ನಿಮ್ಗೆ ಮನುಷ್ಯತ್ವದ ರುಚಿ ಹತ್ತಿದೆ…ಜ್ವರ ಬಿಡೋಲ್ಲ…
ಗಿರೀಶ್
ಮೂರು ದಿನದಿಂದ ವಿಪರೀತ ಜ್ವರ. ಡಾಕ್ಟರ್ ಬಳಿ ಹೋಗಿದ್ದೆ. ಅವ್ರು ಕೇಳಿದ್ರು…
ಲಾಲ್ಬಾಗ್ ಕಡೆಗೆ ಹೋಗಿದ್ರಾ ? ಅಲ್ಲಿ ‘ಮನುಷ್ಯ ಜಾತಿ ತಾನೊಂದೇ ವಲಂ ನೋಡಿದ್ರಾ ?
ಡಾಕ್ಟರ್ ಕೇಳಿದ ಎರಡೂ ಪ್ರಶ್ನೆಗಳಿಗೆ ಹೌದು ಅಂತ ನಿಜ ಒಪ್ಪಿಕೊಂಡೆ.
ಡಾಕ್ಟರ್ ತಲೆ ಕೊಡವುತ್ತಾ, ಮೂರು ದಿನದಿಂದ ನಿಮ್ ಥರದ್ದೇ ಕೇಸ್ಗಳು. ಎಲ್ರಿಗೂ ಈ ಮನುಷ್ಯತ್ವದ ಜ್ವರ ಏರಿದೆ. ಇವತ್ತಿಂದ ಆ ನಾಟ್ಕ ರಾಜ್ಯ ಪ್ರವಾಸಕ್ಕೆ ಬೇರೆ ಹೊರಟಿದೆ. ಮನುಷ್ಯತ್ವದ ಜ್ವರ ಸಾಂಕ್ರಾಮಿಕವಾಗಿ ಹರಡತ್ತೆ. ಇದಕ್ಕೆಲ್ಲಾ ಟ್ರೀಟ್ಮೆಂಟ್ ಕೊಡಕ್ಕೆ ನಾನೇನು ಕುವೆಂಪು ಬಸವಣ್ಣ ಬುದ್ದ ಅಲ್ಲ. ಯಾವ್ದಾದ್ರೂ ದೇವಸ್ಥಾನಕ್ಕೋ ಮಠಕ್ಕೋ ಹೋಗಿ. ಎಲ್ಲಿಗೆ ಹೋಗ್ಬೇಕು ಅಂತ ಯಾರಾದ್ರೂ ಜ್ಯೋತಿಷಿ ಹತ್ರ ಕೇಳಿ. ಎಲ್ಲಾ ಸೇರಿ ಮನುಷ್ಯತ್ವವನ್ನ ಬೇರು ಸಮೇತ ಕಿತ್ತಾಕ್ತಾರೆ. ಜಾತಿಗುಳಿಗೆನೋ, ಮೌಡ್ಯದ ಮಾತ್ರೆನೋ ಕೊಡ್ತಾರೆ. ತಗೊಂಡು ಗುಣಮುಖರಾಗಿ ಮತ್ತೆ ಮೊದಲಿನಂತಾಗಿ.
ಡಾಕ್ಟರ್ ಒಂದೇ ಸಮನೆ ರೇಗಿ ವಾಪಾಸ್ ಕಳ್ಸಿದ್ರು. ಜ್ವರ ಇಳೀತಾನೇ ಇಲ್ಲ…







0 Comments