-ಜಿ ಎನ್ ಮೋಹನ್
ಮಕ್ಕಳ ರಂಗಭೂಮಿಗೆ ‘ಸಂಚಾರಿ ಥಿಯೇಟರ್’ನ ಕೊಡುಗೆ ಅಪಾರ.
ಹೊಸ ಪ್ರಯೋಗಗಳಿಂದ ಗಮನ ಸೆಳೆದ ಈ ತಂಡ ನಾಟಕ ಹಾಗೂ ಗೊಂಬೆಯಾಟವನ್ನು ಕಸಿ ಮಾಡಿ ಸೈ ಎನಿಸಿಕೊಂಡಿತು.
‘ಸಂಚಾರಿ ಥಿಯೇಟರ್’ಗೆ ಮಕ್ಕಳ ನಾಟಕಗಳೆಂದರೆ ತುಂಬಾ ಪ್ರೀತಿ. ಸಂಚಾರಿಯ ಪ್ರತಿಯೊಬ್ಬ ನಟರೂ ಮಕ್ಕಳ ನಾಟಕಕ್ಕೆ ಬಣ್ಣ ಬಳಿದುಕೊಂಡೇ ಮುಂದೆ ಹೆಜ್ಜೆ ಇಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಈ ತಂಡ ಮಕ್ಕಳ ನಾಟಕಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕುವೆಂಪು ಅವರ ‘ನರಿಗಳಿಗೇಕೆ ಕೋಡಿಲ್ಲ’ ಕಥೆಯನ್ನು ರಂಗಕ್ಕೆ ಏರಿಸಿದಾಗ ಮುಂದೆ ಒಂದು ದಿನ ಮಕ್ಕಳಿಗಾಗಿಯೇ ಒಂದು ವಿಭಾಗವನ್ನು ತೆರೆಯಬೇಕಾಗಿ ಬರುತ್ತದೆ ಎಂದು ಸಂಚಾರಿಯೂ ಅಂದುಕೊಂಡಿರಲಿಲ್ಲವೇನೋ?. 2011 ರಲ್ಲಿ ಮೊದಲು ಮಕ್ಕಳ ನಾಟಕವನ್ನು ಕೈ ಹಿಡಿದು ವೇದಿಕೆಗೆ ಕರೆದುಕೊಂಡು ಬಂದ ಸಂಚಾರಿ ಮಕ್ಕಳಿಂದ, ಹಿರಿಯರಿಬ್ಬರಿಂದಲೂ ಮಕ್ಕಳ ನಾಟಕಗಳನ್ನು ಆಡಿಸಿದೆ. ’29 ಮಕ್ಕಳ ನಾಟಕಗಳು, ಲೆಕ್ಕವಿಲ್ಲದಷ್ಟು ಮಕ್ಕಳ ಕಾರ್ಯಾಗಾರಗಳು ಸಂಚಾರಿ ಥಿಯೇಟರ್ ಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಿದೆ’ ಎನ್ನುತ್ತಾರೆ ತಂಡವನ್ನು ಹುಮ್ಮಸ್ಸಿನಿಂದ ಮನ್ನೆಡೆಸಿಕೊಂಡು ಬಂದಿರುವ ಎನ್ ಮಂಗಳಾ. ಆ ಕಾರಣಕ್ಕಾಗಿಯೇ ಈಗ ‘ಸ್ಟೋರಿ ಕ್ವಿಲ್ಟ್’ ಅರಳಿದೆ.
ಎ ಕೆ ರಾಮಾನುಜನ್ ಅವರ ‘ಅಂಗುಲ ಹುಳುವಿನ ಪರಕಾಯ ಪ್ರವೇಶ’ದ ಮೂಲಕ ರಂಗ ಪ್ರವೇಶ ಮಾಡಿದ ‘ಸಂಚಾರಿ ಸ್ಟೋರಿ ಕ್ವಿಲ್ಟ್’ನ ಎರಡನೆಯ ಪ್ರಯೋಗ ಈ ‘ಮರ ಏರಲಾಗದ ಗುಮ್ಮ’.

ಮಕ್ಕಳ ಸಾಹಿತ್ಯ ಹೇಗಿರಬೇಕು ಎನ್ನುವ ಚರ್ಚೆ ಹೊರಳು ದಾರಿಯಲ್ಲಿ ಇರುವಾಗಲೇ ಮಕ್ಕಳ ರಂಗಭೂಮಿ ಅದನ್ನು ಮೀರಿ ಸಾಕಷ್ಟು ಮುನ್ನಡೆದುಬಿಟ್ಟಿದೆ. ಇದಕ್ಕೆ ಒಂದು ಮುಖ್ಯ ಉದಾಹರಣೆಯಾಗಿ ನಿಂತದ್ದು ಧನುಷ್ ನಾಗ್ ನಿರ್ದೇಶಿಸಿದ ‘ಮರ ಏರಲಾಗದ ಗುಮ್ಮ’. ತಾನ್ಯಾ ಮಜುಂದಾರ್ ಅವರ ಕಥೆ (ಕನ್ನಡಕ್ಕೆ: ಪ್ರಸಾದ್ ನಾಯ್ಕ್) ಮಕ್ಕಳ ರಂಗಭೂಮಿಗೆ ಸವಾಲೆಸೆಯುವಂತಹದ್ದು. ಮಕ್ಕಳ ಮಾನಸಿಕ ಲೋಕದ ತಲ್ಲಣಗಳನ್ನು ಹಿಡಿದಿಡುವ ಕಥೆ ಇದು.
ಆವಿ ಮನೆಗೆ ಒಬ್ಬ ಪುಟ್ಟ ಹುಡುಗಿ ಬಂದಿದ್ದಾಳೆ. ಇನ್ನು ಮೇಲೆ ಇಲ್ಲೇ ಇರುತ್ತಾಳೆ. ಅವಳಿಗಾಗಿ ಮನೆಯೂ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದೆ. ಇದ್ದ ರೂಮಿನಲ್ಲಿ ಅವಳಿಗೂ ಜಾಗ ಮಾಡಿಕೊಡಬೇಕು ಎನ್ನುವ ಆಲೋಚನೆಯೇ ಪುಟ್ಟ ಹುಡುಗನಲ್ಲಿ ಒಂದು ಗುಮ್ಮ ಮನೆ ಮಾಡುವಂತೆ ಮಾಡುತ್ತದೆ. ಆ ಗುಮ್ಮ ಅವನ ಒಳ ಹೊಕ್ಕರೆ ಸಾಕು ಅವನಿಗೆ ತಾನೇನೂ ಆಡುತ್ತಿದ್ದೇನೆ, ಮಾಡುತ್ತಿದ್ದೇನೆ ಎನ್ನುವುದೇ ಗೊತ್ತಾಗುವುದಿಲ್ಲ. ಆದರೆ ಅಲ್ಲೊಂದು ಮರವಿದೆ. ಅನೇಕ ಕೋತಿಗಳು ಬಂದು ಆಟವಾಡುವ, ಮರಕುಟುಕ ಕುಟ್ ಕುಟ್ ಎಂದು ಮರ ಕೆತ್ತುವ, ಅಳಿಲು ಓಡಾಡುವ, ಬೇಕಾದಷ್ಟು ಹಣ್ಣು ಬಿಡುವ, ಹಸಿರೆಲೆಗಳಿಂದ ತುಂಬಿ ತುಳುಕುವ ಬಕುಲದ ಮರ. ಆ ಮಗುವಿಗೆ ಒಂದೇ ಅಚ್ಚರಿ ಆ ಮರ ಏರಿದ ತಕ್ಷಣ ಹೇಗೆ ತಾನು ಸಂಪೂರ್ಣ ಬದಲಾಗಿಬಿಡುತ್ತೇನೆ ಎಂದು. ಅವನಿಗೆ ಕೊನೆಗೆ ಅರಿವಾಗುತ್ತದೆ ಅವನನ್ನು ಯಾವಾಗಲೂ ಕಾಡುವ ಆ ಗುಮ್ಮನಿಗೆ ಮರ ಏರಲು ಬರುವುದಿಲ್ಲ ಅಂತ. ದತ್ತು ತೆಗೆದುಕೊಂಡಾಗ, ಮನೆಗೆ ಎರಡನೆಯ ಮಗು ಬರುವಾಗ ಎಲ್ಲಾ ಮನೆಗಳೂ ಎದುರಿಸುವ ತಲ್ಲಣ ಇದು. ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದೇನೆ ಎನ್ನುವ ಮೊದಲ ಮಗುವಿನ ಹತಾಶೆ ಗುಮ್ಮನಾಗಿ ಹೆಗಲೇರಿಬಿಡುತ್ತದೆ. ಇದರ ಜೊತೆಗೆ ಪರಿಸರದ ಉಳಿವು ಸಹಾ ನಾಟಕದಲ್ಲಿ ಒಳ ಝರಿಯಾಗಿ ಬಂದಿದೆ.

ಭಿನ್ನವಾದ ಕಥೆ ಕ್ಲಿಕ್ ಆದದ್ದೇ ಧನುಷ್ ಇದನ್ನು ಮಂಡಿಸುವಲ್ಲಿ ಆಯ್ದುಕೊಂಡ ಭಿನ್ನ ವಿಧಾನದಿಂದ. ನಾಟಕದ ಜೊತೆಗೆ ಗೊಂಬೆಯಾಟವನ್ನೂ ಕಸಿ ಮಾಡಿ. ಗೊಂಬೆಗಳಲ್ಲೂ ವೈವಿಧ್ಯ ತಂದು ಧನುಷ್ ಮಕ್ಕಳ ಮನೋಲೋಕಕ್ಕೆ ಲಗ್ಗೆ ಇಡುತ್ತಾರೆ. ಅರ್ಧ ನಾಟಕ ರಂಗದ ಮೇಲೂ, ಇನ್ನರ್ಧ ಪರದೆಯ ಹಿಂದೆ ನೆಳಲು ಬೆಳಕಾಗಿ, ಗೊಂಬೆಗಳ ಮೂಲಕ ಮಂಡಿತವಾಗುತ್ತಾ ಹೋಗುತ್ತದೆ.
ಇಡೀ ರಂಗಮಂದಿರದಲ್ಲಿ ಮಕ್ಕಳು ಕೇಕೆ ಹಾಕಿ ನಗುವಂತೆ, ನಾಟಕದ ಡೈಲಾಗ್ ಗೆ ತಮ್ಮ ಮಾತೂ ಜೋಡಿಸುವಂತೆ ಮಾಡಿದ್ದು ಸಂಚಾರಿಯ ಯಶಸ್ಸು. ಅವಿಯಾಗಿ ಧನುಷ್ ನಾಗ್ ಹಾಗೂ ಅವನ ತಂಗಿಯಾಗಿ ಚುಕ್ಕಿ ಎಲ್ಲರ ಮನ ಸೆಳೆದರು. ಗೊಂಬೆಗಳನ್ನು ಆಡಿಸುತ್ತಾ, ತಾವೇ ಪಾತ್ರವೂ ಆಗುತ್ತಾ ಸಂದೀಪ್ ಜೈನ್, ಅಭಿಷೇಕ್ ನಾಯ್ಕ್, ಚಿರಂತನ್, ಚೇತನ್, ರಚನಾ, ಲಕ್ಷ್ಮಿ, ಚಿರಾಗ್, ಉದಾತ್ ನಿಗಳೆ ನಾಟಕದ ಯಶಸ್ಸಿಗೆ ಕಾರಣರಾದರು. ಸಂಗೀತ (ಅಂಕುರ್ ಟಿ ಎಸ್, ಗಜಾನನ ಟಿ ನಾಯ್ಕ್) ಬೆಳಕು (ಅರುಣ್ ಡಿ ಟಿ) ಚೆನ್ನಾಗಿತ್ತು.






0 Comments