ಮನದಾಳದ ಗೌರಿ ಮನೆಗೆ ಬಂದಳು…


ಷಡಕ್ಷರಿ ತರಬೇನಹಳ್ಳಿ

ಮಡದಿ ದಿನದ ವಾರ್ತೆ ಒಪ್ಪಿಸುತ್ತಿದ್ದಳು. ಮಕ್ಕಳದ್ದು ಮುಗಿದಿತ್ತು. ತೋಟದ್ದೂ ಮುಗಿದಿತ್ತು. ಅಮ್ಮನ ಆರೋಗ್ಯ, ಅವರು ಮೊನ್ನೆ ಹಿರಿಯ ನಾಗರೀಕರ ಆಟೋಟಗಳಲ್ಲಿ, ಮೂರ್ನಾಲ್ಕು ಪ್ರಶಸ್ತಿ ಪಡೆದಿದ್ದು, ಅವರ ಸಂದರ್ಶನ ಪ್ರಜಾವಾಣಿಯಲ್ಲಿ ಬಂದಿದ್ದು, ಎಲ್ಲಾ ಕೇಳಿಯಾಗಿತ್ತು. ನಮ್ಮ ಮೇಕೆ ಮರಿ ಸಿರಿ ಬೆಳೆದು ನಿಂತು ಅವಳಿಗೊಬ್ಬ ಜೊತೆಗಾರನ ಹುಡುಕಾಟ ಮುಂದುವರಿದದ್ದು ಎಲ್ಲ ವರದಿಯಾಗಿತ್ತು. ಕೊನೆಯಲ್ಲಿ ಅವಳು ಹೇಳಲು ಬಾಕಿಯಿದ್ದಿದ್ದು ಒಂದು ಮಾತ್ರ ಬಾಕಿಯಿತ್ತು. ನಾನೇ ತಡೆಯಲಾರದೆ ಕೇಳಿದೆ. “ಚಿನ್ನು ಹೇಗಿದ್ದಾಳೆ? ಮತ್ತೆ ಡಾಕ್ಟರ್ ಯಾವ ದಿನ ಹೇಳಿದ್ದಾರೆ” ಅಂದೆ.
ಒಂದು ಗಳಿಗೆ ಮೌನ. “ಬಾಬು ನಿನಗೆ ಹೇಗೆ ಹೇಳೋದು ಅಂತಾನೇ ಗೊತ್ತಾಗ್ತಾ ಇಲ್ಲಾ” ಅಂದ ಅವಳ ಮಾತು ಕೇಳಿ ನನ್ನ ಕಾಲು ಕುಸಿಯಲಾರಂಭಿಸಿತು. ನನಗೂ ಅವಳು ಏನು ಹೇಳಲಿರುವಳೋ ಅದನ್ನು ಕೇಳಲು ಇಷ್ಟವಿಲ್ಲದವನಂತೆ ಮೌನಿಯಾದೆ. ಇದನ್ನೂ ಊಹಿಸಿದ್ದ ಅವಳು “ಹಾಗೇನಿಲ್ಲಾ, She is alright now” ಅಂದದ್ದು ಕೇಳಿದ ಮೆಲೆ ನನಗೆ ನಿಂತಿದ್ದ ಉಸಿರಾಟ ಸರಾಗವಾಗಿತು. ನನ್ನ ಧಾವಂತ ತಡೆಯಲಾರದೇ ಒಮ್ಮೆಗೇ ಹೇಳಿದೆ. ಅದೇನಾಯಿತು ನೇರವಾಗಿ ಹೇಳೆಂದೆ. ಸುಧಾರಿಸಿಕೊಂಡ ಅವಳು “ಚಿನ್ನು ಬದುಕಿದ್ದೇ ಹೆಚ್ಚು” ಅಂದದ್ದು ಕೇಳಿ ಮತ್ತೆ ತಲೆ ಸುತ್ತಲಾರಂಭಿಸಿತು.

******

ಈಗ ಚಿನ್ನು ತುಂಬು ಗರ್ಭಿಣಿ ಮತ್ತು ದ್ಯೈತ್ಯೆ. ಅವಳು ಈ ದಿನಗಳಲ್ಲಿ ನಮ್ಮ ತೋಟದಲ್ಲಿ ತುಂಬ ದೂರ ನಡೆಯೋದು ಕಷ್ಟವಾಗುತ್ತೆ ಅಂತ ಅವಳನ್ನು ಮನೆಯ ಹಿಂದಿನ ತೋಟದಲ್ಲೇ ಮೇಯಲು ಬಿಡುತ್ತಿದ್ದಳು ಮಡದಿ. ಅಂದು ತಿಪಟೂರಿನಲ್ಲಿ ನಮ್ಮ ಮನೆಯ ಎಲ್ಲ ಸದಸ್ಯರ ಎಲ್.ಐ.ಸಿ ಪಾಲಿಸಿ ತುಂಬಿಸಿ ಬರಲು ಮಧ್ಯಾಹ್ನ ಚಿನ್ನುಳನ್ನು ಮೇಯಲು ನೆರಳಲ್ಲಿ ಮರಕ್ಕೆ ಹಗ್ಗದಿಂದ ಕಟ್ಟಿ ಹೊರಟು ಹೋಗಿದ್ದಾಳೆ. ಅಲ್ಲಿಯ ಎಲ್ಲಾ ಕೆಲಸಗಳನ್ನು ಆದಷ್ಟೂ ಬೇಗ ಮುಗಿಸಿ ಬಂದ ಅವಳು ತಕ್ಷಣ ಮನೆಯ ಹಿಂದಿನ ತೋಟಕ್ಕೆ ಓಡಿದ್ದಾಳೆ. ಅಷ್ಟರಲ್ಲಾಗಲೇ ನಮ್ಮ ಪಕ್ಕದ ತೋಟದ ಹುಡುಗರು, ಸುತ್ತಮುತ್ತಲಿನ ಮನೆಯ ಹೆಂಗಸರೆಲ್ಲಾ ನಮ್ಮ ತೋಟದೊಳಗೆ ಗುಂಪು ಸೇರಿದ್ದನ್ನು ನೋಡಿ ಬೆಚ್ಚಿದ್ದಾಳೆ.
ಚಿನ್ನುಗಾಗಿ ಅವಳ ಕಣ್ಣುಗಳು ಹುಡುಕಿವೆ. ದೂರದಲ್ಲಿ ನೆರಳಲ್ಲಿ ನಿಂತು ಸುಧಾರಿಸಿಕೊಳ್ಳುತ್ತಿದ್ದ ಅವಳನ್ನು ನೋಡಿ ಸಮಾಧಾನಗೊಂಡ ಅವಳು ಜನರ ಬಳಿಸಾರಿದಾಗ ಅವರು ಹೇಳಿದ ಮಾತು ಕೇಳಿ ನೆಲಕ್ಕೆ ಕುಸಿದಿದ್ದಾಳೆ. ಅವರು ಅವಳನ್ನು ಸಮಾಧಾನ ಮಾಡಿ ಏನೂ ಆಗುವುದಿಲ್ಲ ಸುಮ್ಮನಿರು ದೇವರಿದ್ದಾನೆ ಅಂಥ ಹೇಳಿ ಸಂತೈಸಿದ್ದಾರೆ.

*****

ಈ ಚಿನ್ನು ಸಣ್ಣ ಹುಡುಗಿಯಿಂದಲೂ ತುಂಬು ಪ್ರಿತಿಯಿಂದ ಬೆಳೆದವಳು. ಅವಳಿಗೆ ಹಗ್ಗ ಕಟ್ಟಿ ಮೇಯಿಸಿದ್ದೇ ಇಲ್ಲ ಅವಳ ತವರು ಮನೆಯಲ್ಲಿ. ಅವರ ಮನೆಯಿಂದ ಬಂದ ಮೇಲೆ ನಮ್ಮ ಮನೆಯಲ್ಲೂ ಅವಳನ್ನು ಕಟ್ಟಿ ಮೇಯಿಸಿದ್ದೇ ಇಲ್ಲಾ. ವಿಶಾಲ ತೋಟದಲ್ಲಿ ಸುತ್ತಾಡುತ್ತಾ ಅವಳಿಗೆ ಇಷ್ಟ ಬಂದ ಮೇವು ಮೇಯಲು ಬಿಟ್ಟಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ಅವಳು ಅಷ್ಟು ಸುತ್ತಾಡಿ ಸುಸ್ತು ಮಾಡಿಕೊಳ್ಳದಿರಲೀ ಎಂಬ ಒಂದೇ ಉದ್ದೇಶಕ್ಕೆ ಮಡದಿ ಅವಳನ್ನು ಉದ್ದದ ಹಗ್ಗಕ್ಕೆ ಕಟ್ಟಿ ಹೋಗಿದ್ದಾಳೆ. ಹಗ್ಗದೊಂದಿಗೆ ಮೇಯ್ದು ಅಭ್ಯಾಸವಿಲ್ಲದ ಚಿನ್ನು ಮೇಯುತ್ತಾ ಮೇಯುತ್ತಾ ಅದೇ ಹಗ್ಗವನ್ನು ಕೊಂಬು ಮತ್ತು ಕಾಲುಗಳ ನಡುವೆ ಸಿಗಿಸಿಕೊಂಡು ಬಿಟ್ಟಿದ್ದಾಳೆ.
ಬಿಡಿಸಿಕೊಳ್ಳೋ ಆತುರದಲ್ಲಿ ಹಗ್ಗ ಮತ್ತಷ್ಟೂ ಅವಳ ಕಾಲುಗಳಿಗೆ ಸುತ್ತಿಕೊಂಡು ಬಿಟ್ಟಿದೆ. ಅವಳ ಮೈ ಬಾರ ತಡೆಯಲಾರದೇ ಅವಳು ನೆಲಕ್ಕೆ ಬಿದ್ದು ಕಾಲು ಜಾಡಿಸುತ್ತಾ ಜೋರು ಶಬ್ಧ ಮಾಡಲತ್ತಿದ್ದಾಳೆ. ಅವಳ ಹೊರಳಾಟ, ಹೂಂಕಾರ ಕೇಳಿದ ಪಕ್ಕದ ತೋಟದ ಹುಡುಗರು ನಮ್ಮ ಮುಳ್ಳು ಬೇಲಿ ಹಾರಿ ಒಳಬಂದು ನೋಡುವುದರೊಳಗೆ ಅವಳ ಕುತ್ತಿಗೆಗೂ ಹಗ್ಗ ಸುತ್ತಿ ಚಿನ್ನು ಕೊನೆಯ ಉಸಿರಿನ ಹಂತಕ್ಕೆ ಬಂದಿದ್ದಾಳೆ. ಚಿನ್ನುವಿನ ಅದೃಷ್ಟಕ್ಕೆ ತಕ್ಷಣ ಆ ಹುಡುಗರು ಕೈಲಿದ್ದ ಕುಡುಗೋಲಿಂದ ಅವಳ ಸಾವಾಗಿ ಬಂದಿದ್ದ ಹಗ್ಗಗಳನ್ನು ಕತ್ತರಿಸಿ ಬಿಸಾಡಿದ್ದಾರೆ. ಅಷ್ಟರಲ್ಲಾಗಲೇ ಅವಳ ಹೊಟ್ಟೆ ನೆಲದಲ್ಲಿದ್ದ ದಪ್ಪ ಕಲ್ಲುಗಳಿಗೆ ತಗಲಿ ತೂತೂ ಬಿದ್ದಿದೆ, ತೊಡೆ ಹರಿದಿದೆ. ಹುಡುಗರು ಪಕ್ಕದ ಮನೆಗಳ ಹೆಂಗಸರನ್ನ ಸೇರಿಸಿ ಚಿನ್ನುಳಿಗೆ ನೀರು ಕುಡಿಸಿ, ಅವಳ ಗಾಯಕ್ಕೆ ಹರಿಶಿನದ ಪುಡಿ ಕಟ್ಟಿ, ಸುದಾರಿಸಿದ್ದಾರೆ. ಅಷ್ಟರಲ್ಲಿ ಉಸಿರುಗಟ್ಟಿ ಇವಳೂ ಹೋಗಿದ್ದಾಳೆ.

****

(ಭಾಗ 2 ಮುಂದುವರಿದಿದ್ದು)

ಅಂದಿನಿಂದ ಮಡದಿ ಬೆಳಗ್ಗೆ ಎದ್ದರೆ ಸಾಯಂಕಾಲವಾದರೆ ತಪ್ಪದೇ ಮಾಡುವ ಫೋನ್ ಕರೆಗಳಲ್ಲಿ ಚಿನ್ನುವಿನ ಗಾಯದ ಬಗ್ಗೆ, ಅದು ವಾಸಿಯಾಗುತ್ತಿರೋ ಸೂಚನೆಗಳ ಬಗ್ಗೆ ನನಗೆ ಸವಿವರ ವರದಿ ನೀಡತೊಡಗಿದ್ದಳು. ಮದ್ಯೆ ಮದ್ಯೆ ನನ್ನ ಗೆಳೆಯರಾದ ಇಬ್ಬರು ಪಶು ವೈದ್ಯರುಗಳ ಭೆಟಿಯನ್ನೂ ಪೋನಾಯಿಸಿ ಏರ್ಪಡಿಸಿದ್ದೆ. ಊರಲ್ಲಿ ಕೆಲವೇ ಕ್ಷಣಗಳಿಗೆ ಹಬ್ಬಿಬಿಡುವ ಈ ರೀತಿಯ ಸುದ್ದಿಗಳ ಸುಳಿವಿನಿಂದ ನಮ್ಮ ಮನೆಗೆ ಹುಡುಕಿಬಂದ ನಮ್ಮೂರ ಜನರು ನನ್ನ ಮಡದಿಗೆ ತಿಳಿಸಿ ಹೋದ ನಾಟೀ ವೈದ್ಯಗಳನ್ನೂ ಅವಳು ಮಾಡುವುದು ಬಿಟ್ಟಿರಲಿಲ್ಲ. ಅಂತೂ ಇಂತೂ ಎರಡು ವಾರಗಳಲ್ಲಿ ಚಿನ್ನು ಹೊಟ್ಟೆ ಮೇಲೆ ರಕ್ತ ಬರುವಂತ ಗಾಯವಾಗಿದ್ದು, ತೊಡೆಮೇಲೆ ಮಾಂಸ ಕಾಣುವಂತೆ ಕಿತ್ತುಕೊಂಡಿದ್ದ ಗಾಯಗಳೆಲ್ಲಾ ಮಾಯುತ್ತಿರುವ ಸಮಾಧಾನದ ಸುದ್ದಿ ಕೊಟ್ಟಿದ್ದಳು.
ಮಲೆನಾಡಿನಲ್ಲಿ ಬಿಡದೆ ಸುರಿಯುವ ಮಳೆಯಂತೆ ಬರುತ್ತಿದ್ದ ಈ ವರ್ಷದ ಮಳೆಗೆ ಹೆದರಿ ಚಿನ್ನುಳನ್ನು ಅವಳ ಗಾಯ ಮಾಯುವ ಸಲುವಾಗಿ ಕೊಟ್ಟಿಗೆಯಲ್ಲೇ ಕಟ್ಟಿ ನನ್ನ ಮಡದಿ ಆರೈಕೆ ಮಾಡಿ ಅಂತೂ ಕೊನೆಗೆ ಅವಳ ಗುರಿ ಸಾಧಿಸಿದ್ದಳು.ಚಿನ್ನುಳ ಗಾಯ ಮಾದಿದ್ದಕ್ಕೇನೋ ಎಲ್ಲರೂ ತುಂಬಾ ಖುಷಿಗೊಂಡಿದ್ದೆವು. ಆದರೆ ನನ್ನ ಮತ್ತು ಅವಳ ಮನದ ಮೂಲೆಯಲ್ಲೆಲ್ಲೋ ಯಾರಿಗೂ ಹೇಳಿಕೊಂಡಿರದ ಒಂದು ಸಂಕಟ ಗುಂಗೆ ಹುಳುವಿನಂತೆ ಕೊರೆಯುತಲಿತ್ತು.
ಅಂದು ಚಿನ್ನು ಬಿದ್ದು ಹೊರಳಾಡಿದಾಗ ಎಲ್ಲಾದರೂ ಅವಳ ಹೊಟ್ಟೆಯಲ್ಲಿ ಕಣ್ಮುಚ್ಚಿ ಕುಳಿತಿದ್ದ ಅವಳ ಕರುವಿನ ಜೀವವೇನಾದರೂ ಈ ಅಘಾತಕ್ಕೆ ಶಾಶ್ವತವಾಗಿ ಕಣ್ಣು ಮುಚ್ಚಿ ಬಿಟ್ಟಿದ್ದಿದ್ದರೆ? ಎಂಬ ನಮ್ಮಿಬ್ಬರೊಳಗಿನ ಸಂಕಟ ನಮಗೆ ಮಾತ್ರಾ ಗೊತ್ತಿತ್ತು. ಮನೆಯವರಿಗೆ ಹೆಚ್ಚು ತಿಳಿಸದೇ ನನ್ನ ಇಬ್ಬರೂ ಪಶುವೈದ್ಯ ಗೆಳೆಯರಲ್ಲಿ ವಿನಂತಿಸಿಕೊಂಡಿದ್ದೇನೆಂದರೆ ನನಗೆ ಇಬ್ಬರ ಜೀವವೂ ಮುಖ್ಯ. ಇಬ್ಬರನ್ನೂ ಉಳಿಸಿಕೊಡಿ ಅಂತಾ ಬೇಡಿಕೊಂಡಿದ್ದೆ. ಇಬ್ಬರೂ “ಪರವಾಗಿಲ್ಲ, ಆ ರೀತಿಯ ಸೂಚನೆ ಗಳೇನೂ ಕಾಣೂತ್ತಿಲ್ಲಾ, ಇಂಟೆರ್ನಲ್ ಬ್ಲೀಡಿಂಗ್ ಕೂಡಾ ಇಲ್ಲಾ ನಥಿಂಗ್ ಟು ವರೀ” ಎಂದಿದ್ದರು.

***

ಮಡದಿ ಅವಳ ಆರೈಕೆಯನ್ನು ಚಾಚೂ ತಪ್ಪದೇ ಪಾಲಿಸುತ್ತಾ, ಚಿನ್ನುವಿಗೆ ಯಾವ ಆಹಾರ ಎಷ್ಟು ಕೊಡಬೇಕು, ಯಾವರೀತಿಯ ಹುಲ್ಲು ಕೊಡಬೇಕು ಎಂಬೆಲ್ಲಾ ಕಾಳಜಿ, ಜಾಗರೂಕತೆಗಳೊಂದಿಗೆ ಸಾಕುತ್ತಿರಲು. ಚಿನ್ನುವಿನ ದಿನ ತುಂಬಿ ಬಂದಿತ್ತು. ಅವಳ ನಡೆಯಲ್ಲಿ, ಊಟ ನೀರಡಿಕೆಗಳ ಬಯಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಹತ್ತಿತ್ತು. ನನಗೆ ಮಡದಿ ಇವತ್ತು ಇಲ್ಲಾ ತಪ್ಪಿದರೆ ನಾಳೆ ಚಿನ್ನು ಈಯ್ದುಕೊಳ್ಳಬಹುದು ಎಂದಿದ್ದಳು.
ಅದೇ ಸಮಯಕ್ಕೆ ನಮ್ಮ ಮಕ್ಕಳಿಗೆ ದಸರಾ ರಜ ಘೋಷಣೆಯಾಗಿತ್ತು. ಅವರ ಬಹು ದಿನದ ಕನಸಾದ ಉತ್ತರ ಕರ್ನಾಟಕದ / ಕನ್ನಡದ ಕೆಲವು ದರ್ಶನೀಯ ಸ್ಥಳಗಳನ್ನು ಕುಟುಂಬ ಮತ್ತು ದೂರದ ದುಬೈನ ಗೆಳೆಯನ ಕುಟುಂಬದ ಸಮೇತರಾಗಿ ನೋಡುವ ಕನಸಿನ ಗಾಡಿಯೇರಿ ಕುಳಿತಿದ್ದರು. ದಿನ ಬೆಳಗಾದರೆ ಮಕ್ಕಳು ಅವರ ಪಯಣದ ವಿವರ ಯಾವ ಯಾವ ಊರಿಗೆ ಯಾವಯಾವತ್ತು ಹೋಗುವುದೆಂಬ ವಿವರ ನನ್ನೊಡನೆ ಚರ್ಚಿಸಿ ಅವರ ಆಸೆ ಪೂರೈಸಿಕೊಳ್ಳುತ್ತಿದ್ದರು. ನನಗೂ ಮತ್ತು ನನ್ನ ಮಡದಿಗೂ ಚಿನ್ನು ಯಾವಾಗ ಕರು ಹಾಕುವಳೋ ಎಂಬ ಧ್ಯಾನ. ಇವರ ಟೂರಿನ ಖುಷಿಯ ಮದ್ಯೆ ನಮಗೆ ಕುತೂಹಲವಿದ್ದಿದ್ದು ಚಿನ್ನು ಈಯುವ ಕರು ಗಂಡೋ ಅಥವಾ ಹೆಣ್ಣೋ ಎಂಬುದಲ್ಲಾ! ಅದು ಈ ಜನ್ಮಕ್ಕೆ ಬದುಕಿ ಬರುತ್ತಾ ಎಂಬುದಷ್ಟೇ ಆಗಿತ್ತು!

***

ಆ ದಿನವೂ ಬಂತು. ಬೆಳ್ಳಂಬೆಳಗ್ಗೆ ನಾನಿನ್ನೂ ಮಲಗಿದ್ದೆ. ಪಕ್ಕದಲ್ಲೇ ಇದ್ದ ಆ ಪೋನ್ ರಿಂಗಣಿಸಿತು. ಕಣ್ಣು ಬಿಡದೇ ಹಾಗೇ ಕಿವಿಗೆ ಹಿಡಿದರೆ ಕಿರಿಯ ಮಗನ “ಅಪ್ಪಾ ಅಪ್ಪಾ ಅಪ್ಪಾ” ಎಂಬ ಆವೇಗದ ಮಾತು ಕೇಳಿಸಿತು. ಅವನು ಟೂರಿನ ಬಗ್ಗೆ ಎಷ್ಟು ಹಚ್ಚಿಕೊಂಡಿದ್ದಾನೆ, ಇನ್ನೂ ಬೆಳಗ್ಗೆ ಬೆಳಗ್ಗೆಯೇ ಕರೆಮಾಡಿದ್ದಾನಲ್ಲಾ, ಎಂಬ ಅಸಹನೆಯಿಂದಲೇ “ಹೇಳಪ್ಪಾ ನಿನ್ನ ಟೂರಿನ ಕತೆ” ಎಂದೆ. “ಅಯ್ಯೋ ಅಪ್ಪಾ ಅದಲ್ಲಾ ಕಣಪ್ಪಾ ಚಿನ್ನು ಕರು ಈಯುತ್ತಿದ್ದಾಳೆ ಕಣಪ್ಪಾ! ಅಂದ ಅವನ ಮಾತಿಗೆ ಒಮ್ಮಲೇ ದಡಕ್ಕನೇ ಎದ್ದು ಕುಳಿತೆ. ಅವನ ಲೈವ್ ಕಾಮೆಂಟರಿ ಶುರುವಾಗಿತ್ತು. ಕೇಳುತ್ತಾ ಹೋದೆ.
“ಅಪ್ಪಾ ಅಪ್ಪಾ ಸಣ್ಣ ಸಣ್ಣ ಕಾಲು ಆಚೆ ಬಂತೂ ಕಣಪ್ಪಾ. ವಾಹ್ ಅದರ ಕಾಲ ತುದಿ ಹರಿಶಿನದ ಬಣ್ಣ ಕಣಪ್ಪಾ! ಅದರ ಮೂತಿನೋ ಬಾಲನೋ ಗೊತ್ತಾಗ್ತಾ ಇಲ್ಲಾ ಕಣಪ್ಪಾ ಒಟ್ಟು ಕಪ್ಪು ಬಣ್ಣದ್ದು ಈಚೆ ಬರ್ತಿದೆ. ಓ ಅದು ಅದರ ಮೂತಿ ಕಣಪ್ಪಾ. ಕಣ್ಣು ಬಾಯಿ ಕಿವಿ ಎಲ್ಲಾ ಕಾಣಿಸ್ತು” ಅಂತಿದ್ದವನನ್ನು ನಿಲ್ಲಿಸಿ “ಅಲ್ಲಿ ಯಾರಿದ್ದಾರೆ ಮತ್ತೆ ಅಮ್ಮನ ಕೈಲಿ ಪೋನ್ ಕೊಡು” ಅಂದೆ. “ಅದೆಲ್ಲಾ ಆಗಲ್ಲಾ ಕಣಪ್ಪಾ ಯಾರೋ ಡೈರಿಯ ಡಾಕ್ಟರ್ ಅಂಕಲ್ ಬಂದಿದ್ದಾರೆ ಅವರೇ ಚಿನ್ನುಗೆ ಹೆರಿಗೆ ಮಾಡಿಸ್ತಿರೋದು. ಅಮ್ಮ ದೂರದಲ್ಲಿ ಇದೆ. ನಾನು ಮತ್ತೆ ನಕ್ಷತ್ರ ಇಬ್ಬರೂ ಮರ ಹತ್ತಿ ಕುಳಿತಿದ್ದೀನಿ ಕಣಪ್ಪಾ ಇಳಿದರೆ ಅಮ್ಮ ಬೈಯುತ್ತೆ” ಅಂದ.
“ಸರೀ ನೀನೇ ಕಾಮೆಂಟ್ರಿ ಮುಂದುವರಿಸು” ಎಂದೆ. “ಓ ಅದರ ಮೈ ಈಚೆ ಬಂತೂ, ಅದರ ಹಿಂಗಾಲು ಸಮೇತ ಆ ಹಾಲಿನ ಡೈರಿಯ ಅಂಕಲ್ ಕರೂನ ಹಿಡಿದುಕೊಂಡಿದ್ದಾರಪ್ಪಾ, ಚಿನ್ನು ಅದರ ಮೈಯೆಲ್ಲಾ ಮೂಸಿ ಮೂಸಿ ನೋಡ್ತಿದ್ದಾಳೆ. ಈಗ ಕರೂನ ಗೋಣೀ ಚೀಲದ ಮೇಲೆ ಮಲಗಿಸಿಬಿಟ್ಟರಪ್ಪಾ, ಅದು ಕಾಲ ಮೇಲೆ ನಿಲ್ಲೋಕೆ ಆಗ್ತಿಲ್ಲಾ ಕಣಪ್ಪಾ ಪಾಪದ್ದು” ಅಂದ. “ಸರೀ ಮೊದಲು ಹುಶಾರಾಗಿ ಮರ ಇಳಿದು ಅಮ್ಮನಿಗೆ ಪೋನ್ ಕೊಡು” ಎಂದೆ. “ಆಯ್ತು ಕಣಪ್ಪಾ ಬಟ್ ವ್ಯೈಟ್ ಮಾಡಪ್ಪಾ ತುಂಬಾ ತುದಿಗೆ ಹತ್ತಿದ್ದೀನಿ ಸರೀಗೆ ಕಾಣಲ್ಲಾಂತ” ಅಂದವನನ್ನು ಮನಸ್ಸಿನಲ್ಲೇ ಬೈಕೊಳ್ಳುತ್ತಾ ಅವಳು ಮಾತನಾಡುವುದನ್ನೇ ಕಾಯುತ್ತಿದ್ದೆ. “ತಗೋಳಮ್ಮಾ ಅಪ್ಪಾ ಲೈನಲ್ಲಿದ್ದಾರೆ” ಎಂದ ಅವನ ಮಾತಿಗೆ ಬೆರಗಾದ ಅವಳು “ಓ ಮೈ ಗಾಡ್ ನೀನು ಮೊಬೈಲ್ ತೊಗೊಂಡು ಎಲ್ಲಿಗೆ ಹೋಗಿದ್ದೆ ಕೋತಿ, ನಾನು ಆವಾಗ್ಲಿಂದಾ ಹುಡುಕ್ತಿದ್ದೀನಿ ಅಪ್ಪನಿಗೆ ಫೋನ್ ಮಾಡೋಣಾ ಅಂತಾ” ಅಂದಿದ್ದು ಕೇಳಿತ್ತು.
ಫೋನ್ ಕೈಗೆ ಸಿಗುತ್ತಲೇ ಅವಳ ಖುಷಿಗೆ ಪಾರವೇ ಇಲ್ಲದೇ “ಬಾಬೂ ಕರು ಜೀವಂತ ಹುಟ್ಟಿದೆ, ನನ್ನ ಹರಕೆ ಫಲಿಸಿದೆ. ದಬ್ಬೇಘಟ್ಟದ ಕೆಂಪಮ್ಮನಿಗೆ ಹರಕೆ ಹೊರು, ಎಲ್ಲಾ ಸಲೀಸಾಗುತ್ತೆ ಅಂತಾ ಅವತ್ತು ಮಡಿವಾಳರ ಕೆಂಪಕ್ಕ, ಕುಂಬಾರ್ರ ದೊಡ್ಡಮ್ಮಜ್ಜಿ, ಜಯಣ್ಣಾರ ಬಸಮ್ಮ ಎಲ್ಲಾ ಸಜೆಸ್ಟ್ ಮಾಡಿದ್ರು. ನಾನೂ ಅವತ್ತು ಸದ್ಯ ಚಿನ್ನು ಉಳಿದರೆ ಸಾಕು ಅಂತಾ ಅವರು ಹೇಳಿದಂತೆಯೇ ಮನಸ್ಸಿನಲ್ಲೇ ಅಂದು ಕೊಂಡು, ಚಿನ್ನು ಮತ್ತು ಕರು ಜೀವ ಉಳಿಸಿಕೊಟ್ಟರೆ ಆ ಕರು ಅವಳಿಗೇ ಬಸವಿ ಬಿಡುತ್ತೇನೆ ಅಂತಾ ಹರಕೆ ಹೊತ್ತಿದ್ದೆ. ಕೊನೆಗೂ ದೇವರು ನಮ್ಮ ಕಡೆ ಇದ್ದಳು ಅಂತಾ ಸಾಕ್ಷಿ ಸಿಕ್ತಲ್ಲಾ. ಇಬ್ಬರೂ ಸೇಫಾಗಿದ್ದರೆ ಬಾಬೂ” ಅಂದು ಮಾತು ಮುಗಿಸಿದವಳಿಗೆ ನಾನು ಈಗ ತಾನೇ ಚಿಗುರೊಡೆದ ಕೊನೆಯ ಪ್ರಶ್ನೆ ಕೇಳುವವನಿದ್ದೆ.
ನಮ್ಮ ಮನೆಯ ಮೊಬೈಲು ಲೌಡ್ ಸ್ಪೀಕರ್ ಆನ್ ಇರೋದ್ರಿಂದಾ ನನ್ನಿಬ್ಬರೂ ಮಕ್ಕಳೂ ಜಗಳಾಡಿಕೊಂಡು ಅಮ್ಮನ ಬಳಿಗೆ ಬರುತ್ತಿದ್ದು ಕೆಳಿಸಿತ್ತು. ಮೊದಲನೆಯವನು “ನಾನು ಹೇಳಿದ್ದು, ಹೆಣ್ಣು ಕರು ಈಯ್ತಾಳೆ ಅಂತಾ! ನೀನು ತಾನೆ ಹೇಳೀದ್ದು ಗಂಡು ಕರು ಈಯುತ್ತಾಳೆ ಅಂತಾ. ನೋಡೀಗ ನನ್ನ ಗೆಸ್ಸೆ ಕರೆಕ್ಟು”. ಅಂದದ್ದು ಕೇಳಿಸಿಕೊಂಡಿದ್ದ ಅವಳು ನೀನೇ ಕೇಳಪ್ಪಾ ನಿನ್ನ ಮುಂದಿನ ಪ್ರಶ್ನೆ ನಿನ್ನ ಮಕ್ಕಳೇ ಎಲ್ಲಾ ರೀಸರ್ಚ್ ಮಾಡಿಬಂದಿರೋರಥರಾ ಆಡ್ತಿದ್ದಾರೆ ಅಂದು ಮಕ್ಕಳ ಕೈಗೆ ಕೊಟ್ಟಳು. ಕೊನೆಯವನು ಹೇಳಿದ ಮಾತು ಕೇಳಿ ಹಾಲು ಸಕ್ಕರೆ ಕುಡಿದಂತಾಯ್ತು. ಅವಳು ಕೊನೆಗೂ ದೆಬ್ಬೇಘಟ್ಟದ ಕೆಂಪಮ್ಮನ ನೆಚ್ಚಿನ ಬಸವಿಯೇ ಆಗಿದ್ದಳು.

***

ಮುಂದಿನ ಮಾತು ಕಥೆಯೆಲ್ಲಾ ನಮ್ಮ ಮನೆಗೆ ಬಂದ ಹೊಸ ಹುಡುಗಿಗೆ ಯಾವ ಸೂಕ್ತ ಹೆಸರಿಡಬೇಕೆಂಬುದೇ ಆಗಿತ್ತು. ನಾನು ಇಬ್ಬರೂ ಮಕ್ಕಳನ್ನು ಕೇಳಿದೆ ಯಾವ ಹೆಸರು ಇಟ್ಟರೆ ಚೆಂದ ಅಂತಾ. ಮೊದಲನೆಯವನು ಹೇಳಿದ “ಅಪ್ಪಾ ಈ ಕರು ಬ್ರೌನ್ ಕಲರ್ ಇದೆ ಹಗಾಗಿ ಇವಳಿಗೆ “ಬ್ರೌನೀ” ಅಂದ್ರೆ ಹೇಗೆ” ಅಂದ. ಎರಡನೆಯವನು “ಅಪ್ಪಾ ಇದು ಎಚ್ ಎಫ್ ತಳಿ ಅಲ್ಲವಂತೆ, ಜೆರ್ಸೀ ತಳಿಯಂತೆ ಹಾಗಾಗಿ ಇವಳಿಗೆ “ಜೆರ್ಸೀ” ಅಂತಾನೇ ಇಟ್ಟರೆ ಹೇಗೆ” ಅಂದ. ನನಗೇಕೋ ಇಬ್ಬರು ಸೂಚಿಸಿದ ಹಸರುಗಳೂ ಸರೀ ಅನ್ನಿಸಲಿಲ್ಲಾ.
ಅವರಿಗೆ ಹೇಳಿದೆ “ಈಗ ಯಾವ ಹಬ್ಬ ಹತ್ತಿರ ಇದೆಯೋ ಅದರ ಹೆಸರು ಇಟ್ಟರೆ ಹೇಗೆ? ಎಂದೆ. “ವಾವ್ ಸೂಪರ್ ಅಂಡ್ ಸಿಂಪಲ್ ಐಡಿಯಾ ಕಣಪ್ಪಾ ನಿಂದೂ” ಅಂದರು ಮಕ್ಕಳಿಬ್ಬರೂ. ಎಣಿಸಿದರೆ ಕೆಲವೇ ಘಂಟೆಗಳಷ್ಟೇ ಬಾಕಿಯಿದ್ದ ಗೌರಿ ಗಣೇಶನ ಹಬ್ಬಕ್ಕೆ ಮುನ್ನ ನಮ್ಮ ಮನೆಗೆ, ಮನಸ್ಸಿಗೆ ಮತ್ತು ಚಿನ್ನುವಿಗೂ ಹೊಸ ಜನ್ಮವಿತ್ತು ಬಂದಿಳಿದ ಈ ಚೈತನ್ಯದಾಯಿನಿಗೆ, ಜೀವದಾಯಿನಿಗೆ “ಗೌರಿ”ಎಂಬ ಹೆಸರಲ್ಲದೇ ಇನ್ನಾವ ಹೆಸರೂ ಸೂಕ್ತವೆನ್ನಿಸಲಿಲ್ಲಾ.
ನಮ್ಮ ಮನೆಯ ವರಾಂಡದಲ್ಲಿರುವ ಪೋಟೋವೊಂದರಲ್ಲಿ ಕಣ್ಣುಮುಚ್ಚಿ ಹಿಮಾಲಯದ ಬಳಿ ಧ್ಯಾನಸ್ಥನಾದ ಜಗದೀಶನ ತೊಡೆಯೇರಿ ಕುಳಿತಿರುವ ಗೌರಿ, ಅವನ ತಲೆಯೇರಿ ಕುಳಿತಿರುವ ಗಂಗೆಯ ಚಿತ್ರಣ ಹಾಯ್ದು ಹೋಯ್ತು.ಮನದ ಮೂಲೆಯಲ್ಲೀ, ಯಾಕೋ, ಗೌರಿ, ಗಂಗೆ ಮತ್ತು ಜಗದೀಶ ಎಂಬ ಆ ಮುಕ್ಕಣ್ಣನ ಸಂಸಾರ ನೆನಪಾಗಿದ್ದು ಸುಳ್ಳಲ್ಲಾ. ಯಾಕಂತಾ ಗೊತ್ತಿಲ್ಲಾ!
ಮಕ್ಕಳು ಜೋರಾಗಿ “ವಾವ್ she is our cute ಗೌರೀ ಗೌರೀ” ಎಂದು ಕೂಗುತ್ತಾ ಅವಳನ್ನು ಕ್ಲೀನ್ ಮಾಡುತ್ತಿದ್ದ ಡಾಕ್ಟರ್ ಗೆಳೆಯನ ಬಳಿಗೆ ಓಡಿದ್ದು ಮೊಬೈಲಲ್ಲೇ ಗೊತ್ತಾಯ್ತು.
 
 

‍ಲೇಖಕರು G

November 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: