-ಗೋಪಾಲ ತ್ರಾಸಿ
ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ ಸಿರಿಸಂಪಿಗೆ ನಾಟಕ ಪ್ರದರ್ಶನ. ಮತ್ತೆ ಸುವರ್ಣ ಸರ್ ಮೂಲಕವೇ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಮೂರು ತಿಂಗಳ ಶಿಬಿರದಲ್ಲಿ ಕಲಿಕೆಗೆ ಮತ್ತಷ್ಟು ಅವಕಾಶ. ಮುಂದೆ ಕೃಷ್ಣಮೂರ್ತಿ ಕವತ್ತಾರ್ ಅವರಿಂದ ಕಲಿಕೆ. ಹೀಗೆ ಚಿಗುರೊಡೆದ ರಂಗಾಸಕ್ತಿಯ ಹಿನ್ನೆಲೆಯಲ್ಲಿ ಅರಿತದ್ದು, ರಂಗಭೂಮಿಯ ಅಪಾರ ಸಾಧ್ಯತೆ ಮತ್ತು ತರಬೇತಿ ಶಿಬಿರದ ಮಹತ್ವ ಹಾಗೂ ಅವಶ್ಯಕತೆ.
ತದನಂತರವೂ ಮುಂಬೈಯಲ್ಲಿ ರಂಗತರಬೇತಿ ಶಿಬಿರಗಳು ಆಗಿವೆ.
ಮುಂಬೈ ಬೆಳೆದಂತೆಲ್ಲ ಸಾಕಷ್ಟು ಕರ್ನಾಟಕ ಮೂಲದವರು ಚದುರಿ ಮುಂಬೈ ಆಚೆಗಿನ ಜಿಲ್ಲಾ ಪರಿಸರಗಳಲ್ಲಿ ನೆಲೆಸಿ ಸಾಂಸ್ಕೃತಿಕವಾಗಿ ಸಂಘಟಿತರಾಗತೊಡಗಿದರು. ‘ಇವರನ್ನು ತಲುಪಲು ಅವರಲ್ಲಿಗೇ ಹೋಗಿ ರಂಗ ತರಬೇತಿ, ನಾಟಕ ಚಟುವಟಿಕೆಗಳನ್ನು ಆಯೋಜಿಸುವತ್ತ ಮುಂದಾಗಬೇಕು’ ಎಂದು ಕಳೆದ ವರ್ಷ ನಮ್ಮ ಕನ್ನಡ ಕಲಾಕೇಂದ್ರಕ್ಕೆ 70 ತುಂಬಿದ ಸಂಭ್ರಮದಲ್ಲಿ ಹೊರತಂದ ‘ಕನ್ನಡ ಕಲಾಂತರಂಗ’ ಗ್ರಂಥದಲ್ಲಿ ಲೇಖನವೊಂದರಲ್ಲಿ ಬರೆದಿದ್ದೆ. ಆ ಮಾತನ್ನು ಕಾರ್ಯರೂಪಕ್ಕೆ ತರವಲ್ಲಿ ಕಲಾ ಕೇಂದ್ರದ ಈಗಿನ ಅಧ್ಯಕ್ಷರು, ಕಲಾವಿದರೂ ಆದಂತಹ ಮಧುಸೂಧನ ಟಿ.ಆರ್. ಅವರ ಮುತುವರ್ಜಿ ಮತ್ತು ಸಮಿತಿಯ ಸಹಕಾರ ಕಾರಣವಾಯಿತು. ಹೀಗೆ ಕಲಾ ಕೇಂದ್ರ ಮುಂಬೈಯಾಚೆಗಿನ ಉಪನಗರಗಳಲ್ಲಿ ಪ್ರಥಮ ಬಾರಿಗೆ ಆರಂಭಿಕ ರಂಗ ತರಬೇತಿ ಶಿಬಿರಕ್ಕೆ ನಾಂದಿ ಹಾಡಿತು.

ಮೀರಾ ರೋಡ್ ಶಿಬಿರ : ತುಳು ಕನ್ನಡ ವೆಲ್ಫೇರ್ ಸೊಸೈಟಿ (ರಿ) ಮತ್ತು ಕಲಾ ಭೂಮಿಕಾ ಸಂಸ್ಥೆಗಳ ಸಹಯೋಗದೊಂದಿಗೆ ತಾ. 27.12.2025 ರ ಮಧ್ಯಾಹ್ನ 4 ರಿಂದ ಸಂಜೆ 8 ರ ತನಕ ಮೀರಾ ರೋಡ್ ಪೂರ್ವದಲ್ಲಿರುವ ಹೋಟೆಲ್ ಸುರಭಿ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು. ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನಿಂದ ಪ್ರತಿಭಾವಂತ ರಂಗ ಕಲಾವಿದೆ, ನಾಟಕ, ಸಿನೆಮಾ ನಿರ್ದೇಶಕಿ ನಿರ್ಮಲಾ ನಾದನ್ ಆಗಮಿಸಿದ್ದರು. ಅಂದು ರಂಗ ಕಲಾವಿದೆ ಕೆ. ಪಂಕಜ (ಮರಿಯಮ್ಮನ ಹಳ್ಳಿ) ಸೊಗಸಾಗಿ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು.
ಕಡಿಮೆ ಎಂದರೂ ಮೂರು ದಿನಗಳ ಸಮಯ ಬೇಡುವ ಶಿಬಿರವನ್ನು ಮೂರು ನಾಲ್ಕು ತಾಸುಗಳಲ್ಲಿ ಮಾಡಬೇಕಾದದು…., ಶಿಬಿರಾರ್ಥಿಗಳ ಪ್ರತಿಕ್ರಿಯೆ ಹೇಗೆ ..ಏನೋ… ಎಂಬ ಆತಂಕದೊಂದಿಗೆ ಆರಂಭವಾದ ಶಿಬಿರವನ್ನು ಆತುರವಾಗಿಯೇ ಮುಗಿಸಿದರೂ, ಆ ಒಟ್ಟು ವಾತಾವರಣ ಮತ್ತು ಭಾಗವಹಿಸಿದವರ ಪ್ರತಿಕ್ರಿಯೆ ಕೇಳಿ ನಿರಾಳ ಎನಿಸಿದ್ದು ಹೌದು.
ಆಯೋಜಕರ ಮಾತುಗಳಲ್ಲೇ ಹೇಳೋದಾದರೆ :
“ ಶಿಬಿರದಲ್ಲಿ ಆಸಕ್ತಿಯಿಂದ ಪಾಲ್ಗೊಂಡವರೆಲ್ಲರನ್ನು ನೋಡಿ ಅತ್ಯಂತ ಖುಷಿ ಆಗಿದೆ. ರಂಗಶಿಕ್ಷಕಿ ನಿರ್ಮಲಾ ನಾದನ್ ಅವರು ತುಂಬಾ ಉತ್ತಮ ರೀತಿಯಲ್ಲಿ ಅನೇಕ ಹೊಸಹೊಸ ವಿಷಯಗಳನ್ನು ಬಹಳ ಕಡಿಮೆ ಅವಧಿಯಲ್ಲಿ ತಿಳಿಸಿದ್ದಾರೆ. ಭಾಗವಹಿಸಿದ ಎಲ್ಲರಲ್ಲೂ ಇನ್ನೂ ತಿಳಿದುಕೊಳ್ಳಬೇಕೆಂಬ ಆಸೆ ವ್ಯಕ್ತವಾದುದು ಸಂತೋಷ ತಂದಿದೆ.
ಹರೀಶ್ ಸುವರ್ಣ ಕಣಂಜಾರು. ಅಧ್ಯಕ್ಷರು, ತುಳು ಕನ್ನಡ ವೆಲ್ಫೆರ್ ಎಸೋಸಿಯೇಷನ್, ಮೀರಾರೋಡ್.
“ ವಿಭಿನ್ನ ರೀತಿಯ ಇಂತಹ ರಂಗ ತರಬೇತಿ ಶಿಬಿರದ ಅವಶ್ಯಕತೆ ಖಂಡಿತಾ ಇದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಅದರಲ್ಲೂ ಮಕ್ಕಳು ಈ ತರಹದ ತರಬೇತಿಯಿಂದಾಗಿ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ.”
ಜಿ. ಕೆ.ಕೆಂಚನಕೆರೆ, ಸಂಸ್ಥಾಪಕರು,ಕಲಾವಿದರು ಕಲಾ ಭೂಮಿಕಾ ತಂಡ. ಶಿಬಿರದಲ್ಲಿ ಕು. ಸಂಜನಾ, ಶಿಲ್ಪಾ ಪೂಜಾರಿ, ಕು.ಮನ್ವಿತಾ, ಮತ್ತು ಆಶಲತಾ ಪಿ.ಶೆಟ್ಟಿ ಶಿಬಿರದ ಪ್ರತಿಭಾನ್ವಿತರೆಂದು ಆಯ್ಕೆಯಾಗಿ ಗೌರವಿಸಲಾಯಿತು. ಮೀರಾರೋಡ್ ಶಿಬಿರದ ಆಯೋಜನೆಗೆ ಶ್ರಮಪಟ್ಟವರಲ್ಲಿ ಎ. ಕೆ. ಹರೀಶ್ ಮತ್ತು ಲೇಖಕ ಅಶೋಕ ವಳದೂರು ಇವರ ಕೊಡುಗೆ ನೆನೆಯಲೇ ಬೇಕು.
ನಲಾಸೋಪಾರದಲ್ಲಿ ಶಿಬಿರ :
ತಾ.28-12-25 ರಂದು ಬಂಟರ ಸಂಘ ಮುಂಬಯಿ; ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ ಮತ್ತು ತುಳು ಕೂಟ ಫೌಂಡೇಶನ್ನ್ (ರಿ) ನಲಾಸೋಪಾರ ಇವರ ಸಹಯೋಗದೊಂದಿಗೆ ಆದಿತ್ಯವಾರ ಬೆಳಿಗ್ಗೆ 11 ರಿಂದ ಸಂಜೆ 6 ರ ತನಕ ರಿಜೆನ್ಸಿ ಬ್ಯಾಂಕ್ವೆಟ್ ಹಾಲ್, ನಲಾಸೋಪಾರ ಪೂರ್ವ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
“ ಶಿಬಿರಾರ್ಥಿಗಳು ಅದರಲ್ಲೂ ಮಕ್ಕಳು ಇಷ್ಟೊಂದು ಉತ್ಸಾಹದಿಂದ ಪಾಲುಗೊಂಡಿದ್ದು ಮತ್ತು ಅವರ ಪ್ರತಿಭೆ ನೋಡಿ ಸಂತೋಷವಾಗುತ್ತದೆ. ಪ್ರತಿಭಾವಂತ ಮಕ್ಕಳು, ಕಲಾವಿದರಿಗೆ ಪ್ರೋತ್ಸಾಹ ನೀಡಲು ನಾವು ಸದಾ ಸಿದ್ಧರಿದ್ದೇವೆ. ನಿರ್ಮಲಾ ನಾದನ್ ಅವರು ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ಅರ್ಥವಾಗುವಂತೆ ಕಲಿಸುವ ಶ್ರಮ ತಗೊಂಡಿದ್ದಾರೆ. ” ಎಂದು ಹೇಳಿದ ತುಳು ಕೂಟ ಫೌಂಡೇಶನ್ನ್ , ನಲಾಸೋಪಾರದ ಜನಪ್ರಿಯ ಅಧ್ಯಕ್ಷರಾದ ಶಶೀಧರ್ ಕೆ ಶೆಟ್ಟಿ, ಇನ್ನಂಜೆ ಅವರ ಅಭಿಪ್ರಾಯ ಕೇಳಿ ಮನಸ್ಸು ಹಗೂರವಾಗಿತ್ತು.

“ಬಹಳ ಕಡಿಮೆ ಅವದಿಯಲ್ಲಿ ಈ ಶಿಬಿರದ ಆಯೋಜನೆ ಮಾಡಲಾಗಿದೆ. ಇಂತಹ ರಂಗ ತರಬೇತಿ ಕೇವಲ ಮಕ್ಕಳಿಗಲ್ಲ, ದೊಡ್ಡವರಿಗೂ ಪ್ರಯೋಜನಕ್ಕೆ ಬರುತ್ತದೆ. ಎಲ್ಲರೂ ತುಂಬಾ ಉತ್ಸಾಹದಿಂದ ಭಾಗವಹಿಸಿದ್ದಾರೆ . ಸಮಯದ ಅಭಾವ ಇದ್ದರೂ ನಿರ್ಮಲಾ ನಾದನ್ ಅವರು ಚೆನ್ನಾಗಿ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ. “ ಇದು ಬಂಟರ ಸಂಘ ಮುಂಬಯಿ; ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ ಎನ್ ಶೆಟ್ಟಿ, ಕೊಡ್ಲಾಡಿ ಅವರ ಮನದ ಮಾತುಗಳು.
“ ಕಳೆದ ವರ್ಷದಿಂದಲೇ ಈ ಶಿಬಿರದ ಕುರಿತು ಬಾಲ್ಯ ಸ್ನೇಹಿತ ಗೋಪಾಲ ತ್ರಾಸಿ ಹೇಳಿದಾಗ, ನಮ್ಮವರ ಪ್ರತಿಕ್ರಿಯೆ ಹೇಗಿರಬಹುದು..! ಹೇಗೆ ಆಗುತ್ತದೋ ..ಏನೋ..! ಎಂಬ ಸಂದೇಹ ಇತ್ತು. ಆದರೆ ಇಂದು ಸೇರಿದ ಮಕ್ಕಳ ಮತ್ತು ದೊಡ್ಡವರ ಕ್ರಿಯಾಶೀಲ ಚಟುವಟಿಕೆಗಳನ್ನು ಗಮನಿಸಿದಾಗ, ಅವರು ಖುಷಿಖುಷಿಯಲ್ಲಿ ಪ್ರತಿಕ್ರಿಯಿಸುವುದನ್ನು ಕಂಡಾಗ ಶಿಬಿರದ ಆಯೋಜನೆ ಸಾರ್ಥಕ ಭಾವ ತಂದಿದೆ. ” ಎಂದು ನನ್ನ ಬಾಲ್ಯಕಾಲದ ಗೆಳೆಯ, ಎರಡೂ ಸಂಸ್ಥೆಗಳ ಕಾರ್ಯದರ್ಶಿ, ಸಂಘಟಕರಾದ ಜಗನ್ನಾಥ ಡಿ. ಶೆಟ್ಟಿ ಪಳ್ಳಿ ಯವರ ಮಾತುಗಳು ಕೃತಜ್ಞತಾ ಭಾವ ಮೂಡಿಸಿದವು. ಪ್ರತಿಭಾವಂತ ಶಿಬಿರಾರ್ಥಿಗಳಾಗಿ ವರ್ಷಾ ಶೆಟ್ಟಿ, ಶೈಶಾ ಶೆಟ್ಟಿ, ದಿಶಾ ಹೆಗ್ಡೆ, ಮೋಕ್ಷ ಮಡಿವಾಳ ಮತ್ತು ಪುಟಾಣಿ ತನಿಷ್ ಶೆಟ್ಟಿ ಆಯ್ಕೆಯಾಗಿ ಬಹುಮಾನ ನೀಡಲಾಯಿತು.
***
“ಈ ಅಲ್ಪಕಾಲೀನ ತರಬೇತಿ ಶಿಬಿರ ಆರಂಭದ ಹೆಜ್ಜೆಯಷ್ಟೆ . ಶಿಬಿರಾರ್ಥಿಗಳ ಪ್ರತಿಕ್ರಿಯೆ ನಮ್ಮ ನಿರೀಕ್ಷೆಗೂ ಮೀರಿದ್ದಾಗಿದೆ. ಮುಂದೆ ಇದೇ ಶಿಬಿರಾರ್ಥಿಗಳಿಂದ ನಾಟಕ ಮಾಡಿಸೋದು ನಮ್ಮ ಉದ್ಧೇಶ. ಕಲಾ ಕೇಂದ್ರದ ನಾಟಕೋತ್ಸವದಲ್ಲಿ ನಿಮ್ಮ ತಂಡದ ನಾಟಕಗಳು ಬರಬೇಕು, ಅದಕ್ಕೆ ಕಲಾ ಕೇಂದ್ರದ ಸಹಕಾರ ಇದೆ ಮತ್ತು ಕರ್ನಾಟಕ ನಾಟಕ ಅಕಾಡೆಮಿಯವರ ನೆರವು, ಸಹಕಾರಕ್ಕೂ ಪ್ರಯತ್ನಿಸೋಣ.“ ನಮ್ಮ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಧ ಮಧುಸೂಧನ ಟಿ.ಆರ್. ಅವರ ನುಡಿ ಮಾತುಗಳು.
ಸಂಪನ್ಮೂಲ ವ್ಯಕ್ತಿ ನಿರ್ಮಲಾ ನಾದನ್ : “ ಆರಂಭದಲ್ಲಿ ನನಗೆ ಭಾಷೆ ಮತ್ತು ಮಕ್ಕಳ ಮುಗ್ಧತೆಯ ವಿಷಯದಲ್ಲಿ ಆತಂಕವಿತ್ತು. ಆದರೆ ರಂಗದ ಒಂದಷ್ಟು ಆಟಗಳು ಹಿರಿಯರಿಂದ ಹಿಡಿದು ಕಿರಿಯರವರೆಗೂ ಅವರೊಳಗಿನ ನಾಚಿಕೆಯ ಸ್ವಭಾವವನ್ನು ಹೋಗಲಾಡಿಸಿ, ಹಿರಿಯರನ್ನು ಸಡ್ಡು ಹೊಡೆದು ಮಕ್ಕಳು ಅಭಿನಯದ ಕಲಿಕೆಯಲ್ಲಿ ತಲ್ಲೀನರಾದರು. ಸಂಕೋಚ ಸರಿಸಿ ಸಂಗೀತ, ನೃತ್ಯ, ಅಭಿನಯವನ್ನು ಎಲ್ಲರ ಮುಂದೆ ಪ್ರದರ್ಶಿಸಲು ರಂಗದ ಆಟಗಳು ನೆರವಾದವು. ಹುಡುಗಿಯರು ಒಬ್ಬರಿಗಿಂತ ಮತ್ತೊಬ್ಬರು ಕ್ರಿಯೆ ಮತ್ತು ಪ್ರತಿಕ್ರಿಯೆ ನೀಡುವುದರ ಮುಖಾಂತರ ತಮ್ಮ ಕಲಾ ಚಾತುರ್ಯವನ್ನು ಪ್ರದರ್ಶಿಸಿದರು. ಕೆಲವರು ಉತ್ತಮ ನಿರೂಪಕರಾಗಿ, ಇನ್ನೂ ಕೆಲವರು ಉತ್ತಮ ಬರಹಗಾರರಾಗಿ ಚಿಕ್ಕ ಚಿಕ್ಕ ದ್ರಶ್ಯಗಳನ್ನು ನಿರ್ದೇಶಿಸುವ ತಮ್ಮ ಕಲಾ ಪ್ರತಿಭೆಯನ್ನು ತೋರಿಸುವಲ್ಲಿ ಮುಂದಾಗಿದ್ದು ಸಂತೋಷದ ವಿಚಾರ. ಆದರೆ ಅಲ್ಪ ಕಾಲಾವಧಿಯಲ್ಲಿ ನಟನೆಯನ್ನು ಹೊರ ತರುವುದು ಸುಲಭ ಸಾಧ್ಯವಲ್ಲ. ಅದಕ್ಕೆ ವೃತ್ತಿಪರ ಕಲಿಕೆ ನಿರಂತರ ಬೇಕಾಗುತ್ತದೆ “ ಎಂಬ ಅಭಿಪ್ರಾಯ ಪಟ್ಟರು.
ನಿರ್ಮಲಾ ನಾದನ್ ಅವರ ಆತ್ಮೀಯ ಕಲಿಸುವ ಶೈಲಿಗೆ ಮಕ್ಕಳು ಅದೆಷ್ಟು ಆಕರ್ಷಿತರಾದರೆಂದರೆ , “ ಮೇಡಮ್ ನೀವು ಮತ್ತೊಮ್ಮೆ ಬಂದು ಹೆಚ್ಚು ಸಮಯ ಕ್ಲಾಸ್ ಮಾಡಿ, ನಾಟಕ ಸಹ ಮಾಡಿಸಿ…” ಅಂತಂದು ಬೀಳ್ಕೊಟ್ಟದ್ದು ಸಾರ್ಥಕ ಭಾವ. ಕಲಾ ಕೇಂದ್ರದ ವತಿಯಿಂದ ಕಲಾವಿದ ಜಗದೀಶ್ ರೈ, ನಾಟಕಕಾರ ಸಾ.ದಯಾ, ಸಹಕಾರ ಹಿತೈಷಿಗಳಾದ ಬಾಲಚಂದ್ರ ದೇವಾಡಿಗ, ಅಜಿತ್ ಶೆಟ್ಟಿಯವರ ನೆರವು ಮಹತ್ವದ್ದು.
ಇಂತಹದ್ದು ನಿರಂತರ ನಡೆಯುತ್ತಿರಬೇಕಾದುದು. ಎರಡೂ ಶಿಬಿರವನ್ನು ಪರಿಕಲ್ಪಿಸಿ, ಆಯೋಜನೆ, ಸಂಯೋಜಿಸುವಲ್ಲಿ ಒಂದಷ್ಟು ಶ್ರಮ, ಸಮಯದ ವ್ಯಯ, ಆರೋಗ್ಯ ಏರುಪೇರಾದರೂ ಒಂದಷ್ಟು ಸಜ್ಜನ ಮನಸ್ಸುಗಳೊಂದಿಗೆ, ಪ್ರತಿಭಾವಂತ ಮಕ್ಕಳೊಂದಿಗೆ ಬೆರೆತ ಖುಷಿ ಇದೆ. ಶಿಬಿರಾರ್ಥಿಗಳಿಂದಲೇ ನಾಟಕ ಸಾದರ ಪಡಿಸಬೇಕು. ಇದು ಎರಡೂ ಕಡೆಯಲ್ಲಿ ಆಯೋಜಕರ, ಶಿಬಿರಾರ್ಥಿಗಳ ಅಪೇಕ್ಷೆ, ಕಾದು ನೋಡೋಣ. ಈ ಯೋಚನೆ, ಯೋಜನೆಗೆ ಕೈ ಜೋಡಿಸಿದ ಎಲ್ಲರಿಗೂ ಹೃನ್ಮನದ ನಮನಗಳು.






0 Comments