ಎಲ್ಲವೂ ಒಂದೇ
ಆರ್ ವಿಜಯರಾಘವನ್
ಪ್ರೀತಿ ಮೂಡುವುದೆಂತು ಇಬ್ಬರ ನಡುವೆ, ಹೇಳುವುದು ನಮ್ಮಳವಲ್ಲ
ಪ್ರವಾದಿಯ ಕರುಣೆ ಎಲ್ಲರ ಮೇಲೆ, ಮುಸಲ್ಮಾನರ ಮೇಲೆಯೇ ಅಲ್ಲ
ಮಹಮ್ಮದರ ಕುರಿತು ಹಾಡುವುದಕ್ಕೆ ನಿನಗೆ ಮತವೇಕೆ ಬೇಕು
ಹಾಗೆ ಹಾಡುವುದಕ್ಕೆ, ನೀನು ಮುಸಲ್ಮಾನನೇ ಏಕಾಗಿರಬೇಕು
ಮಧುಪಾತ್ರೆಗಳೆಲ್ಲ ತುಳುಕುತ್ತಿವೆ ನಿನ್ನ ಒಲವಿನ ಮಧು ತುಂಬಿ
ಎಲ್ಲ ಮಧುವೂ ಉನ್ಮತ್ತವಾಗಿಹವು ನಿನ್ನ ಮಾದಕ ಕಣ್ನೋಟ ತುಂಬಿ
ನನ್ನ ಪ್ರಿಯಕರನ ಪ್ರೇಮದ ಅತಿಶಯವು ಎಲ್ಲೆಡೆಯು ತುಂಬಿ
ಅದು ಮೋಸೆಗೆ ಪರ್ವತದ ಮೇಲೆ ತೆರೆದಂತೆ ಅವನ ಕರುಣೆ
ತನ್ನ ತಾ ಕಾಣುವ ಬಯಕೆಯಿಂದ ಅವನು ತಾನೇ ಎಲ್ಲವೂ ಆಗಿಹೋದ
ಸಂತಸದಿಂದ ಹೂಗಳ ಮೊಗದಲ್ಲಿ ನಕ್ಕ, ಕೋಗಿಲೆ ಹಾಡಿದ ದನಿಯಾದ
ಒಲವಿನ ಮಾತಿಗೆ ಬಂದೆ, ಷೇಖನೂ ಬ್ರಾಹ್ಮಣನೂ ಒಂದೇ
ಜನಿವಾರವಾದರೇನು, ಜಪಮಣಿಯಾದರೇನು, ಉದ್ದೇಶವೊಂದೇ
ಹೂಮಾಲೆಗೂ ಜನಿವಾರಕ್ಕೂ ನಡುವಣ ವಿವಾದದ ಮಧ್ಯ ಪ್ರವೇಶ ಮಾಡಬೇಡ
ಅವುಗಳಿಗೆ ಕಾಲಾನುಕಾಲದ ಸಂಬಂಧವುಂಟು, ಅವೆರಡೂ ಒಂದೇ
ಮೀರನ ಕುಲವಾವುದೆಂದು ಕೇಳಬೇಡ, ಅವನು ನಾಮವ ಧರಿಸಿದ್ದಾನೆ
ಹಿಂದೂ ದೇಗುಲದಲ್ಲಿ ಜಪಿಸಿದ್ದಾನೆ, ಇಸ್ಲಾಮನ್ನು ತೊರೆದುಬಿಟ್ಟಿದ್ದಾನೆ
ನನ್ನ ಹೃದಯ ಸೋತುದು ಯಾವ ಹೆರಳಿಗೆ ಅರಿಯೆ ನಾನು
ಯಾವ ಕಂಗಳು ಹರಿದು ಕಿತ್ತವೆನ್ನ ಹೃದಯವನು ಅರಿಯೆ ನಾನು
ಅರಳಿದೆಲ್ಲ ಅಲರು ಬೀರುತ್ತಿವೆ ನಿನ್ನ ಸುಗಂಧವನ್ನು ಆದರೂ
ಅರಳಿದೆಲ್ಲ ಅಲರು ಹೊತ್ತಿರುವುದು ನಿನ್ನ ಬಣ್ಣವನ್ನು, ಆದರೂ
ನಿನ್ನ ಆಕಾರವನ್ನರಿಯೆ ನಾನು, ನಿನ್ನ ಗುಣಧರ್ಮಗಳನ್ನು
(ಇಂಡಿಯನ್ ಲಿಟರೇಚರ್ನಲ್ಲಿ ನಿಶಾತ್ ಜೈದಿಯ ಲೇಖನದಲ್ಲಿ ಉಧೃತ ಭಾಗಗಳ ಕನ್ನಡಾನುವಾದ)







ಸುಂದರ ಅನುವಾದಗಳ ಸಶಕ್ತ ಅರ್ಥದುಂಬಿದ ಆಳ. ಹೇಳಹೊರಟಿರುವ ಸಂದೇಶ ಮಾತಿನಷ್ಟೆ ನಿಚ್ಚಳ. ವಂದನೆಗಳು ಸರ್.
ಚೆನ್ನಾಗಿದೆ .
ಅಣ್ಣಾ ವಿಜಯಣ್ಣ! ಅನುವಾದ ಬಹಳ ಸೊಗಸಾಗಿದೆ. ಇದನ್ನು ಓದಿದ ನನಗೆ ಉಮರ್ ಖಯ್ಯಾಂನ “ರುಬಾಯತ್”ಗಳನ್ನು ಈ ನೆಪದಲ್ಲಿ ಮತ್ತೊಮ್ಮೆ ನೆನಪಿಸಿಕೊಂಡೆ. ಉತ್ತಮ ಅನುವಾದಕ್ಕಾಗಿ ನಿಮಗೆ ಅಭಿನಂದನೆಗಳು!!
ವಿಜಯ ರಾಘವನ್ ಅವರೇ ನಿಮ್ಮ ಗಜಲ್ ಓದಿ ಅನ್ನಿಸಿದ್ದು-ಭಕ್ತಿಕಾವ್ಯಕ್ಕೂ ಪ್ರೇಮಕಾವ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. (ಭಕ್ತಿ ಕಾವ್ಯ ಅದರಲ್ಲೂ ಹೆಣ್ಣುಮಕ್ಕಳಿಗೆ ನಿಜವಾದ ಒಂದು ಅಡಗುತಾಣ). ಎರಡರಲ್ಲೂ ಪ್ರೇಮ ಸಿಗದೇ ಇದ್ದಾಗ ಅದಕ್ಕಾಗಿ ಹಲುಬುವುದರಲ್ಲಿ, ಕೇವಲ longing ನಲ್ಲಿ ಮಾತ್ರ ಪ್ರೇಮ ಜೀವಂತ ವಾಗಿರುತ್ತದೆ. ಆತ್ಯಂತಿಕವಾಗಿ ಬಯಸಿದ ಚೆನ್ನ ಮಲ್ಲಿಕಾರ್ಜುನನೋ, ಗಿರಿಧರ ನಾಗರನೋ ಇಲ್ಲ ಯವುದೋ ಲೌಕಿಕ ಪ್ರೇಮಿಯೋ ಸಿಕ್ಕಿಬಿಟ್ಟ ಎಂದಿಟ್ಟುಕೊಳ್ಳಿ ಆಗ ಈ ಹಾಡುಗಳೆಲ್ಲ ನಿಂತು ಹೋಗುತ್ತವೆ, ಮಾಯವಾಗಿಬಿಡುತ್ತವೆ. ನಿಜವಾದ ಪ್ರೇಮ ಉಳಿಯುವುದು ಕೇವಲ ವಿರಹದಲ್ಲಿ ಮಾತ್ರ. ಪ್ರೇಮ ತನ್ನ ಗಮ್ಯವನ್ನು ತಲಪದೇ ಇರಬೇಕು,ಆಗ ಮಾತ್ರ ಹಾಡು ನಿರಂತರವಾಗಿ ಚಲಿಸುತ್ತಿರುತ್ತದೆ. ಚರಿತ್ರೆಯಲ್ಲಿ ನಮಗೆ ಕಾಣಸಿಗುವ ಪ್ರೇಮಿಗಳೆಲ್ಲಾ eternal ವಿರಹಿಗಳೇ, ಎಂದು ನನಗೆ ಅನ್ನಿಸುತ್ತದೆ.
ನಿಮ್ಮ ಅನುವಾದ ಸ್ವತಂತ್ರ ಕೃತಿಯಷ್ಟು ಸಹಜವಾಗಿದೆ. ಧನ್ಯವಾದಗಳು
ಕವನ ಅರ್ಥಗರ್ಭಿತವಾಗಿದೆ,ಅನುವಾದಗೊಂಡಿದೆ ಹಾಗು ಸಮಾಜಮುಖಿ ಕವನ
NARASIMHAMURTHY HALEHATTI
Kannada University, Hampi
sir kavanada anuvaada tumba chennagide, danyavaadagalu…..
very nice….sir thanks