ಮನ ಕಾಡುವ ಶೋಭಾ ಹಿರೇಕೈ ಕವಿತೆಗಳು

ಯುದ್ಧಕ್ಕೆ, ಸ್ಥಗಿತ ವ್ಯವಸ್ಥೆಗೆ ಎದುರಾಗುವ  ಪ್ರತಿಭಟನಾತ್ಮಕ ಕಾವ್ಯ

ನಾಗರಾಜ ಹರಪನಹಳ್ಳಿ

ಶೋಭಾ ಹಿರೇಕೈ ವೃತ್ತಿಯಿಂದ ಶಿಕ್ಷಕಿ. ‘ಅವ್ವ ಮತ್ತು ಅಬ್ಬಲಿಗೆ’ ಕಾವ್ಯ ಸಂಕಲನದ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ಪ್ರವೇಶ ಪಡೆದವರು. ಶೋಭಾ ಎಷ್ಟು ಮುಗ್ಧವಾಗಿ ಕವಿತೆ ಬರೆಯಬಲ್ಲರು ಎಂಬುದು ಅವರ ಮೊದಲ ಸಂಕಲನವೇ ಸಾಕ್ಷಿ. 2019 ರಲ್ಲಿ ಅವರ ಕವಿತೆಗಳನ್ನು ನೇಕಾರ ಪ್ರಕಾಶನ ಪ್ರಕಟಿಸಿದೆ.

ಇಲ್ಲಿನ ಕವಿತೆಗಳನ್ನು ಪ್ರಕಟವಾಗುವ ಮೊದಲೇ ಓದಿದ ಖುಷಿ ಇದೆ ನನಗೆ. ಅವರ “ಗುರ್ ಮೆಹರ್ ಅಂತರಂಗ”,  “ಹೆಚ್ಚೆಂದರೇನು ಮಾಡಿಯೇನು?”, “ಬುದ್ಧ ಮತ್ತು ಯುದ್ಧ…”, “ಕಡಲು ಮತ್ತು ನದಿ”, “ಮೀಯುವುದೆಂದರೆ” ಕವಿತೆಗಳನ್ನು ‘ಅವಧಿ’ ಸೇರಿದಂತೆ ಅಲ್ಲಲ್ಲಿ ಓದಿದ್ದೆ. ಕವಿಯೊಬ್ಬನಿಂದ ಒಮ್ಮೆ ಶ್ರೇಷ್ಟ ಕವಿತೆ ಹೊರ ಬರುತ್ತದೆ ಎಂಬ ಮಾತಿದೆ. ‘ಗುರ್ ಮೆಹರ್ ಅಂತರಂಗ’ ಕವಿತೆ ಓದಿದ ನಾನು ನಿಮ್ಮಿಂದ ಉತ್ತಮ ಕಾವ್ಯ ಬಂದಿದೆ. ಯುದ್ಧ -ಬುದ್ಧ, ಅಯ್ಯಪ್ಪ ಸ್ವಾಮಿ ಕುರಿತ ಕವಿತೆ ಶ್ರೇಷ್ಠ ಅಭಿವ್ಯಕ್ತಿ . ಸ್ವಲ್ಪದಿನ ಕವಿತೆಗೆ ವಿರಾಮ ಕೊಡಿ ಎಂದಿದ್ದೆ.

ಅಪರೂಪಕ್ಕೆ ಬರೆಯುವ ಶೋಭಾ ಕಾಡಿದ ಸಂಗತಿಗಳನ್ನು ಕವಿತೆ ಮಾಡಲು ಎಂದೂ ಆತುರ ತೋರಿದವರಲ್ಲ. ಧ್ಯಾನಿಸಿ ಕವಿತೆ ಬರೆಯುವ ಅವರು ವರ್ತಮಾನವನ್ನು ಕಟ್ಟುವಾಗ, ಅಬ್ಬರದಿಂದ ಮಾತಾಡಿ ಶಬ್ದ ಬಳಸುವವರಲ್ಲ. ಅವರ ಗುರ್ ಮೆಹರ್ ಅಂತರಂಗ , ಆಯ್ಯಪ್ಪ ಸ್ವಾಮಿ ಕುರಿತ ‘ಹೆಚ್ಚೆಂದರೇನು ಮಾಡಿಯೇನು’ ಕವಿತೆ  ಕ್ರಾಂತಿಕಾರಿ ಕವಿತೆಗಳು. ತಣ್ಣನೆಯ ನುಡಿಯಲ್ಲಿ ಸಮಾಜಿಕ ಬದಲಾವಣೆಗೆ ಪ್ರತಿಕ್ರಿಯಿಸುವ ಮತ್ತು ಕ್ರಿಯಾತ್ಮಕ ಚಲನೆ ತೋರುವ ಅವರ ಕವಿತೆಗಳಲ್ಲಿ ಅಕ್ಕನ ಬಂಡಾಯವೂ ಇದೆ. ಸ್ಥಗಿತ ವ್ಯವಸ್ಥೆಗೆ   ಪ್ರತಿಭಟನಾತ್ಮಕ ಕ್ರಿಯೆ ತೋರುವ ಕವಯಿತ್ರಿ ತನ್ನ ಅಕ್ಷರ ನಿಲುವನ್ನು ಈ ಕವಿತೆಗಳಲ್ಲಿ ದಾಖಲಿಸುತ್ತಳೆ.

ಕನ್ನಡದಲ್ಲಿ ಬರೆಯುವವರು ವಚನ ಸಾಹಿತ್ಯದ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಆಶಯಗಳ ದೃಷ್ಟಿಯಿಂದ ಅತ್ಯಂತ ಮಾನವೀಯವಾಗಿ ತಾಯ್ತನದಿಂದ ಬರೆಯುವವರು ಶೋಭಾ. ಅವರ ಹಲವು ಕವಿತೆಗಳಲ್ಲಿ ಈ ತಾಯ್ತನದ ಗುಣವಿದೆ. ಹೇಳುವುದನ್ನು ತಣ್ಣಗೆ ಹೇಳಿ ದಾಟಿಸಿ ಬಿಡುತ್ತಾರೆ. ಹಾಗಾಗಿ ಅವರ ಕವಿತೆಗಳು ತಣ್ಣಗೆ ಓದುಗನ, ಸಹೃದಯನ ಎದೆಗಿಳಿಯುತ್ತವೆ.

ಕನ್ನಡ ಕಾವ್ಯ ಪರಂಪರೆಯನ್ನು ಅವರು ಮುಂದುವರಿಸಿದ್ದಾರೆ. ಮುಗ್ಧತೆಯಿಂದ ಅವರು ಸಮಾಜವನ್ನು, ಇಲ್ಲಿನ ಆಗುಹೋಗುಗಳನ್ನು ಗಮನಿಸುತ್ತಾರೆ, ಅವ್ವ, ಅವ್ವ ಬೆಳೆದ ಅಬ್ಬಲಿಗೆ, ತವರು, ತವರು ಮನೆಯ ಅಟ್ಟ , ಊರ ಬದಿ ಉಕ್ಕಿ ಹರಿದ ನದಿ, ಅದು ತರುವ ಸಂಕಟ, ಸಂಭ್ರಮ ಜೊತೆ ಜೊತೆಯಾಗಿ ದಾಖಲಾಗಿವೆ. ಅವರ ಕಾವ್ಯದಲ್ಲಿ ಗ್ರಾಮದ ಬದುಕು, ತಲ್ಲಣಗಳು  ಹಾಸು ಹೊಕ್ಕಾಗಿವೆ.

ನಾಲ್ಕು ಕಾರಣಗಳು;
ಶೋಭಾ ಅವರ ಕಾವ್ಯ ನಾಲ್ಕು ಕಾರಣಗಳಿಗಾಗಿ ಪ್ರಮುಖವಾಗುತ್ತದೆ. ಕಾವ್ಯದಲ್ಲಿ ಸಂಕೀರ್ಣತೆ ಇಲ್ಲದೆ ಹೇಳುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಶಬ್ದಾಡಂಬರವಿಲ್ಲದೇ ಕಾವ್ಯವನ್ನು ಓದುಗನಿಗೆ ತಲುಪಿಸುವುದು, ವರ್ತಮಾನಕ್ಕೆ ಮುಖಾಮುಖಿಯಾಗುವುದು,
ಅಬ್ಬರವಿಲ್ಲದೇ, ಏರು ಅಥವಾ ದೊಡ್ಡ ಗಂಟಲಲ್ಲಿ ಮಾತನಾಡದೇ, ಮುಗ್ಧತೆಯಿಂದ ಕಾವ್ಯ ಬರೆಯುವುದು, ಅವರ ಕಾಡಿದ ಕಾಣ್ಕೆಯನ್ನು ತಣ್ಣಗೆ ಮೆಲುಧನಿಯಲ್ಲಿ ತಾಯ್ತನದಿಂದ ಹೇಳುವುದು. ಇವು ಶೋಭಾ ಅವರ ಕವಿತೆಗಳ ಮುಖ್ಯ ಗುಣಗಳು.
ಕವಯಿತ್ರಿ ಶೋಭಾ ಅವರ ಕಾವ್ಯ ಗೆಲ್ಲುವ ಬಗೆ ಇಲ್ಲಿದೆ ನೋಡಿ…

“ಯುದ್ಧವನ್ನು ಯುದ್ಧವೆನ್ನದೆ
ಇನ್ನೇನನ್ನಲಿ ?’
ಹೇಳು ಅಶೋಕ
ಕಳಿಂಗ ನಿನ್ನ ಕಾಡಿದಂತೆ
ಕಾರ್ಗಿಲ್ ನನ್ನ ಕಾಡುತ್ತಿದೆ
ಬೇಕೆ ಯುದ್ಧ ?
ನನ್ನಂಥ ತಬ್ಬಲಿಗಳ ಕೇಳಿ ( ಗುರ್ ಮೆಹರ್ ಅಂತರಂಗ)

ಈ ಸಾಲುಗಳನ್ನು ಯಾರು ಓದಿದರೂ ಯುದ್ಧ ಬೇಡ ಎಂದು ಮನದಲ್ಲೊಮ್ಮೆ ಹೇಳಿಕೊಳ್ಳಲೇಬೇಕು. ಈ ನೆಲ ಕಳಿಂಗ ಯುದ್ಧ ಕಂಡಿದೆ. ಅಶೋಕನಂದ ಮಹಾಚಕ್ರವರ್ತಿ, ಬುದ್ಧನ ಅಹಿಂಸೆಯ ದಾರಿ ಹಿಡಿದದ್ದು ಕಳಿಂಗ ಯುದ್ಧದ ಸಾವು ನೋವಿನ ನಂತರ. ಯುದ್ಧವಿಲ್ಲದ ನಾಡು ಕಾಣುವುದು ನಮ್ಮ ಪರಂಪರೆ. ಅದನ್ನು ತಣ್ಣನೆಯ ಶಬ್ದಗಳಲ್ಲಿ ಸೈನಿಕ ಮಗಳ ಅಂತರಂಗವನ್ನು ಹೊಕ್ಕು ಬರೆಯುತ್ತಾರೆ ಕವಯಿತ್ರಿ. ಅವರೇ ಗುರ್ ಮೆಹರ್ ಆಗುವ ಕ್ಷಣ ಕವಿತೆಗೆ ಕಸುವು ದಕ್ಕಿಸಿದೆ.
ಯುದ್ಧ -ಬುದ್ಧ ಕವಿತೆಯೂ ಸಹ ಯುದ್ಧದ ನಿರರ್ಥಕತೆಯನ್ನು ಅತ್ಯಂತ ಪ್ರಬಲವಾಗಿ ಹೇಳುವುದೇ ಆಗಿದೆ. ಮತ್ತೆ ಯುದ್ಧವಂತೆ ಬುದ್ಧ ಎಂಬ ಸಾಲಿನಲ್ಲಿ ಅವರು ಈ ದೇಶಕ್ಕೆ ಕರುಣೆ ಕಲಿಸಿದ, ಪ್ರೀತಿಯನ್ನು ಕಲಿಸಿದ ಬುದ್ಧನ ಜೊತೆ ಸಂವಾದಕ್ಕೆ ಇಳಿಯುತ್ತಾರೆ, ಹಾಗೆ ಯುದ್ಧ ದಾಹಿಗಳಿಗೆ ತಣ್ಣಗೆ ಅವ್ವನ ಸ್ಥಾನದಲ್ಲಿ ನಿಂತು ತಿವಿಯುತ್ತಾರೆ.

“ಯಾವ ಬಂದೂಕಿಗೆ
ಬಾಯ ತುರಿಕೆಯೀ ಕಾಣೆ
ಮತ್ತೆ ಬಂದಿದೆಯಂತೆ
ನರ ಬೇಟೆಯ ಸಮಯ

ಸಿದ್ಧ ಮಾಡುತ್ತಾರಲ್ಲಿ
ಹೆರವರ ಮಕ್ಕಳನ್ನು
ಬಲಿ ಕೊಡುವ ಪೀಠಕ್ಕೆ

ಇಲ್ಲಿ
ಎದೆಯ ಕರಿಮಣೆಯನ್ನೊಮ್ಮೆ
ಮುಟ್ಟಿ ಮುಟ್ಟಿ
ಅವಚುತ್ತಾರಿವರು” ಎಂಬ ಸಾಲುಗಳಲ್ಲಿ ಸೈನಿಕರ ಪತ್ನಿಯ ಆತಂಕ ಸಶಕ್ತವಾಗಿ ಅಭಿವ್ಯಕ್ತವಾಗಿದೆ.

“ಇನ್ನೋರ್ವರೆಲ್ಲೋ…
ಕುರ್ಚಿಯ ಕಾಲುಗಳನ್ನು
ಗಟ್ಟಿ ಮಾಡಿಕೊಳ್ಳುತ್ತಾರೆ
ಮುಂದಿನ ರಂಗದ

ಭರ್ಜರಿ ತಾಲೀಮಿನೊಂದಿಗೆ ಎನ್ನುತ್ತಲೇ ವರ್ತಮಾನದ ರಾಜಕೀಯ ಸಂಚುಗಳನ್ನು ಬಯಲು ಮಾಡುತ್ತಾರೆ. ಮುಂದುವರಿದು ಅಂಗುಲೀಮಾಲ ಮತ್ತು ಬುದ್ಧರನ್ನು ಮುಖಾಮುಖಿ ಮಾಡುತ್ತಾ, ಬುದ್ಧ ಮತ್ತೆ ಬಂದು ಬಿಡು ಈ ನೆಲಕೆ ಎಂಬ ಆಹ್ವಾನವನ್ನು ಕವಯಿತ್ರಿ ನೀಡುತ್ತಾಳೆ. ಯುದ್ಧದ ಭೀತಿಯಲ್ಲೂ ಬುದ್ಧನ ಕರೆಯುವ ಆಶಾವಾದ ಕವಿತೆಯಲ್ಲಿದೆ.

ಈ ಸಂಕಲನದಲ್ಲಿ ತುಂಬಾ ಇಷ್ಟವಾದ ಹಾಗೂ ಮಹತ್ವದ ಕವಿತೆ ‘ಹೆಚ್ಚೆಂದರೇನು ಮಾಡಿಯೇನು?’ ಎಂಬ ಕವಿತೆ.

ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಇಡೀ ದೇಶವನ್ನೇ ಗಮನ ಸೆಳೆದ ಘಟನೆ. ಮುಟ್ಟಾದ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಮಾಡಬಾರದು ಎಂದು ಅಯ್ಯಪ್ಪ ಸ್ವಾಮಿ ದೇಗುಲ ಕಮಿಟಿ ಹೇಳುತ್ತದೆ. ಅಂಥ ನಿರ್ಬಂಧ ಹೇರಬಾರದು ಎಂದು ಸುಪ್ರಿಂಕೋರ್ಟ್ ತೀರ್ಪುನೀಡಿದೆ. ಕೇರಳ ಸರ್ಕಾರ ಈ ತೀರ್ಪು ನಿಭಾಯಿಸಲು ಪಟ್ಟ ಕಷ್ಟ, ಕೇರಳ ಸರ್ಕಾರದ ವಿರುದ್ಧ ಇದ್ದ ಮತ್ತೊಂದು ರಾಜಕೀಯ ಪಕ್ಷ , ಕೇರಳದಲ್ಲಿ ಬೇಳೆ ಬೇಯಿಸಿಕೊಳ್ಳಲು ಮಾಡಿದ ಮಾಟ, ಆಡಿದ ಆಟ ಎಲ್ಲವೂ ದೇಶದ ಜನರ ಮುಂದಿದೆ. ಆದರೆ ಈ ಘಟನೆಗೆ ಕವಯಿತ್ರಿ ಶೋಭಾ ಮುಖಾಮುಖಿಯಾಗುವುದೇ ವಿಭಿನ್ನ ರೀತಿಯಲ್ಲಿ. ಅವರ ಪ್ರತಿಕ್ರಿಯೆ ಕಾವ್ಯದಲ್ಲಿ ದಾಖಲಾಗುವ ಪರಿ ತಾಯ್ತನದ್ದು. ಬಾಲಕ ಅಯ್ಯಪ್ಪನ ಜೊತೆ ಸಂವಾದಕ್ಕೆ ಇಳಿಯುವ ಕವಯಿತ್ರಿ ಹೆಚ್ಚೆಂದರೇನು ಮಾಡಿಯೇನು ? ಎನ್ನುತ್ತಾ ತಾಯಿಯಾಗುತ್ತಾರೆ.

ನನ್ನ ಮಗನಂತೆ ನೀನು.
ಎಷ್ಟು ವರ್ಷ ನಿಂತೇ ಇರುವೆ
ಬಾ ಮಲಗಿಕೋ ಎಂದು
ಮಡಿಲ ಚೆಲ್ಲಿ
ನನ್ನ ಮುಟ್ಟಿನ ಕಥೆಯ
ನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯ
ನಿನಗೆ ಹೇಳುವೆನು

ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೊಡು
ಹುಳಿಯಾಗಿದೆಯೇನೋ…ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು…

ಹದಿನೆಂಟನೆ ಕೊನೆಯ ಮೆಟ್ಟಿಲ
ಕೆಳಗಿಳಿದ ಮೇಲೂ…
ಮತ್ತೊಮ್ಮೆ ಮೊಗದೊಮ್ಮೆ ನಿನ್ನ ತಿರುತಿರುಗಿ ನೋಡಿಯೇನು.

ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು? ”

ಎಂದು ಬಾಲಕ ಅಯ್ಯಪ್ಪನನ್ನೇ ಪ್ರಶ್ನಿಸುತ್ತಾರೆ. ಮಕ್ಕಳು ದೇವರ ಸಮಾನ. ದೇವರನ್ನು, ಮಕ್ಕಳನ್ನು ಪ್ರಶ್ನಿಸುವ ಪರಂಪರೆ ವಚನ ಸಾಹಿತ್ಯದಲ್ಲಿ, ವಚನಕಾರರಲ್ಲಿ ಇದೆ. ಅದು ಕವಯಿತ್ರಿ ಶೋಭಾ ಅವರಲ್ಲಿ ಸಹ ಮುಂದುವರಿದಿದೆ. ಹಾಗಾಗಿ ಈ ಕವಿತೆ ಕನ್ನಡ ಕಾವ್ಯದಲ್ಲಿ ಪ್ರಮುಖವಾಗಿ ಎಲ್ಲ ಕಾಲಕ್ಕೂ ನಿಲ್ಲಬಲ್ಲ ಕಸುವು ಪಡೆದಿದೆ.

ಬಂಜೆಯಾಯಿತೇ  ಭೂಮಿ ಕವಿತೆಯಲ್ಲಿ ಮಿದು ಮಣ್ಣಿಗೂ ಇಂಥ ಕಾಠಿಣ್ಯವೇ ಎಂದು ಪ್ರಶ್ನಿಸುತ್ತಾರೆ. ಮಣ್ಣಿನ ಮತ್ತು ಹೆಣ್ಣಿನ ಮನದ ಸಂಕಟವನ್ನು ಹೆಣೆಯುವ ಪರಿಯೇ ಚೆಂದ.
ನನ್ನೂರು, ತವರು ತಾರಸಿಯಾಗುತ್ತಿದೆ ಕವಿತೆಗಳಲ್ಲಿ ಬಾಲ್ಯ ಹಾಗೂ ಹಳ್ಳಿಯ ಬದಲಾವಣೆಯ ಚಿತ್ರಗಳಿವೆ. ಜಾಗತೀಕರಣಕ್ಕೆ ಸಿಕ್ಕ ಹಳ್ಳಿ ಹೆಂಚಿನ ಬದಲು ಕಾಂಕ್ರೀಟಿಕರಣ ಗೊಳ್ಳುತ್ತಲೇ ಅಟ್ಟ, ಪಡಸಾಲೆ, ನಾಗಂದಿಗೆ ಮಾಯವಾಗುತ್ತಿದೆ. ಅಲ್ಲಿನ ಸಂಬಂಧಗಳು ನಿಧಾನಕ್ಕೆ ಕಳಚುತ್ತಿವೆ ಎಂಬ ಆತಂಕ ಈ ಕವಿತೆಗಳಲ್ಲಿ ಕಾಣುತ್ತದೆ. *ಉಯಿಲೊಂದ ಬರೆದಿಡುವೆ* ಕವಿತೆಯಲ್ಲಿ ಶೋಭಾ ಅವರ ಬಂಡಾಯದ ಧ್ವನಿ ಕೇಳಬೇಕು. ಇದು ಸಹ ಮಹತ್ವದ ಕವಿತೆ.

“ಧರ್ಮ ಧರ್ಮ
ಎಂದೊದರುವವರ ಮಧ್ಯೆ
ನನಗೆ ಮರೆತೇ ಹೋಗಿದೆ
ನನ್ನ ಜಾತಿ, ನನ್ನ ಧರ್ಮ

ನನ್ನ ಜನಗಳಿಗೂ ಅಷ್ಟೇ
ಇದಾವುದರ ಅರಿವೂ ಇಲ್ಲದೆ
ಮೋಡಗಳಾಚೆಯೇ ನೆಟ್ಟದ್ದಾರೆ ದೃಷ್ಟಿ

ಎರಡು ಹನಿಗಳಿಗಾಗಿ” ಎಂಬಲ್ಲಿ ದುಡಿಯುವವರಿಗೆ, ರೈತರಿಗೆ ಧರ್ಮದ ಚಿಂತೆ ಇರುವುದಿಲ್ಲ. ಅವರಿಗೆ ಬಿತ್ತಿ ಬೆಳೆಯುವುದರ ಬದುಕಿನ ಚಿಂತೆ ಮಾತ್ರ ಇರುತ್ತದೆ ಎಂದು ಹೇಳುವ ಕವಯಿತ್ರಿ,
`ಹೊಟ್ಟೆ ತುಂಬಿದ ಜನಗಳಿಗೆ ಮಾತ್ರ ಒಡೆಯುವುದರ ಕುರಿತೇ ಚಿಂತೆ’  ಎಂದು ಹೇಳುವಲ್ಲಿ ಕವಿತೆ ಸ್ಪಷ್ಟದಾರಿ ಹಾಗೂ ಕವಯಿತ್ರಿಯ ಧೋರಣೆ ಸ್ಪಷ್ಟವಾಗುತ್ತದೆ.

“ಬರೆದಿಟ್ಟು ಬಿಡುವೆ
ನನ್ನ ರಕ್ತವೇನಾದರೂ
ಚೆಲ್ಲಿಬಿಟ್ಟರೆ ಸೇರಿಸಿ ಬಿಡಿ
ಚಮಚ-ಚಮಚದಷ್ಟು
ಎಲ್ಲಾ ಧರ್ಮಗಳ ಬಾಟಲಿಗಳ ಮೇಲೆ
ಕಾಲಕಾಲಗಳಾಚೆಯಾದರೂ
ಪ್ರೇಮಧರ್ಮವೊಂದು ಹುಟ್ಟಿ ಬಿಡಲಿ
ನನ್ನ ರಕ್ತದಿಂದ”

ಎಂಬ ಕಾವ್ಯದ ನಿಲುವು ಮನುಷ್ಯತ್ವ ಸಾರುವುದೇ ಆಗಿದೆ.

ನೆಲದ ಕಾವ್ಯ ಪರಂಪರೆಯನ್ನು ಮುಂದುವರಿಸಿರುವ ಶೋಭಾ ನಾಯ್ಕ ಹಿರೇಕೈ ಮೊದಲ ಸಂಕಲನದಲ್ಲೇ ಭರವಸೆ ಹುಟ್ಟಿಸಿದ್ದಾರೆ. ಕನ್ನಡ ಸಹನೆಯ ಪರಂಪರೆಯನ್ನು , ತಾಯ್ತನವನ್ನು ಅವರ ಹಲವು ಕವಿತೆಗಳು ಕಟ್ಟಿ ಕೊಡುತ್ತವೆ. ಮಲೆನಾಡು ,ಬಯಲು ಸೀಮೆ ಹಾಗೂ ಕರಾವಳಿಯ ಒಡನಾಟ ಪಡೆದಿರುವ ಕವಯಿತ್ರಿ ಅಲ್ಲಿನ ಅನುಭವಗಳನ್ನು, ತನ್ನ ಸುತ್ತಣ ಜಗತ್ತನ್ನು ಕಾವ್ಯದ ವಸ್ತು ಮಾಡಿಕೊಳ್ಳುತ್ತಲೇ ಹಳ್ಳಿಗೆ, ತಾಯಿಗೆ, ತವರಿಗೆ, ಅಬ್ಬಲಿಗೆ ಹೂವಿಗೆ, ದಂಡೆಗೆ, ದೇವರಿಗೆ, ಧರ್ಮಕ್ಕೆ ಮುಖಾಮುಖಿಯಾಗಿ ಬರೆಯುತ್ತಾರೆ.

“ದಂಡೆಯ ಮರಳಿನ ಮೇಲೆ
ಹೊಸ ತಾವೊಂದು ಹುಡುಕಿ
ನನ್ನ ಹೆಜ್ಜೆಯನ್ನೊಮ್ಮೆ ಊರಿ ಬರಬೇಕು
ಕಡಲೂರಿಗೆ ಹೋದ ನೆನಪಿಗಾಗಿ….”
ಹೀಗೆ ಕನಸುಗಳನ್ನು ಕಟ್ಟುತ್ತಾ ಆಶಾವಾದದ ಕಾವ್ಯ ಭೂಮಿಕೆಯನ್ನು ಸಹೃದಯರಲ್ಲಿ ಬಿತ್ತುತ್ತಾರೆ ಕವಯಿತ್ರಿ.

‍ಲೇಖಕರು avadhi

February 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shobha Hirekai

    ಧನ್ಯವಾದ ಮೋಹನ್ ಸರ್ ಮತ್ತು ಅವಧಿ ಬಳಗಕ್ಕೆ. ಹಾಗೂ ನನ್ನ ಕವಿತೆಗಳ ಕುರಿತು ಬರೆದ ನಾಗರಾಜ್ ಸರ್ ರವರಿಗೆ

    ಪ್ರತಿಕ್ರಿಯೆ
  2. ಕೆ.ಬಿ.ವೀರಲಿಂಗನಗೌಡ್ರ.

    ಅಭಿನಂದನೆಗಳು

    ಪ್ರತಿಕ್ರಿಯೆ
  3. Ashok Kumar Valadur

    ತುಂಬಾ  ಪರಿಣಾಮಕಾರಿ  ಕವಿತೆಗಳು .  ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: