ಎಂ ಆರ್ ಗಿರಿಜಾ ಪ್ರವಾಸ ಕಥನ : ಭೂತಾನ್ ಗೆ ಕೈ ಬೀಸುತ್ತಾ..

(ಮುಂದುವರಿಯುವುದು…)

ದೇವಾಲಯದ ಒಳ ಹೋಗುವಾಗ ಶೂ ಬಿಟ್ಟು ಹೋಗಬೇಕಾದ್ದರಿಂದ ಕಾಲು ಚೀಲ ಇದ್ದರೂ ನನ್ನ ಪಾದಗಳು ಚಳಿಗೆ ಮರಗಟ್ಟಲು ಶುರುವಾದವು. ಕೈಯಂತೂ ಪೂರಾ ಸೆಟೆದುಕೊಂಡಿತ್ತು. ಕಲ್ಲಿನ ಗೋಡೆ, ಕಲ್ಲಿನ ನೆಲ ಆಗಿರುವುದರಿಂದ ಚಳಿ ಹೆಚ್ಚೇ ಇತ್ತು. ಗಡ ಗಡ ನಡುಗುತ್ತಿದ್ದೆ. ಪೋಲಾಂಡಿನ ಟೀಂಗೆ ಬೈ ಹೇಳಿ ವಾಪಸ್ ಹೊರಟೆ. ಪೋಲಾಂಡಿನ ಹುಡುಗಿ ಮೆಡಿಟೇಷನ್ ಮಾಡಲು ಮತ್ತೆ ಜಾಗ ಹುಡುಕುತ್ತಿದ್ದಳು. ಹೊರಗೆ ಬಂದು ಲಾಕರ್ನಿಂದ ಬ್ಯಾಗ್ ತೆಗೆದುಕೊಂಡು ಹೊರ ಬಂದ್ರೆ ಸಾಕಷ್ಡು ಜನ ಮೊನೆಸ್ಟರಿಯ ಒಳಗೆ ಬರುತ್ತಾ ಇದ್ದರು. ಟೂರಿಸ್ಟ್ಗಳ ದಟ್ಟಣೆ ನಿಧಾನವಾಗಿ ಏರತೊಡಗಿತ್ತು. ದಾರಿಯಲ್ಲಿ ಸಿಕ್ಕವರೆಲ್ಲಾ ಲೇಸ್ ಎಂದು ತೋರಿಸಿ ಹೇಳುತ್ತಿದ್ದರು. ಆದರೆ ಶೂನ ಲೇಸ್ ಕಟ್ಟಲು ಆಗದಷ್ಟು ಕೈ ಸೆಟೆದುಕೊಂಡಿತ್ತು. ಬೇಗ ಬೇಗ ಮೆಟ್ಟಲೇರಿ ಸೂರ್ಯನಿಗೆ ಮೈ ಒಡ್ಡಿ ಒಂದೆಡೆ ಕುಳಿತಾಗ ಕೈ ಮತ್ತೆ ನಂದೇ ಅನಿಸಿತು.
ಸಮಯ ಇನ್ನೂ ಬೆಳಿಗ್ಗೆ ಹತ್ತು. ಡ್ರೈವರ್ಗೆ ಫೋನ್ ಮಾಡಿ 12 ಕ್ಕೆ ಪಿಕ್ಅಪ್ ಮಾಡಲು ಹೇಳಿದೆ. ಕೆಳಗಿಳಿಯಲು ಬೇಕಾದಷ್ಟು ಸಮಯ ಇತ್ತು. ಬೆಳಿಗ್ಗೆ ನಾವು ಫೋಟೋ ಕ್ಲಿಕ್ಕಿಸಿ ಕೊಂಡ ವ್ಯೂಪಾಯಿಂಟ್ ತುಂಬಾ ಜನವೋ ಜನ. ಕೆಲವರಂತೂ ಟ್ರೈ ಪಾಡ್ ತಂದು ನೆಲದಲ್ಲಿ ಊರಿ ಫೋಟೋ ತೆಗೆಯುತ್ತಿದ್ದರು. ಕೆಲವು ಕಡೆ ನಾನು ಸೆಲ್ಫಿ ತಗೋತಾ ಇದ್ದರೆ ಕೆಲವು ಜನ ತಾವೇ ಫೋಟೋ ತೆಗೆದು ಕೊಡಲು ಮುಂದೆ ಬರುತ್ತಿದ್ದರು. ನನಗೇನು ಸೂಪರ್ ಖುಷಿ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು! ಮತ್ತೊಮ್ಮೆ ತಕ್ಸಂಗ್ ಅನ್ನು ಕ್ಯಾಮರಾ ಕಣ್ಣಲ್ಲಿ ತುಂಬಿಕೊಳ್ಳುತ್ತ ನಿಧಾನವಾಗಿ ಹೆಜ್ಜೆ ಹಾಕಿದೆ. ಅರ್ಧ ದಾರಿ ಬರುವುದರಲ್ಲಿ ತಕ್ಸಂಗ್ನ ಕಡೆ ಹೋಗೋ ಜನ ಕಡಿಮೆ ಆಗ್ತಾ ಬಂದ್ರು. ನಡೆಯಲಾಗದವರು ಕುದುರೆ ಮೇಲೆ ಹೊರಟಿದ್ರು. ಕುದುರೆ ಮೇಲೆ ಹೋದ್ರೆ ಮೆಟ್ಟಿಲುಗಳು ಶುರುವಾಗೋ ತನಕ ಮಾತ್ರ, ಕಡೇ ಭಾಗ ನಡೆದೇ ಹೋಗಬೇಕು.

ವಾಪಸ್ ಬರುವಾಗ ನಾಯಿಗಳ ಕಾಟ ಇರಲಿಲ್ಲ. ತಕ್ಸಂಗ್ನ ಸಂಗದಿಂದ ಮನಸ್ಸು ಉಲ್ಲಾಸದಲ್ಲಿ ತೇಲುತಿತ್ತು. ಮನಸ್ಸಿನ ಆ ಉನ್ಮತ್ತ  ಸ್ಥಿತಿಯಲ್ಲಿ ನಡೆಯುವುದು ಸಾಲದು ಎನಿಸಿ ಖುಷಿಯಿಂದ ಕುಪ್ಪಳಿಸುತ್ತಾ ಓಡತೊಡಗಿದೆ. ಇದರಲ್ಲಿ ನೆಗೆತ, ಕುಣಿತವೂ ಸೇರಿದ್ದವು. ಬೆಟ್ಟದ ಕೆಳಗೆ ಬಂದಾಗ ಇನ್ನೂ 11.30.ಬೆಳಿಗ್ಗೆ ಬಂದಾಗ ಇರದಿದ್ದ ಕರಕುಶಲ ವಸ್ತುಗಳ ಅಂಗಡಿಗಳು, ಪ್ರೇಯರ್ವೀಲ್ ಅಂಗಡಿಗಳು ಈಗ ತಲೆಯೆತ್ತಿದ್ದವು. ಅವುಗಳಲ್ಲಿ ಅರ್ಧ ನಮ್ಮ ದೇಶದ ವಸ್ತುಗಳೇ ಆಗಿದ್ದವು. ಭೂತಾನಿನ ನೆನಪಿಗಾಗಿ ಇರಲಿ ಅಂತ ಒಂದೆರಡು ಲೋಕಲ್ ವಸ್ತುಗಳನ್ನು ಖರೀದಿಸಿದೆ. ಮನಸ್ಸು ಎಷ್ಟು ಆನಂದದಲ್ಲಿತ್ತು ಅಂದರೆ ಚೌಕಾಸಿ ಮಾಡಲು ಹೋಗಲಿಲ್ಲ. ಅವರು ಬೋಣಿ ಅಂದದ್ದರಿಂದ ಕೇಳಿದ ಬೆಲೆ ಕೊಟ್ಟೆ. ಡ್ರೈವರ್ ಸರಿಯಾದ ಸಮಯಕ್ಕೆ ಬಂದ. ದಾರಿಯಲ್ಲಿ ಕಿಚ್ಚು ಮೊನೆಸ್ಟರಿ ನೋಡಿಕೊಂಡು ಹೋಟೆಲಿಗೆ ಬಂದೆ.
ಈ ಟ್ರೆಕ್ ನಾನು ಓದಿದ ಕೆಲವು ರಿವ್ಯೂಗಳಲ್ಲಿ ಹೇಳಿದಂತೆ ಅಷ್ಟು ಕಠಿಣವಾಗೇನೂ ಇಲ್ಲ. ಹಾಗಂತ ಅಷ್ಟು ಸುಲಭವೂ ಅಲ್ಲ. ತಕ್ಕಮಟ್ಟಿನ ಫಿಟ್ನೆಸ್ ಬೇಕೇಬೇಕು. ಮೇಲೆ ಹೋಗಿ, ಕೆಳಗಿಳಿಯಲು 5-6 ಗಂಟೆ ಬೇಕಾಗುತ್ತೆ. ಇದು ಪಾರೋ ಯಿಂದ 10-15 ಕಿ. ಮೀ ದೂರದಲ್ಲಿದೆ. ದಾರಿಯುದ್ದಕ್ಕೂ ನೆನಪಾಗ್ತಾ ಇದ್ದದ್ದು ನನ್ನ 62 ವರ್ಷದ ಸ್ನೇಹಿತೆ ಕಮಲ್. ಕಳೆದ ವರ್ಷ ಅಲ್ಲಿಗೆ ಹೋಗಿದ್ದಾಗ ಅವರ ಗುಂಪಿನ ಹುಡುಗಿಯರು ಹತ್ತಲು ತಿಣುಕಾಡ್ತಾ ಇದ್ದರೆ ಈಕೆ ಅವರೆಲ್ಲರಿಗಂತ ಮೊದಲು ಹತ್ತಿದ್ದರಂತೆ!!
ಮತ್ತೊಮ್ಮೆ ಕಡೇ ಬಾರಿ ಭೂತಾನ್ ಊಟ ಮಾಡಿದೆ. ಭೂತಾನಿನಲ್ಲಿ ಸಿಹಿತಿಂಡಿಗಳೇ ಇಲ್ಲ. ಸಿಹಿ ತಿನಿಸಿನ ಅಂಗಡಿಗಳಿದ್ದರೂ ಅವು ಇಂಡಿಯಾದ ಸಿಹಿಗಳೇ. ಜೊತೆಗೆ ತಿನ್ನಬೇಕು ಅನ್ನಿಸುವ ಹಾಗೆ ಇರಲೂ ಇಲ್ಲ. ಸಣ್ಣ ರೆಸ್ಟ್ ತಗೊಂಡು ಸಾಯಂಕಾಲ ಮತ್ತೆ ನಿರುದ್ದಿಶ್ಯವಾಗಿ ಪಾರೋ ಸುತ್ತಾಟಕ್ಕೆ ಹೊರಟೆ. ದಾರಿಯಲ್ಲಿ ಒಂದು ಮೈದಾನ.ಅಲ್ಲಿ ಜನ ಆರ್ಚರಿ ಆಡುತ್ತಿದ್ದರು. ಆರ್ಚರಿ ಅಲ್ಲಿನ ರಾಷ್ಟೀಯ ಕ್ರೀಡೆ. ಅದನ್ನು ಸ್ವಲ್ಪ ನೋಡೋಣ ಅಂತ ಗೇಟ್ ಒಳಗೆ ಹೋಗೋ ಅಷ್ಟರಲ್ಲಿ ಆ ನಾಲ್ಕೈದು ಜನ ಆಟಗಾರರು ಮೈದಾನದ ಆಚೆ ತುದಿ ತಲುಪಿದ್ರು.ಅವರು ಈ ತುದಿಯಿಂದ ಬಾಣ ಹೊಡೆಯೋದು. ನಾಲ್ಕೂ ಜನ ಬಾಣ ಹೊಡೆದ ಮೇಲೆ ಆ ತುದಿಗೆ ಹೋಗಿ ಬಾಣ ಎತ್ತಿಕೊಂಡು ಈ ತುದಿಯಲ್ಲಿರೋ ಗುರಿಗೆ ಹೊಡೆಯೋದು ಮಾಡ್ತಾ ಇದ್ದರು.ನಾನು ಗೇಟ್ ಒಳಗೆ ಹೋಗಿದ್ದೇ ಮತ್ತೆ ನನ್ನ ‘ಹಳೆಯ’ ಸ್ನೇಹಿತರಾದ ನಾಲ್ಕು ಕೊಬ್ಬಿದ ನಾಯಿಗಳು ಕಾಣಿಸಿಕೊಂಡವು.ಕಲ್ಲು ತಗೊಂಡು ಅವನ್ನು ಹೆದರಿಸಿ ಆ ತುದಿಗೆ ಹೋದೆ. ಆಟಗಾರರ ಅನುಮತಿ ಕೇಳಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ಅವರ ಆಟ ನೋಡ್ತಾ ನಿಂತಿದ್ದೆ.

ಮತ್ತೆ ಗೇಟ್ ತನಕ ನಾಯಿಗಳ ಮಧ್ಯೆ ನಡೆಯೋ ಧೈರ್ಯ ಇರಲಿಲ್ಲ.ಆಚೆ ಹೋಗೋಕೆ ಕಾಂಪೌಂಡ್ ಹಾರಿ ಬಿಡೋಣ ಅಂತ ಆಚೆ ಕಡೆ ಬಗ್ಗಿ ನೋಡಿದೆ.ಸ್ವಲ್ಪ ಜಾಸ್ತಿನೆ ಎತ್ತರ ಇತ್ತು. ನಾಯಿನೋ ನೆಲನೋ ಅಂತ ದ್ವಂದ್ವಾತ್ಮಕ ಚಿಂತನಾ ಲಹರಿಯಲ್ಲಿ ಕಾಲ ಹರಣ ಮಾಡದೆ, ಜೈ ಹೇಳಿ ಕಾಂಪೌಂಡ್ ಹಾರಿದೆ. ಹಳೆ ಪುಣ್ಯ ಎಲ್ಲಾ ಗಟ್ಟಿಯಾಗಿತ್ತು.ಹಾರಿದವಳು ನೆಲದ ಮೇಲೆ ನಿಂತಿದ್ದೆ.
ಅಲ್ಲಿಂದ ಸ್ವಲ್ಪ ಮುಂದೆ ಝಾಂಗ್ ಹಾಗು ಅದರ ಹಳೆಯ ಮರದ ಸೇತುವೆ. ಅದರ ಸುಂದರ ಚಿತ್ರಗಳನ್ನು ತೆಗೆದೆ. ಅಲ್ಲೊಬ್ಬಳು ಪುಟ್ಟ ಹುಡುಗಿ ಶಾಲೆಯಿಂದ ಮನೆಗೆ ಬರುತ್ತಿದ್ದವಳು ನಾನು ಅವಳ ಫೋಟೋ ತೆಗೆಯೋದನ್ನು ನೋಡಿ ಮಾತನಾಡಿಸಿದಳು.ನನ್ನ ಬಗ್ಗೆ ವಿಚಾರಿಸಿದಳು.ತಾನು ಮಾವನ ಜೊತೆ ಬೆಂಗಳೂರಿಗೆ ಬಂದಿದ್ದಾಗಿ ಹೇಳಿ, ನೀವು ಒಬ್ಬರೇ ಹೇಗೆ ಬಂದ್ರಿ ಅಂತ ಆಶ್ಚರ್ಯಪಟ್ಟಳು. ನೀನು ದೊಡ್ಡವಳಾದ ಮೇಲೆ ನೀನು ಓಡಾದಬಹುದು ಅಂತ ಹೇಳಿ ಅವಳಿಗೆ ಬೈ ಹೇಳಿದೆ.

ಪಾರೋ ಟಿಂಪುವಿಗಿಂತ ಚಿಕ್ಕ ಊರು.ಊರಿನ ಒಂದು ಬದಿ ಪಾರೋ ನದಿ.ಇನ್ನೊಂದು ಬದಿ ಹೊಲಗಳು. ನಡುವೆ2-3 ರಸ್ತೆಗಳು. ಇಷ್ಟೇ ಪಾರೋ ಎಂಬ ಊರು. ಪಾರೋ ಅಂದ ಕೂಡಲೇ ಪ್ರತಿ ಸಲವೂ ನನಗೆ ದೇವದಾಸ ನೇ ನೆನಪಾಗುತ್ತಾನೆ.
ನದಿಯ ಪಕ್ಕ ಇರುವ ಕಾಲು ದಾರಿ ಮೇಲೆ ನಡೀತಾ ಹೋದೆ. ಅಲ್ಲಿಯ ಆರ್ಚರಿ ಶಾಪ್ಗಳು … ಊರ ತುಂಬಾ ಅರ್ಧಕ್ಕರ್ಧ ಇರುವ ಕರಕುಶಲ ವಸ್ತುಗಳ ಶಾಪ್ಗಳು.. . . ಊರಿನ ಮಧ್ಯೆದ ಪಾರ್ಕನಲ್ಲಿ ಆಡುತ್ತಿದ್ದ ಮಕ್ಕಳು… . ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ನಡೆಯೋ ಜನ. . . ಈ ಒಂದೊಂದನ್ನು ನೋಡುತ್ತಾ ಸುಮ್ಮನೇ ಸುತ್ತುತ್ತಿರುವ ಹಾಗೇ ಕತ್ತಲಾಯಿತು.ಅಲ್ಲೊಂದು ಅಂಗಡೀಲಿ ಪಾನಿಪುರಿ ಮಾರ್ತಾ ಇದ್ರು. ತಿನ್ಬೇಕನ್ನಿಸಿದರೂ ಚುರುಮುರಿ ತಿಂದ ಅನುಭವ ನೆನಪಾಗಿ ಮತ್ತೆ ಬಾಯಿ ಕಡಿಸಿಕೊಳ್ಳೋದು ಬೇಡ ಅಂತ ಹೋಟೆಲ್ಗೆ ಹಿಮ್ಮರಳಿದೆ.

ಬೆಳಿಗ್ಗೆ 7.30ಕ್ಕೆ ಇದ್ದ ವಿಮಾನಕ್ಕೆ ಬೇಗ ಏಳಬೇಕಾಗಿದ್ದರಿಂದ ರೂಮಿಗೆ ಬಂದು ಊಟ ಮಾಡಿ ಇಡೀ ಪ್ರವಾಸದ ನೆನಪುಗಳನ್ನು ಮನಸ್ಸಿನ ಒಳಗೆ ಲಾಕ್ ಮಾಡ್ತಾ ನಿದ್ದೆಗೆ ಜಾರಿದೆ.
 
(ಮುಗಿಯಿತು)

‍ಲೇಖಕರು avadhi

May 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: