ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮತ್ತದೇ ಪದ, ಅದೇ ಕತೆ, ಅದೇ ಬೇಸರ..’ – ಸೂರಿ ಬರೀತಾರೆ

ಸೂರಿ

ಟೆಲಿವಿಷನ್ ಜಗತ್ತಿನಲ್ಲಿ ಕೆಲವು ತೀರಾ ಅಗ್ಗವಾದ ಪದಗಳಿವೆ. ಅವುಗಳನ್ನು ಉಪಯೋಗಿಸುವವರಿಗೆ ಅವುಗಳ ಅರ್ಥ ಮತ್ತು ಬೆಲೆಯೇ ಗೊತ್ತಿಲ್ಲವೆಂದು ಕಾಣುತ್ತದೆ. ಪರಂಪರಾಗತವಾಗಿ ಬಂದ ಪದಗಳೇನೋ ಅನ್ನುವದಕ್ಕೆ ಭಾರತದ ಟೆಲಿವಿಷನ್ನಿಗೆ ಪರಂಪರೆಯೂ ಇಲ್ಲ. ಇವುಗಳನ್ನು ಮತ್ತೆ ಮತ್ತೆ ಅರ್ಥವಿಲ್ಲದೆ ಉಪಯೋಗಿಸಿ ಸವಕಲಾಗಿ ಅಗ್ಗದ ಪದಗಳಾಗಿ ಬಿಟ್ಟಿವೆ. (ಒಂದಿಷ್ಟು ವರ್ಷ ಕನ್ನಡ ಸಿನೆಮಾ ಜಗತ್ತು ಹೀಗೆಯೇ ಒಂದೆರಡು ಪದಗಳನ್ನು ಕಂಡು ಕೊಂಡಿತ್ತು. ನಾವೆಲ್ಟಿ ಅನ್ನವುದು ಒಂದು. ಸಿನೆಮಾ ಹೇಗಾದರೂ ಇರಲಿ, ಅದರ ಕತೆಗಾರ ನಿಮರ್ಾಪಕನಿಗೆ ಕತೆ ಹೇಳುವ ಮೊದಲು ಉದ್ಗರಿಸುವ ಮಂತ್ರ `ಕತೆ ನಾವೆಲ್ಟಿ ಸಾರ್` ಅಂತ.) ಇವುಗಳನ್ನು ಹನ್ನೆರಡು ವರ್ಷ ಒಂದು ಟೆಲಿವಿಷನ್ ಚಾನೆಲ್ಅನ್ನು ಹುಟ್ಟಿ ಹಾಕಿ ಬೆಳೆಸಿದ ಅನುಭವದ, ನನ್ನ ಸ್ವಂತ ಅನುಭವದ ಮೇಲೆ ಹೇಳುತ್ತಿದ್ದೇನೆಯೇ ಹೊರತು ಈ ಪದಗಳನ್ನು ಹಾಗೆಯೇ ಬೇರೆಡೆ ಉಪಯೋಗಿಸುತ್ತಿರಬಹುದೆಂಬ ಅನುಮಾನ ಬೇಡ. ಇವು ನನ್ನ ಅನುಭವಕ್ಕೆ, ಕನ್ನಡದ ಸಂದರ್ಭದಲ್ಲಿ ಬಂದಂಥವು.
ಕನ್ನಡ ಟೆಲಿವಿಷನ್ ಜಗತ್ತಿನಲ್ಲಿ ಕಾಮೆಡಿ ಧಾರಾವಾಹಿಗಳು ಇರಲೇ ಇಲ್ಲ ಅನ್ನುವಂಥಹ ಕಾಲವದು. ಅಪಹಾಸ್ಯಕ್ಕೆ, ಅಣಕು ಮಾತಿಗೆ ಕಾಮೆಡಿ ಎಂದು ಹೆಸರು ಕೊಟ್ಟು ಒಂದಿಷ್ಟು ನಗಿಸಲು ಪ್ರಯತ್ನಿಸುತ್ತಿದ್ದ ಕಾಲವದು. (ಉತ್ತರ ಕರ್ನಾಟಕದ ಭಾಷೆ ಅಂತಹ ಒಂದು ಸಾಧನವಾಗಿ ಬಿಟ್ಟಿತ್ತು. ಉತ್ತರ ಕರ್ನಾಟಕದ ಭಾಷೆ ಅಂದರೆ ಕಾಮೆಡಿಗೆ ಮಾತ್ರ ಅನ್ನುವಂತಹ ವಾತಾವರಣವಿತ್ತು.) ಅಂತಹ ಸಮಯದಲ್ಲಿ ಪಾಪಾ ಪಾಂಡು ಅಂತ ಒಂದು ಧಾರಾವಾಹಿಯನ್ನು ಹುಟ್ಟಿ ಹಾಕಿದೆವು. ಮೈಗೆ ವಿಷವೇರಿದಂತೆ, ಈ ಧಾರಾವಾಹಿಯ ಜನಪ್ರಿಯತೆ ಏರಿತು. ಮುಂದಿನ ವರ್ಷದಲ್ಲೇ ಸಿಲ್ಲಿಲಲ್ಲಿ ಅಂತ ಇನ್ನೊಂದು ಧಾರಾವಾಹಿಯನ್ನು ಆರಂಭಿಸಿದೆವು. ಇವೆರಡೂ ಜನಪ್ರಿಯತೆಯ ತುತ್ತ ತುದಿಯೇರಿದವು. ಕಾಮೆಡಿ ಅಂದರೆ ಹೀಗೇ ಇರಬೇಕು ಅನ್ನುವಷ್ಟರ ಮಟ್ಟಿನ ಒಂದು ನಿಯಮದಂತಾಯಿತು.

ಆ ಧಾರಾವಾಹಿಗಳಲ್ಲಿ ಒಂದು ತಂತ್ರವನ್ನು ಉಪಯೋಗಿಸಿದ್ದರು. ಯಾವುದೋ ಒಂದು ಪಂಚ್ ಲೈನ್ ಒಬ್ಬ ನಟ ಹೇಳುತ್ತಾನೆ. ಅದಕ್ಕೆ ಉಳಿದವರು ಅಂ ಅಂತ ಮೈ ಎತ್ತಿ ಹಾಕಿ, ಬೆಚ್ಚಿ ಬಿದ್ದು ಒಂದರೆ ಕ್ಷಣ ನಿಶ್ಚಲರಾಗಿ ನಿಂತು ಬಿಡುತ್ತಾರೆ. ಹಿಂದೆ ಒಂದಿಷ್ಟು ಜನರ ನಗುವಿನ ದನಿ ಕೇಳುತ್ತದೆ. ಮತ್ತೆ ಧಾರಾವಾಹಿ ಮುಂದುವರೆಯುತ್ತದೆ. ಈ ಧಾರಾವಾಹಿಯ ಕಾಲದಲ್ಲಿ ಕೇವಲ ಕತೆ ಕೇಳುತ್ತಿದ್ದೆವೇ ಹೊರತು ಅಧ್ಯಾಯದ ಚಿತ್ರಕತೆಯನ್ನಲ್ಲ. ಹಾಗಾಗಿ ಈ ಕಾಮೆಡಿ ಧಾರಾವಾಹಿಗಳ ಚಿತ್ರಕತೆ ಹೇಗಿರುತ್ತದೆ ಎನ್ನುವ ಕಲ್ಪನೆಯೇ ನನಗಿರಲಿಲ್ಲ. ಕಾಲಕ್ರಮೇಣ ಎರಡೂ ಧಾರಾವಾಹಿಗಳು ಸಾವಿರದಷ್ಟು ಅಧ್ಯಾಯಗಳನ್ನು ಮುಗಿಸಿ ನಿಂತು ಬಿಟ್ಟ ಮೇಲೇ ನನಗೆ ಈ ಕಾಮೆಡಿ ಚಿತ್ರಕತೆಗಳ ಅಸಲಿಯತ್ತು ತಿಳಿದದ್ದು. ಈಟೀವಿಗೆ ಧಾರಾವಾಹಿಗೆ ಒಂದು ಕಾಮೆಡಿ ಧಾರಾವಾಹಿ ಮಾಡಬೇಕು ಏನ್ನುವ ಮೊದಲ ಸಾಲಿನೊಂದಿಗೆ ಒಂದಿಷ್ಟು ಅಧ್ಯಾಯಗಳ ಚಿತ್ರಕತೆ ಬರುತ್ತಿತ್ತು. ಕತೆ ಏನೆಂದು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಈ ಎಲ್ಲಾ ಚಿತ್ರಕತೆಗಳಲ್ಲಿ ಸರ್ವೇ ಸಾಧಾರಣವಾಗಿ ನನಗೆ ಕಂಡು ಬರುತ್ತಿದ್ದ ಒಂದು ಪದ, ‘ಶಾಕ್’. ಕಾಮೆಡಿ ಧಾರಾವಾಹಿಯಲ್ಲಿ ಅದೆಂತಹ ಶಾಕೋ, ಇದೇನು ಕಾಮೆಡಿ ಧಾರಾವಾಹಿಗೆ ಕಳುಹಿಸಿದ ಚಿತ್ರಕತೆಯೋ ಅಥವಾ ಹಾರರ್ ಅಥವಾ ಪತ್ತೇದಾರಿ ಧಾರಾವಾಹಿಗೆ ಕಳುಹಿಸಿದ ಚಿತ್ರಕತೆಯೋ ಎಂದು ಗೊಂದಲದಲ್ಲಿ ಬೀಳುವಷ್ಟರ ಮಟ್ಟಿಗೆ ಈ ಪದಗಳು ತುಂಬಿರುತ್ತಿದ್ದವು.
ಈ ಚಿತ್ರಕತೆಗಳ ಪ್ರಕಾರ ಪ್ರತಿಯೊಂದು ಪದವೂ ಪಂಚೇ. ಉದಾಹರಣೆಗೆ ಒಬ್ಬ ನಟ ಕೇಳುತ್ತಾನೆ, ನಿಂಗೆ ಹೇಳಿಬಿಡ್ತೀನಾ? (ಶಾಕ್). ಅದಕ್ಕೆ ಇನ್ನಾರೋ ಉತ್ತರ ಹೇಳುತ್ತಾರೆ, ನಂಗೆ ಹೇಳದೇ ಹೋದರೂ ಬೇಡ, ನಿನ್ನ ಹೆಂಡತೀಗಾದರೂ ಹೇಳ್ತೀಯಾ ತಾನೇ? (ಶಾಕ್). ಅದಕ್ಕೆ ಮೊದಲ ನಟನ ಉತ್ತರ ನಂಗೆ ಮದುವೇನೇ ಆಗಿಲ್ವೋ (ಶಾಕ್). ಈ ‘ಶಾಕ್’ ಅಂತಿರುವ ಕಡೆಯೆಲ್ಲಾ ತೆರೆಯ ಮೇಲೆ ಕಾಣುವ ಸಮಸ್ತ ನಟನಟಿಯರೂ ಮೈ ಎತ್ತಿ ಹಾಕಬೇಕು. ನಂತರ ಒಂದರೆ ಕ್ಷಣ ಮೂರ್ಚೆ ಬಂದವರಂತೆ ಮುಖ ಮಾಡಬೇಕು. ನಂತರ ಒಂದಿಪ್ಪತ್ತು ಸೆಕೆಂಡುಗಳು ನಿಶ್ಚಲರಾಗಬೇಕು. ಹಿನ್ನೆಲೆಯಲ್ಲಿ ಒಂದಿಷ್ಟು ಜನ ನಗುವ ಸದ್ದಿರಬೇಕು. ಇದರಲ್ಲಿ ಕಾಮೆಡಿ ಅಥವಾ ಹಾಸ್ಯ ಎಲ್ಲಿದೆಯೋ ಅದನ್ನು ಹುಡುಕಿ ತೆಗೆಯುವ ಜವಾಬ್ದಾರಿ ಚಿತ್ರಕತೆಯೋದುತ್ತಿರುವ ನನ್ನದು, ಅಥವಾ ನನ್ನ ಸಹೋದ್ಯೋಗಿಗಳದ್ದು. ಅಥವಾ ಗ್ರಹಚಾರ ಕೆಟ್ಟು ಪ್ರಸಾರವಾದರೆ ನೋಡುವ ಪ್ರೇಕ್ಷಕನದ್ದು. ಮೊದಲ ಓದಿನಲ್ಲಂತೂ ಅದೊಂದು ಕಾಮೆಡಿ ಧಾರಾವಾಹಿ ಅಂತ ಅನ್ನಿಸಿಯೇ ಇಲ್ಲ. ಈ ‘ಶಾಕ್’ ತೀರಾ ಸಲುಗೆಯಲ್ಲಿ ಬಳಸುವ ಪದ. ಅದನ್ನು ಓದೀ ಓದೀ, ನನ್ನ ಪಾಲಿಗೆ ಆ ಪದ ಎಷ್ಟು ಅರ್ಥ ಕಳೆದುಕೊಂಡಿದೆಯೆಂದರೆ, ನನ್ನೆದುರಿಗೆ ಒಂದು ಬಾಂಬ್ ಬಿದ್ದರೂ ನನಗೆ ಈಗ ಶಾಕೇ ಆಗುವುದಿಲ್ಲ.

ಒಂದು ಪ್ರಪೋಸಲ್. ಕೇವಲ ಮೂರು ಪುಟಗಳು ಮಾತ್ರ. ಪ್ರತಿ ಪುಟವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಅಡಕಿಸಿ, ಮೂರು ಪುಟಗಳ ನಂತರದ ಹತ್ತಾರು ಪುಟಗಳಲ್ಲಿ ಟೆಲಿವಿಷನ್ ಜಗತ್ತಿನ ಹೆಸರಾಂತ ನಟನಟಿಯರ ಭಾವಚಿತ್ರಗಳನ್ನು ಸಾಲಾಗಿ ಜೋಡಿಸಿ, ಅವರಿಗೆಲ್ಲಾ ಒಂದೊಂದು ಪಾತ್ರವನ್ನು ಹಂಚಿ, ಅವೆಲ್ಲವನ್ನೂ ಜಗತ್ತಿನಲ್ಲೇ ಅತಿ ದುಬಾರಿ ಅನಿಸಬಹುದಾದಂತಹ ಸುಂದರವಾದ ಒಂದು ಫೈಲಿನಲ್ಲಿ ಜೋಡಿಸಿಟ್ಟು, ಆ ಫೈಲನ್ನು ಕೈಲಿ ಹಿಡಿದು ಒಬ್ಬರು ನನ್ನೆದುರು ಬಂದು ನಿಂತರು. ನನ್ನ ಮುಂದೆ ಆ ಫೈಲನ್ನು ಇಟ್ಟು ನಿಂತರು. ಮೊದಲ ಮೂರು ಪುಟಗಳಲ್ಲಿ ಮಾತ್ರ ನನಗೆ ಆಸಕ್ತಿ. ಯಥಾಪ್ರಕಾರ ಒಂದು ಮಧ್ಯಮ ವರ್ಗದ ಸಂಸಾರ. ತೀರಾ ಬಡತನದಲ್ಲಿ ಬೆಂದು ಬಸವಳಿದ ಸಂಸಾರ. ಮನೆಯ ಯಜಮಾನನಿಗೆ ನಾಲ್ವರು ಹೆಣ್ಣು ಮಕ್ಕಳು. ಒಬ್ಬೊಬ್ಬರದೂ ಒಂದೊಂದು ದಾರಿ. ಹೀಗೆ ಭಾರತ ದೇಶದಲ್ಲಿ ತಯಾರಾದ, ತಯಾರಾಗಬಹುದಾದ ಎಲ್ಲಾ ಧಾರಾವಾಹಿಗಳ ಒಂದೊಂದು ತುಣಕನ್ನು ಹಿಡಿದಿಟ್ಟ ಕತೆ ಅದು. ಕೊನೆಯಲ್ಲೊಂದು ಸಾಲು. ನಿಮ್ಮ ಒಪ್ಪಿಗೆ ಸಿಕ್ಕಲ್ಲಿ, ಸುಮಾರು ಎರಡು ಸಾವಿರ ಎಡಿಸೋಡುಗಳನ್ನು ಮಾಡಬಹುದು. ಒಮ್ಮೆ ಬೆಚ್ಚಿಬಿದ್ದೆ. ಎರಡು ಸಾವಿರ ಅಂದರೆ ಎಷ್ಟು ದಿನ ಅನ್ನುವ ಕಲ್ಪನೆಯಾದರೂ ಇದೆಯೆ ಈ ವ್ಯಕ್ತಿಗೆ ಅಂತ ಯೋಚಿಸಿದೆ. ವರ್ಷಕ್ಕೆ ಸುಮಾರು ಇನ್ನೂರಾ ಅರವತ್ತು (ವಾರಕ್ಕೆ ಐದು ಅಧ್ಯಾಯಗಳು ಅಂತಾದಲ್ಲಿ) ಬೇಕು. ಅಂದರೆ ನನ್ನೆದುರು ಕೇವಲ ಮೂರು ಪುಟಗಳಲ್ಲಿರುವ ಈ ಕತೆ, ನನ್ನೆದುರು ಕೂತ ವ್ಯಕ್ತಿಯ ಪ್ರಕಾರ, ಸುಮಾರು ಐದು ವರ್ಷಗಳಿಗೆ ಸಾಕು. ಇದು ಎರಡು ಸಾವಿರ ಎಪಿಸೋಡುಗಳಷ್ಟೇ ಯಾಕೆ ಅಂತ ಕೇಳಿದೆ. ಉತ್ತರ ಕೇಳಿ ನನ್ನ ಜಂಘಾಬಲವೇ ಉಡುಗಿಹೋಯಿತು. ಬೇಕಾದರೆ ಇನ್ನೂ ಒಂದೈನೂರು ಎಪಿಸೋಡುಗಳನ್ನು ಮಾಡಬಹುದು ಸಾರ್. ಮೂರು ಪುಟದ ಕತೆಯನ್ನು ಐದೂವರೆ ವರ್ಷಗಳಿಗೆ ಹಿಗ್ಗಿಸಬಹುದಾದ ಈ ವ್ಯಕ್ತಿಯ ನಂಬಿಕೆಯೇ ಅಥವಾ ಹುಂಬತನವೇ ನನಗೆ ಅಚ್ಚರಿ ತಂದಿತ್ತು.
ಮೊದಲ ಮಾತಿನಲ್ಲೇ ಸ್ಪಷ್ಟವಾಗಿತ್ತು, ಈ ಕತೆಯ ಹಿಂದೆ ಯಾವುದೇ ತಯಾರಿ ನಡೆದಿಲ್ಲ, ಇದು ನಂತರದಲ್ಲಿ ಹೊಸೆಯಲ್ಪಡುವ ಧಾರಾವಾಹಿ ಅಂತ. ಧಾರಾವಾಹಿಯಾಗಲೀ, ಸಮಯವಾಗಲೀ, ಅದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯ ಬಗ್ಗೆಯಾಗಲೀ ಯಾವುದೇ ಕಲ್ಪನೆಯಿಲ್ಲದ, ಧಾರಾವಾಹಿಯನ್ನು ನಿರ್ದೇಶಿಸುವುದು ತನ್ನ ಎಡಗೈ ಕೆಲಸ ಅನ್ನುವಷ್ಟು ಸಲೀಸಾಗಿ ಉತ್ತರ ಕೊಡಬಲ್ಲ ವ್ಯಕ್ತಿ ಮಾತ್ರ ಇಂತಹ ಉತ್ತರ ಕೊಡಬಲ್ಲ. ಇದು ಬಹುಶಃ ಹೊಸದಾಗಿ ಬರುವ ಎಲ್ಲಾ ಧಾರಾವಾಹಿ ನಿರ್ದೇಶಕ ಯಾ ನಿಮರ್ಾಪಕನ ಪರಿಕಲ್ಪನೆ. ಈ ಸಾವಿರ ಅನ್ನುವ ಪದವಿದೆಯಲ್ಲಾ ಅದು ಇನ್ನೊಂದು ಅಗ್ಗದ ಪದ. ನನಗೆ ಬಂದ ಪ್ರಪೋಸಲ್ಗಳಲ್ಲಿ ಸುಮಾರು ಮುಕ್ಕಾಲು ಪ್ರಪೋಸಲ್ಗಳು ಸಾವಿರಕ್ಕೂ ಮೀರಿದ ಎಪಿಸೋಡುಗಳನ್ನು ಮಾಡುವ ಪಣ ತೊಟ್ಟಂತಹವು.

ಟೆಲಿವಿಷನ್ ಬಂದ ಹೊಸತರಲ್ಲಿ ಖ್ಯಾತ ಸಿನೆಮಾ ನಿರ್ದೇಶಕ ಫೆಡರಿಕೋ ಫೆಲಿನಿ ಒಂದು ಮಾತು ಹೇಳಿದ್ದರಂತೆ. ‘‘I think I should stop making films. Television has trivialized it. All these days people used to look up at us. From now on they look down upon us.’ ಇದು ಸತ್ಯವಲ್ಲವೇ?

‍ಲೇಖಕರು G

4 August, 2014

6 Comments

  1. bharathi b v

    Chendada article

  2. Uma Rao

    Interesting!

  3. Uma Rao

    Neevu tv kshetradalli kaleda dinagala bagge aparupada anubhavagala ondu pustakavanne bareyabahudeno. Seriously, yochisi nodi.

  4. M.A.Sriranga

    “ಈಟಿವಿ” ಯಲ್ಲಿ ಈಗಲೂ ‘ಸಿಲ್ಲಿಲಲ್ಲಿ’ ಬರುತ್ತಿದೆ. (ಬಹುಶಃ ಮರು ಪ್ರಸಾರ ವಿರಬಹುದೇನೋ. ನನಗೆ ಗೊತ್ತಿಲ್ಲ. ಏಕೆಂದರೆ ನಾನು ಇತ್ತೀಚಿಗೆ ಅದನ್ನು ನೋಡುತ್ತಿದ್ದೇನೆ). ಅದರಲ್ಲಿನ ಹಾಸ್ಯ ಚೆನ್ನಾಗಿದೆ. ಅದರಲ್ಲಿ ಸಂಶಯವಿಲ್ಲ. ಆದರೆ ‘ಜಾಣೀಶ’ ‘ ಪದೇ ಪದೇ ‘ನಾನು ಲೆಕ್ಕದಲ್ಲಿ ವೀಕು’ ಎನ್ನುವುದು ಮತ್ತು ಡಾ.ವಿಠಲ್ ರಾವ್’ ನ ಕಾಂಪೌನ್ ಡರ್ ಪ್ರತಿಯೊಂದು ಎಪಿಸೋಡ್ ನಲ್ಲಿ ಸಹ ‘ಅರ್ಥವಾಯಿತು ಬಿಡಿ’ ಎನ್ನುವುದರಲ್ಲಿ ಯಾವುದೇ “ಪಂಚ್” ಇಲ್ಲ. ಅದನ್ನು ನಿವಾರಿಸಬಹುದಿತ್ತು.

  5. hasuke

    Artists stand in line and for every dialogue they jump with shock. Every Kannada TV serials have this. Definition of humour is wrongly interpreted.

  6. lakshmikanth itnal

    ಅನುಭವ ಜನ್ಯ ಬರಹ. ಚನ್ನಾಗಿದೆ, ಕಾಮೆಡಿ ನಿಜಕ್ಕೂ ಅತಿ ಕಷ್ಟದ ಕೆಲಸ, ಅದಕ್ಕೆ ನಿಜವಾದ ಹಾಸ್ಯಗಾರರ ಹೆಸರು ಅಜರಾಮರವಾಗಿರುತ್ತವೆ, ಉದಾ: ತೆನ್ನಾಲಿ ರಾಮಕೃಷ್ಣ, ಬೀರಬಲ್ ( ಅಕ್ಬರನ ಆಸ್ಥಾನದ ಉಳಿದ ನವರತ್ನಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ ಯಾರೂ ನೆನಪಿಲ್ಲ), ಚಾರ್ಲಿ ಚಾಪ್ಲಿನ್, ಹೀಗೆ ಹಾಸ್ಯಕಲಾವಿದರು ಹುಟ್ಟುವುದು ತೀರ ವಿರಳ ಅಂತ ಅನ್ನಿಸುತ್ತದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading