‘ಮತ್ತೊಂದು ಪ್ಲೇಟ್ ಕತೆ ಪ್ಲೀಸ್’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಮೂಲೆಯೊಂದನ್ನು ಹಿಡಿದು, ತನ್ನ ಪಾಡಿಗಿದ್ದ ಸ್ಮಾರ್ಟ್‍ಫೋನಿನಲ್ಲಿ ವಾಟ್ಸಾಪ್ ಮೆಸೇಜಿನ ನೋಟಿಫಿಕೇಷನ್ ಠಣ್ ಎಂದಿತು.

ಅದೇನೆಂದು ತೆರೆದು ನೋಡಿದರೆ, ‘ನೀವು ದಿಲ್ಲಿಯಲ್ಲಿದ್ದೀರಿ ಅಂದ್ಕೋತೀನಿ… ಇದೆಲ್ಲಿದೆ?’, ಎಂಬ ಪುಟ್ಟ ಮೆಸೇಜು ಇನ್ಬಾಕ್ಸಿನಲ್ಲಿ ಬಂದು ಕೂತಿತ್ತು. ಆ ದಿನದ ವಾಟ್ಸಾಪ್ ಸ್ಟೇಟಸ್ ಆಗಿದ್ದ, ವಿಚಿತ್ರವಾಗಿ ಕಾಣುತ್ತಿದ್ದ ಆಹಾರದ ಚಿತ್ರವೊಂದಕ್ಕೆ ಬಂದಿದ್ದ ಸಂದೇಶವದು. ದಿಲ್ಲಿಯ ರೆಸ್ಟೊರೆಂಟ್ ಒಂದಕ್ಕೆ ನುಗ್ಗಿದ್ದ ನಾನು ಎಂದಿನಂತೆ ಹೊಸ ರುಚಿಯನ್ನು ಸವಿಯುವ ಪ್ರಯೋಗದಲ್ಲಿ ಲೆಬನೀಸ್ ಖಾದ್ಯವನ್ನು ತರಿಸಿದ್ದೆ. ಶಿವನ ತಲೆಯ ಮೇಲಿರುವ ಚಂದ್ರನ ಆಕಾರದಲ್ಲಿದ್ದ ಬಿಳಿಯ ತಟ್ಟೆಯೊಂದರಲ್ಲಿ ಲೆಬನೀಸ್ ಖಾದ್ಯವನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಲಾಗಿತ್ತು. ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಲೆಬನೀಸ್ ಖಾದ್ಯವೊಂದು ಪರಿಚಯವಾಗಿದ್ದು ಹೀಗೆ.

ದಿಲ್ಲಿಯಲ್ಲೇ ಇಂತಿಂಥಾ ರೆಸ್ಟೊರೆಂಟಿನಲ್ಲಿ ಬಂದು ಕೂತಿದ್ದೇನೆ ಎಂದು ಸಂದೇಶವನ್ನು ಕಳಿಸಿದ ನನ್ನ ಸಹೋದ್ಯೋಗಿ ಮಿತ್ರನಿಗೆ ಉತ್ತರಿಸಿದೆ. ನಾನು ಇಷ್ಟು ವರ್ಷ ದಿಲ್ಲಿಯಲ್ಲಿದ್ದರೂ ನನಗಿದು ಗೊತ್ತೇ ಇರಲಿಲ್ವಲ್ಲಾ ಮಾರಾಯ ಎಂದು ಆತ ಮರುದಿನ ಭೇಟಿಯಾದಾಗ ಉದ್ಗರಿಸಿದ. ದಿಲ್ಲಿಯ ಕುತುಬ್ ಮಿನಾರ್ ಕ್ಯಾಂಪಸ್ಸಿನಿಂದ ಕೊಂಚವೇ ದೂರದಲ್ಲಿ ಆತನ ಮನೆಯಿದೆ. ಆದರೆ ಸ್ವತಃ ಆವರಣದ ಒಳಹೊಕ್ಕು ಕುತುಬ್ ಮಿನಾರನ್ನು ಹತ್ತಿರದಿಂದ ನೋಡದೆ ಹದಿನೈದು ವರ್ಷಗಳು ಮಿಕ್ಕಿವೆ ಎಂದು ಬೇರೆ ಹೇಳುತ್ತಿದ್ದ.

ಅವನೇ ಹೇಳುವಂತೆ ಅವನಿಗೀಗ ದಿಲ್ಲಿಯ ಕುತುಬ್ ಮಿನಾರ್ ಅಚ್ಚರಿಯ ಸಂಗತಿಯಾಗಿ ಉಳಿದಿಲ್ಲ. ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋದರೆ ಅಥವಾ ಮೆಟ್ರೋದಲ್ಲಿ ಪ್ರಯಾಣಿಸಿದಾಗಲೆಲ್ಲಾ ಕುತುಬ್ ಮಿನಾರಿನ ಗಗನಚುಂಬಿ ಮಿನಾರು ಮೈಲುದೂರದಿಂದಲೇ ಕಾಣುತ್ತದೆ. ಪ್ರತಿನಿತ್ಯ ಕಾಣುವ ದೃಶ್ಯವು ಅದೆಂಥಾ ಅದ್ಭುತವಾಗಿದ್ದರೂ ತನ್ನ ಸೋಜಿಗವನ್ನು ಕಳೆದುಕೊಳ್ಳುವುದು ಸಹಜ. ಆತ ಹೇಳುವ ಪ್ರಕಾರ ದಿಲ್ಲಿಯ ನಿವಾಸಿಯಾಗಿ ಆತ ನೋಡಿರುವ ದಿಲ್ಲಿಗಿಂತ ಹೆಚ್ಚಾಗಿ, ಓರ್ವ ವಲಸಿಗನಾಗಿ ನಾನು ದಿಲ್ಲಿಯನ್ನು ಹೆಚ್ಚು ಹತ್ತಿರದಿಂದ ಕಂಡಿದ್ದೇನೆ.

ಇಂತಹ ಅನುಭವಗಳು ಮಂಗಳೂರಿನಲ್ಲಿದ್ದಾಗ ನನಗೆ ಸ್ವತಃ ಆಗಿದ್ದುಂಟು. ದೇಶದ ಹಲವು ಮೂಲೆಗಳಿಂದ ಎನ್.ಐ.ಟಿ.ಕೆ ವಿದ್ಯಾಸಂಸ್ಥೆಗೆ ಬಂದಿದ್ದ ನನ್ನ ಸಹಪಾಠಿಗಳು ನಾಲ್ಕು ವರ್ಷಗಳ ಎಂಜಿನಿಯರಿಂಗ್ ಅವಧಿಯಲ್ಲಿ ನಾನು ಕಂಡಿಲ್ಲದ ಮಂಗಳೂರನ್ನು ಸೊಗಸಾಗಿ ತಮ್ಮದಾಗಿಸಿಕೊಂಡಿದ್ದರು. ನನ್ನಂತಹ ಸ್ಥಳೀಯ ವ್ಯಕ್ತಿಯ ಪಾಲಿಗೆ ಅಸ್ತಿತ್ವದಲ್ಲೇ ಇರದಿದ್ದ ಶಹರದ ಹಲವು ಮೂಲೆಗಳು ಈ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿದಿದ್ದವು. ಕೆಲ ವರ್ಷಗಳ ಹಿಂದೆ ನನ್ನ ಹೊರರಾಜ್ಯದ ಸಹಪಾಠಿಗಳು ಕುಳಾಯಿಯಲ್ಲಿರುವ ‘ಚಿಂಟು ಕಾ ಢಾಬಾ’ ಎಂಬ ಹೆಸರು ತೆಗೆದಾಗಲೆಲ್ಲಾ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದೆ. ಢಾಬಾ ಎಂದರೇನೆಂದೂ ಅರಿವಿಲ್ಲದ ದಿನಗಳವು.  

ಹಿಂದಿಯಲ್ಲಿ ಇದಕ್ಕೊಂದು ಒಳ್ಳೆಯ ಮಾತಿದೆ. ಅದೇನೆಂದರೆ: ‘ಘರ್ ಕಾ ಮುರ್ಗಾ ದಾಲ್ ಬರಾಬರ್!’. ಇದನ್ನು ಯಥಾವತ್ತಾಗಿ ಕನ್ನಡಕ್ಕೆ ತರುವುದಾದರೆ ‘ಮನೆಯಲ್ಲಿ ಮಾಡಿರುವ ಕೋಳಿಸಾರೂ ಕೂಡ, ದಾಳಿಸಾರಿಗೆ ಸಮಾನ’ ಎಂಬ ಅರ್ಥ ಇದಕ್ಕಿದೆ. ಮನುಷ್ಯನಿಗೆ ತನ್ನ ಬಳಿಯಿರುವ ಸಂಗತಿಗಳ ಬಗ್ಗೆ ಅದೊಂದು ವಿಚಿತ್ರ ಬಗೆಯ ಅಸಡ್ಡೆಯಿರುತ್ತದೆ ಎಂಬುದನ್ನು ಕೊಂಚ ತಮಾಷೆಯ ಧಾಟಿಯಲ್ಲಿ ಹೇಳುವ ಮಾತಿದು. ಅಂದಹಾಗೆ ಕೋಳಿಸಾರನ್ನು ರುಚಿಯಾಗಿಸಿಯೂ ಮತ್ತು ದಾಳಿಸಾರನ್ನು ಸಪ್ಪೆಯಾಗಿಸಿಯೂ ಇವೆರಡರ ಮಧ್ಯೆ ಇಲ್ಲಿ ತಂದಿಟ್ಟಿದ್ದಾರೆ. ಈ ಗಾದೆಮಾತಿನ ಬಗ್ಗೆ ಬೇರೇನೂ ತಿಳಿಯದಿದ್ದರೂ ಇದರ ಸೃಷ್ಟಿಕರ್ತನು ಪಕ್ಕಾ ಮಾಂಸಾಹಾರಿಯಾಗಿದ್ದ ಎಂಬುದು ನನಗೆ ಖಚಿತವಿದೆ. ಈ ಬಗ್ಗೆ ಸಸ್ಯಾಹಾರಿಗಳದ್ದೂ, ದಾಳಿಸಾರಿನ ಅಭಿಮಾನಿಗಳದ್ದೂ ಕ್ಷಮೆಯಿರಲಿ.

ಹೀಗೆ ದಿಲ್ಲಿಯ ಆಹಾರಸಂಸ್ಕøತಿಯನ್ನು ನಮ್ಮಂತಹ ಹೊರಗಿನ ಕುತೂಹಲಿಗಳು ಹುಡುಕಿಕೊಂಡು ಹೋದಷ್ಟು, ಇಲ್ಲಿಯ ಸ್ಥಳೀಯರು ಅರಸಿಕೊಂಡು ಹೋಗುವುದು ಕಮ್ಮಿ. ಇಡೀ ದಿಲ್ಲಿಯಲ್ಲೇ ಅತ್ಯುತ್ತಮ ಎಂದು ಕರೆಯಬಹುದಾದ ಚಹಾ ಎಲ್ಲಿ ಸಿಗುತ್ತದೆ ಎಂದು ಕೇಳಿದರೆ ಮಜ್ನೂ ಕಾ ತಿಲಾ ಭಾಗದಲ್ಲಿ ಎಂದು ನಾನು ಖಡಾಖಂಡಿತವಾಗಿ ಹೇಳಬಲ್ಲೆ. ಈ ಕ್ಯಾಂಟೀನು ನಾನಿರುವ ಸ್ಥಳದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿದ್ದರೂ, ನಿರ್ದಿಷ್ಟವಾಗಿ ಚಹಾ ಸವಿಯಲೆಂದೇ ಅಲ್ಲಿಯವರೆಗೆ ಹೋಗುವುದು ವ್ಯರ್ಥಪ್ರಯತ್ನದ ಬಾಬತ್ತೇನಲ್ಲ.

ಈಗಿನ ದುಬಾರಿ ಕಾಲಮಾನಕ್ಕೆ ಏನೇನೂ ಅಲ್ಲವೆಂಬಂತಿನ ದರದಲ್ಲಿ ಅಲ್ಲಿ ಈ ಅದ್ಭುತ ಚಹಾ ಸಿಗುತ್ತದೆ. ಇದೊಂಥರಾ ರವಿ ಬೆಳೆಗೆರೆಯವರು ತಮ್ಮ ಕಾದಂಬರಿಯಲ್ಲಿ ಹೇಳುವ – ‘ಸಾಕ್ಷಾತ್ ದೇವತೆಗಳೇ ಮಾಡಿರುವ ಚಹಾದಂತೆ’ – ವರ್ಣನೆಗೆ ಮಾದರಿ! ಹೀಗಾಗಿ ಇಲ್ಲೆಲ್ಲಾ ಟೀ ಸವಿಯುವ ಹುಮ್ಮಸ್ಸಿನಲ್ಲಿ ಒಂದರ ಬದಲು ಎರಡು ಕಪ್ ಗಂಟಲಿಗಿಳಿಸಿದರೂ ಅಚ್ಚರಿಯೇನಿಲ್ಲ. ದಿಲ್ಲಿಯ ಅಂಬೇಡ್ಕರ್ ಮೆಮೋರಿಯಲ್ ಕೆಫೆಟೇರಿಯಾದಲ್ಲೂ ಈ ಬಗೆಯ ಸ್ಪೆಷಲ್ ಟೀ ಅನ್ನು ಸವಿಯಬಹುದು.   

ಈ ಕ್ಯಾಂಟೀನ್ ಪಕ್ಕದಲ್ಲೇ ಇರುವ ಪುಟ್ಟ ಜಾಗವೊಂದರಲ್ಲಿ ಓರ್ವ ಹೆಂಗಸು ಟಿಬೆಟ್ಟಿನ ಖಾದ್ಯಗಳಲ್ಲೊಂದಾದ ‘ಲಫಿಂಗ್’ ಅನ್ನು ಸಿದ್ಧಪಡಿಸುತ್ತಾರೆ. ಪ್ರಮುಖವಾಗಿ ಟಿಬೆಟಿಯನ್ನರೇ ತುಂಬಿರುವ ಈ ಜಾಗವು ಬುದ್ಧಮಂದಿರವಿರುವ, ಮಜ್ನೂ ಕಾ ತಿಲಾ ಪ್ರದೇಶದ ಹೃದಯಭಾಗದಲ್ಲಿರುವುದರಿಂದ ಇಲ್ಲಿ ಜನಸಂದಣಿಯೂ ಹೆಚ್ಚು. ಚೈನೀಸ್ ನೂಡಲ್ಲುಗಳ ಮಾದರಿಯಲ್ಲಿ, ಸ್ವಲ್ಪ ಖಾರವಾಗಿರುವ ಲಫಿಂಗ್ ಬಹುತೇಕರಿಗೆ ಇಷ್ಟವಾಗಬಲ್ಲ ಸಸ್ಯಾಹಾರಿ ಖಾದ್ಯ. ಲಫಿಂಗ್ ಮತ್ತು ಮೋಮೋಗಳ ತಲಾಶೆಯಲ್ಲಿ ಬರುವ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಹ್ಯಾಂಗೌಟ್ ಅಡ್ಡಾ ಕೂಡ ಹೌದು.  

ದಿಲ್ಲಿಯಲ್ಲಿ ಗಲ್ಲಿಗಳಷ್ಟೇ ಹೆಸರಾಗಿರುವ ಇನ್ನೊಂದು ಸಂಗತಿಯೆಂದರೆ ಇಲ್ಲಿಯ ಸ್ಟ್ರೀಟ್ ಫುಡ್ ಗಳು. ಬಹುಷಃ ದಿಲ್ಲಿಯ ರಸ್ತೆಬದಿಗಳಲ್ಲಿ ಸಿಗುವಷ್ಟು ಆಹಾರಗಳ ಅದ್ಭುತ ವೈವಿಧ್ಯವು ಭಾರತದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಉದಾಹರಣೆಗೆ ಹಳೇದಿಲ್ಲಿಯಲ್ಲಿರುವ ‘ಪರಾಠಾವಲೇ ಗಲಿ’ ಪರಾಠಾಗಳಿಗಾಗಿಯೇ ಹೆಸರಾಗಿರುವಂಥದ್ದು. ಇಲ್ಲಿ ಸಿಗುವ ರುಚಿಕರ ಪರಾಠಾಗಳ ಜನಪ್ರಿಯತೆಯೇ ಬೇರೆ. ಚಾಂದನೀ ಚೌಕ್ ಎಂಬ ಹೆಸರಿನಲ್ಲಿ ಕರೆಯಲಾಗುವ ಈ ಭಾಗವು ಏನಿಲ್ಲವೆಂದರೂ ಮುನ್ನೂರೈವತ್ತು ವರ್ಷಗಳಷ್ಟು ಹಳೆಯದ್ದು.

ದಿಲ್ಲಿಯ ಸ್ಟ್ರೀಟ್ ಫುಡ್ ಗಳಲ್ಲಿ ಪಕೋಡಾಗಳು ಮತ್ತು ಕಚೌರಿಗಳು ಹೆಚ್ಚು ಜನಪ್ರಿಯ. ಹಲವು ವಿಧಗಳಲ್ಲಿ ಇವುಗಳನ್ನು ಸಿದ್ಧಪಡಿಸಬಹುದಾದ ಪರಿಣಾಮವಾಗಿ ಇದರ ವೈವಿಧ್ಯಗಳೂ ಹೆಚ್ಚು. ಶಹರದ ಪಕೋಡಾ ವೈವಿಧ್ಯತೆಯು ಅದೆಷ್ಟರ ಮಟ್ಟಿಗಿದೆಯೆಂದರೆ ಐಸ್ ಕ್ರೀಂ ನಿಂದ ಮಾಡಲಾಗುವ ಪಕೋಡಾಗಳೂ ಇಲ್ಲಿ ಲಭ್ಯ. ದಿಲ್ಲಿಯ ಸ್ಟ್ರೀಟ್ ಫುಡ್ ವಿಭಾಗದಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಪೋಹಾ, ಛೋಲಾ ಬಟೂರಾ, ಛೋಲಾ ಕುಲ್ಛಾ, ಪರಾಠಾಗಳು ಮುಂಚೂಣಿಯಲ್ಲಿದ್ದರೆ, ಮಧ್ಯಾಹ್ನದ ಊಟಕ್ಕೆ ನಾನ್, ರೋಟಿ, ರಾಜ್ಮಾ ಚಾವಲ್, ಕಡೀ ಚಾವಲ್, ಛೋಲೇ ಚಾವಲ್ ಗಳು ಅಚ್ಚುಮೆಚ್ಚಿನ ಖಾದ್ಯಗಳಾಗಿವೆ. ಇವುಗಳು ಸಾಲದ್ದೆಂಬಂತೆ ದಕ್ಷಿಣಭಾರತದ ಇಡ್ಲಿವಡೆ-ದೋಸೆಗಳು, ರಾಜಸ್ಥಾನಿ ದಾಲ್ ಭಾಟಿ ಚೂರ್ಮಾ, ಚೀನಾ-ಟಿಬೆಟ್ ಮೂಲದ ಮೋಮೋ.. ಇತ್ಯಾದಿ ಖಾದ್ಯಗಳೂ ಕೂಡ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ವಿಶೇಷ.

ಇನ್ನು ಹಳೇದಿಲ್ಲಿ ಭಾಗಗಳಿಗೆ ಹೋದಲ್ಲಿ ಮಾಂಸಾಹಾರದಲ್ಲೂ ಅದ್ಭುತ ಅನಿಸುವಂತಹ ಸ್ಟ್ರೀಟ್ ಫುಡ್ ವೈವಿಧ್ಯಗಳನ್ನು ಕಾಣಬಹುದು. ವಿಶೇಷವಾಗಿ ನೂರಾರು ಬಗೆಯ ಮೀನುಗಳ ತರಹೇವಾರಿ ಖಾದ್ಯಗಳು ದೂರದಿಂದಲೇ ಇಲ್ಲಿ ಗ್ರಾಹಕರನ್ನು ಸೆಳೆಯುವುದು ಸಾಮಾನ್ಯ. ದಿಲ್ಲಿಯು ಲ್ಯಾಂಡ್ ಲಾಕ್ (ಸುತ್ತಲೂ ಭೂಭಾಗಗಳಿಂದಲೇ ಆವೃತವಾಗಿರುವ ಪ್ರದೇಶ) ಆಗಿರುವ ಹೊರತಾಗಿಯೂ ದೇಶದ ಕರಾವಳಿ ಪ್ರದೇಶಗಳಿಗೆ ಸರಿಸಮನಾಗುವಷ್ಟು ಲಭ್ಯವಿರುವ ಮೀನಿನ ಪ್ರಮಾಣವು ಇಲ್ಲಿಯ ಪ್ರಮುಖ ಅಚ್ಚರಿಗಳಲ್ಲೊಂದು.

ದಿಲ್ಲಿಯು ಕಾಸ್ಮೋಪಾಲಿಟನ್ ಆಗುತ್ತಾ ಹೋದಂತೆ ದೇಶದ ವಿವಿಧ ಪ್ರದೇಶಗಳ ಖಾದ್ಯಗಳೂ ಕೂಡ ಕ್ರಮೇಣ ಜನಪ್ರಿಯತೆಯನ್ನು ಗಳಿಸಲಾರಂಭಿಸಿದವು. ಇಂದು ದಿಲ್ಲಿರುವ ಆಯಾ ರಾಜ್ಯಗಳ ಭವನಗಳು ಅಥವಾ ಸಾಂಸ್ಕøತಿಕ ಕೇಂದ್ರಗಳಿಗೆ ಭೇಟಿ ನೀಡಿದರೆ, ಬಹುತೇಕ ಕಡೆ ಆಯಾ ಪ್ರದೇಶಗಳ ಖಾದ್ಯಗಳನ್ನು ಸವಿಯುವುದು ಸಾಧ್ಯವಿದೆ. ಕೋವಿಡ್ ಆಗಮನಕ್ಕಿಂತ ಮುಂಚಿನ ಕಾಲದಲ್ಲಿ ದಿಲ್ಲಿಯಲ್ಲಿರುವ ಆಂಧ್ರಭವನದ ಕ್ಯಾಂಟೀನು ಯಾವತ್ತೂ ಜನಸಂದಣಿಯಿಂದ ತುಂಬಿರುತ್ತಿತ್ತು. ವಾರಾಂತ್ಯಗಳಲ್ಲಂತೂ ವಿಪರೀತವೆಂಬಷ್ಟಿನ ನೂಕುನುಗ್ಗಲು. ಹೇಗೋ ಕಷ್ಟಪಟ್ಟು ಒಂದು ಕುರ್ಚಿ ಹಿಡಿದುಕೊಳ್ಳಲು ಕನಿಷ್ಠ ಅರ್ಧತಾಸು ಕಾಯಬೇಕಾಗುತ್ತಿದ್ದ ಪರಿಸ್ಥಿತಿ.

ಹಾಗಂತ ಆಂಧ್ರಪ್ರದೇಶದ ಖಾದ್ಯಗಳು ದಿಲ್ಲಿಯ ಇತರ ಪ್ರದೇಶಗಳಲ್ಲಿ ಲಭ್ಯವಿಲ್ಲ ಅಂತೇನಿಲ್ಲ. ಆದರೆ ಪಂಜಾಬಿ ಢಾಬಾ ಒಂದರಲ್ಲಿ ಸಿಗುವ ದೋಸೆಗೂ, ದಕ್ಷಿಣಭಾರತದ ಮಂದಿ ನಡೆಸುವ ಕ್ಯಾಂಟೀನಿನಲ್ಲಿ ಸಿಗುವ ದೋಸೆಗೂ ರುಚಿ ಮತ್ತು ಗುಣಮಟ್ಟದ ನಿಟ್ಟಿನಲ್ಲಿ ವ್ಯತ್ಯಾಸಗಳು ಇದ್ದೇ ಇರುತ್ತವೆ. ಹೀಗಾಗಿ ಅಥೆಂಟಿಕ್ ಎನ್ನಬಹುದಾದ ಆಯಾ ಪ್ರದೇಶದ ಖಾದ್ಯಗಳಿಗೆ ಇರುವ ಬೇಡಿಕೆಯು ಸಹಜ. ವಿಶೇಷವಾಗಿ ದಿಲ್ಲಿ ಹಾಟ್ ಭಾಗದಲ್ಲಿ ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್, ಪಶ್ಚಿಮಬಂಗಾಳ, ಉತ್ತರಾಖಂಡ್, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಆಹಾರವೈವಿಧ್ಯಗಳನ್ನು ಒಂದೇ ಆವರಣದಲ್ಲಿ ಕಾಣಬಹುದು. ಇದಕ್ಕೆ ದಿಲ್ಲಿ ಹಾಟ್ ವಾಣಿಜ್ಯ ಸಂಕೀರ್ಣದ ಒಟ್ಟಾರೆ ವಿನ್ಯಾಸ ಮತ್ತು ಪ್ರವಾಸೋದ್ಯಮದ ದೃಷ್ಟಿಕೋನದಲ್ಲೂ ಆಯಾಮಗಳಿವೆ.  

ಆಹಾರದ ನಿಟ್ಟಿನಲ್ಲಿ ಖಾರಪ್ರಿಯರು ನಾಗಾಲ್ಯಾಂಡಿನ ಖಾದ್ಯಗಳನ್ನು ಸವಿಯಲೇಬೇಕು. ನಾಗಾಲ್ಯಾಂಡಿನಲ್ಲಿ ಸಿಗುವ ರಾಜಾ ಮಿರ್ಚಿಯೆಂಬ ಮೆಣಸು ಭಾರತದಲ್ಲಿ ಸಿಗುವ ಅತೀ ಖಾರದ ಮೆಣಸುಗಳಲ್ಲೊಂದು. ತನ್ನ ಭಯಂಕರ ಖಾರದಿಂದಾಗಿಯೇ ಭೂತ್ ಜೊಲೊಕಿಯಾ, ನಾಗಾ ಜೊಲೊಕಿಯಾ, ಕಿಂಗ್ ಚಿಲಿ, ರಾಜಾ ಮಿರ್ಚಿ… ಇತ್ಯಾದಿ ಹೆಸರುಗಳಿಂದ ಈ ಮೆಣಸು ವಿಶ್ವದಾದ್ಯಂತ ಜನಪ್ರಿಯ. ಇಂದು ನಾಗಾಲ್ಯಾಂಡ್ ಭಾಗದ ಅಕ್ಕಿಯ ಬಿಯರು, ಹಣ್ಣಿನ ಬಿಯರು, ರುಚಿಕರ ಪೋರ್ಕ್ ಖಾದ್ಯಗಳಷ್ಟೇ ರಾಜಾ ಮೆಣಸಿನ ಉಪ್ಪಿನಕಾಯಿಯೂ ಕೂಡ ದೇಶದ ವಿವಿಧ ಮೂಲೆಗಳನ್ನು ತಲುಪಿದೆ.

ಸೋಜಿಗದ ಸಂಗತಿಯೆಂದರೆ ಇತರ ದೇಶಗಳ ಆಹಾರವೈವಿಧ್ಯಗಳು ನಮಗೆ ತಿಳಿದಿರುವಷ್ಟು, ನಮ್ಮದೇ ದೇಶದ ಆಹಾರವೈವಿಧ್ಯಗಳು ನಮಗೆ ತಿಳಿದಿರುವುದು ಕಮ್ಮಿ. ನಾಯಿಗಳನ್ನೂ ಕೂಡ ಆಹಾರವಾಗಿ ಬಳಸಲಾಗುತ್ತದೆಂಬ ಸಂಗತಿ ನನಗೆ ಅರಿವಾಗಿದ್ದು ಕೊಹಿಮಾದಲ್ಲಿ ಕಾಲಿಟ್ಟ ನಂತರ. ಛತ್ತೀಸ್ ಗಢ ಸ್ಪೆಷಲ್ ಆಗಿರುವ ಕೆಂಪಿರುವೆ ಚಟ್ನಿಯು ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗರಾಗಿರುವ ಗೋರ್ಡನ್ ರಾಮ್ಸೇಯವರ ಮೆನುವಿನಲ್ಲಿ ಜಾಗ ಪಡೆದುಕೊಂಡಿತ್ತು. 2021 ರಲ್ಲಿ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಆದಿವಾಸಿ ಆಹಾರಮೇಳವೊಂದರಲ್ಲಿ ಇದು ಜನರನ್ನು ಆಕರ್ಷಿಸಿದ ಪರಿಯು ಅಷ್ಟಿಷ್ಟಲ್ಲ.

ಇನ್ನು ಆಹಾರದ ನಿಟ್ಟಿನ ಪ್ರಯೋಗಗಳ ಬಗ್ಗೆ ನನ್ನನ್ನು ಬಹುವಾಗಿ ಆಕರ್ಷಿಸಿದವರು ಮಹಾತ್ಮಾ ಗಾಂಧಿ. ಗಾಂಧೀಜಿಯವರು ತಮ್ಮ ಆರಂಭದ ದಿನಗಳಲ್ಲೇ ಹಿತಮಿತವಾದ ಆಹಾರಸೇವನೆಯ ಪ್ರಯೋಗಗಳಲ್ಲಿ ತನ್ನನ್ನು ತಾನು ಗಂಭೀರವಾಗಿ ತೊಡಗಿಸಿಕೊಂಡಿದ್ದರು. ಬಹುಷಃ ‘ಬಾಯಿಚಪಲ’ವೆಂಬ ಮಾಯೆಯ ಅಗಾಧತೆಯು ಅವರಿಗೆ ಬಹುಬೇಗನೇ ಅರಿವಾಗಿತ್ತು. ಇಂದು ಪುಟ್ಟ ಮೂರಿಂಚಿನ ನಾಲಗೆಯ ಬಾಯಿಚಪಲದ ತಳಪಾಯದಲ್ಲಿ ದೈತ್ಯ ಉದ್ಯಮಗಳು ಬೆಳೆದಿವೆ. ಇಂದು ಏನಿಲ್ಲವೆಂದರೂ ಸುಮಾರು ಎರಡು ಸಾವಿರದಷ್ಟು ಬಗೆಯ ಹುಳುಗಳನ್ನು ಜಗತ್ತಿನೆಲ್ಲೆಡೆ ಆಹಾರವಾಗಿ ಬಳಸಲಾಗುತ್ತದೆ. ಕೇವಲ ಹುಳುಗಳನ್ನಷ್ಟೇ ಪರಿಗಣಿಸಿದರೂ ಇದು ವಿಶ್ವದಾದ್ಯಂತ ಬಿಲಿಯನ್ ಗಟ್ಟಲೆ ಡಾಲರುಗಳಷ್ಟು ಮೌಲ್ಯವುಳ್ಳ ಬೃಹತ್ ಉದ್ಯಮ.   

ಇತ್ತ ಜಾಗತಿಕ ಮಟ್ಟಿನ ಆಹಾರಸಂಸ್ಕøತಿಯು ದಿಲ್ಲಿಯನ್ನು ತಲುಪಿಯಾಗಿದೆ. ಇಂದು ದಿಲ್ಲಿಯ ಹಲವೆಡೆ ಅಥೆಂಟಿಕ್ ಕೊರಿಯನ್, ಜಪಾನೀಸ್ ಮತ್ತು ಸಿಂಗಾಪುರಿಯನ್ ಹೋಟೇಲುಗಳು ಅಲ್ಲಿನ ಖಾದ್ಯಗಳನ್ನು ಪರಿಚಯಿಸುತ್ತಾ ದಿಲ್ಲಿಯ ಆಸಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಶಹರದಲ್ಲಿರುವ ಕೆಲ ದೇಶದ ರಾಯಭಾರ ಕಚೇರಿಗಳೂ ಕೂಡ ತಮ್ಮ ಕೆಫೆಗಳಲ್ಲಿ ತಮ್ಮ ಭಾಗದ ವಿಶೇಷ ಖಾದ್ಯಗಳನ್ನು ಬಂದವರಿಗೆ ಉಣಬಡಿಸುತ್ತಿವೆ. ಪುಸ್ತಕದ ಪುಟಗಳನ್ನು ತಿರುವುತ್ತಾ ಹೊಸ ಜಗತ್ತುಗಳನ್ನು ನಾವು ಕಾಣುತ್ತಿದ್ದ ಕಾಲವೊಂದಿತ್ತು. ನನ್ನ ಮಟ್ಟಿಗೆ ದಿಲ್ಲಿಯ ಬೀದಿಗಳಲ್ಲಿ ಇವುಗಳು ತಕ್ಕಮಟ್ಟಿಗೆ ಆಕಾರವನ್ನು ಪಡೆದುಕೊಂಡಿದ್ದು ಹೀಗೆ. 

ಸವಿಯಲು ನಾವುಗಳು ಇರಬಹುದು, ಇಲ್ಲದಿರಬಹುದು. ಆದರೆ ದಿಲ್ಲಿ ಉಣಬಡಿಸುವ ‘ಮಿಠಾಸ್’ (ಸವಿ) ಮುಗಿಯುವಂಥದ್ದಲ್ಲ!

‍ಲೇಖಕರು Admin

August 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: