ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನುಜ ಮಾನಸ ಗೀತ

  ಮೌನೇಶ ಕನಸುಗಾರ

ಕಗ್ಗ ಸಂಕಲನ – ಮನುಜ ಮಾನಸ ಗೀತ

ನಾಲ್ಕು ಸಾಲಿನ ಪದ್ಯಕ್ಕೆ ಕಂದ ಪದ್ಯ ಎನ್ನುವರು.ಆದರೆ ಕಗ್ಗ ನಾಲ್ಕು ಸಾಲಿನಲ್ಲಿ ಕೊನೆಗೊಂಡರು ಅರ್ಥ ಮಾತ್ರ ಅನಂತದವರೆಗೂ ಭಿತ್ತರಿಸುವಂತದ್ದು. ಕಗ್ಗ ತನ್ನದೆ ಆದ ರೀತಿ ರುಜುವಾತುಗಳನ್ನು ಹೊಂದಿರುತ್ತದೆ. ಪ್ರತಿ ಸಾಲಿನ ಎರಡನೆ ಅಕ್ಷರ ಕಾಗುಣಿತದ ಸಾಮ್ಯತೆ ಪಡೆದಿರುತ್ತದೆ. ಮೊದಲೆರಡು ಸಾಲು ನಂತರದ ಎರಡು ಸಾಲುಗಳಿಗೆ ಉಪಮೇಯ – ಉಪಮಾನಗಳ ಕಟ್ಟಿ ಲೋಕ ತಿದ್ದುವ ಕೆಲಸ ಮಾಡುವುದು ಈ ಕಗ್ಗವೆ. ಯಾವ ಕಾಲಕ್ಕೂ ಓದಿದರೂ ಅರ್ಥ ಹೊಸತೆನುವ ವಾಸ್ತವಕ್ಕಂಟಿ ಸಾಗುವ ಅರ್ಥ ಗರ್ಭಿತ ಸಾಲುಗಳನು ಕಗ್ಗ ಹೊಂದಿದೆ. ಕನ್ನಡದಲ್ಲಿ ತುಂಬಾ ಜನ ಕಗ್ಗಗಳನು ಬರೆದಿದ್ದಾರೆ. ಮೊದಲು ನೆನೆಯುವುದೆ ನಾವು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ನಂತರದಲ್ಲಿ ಮರುಳು ಮುನಿಯನ ಕಗ್ಗ. ಅಂಥಹ ಮಹಾನ್ ಚೇತನ ನಮ್ಮ ಕಗ್ಗ ಸಂಕಲನದ ಲೇಖಕರ ಸೆಲೆ ಗುರುವಿಗರ್ಪಣೆಯಲಿ ಡಿವಿಜಿ ಅವರ ಕುರಿತಾಗಿ ಮಂದ ಮನುಜ ನಾಮಾಂಕಿತ ಬಸವರಾಜ ಎಂ ವಿಶ್ವಕರ್ಮ ಅವರು ತಮ್ಮ ಮನುಜ ಮಾನಸ ಗೀತದಲ್ಲಿ ಬರೆಯುತ್ತಾರೆ. –

ಗುಂಡನಾ ಅನುಭವಕೆ | ಗಂಡೆದೆಯು ಬೇಕದ—
ನುಂಡು ಅರಗಿಸಿಕೊಳ್ಳೊ ಪುಂಡೆಲ್ಲಿ ॥
ಹಂಡ ಮನವ್ಯಾಕುಲದ | ಕುಂಡಲಿಯ ಬರೆದೀತಂ |
ಮಂಡಲಕೆ ಮಣಿ ಮುಕುಟ_ ಮಂದ ಮನುಜ ॥

ಇಂಥಹ ನಿಯಮಗಳಿಗೆ ಬದ್ಧವಾಗಿ ಸಾಗಿ ಬರುವ ಸಾಲುಗಳು ಆಧ್ಯಾತ್ಮಕ ರೀತಿಯಲ್ಲೂ ವಾಸ್ತವಕ್ಕೆ ತಿಳಿ ಹೇಳಿವೆ

ಸರಿಸಮಯಕಾರೈಲು | ಬರುತಿರಲೇ ಎಚ್ಚರಿಕೆ
ಬರದಿ ಸಾಗಿತೇಂಬ ಕಾತರತೆ ||
ಬರೊ ಸಾವಿಗಿದುವಿಲ್ಲ | ಮರೆಯುವುದು ತರವಲ್ಲ |
ಅರಿದು ಎಚ್ಚರಗೊಳ್ಳೊ – ಮಂದ ಮನುಜ ||

ಮಂದ ಬೆಳಕು ಪರಿಪೂರ್ಣವಲ್ಲ ಹಾಗೆಯೆ ಮಂದ ಮನುಜ ಸಹ. ಇನ್ನೂ ತತ್ವದ ತುತ್ತುಗಳ ಅರಗಿಸಿಕೊಳ್ಳುತ್ತಾ ಮಂದ ಬುದ್ಧಿಯನು ಅನಂತ ಜ್ಞಾನದ ಜ್ಯೋತಿಯೆಡೆಗೆ ಕೊಂಡುಯ್ಯುವ ಕೆಲಸ ಮನುಜ ಮಾನಸ ಗೀತ ಮಾಡುತ್ತದೆ.

ಜೀವನದ ಪ್ರತಿ ಆಯಾಮಗಳನ್ನು ಅವಲೋಕಿಸಿ ಅಕ್ಷರ ರೂಪಕ್ಕಿಳಿಸಿ ಅನಾವರಣಗೊಳಿಸಿದ ಕುಶಲ ಕವಿ. ವೃತ್ತಿಯಲ್ಲಿ ವಿಶಾರದ ಶಾಲೆ ಹುಟ್ಟು ಹಾಕಿದ ಶಿಕ್ಷಕರು, ಗುರು ಯಾರು ಗುರುತನ ಎಂದರೇನು ಎಂದು ಸ್ಪಷ್ಟವಾಗಿ ಗಣನೆಗೆ ತೆಗೆದುಕೊಂಡು ತುಲನೆ ಮಾಡುವ ಇವರು ಗುರುತನದ ಬಗ್ಗೆ ಒಂದು ಕಗ್ಗ ರಚಿಸುತ್ತಾರೆ. –

ಸರೋವರದಾಂತರ್ಯದಲಿ | ನೊರೆ ತೊರೆಗಳಿಗೆ ಮೀರಿದಾ|
ಹಿರಿ ‘ತಿಮಿಂಗಿಲ’ ದ ತನವು ಗುರುತನವು ||
ತೀರದಲೋಡಾಡಿ | ಗುರು ತಾವೆಂದಿನಿಪ ನರರ್ |
ಕಿರು ಮೀನ-ಮರಿಗಪ್ಪೆ ! – ಮಂದ ಮನುಜ

ಅಜ್ಜನ ಆಧ್ಯಾತ್ಮಿಕ ಗರಡಿಯಲಿ ಬೆಳೆದ ಲೇಖಕರು ಲೋಕದಲ್ಲಿ ಸಹಿಸಲಾಗದ ಸ್ವಾರಸ್ಯಕರವಾದ ಸತ್ಯ – ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ತಿದ್ದಿ ತೀಡುವ ಕುಸುರಿ ಕೆಲಸ ಕುಶಲಕವಿ ಮಾಡಿದ್ದಾರೆ.

ಮರಣವಾಗಲ್ ತಾನ್ | ಹಿರಿಯ ಸ್ಮಶಾನವಿದೆ |
ಹೊರುವ ಜನರಿಹರಿಲ್ಲಿ ತಪಬೇಡ |
ಉರಿದು ಸುಡೊ ಕಾಷ್ಟದಕೆ | ಮರ ನೆಡುವ ಮಾತಿಲ್ಲ |
ಕರೆ ಬರುವುದೊಂದೆ ತಡ – ಮಂದ ಮನುಜ||

ಹೀಗೆ ಒಂದಕ್ಕಿಂತ ಒಂದು ಪೈಪೋಟಿಗೆ ಬೀಳುವ ಮಂದ ಮನುಜನ ಕಗ್ಗ ಏಕದಂತನಿಂದ ಶುರುವಿಟ್ಟುಕೊಂಡು ಕೊನೆಯಲ್ಲಿ ಇನ್ನೂ ಜ್ಞಾನದ ದಾಹ ನೀಗದ ಲೇಖಕ ತಾಯಿ ಶಾರದೆಗೆ ಅರ್ಪಿಸುತ್ತಾರೆ..!

‍ಲೇಖಕರು avadhi

16 August, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading