿಯವರ ಕಥೆಗಳಲ್ಲಿ ಹುಟ್ಟಿದ ಮಣ್ಣಿನ ವಾಸನೆಯನ್ನು ನೆನಪಿಗೆ ತಂದು ತನ್ನೊಳಗೆ ಮುದುಡಿಕೊಳ್ಳುವ ಭಾವಪರವಶತೆಯ ಸುಳಿವಿಲ್ಲ. ಬದಲಿಗೆ ಮುಂಬಯಿನಗರದ ಸಂದುಗೊಂದುಗಳು, ಇಲ್ಲಿಯ ಗಡಿಬಿಡಿಯ ಬದುಕಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ, ನಿರುದ್ಯೋಗ, ವಸತಿ ಸಮಸ್ಯೆ, ಅದರಿಂದ ಒಡಮೂಡುವ ಖಿನ್ನತೆ, ನಿಷ್ಕ್ರಿಯತೆ ಎಲ್ಲವೂ ಅತ್ಯಂತ ಸಹಜವಾಗಿ ಮೂಡಿ ಹೆಚ್ಚು ಪ್ರಾಶಸ್ತ್ಯ ಪಡೆದಿವೆ. ಆದುದರಿಂದಲೇ ಇವರು ಮುಂಬಯಿಯ ಮಹತ್ವದ ಕಥೆಗಾರರು. ಇವರ ಬಹುತೇಕ ಕಥೆಗಳು ಸ್ತ್ರೀಕೇಂದ್ರಿತವಾಗಿದ್ದರೂ, ಸ್ತ್ರೀವಾದಿತನವನ್ನು ಪ್ರತಿಪಾದಿಸುವ ಹಠಮಾರಿತನದ ಬರವಣಿಗೆ ಇವರದ್ದಲ್ಲ. ತುಳಸಿಯವರ ಕಥೆಗಳು ಮುಂಬಯಿಯ  ಸದ್ದುಗದ್ದಲಗಳಲ್ಲಿ, ಜನಜಂಗುಳಿಯಲ್ಲಿ ಕಳೆದು ಹೋಗುವಂಥದ್ದಲ್ಲ;  ಓದುಗರನ್ನು ಕಾಡುವಂತಹ, ಅವರ ಮನಸ್ಸನ್ನು ಆವರಿಸುವಂತಹ, ಮರೆಯಲೇ ಆಗದಂತಹ ಕಥೆಗಳನ್ನು ತುಳಸಿಯವರು ಬರೆದಿದ್ದಾರೆ.

ತುಳಸಿಯವರು ಬರೆದದ್ದು ಬಹಳ ಕಡಿಮೆ. ಒಂದು ಕವನಸಂಕಲನ, ಎರಡು ಕಥಾಸಂಕಲನಗಳು ಹಾಗೂ ಪ್ರಕಟಿತ ಬಿಡಿಕಥೆಗಳನ್ನೆಲ್ಲ ಸೇರಿಸಿದರೆ ಒಟ್ಟು ಹದಿನೆಂಟು ಕಥೆಗಳಷ್ಟೇ. ತಮ್ಮ ಸೀಮಿತ ಬರಹಗಳ ಮೂಲಕ ಅತಿಸೂಕ್ಷ್ಮ ಸಂವೇದನಾಶೀಲ ಸಾಹಿತಿಯೆಂದು ಗುರುತಿಸಲ್ಪಡುವ ತುಳಸಿಯವರು ಕಟ್ಟಿಕೊಡುವ ಸ್ತ್ರೀನಿಷ್ಠ ಸಂವೇದನೆ ಇತರ ಲೇಖಕಿಯರಿಗಿಂತ ಬಹಳ ಭಿನ್ನ; ಅಷ್ಟೇ ವಿಶಿಷ್ಟ. ನಗರ ಸಂವೇದನೆಯನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ಅತ್ಯಂತ ನಿರ್ಭಾವುಕತೆಯಿಂದ ವಸ್ತುನಿಷ್ಠತೆಯಿಂದ ತಮ್ಮ ಕಥೆಗಳಲ್ಲಿ ಸಮರ್ಥರಾಗಿ ಅಭಿವ್ಯಕ್ತಿಸಿದ ಲೇಖಕರಲ್ಲಿ ತುಳಸಿಯವರ ಹೆಸರು ಎದ್ದು ಕಾಣುವಂಥದ್ದು. ಕನ್ನಡದ ಯಾವ ಲೇಖಕಿಯರ ಲೇಖನಿಗೂ ದಕ್ಕದ ಅನನ್ಯವಾದ ನಗರಪ್ರಜ್ಞೆಯನ್ನು ಅತ್ಯಂತ ನಿರ್ವೀಕಾರವಾಗಿ, ಸಂವೇದನಾಶೀಲತೆಯಿಂದ ತಮ್ಮ ಕಥೆಗಳ ಮೂಲಕ ಬರೆಯಲಾರಂಭಿಸಿದ ತುಳಸಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ.

ಅವರು ಬರೆದಂತಹ ತಪ್ತರು, ಗೃಹಭಂಗ, ಆವಿಷ್ಕಾರ, ಹೊಂಚು, ಲವ್-ಆಲ್ ಮುಂತಾದ ಕಥೆಗಳು ಕನ್ನಡದ ಪ್ರಾತಿನಿಧಿಕ ಕಥೆಗಳ ಸಾಲಿನಲ್ಲಿ ಸೇರಬಹುದಾದ ಕಥೆಗಳು. ಹೀಗಿದ್ದೂ ಕನ್ನಡ ಸಾಹಿತ್ಯದ ಪ್ರಮುಖಧಾರೆಯಲ್ಲಿ ಅವರ ಉಲ್ಲೇಖ ಮಾತ್ರ ಅಪರೂಪ.  ಓದುಗರ ಅಂತೆಯೇ ವಿಮರ್ಶಕರ ಉಪೇಕ್ಷೆಗೆ ಒಳಗಾದ ತುಳಸಿಯವರ ಕಥೆಗಳ ಸಮಗ್ರ ಸಂಕಲನವನ್ನು ಇದೀಗ ಪ್ರಿಸಂ ಬುಕ್ಸ್ ಅವರು ಪ್ರಕಟಿಸಿರುವರು. ಪ್ರಸ್ತುತ ಸಂಕಲನಕ್ಕೆ ವಿಮರ್ಶಕಿ ಎಂ.ಎಸ್. ಆಶಾದೇವಿಯವರ ಮುನ್ನುಡಿಯಿದ್ದು, ಅನುಬಂಧದಲ್ಲಿ ತುಳಸಿಯವರ ಕತೆಗಳ ಕುರಿತು ಕನ್ನಡದ ಪ್ರಮುಖ ಸಾಹಿತಿಗಳು, ವಿಮರ್ಶಕರು ಬರೆದಂತಹ ಲೇಖನಗಳಿವೆ. ತುಳಸಿಯವರ ಎಲ್ಲಾ ಕಥೆಗಳನ್ನು ಓದುವ ಸುವರ್ಣಾವಕಾಶವಿದು.

‍ಲೇಖಕರು admin j

28 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading