ಮನಸ್ಸೇ ಭ್ರಷ್ಟವಾದರೆ..??

ಭ್ರಷ್ಟ ವ್ಯವಸ್ಥೆಯ ಹುಚ್ಚು ವ್ಯಸನ
ನಾ ದಿವಾಕರ

ಭಾರತದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಂದು ಅಪಭ್ರಂಶವೋ ಅಥವಾ ವಾಸ್ತವ ಸತ್ಯವೋ ಎಂಬ ಪ್ರಶ್ನೆಗೆ ನಾಗರಿಕ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ.

ಅಪಭ್ರಂಶವೇ ಆಗಿದ್ದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಆಳ್ವಿಕರನ್ನು ಪ್ರಶ್ನಿಸುವ ಹಕ್ಕನ್ನು ಉಳಿಸಿಕೊಂಡಿರಬೇಕಿತ್ತು. ತನ್ನ ದುಡಿಮೆಯ ಪ್ರತಿಫಲವನ್ನು ಆಗ್ರಹಿಸುವ ಹಕ್ಕು ಹೊಂದಿರಬೇಕಿತ್ತು. ತನ್ನ ಬೆವರಿನ ಹನಿಗಳಿಗೆ ಪ್ರತಿಯಾಗಿ ನೆಮ್ಮದಿಯ ಜೀವನ ನಡೆಸುವ ಹಕ್ಕು ಪಡೆಯಬೇಕಿತ್ತು.

ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಆಳುವ ವರ್ಗಗಳ ವಂಧಿಮಾಗಧರನ್ನು ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ತನ್ನ ಭವಿಷ್ಯದ ಮಾರ್ಗವನ್ನು ಕಂಡುಕೊಳ್ಳುತ್ತಿರುವ ಭಾರತದ ಪ್ರಜೆಗೆ ಹಗರಣ ಮುಕ್ತ ಸರ್ಕಾರಕ್ಕೂ ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕೂ ಇರುವ ವ್ಯತ್ಯಾಸವನ್ನು ತಿಳಿಯುವ ಕುತೂಹಲವೂ ಇಲ್ಲದಂತೆ ವಶೀಕರಣ ಮಾಡಲಾಗಿದೆ.

ಭ್ರಷ್ಟಾಚಾರ ಎಂದರೇನು ? ಈ ಪ್ರಶ್ನೆ ಕ್ಲೀಷೆಯಾಗಿ ಕಂಡರೂ ಇಂದು ಪ್ರತಿಯೊಬ್ಬ ನಾಗರಿಕನೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ರಾಜಕೀಯ ಭ್ರಷ್ಟಾಚಾರ ಆಡಳಿತಾರೂಢ ಪಕ್ಷಗಳ ಇಚ್ಚಾನುಸಾರದಂತೆ ಜನಸಾಮಾನ್ಯರ ಮುಂದೆ ಅನಾವರಣಗೊಳ್ಳುತ್ತದೆ. ಆದರೆ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಡಗಿರುವ ಸಾಂಸ್ಥಿಕ ಭ್ರಷ್ಟಾಚಾರ ಸದಾ ಕಾಲವೂ ಭೂಗತವಾಗಿಯೇ ಉಳಿಯುತ್ತದೆ. ಹಾಗಾಗಿಯೇ ಅಣ್ಣಾ ಹಜಾರೆ ಮುಂತಾದವರ ಭ್ರಷ್ಟಾಚಾರ ವಿರೋಧಿ ಸಂಗ್ರಾಮಗಳೂ ಹೇಳಹೆಸರಿಲ್ಲದಂತೆ ಮರೆಯಾಗುತ್ತವೆ.

ಭಾರತದ ಆಡಳಿತ ವ್ಯವಸ್ಥೆಯ ತಳಹದಿಯೇ ಭ್ರಷ್ಟ ಮನಸ್ಥಿತಿಯನ್ನು ಅವಲಂಬಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವತಂತ್ರ ಭಾರತದ 70 ವರ್ಷಗಳ ಆಳ್ವಿಕೆಯಲ್ಲಿ ಹಗರಣ ಮುಕ್ತ ಸರ್ಕಾರಗಳನ್ನು ಕಂಡಿರಬಹುದೇ ಹೊರತು, ತಾತ್ವಿಕವಾಗಿ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಕಂಡಿಲ್ಲ, ಕಾಣಲಾಗುವುದೂ ಇಲ್ಲ. ಹಾಗೊಮ್ಮೆ ಕಂಡಲ್ಲಿ ಅದು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ.

ಏಕೆಂದರೆ ಸಾಮಾನ್ಯ ಪರಿಭಾಷೆಯಲ್ಲಿ ಭ್ರಷ್ಟಾಚಾರ ಎಂದರೆ ಹಣಕಾಸು ವ್ಯವಹಾರಗಳಲ್ಲಿನ ಅಕ್ರಮಗಳು ಎಂದಷ್ಟೇ ಅರ್ಥೈಸಲಾಗುತ್ತದೆ. ಸರ್ಕಾರ ಜಾರಿಗೊಳಿಸುವ ಯೋಜನೆಗಳಲ್ಲಿ ಮಾಡಲಾಗುವ ಹಣಕಾಸು ವೆಚ್ಚದಲ್ಲಿ ನಡೆಯುವ ವ್ಯತ್ಯಯಗಳು ಮತ್ತು ಅವ್ಯವಹಾರಗಳನ್ನು ಭ್ರಷ್ಟಾಚಾರದ ಚೌಕಟ್ಟಿನಲ್ಲಿ ನೋಡಲು ಯತ್ನಿಸುತ್ತೇವೆ. ಈ ಹಿನ್ನೆಲೆಯಲ್ಲೇ ರಾಜಕೀಯ ನಾಯಕರ ಅಕ್ರಮ ಆಸ್ತಿ, ಹೆಚ್ಚಿನ ಆದಾಯ ಮತ್ತು ಬೃಹತ್ ಪ್ರಮಾಣದ ಅಕ್ರಮ ಆದಾಯ ಭ್ರಷ್ಟಾಚಾರದ ಬಲೆಯಲ್ಲಿ ಕಂಡುಬರುತ್ತದೆ. ಇದು ವ್ಯಕ್ತಿಗತ ಭ್ರಷ್ಟತೆಯ ಪ್ರತೀಕವಾಗುತ್ತದೆ

ಸಾಂಸ್ಥಿಕ ಭ್ರಷ್ಟತೆ ಇಲ್ಲಿ ಗೋಚರಿಸುವುದಿಲ್ಲ. ಸೈದ್ಧಾಂತಿಕ ಭ್ರಷ್ಟತೆ ಹಣಕಾಸು ಭ್ರಷ್ಟಾಚಾರದಂತೆ ಅನಾವರಣಗೊಳ್ಳುವುದಿಲ್ಲ. ಹಾಗಾಗಿ ಜನಸಾಮಾನ್ಯರ ನಿತ್ಯ ಪರಿಭಾಷೆಯಲ್ಲಿ ಇದು ಭ್ರಷ್ಟಾಚಾರ ಎನಿಸುವುದೂ ಇಲ್ಲ. ಇತ್ತೀಚಿನ ಡಿ ಕೆ ಶಿವಕುಮಾರ್ ಪ್ರಸಂಗವನ್ನೂ ಸೇರಿದಂತೆ ಸ್ವತಂತ್ರ ಭಾರತದಲ್ಲಿ ಸಾರ್ವಜನಿಕವಾಗಿ ಬಹಿರಂಗವಾಗಿರುವ ಎಲ್ಲ ಭ್ರಷ್ಟಾಚಾರ ಹಗರಣಗಳು, ಈ ಹಗರಣಗಳಲ್ಲಿ ಆರೋಪ ಎದುರಿಸುತ್ತಿರುವ ರಾಜಕೀಯ ನಾಯಕರು, ಯಾವುದೇ ಶಿಕ್ಷೆ ಎದುರಿಸದೆ ಆರೋಪಗಳ ಸುಳಿಯಲ್ಲೇ ಅಳಿದು ಹೋಗಿರುವ, ಉಳಿದುಹೋಗಿರುವ ನಾಯಕರು ಈ ಸಾಂಸ್ಥಿಕ ಭ್ರಷ್ಟಾಚಾರದ ಸಂಕೇತ.

ಒಬ್ಬ ಯಡಿಯೂರಪ್ಪ, ಒಬ್ಬ ಶಿವಕುಮಾರ್ ಅಥವಾ ಒಬ್ಬ ಗಾಲಿ ಜನಾರ್ಧನ ರೆಡ್ಡಿ ಜೈಲುಶಿಕ್ಷೆ ಅನುಭವಿಸುವುದನ್ನು ಭ್ರಷ್ಟಾಚಾರದ ವಿರುದ್ಧ ವಿಕ್ರಮ ಎಂದು ಹೇಳುವುದು ಆತ್ಮವಂಚನೆಯಾಗುತ್ತದೆ. ಈ ಹಗರಣಗಳ ಹಿಂದೆ ಅಡಗಿರುವ ಒಂದು ವ್ಯವಸ್ಥಿತ ಸಾಂಸ್ಥಿಕ ಸ್ವರೂಪವನ್ನು ಕಿಂಚಿತ್ತೂ ಅಲುಗಾಡಿಸದೆ ಇದ್ದರೆ ಬಹುಶಃ ಇವೆಲ್ಲವೂ ಅಪಭ್ರಂಶಗಳಾಗಿಬಿಡುತ್ತವೆ. ಕಾಲಕ್ರಮೇಣ ಕ್ಲೀಷೆ ಎನಿಸಿಬಿಡುತ್ತವೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಈ ಅಂಶವನ್ನು ಗಂಭೀರವಾಗಿ ಪರಿಗಣಿಸದೆ ಇರುವುದೇ ಭ್ರಷ್ಟ ವ್ಯವಸ್ಥೆಯ ಸುಭದ್ರ ತಳಹದಿಯ ಸಂಕೇತವಾಗಿ ಕಾಣುತ್ತದೆ.

ಆಡಳಿತಾರೂಢ ಸರ್ಕಾರದ ಖಜಾನೆಯಲ್ಲಿನ ಹಣ ದುರುಪಯೋಗವಾದರೆ ಅದನ್ನು ಭ್ರಷ್ಟಾಚಾರ ಎಂದು ಭಾವಿಸಲಾಗುತ್ತದೆ. ಅಣ್ಣಾ ಹಜಾರೆ ತಮ್ಮ ಎರಡನೆ ಸ್ವಾತಂತ್ರ್ಯ ಸಂಗ್ರಾಮ ಘೋಷಿಸಿದ್ದು ಇಂತಹ ಭ್ರಷ್ಟಾಚಾರದ ವಿರುದ್ಧ. ಆದರೆ ಈ ಖಜಾನೆಯನ್ನು ತುಂಬಿಸಲು ದಿನನಿತ್ಯ ಬೆವರು ಸುರಿಸಿ ದುಡಿಯುವ ಕೋಟ್ಯಂತರ ಶ್ರಮಜೀವಿಗಳ ಬದುಕನ್ನೇ ಕಸಿದುಕೊಳ್ಳುವ ಒಂದು ವ್ಯವಸ್ಥೆ ನಮ್ಮ ಮುಂದೆ ತಾಂಡವ ನೃತ್ಯ ಮಾಡುತ್ತಿರುವುದನ್ನು ಹಜಾರೆಯಂತಹ ಹೋರಾಟಗಾರರು ಗಮನಿಸುವುದೇ ಇಲ್ಲ. ಈ ಖಜಾನೆ ಭರ್ತಿಯಾಗಲು ಅನುಸರಿಸುವ ಮಾರ್ಗದಲ್ಲಿ ಬಂಡವಾಳಿಗರ ರಥಯಾತ್ರೆಯ ಪ್ರತಿಯೊಂದು ಹೆಜ್ಜೆಯೂ ಈ ದೇಶದ ನೈಸರ್ಗಿಕ ಸಂಪನ್ಮೂಲಗಳ ವ್ಯವಸ್ಥಿತ ಲೂಟಿ ನಡೆಯುತ್ತಿರುವುದನ್ನು ಗಮನಿಸುತ್ತಲೂ ಇಲ್ಲ. ಅಥವಾ ಗಮನಿಸಿದರೂ ‘ಸಿರಿವಂತಿಗೆ ಪೂರ್ವ ಜನ್ಮದ ಪುಣ್ಯದ ಫಲ ದಾರಿದ್ರ್ಯ ಪಾಪ ಕರ್ಮಗಳ ಫಲ’ಎಂಬ ವಿಕೃತ ತತ್ವದಡಿ ನಿರ್ಲಕ್ಷಿಸಲಾಗುತ್ತದೆ.

ಸರ್ಕಾರದ ಖಜಾನೆಯಲ್ಲಿರುವ ಕ್ರೋಢೀಕೃತ ಸಂಪತ್ತಿನ ಲೂಟಿ ಭ್ರಷ್ಟಾಚಾರವಾಗುವುದಾದರೆ, ನಿಸರ್ಗದ ಒಡಲಲ್ಲಿರುವ ನೈಸರ್ಗಿಕ ಸಂಪತ್ತಿನ ಲೂಟಿ ಏಕೆ ಭ್ರಷ್ಟ ಕೃತ್ಯ ಎನಿಸುವುದಿಲ್ಲ ? ಈ ಸಂಪತ್ತು ಮತ್ತು ಸಂಪನ್ಮೂಲಗಳು ಈ ದೇಶದ ಶ್ರಮಜೀವಿಗಳಿಗೆ, ಜನಸಾಮಾನ್ಯರಿಗೆ ಸೇರಿದೆಯಲ್ಲವೇ ? ಎರಡು ಸ್ವಂತ ಮನೆ ಹೊಂದಿರುವ ಸರ್ಕಾರಿ ಅಧಿಕಾರಿ ವಿಚಾರಣೆಗೆ ಅರ್ಹನಾಗುವುದಾದರೆ 35 ಅಂತಸ್ತುಗಳ ಒಡೆಯ ಮುಖೇಶ್ ಅಂಬಾನಿ ಏಕಾಗುವುದಿಲ್ಲ ?

ಅಂದರೆ, ಅಂಬಾನಿ, ಅದಾನಿ, ಸಿಂಘಾನಿಯ, ಟಾಟಾ, ಬಿರ್ಲಾ ಇವರೆಲ್ಲರೂ ದೇಶದ ಸಂಪತ್ತಿನ ವಾರಸುದಾರರೇ ಅಥವಾ ಈ ಸಂಪತ್ತನ್ನು ತಮ್ಮ ಸ್ವಂತ ಸುಖಕ್ಕಾಗಿ ಅನುಭವಿಸಲು ಧರೆಗಿಳಿದ ಅವತಾರಪುರುಷರೇ ?

ಒಂದು ಲಕ್ಷಕ್ಕೂ ಹೆಚ್ಚಿನ ವಸ್ತುವನ್ನು ಖರೀದಿಸಿದರೆ ಆದಾಯ ತೆರಿಗೆ ಇಲಾಖೆ ನೀಡುವ ಶಾಶ್ವತ ಖಾತೆ ಸಂಖ್ಯೆ (ಪಾನ್ ಕಾರ್ಡ್) ಕಡ್ಡಾಯವಾಗಿ ಬಳಸಬೇಕು ಎನ್ನುವ ಅಧಿಕಾರ ವ್ಯವಸ್ಥೆ 500 ಕೋಟಿ ರೂ ಖರ್ಚು ಮಾಡಿದ ವಿವಾಹವನ್ನೇಕೆ ಪ್ರಶ್ನಿಸುವುದಿಲ್ಲ ?

ಶೇ 60ಕ್ಕೂ ಹೆಚ್ಚು ಜನರ ನಿತ್ಯ ಜೀವನ ನಡೆಸುವುದೂ ದುರ್ಬರವಾಗಿರುವ ಭಾರತದಂತಹ ದೇಶದಲ್ಲಿ ದಿನಕ್ಕೆ ಮೂರು ಲಕ್ಷ ರೂ ಬಾಡಿಗೆ ವಿಧಿಸುವ ವಿವಾಹ ಛತ್ರಗಳಿರುವುದು ವಿಡಂಬನೆಯೋ ವಾಸ್ತವವೋ ?

ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿಯೇ ಇಲ್ಲದ ಸಮಾಜದಲ್ಲಿ ವೈದ್ಯಕೀಯ ಪದವಿ ಗಳಿಸಲು ಒಂದು ಕೋಟಿ ರೂ ಖರ್ಚು ಮಾಡುವ ಪರಿಸ್ಥಿತಿ ಇರುವುದು ಏನನ್ನು ಸೂಚಿಸುತ್ತದೆ ?

ಶಾಲಾ ಶಿಕ್ಷಣದ ಗುಣಮಟ್ಟವನ್ನು ಐಷಾರಾಮಿ ಸವಲತ್ತು ಸೌಲಭ್ಯಗಳ ನೆಲೆಯಲ್ಲಿ ನಿರ್ಧರಿಸುವ ಶೈಕ್ಷಣಿಕ ವ್ಯವಸ್ಥೆ ಏನನ್ನು ಸೂಚಿಸುತ್ತದೆ ?

ಔದ್ಯಮಿಕ ರಾಜಕಾರಣ ಮತ್ತು ರಾಜಕೀಯ ಎನ್ನುವ ಉದ್ದಿಮೆ ಈ ಎರಡು ವಿದ್ಯಮಾನಗಳ ಸಂಗಮವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.

ಭಾರತದ ದುರಂತ ಎಂದರೆ ನಾವು ಹಣಕಾಸು ಭ್ರಷ್ಟಾಚಾರವನ್ನು ವ್ಯಕ್ತಿಗತ ನೆಲೆಯಲ್ಲಿ ಪ್ರಶ್ನಿಸುತ್ತಲೇ ಬಂದಿದ್ದೇವೆ. ವಿರೋಧಿಸುತ್ತಲೇ ಇದ್ದೇವೆ. ಆದರೆ ಸಾಂಸ್ಥಿಕ ಭ್ರಷ್ಟಾಚಾರವನ್ನು ಗಮನಿಸುತ್ತಲೇ ಇಲ್ಲ. ಯಾವುದೇ ಒಂದು ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯ ಆ ವ್ಯವಸ್ಥೆಯ ಸಾಂಸ್ಥಿಕ ಸ್ವಚ್ಚತೆ ಮತ್ತು ಸ್ವಾಸ್ಥ್ಯವನ್ನು ಅವಲಂಬಿಸಿರುತ್ತದೆ. ಇಲ್ಲಿ ಕರ್ತವ್ಯ, ಹೊಣೆಗಾರಿಕೆ, ಜವಾಬ್ದಾರಿಗಿಂತಲೂ ಉತ್ತರದಾಯಿತ್ವ ಮುಖ್ಯವಾಗುತ್ತದೆ.

ಉತ್ತರದಾಯಿತ್ವದ ಪ್ರಜ್ಞೆ ಇಲ್ಲದ ಯಾವುದೇ ಸಮಾಜವೂ ಭ್ರಷ್ಟಾಚಾರದಿಂದ ಮುಕ್ತವಾಗಿರಲು ಸಾಧ್ಯವಾಗುವುದಿಲ್ಲ. ಇಂತಹ ಸಮಾಜದಲ್ಲಿ ಭ್ರಷ್ಟಾಚಾರ ಸಾಪೇಕ್ಷ ವಿದ್ಯಮಾನವಾಗಿಬಿಡುತ್ತದೆ. ಭಾರತ ಈ ಸಮಸ್ಯೆಯನ್ನು ಶತಮಾನಗಳಿಂದಲೂ ಎದುರಿಸುತ್ತಿದೆ ಇಂದು ಈ ಸಮಸ್ಯೆ ಉಲ್ಬಣಿಸಿದೆ. ಹಾಗಾಗಿಯೇ ಸ್ವಿಸ್ ಬ್ಯಾಂಕ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿನ ಅಕ್ರಮ ಆಸ್ತಿ ನಮಗೆ ಭ್ರಷ್ಟತೆಯ ಕೂಪಗಳಾಗಿ ಕಾಣುತ್ತವೆ. ನಮ್ಮ ಸುತ್ತಲೂ ಪಸರಿಸಿರುವ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಜಕೀಯ ಕೇಂದ್ರಗಳು ಔದಾರ್ಯದ ಕೇಂದ್ರಗಳಾಗಿ, ಜನೋಪಯೋಗಿ ಕೇಂದ್ರಗಳಾಗಿ ಕಾಣುತ್ತವೆ. ಈ ಸಾಂಸ್ಥಿಕ ಸ್ವರೂಪಗಳಲ್ಲಿ ಸಂಗ್ರಹವಾಗುವ ಸಾರ್ವಜನಿಕ ಹಣದ ವಿನಿಯೋಗ, ವಿನಿಮಯ, ವಿತರಣೆ ಮತ್ತು ಉಪಯೋಗ ಇದಾವುದೂ ಉತ್ತರದಾಯಿತ್ವದ ಚೌಕಟ್ಟಿಗೆ ಸಿಲುಕುವುದಿಲ್ಲ ಅಥವಾ ಸಾರ್ವಜನಿಕರ ಗಣನೆಗೂ ಬರುವುದಿಲ್ಲ.

ಸಾಂಸ್ಥಿಕ ಭ್ರಷ್ಟಾಚಾರವನ್ನು ಈ ನೆಲೆಯಲ್ಲಿ ಕಂಡುಕೊಳ್ಳಲು ಪ್ರಜ್ಞಾವಂತ ಸಮಾಜ ಸಿದ್ಧವಾಗಬೇಕಿದೆ.

ತಮ್ಮ ಶ್ರಮ, ಪರಿಶ್ರಮ, ಬೆವರು ನೆತ್ತರು ಸುರಿಸಿ ಉತ್ಪಾದಿಸುವ ಸಂಪತ್ತು ಅನ್ಯರ ಪಾಲಾಗುತ್ತಿರುವುದನ್ನು ದೈವದತ್ತ ವರ ಎಂದು ಪರಿಗಣಿಸುತ್ತಾ ಸಂಪತ್ತಿನ ಲೂಟಿಕೋರರ ಎದುರು ಹಲ್ಲು ಗಿಂಜಿ ನಿಲ್ಲುತ್ತಿರುವ ನಾಗರಿಕ ಸಮಾಜದಲ್ಲಿ ಈ ಸುಪ್ರಜ್ಞೆ ಮೂಡುವುದು ಅಗತ್ಯ. ಈ ಲೂಟಿಕೋರರು ಒದಗಿಸುವ ದಾಸೋಹ, ಅನ್ನಭಾಗ್ಯ, ಉಚಿತ ಸೌಲಭ್ಯಗಳ ಮೂಲ ವಾರಸುದಾರರು ಈ ದೇಶದ ಶ್ರಮಜೀವಿಗಳೇ ಹೊರತು ಬಂಡವಾಳ ಕ್ರೋಢೀಕರಿಸುವ ಧನದಾಹಿಗಳಲ್ಲ ಎಂಬ ವಾಸ್ತವವನ್ನು ಪ್ರಜ್ಞಾವಂತ ಸಮಾಜ ಗ್ರಹಿಸಬೇಕಿದೆ.

ನೂರಾರು ರೈತರು ಹಗಲಿರುಳು ಶ್ರಮಿಸಿ ತಮ್ಮ ನಿತ್ಯ ಜೀವನದ ಸಂಕಷ್ಟಗಳನ್ನೂ ಲೆಕ್ಕಿಸದೆ ದೇವಾಲಯಗಳಿಗೆ ಅರ್ಪಿಸುವ ಧಾನ್ಯದ ಕಣಜಗಳೇ ಉಚಿತ ದಾಸೋಹದಲ್ಲಿ ಭಕ್ತಾದಿಗಳ ಉದರ ಪೋಷಣೆಗೆ ನೆರವಾಗುತ್ತವೆ ಮತ್ತೊಂದು ಮಗ್ಗುಲಲ್ಲಿ ರೈತರ ಆತ್ಮಹತ್ಯೆಯೂ ಸಂಭವಿಸುತ್ತಿರುತ್ತದೆ. ಆದರೂ ನಮ್ಮ ಉಧೋ ಉಧೋ ಪರಾಕುಗಳು ನಿಲ್ಲುವುದೇ ಇಲ್ಲ.

‍ಲೇಖಕರು avadhi

August 11, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ನಾಲ್ಕು ಜನರಿರುವ ಪುಟ್ಟ ಸಂಸಾರದಲ್ಲಿಯೂ ಸಹ ಭ್ರಷ್ಟಾಚಾರವೆಂಬುದು ಸದ್ದು ಮಾಡುತ್ತಿರುವಾಗ ಕೋಟಿಗಟ್ಟಲೆ ಜನರಿರುವ ದೇಶಗಳಲ್ಲಿ ಆ ಭೂತ ತಾಂಡವವಾಡುವುದರಲ್ಲಿ ಅಚ್ಚರಿಯೇನೂ ಅಲ್ಲ.
    ಸ್ವಾರ್ಥವೆನ್ನುವುದನ್ನು ತಡೆಯುವ ಶಕ್ತಿಯಲ್ಲದ ಯಾವೊಬ್ಬನಿಂದಲೂ ತನ್ನ ಮನಸ್ಸಿನಿಂದ ಭ್ರಷ್ಟಾಚಾರವನ್ನು ತೊಡೆದು ಹಾಕಲು ಸಾದ್ಯವಾಗಲಾರದು. ಜೈಲಿಗೆ ಹೋಗಬೇಕಾದ ಒಬ್ಬ ನಾಯಕನಿಗೆ ಜೈಕಾರ ಕೂಗುವ ಸಾಮಾನ್ಯ ಪ್ರಜೆಗಳು ಭ್ರಷ್ಟಾಚಾರದ ಮೂಲಬೇರುಗಳೆಂಬುದನ್ನು ಎಲ್ಲರೂ ಅರಿಯಬೇಕಾದ ಮುಖ್ಯವಿಚಾರವೆಂಬುದನ್ನು ನಾವೆಲ್ಲರೂ ಇಂದು ಮನವರಿಕೆಮಾಡಿಕೊಳ್ಳಬೇಕಾಗಿದೆ. ಅಂತಹ ನಾಯಕರ ವಶೀಕರಣದಿಂದ ಬಿಡುಗಡೆಗೊಳ್ಳುವ ಬಗ್ಗೆ ಮುನ್ನಡೆಯ ಬೇಕಿದೆ.
    ಲೇಖನ ಚಿಂತನೆ ಮಾಡುವಂತಿದೆ, ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: