ರಾಘವೇಂದ್ರ ಮಹಾಬಲೇಶ್ವರ
ಈ ಸಿನೆಮಾ ನೋಡಿ ವಾರವೇ ಆಯಿತು. ಇನ್ನೂ ಮನಸ್ಸಿನಲ್ಲಿದೆ. “ಭ್ರಮರಂ” ಎಂಬ ಮೋಹನ್ ಲಾಲ್ ನಟಿಸಿದ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾದ ಕೊನೆ ವೀಕ್ಷಕನಿಗೆ ಅತ್ಯಂತ ನಿರಾಸೆಯನ್ನು ಉಂಟುಮಾಡುವಂತಹದ್ದು. ಆದರೆ ಆ ನಿರಾಸೆಯಲ್ಲಿಯೇ ಇಡೀ ಸಿನೆಮಾಗೆ ಹೊಸದೊಂದು ಆಯಾಮವನ್ನು ನೀಡುತ್ತದೆ. ಒಂದು ಸರಳವಾದ ಕಥೆಯನ್ನು ಹೇಳಿರುವ ರೀತಿ ಅತ್ಯಂತ ವಿಭಿನ್ನವಾಗಿದ್ದು, ನಿರ್ದೇಶಕ ಮತ್ತು ಚಿತ್ರಕಥೆ ಬರೆದವರ ಪ್ರತಿಭೆ ಅದರಲ್ಲಿ ವ್ಯಕ್ತವಾಗಿದೆ. ಈ ಚಿತ್ರದ ನಾಯಕ ಮತ್ತೆ ಮತ್ತೆ ಕಾಡುತ್ತಾನೆ.
ಕಥೆಯ ಆರಂಭವಾಗುವಾಗ ಆ ನಗರದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಆಗಿದೆ. ಯಾವ ಅಪರಿಚಿತರನ್ನೂ ಮನೆಗೆ ಸೇರಿಸಬೇಡಿ ಎಂದು ಟಿವಿಯಲ್ಲಿ ಹೇಳುತ್ತಿದ್ದಾರೆ, ಅದನ್ನು ನೋಡುತ್ತಿರುವ ಲತಾ (ಲಕ್ಷ್ಮೀ ಗೋಪಾಲಸ್ವಾಮಿ) ಆತಂಕಗೊಂಡಿದ್ದಾಳೆ. ಅಂತಹ ಹೊತ್ತಿನಲ್ಲಿಯೇ ಒಬ್ಬ ವ್ಯಕ್ತಿ (ಮೋಹನ್ ಲಾಲ್) ತಾನು ಲತಾಳ ಗಂಡ, ಶೇರ್ ಬ್ರೋಕರ್ ಉನ್ನಿಯ (ಸುರೇಶ್ ಮೆನನ್) ಶಾಲಾ ಸಹಪಾಠಿ ಎಂದು ಹೇಳಿಕೊಂಡು ಬರುತ್ತಾನೆ. ಲತಾಗೆ ಅನುಮಾನ ಬರುತ್ತದೆ. ಉನ್ನಿಗೆ ಆತ ತಾನು ಉನ್ನಿಯೊಡನೆ ಪ್ರಾಥಮಿಕ ಶಾಲೆಯಲ್ಲಿ ಓದಿದವ, ತನ್ನ ಹೆಸರು ಜೋಸೆಫ್ ಎಂದು ಬಂದ ವ್ಯಕ್ತಿ ಹೇಳಿಕೊಳ್ಳುತ್ತಾನಾದರೂ ಉನ್ನಿಗೆ ಆತನ ನೆನಪು ಆಗುವುದಿಲ್ಲ.ಉನ್ನಿಯ ಮಗಳು ಲೆಚ್ಚುಗೆ ಹಾಡು, ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಾ ಆತ ಆತ್ಮೀಯನಾಗುತ್ತಾನೆ. ಆತ ಆಕೆಗೆ ಹೇಳಿಕೊಡುವ “ಅಣ್ಣಾರ ಕಣ್ಣಾ…” ಹಾಡು ಇಡೀ ಚಿತ್ರದ ಕಥೆಯನ್ನು ಕೂಡಿಸುವ ಹಾಡಾಗುತ್ತದೆ. ಅಷ್ಟೇ ಅಲ್ಲದೇ ಅಪಾರ್ಟ್‌ಮೆಂಟಿನ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ ಬೆರೆಯುತ್ತಾನೆ. ಉನ್ನಿ ತನ್ನ ಗೆಳೆಯ ಅಲೆಕ್ಸ್‌ನಿಗೆ ಹೀಗೆ ವ್ಯಕ್ತಿಯೊಬ್ಬ ಬಂದಿದ್ದಾನೆ ಎಂದು ಹೇಳಿದಾಗ, ಆತ ಆತ ಜೋಸ್ ಆಗಿರಲು ಸಾಧ್ಯವಿಲ್ಲ, ನಮ್ಮ ಕ್ಲಾಸಿನಲ್ಲಿ ಇದ್ದ ಮೂವರೇ ಕ್ರಿಶ್ಚಿಯನ್ನರಲ್ಲಿ ಯಾರೂ ಆ ಹೆಸರಿನವರು ಇರಲಿಲ್ಲ ಎನ್ನುತ್ತಾನೆ, ಮತ್ತು ಆತ ಶಿವನ್ ಕುಟ್ಟಿ ಇರಬೇಕು ಎಂದು ಅನುಮಾನ ವ್ಯಕ್ತಪಡಿಸುತ್ತಾನೆ. ಅಲ್ಲಿಗೆ ಕಥೆ ಒಂದು ಹೊಸ ತಿರುವನ್ನ ಪಡೆದುಕೊಳ್ಳುತ್ತದೆ.
ಶಾಲಾ ದಿನಗಳಲ್ಲಿ ನೀರಲ್ಲಿ ಬಿದ್ದಿದ್ದ ಸಹಪಾಠಿ ಹುಡುಗಿಯೊಬ್ಬಳನ್ನು ಹೊರತಂದ ಶಿವನ್ ಕುಟ್ಟಿಯ ಮೇಲೆ ಆತನೇ ಆಕೆಯನ್ನು ನೀರಿಗೆ ತಳ್ಳಿ ಸಾಯಿಸಿದವ ಎಂದು ಆರೋಪ ಮಾಡಿ ಉನ್ನಿ ಮತ್ತು ಅಲೆಕ್ಸ್ ಜೈಲಿಗೆ ಹೋಗುವಂತೆ ಮಾಡಿರುತ್ತಾರೆ. ಆದರೆ ಅದಕ್ಕೆ ಪ್ರತಿಕಾರ ಮಾಡಲು ಬಂದಿಲ್ಲ ನಾನು, ಹಾಗಿದ್ದಿದ್ದರೆ ಇಷ್ಟೆಲ್ಲ ವರ್ಷ ಕಾದು ಈಗ ಬರಬೇಕಿರಲಿಲ್ಲ, ನನಗೂ ಹೆಂಡತಿ ಹಾಗೂ ಮಗಳಿದ್ದಾಳೆ ಎಂದು ಹೇಳುತ್ತಾನೆ. ಇಲ್ಲಿ ಒಂದು ಫ್ಲ್ಯಾಶ್‌ಬ್ಯಾಕ್ ಶಿವನ್ ಕುಟ್ಟಿ ತಾನು ಮತ್ತು ತನ್ನ ಹೆಂಡತಿ (ಭೂಮಿಕಾ ಚಾವ್ಲಾ) ಮತ್ತು ಮಗಳೊಂದಿಗೆ ಹೇಗೆ ಸುಖವಾಗಿದ್ದೆ, ಮತ್ತು ತನ್ನ ಮೂಲ ಹೆಸರು ಮತ್ತು ತನ್ನ ಜೈಲಿನ ಕಥೆ ಮುಚ್ಚಿಟ್ಟು ಅವರೊಂದಿಗೆ ವಿಷ್ಣು ಎಂಬ ಹೆಸರಲ್ಲಿ ಹೇಗೆ ಜೀವಿಸಿದ್ದೆ ಎಂಬುದನ್ನು ಹೇಳುತ್ತಾನೆ. ಮತ್ತೆ ಯಾಕೆ ಬಂದೆ, ಹಣದ ಅವಶ್ಯಕತೆ ಇದೆಯಾ ಎಂದಾಗ ಬೇರೆ ಒಂದು ಕಾರಣ ಇದೆ ಎಂದು ಹೇಳುತ್ತಾನೆ. ತನ್ನ ಹೆಂಡತಿ ಮತ್ತು ಮಗಳಿಗೆ ತನ್ನ ಹಳೆಯ ವಿಷಯ ಗೊತ್ತಾಗಿದೆ. ಅವರು ನನ್ನನ್ನು ಬಿಟ್ಟು ಹೋಗಿದ್ದಾರೆ. ನೀನು ಬಂದು ಅವರಿಗೆ ಸತ್ಯ ಹೇಳು ಎಂದು ಹೇಳುತ್ತಾನೆ.
ಮುಂದಿನ ಕಥೆಯಲ್ಲಿ ಇವರಿಬ್ಬರೂ ಶಿವನ್ ಕುಟ್ಟಿಯ ಹಳ್ಳಿಯ ಮನೆಗೆ ಹೋಗುವ ದಾರಿಯಲ್ಲಿ ನಡೆಯುತ್ತದೆ. ಉನ್ನಿಗೆ ಈ ಪ್ರಯಾಣದ ಅವಧಿಯಲ್ಲಿ ತನ್ನಿಂದಾಗಿ ಜೈಲು ಪಾಲಾಗಿ ಜೀವನ ಹಾಳುಮಾಡಿಕೊಂಡ ಶಿವನ್ ಕುಟ್ಟಿಯ ದುಃಖ ಹಾಗೂ ಆತನ ಮುಗ್ಧತೆ ಮತ್ತು ಪ್ರೇಮ ಗಾಢವಾಗಿ ತಟ್ಟುತ್ತದೆ. ಮಧ್ಯದಲ್ಲಿ ಇನ್ನೊಬ್ಬ ಗೆಳೆಯ ಅಲೆಕ್ಸ್ ಸಹಾ ಬಂದು ಸೇರಿಕೊಳ್ಳುತ್ತಾನೆ. ಮತ್ತು ಇಬ್ಬರೂ ಶಿವನ್ ಕುಟ್ಟಿಯನ್ನು ಕೊಂದುಬಿಟ್ಟರೆ ತಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎಂದುಕೊಳ್ಳುತ್ತಾರೆ. ಈ ಹಂತದಲ್ಲಿ ಕಥೆ ರೋಚಕಗೊಳ್ಳುತ್ತದೆ, ಮತ್ತು ಕ್ಲೈಮ್ಯಾಕ್ಸ್ ಅತ್ಯಂತ ದುಃಖಕರವೆನಿಸುತ್ತದೆ.
ನಿರ್ದೇಶಕ ಬ್ಲೆಸ್ಸಿ ಅತ್ಯಂತ ಸಮರ್ಪಕವಾಗಿ ಸಸ್ಪೆನ್ಸನ್ನು ಕಾಯ್ದುಕೊಳ್ಳುತ್ತಾ ಕಥೆಯನ್ನು ಬಿಡಿಸುತ್ತಾ ಹೋಗುತ್ತಾನೆ. ಇಲ್ಲಿ ಬರುವ ಮೂರೂ ಪಾತ್ರಗಳೂ ತಮ್ಮ ಮಾನಸಿಕ ಹೊಯ್ದಾಟಗಳನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ. ಒಂದು ಸಂದರ್ಭದಲ್ಲಿ ಈ ಪಾತ್ರಗಳಲ್ಲಿನ ಒಳ್ಳೆಯತನ ಪ್ರಕಟಗೊಂಡರೆ ಇನ್ನೊಂದು ಕ್ಷಣದಲ್ಲಿ ದುಷ್ಟತನವೂ ಪ್ರಕಟಗೊಳ್ಳುತ್ತದೆ. ಹೀಗೆ ಮಾಡುತ್ತಾ, ವೀಕ್ಷಕನ ಪಾತ್ರಗಳನ್ನು ಕೆಟ್ಟ ಮತ್ತು ಒಳ್ಳೆಯ ಎಂದು ವರ್ಗೀಕರಿಸುವ ಅಭ್ಯಾಸವನ್ನು ಅಲ್ಲಗಳೆಯುತ್ತಾ ಹೋಗುತ್ತದೆ. ಇಂಟರ್ವೆಲ್ ನಂತರ ಕಥೆ ಇನ್ನೂ ರೋಚಕವಾಗುತ್ತಾ, ಕ್ಲೈಮ್ಯಾಕ್ಸ್‌ವರೆಗೆ ಕರೆದೊಯ್ಯುತ್ತದೆ. ಕ್ಲೈಮ್ಯಾಕ್ಸ್ ಮಾತ್ರ ವೀಕ್ಷಕನನ್ನು ದಿಗಿಲಿಗೆ ತಳ್ಳುತ್ತಾ, ಇಡೀ ಕಥೆಗೆ ಹೊಸದೊಂದು ಭಾಷ್ಯ ಬರೆಯುತ್ತದೆ.
ಇಡೀ ಚಿತ್ರವನ್ನು ಮೋಹನ್ ಲಾಲ್ ಆವರಿಸಿಕೊಂಡಿದ್ದಾನೆ. ಸುರೇಶ್ ಮೆನನ್ ಸಹ ಅತ್ಯಂತ ಸಹಜಾಭಿನಯದಿಂದ ಸೆಳೆಯುತ್ತಾನೆ. ಕೇರಳದ ಗ್ರಾಮೀಣ ಪ್ರದೇಶಗಳನ್ನು ಅಂತ್ಯಂತ ಸುಂದರವಾಗಿ ಸೆರೆಹಿಡಿಯಲಾಗಿದೆ. ತುಂಬ ಸರಳವಾದ ಕಥೆಯುಳ್ಳ ಚಿತ್ರ. ಆದರೆ ಕೊನೆಯವರೆಗೂ ವೀಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಶಕ್ತಿಯನ್ನೂ ಈ ಚಿತ್ರ ಒಳಗೊಂಡಿದೆ. ಒಮ್ಮೆ ನೋಡಲೇಬೇಕಾದ ಚಿತ್ರ ಇದು.







‘ಇಲ್ಲಿ ಬರುವ ಮೂರೂ ಪಾತ್ರಗಳೂ ತಮ್ಮ ಮಾನಸಿಕ ಹೊಯ್ದಾಟಗಳನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ. ಒಂದು ಸಂದರ್ಭದಲ್ಲಿ ಈ ಪಾತ್ರಗಳಲ್ಲಿನ ಒಳ್ಳೆಯತನ ಪ್ರಕಟಗೊಂಡರೆ ಇನ್ನೊಂದು ಕ್ಷಣದಲ್ಲಿ ದುಷ್ಟತನವೂ ಪ್ರಕಟಗೊಳ್ಳುತ್ತದೆ. ಹೀಗೆ ಮಾಡುತ್ತಾ, ವೀಕ್ಷಕನ ಪಾತ್ರಗಳನ್ನು ಕೆಟ್ಟ ಮತ್ತು ಒಳ್ಳೆಯ ಎಂದು ವರ್ಗೀಕರಿಸುವ ಅಭ್ಯಾಸವನ್ನು ಅಲ್ಲಗಳೆಯುತ್ತಾ ಹೋಗುತ್ತದೆ’ ಹೌದು.., ಚಲನಚಿತ್ರ,ನಾಟಕ,ಕತೆ,ಧಾರಾವಾಹಿ ಮುಂತಾದ ಹಲವಾರು ಪ್ರಾಕಾರಗಳಲ್ಲಿ ಮನುಷ್ಯರನ್ನು ಕೇವಲ ಒಳ್ಳೆಯ ಹಾಗೂ ಕೆಟ್ಟವರನ್ನಾಗಿ ಮಾತ್ರ ವಿಂಗಡಿಸುವ ಪ್ರಕ್ರಿಯೆ ಭಾರತೀಯ ಮತ್ತು ಕನ್ನಡ ಸಂದರ್ಭಗಳಲ್ಲಿ ರೂಢಿಗತವಾಗಿ ಬಂದಿದೆ.. ಮನ:ಶಾಸ್ತ್ರ ಮತ್ತು ಮನೋವೈಜ್ಞಾನಿಕ ಆಧಾರಗಳನ್ವಯ ಯಾವುದೇ ವ್ಯಕ್ತಿ ಪರಿಪೂರ್ಣವಾಗಿ ಒಳ್ಳೆಯವನಾಗಲೀ, ಸಂಪೂರ್ಣವಾಗಿ ಕೆಟ್ಟವನಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ.. ಒಟ್ಟಾರೆ ಅದು ಅವನ ಸಾಂದರ್ಭಿಕ ಸ್ಪಂದನಕ್ಕನುಗುಣವಾಗಿರುತ್ತದೆ.. ಪರಿಸ್ಥಿತಿ-ಮನಸ್ಥಿತಿಗಳಿಗೆ ಅನುಗುಣವಾಗಿ ಮನುಷ್ಯನ ಗುಣಾವಗುಣಗಳ ನಿರ್ಧಾರವಾಗುತ್ತದೆ.. ಹೀಗೆ ಕೆಟ್ಟ-ಒಳ್ಳೆಯ ತೆಳುಪೊರೆಯಲ್ಲಿ ನಾಯಕ-ಖಳನಾಯಕನ ಪಾತ್ರ ನಿರೂಪಣೆಯನ್ನು ಸೃಜಿಸುವ ಪರಿ, ಎಲ್ಲ ಕಲಾಪ್ರಾಕಾರಗಳ ಕೆಲವೇ ಸೃಷ್ಟಿಗಳಲ್ಲಿ ಕಂಡುಬಂದಿರುವುದು ಮಾನವಸಹಜತೆಗೆ ವಿರುದ್ಧವಾದುದು.. ಭ್ರಮರಂ ಇದಕ್ಕೆ ಹೊರತಾಗಿದೆ ಎಂದಾದಲ್ಲಿ ಇಂತಹ ಟ್ರೆಂಡನ್ನು ಸ್ವಾಗತಿಸುವ ಕರ್ತವ್ಯ ನಮ್ಮಂತ ಮಾನವಪರ-ವೈಜ್ಞಾನಿಕ ಮನಸ್ಸುಗಳದ್ದು..