ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸ್ಸನ್ನು ಗೆದ್ದ ಸೇತೂರಾಮ್ ಅವರ ನಾಟಕ ’ಗತಿ’ – ವೈ ಕೆ ಸಂಧ್ಯಾಶರ್ಮ

ಬೌದ್ಧಿಕ ಚಿಂತನೆಗಳ `ಗತಿ’

ವೈ ಕೆ ಸಂಧ್ಯಾಶರ್ಮ

ಇತ್ತೀಚೆಗೆ `ರಂಗಶಂಕರ’ ದಲ್ಲಿ `ಅನನ್ಯ’ ಪ್ರಸ್ತುತಿಪಡಿಸಿದ ಎನ್.ಎಸ್. ಸೇತುರಾಮ್ ರಚಿಸಿ, ನಿರ್ದೇಶಿಸಿದ ನಾಟಕ `ಗತಿ’ಯೊಳಗಿನ ಬೌದ್ಧಿಕ ಚಿಂತನೆಗಳು, ಜನಸಾಮಾನ್ಯನ ಅಂತರಂಗವನ್ನು ಶೋಧಿಸುವ ಪರಿಣಾಮಕಾರಿ ಮಾತುಗಳು ಅನನ್ಯ ಅನುಭೂತಿಯನ್ನು ನೀಡಿದವು. ಇಲ್ಲಿ ನೆಪಕ್ಕೊಂದು ಕಥೆ ಅಷ್ಟೇ. ಈ ಸಮಾಜದ ಪ್ರತಿಯೊಂದು ಜೀವಿಗಳ `ಗತಿ’ಯೂ ಇದಕ್ಕಿಂಥ ಭಿನ್ನವಾಗಿಲ್ಲ.

ಇದರಲ್ಲಿ ಅಜ್ಜ, ಮೊಮ್ಮಗಳು ಇಬ್ಬರೇ ಕಾಣಿಸಿಕೊಂಡು ವಿಧ ವಿಧವಾದ ಅನೇಕ ಕಥೆಗಳನ್ನು ಹೇಳುತ್ತ ಹೋಗುತ್ತಾರೆ,ಹಲವಾರು ಪ್ರಕರಣಗಳ ಕುರಿತು ಚಚರ್ಿಸುತ್ತಾರೆ. ನಿಜ ಬದುಕಿನ ವಾಸ್ತವ,ಅವಾಸ್ತವ, ಅಸಾಂಗತ್ಯ ,ಅನೂಹ್ಯ ಸಂಗತಿಗಳ ಬಗ್ಗೆ ವಿಶ್ಲೇಷಿಸುತ್ತ, ನೋಡುಗನು ಅವುಗಳಿಗೆ ಸ್ಪಂದಿಸಿ ತಲೆದೂಗುವಂತೆ ಒಪ್ಪಿಸುತ್ತಾರೆ. ಇಲ್ಲಿ ಅವರಿಬ್ಬರು ಪಾತ್ರಗಳಾಗುವುದಿಲ್ಲ. ಅವರು ನಮ್ಮ ನಡುವಿನ, ನಮ್ಮೊಳಗಿನ ಅಸಂಖ್ಯಾತ ವ್ಯಕ್ತಿತ್ವ, ಸತ್ಯಗಳನ್ನು ಅನಾವರಣಗೊಳಿಸುತ್ತಾರೆ.
ಹೆಜ್ಜೆ ಹೆಜ್ಜೆಗೂ ಕುತೂಹಲ ಉಳಿಸಿಕೊಳ್ಳುವ ನಾಟಕ ಒಂದು ಗಳಿಗೆಯೂ ಬೇಸರ ಮೂಡಿಸದು. ಎರಡೇ ಪಾತ್ರಗಳಾದರೂ ಎಲ್ಲೂ ಯಾಂತ್ರಿಕತೆ ಇಣುಕದು. ಎಂಭತ್ತರ ಮುದುಕ ಒಂಟಿ ಜೀವ, ಮಕ್ಕಳಿಂದ ತ್ಯಕ್ತನಾದವನು, ಅಥವಾ ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಪುರುಷಾಹಂಕಾರದ ಸೋಗಿನವನು. ಆಗಾಗ ಅವನನ್ನು ನೋಡಲು ಇಪ್ಪತ್ತೆಂಟು ವರ್ಷ ದಾಟಿದ ನಿರುದ್ಯೋಗಿ, ಅವಿವಾಹಿತ ಮೊಮ್ಮಗಳು ಬರುವ ವಾಡಿಕೆ. ಇವರೀರ್ವರ ನಡುವೆ ನಡೆಯುವ ಸಂಭಾಷಣೆಗಳು ಸಮಾಜದ ಎಲ್ಲ ಮುಖಗಳನ್ನು ತೆರೆದಿಡುತ್ತ ಸಾರ್ವಜನಿಕ ಸತ್ಯದ ಒಳ ಪದರಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತವೆ. ಇಲ್ಲಿ ಮುದುಕ ಒಂದು ಪಾತ್ರವಲ್ಲ. ಅವನಂಥ ನೂರಾರು ಮುದುಕರ ಪ್ರತಿನಿಧಿಯಾಗಿ ಅವರ ನೋವುಗಳಿಗೆ ದನಿಯಾಗುತ್ತಾನೆ. ಅನೇಕ ಪಾತ್ರಗಳನ್ನು ತನ್ನಲ್ಲಿ ಆವಾಹಿಸಿಕೊಂಡು ಸ್ವಗತವೆಂಬಂತೆ ಕಟು ಸತ್ಯಗಳನ್ನು ಕಾರಿಕೊಳ್ಳುತ್ತಾನೆ. ಅವನ ಬಡತನದ, ಹೆದರಿಕೆಯ, ಅಸಹಾಯಕ ಪರಿಸ್ಥಿತಿಯ ಬಾಲ್ಯದ ಕಥೆ, ಬೆಳೆದ ಪರಿಸರದ ವ್ಯಂಗ್ಯ ಚಿತ್ರವನ್ನು ಬಣ್ಣಿಸುತ್ತಾ ಪರಿಸರವನ್ನು ನಿರ್ಮಿಸುತ್ತಾನೆ. ಸ್ವತಂತ್ರ ಅಸ್ತಿತ್ವವಿಲ್ಲದ ,ನೆರಳಾಗಿಯೇ ಬದುಕಿದ ಅವನ ಅಮ್ಮ, ಅಕ್ಕಂದಿರ ಮುಖವಿಲ್ಲದ ದೈನ್ಯ ಬದುಕಿನ ಸಂಗತಿಗಳನ್ನು ಮೊಮ್ಮಗಳಿಗೆ ತಿಳಿಸುವಲ್ಲಿ ವಿಷಾದ ಮಡುಗಟ್ಟುತ್ತದೆ.

ಈ ಮಧ್ಯೆ ಅವನು ಲೋಕದ ಎಲ್ಲ ಆಗು ಹೋಗುಗಳನ್ನೂ ಕುರಿತು ವಿಶ್ಲೇಷಿಸುತ್ತಾನೆ. ಅನೇಕ ನವಿರಾದ, ಸೂಕ್ಷ್ಮ ವಿಚಾರಗಳ ಬಗ್ಗೆ ತಾಕರ್ಿಕವಾಗಿ ಚಚರ್ಿಸುತ್ತಾನೆ. ಜಾಗತೀಕರಣ ಪ್ರಜ್ಞೆಯೂ ಅವನನ್ನು ಕಾಡದೇ ಬಿಡುವುದಿಲ್ಲ. ಉದಾಃ ತಾಯಿಯ ಎದೆಹಾಲನ್ನು ಕರೆದು ಪುಡಿ ತಯಾರಿಸಿ ಮಾರಾಟ ಮಾಡುವ ಸರಕು ಸಂಸ್ಕೃತಿಯ ಎಲ್ಲ ವಿಷಯಗಳನ್ನೂ ಜಾಲಾಡುತ್ತಾನೆ. ಜಾಳಾಗುತ್ತಿರುವ ಸಂಬಂಧಗಳು, ನಶಿಸಿಹೋಗುತ್ತಿರುವ ಭಾವನೆಗಳು, ಕಣ್ಮರೆಯಾಗುತ್ತಿರುವ ಮಾನವೀಯತೆಗಳ ಬಗ್ಗೆ ಕಕ್ಕುಲಾತಿ ತೋರುತ್ತಾ ಸಮಾಜದ ಹೃದಯಕ್ಕೆ ಕೈ ಹಾಕುತ್ತಾನೆ. ತೊಳಲಾಟದ ಈ ಜೀವನದಲ್ಲಿ ಮನುಷ್ಯ ವರ್ತಮಾನವ ಅಲಕ್ಷಿಸಿ, ಅಗೋಚರ ಭವಿಷ್ಯಕ್ಕಾಗಿ ಸಂಪತ್ತನ್ನು ಕೂಡಿಹಾಕುವ ದುರಾಸೆಯ ಪ್ರವೃತ್ತಿ ಬಗ್ಗೆ ಅಸಹ್ಯದಿಂದ ವಿಷಾದಿಸುತ್ತಾನೆ.ಕಡೆಯಲ್ಲಿ ಹೆಂಗರುಳಿನ ತನ್ನ ಅತ್ಯಂತ ಪ್ರೀತಿಪಾತ್ರ ತಾಯಿಯ ಮರಣ ಸಂದರ್ಭದಲ್ಲಿ ತಾನು ಕಟುಕನಾಗಿ ನಡೆದುಕೊಂಡಿದ್ದರ ಬಗ್ಗೆ ಪಶ್ಚಾತ್ತಾಪಪಡುತ್ತಾನೆ.
ಅವನ ಮುಂದಿನ ಜನಾಂಗದ ಸಮಸ್ಯೆಗಳನ್ನು ಮೊಮ್ಮಗಳು ಉಸುರುತ್ತ ಹೋಗುತ್ತಾಳೆ. ಬಾಲ್ಯದಲ್ಲೇ ತಾನು ತಾಯ್ತಂದೆಯರ ಸಂಪಾದನೆಯೇ ಗುರಿಯಾದ ಗಡಿಬಿಡಿಯ ಜೀವನದ ಇಕ್ಕಟ್ಟಿನಲ್ಲಿ, ಅವರ ಅಲಕ್ಷ್ಯದಿಂದ ಲೈಂಗಿಕ ಶೋಷಣೆಗೀಡಾಗಿ ಇದುವರೆಗೂ ನರಕ ಅನುಭವಿಸುತ್ತಿರುವ ನೋವನ್ನು ತೋಡಿಕೊಳ್ಳುತ್ತಾಳೆ. ಇನ್ನೂ ಮದುವೆಯಿರದ, ಸರಿಯಾದ ಕೆಲಸವಿರದ ಹಂಗಿನ ಬಾಳಲ್ಲಿ ಕರಗಿಹೋದ ಕನಸುಗಳ ಬಗ್ಗೆ ಮಮ್ಮಲ ಮರುಗುತ್ತಾಳೆ. ಅವಳ ಧಾವಂತ ಅವಳೊಬ್ಬಳದಾಗಿರದೆ, ಅವಳೆತ್ತುವ ಸಮಸ್ಯೆಗಳ ಸರಮಾಲೆ ಇಂದಿನ ತಂತ್ರಜ್ಞಾನ ಕಾಲಘಟ್ಟದ, ಆ ಜಾಯಮಾನದ ಅನೇಕ ಹೆಣ್ಣುಮಕ್ಕಳ ಕಥೆಯನ್ನು ಬಿಚ್ಚಿಡುತ್ತವೆ. ತಾತ- ಮೊಮ್ಮಗಳ ಮಾತಿನ ಹರವಿನಲ್ಲಿ ಪ್ರಪಂಚವೇ ಹಾದುಹೋಗುತ್ತದೆ. ನಾವು ಕಂಡು ಕೇಳಿದ ಎಲ್ಲ ಸತ್ಯ,ವಿಚಿತ್ರ ಸಂಗತಿಗಳೂ ಬಯಲಾಗುತ್ತಾ, ಕಡೆಗೆ ನಾಟಕ ನೋಡುತ್ತ ಕುಳಿತ ಪ್ರೇಕ್ಷಕನೂ ಅವರಲ್ಲಿ ಒಂದಾಗಿ ಹೋಗುವುದು ವೈಚಿತ್ರ್ಯ.
ಪ್ರತಿದಿನ ಕೈ ಗಡಿಯಾರ ಕೂಗಿ ಎಚ್ಚರಿಸಿದಾಗಲೇ ಆ ಮುದುಕ ಮೇಲೆದ್ದು ತನ್ನ ಊಟ-ಶೌಚಾದಿಗಳನ್ನು ಪೂರೈಸುವ ಅಭ್ಯಾಸವುಳ್ಳವನು. ಎಲ್ಲವೂ ಕರೆಗಂಟೆ ಆಧಾರಿತ ಚಟುವಟಿಕೆ. ಆಗಾಗ ಹೊರಗೆ ತನ್ನನ್ನು ಯಾರೋ ಕರೆಯುತ್ತಿರುವ ಬಗ್ಗೆ ಸೂಚನೆ ಕೊಡುವ ಮುದುಕ, ಕಡೆಯಲ್ಲಿ ಕೂತ ಕುರ್ಚಿಯಲ್ಲೇ ಕಣ್ಮಚ್ಚಿ, ಕೈ ಗಡಿಯಾರ ಹೊಡೆದುಕೊಳ್ಳುತ್ತ ಎಚ್ಚರಿಸಿದರೂ, ಅಲುಗಾಡದೆ ಅದಾಗಲೇ ಕಾಲನ ಕರೆಗಂಟೆಗೆ ಓಗೊಟ್ಟು ಸ್ತಬ್ಧನಾಗಿರುತ್ತಾನೆ!…..ನಾಟಕ ಸಾಂಕೇತಿಕ ಮುಕ್ತಾಯದಿಂದ ಅತ್ಯಂತ ಪರಿಣಾಮಕಾರಿಯಾಗಿತ್ತು.

` ಮನುಷ್ಯ, ಪ್ರಜ್ಞೆಯಿಲ್ಲದೆ ಕೇವಲ ಉಸಿರಾಟವಾಡುತ್ತ ಇದ್ದರೆ ಅವನನ್ನು ಸತ್ತಿಲ್ಲ ಎನ್ನುತ್ತಾರೆ, ಬದುಕಿದ್ದಾನೆ ಎನ್ನುವುದಿಲ್ಲ.’ ,` ಅವನ ಮನಸ್ಸು ಕೆಲಸ ಮಾಡುತ್ತ ಜಾಗೃತ ಪ್ರಜ್ಞೆಯಿಂದಾವೃತವಾದಾಗಲೇ ಕಷ್ಟ’ ಎನ್ನುವ ಹಾಗೂ ಸಾವು- ಬದುಕಿನ ಬಗ್ಗೆ ಅನೇಕ ಮಾರ್ಮಿಕ,ವಿಶ್ಲೇಷಣಾತ್ಮಕ, ಅರ್ಥಪೂರ್ಣ ಹೇಳಿಕೆಗಳಿಂದ ನಾಟಕ ಮನೋಜ್ಞ ಎನಿಸುವುದು. ಮುಂದಿನ ಸುಖದ ಕನಸಿಗೆ ಏಣಿ ಹಾಕುತ್ತಲೇ ಇಡೀ ಬದುಕನ್ನು ಕಳೆದುಕೊಂಡುಬಿಡುವ ಮಾನವನ ಅವಿವೇಕ-ದುರಾಸೆ ಪ್ರವೃತ್ತಿಗೆ ಕನ್ನಡಿ ಹಿಡಿಯುವ,ಜೀವನದ ವಿಪರ್ಯಾಸದ ಅನೇಕ ಸಂಗತಿಗಳ ಬಗ್ಗೆ ಗಮನ ಸೆಳೆಯುವ `ಗತಿ’ ಪ್ರೇಕ್ಷಕರಿಂದ ಕಿವಿಗಡಚಿಕ್ಕುವ ಚಪ್ಪಾಳೆಗಳನ್ನು ಪಡೆಯಿತು.
ಪ್ರಬುದ್ಧ ಚಿಂತನೆಗಳಿಂದ ಸಮಕಾಲೀನ ಬದುಕನ್ನು ಕಣ್ಮುಂದೆ ಕಟ್ಟಿ ನಿಲ್ಲಿಸುವ ಸೇತೂರಾಮರ ಈ ಪ್ರಯತ್ನ ಯಶಸ್ವಿಯಾಗಿದೆ. ನಿರ್ದೇಶಕರಾಗಿಯೂ ಅವರ ಜಾಣ್ಮೆ ಗೋಚರ. ಮುದುಕನ ಪಾತ್ರಧಾರಿಯಾಗಿ ಅವರು ತಮ್ಮ ಸಹಜಾಭಿನಯದಿಂದ ನೋಡುಗನ ಹೃದಯ ಗೆಲ್ಲುತ್ತಾರೆ. ಮೊಮ್ಮಗಳಾಗಿ ದೀಪಾ ಅವರಿಗೆ ಒಳ್ಳೆಯ ಸಾಥ್ ನೀಡುತ್ತಾರೆ. ಸ್ಫುಟವಾಗಿ, ನಿರರ್ಗಳವಾಗಿ ಮಾತನಾಡುವ ದೀಪಾ ಉತ್ತಮ ನಟಿ ಎಂದು ಸಾಬೀತು ಮಾಡಿದ್ದಾರೆ. ನಾಟಕದ ಪರಿಣಾಮ ಹೆಚ್ಚಿಸುವ ಸಮರ್ಪಕ ಹಿನ್ನಲೆ ಧ್ವನಿ, ಭಾವನೆಗಳನ್ನು ಹರಳುಗಟ್ಟಿಸುವಂತೆ ಚಲಿಸುವ ಬೆಳಕಿನ ಕೈ ಚಳಕ ಕೂಡ ಶ್ಲಾಘನೀಯ. ಪ್ರೇಕ್ಷಕರು ಕಿಕ್ಕಿರಿದು ತುಂಬುವಂತೆ ಮಾಡುತ್ತಿರುವ ಈ ಬಗೆಯ ನಾಟಕಗಳು ಇತ್ತೀಚೆಗೆ ಹೆಚ್ಚೆಚ್ಚು ಪ್ರದರ್ಶನಗೊಳ್ಳುತ್ತಿರುವುದು ರಂಗಭೂಮಿಯ ಬೆಳವಣಿಗೆಗೆ, ಪ್ರೇಕ್ಷಕರ ಅನನ್ಯ ರಂಗಪ್ರೇಮಕ್ಕೆ ಸಾಕ್ಷಿಯಾಗಿದೆ.

‍ಲೇಖಕರು G

21 May, 2014

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Sarala

    naataka nodabeku anistide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading