ಮನೆಗೊಬ್ಬಳು ದೇವತೆ ಬಂದಾಗ

ಹೆಣ್ಣೆಂಬ ಕೀಳರಿಮೆ

– ಮಂಜುನಾಥ

ಧಾರವಾಡ


ಡಿಸೆಂಬರ್ 23 ರವಿವಾರ ಮಧ್ಯಾಹ್ನ, ಸಮಯ ಸುಮಾರು 4 ಗಂಟೆಗೆ ನಾನು ಪ್ರತಿ ರವಿವಾರದಂತೆ ಮಲಗಿದ್ದೆ. ಪಕ್ಕದಲ್ಲೇ ಇದ್ದ ಮೊಬೈಲ್ನಿಂದ ಸುಮಧುರವಾದ ಸಂಗೀತ ಕೇಳಲು ಶುರುವಾಯಿತು, ಎದ್ದು ನೋಡಿದರೆ ಫೋನ್ ಮಾಡಿದ್ದು ನಮ್ಮ ಅಣ್ಣ, ಅಕ್ಕನನ್ನು ಹಾಸ್ಪಿಟಲ್ ಗೆ admit ಮಾಡಿದ್ದಾರೆ ಬೇಗ ಹೊರಟು ಬಾ ಎಂದು ಹೇಳಿದರು. ಬೇಗನೆ ಎದ್ದು ರೆಡಿಯಾಗಿ ಬಸ್ಸು book ಮಾಡಿ ಬಂದೆ, ರವಿವಾರವಾದ್ದರಿಂದ ಬೆಂಗಳೂರಿಂದ ಹುಬ್ಬಳ್ಳಿಗೆ ಸಲೀಸಾಗಿ reservation ಸಿಕ್ಕಿತು. ಚಡಪಡಿಸುತ್ತಲೆ ಮೆಜೆಸ್ಟಿಕಗೆ ಹೋದೆ. ಅಲ್ಲಿಂದ ಅನಂದರಾವ ಸರ್ಕಲಗೆ ಹೋಗಿ ಬಸ್ಸ್ ಹತ್ತುವಷ್ಟರಲ್ಲಿ ಸುಸ್ತಾಗಿ ಹೋಯಿತು, ಬಸ್ಸಿನಲ್ಲಿ ಏನಾಯ್ತೋ ಏನೋ ಎಂಬ ಚಿಂತೇಲಿ ಯಾವಾಗ ನಿದ್ದೆ ಆವರಿಸಿತೋ ತಿಳಿಯಲಿಲ್ಲ.
ಮುಂಜಾವಿನ ಸುಮಾರು 4 ಗಂಟೆಗೆ, ಪಕ್ಕದಲ್ಲೇ ಇದ್ದ ಮೊಬೈಲ್ ಮತ್ತೆ ಮಧುರವಾಗಿ ಹಾಡಲು ಶುರುವಿಟ್ಟಿತು, ಎದ್ದು ನೋಡಿದೆ ನಮ್ಮ ಭಾವ ಪೋನ್ ಮಾಡಿದ್ದರು. ಅಕ್ಕನಿಗೆ ಹೆಣ್ಣು ಮಗುವಾಗಿದೆ, ತಾಯಿ-ಮಗು ಆರೋಗ್ಯವಾಗಿದ್ದಾರೆ ಅಂತಾ ಹೇಳಿದರು. ತುಂಬಾನೇ ಸಂತೋಷವಾಯಿತು, ನಾನು ಮಾವನಾಗಿ ಬಡ್ತಿ ಪಡೆದಿದ್ದೆ. ಮನೆಗೆ ಒಂದು ಪುಟ್ಟ ಪಾಪು ಬರುತ್ತೆ ಅಂತ ಕೇಳಿ ತುಂಬಾನೇ ಖುಷಿಯಾಯಿತು, ಯಾವಾಗ ಹೋಗಿ ನೋಡುತ್ತೇನೋ ಅನ್ನೋ ಚಡಪಡಿಕೇಲಿ ನಿದ್ದೆನೆ ಬರಲಿಲ್ಲ, ಅಂತೂ ಇಂತು ಮನೆ ಮುಟ್ಟಿದೆ, ಬೇಗ ರೆಡಿಯಾಗಿ ಹಾಸ್ಪಿಟಲಗೆ ಹೋದೆ.
ನಾನು ಹೋಗೊವಷ್ಟರಲ್ಲಿ visiting hours ಮುಗಿದು ಹೋಗಿತ್ತು, ಮತ್ತೆ ಸ್ವಲ್ಪ ಹೊತ್ತು ಹೊರಗಡೆ ಕಾಯುವುದು ನನ್ನಿಂದಾಗಲಿಲ್ಲ. ಒಳಗೆ ಹೋದ ಮೇಲೆ ನೋಡಿದರೆ, ಪುಟ್ಟ ಪುಟ್ಟ ಕೈಗಳನ್ನು ಪಟಪಟನೆ ಬಡಿಯುತ್ತಾ, ಚಿಕ್ಕಚಿಕ್ಕ ಕಣ್ಣುಗಳನ್ನು ಮೆಲ್ಲಗೆ ಅರ್ಧ ಮುಚ್ಚುತ್ತಾ ತೆಗೆಯುತ್ತಾ ಮಲಗಿದ್ದ ಪಾಪು ನೋಡಿ ನನಗೆ ತುಂಬಾನೇ ಆನಂದವಾಯಿತು.
ಮುಟ್ಟಿದರೆ ಎಷ್ಟು ಮುದ್ದಾದ ಮೃದುವಾದ ಬೆಣ್ಣೆಯಂತಾ ಗಲ್ಲ, ಸುಕೋಮಲವಾದ ತ್ವಚ್ಚೆ, ಚಿಕ್ಕ ಚಿಕ್ಕ ಕೈ, ಬೆರಳಂತೂ ಇನ್ನೂ ಚಿಕ್ಕವು. ಒಂದು ಮುದ್ದಾದ ಬೊಂಬೆಗೆ ಜೀವಾ ಬಂದಿರುವ ಹಾಗೆ ಅನ್ನಿಸುತ್ತಿತ್ತು.. ಪಾಪುನ ಎತ್ತಿಕೊಂಡು ಕುಳಿತರೆ, ಮಡಿಲಲ್ಲಿ ಸುಮ್ಮನೆ ಮಲಗಿರುತ್ತಿತ್ತು, ಪಾಪುನ ನೋಡೋ ಆನಂದದಲ್ಲಿ ಬೇರೆ ಎಲ್ಲ ಚಿಂತೆನೇ ಮರೇತು ಮನಸ್ಸು ಪ್ರಶಾಂತವಾಗಿಬಿಟ್ಟಿತು.
ಅವಳನ್ನು ಮನೆಗೆ ಕರೆದುಕೊಂಡು ಬಂದ ಮೇಲಂತೂ, ನನ್ನ ದಿನಚರಿಯೇ ಬದಲಾಯಿತು. ದಿನವಿಡೀ ಹೋಗುವುದು, ಪಾಪುನ ನೋಡುವುದು, ಎತ್ತಿಕೋಳ್ಳುವುದು, ಆಡಿಸುವುದು ಇವೇ ನನ್ನ ಕೆಲಸವಾಗಿ ಹೋಯಿತು. ಒಂದೊದು ಸಲ ಅವಳು ತುಂಬಾ ಹೊತ್ತು ಮಲಗಿದ್ದರೆ ನನಗೆ ಕೋಪ ಬರುತ್ತಿತ್ತು. ಆದರೂ ಅವಳ ಆ ಮುಗ್ದವಾದ ಮುಖನೋಡಿ ನನಗೆ ಸಮಾಧಾನವಾಗುತ್ತಿತ್ತು.
ಅವಳು ಎಚ್ಚರವಿದ್ದಾಗಲೆಲ್ಲಾ ನಾನು ಎತ್ತಿಕೊಂಡರೆ ಅವಳು ಸುಮ್ಮನೆ ಇರುತ್ತಿದ್ದಳು, ಅದೇ ನಮ್ಮ ಅಣ್ಣ ಎತ್ತಿಕೊಂಡರೆ ಅಳಲು ಶುರುಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಅವನ ಅಂಗಿಯೇಲ್ಲಾ ಒದ್ದೆಮಾಡಿ ಬಿಡುತ್ತಿದ್ದಳು, ಹಾಗಾಗಿ ಅವನು ಅವಳನ್ನ ಎತ್ತಿಕೊಳ್ಳುತ್ತಲೇ ಇರಲಿಲ್ಲ, ಸದಾ ನಾನೇ ಅವಳನ್ನ ನೋಡಿಕೊಳ್ಳುತ್ತಿದ್ದೆ. ಇನ್ನೇನು ನನ್ನ ರಜಾದಿನಗಳು ಮುಗಿಯುತ್ತಾ ಬಂದಿದ್ದವು, ನಾನು ಬೆಂಗಳೂರಿಗೆ ವಾಪಸಾಗಬೇಕಾದ ದಿನ ಹತ್ತಿರ ಬರುತ್ತಾ ಇತ್ತು. ನನಗೆ ಅವಳನ್ನು ಬಿಟ್ಟು ಬರಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದರೆ ಏನು ಮಾಡೋದು? ಕೆಲಸಕ್ಕಾಗಿ ಬರಲೇ ಬೇಕಾಯಿತು.
ಬೆಂಗಳೂರಿಗೆ ಬಂದ ಮೇಲೆ ಹಲವು ದಿನಗಳವರೆಗೆ ತುಂಬಾನೇ ಕನಸು ಬೀಳುವುದು, ನಾನು ಪಾಪುವನ್ನು ಎತ್ತಿ ಆಡಿಸಿದ ಹಾಗೆ, ಅವಳೊಂದಿಗೆ ನಾನು ಕುಳಿತಿರುವ ಹಾಗೆ, ಒಮ್ಮೊಮ್ಮೆಯಂತೂ ಅವಳು ಅಳುವುದನ್ನು ಕೇಳಿ ನಾನು ನಿದ್ದೆಯಿಂದ ಎದ್ದು ಕುಳಿತುಬಿಡುತ್ತಿದ್ದೆ. ನಾನು ಅವಳನ್ನು ತುಂಬಾನೇ ಹಚ್ಚಿಕೊಂಡಿದ್ದೆ.
ಅಂದಿನಿಂದ ನಾನು ಎಲ್ಲಿಯೇ ಹೋದರೂ, ಮಕ್ಕಳ ಬಟ್ಟೆ, ಆಟಿಕೆಗಳನ್ನು ನೋಡುವುದರಲ್ಲೇ ಸಮಯ ವ್ಯಯಮಾಡುತ್ತಿದ್ದೆ. ಅದಾದ ಮೇಲೆ ಮುಂದಿನ ಸಲ ಊರಿಗೆ ಹೋಗುವುದರಲ್ಲಿ ನಾನು ಸುಮಾರು ಏಳೆಂಟು ಜೋಡಿ ಡ್ರೆಸಗಳನ್ನು ಅವಳಿಗಾಗಿ ಖರಿದಿಸಿದ್ದೆ. ಅಷ್ಟೇ ಅಲ್ಲದೇ ಎಷ್ಟೊಂದು ಪುಟ್ಟ ಪುಟ್ಟ ಗೊಂಬೆಗಳನ್ನು ತೆಗೆದುಕೊಂಡಿದ್ದೆ. ಆಗ ನನಗೆ ಊರಿಗೆ ಹೋಗುವುದೆಂದರೆ ಒಂದು ಹಬ್ಬ, ಯಾವಾಗ ಊರಿಗೆ ಹೋಗುವೆನೋ? ಯಾವಾಗ ಪಾಪುನಾ ನೋಡುತ್ತೇನೋ? ಎತ್ತಿ ಆಡಿಸುತ್ತೇನೋ? ಅನ್ನೋ ಚಡಪಡಿಕೆ, ನಾನು ತೆಗೆದುಕೊಂಡ ಬಟ್ಟೆಗಳು ಬರುತ್ತವೋ ಇಲ್ಲವೋ ಎಂಬ ಭಯ ಬೇರೆ.
ಹಾಗೂ ಹೀಗೂ ನಾನು ಊರಿಗೆ ಹೋಗುವ ದಿನ ಬಂದೆ ಬಿಟ್ಟಿತು, ಈ ಸಲ ನಾನು ಊರಿಗೆ ಹೋಗಿ ನೋಡಿದರೆ, ಪಾಪು ಬೆಳೆದು ಸ್ವಲ್ಪ ದೊಡ್ಡವಳಾಗಿ ಬಿಟ್ಟಿದ್ದಳು. ಎರಡು ‌ತಿಂಗಳ ಹಿಂದೆ ನಾನು ನೋಡಿದ್ದ ಆ ಪುಟ್ಟನಾದ ಮುಖದ, ಆ ಪುಟ್ಟ ಕೈಗಳ ಹುಡುಗಿ ಈಗ ಸ್ವಲ್ಪ ಗುಂಡುಗುಂಡಗೆ ಚೆನ್ನಾಗಿ ಕಾಣುತ್ತಿದ್ದಳು..ನಾನು ಒಯ್ದ ಎಲ್ಲ ಬಟ್ಟೆಗಳು ಅವಳಿಗೆ ಚೆನ್ನಾಗಿ ಒಪ್ಪುತ್ತಿದ್ದವು, ಅದನ್ನು ನೋಡಿ ನನ್ನ ಮನಸ್ಸಿಗೆ ಸಮಾಧಾನವಾಯಿತು.ಮನೇಲಿ ಮಕ್ಕಳಿದ್ದರೆ ಮನೆ ತುಂಬಾ ಒಂದು ಆನಂದದ ವಾತಾವರಣ ತುಂಬಿಕೊಂಡಿರುತ್ತದೆ.
ಹೀಗೆ ಆಡುತ್ತಾ ಕುಳಿತಿದ್ದಾಗ ಒಂದು ದಿನ ನನ್ನ ಅಮ್ಮ ಮಾತಾಡುತ್ತಾ ಹೇಳಿದರು, ಪಾಪು ತುಂಬಾ ಚುರುಕಾಗಿದೆ, ದಷ್ಟಪುಷ್ಟವಾಗಿದೆ ಆದರೆ ಗಂಡಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದರು. ಅವರೇನೋ ಹಾಗೆ casually ಹೇಳಿದ್ದರು, ಮಾತು ಮಾತಿನಲ್ಲಿ ಅಂದಿದ್ದರಷ್ಟೆ, ಆದರೆ ನನಗೇಕೋ ಆ ಮಾತಿನಿಂದ ತುಂಬಾನೇ ಬೇಸರವಾಯಿತು.
ಯಾಕೆ ಗಂಡೆ ಆಗಬೇಕಿತ್ತು? ಹೆಣ್ಣಾದರೇನಾಯಿತು? ಯಾಕೆ ಈ ದೇಶದಲ್ಲಿ ಇನ್ನೂ ಎಲ್ಲರೂ ಈ ರೀತಿ ವಿಚಾರಮಾಡುತ್ತಾರೆ? ಎಂದು ನನಗನ್ನಿಸಹತ್ತಿತು. ಇನ್ನೂ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಒಂದು ಪಿಡುಗಾಗಿ ಇರುವುದು ಏಕೆ? ಹೆಣ್ಣು ಹುಟ್ಟಿದರೆ ಮಗುವಿನದಾಗಲಿ, ತಾಯಿಯದಾಗಲಿ ಏನು ತಪ್ಪು?
ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಏಷ್ಟೊಂದು ಸಾಧನೆ ಮಾಡಿಲ್ಲವೇ? ಎನ್. ಸುಬ್ಬಲಕ್ಸ್ಮಿ, ಪಿ.ಟಿ.ಉಷಾ, ಲತಾ ಮಂಗೇಶ್ಕರ್, ಸಾನಿಯಾ ಮಿರ್ಜಾ, ಐರ್ಶರ್ಯ್ ರೈ, ಕಲ್ಪನಾ ಚಾವ್ಲಾ, ಸೈನಾ ನೆಹ್ವಾಲ್, ಅಂಜು ಬಾಬಿ ಜಾರ್ಜ್, ಮೇರಿ ಕೋಮ್ ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಮಹಾನ ಸಾಧನೆ ಮಾಡಿರುವ ಹೆಣ್ಣೇ ಅಲ್ಲವೇ? ಹೀಗಿರುವಾಗ ಹೆಣ್ಣು ಹುಟ್ಟಿದರೆ ಏನು ತಪ್ಪು?
ಯಾಕೆ ನಮ್ಮ ಜನ ಹೆಣ್ಣನ್ನು ಗಂಡಿನ ಸಮನಾಗಿ ನೋಡುವುದಿಲ್ಲ? ಇಲ್ಲಿ ನಾನು ಹೇಳುತ್ತಿರುವುದು ಏನು ಹೊಸದಲ್ಲ ಅಂಬುದು ನನಗೂ ಗೊತ್ತು, ಇದರ ಬಗ್ಗೆ ದೇಶದಲ್ಲಿ ತುಂಬಾನೇ ಚರ್ಚೆಗಳು ಆಗಿವೆ, ಆದರೆ ನನಗನ್ನಿಸ್ಸಿದ್ದನ್ನು ಹೇಳುತ್ತಿದ್ದೇನೆ ಅಷ್ಟೇ.
ಇಲ್ಲಿ ಇನ್ನೊಂದು ವಿಷಯ ಹೇಳಲೆಬೇಕು, ನಮ್ಮ ಅಮ್ಮ ಆ ದಿನ ಮಾತಿಗೆ ಹಾಗೆಂದದ್ದು ಬಿಟ್ಟರೆ, ಅವರೇನು ಮನಸ್ಪೂರ್ವಕವಾಗಿ ಹೇಳಿದ್ದಲ್ಲಾ. ಅವರು ಮೊಮ್ಮಗಳನ್ನು ತುಂಬಾನೇ ಪ್ರೀತಿಸುತ್ತಾರೆ,ಅವಳನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಒಟ್ಟಿನಲ್ಲಿ ನಾನು ಹೇಳಬೇಕೆಂದಿದ್ದು ಇಷ್ಟೇ ಹೆಣ್ಣಾಗಲಿ, ಗಂಡಾಗಲಿ ಮಗುವೇನ್ನುವುದು ಮನೆಗೆ ಒಂದು ಆನಂದವಾಗಿ ಬರುತ್ತದೆ. ಜೀವನಕ್ಕೆ ಹೊಸ ಚ್ಯೆತನ್ಯವಾಗಿ, ಜವಾಬ್ದಾರಿಯಾಗಿ ಮನೆಗೆ ಸಮೃದ್ಧಿ ತರುತ್ತದೆ. ಮನುಷ್ಯನನ್ನು ಪರಿಪೂರ್ಣವಾಗಿಸುತ್ತದೆ.
ದೇಶದಲ್ಲಿ ಇನ್ನೂ ಮುಂದಾದರೂ ಹೆಣ್ಣೇಂಬ ಕೀಳರಿಮೆ ಕಡಿಮೆಯಾಗಲಿ ಎಂದು ಆಶಿಸುತ್ತೇನೆ.
 

‍ಲೇಖಕರು G

October 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: