ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನುಕುಲ ಎಚ್ಚೆತ್ತುಕೊಳ್ಳಬೇಕಾದ ಸಮಯ

ನಾ ದಿವಾಕರ್

ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾತ್ಮಕ ಧೋರಣೆ ಮಾನವ ಇತಿಹಾಸದಲ್ಲಿ ಇತ್ತೀಚಿನ ವಿದ್ಯಮಾನವೇನಲ್ಲ. ಪ್ರಭುತ್ವದ ವಿರುದ್ಧ ಹೋರಾಟ ನಡೆಸಿರುವ ಅನೇಕ ಚಳುವಳಿಗಳು ಹಿಂಸಾತ್ಮಕ ಮಾರ್ಗ ಅನುಸರಿಸುವ ಮೂಲಕ ಲಕ್ಷಾಂತರ ಅಮಾಯಕ ಜೀವಿಗಳು ಬಲಿಯಾಗಿರುವುದು ಇತಿಹಾಸದ ಒಂದು ಭಾಗವೇ ಆಗಿ ಹೋಗಿದೆ. ಮಾನವ ಸಮಾಜ ಇಂತಹ ಅಮಾನವೀಯ ಪೈಶಾಚಿಕ ಘಟನೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡಿರುವುದೂ ಅಷ್ಟೇ ಸತ್ಯ. ಈ ಹಿಂಸಾತ್ಮಕ ಚಳುವಳಿಗಳಿಗೆ ರಾಜಕೀಯ,ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಮತ್ತು ಅಂತಾರಾಷ್ಟ್ರೀಯ ಕಾರಣಗಳನ್ನೂ ನೀಡಿ ಸಮಥರ್ಿಸಿಕೊಳ್ಳಲಾಗುತ್ತಿದೆ. ಸ್ವೀಕಾರಾರ್ಹವೋ ಅಲ್ಲವೋ ಇಂತಹ ಹಿಂಸಾತ್ಮಕ ಚಳುವಳಿಗಳು ಮಾನವ ಸಮಾಜದ ಒಪ್ಪಿಗೆಯನ್ನೂ ಪಡೆದಿರುವುದು ದುರಂತವೂ ಹೌದು, ವಿಡಂಬನೆಯೂ ಹೌದು. ತಮ್ಮ ಧ್ಯೇಯ ಸಾಧನೆಗಾಗಿ ಕೆಲವು ಸಂಘಟನೆಗಳು ಅನುಸರಿಸುವ ಹಿಂಸಾತ್ಮಕ ಮಾರ್ಗಗಳು ಏನು ಸಾಧಿಸಿವೆ ಎನ್ನುವುದು ಇತಿಹಾಸದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಮಾವೋವಾದ, ಖಲಿಸ್ತಾನ, ಇಸ್ಲಾಮಿಕ್ ಜಿಹಾದ್, ಹಿಂದುತ್ವವಾದ ಹೀಗೆ ಹಲವು ಆಯಾಮಗಳಲ್ಲಿ ಜಾಗತಿಕ ಇತಿಹಾಸವನ್ನು ಬದಲಿಸಲು ಮುಂದಾಗಿರುವ ಈ ಹಿಂಸೆ ಅಂತಿಮವಾಗಿ ಸಾಧಿಸಿರುವುದು ಏನು ಎಂಬ ಪ್ರಶ್ನೆ ಎದುರಾದಾಗ ಮನುಕುಲ ಮೌನಕ್ಕೆ ಶರಣಾಗಬೇಕಾಗುತ್ತದೆ.
ಪಾಕಿಸ್ತಾನದ ಪೇಷಾವರದಲ್ಲಿ ತಾಲಿಬಾನ್ ಉಗ್ರರು ನಡೆಸಿರುವ ಮಾರಣ ಹೋಮವನ್ನು ಹೇಗೆ ಬಣ್ಣಿಸಲು ಸಾಧ್ಯ ? ಯಾರನ್ನು ದೂಷಿಸಲು ಸಾಧ್ಯ ? ಇದು ಪೈಶಾಚಿಕವೋ, ರಾಕ್ಷಸೀ ಪ್ರವೃತ್ತಿಯೋ, ಅಮಾನವೀಯವೋ, ಮನುಕುಲ ವಿರೋಧಿಯೋ ? ಹೇಗೆ ಬಣ್ಣಿಸುವುದು. ಜಿಹಾದ್ ಅಥವಾ ಧರ್ಮ ಯುದ್ಧದ ಧ್ಯೇಯ ಇದೇ ಆದಲ್ಲಿ, ಪ್ರಪಂಚವನ್ನೇ ಅರಿಯದ ಹಸುಳೆಗಳ ಜೀವ ಹರಣವೇ ಆದಲ್ಲಿ ಧಿಕ್ಕಾರವಿರಲಿ. ಯಾರಿಗಾಗಿ ಈ ಯುದ್ಧ ? ಯಾವ ಧ್ಯೇಯ ಸಾಧನೆಗಾಗಿ ಈ ಹಿಂಸೆ ? ಪಾಕಿಸ್ತಾನದ ಸೇನೆಯ ಕಿರುಕುಳಕ್ಕೆ ಪ್ರತೀಕಾರದ ಹೆಜ್ಜೆಯಾಗಿ ಅಥವಾ ಪಾಕಿಸ್ತಾನದ ಮತ್ತು ಅಮೆರಿಕದ ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ತಾವು 141 ಅಮಾಯಕರ ಮಾರಣ ಹೋಮ ನಡೆಸಿದ್ದೇವೆ, ಅರಿಯದ ಕಂದಮ್ಮಗಳ ಹತ್ಯೆಗೈದಿದ್ದೇವೆ, ಒಬ್ಬ ಶಿಕ್ಷಕಿಯ ಸಜೀವ ದಹನ ಮಾಡಿದ್ದೇವೆ ಎಂದು ತಾಲಿಬಾನಿಗಳು ತಮ್ಮ ಪೈಶಾಚಿಕ ಕೃತ್ಯವನ್ನು ಸಮಥರ್ಿಸಿಕೊಳ್ಳುವುದೇ ಆದರೆ ಇದು ಅರ್ಥವಿಲ್ಲದ ಪ್ರಲಾಪ ಎಂದಷ್ಟೇ ಹೇಳಬಹುದು. ಜಿಹಾದ್ ಅಥವಾ ಧರ್ಮ ಯುದ್ಧ ಅಥವಾ ಯಾವುದೇ ಯುದ್ಧ ನಡೆಯುವುದೇ ಆದಲ್ಲಿ ಅದು ಸಮ ಬಲರ ನಡುವೆ ನಡೆಯಬೇಕೇ ಹೊರತು ಅಮಾಯಕರ ಜೀವ ಹರಣದ ಮೂಲಕ ನಡೆಯುವುದಲ್ಲ.

ತಾಲಿಬಾನ್ ಉಗ್ರರು ಯಾರ ವಿರುದ್ಧ ಸೆಣಸಾಡುತ್ತಿದ್ದಾರೆ, ಯಾರಿಗಾಗಿ ಧರ್ಮ ಯುದ್ಧ ಮಾಡುತ್ತಿದ್ದಾರೆ ? ಈ ಧರ್ಮ ಯುದ್ಧದ ಉದ್ಧೇಶ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವುದೇ ಆದಲ್ಲಿ ಅದಕ್ಕೆ ಅಮಾಯಕ ಮಕ್ಕಳು ಬಲಿಯಾಗುವುದು ಅನಿವಾರ್ಯವೇ ? ಎಷ್ಟು ಜೀವಗಳು ಬಲಿಯಾಗಿವೆ ಈ ಧರ್ಮ ಯುದ್ಧದಲ್ಲಿ. ಆಫ್ಘಾನಿಸ್ತಾನ, ಸಿರಿಯಾ, ಲೆಬನಾನ್, ಇರಾಕ್,ಇರಾನ್, ಭಾರತ, ಪಾಕಿಸ್ತಾನ ಇನ್ನೆಷ್ಟು ರಾಷ್ಟ್ರಗಳು ಬಲಿಯಾಗಬೇಕು ಈ ಪೈಶಾಚಿಕತೆಗೆ ? ಇದಕ್ಕೆ ಕೊನೆ ಇರುವುದೇ ಅಥವಾ ನಿರಂತರವಾಗಿ ಜೀವಬಲಿ ನಡೆಯುತ್ತಲೇ ಇರಬೇಕೇ ? ತಾಲಿಬಾನಿಗಳು ಅಮೆರಿಕದ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವುದೇ ಆದರೆ , ಪಾಕಿಸ್ತಾನದ ಮಿಲಿಟರಿಯ ವಿರುದ್ಧ ಸಮರ ಸಾರುವುದೇ ಆದರೆ, ಅದಕ್ಕೆ ಒಂದು ಮಾನವೀಯ ನೆಲೆ ಇರಬೇಕಲ್ಲವೇ ? ಯಾವ ಪ್ರವಾದಿ, ಯಾವ ಇಸ್ಲಾಂ ಧರ್ಮ, ಯಾವ ಧರ್ಮ ಗ್ರಂಥ ಇಂತಹ ಕೃತ್ಯವನ್ನು ಸಮಥರ್ಿಸಲು ಸಾಧ್ಯ ? ಹಾಗೊಮ್ಮೆ ಸಮರ್ಥನೆ ದೊರೆಯುವುದೇ ಆದರೆ ಅಂತಹ ಧರ್ಮಕ್ಕೆ, ಪ್ರವಾದಿಗಳಿಗೆ, ಗ್ರಂಥಗಳಿಗೆ ಧಿಕ್ಕಾರವಿರಲಿ. ಧರ್ಮದ ಚೌಕಟ್ಟಿನಲ್ಲೇ ಅಮಾಯಕ ಹಸುಳೆಗಳ ಮಾರಣ ಹೋಮ ನಡೆಯವುವುದೇ ಆದಲ್ಲಿ ಅಂತಹ ಧರ್ಮವನ್ನು ಇತಿಹಾಸ ಕಸದ ಬುಟ್ಟಿಗೆ ಎಸೆಯುವುದು ಒಳಿತು.
ಗುಂಡಿನೇಟಿಗೆ ಬಲಿಯಾಗುವ ಹಸುಳೆಗಳ ಆಕ್ರಂದನ ಧಮರ್ಿಷ್ಟರಿಗೆ ಕೇಳುವುದಿಲ್ಲವೇ ? ಯಾವ ಪಾಪ ಕರ್ಮಗಳಿಗಾಗಿ ಈ ಹಸುಳೆಗಳಿಗೆ ಇಂತಹ ಘೋರ ಶಿಕ್ಷೆ. ಒಂದು ಪೀಳಿಗೆಯನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುವ ಇಂತಹ ರಾಕ್ಷಸೀ ಕೃತ್ಯವನ್ನು ಯಾವ ಧರ್ಮ ಸಹಿಸಿಕೊಳ್ಳಲು ಸಾಧ್ಯ ? ಸಮಥರ್ಿಸಿಕೊಳ್ಳಲು ಸಾಧ್ಯ ? ಇದು ಕೇವಲ ಇಸ್ಲಾಮಿಕ್ ಜಿಹಾದಿಗಳಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಹಿಂಸೆಯ ಮೂಲಕವೇ ತಮ್ಮ ಧ್ಯೇಯವನ್ನು ಸಾಧಿಸಲು ಮುಂದಾಗಿ, ಅಮಾಯಕ ಜೀವಿಗಳನ್ನು ಬಲಿ ಕೊಡುವ ಎಲ್ಲ ಹೋರಾಟಗಾರರಿಗೂ ಸಂಬಂಧಿಸಿದ ಪ್ರಶ್ನೆ. ಪೇಷಾವರದ ಆಕ್ರಂದನ ಮುಗಿಲು ಮುಟ್ಟಿದ್ದರೆ ಅದು ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತನ ಹೃದಯವನ್ನೂ ಕಲಕಿರಬೇಕು, ಮನಸ್ಸನ್ನೂ ತಟ್ಟಿರಬೇಕು, ಆತ್ಮವನ್ನೂ ಬಡಿದೆಬ್ಬಿಸಿರಬೇಕು. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಮಾನವತೆಯನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಾಡಲೇಬೇಕು. ಮಾನವ ಇತಿಹಾಸ ಸಾಕಷ್ಟು ಸಾವುಗಳನ್ನು ಕಂಡಿದೆ. ಕಾರಣ ಏನೇ ಇರಲಿ, ಕಾರಣಕರ್ತರು ಯಾರೇ ಇರಲಿ, ಉದ್ದೇಶ ಎಷ್ಟೇ ಉನ್ನತವಾಗಿರಲಿ, ಎಷ್ಟೇ ಆದರ್ಶಪ್ರಾಯವಾಗಿರಲಿ, ಬಲಿಯಾದ ಜೀವಗಳು ಮರಳಿ ಜೀವ ಪಡೆಯುವುದಿಲ್ಲ. ಆದರೆ ಮನುಕುಲ ಬದುಕಬೇಕಲ್ಲವೇ ? ಮಾನವೀಯತೆ ಬದುಕಬೇಕಲ್ಲವೇ ?
ಧರ್ಮದ ಹೆಸರಿನಲ್ಲಿ ನಡೆಯುವ, ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಸಂಭವಿಸುವ ಇಂತಹ ಪೈಶಾಚಿಕತೆಯನ್ನು ವಿರೋಧಿಸದೆ ಹೋದಲ್ಲಿ ಜಗತ್ತಿನಲ್ಲಿ ಧರ್ಮ ಉಳಿಯಬಹುದು, ರಾರಾಜಿಸಬಹುದು ಆದರೆ ಅದು ಜೀವಂತ ಶವದಂತೆ ಇರಲು ಸಾಧ್ಯ. ಮನುಕುಲದ ಉಳಿವು ನಮ್ಮ ಧ್ಯೇಯವಾದಲ್ಲಿ ಮಾನವೀಯತೆಯನ್ನು ಸಂರಕ್ಷಿಸುವುದು ಅನಿವಾರ್ಯ. ಪೇಷಾವರ ಇಂತಹ ಒಂದು ಜಾಗೃತಿಯನ್ನು ಮೂಡಿಸಲೇ ಬೇಕು. ಇಲ್ಲವಾದಲ್ಲಿ ಮಾನವ ಪ್ರಜ್ಞೆ ಸತ್ತುಹೋಗಿದೆ ಎಂದೇ ಭಾವಿಸಬೇಕಾಗುತ್ತದೆ. ತಾಲಿಬಾನ್ ಉಗ್ರರು ಹತ್ಯೆ ಮಾಡಿರುವುದು ಅಮಾಯಕ ಜೀವಗಳನ್ನಲ್ಲ, ಮಾನವ ಪ್ರಜ್ಞೆಯನ್ನು. ಮನುಕುಲದ ಪ್ರಜ್ಞೆಯನ್ನು. ಈ ಪ್ರಜ್ಞೆಗೆ ಮರುಜೀವ ನೀಡುವ ಗುರುತರ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ.

‍ಲೇಖಕರು G

27 December, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading