ಸುಧಾ ಆಡುಕಳ
ಮನೆಗೆ ಯಾರಾದರೂ ಬರುವರೆಂದರೆ ಹಬ್ಬವೆಂಬಂತೆ ಸಂಭ್ರಮಿಸುವ ನಮಗೆ ಕೊರೊನಾ ಮಾತ್ರ ಬೇಡದ ಅತಿಥಿಯೇ ಆಗಿತ್ತು. ಇನ್ನೇನು ದ್ವಿತೀಯ ಪಿ. ಯು.ಸಿ. ಪರೀಕ್ಷೆ ಮುಗಿಯುತ್ತದೆ, ಮೌಲ್ಯಮಾಪನ ಕೆಲಸಕ್ಕೆಂದು ಬೆಂಗಳೂರಿಗೆ ಹೊರಡುವ ತಯಾರಿಯ ಯೋಚನೆಯಲ್ಲಿರುವಾಗಲೇ ಕೊರೊನಾ ಮಾರಿ ಊರಿಗೆಲ್ಲ ಹರಡುತ್ತ ಬಂದಿತ್ತು. ಮತ್ತೆ ತಿಂಗಳುಗಟ್ಟಲೆ ಲಾಕ್ ಡೌನ್, ದೀಪ, ಗಂಟೆ, ಜಾಗಟೆ, ಚಪ್ಪಾಳೆಗಳೆಲ್ಲ ನಡೆದು ಮನೆಯ ಗೋಡೆಗಳ ನಡುವೆ ಬಂಧಿಯಾದೆವು.
ಒಬ್ಬರನ್ನೊಬ್ಬರು ಭೇಟಿಯಾಗಲಾರದ ಆ ದಿನಗಳಲ್ಲಿ ಎಲ್ಲರ ನಡುವೆ ಸಂಪರ್ಕ ಸೇತುವೆಯಾಗಿ ಒದಗಿದ್ದು ಚರವಾಣಿ. ಯಾರ ಫೋನು ಬಂದರೂ ನನ್ನದು ಒಂದೇ ರಾಗವಾಗಿತ್ತು, “ಕೊರೊನಾ ಎಲ್ಲಿದೆಯೋ ಏನೊ? ಯಾರಿಗೂ ಬಂದದ್ದೇನು ಗೊತ್ತಾಗ್ತಿಲ್ಲ.” ಎಂದು. ಆಗೆಲ್ಲ ಕರೆ ಮಾಡಿದವರು ಹೇಳುತ್ತಿದ್ದರು, “ಹಾಗೇ ಹೇಳ್ತಿರು ನೋಡು. ನಿಮ್ಮ ಮನೆಗೇ ಬಂದುಬಿಡ್ತದೆ ಅಷ್ಟೆ.” ಅವರ ಹಾರೈಕೆ ಅಷ್ಟು ಬೇಗ ಫಲಿಸುವುದೆಂದು ನಾನಂದುಕೊಂಡಿರಲಿಲ್ಲ.
ಜಿಲ್ಲಾ ಕೇಂದ್ರದಲ್ಲಿ ನಡೆದ ಎಸ್. ಎಸ್. ಎಲ್. ಸಿ. ಮೌಲ್ಯಮಾಪನ ಮುಗಿಸಿ ಬರುವ ಕೊನೆಯ ದಿನ ಧೋ …. ಎಂದು ಸುರಿವ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಬಂದ ಪತಿರಾಯರು ಬೇಗನೆ ಊಟ ಮುಗಿಸಿ, ಮುಸುಕು ಹಾಕಿ ಮಲಗಿಬಿಟ್ಟರು. ಮರುದಿನ ಏಳುವಾಗ ಸುಡುಸುಡು ಜ್ವರ. ಮೊದಲೇ ಮುಂಜಾಗ್ರತೆಯಾಗಿ ತಂದಿಟ್ಟುಕೊಂಡ ಮಾತ್ರೆಯನ್ನು ತಿನ್ನಿಸಿ ಮಲಗಿಸಿದ್ದಾಯಿತು. ಒಂದೇ ದಿನದಲ್ಲಿ ಜ್ವರ ಮಾಯವಾಗಿತ್ತು.
ಜ್ವರವನ್ನು ಹಿಂಬಾಲಿಸಿ ಬಂದ ಕೆಮ್ಮು ಹಾಗೆಯೇ ಇತ್ತು. ಜೊತೆಯಲ್ಲಿ ಮೈಕೈ ನೋವು. ಎಲ್ಲವೂ ಪ್ರತಿವರ್ಷ ಈ ವೇಳೆಯಲ್ಲಿ ಬರುವ ಫ್ಲೂನ ಲಕ್ಷಣವೂ ಆದ್ದದರಿಂದ ಗಾಬರಿಯಿಲ್ಲದೇ ದಿನಕಳೆದಾಯಿತು. ಮೂರು ದಿನಗಳ ನಂತರ ರಾತ್ರಿ ಎದೆಯಲ್ಲಿ ನೋವು, ಉಸಿರಾಡಲು ತೊಂದರೆ ಪ್ರಾರಂಭವಾದಾಗ ಸಣ್ಣಗೆ ಹೆದರಿಕೆ ಶುರುವಾಯಿತು. ಟಿ. ವಿ. ಯ ತುಂಬೆಲ್ಲ ಕೊರೊನಾ ಮಾರಿ ತಾಂಡವವಾಡುತ್ತಿತ್ತು.
ನಿಜವಾಗಲೂ ಹೊರಗೇನಾಗುತ್ತಿದೆಯೆಂಬುದು ಯಾರಿಗೂ ಗೊತ್ತಿಲ್ಲ. ಯಾವ ರೋಗಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕೆಂದರೂ ಕೊರೊನಾ ಟೆಸ್ಟ್ ಆಗಿರಲೇಬೇಕು ಎಂದೆಲ್ಲಾ ಸುದ್ಧಿ ಹರಡಿತ್ತು. ನಾಳೆ ರಾತ್ರಿಯೂ ಉಸಿರು ಕಟ್ಟಿದರೆ…….. ತಕ್ಷಣ ವೆಂಟಿಲೇಟರ್ ಅಳವಡಿಸಬೇಕಾದ ಪ್ರಮೇಯ ಬಂದರೆ…..
ಯಾವ ಆಸ್ಪತ್ರೆಯವರೂ ಸೇರಿಸಿಕೊಳ್ಳಲು ಒಪ್ಪದಿದ್ದರೆ….. ಎಂಬೆಲ್ಲಾ ಒತ್ತಡಗಳು ಮರುದಿನ ಬೆಳಿಗ್ಗೆಯೇ ಕೋವಿಡ್ ಪರೀಕ್ಷಾ ಕೇಂದ್ರದ ಬಾಗಿಲು ತಟ್ಟುವಂತೆ ಮಾಡಿದವು. ರಾತ್ರಿಯ ಉಸಿರುಗಟ್ಟುವಿಕೆಗೆ ಹಬೆಯ ಚಿಕಿತ್ಸೆ, ಕೆಮ್ಮಿಗೆ ಬಗೆಬಗೆಯ ಕಷಾಯಗಳು ತಯಾರಾಗಿ ಎಲ್ಲವೂ ಇನ್ನೇನು ಹತೋಟಿಗೆ ಬಂತು ಎನ್ನುತ್ತಿರುವಾಗಲೇ ಆರೋಗ್ಯ ಇಲಾಖೆಯಿಂದ ಫೋನ್ ಕರೆಯೂ ಬಂದಿತ್ತು. ಕೊರೊನಾ ಪರೀಕ್ಷೆಯ ವರದಿ ರೋಗವನ್ನು ದೃಢಪಡಿಸಿತ್ತು.

ಪ್ರಾರಂಭದಿಂದಲೂ ಕೊರೊನಾದ ಬಗ್ಗೆ ಟಿ. ವಿ.ಗಿಂತಲೂ ಮುದ್ರಣ ಮಾಧ್ಯಮದ ಲೇಖನಗಳನ್ನೇ ಹೆಚ್ಚು ಅವಲಂಭಿಸಿದ್ದರಿಂದ ಅಂತ ಹೆದರಿಕೆಯೇನೂ ಆಗಲಿಲ್ಲ. ಆದರೂ ಎಲ್ಲೋ ಇದೆಯೆಂಬ ರೋಗವೊಂದು ಮನೆಯೊಳಗೇ ಬಂದು ನಿಂತಾಗ ಕ್ಷಣಕಾಲ ಗಲಿಬಿಲಿಯಾದದ್ದು ಸುಳ್ಳಲ್ಲ.
ಉದ್ಯೋಗದ ಕಾರಣದಿಂದ ಊರಿನಿಂದ ದೂರವಿರುವ ನಮಗೆ ಎಲ್ಲವನ್ನೂ ಮನೆಯ ನಾಲ್ಕೇ ಜನರು ಸುಧಾರಿಸಬೇಕಾದ ಅನಿವಾರ್ಯತೆಯಿತ್ತು. ಕೊರೊನಾ ರೋಗಿ ಎಲ್ಲರ ಸಂಪರ್ಕದಲ್ಲಿದ್ದುದರಿಂದ ಸಹವರ್ತಿಗಳ ಪರೀಕ್ಷೆಯಲ್ಲಿ ಪಾಸಿಟಿವ್ ಬರುವವರೆಲ್ಲರೂ ಕೋವಿಡ್ ಆಸ್ಪತ್ರೆಗೆ ಹೋಗಬೇಕಾದ್ದು ಅನಿವಾರ್ಯವಾಗಿತ್ತು. ಮನೆಯಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿ ಬೇಕಾದರೂ ಬರಬಹುದಿತ್ತು. ಹಾಗೇನಾದರೂ ಆದಲ್ಲಿ ಮನೆ ಸೀಲ್ ಡೌನ್ ಆಗುವುದರಿಂದ ಎಲ್ಲರೂ ಅವರವರನ್ನು ಸ್ವತಂತ್ರವಾಗಿ ಸಂಭಾಳಿಸಿಕೊಳ್ಳಬೇಕಿತ್ತು.
ಅಗತ್ಯಕ್ಕೆ ಬೇಕಾದ ಸರಳ ಅಡುಗೆಯ ವಿಧಾನಗಳನ್ನು ಎಲ್ಲರೂ ಹಂಚಿಕೊಂಡೆವಲ್ಲದೇ ಅದರ ತಯಾರಿಕೆಗೆ ಬೇಕಾದ ಸಾಮಾನುಗಳೆಲ್ಲ ಎಲ್ಲಿವೆಯೆಂದು ಎಲ್ಲರೂ ಖಾತ್ರಿಪಡಿಸಿಕೊಂಡೆವು. ಜೊತೆಯಲ್ಲಿ ರೋಗದ ಬಗೆಗೆ ಸಮಗ್ರ ಮಾಹಿತಿ ಯಾರಿಗೂ ತಿಳಿದಿಲ್ಲವಾದ್ದರಿಂದ ಎಲ್ಲರೂ ಯಾವುದೇ ವಿಷಮ ಸನ್ನಿವೇಶದಲ್ಲೂ ಧೃತಿಗೆಡಬಾರದೆಂದು ಮಾತನಾಡಿಕೊಂಡೆವು.
ಈಗ ಉತ್ಪ್ರೇಕ್ಷೆಯೆನಿಸುವ ಈ ಮಾತುಗಳು ರೋಗವನ್ನೆದುರಿಸಲು ಆಗ ಅವಶ್ಯಕವೇ ಆಗಿದ್ದವು. ಒಬ್ಬರೇ ಇರುವ ಸನ್ನೆವೇಶದಲ್ಲೂ ಹೆದರದೇ ನಿಭಾಯಿಸುತ್ತೇವೆಂದು ಮಕ್ಕಳಿಬ್ಬರೂ ಹೇಳಿದ ಮೇಲೆ ಮೂಡಿದ ನಿರಾಳತೆ ಭವಿಷ್ಯದ ಬಗೆಗೂ ಭರವಸೆ ತುಂಬಿತು.
ಅಷ್ಟರಲ್ಲಿ ಮತ್ತೆ ಕರೆಮಾಡಿದ ವೈದ್ಯಾಧಿಕಾರಿಗಳು ರೋಗಿಯ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ, ರೋಗಿಗಳ ಸಂಖ್ಯೆ ತೀರಾ ಹೆಚ್ಚಿರುವುದರಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಸಾಧ್ಯವೆ? ಎಂದು ಪ್ರಶ್ನಿಸಿದಾಗ ಮಹಡಿಯಲ್ಲಿ ಎಲ್ಲ ವ್ಯವಸ್ಥೆಗಳೂ ಇರುವುದರಿಂದ ಇನ್ನಷ್ಟು ನಿರಾಳವೆನಿಸಿತು. ಮಹಡಿಯಲ್ಲಿ ರೋಗಿಯನ್ನು ಪ್ರತ್ಯೇಕವಾಗಿಡುವ ಎಲ್ಲ ವ್ಯವಸ್ಥೆಗಳನ್ನು ಮಾಡಿ, ಮನೆಯನ್ನು ಸೀಲ್ ಡೌನ್ ಮಾಡಲು ಬರುವವರ ದಾರಿ ಕಾಯತೊಡಗಿದೆವು.
ಸುತ್ತಮುತ್ತಲಿನವರಿಗೆಲ್ಲ ಈಗಲೇ ಹೇಳುವುದೋ ಬೇಡವೊ? ಅಚಾನಕ್ಕಾಗಿ ಪೋಲಿಸ್ ವಾಹನ ಬಂದಿಳಿದಾಗ ಅವರ ಪ್ರತಿಕ್ರಿಯೆ ಹೇಗಿರಬಹುದು? ಟಿ. ವಿ. ಯಲ್ಲಿ ತೋರಿಸುವಂತೆ ನಮ್ಮನ್ನು ಕೀಳಾಗಿ ನೋಡುವರೋ ಏನೊ? ಏನೆಲ್ಲ ಯೋಚನೆಯಲ್ಲಿ ದಿನವೊಂದು ಉರುಳಿಹೋಗಿತ್ತು. ರಾತ್ರಿ ಮಲಗಿದರೆ ಯಾಕೋ ನಿದ್ದೆ ಬಾರದೇ ಬೇರೆ, ಬೇರೆ ಕೊಠಡಿಯಲ್ಲಿ ಮಲಗಿದವರನ್ನೆಲ್ಲ ಹೋಗಿ ನೋಡಿಬರುವುದೇ ಕೆಲಸವಾಗಿಹೋಯಿತು. ಯಾರಿಗೆ ಗೊತ್ತು? ನಿದ್ದೆಯಲ್ಲಿಯೇ ಉಸಿರುಗಟ್ಟಿದರೆ? ಎಲ್ಲರಿಗೂ ಸೋಂಕು ಹರಡಿದ್ದರೆ? ಹೀಗೆ ಏನೆಲ್ಲ ಯೋಚನೆಗಳು……

ಮರುದಿನ ಗುಂಪುಗೂಡಿ ಬಂದ ವೈದ್ಯಕೀಯ ತಂಡ ಮನೆಯನ್ನು ನಿರ್ಬಂಧಕ್ಕೊಳಪಡಿಸಿ, ಮನೆಯ ಗೇಟಿಗೆ ಎಚ್ಚರಿಕೆಯ ಫಲಕವನ್ನು ಅಳವಡಿಸಿ, ಅಕ್ಕಪಕ್ಕದ ಮನೆಯವರಿಗೂ ಹೊರಗೆಲ್ಲೂ ಓಡಾಡದಂತೆ ತಾಕೀತು ಮಾಡಿ, ಫೋಟೋ ತೆಗೆಸಿಕೊಂಡು ಹೋಯಿತು. ಓಣಿಯವರೆಲ್ಲ ನಿಬ್ಬೆರಗಾಗಿ ಹೊರಬಂದು ನಿಂತು ನೋಡಿ ಭಯಗೊಂಡು ಮನೆಯ ಬಾಗಿಲನ್ನು ಮುಚ್ಚಿಕೊಂಡರು. ರೋಗಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪ್ರತಿದಿನವೂ ದೂರವಾಣಿಲ್ಲೇ ನೀಡಲು ಹೇಳಿದರು.
ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರ ಪರೀಕ್ಷೆಯನ್ನೂ ಹದಿನಾಲ್ಕು ದಿನಗಳ ನಂತರವೇ ನಡೆಸುವುದಾಗಿ ತಿಳಿಸಿದರು. ಈಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ರೋಗಿಯಂತೆ ಕಾಣುತ್ತಿರುವುದರಿಂದ ಉಳಿದ ಮೂವರೂ ಆದಷ್ಟು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆವು.
ಊಟ, ತಿಂಡಿ, ನಿದ್ದೆ ಎಲ್ಲವೂ ಪ್ರತ್ಯೇಕವಾಗಿಯೇ ನಡೆಯತೊಡಗಿತು. ರಾತ್ರಿ ಆಗಾಗ ಒಬ್ಬರ ಕೋಣೆಯೊಳಗೊಬ್ಬರು ಕಾಳಜಿಗಾಗಿ ಇಣುಕುವುದು ನಡೆದೇ ಇತ್ತು. ರೋಗಿಯ ಉಸಿರಾಟದ ತೊಂದರೆಗಾಗಿ ಸ್ಟೀಮಿಂಗ್ ಮಶೀನ್, ಆಮ್ಲಜನಕದ ಪರೀಕ್ಷೆಗಾಗಿ ಆಕ್ಸಿಮೀಟರ್ ಮನೆಗೆ ಬಂತು.
ಮರುದಿನದಿಂದಲೇ ನೆರೆಕೆರೆಯವರ ಸಹಾಯ ಹಸ್ತ ಮನೆಯ ಗೇಟಿನವರೆಗೆ ಚಾಚತೊಡಗಿತು. ಹಾಲು, ತರಕಾರಿ, ಹಣ್ಣುಗಳು ಹೇಳದೆಯೂ ಬಾಗಿಲಿಗೆ ಬಂದು ಬೀಳತೊಡಗಿದವು. ಕೊರೊನಾದ ಸುದ್ದಿ ಸ್ನೇಹಿತರಿಗೆ, ಬಂಧು-ಬಾಂಧವರಿಗೆಲ್ಲ ಹರಡಿ ಗಾಬರಿಯ, ಸಾಂತ್ವನದ, ಭರವಸೆಯ, ಹಾರೈಕೆಯ ಕರೆಗಳು ಎಡೆಬಿಡದೇ ಬರಲಾರಂಭಿಸಿದವು. ಹೆಚ್ಚಿನವರೆಲ್ಲ ಪರೀಕ್ಷೆಯನ್ನು ಮಾಡಿಸಿಕೊಂಡು ಸಿಕ್ಕಿಹಾಕಿಕೊಂಡಿರಿ, ಪರೀಕ್ಷೆಯೇ ಮಾಡಿಸಬಾರದಿತ್ತು ಎಂಬ ಧಾಟಿಯಲ್ಲಿಯೇ ಮಾತನಾಡುತ್ತಿದ್ದರು.
ಆದರೆ ನಮಗೆ ಮಾತ್ರ ಸೋಂಕನ್ನು ಬೇರೆಯವರಿಗೆ ಹರಡದಿರುವ ಬಗ್ಗೆ ಹೆಮ್ಮೆಯಿತ್ತು. ಅಂತಹ ತೀವ್ರವಾದ ರೋಗ ಲಕ್ಷಣಗಳಿಲ್ಲದಿದ್ದರೂ, ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ಪ್ರತಿದಿನ ಕೆಲಸಕ್ಕೆ ಹೋಗುವ ಅನಿವಾರ್ಯತೆಯಲ್ಲಿ ಅದೆಷ್ಟೋ ಜನರಿಗೆ ಸೋಂಕು ವರ್ಗಾವಣೆಯಾಗುತ್ತಿತ್ತು. ಗೇಟಿನಾಚೆಗೆ ಇಣುಕುವುದಿರಲಿ, ಮನೆಯ ಬಾಗಿಲನ್ನೂ ತೆರೆಯಲು ಮಕ್ಕಳು ಬಿಡುತ್ತಿರಲಿಲ್ಲ. ಅಂತಹ ದಿನಗಳಲ್ಲಿಯೂ ಪೇಪರನ್ನು, ಪತ್ರಗಳನ್ನು ತಂದು ಕೊಡುತ್ತಿದ್ದವರ ಕರ್ತವ್ಯನಿಷ್ಠೆ ಗೌರವ ಮೂಡಿಸುತ್ತಿತ್ತು.
ಉರಿಬಿಸಿಲಿನಲ್ಲಿ ಮಾತ್ರೆಗಳನ್ನು ಹಿಡಿದುಕೊಂಡು ಆರೋಗ್ಯವಿಚಾರಣೆಗೆ ಬರುವ ಆಶಾ ಕಾರ್ಯಕರ್ತೆಗೆ ಕುಡಿಯಲು ಜ್ಯೂಸ್ ಕೂಡ ಕೊಡಲಾಗದ ಅಸಹಾಯಕತೆ ನಮ್ಮದಾಗಿತ್ತು. ಖೈದಿಗಳಂತೆ ನಮ್ಮ ಕೈಗೂ ಕ್ವಾರೈಂಟೈನ್ ಸೀಲ್ ಗಳನ್ನು ಹಾಕಲಾಗಿತ್ತು. ನಡುನಡುವೆ ನಮ್ಮಲ್ಲೇ ಒಬ್ಬರಿಗೆ ತಲೆನೋವು, ವಾಂತಿ, ತುಸು ಮೈಬಿಸಿ ಎಲ್ಲ ಬಂದಿದೆಯೆನಿಸಿ, ಕೊರೊನಾ ಖಂಡಿತ ಹರಡಿದೆಯೇನೋ ಎಂದುಕೊಂಡು ಹತ್ತಿರವಿದ್ದೂ ಮತ್ತಷ್ಟು ದೂರ ನಿಲ್ಲುತ್ತಿದ್ದೆವು.

ಹಾಗೂ ಹೀಗೂ ಹದಿನಾಲ್ಕು ದಿನಕಳೆದು ಮತ್ತೆ ಎಲ್ಲರ ಪರೀಕ್ಷೆಗೆ ಬರುವ ವೈದ್ಯಾಧಿಕಾರಿಗಳ ದಾರಿ ಕಾಯತೊಡಗಿದೆವು. ಅವರಿಗೂ ಮಾಡಿ ಮುಗಿಸಲಾರದ ಕೆಲಸಗಳು, ಕಳೆದುಕೊಳ್ಳಲಾರದ ಒತ್ತಡಗಳಿದ್ದ ದಿನಗಳವು. ಹದಿನಾಲ್ಕು ಹೋಗಿ ಹದಿನೇಳು ದಿನಗಳಿಗೆ ಪ್ರತ್ಯೇಕತಾವಾಸ ವಿಸ್ತರಣೆಗೊಂಡಿದೆ ಎಂದರು. ನಿಜಕ್ಕೂ ಹೊರಲೋಕವನ್ನೇ ಕಾಣದ ನಮ್ಮ ಸಹನೆ ಮೀರುತ್ತಲಿತ್ತು.
ನಮ್ಮಲ್ಲಿ ಇನ್ಯಾರಿಗಾದರೂ ಮತ್ತೆ ಪಾಸಿಟಿವ್ ಬಂದರೆ ಮತ್ತಷ್ಟೇ ದಿನಗಳ ಸೀಲ್ ಡೌನ್ ನಮಗೆ ಕಾದಿತ್ತು. ಮನೆಯ ಎಲ್ಲ ದಿನಸಿಗಳೂ ಖಾಲಿಯಾಗುವ ಹಂತಕ್ಕೆ ಬಂದಿದ್ದವು. ಎಲ್ಲಕ್ಕೂ ಬೇರೆಯವರನ್ನು ಅವಲಂಭಿಸುವುದು ಕಷ್ಟವೆನಿಸುತ್ತಿತ್ತು. ಒಂದು ರೀತಿಯ ಖಿನ್ನತೆಯನ್ನು ಎಲ್ಲರೂ ಅನುಭವಿಸುತ್ತಲೇ ಸಮಾಧಾನವನ್ನೂ ಹೇಳಿಕೊಳ್ಳುತ್ತಿದ್ದೆವು.
ಅಂತೂ ನಿರೀಕ್ಷಿಸಿದ ದಿನ ಬಂತು. ಗುರುತು ಚಹರೆ ಸಿಗದಂತೆ ವೇಷ ಧರಿಸಿದವರು ಬಂದು ರೋಗಿಯನ್ನು ಹೊರತುಪಡಿಸಿ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆಂದು ಪಡೆದು ಹೋದರು. ಮತ್ತೆ ವರದಿಗಾಗಿ ಮೂರು ದಿನಗಳ ಕಾಯುವಿಕೆ. ಎಲ್ಲರ ಪರೀಕ್ಷೆಯೂ ನೆಗೆಟಿವ್ ಎಂದು ಮೊಬೈಲ್ ಸಂದೇಶ ಬಂದಾಗ ಕುಣಿದು ಕುಪ್ಪಳಿಸುವಷ್ಟು ಖುಶಿ. ಗೇಟ್ ತೆಗೆದು ಹೊರಬಂದರೂ ಮತ್ತದೇ ಸಂಶದ ನೋಟ ನಮ್ಮನ್ನು ಹಿಂಬಾಲಿಸುತ್ತಿದ್ದುದು ಸುಳ್ಳಲ್ಲ.
ಪ್ರತ್ಯೇಕತೆಯ ನಿಯಮಗಳನ್ನು ಸರಿಯಾಗಿ ಪಾಲಿಸಿ ಮನೆಮಂದಿಯನ್ನೆಲ್ಲ ಸೋಂಕಿನಿಂದ ಕಾಪಾಡಿದ್ದಕ್ಕಾಗಿ ಜಿಲ್ಲಾಡಳಿತದಿಂದ ಇವರಿಗೆ ಸ್ವಾತಂತ್ರ್ಯೋತ್ಸವದಂದು ಸನ್ಮಾನವೂ ನಡೆಯಿತು. ಕೊರೊನಾದ ಹರಡುವಿಕೆ ಮತ್ತು ಮರುಕಳಿಸುವಿಕೆಯ ಸ್ವರೂಪದ ಬಗ್ಗೆ ನಮಗೇನೂ ತಿಳಿದಿಲ್ಲದಿರುವುದರಿಂದ ಮನೆಯಲ್ಲಿ ಸುರಕ್ಷತಾ ಕ್ರಮಗಳು ಇನ್ನೂ ಜಾರಿಯಲ್ಲಿವೆ. ರೋಗಲಕ್ಷಣಗಳಿಲ್ಲದಾಗ ಮಾತ್ರವೇ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
ಆಗಲೂ ಸಂಬಂಧಿಸಿದ ಎಲ್ಲ ಆರೋಗ್ಯ ಕಾರ್ಯಕರ್ತನ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಂಡಿರಬೇಕು. ತುರ್ತು ಸಮಯದಲ್ಲಿ ನೆರೆಹೊರೆಯವರನ್ನು ಕರೆಯಲೂ ಆಗದು, ಕರೆಯಲೂಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲವನ್ನೂ ನಾವೇ ನಿಭಾಯಿಸಬೇಕಾದ ಹೊಣೆಗಾರಿಕೆಯನ್ನು ನೆನಪಿಸಲೆಂದೇ ಈ ರೋಗ ಬಂದಿದೆಯೇನೊ? ರೋಗ ಬಂದಿದೆಯೆನ್ನಲು ಮುಜುಗರಪಡದೇ ಲಕ್ಷಣಗಳು ಕಂಡಕೂಡಲೇ ಪರೀಕ್ಷೆಗೊಳಗಾಗುವುದೇ ಸಧ್ಯ ನಾವು ಹೊರಬೇಕಾದ ದೊಡ್ಡ ಹೊಣೆಯಾಗಿದೆ.






0 Comments