‘ಮಣ್ಣೆಮಾರಿ ಪರ್ಸೆ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಗ್ರಾಮ ಜಗತ್ತು ಹಲವು ಆಚರಣೆಗಳ ಮೂಲಕ ಅಚ್ಚರಿಗಳನ್ನು ಕಾಣಿಸಿದರೆ; ಆಚರಣೆಯೊಳಗೆ ಒಪ್ಪಿತ ಮೌಢ್ಯಗಳನ್ನು ಕೂಡ ಪೋಷಿಸಿಕೊಂಡು ಬರುವ ವೈರುಧ್ಯಗಳನ್ನು ಚಲನಾತ್ಮಕ ನೆಲೆ ಕೊಟ್ಟು ಅರ್ಥವಾಗದ ಬೇಡಗಳು, ಅರ್ಥವಾಗುವ ಅಸಹಾಯಕತೆಗಳ ಜೊತೆಗೆ ತಳುಕು ಹಾಕಿ ಸಾಂಸ್ಕೃತಿಕ ಲೋಕದಲ್ಲಿ ಭಯಸ್ತ ಪ್ರಚಾರಗಳನ್ನು ಹಬ್ಬಿಸಿ ಹಳ್ಳಿಗಳನ್ನು ಹಿಡಿತದಲ್ಲಿ ಇರುಕಿಸಿ ಮುಕ್ತಗೊಳಿಸಿದಂತೆಯೇ ದರ್ಶನಕ್ಕೆ ಸಿಗುವ ಮಾರಿ ಪರ್ಸೆಗಳು ಇಷ್ಟದ ಬಕುತಿಗಳಾಗಿಯು, ಸವಾಲಿನ ಆರ್ಥಿಕ ಪ್ರಶ್ನೆಗಳಾಗಿಯು, ಆಕರ್ಷಕ ಆಹಾರ ಲೋಕದ ಸೆಳೆತಗಳಾಗಿಯು ವರ್ತಮಾನದೊಳಗೆ ಭೂತಕಾಲವೊಂದರ ಇಚ್ಛೆಗಳನ್ನು ಕಾಯ್ದುಕೊಂಡು ಸ್ಥಾವರಗೊಳ್ಳದೆ ಬದುಕುತ್ತಿರುತ್ತವೆ.

ನನ್ನ ಊರನ್ನು ಒಳಗೊಂಡಂತೆ ಸಮೀಪದಲ್ಲಿ ಸುತ್ತ ಏಳು ಹಳ್ಳಿಗಳಲ್ಲಿ ಪ್ರತೀ ವರುಷವು ಏಪ್ರಿಲ್ ತಿಂಗಳ ಗ್ರೀಷ್ಮದಲ್ಲಿ ವಸಂತದ ಬಣ್ಣಬಣ್ಣದ ಅನುಭವಕ್ಕೆ ನಾಂದಿಯಾಗುತ್ತದೆ ನಮ್ಮ ಭಾಗದ ಮಾರಿ ಪರ್ಸೆ. ಪರ್ಸೆಯ ಸಿದ್ದತೆಗಳು ನಡೆಯುವಾಗ ಸುತ್ತಲಿನ ಏಳು ಹಳ್ಳಿಗಳ ಗೌಡರು ತಳವಾರರು ಅರ್ಚಕರು ಮಣ್ಣೆಮಾರಿಗುಡಿಯ ಅಂಗಳದಲ್ಲಿ ಸಭೆ ನಡೆದು ಸಾರಾಕುವ ಬಗ್ಗೆ ತೀರ್ಮಾನಗಳಾಗುತ್ತವೆ.

ಮರುದಿನ ಏಳು ಗ್ರಾಮಗಳಲ್ಲೂ ಮಣ್ಣಮ್ಮನ ಜಾತ್ರೆಯನ್ನು ಸಾರುತ್ತಾರೆ. ಇಲ್ಲಿಂದ ಹದಿನೈದು ದಿನಗಳ ಒಳಗೆ ಕುರಿಕೋಳಿ ಮೇಕೆಗಳು ತಳಿರ ತೋರಣವನ್ನು ಕಂಡು ನಲಿದು ಮೃತ್ಯುವಿನ ನೆತ್ತರ ಮನೆಗೆ ನಡೆದುಬಿಡಲು ಅತಿಥಿಗಳಂತೆ ಮಾರಿಗೆ ಹರಕೆಗಳಾಗಿ ಬಳಗದ ಮೋಹದ ಊಟವಾಗಿಬಿಡುವ ಕ್ರಿಯೆ ಸಾಮಾನ್ಯವೆ. ಆಹಾರ ಪದ್ಧತಿಗಳನ್ನು ಟೀಕಿಸುವ ಭಿನ್ನ ಮಡಿವಂತರ ನಡುವೆ ನಿಸರ್ಗ ಸಮತೋಲನದ ತಿಳಿವು ಮುಖ್ಯದ್ದು.

ಸನಾತನತೆಯನ್ನು ಧರಿಸಿದ ಕಂದಾಚಾರಗಳು ಸಸ್ಯಾಹಾರ ಮಾಂಸಾಹಾರಗಳ ನಡುವೆ ಕಲಹಗಳನ್ನೆಬ್ಬಿಸಿ ಸಾಮಾಜಿಕ ಬಿರುಕುಗಳಿಗೆ ಕಾರಣವಾಗುತ್ತಿರುವ ಕುರಿತು ಎಷ್ಟೇ ಅರಿವುಗಳನ್ನು ಸ್ಥಾಪಿಸಿದರೂ ಕೂಡ ಜಾತಿಯನ್ನು ಆಹಾರಕ್ಕೆ ನಿಲೆಹಾಕಿ ಅವಹೇಳನ ಮಾಡುವ ಅಸಹನೆಗೆ ಕ್ಷಾಮವೆಂದೂ ಬರಲಾರದು. ನಮ್ಮ ಭಾಗದಲ್ಲಿ ಹೆಚ್ಚು ಮಾಂಸಾಹಾರಿಗಳಿಗೆ ಜೊತೆಗೂಡಿರುವ ಮಂದಿ ಜಾತಿಸೋಗಿನ ಮಡಿವಂತ ಮುಖವಾಡಗಳನ್ನು ಮೆತ್ತಿಕೊಂಡವರೆ!!

ಮಣ್ಣೆಮಾರಿಯ ಪರ್ಸೆಗೆ ಕಾಲಾಂತರದ ಗುರುತುಗಳಿವೆ. ದೇವ- ದೇವಿ ಎಂಬ ಲಿಂಗಜಡಗಳನ್ನು ಕಟ್ಟಲ್ಪಟ್ಟ ಮನಸುಗಳು ಶೋಷಣೆಯ ಜಾಡುಗಳಲ್ಲಿ ಹಾದುಬರುವಾಗ ಭಯಗಳನ್ನು ಸೃಷ್ಟಿಸಿ ಜನಸಮುದಾಯಗಳ ಆಚರಣೆಯ ಆಳದಲ್ಲಿ ಹೆಚ್ಚು ಕಾಲ ಸಾಗಲ್ಪಡುವ ಪಲ್ಲಟಗೊಳ್ಳದ ನಿಯಮಗಳನ್ನು ಉಳಿಸಿರುವುದು ಸಾಮಾಜಿಕ ಚಲನೆಯಾಗಿದೆ.

ಮಣ್ಣಮ್ಮನ ಗುಡಿಯ ಅಂಗಳದಲ್ಲಿ ಅಮಾವಾಸ್ಯೆ, ಪೌರ್ಣಮಿಗಳು ಬಂದವೆಂದರೆ ದೆವ್ವ ಭೀತಿಗೆ ಒಳಗಾಗಿ ಅಶಕ್ತರಂತೆ ನರಳುವ ಜನಗಳು ಹೆಚ್ಚು ಸೇರುವುದನ್ನು ನೋಡುವಾಗ ನಾನು ಕಿರಿವಯಸ್ಸಿನಲ್ಲಿ ಮನೆಮಂದಿಯೆಲ್ಲರೊಡಗೂಡಿ ಮಂದೆಕಾದ ಅಮಾಸೆ ಕಣ್ಮುಂದೆ ಬರುತ್ತದೆ. ಈಗಂತೂ ಪ್ರತೀದಿನವೂ ಈ ಗುಡಿಯ ಅಂಗಳದಲ್ಲಿ ಪವಾಡಗಳು ಘಟಿಸುತ್ತವೆಂಬಂತೆ ಜನ ಕೂಡುತ್ತಾರೆ. ಆಚರಣೆಗಳು ಅಪಾಯಗಳಾಗುವ ಪ್ರಭುತ್ವಗಳು ಕಾಲಕಾಲಕ್ಕೂ ರೂಪಬದಲಿಸಿಕೊಂಡು ಬಾಳುತ್ತವೆ.

ಇಲ್ಲಿ ಸಹಜ ಜೀವನ ಮುಗ್ಗಿಹೋಗಿ ಅಸಹಜವಾದ ಚರಿತ್ರೆಯೊಂದು ಜನಿಸಿಬಿಡುತ್ತದೆ. ಈ ಇತಿಹಾಸದ ಅಧ್ಯಾಯಗಳಲ್ಲಿ ಬರುವ ದೇವರುಗಳು ಪ್ರಭುತ್ವದ ಆದೇಶದಂತೆ ಸಮಾಜದ ಜೀವವನ್ನು ಉಸಿರುಕಟ್ಟಿಸಿ ಮೆರುಗು ಬಂದಿದೆಯೆಂಬಂತೆ ಜಾಹಿರಾತಿನ ಲಕ್ಷಣ ತುಂಬಿ ಅನಾವರಣಗೊಳಿಸುವ ಕಜ್ಜಕ್ಕೆ ಕಡಿವಾಣ ಹಾಕಲಾಗದ ಇಕ್ಕಟ್ಟುಗಳಿವೆ.

ನಮ್ಮ ಪ್ರದೇಶದ ನಾವೆಲ್ಲ ಹಿರಿಯರ ಮಾರ್ಗದರ್ಶನದಂತೆ ನಂಬಲ್ಪಟ್ಟ ಮಣ್ಣಮ್ಮ ಯಾರಿಗೂ ಕೇಡುಣಿಸಿದವಳಲ್ಲ. ಕೊಟ್ಟು ತಂದ ಬಂಧುಬಳಗವನ್ನು ಊರೂರಲ್ಲಿಯೂ ತುಂಬಿಕೊಂಡು ನಲಿದ ಮಮತಾಮಯಿ. ಪರ್ಸೆ ಸಾರಾಕಿದ ಮೇಲೆ ಮನೆಮನೆಗಳಲ್ಲೂ ಮೂಡುವ ಸಡಗರಗಳು ಅನನ್ಯವೆನಿಸುವಷ್ಟು ರಂಗಿನವು. ಸಾರಾಕಿದ ಹದಿನಾಲ್ಕು ದಿನದ ಒಂದು ಮಂಗಳವಾರ ಏಳು ಹಳ್ಳಿಗೂ ಪಟ್ಟದ ಕೋಣ ಬೇವಿನಸೊಪ್ಪಿನಲ್ಲಿ ಅಲಂಕೃತಗೊಂಡು ಎಲ್ಲಾ ಮನೆಗಳಿಗೂ ಬಂದು ಪೂಜಿಸಲ್ಪಡುತ್ತದೆ. ಇದೊಂದು ಮರುದಿನಕ್ಕೆ ಮರಣವನ್ನು ಆಹ್ವಾನಿಸುವ ಪೂಜೆ. “ಹಸಿದವನ ಮುಂದೆ ಉಂಡವನು ತೇಗಿದಂತೆ” ಎಂಬ ಶರಣರ ನುಡಿಯಂತೆ ಪೂಜೆ ಹಾಗೂ ಮೃತ್ಯುಗಳೆರಡು ಸಾಂಕೇತಿಕ ವಲಯದ ಅಸಂಗತ ಸ್ಥಿತಿಯಲ್ಲಿ ಚೆಲ್ಲಿಕೊಳ್ಳುವ  ಮತ್ತು ಅಸ್ಥಿರದೊಳಗೊಂದು ಸ್ಥಿರಭ್ರಮೆ ಹರಿದಾಡುವ ಕೆಲಸಗಳು.

ಮಂಗಳವಾರ ಆಂತ್ಯಗೊಂಡು ಬುಧವಾರ ಬಂತೆಂದರೆ ಏಳು ಹಳ್ಳಿಗೂ ದೇವರು ಬಂದು ಮರಿಕಡಿಸಿಕೊಳ್ಳುವುದು ಜನ ಒಪ್ಪಿಕೊಂಡ ಶ್ರದ್ಧೆಯ ಕಾರ್ಯ. ಎಲ್ಲಾ ಹಳ್ಳಿಗಳಲ್ಲೂ ಹರಕೆಯ ಕುರಿ ಅಜಗಳು ಹರಣಕೊಟ್ಟ ಮೇಲೆ ಮಣ್ಣಮ್ಮ ಮೂಲ ಗುಡಿಗೆ ಹೋಗಿ ನೆಲೆಗೊಳ್ಳುವುದು. ಅಂದೇ ಇಳಿ ಸಂಜೆಯಲ್ಲಿ ಕೆಂಡ ತುಳಿಯುವ ಪದ್ದತಿ. ಕೆಂಡ್ಕೋಕ್ತೀವಿ ಅಂತ ಊರೂರ ದಾರಿಗಳಲ್ಲು ಜನಕಡಲು. ಕೆಂಪಗೆ ಉರಿಯುವ ಕೆಂಡವನ್ನು ತುಳಿವ ಹರಕೆಯೂ ಇಲ್ಲಿ ಪ್ರಸಿದ್ಧ. ಕೋಮಲವಾದ ಕುಸುಮಗಳು ಪಾದಗಳಿಗೆ ಮೆದುವಾದ ಸ್ಪರ್ಶ ತರುತ್ತಿವೆ ಎಂಬಂತೆ ಕೆಂಡವನ್ನು ಬಕುತಿಯಿಂದ ತುಳಿಯುವವರ ವಿಶ್ವಾಸಕ್ಕೆ ಬೆಂಬಲಿಸುವವರ ಸಂಖ್ಯೆ ಅಪಾರ.

ನನ್ನ ಬಂಗ ತೀರಿರೆ ಮೂರೊರ್ಷ ಕೆಂಡ ತುಳಿತಿನವ್ವ ಅಂತ ಅರ್ಕೆ ಮಾಡ್ಕಂಡಿದ್ದೆ; ಆ ನನ್ ತಾಯಿ ಮಣ್ಣೆಸತ್ತಿ ಎಲ್ಲಾ ಕಷ್ಟನು ಒಡುದ್ಲು ಅದ್ಕೆ ಕೆಂಡ ತುಳ್ಯಕ್ಬಂದೆ ಎಂದು ಮಾತಾಡಿಕೊಳ್ಳುವ ಭಕ್ತರು ಮಿತಿಮೀರಿ ನೆರೆದಿರುತ್ತಾರೆ. ಕೆಂಡದಾಚರಣೆ ಮುಗಿದು ಇರುಳು ಹತ್ತು ದಾಟಿದರೆ ತೇರು. ಸರಿರಾತ್ರಿಯಾಗುತ್ತದೆ ತೇರೆಳೆಯುವುದಕ್ಕೆ. ಹೆಣ್ಣು ಗಂಡು ಮಕ್ಳು ಮುದುಕ್ರು ಎಲ್ಲರೂ ತೇರೆಳ್ಯದು ನೋಡಲು ನೂಕುನುಗ್ಗಲು.

ಪಟ್ಟದಕೋಣ, ಕುರಿಕೋಳಿ, ಆರತಿ, ಕೆಂಡ, ತೇರು, ಕಾರಪುರಿ, ಬಣ್ಣಬಣ್ಣದ ಗಾಜಿನ ಬಳೆ ಮಣಿಸರಗಳು ಪೂರ್ವದಿಂದ ಇವತ್ತಿನ ತನಕವೂ ಸೆಳೆಯುತ್ತಲೇ ಬಂದಿವೆ. ದೇವರೆನ್ನುವ ಜನ ನಂಬಲ್ಪಟ್ಟ ಶಕ್ತಿ, ಶಕ್ತಿಯಲ್ಲದ ನಂಬಿಕೆಯಲ್ಲಿ ಯಾರೊಬ್ಬರಿಗೂ ಹಾನಿ ಮಾಡದಂತೆ ಸಾಗುವುದಾದರೆ ಅದೇನು ಅಪಾಯದ್ದೆನಿಸಲ್ಲ. ಆದರೆ ಉಳ್ಳವರು ದೇವರ ಹೆಸರಿನಲ್ಲಿ ಹೇರಲ್ಪಟ್ಟ ಹಿಂಸೆಗಳು ಆರ್ಥಿಕವಾಗಿ ದುರ್ಬಲರಾದ ಜನರಲ್ಲಿ ಅಮುಕಿದ ಬ್ರಾಂತಿಗಳು ಕೂಡ ಆಳುವಿಕೆಯವೆ.

ಸಂಸ್ಕೃತಿ, ದೇವರು, ಆಚರಣೆ, ನಂಬಿಕೆ ಎಲ್ಲವೂ ಹುಸಿಯಲ್ಲದ ಮಾನವತೆಗೆ ಆತುಕೊಳ್ಳುವ ಮೂಲಕ ಗೌರವಿಸಲ್ಪಡಬೇಕು. ನಾನು ಕಂಡಂತೆ ನಮ್ಮ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಿಗೆ ತನ್ನವರನ್ನೆಲ್ಲ ಮನೆತುಂಬಿಕೊಂಡು ಮೂರು ದಿನಗಳ ಕಾಲ ಸಂಭ್ರಮಿಸುವ ಹಾಗೂ ಒಟ್ಟೊಟ್ಟಿಗೆ ಮನೆಮಕ್ಕಳು ಬಳಗವೆಲ್ಲ ಪಂತಿಯಲ್ಲಿ ಕುಂತು ಉಣ್ಣುವ ಸವಿಯ ಕುರಿತು ತಲೆಗೊಂದು ಹೇಳುತ್ತ ನಕ್ಕು ನಲಿಯುವ ಹಾಗೆ ಅರ್ಧಹೊತ್ತಿನ ತನಕ ವಿನೋದಗಳನ್ನು ಹುಟ್ಟಾಕಿಕೊಂಡು ಮಸಿಮುಸ್ರೆ ಉಜ್ಜುವ ಒಪ್ಪಿತ ಕಾಯಕದ ಚಲನೆಯಾಗಿದ್ದವು. ಆರ್ತಿ, ತೇರು,ಕೆಂಡಗಳು ಮುಗಿದ ಮರುದಿವಸ ಎಲ್ಲಾ ಮನೆಗಳ ಮಕ್ಕಳು ಮೂರ್ನಾಲ್ಕು ಫರ್ಲಾಂಗು ದೂರ ಇರುವ ಮಣ್ಣೆಯ ಅಂಗಳಕ್ಕೆ ಜಾತ್ರೆ ಮಾಡಲು ಹೋಗ್ತಾ ಇದ್ವಿ. ಹಿರಿಯರು ಬಳೆತೊಟ್ಕಳ್ರಿ ಎಂದು ಎಲ್ಲಾ ಮಕ್ಕಳಿಗೂ ದುಡ್ಡು ಕೊಡುತ್ತಿದ್ದರು.

ಏಪ್ರಿಲ್ ತಿಂಗಳ ಬಿಸಿಲಿಗೇನು ಅಂಜದೆ ನಡುಮಧ್ಯಾಹ್ನದಿಂದ ಬೈಗಿನವರೆಗು ಹಣೆಬಟ್ಟು, ಟೇಪು, ಗಾಜಿನ ಬಳೆ ಎಲ್ಲವನ್ನೂ ಖರೀದಿಸುವಾಗ ಜಾತ್ರೆಯನ್ನೇ ಸಂಗಡ ಮನೆಗೆ ಕರೆದೊಯ್ಯುವಂತೆ ಲವಲವಿಕೆ ಇರೋದು. ಸುಮಾರು ಎಂಟು ದಿನಗಳ ತನಕವೂ ಪರ್ಸೆಯ ಗುಂಗಿನಲ್ಲೇ ಇರುತ್ತಿದ್ದ ಹಳ್ಳಿಗಳು ನಿಧಾನಕ್ಕೆ ಆ ನನ್ ತಾಯಿ ದನಕರ ಮಕ್ಳುಮರಿ ಯಾರ್ಗು ತೊಂದರೆ ಮಾಡ್ದಂಗೆ ಕಾಯ್ತಳೆ; ಅಮ್ಮನ ದೊಡ್ಡ ಕಾರ್ಯ ಮುಗೀತೆಂದು ನಿಟ್ಟುಸಿರು ಬಿಡುವ ಹೊತ್ತಿಗೆ ಆಚರಣೆಯ ಮುಂದುವರಿದ ಭಾಗ. ಪ್ರತಿ ಹಳ್ಳಿಗೂ ಮಣ್ಣಮ್ಮ ಮಡ್ಲಕ್ಕಿಗೆ ಬರುವ ಸಿದ್ದತೆಗಳು. ಏಳು ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗು ಹೋಗಿ ಮಡ್ಲಕ್ಕಿ ಹಾಕಿಸಿಕೊಂಡು ಪೂಜಿಸಿಕೊಳ್ಳುವ ಅಮ್ಮ ಜನರ ಹಿಡಿತಕ್ಕೆ ಸಿಕ್ಕು ಕೆಲವು ಮನೆಗಳ ಕಡೆಗೂ ಸುಳಿಯಲ್ಲ.

ಆದರೆ ಅಮ್ಮ ಹೊರಡಲು ಇವರೇ ವಾಲ್ಗ ಮಾಡ್ಬೇಕು. ಇವರಿಲ್ಲದೆ ಪರ್ಸೆಗೆ ಕಾಂತಿಬರಲ್ಲ. ಸನಾತನ ಹಿಡಿತಗಳು ಹಳ್ಳಿಗಳ ನೆಲವನ್ನು. ಹಿಡಿದು ಶೋಷಣೆ ತುಂಬದೇ ಬಿಟ್ಟಿಲ್ಲ. ಈ ದೇವಿ ಊರಾಡಿ ಮಡಿಲುತುಂಬಿಸಿಕೊಳ್ಳುವಾಗ ಅನೇಕ ವರ್ಣದ ಉದ್ದನೆಯ ಬಟ್ಟೆಗಳನ್ನೆಲ್ಲಾ ದಪ್ಪ ತಲೆಯ ಕೆಂಪು ಸೋಮನಿಗೆ ಕಟ್ಟಿ ಪೂಜಾರ್ರು ಗುಂಪಿನಲ್ಲಿ ಒಬ್ಬರು ತಲೆಗೊತ್ತು ಮನೆಮನೆಗೂ ಬರುತ್ತಾರೆ. ಕೈಯಲ್ಲಿ ದಡಿ ಚಾಟಿ. ಎಲ್ಲಾ ಮನೆಯಲ್ಲಿ ಹೆಣ್ಣು ಮಕ್ಕಳು ಎಲೆ ಅಡಿಕೆ ಕೊಡಬೇಕು. ಸೋಮನನ್ನು ಪೂಜಿಸಿ ಹಿಂದಿರುಗುವಾಗ ಕೈಹಿಡಿದು ಚಾಟಿಯಲ್ಲಿ ಬಾರಿಸುವ ಲೀಲೆಗಳನ್ನು ಯಾರು ಯಾವ ಕಾರಣಕ್ಕೆ ರೂಪಿಸಿದರೋ ಅಂದಾಜಿಲ್ಲ. ಒಟ್ಟು ಜತನವಾಗಿ ದಮ್ಮ, ದೈವ, ಸೋಮಗಳ ಅಂಕಿತದಲ್ಲಿ ಮಾಯೆಗಳು ನಡೆಯುವುದನ್ನು ಮರೆಯಾಗಿಸುವ ಉಪಾಯಗಳು ಎಲ್ಲೆಲ್ಲಿಯೂ ಇವೆ. ವೈಚಾರಿಕತೆ ಎನ್ನುವ ಪದವು ಸುಳಿಯದಂತೆ ಕೆಲವು ಹಳ್ಳಿಗಳನ್ನು ಭ್ರಮೆ ಭೀತಿಗಳಲ್ಲಿಯೇ ಮುಳುಗಿಸಿರುವ ನಿದರ್ಶನಗಳಿಗೇನು ಕೊರತೆ ಇಲ್ಲ. 

ಮಣ್ಣಮ್ಮ ಊರಾಡಿ ಅಕ್ಕಿ ಹಾಕಿಸಿಕೊಂಡು ಬಂದ ಮೇಲೆ ಊರಿನ ಮುಖಂಡರೆಲ್ಲ ಸೇರಿ ಇವತ್ತು ದೇವ್ರ್ನ ಊರಗೆ ಉಳಿಸ್ಕಂಡು ಮೆರ್ವಣ್ಗೆ ಮಾಡ್ಸನ ಅಂದ್ರೆ ಅವತ್ತು ಇಡೀ ಇರುಳು ಸೋಮನ ಕುಣಿತ ದೇವರ ಕುಣಿತ ದೂಳ್ಮರಿಗಳನ್ನು ಬಲಿಕೊಡುವ ಪದ್ಧತಿಗಳಲ್ಲಿ ಹರಿದಾಡುತ್ತದೆ. ಊರಿನೆಲ್ಲರು ಗಡಿಬಿಡಿಯಲ್ಲಿ ಎಲ್ಲವನ್ನೂ ಮುಗಿಸಿ ಊರನಡುವಿಗೆ ಮಕ್ಳುಮರಿ ಮಂದ್ಲಿಕೆ ಜೊತೆಗೆ ಬಂದು ಗುಂಪು ಸೇರುತ್ತಾರೆ. ಅಲ್ಲಿ ಸುತ್ತಲೂ ಚಹಾ ಬೋಂಡದ ಅಂಗಡಿಗಳು ದಿಬ್ಬಣದ ಭಾಗವಾಗುತ್ತವೆ.

ಆಕ್ರುಸಿ ವಿಭಿನ್ನ ಹೆಜ್ಜೆಗಳಲ್ಲಿ ಕುಣಿದು ಕುಪ್ಪಳಿಸುವ ಸೋಮಗಳನ್ನು ಬಾಯ್ ಬಿಟ್ಕಂಡು ಅಂಜಿಕೆಯಲ್ಲೇ ನೋಡ್ತಾ ಇದ್ವಿ ಕಿರಿಯರಿದ್ದಾಗ. ದೇವರನ್ನು ಹೊರುವ ಪೂಜಾರ್ರು ನಿರರ್ಗಳವಾಗಿ ಹೇಳುವ ದೇವಿಯ ಚರಿತ್ರೆಯಲ್ಲಿ ಕೊಲೆ, ರೋಷ, ಅಹಂಕಾರ, ಜಯ ಎಲ್ಲವೂ ಇವೆ. ಮಿಥ್ಯವೇಳಿ ಮಣ್ಣೆಯನ್ನು ಲಗ್ನವಾದವನು ತನ್ನಮ್ಮನನ್ನು ಕರೆತಂದು ಹೆಂಡತಿಯನ್ನು ಪರಿಚಯಿಸಿ ಅತ್ತೆಗೆ ಸೊಸೆ ಸೀಪ್ರದಡಿಗೆಗಳನ್ನು ಮಾಡಿ ಉಪಚರಿಸುತ್ತಾಳೆ. ಸತ್ಕಾರ ಕಡೆಯಾದ ಮೇಲೆ ಮಗ ಎಂಗಿತ್ತವ್ವ ಸೊಸೆ ಕೈಯ್ಯಗ್ಳಡ್ಗೆ ಅಂದ್ರೆ ಅವ್ವ ಏ ಬಿಡ್ಲ ಒಂದ್ಕರಿನ್ ಕಾಲ್ ಕಡ್ದಂಗಾಗ್ಲಿಲ್ಲ ಅಂದ್ಲಂತೆ. ದ್ವಿಜರ ಮನೆಮಗಳಾದ ಮಣ್ಣೆಸತ್ತಿ ವಂಚಿಸಿ ಮದುವೆಯಾದ ಮಾಂಸಾಹಾರಿಗಳ ಕುಟುಂಬವನ್ನೇ ಛಲದಿಂದ ಬಲಿಹಾಕಿದಳೆಂದು ಮೆರವಣಿಗೆಯುದ್ದಕ್ಕೂ ಸ್ವಾರಸ್ಯಕರ ಘಟನೆಗಳನ್ನು ವಿವರಿಸಿ ಹಾಡುಗಳಲ್ಲಿ ಹಾಡುತ್ತಾರೆ.

ದೇವರುಗಳು ಕೂಡ ಹಿಂಸೆಯೊಳಗೆ ರೂಪುಗೊಂಡಂತೆ ಕಟ್ಟಲ್ಪಟ್ಟ ಕಥೆಗಳಲ್ಲಿ ಹಲ್ಲೆಗಳು ನಡೆದಿವೆ. “ಭಕ್ತಿ ಎಂಬುದು ತೋರಿ ಉಂಬ ಲಾಭ, ಪುರಾಣವೆಂಬುದು ಪುಂಡರ ಗೋಷ್ಠಿ” ಎನ್ನುವ ಅಲ್ಲಮನ ಮಾತು ಎಲ್ಲ ಅವೈಚಾರಿಕ ದಾಳಿಗಳನ್ನು ಬಗ್ಗುಬಡಿಯುವಂತಿದೆ. ಸಸ್ಯಾಹಾರಿಯಾದ ಮಣ್ಣಮ್ಮ ಮಾತ್ರ ಕುರಿಕೋಳಿಗಳಿಗೆ ಜೊತೆಯಾದದ್ದು ವಿಪರ್ಯಾಸವೊ ಅಥವಾ ಸೇಡಿನ ಪಾವಕವೋ? ಅಂತೂ ಬಕುತಿಯ ಆರಾಧನೆಗಳೆಲ್ಲ ಮುಗಿದು ತಿಂಗಳಾಗುವ ಹೊತ್ತಿಗೆ ತಿಂಗಳ ಜಾತ್ರೆ ಸಾರುತ್ತಾರೆ. ಆಗಲೂ ಪ್ರತಿ ಊರುಗಳಲ್ಲಿಯೂ ಆರತಿ ಬಾಡಿನಡುಗೆಯೇ ಪ್ರಥಮದ್ದು.

ಹೀಗೀಗೆ ನಡೆಯುವ ಕಾಯುವಳೆಂದು ನಂಬಲ್ಪಟ್ಟ ಅಮ್ಮ ಊರಿನ ಜನ ಅಮ್ಮನಿಗೆ ವಿರುದ್ಧ ನಡೆದರೆ ಜಾನುವಾರುಗಳೆಲ್ಲವೂ ಮರಣಿಸಿಬಿಡುತ್ತವೆ. ಏನೋ ಅಂಟ್ಮುಂಟು ಆಗೆಯ್ತೆ ಅಮ್ಮ ಬುದ್ಧಿ ಕಲುಸ್ತಾವ್ಳೆ ಎನ್ನುವ ಜನ ತಾವೇ ನಿರ್ಮಿಸಲ್ಪಟ್ಟ ದೈವಗಳಿಗೆ ಯಾವ ಗುಣಗಳನ್ನು ಬೇಕಾದರೂ ಆರೋಪಿಸಿ ಬಿಡುತ್ತಾರೆ. ಸಾಂಕ್ರಾಮಿಕ ಜಾಡ್ಯಗಳು ಬಂದು ದನಕರುಗಳು ಉಸಿರು ಕಳೆದುಕೊಂಡರೆ ಅಮ್ಮನ ಕೈವಾಡವೆಂದು ಮದ್ದುಣಿಸದೆ ಪೂಜೆಗಳ ಕಡೆಗೆ ನಿಂತು ಬಿಡುತ್ತಾರೆ. ಎತ್ಲರೊ ಮಾರೇರು ಬಂದು ಊರೊಕ್ಕವರ್ರೆ ಅನ್ನೋ ಘೋರ ಕಥೆಗಳು ಊರನ್ನು ಆಳಿಬಿಡುತ್ತವೆ ಕೆಲವೊಮ್ಮೆ. ಇಂಥದ್ದಾಯ್ತು ಅಂದ್ರೆ ಅಮಾವಾಸ್ಯೆ ದಿನ ಎಲ್ಲಾ ಊರುಗಳಿಗು ಮಣ್ಣೆಸತ್ತಿಯನ್ನು ಕರೆ‌ಸಿ ಮಸ್ರನ್ನ ಹಾಕಿಸುವುದು ಮುತುವರ್ಜಿಯಿಂದ ನಡೆಯುತ್ತದೆ.

ಇತ್ತೀಚೆಗೆ ಟಿವಿ ೯ ಚಾನೆಲ್ನವರು ಇಲ್ಲಿಗೆ ಬಂದು ಅಮ್ಮನಿಗೆ ಹಲವು ಪವಾಡಗಳನ್ನು ಬೆಸೆದು ಸುದ್ದಿ ಹರಡಿದ ಮೇಲೆ ಎತ್ತೆತ್ಲರೋ ಜನ ಬಂದು ಹಣ ಸುರಿಯುತ್ತಾರೆ. ಗುಡಿಯ ಸುತ್ತ ವ್ಯಾಪಾರ ವಹಿವಾಟು ಜೋರಾಗಿದೆ. ನಮ್ಮನ್ನು ಕಾಯುವ ಶಕ್ತಿ ಖಾಸಗಿ ದೇವರೆಂದು ಸ್ಥಳೀಯರು ನಂಬಲ್ಪಟ್ಟ ಮಣ್ಣಮ್ಮ ದೊಡ್ಡ ದೊಡ್ಡ ನಗರಗಳ ಭಕ್ತರನ್ನು ಕರೆಸಿಕೊಳ್ಳುವಷ್ಟು ಬದಲಾವಣೆಗಳಾಗಿವೆ. ಹಳ್ಳಿಗರು ತಾಯ್ ನಮ್ಮಮ್ಮ ದೇಶುದ್ ಜನನೆಲ್ಲ ಕಾಯ್ತಳೆ ಎಂದು ಮೆಚ್ಚಿ ಉಬ್ಬುಬ್ಬಿ ಮಾತಾಡುತ್ತಾರೆ.

ಕೊಂಬಿನ ಕುರಿ, ತೊಂಬಾಳೆ ಹಣ್ಣಿನ ಸಂಘವಿಡಿದು ಇವತ್ತಿಗೆ ಹದಿನೈದು ದಿನಕ್ಕೆ ಮಣ್ಣೆಮಾರಿ ಪರ್ಸೆ ಕಣ್ರಪ್ಪೋ ಎಂದು ಕದ್ರಣ್ಣ ಸಾರುವಾಗ ಊರಿನ ಕಿರಿಯ ಕೂಸುಗಳೆಲ್ಲ ಹೂಬಿರಿದಂತೆ ಲಗ್ಗೆ ಇಟ್ಟು ತಪ್ಟೆಯ ಶಬುದಕ್ಕೆ ಹೆಜ್ಜೆ ಹಾಕುವ ಸೊಬಗೆ ಚೆಂದದ್ದು. ಸಾರಿಗೆ ಸಿಕ್ಕಿದವರು ತಪ್ಪದೆ ಜಾತ್ರೆಗೆ ಜೊತೆಯಾಗಬೇಕೆಂಬ ಪದ್ಧತಿಯು ವಿಪರೀತವಾಗಿ ನಂಬಲ್ಪಟ್ಟದ್ದು. ಮಣ್ಣಮ್ಮ ಸಾವಿರಾರು ಜನಕ್ಕೆ ಕಾಯುವ ಶಕ್ತಿಯಂತೆ ಕಂಡರೆ ಹಣಮೋಹಿಗಳಿಗೆ ” ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯ್ತು” ಎಂಬಂತೆಯು ಮಾಯೆ ಮೂಡುತ್ತದೆ.

ತಾಯ್ತಗಳು ಅರಿಶಿಣ ಕುಂಕುಮ ನಿಂಬೆಹಣ್ಣು ದೇವರ ನೆತ್ತಿಯ ಮೇಗಳ ಹೂ ಎಲ್ಲವೂ ಪ್ರಭಾವಕ್ಕೆ ಒಳಪಡುವುದು ಕೂಡ ಜನಸಾಮಾನ್ಯರ ಬದುಕಿಗೆ ನುಗ್ಗಿಸಲ್ಪಟ್ಟ ಮೌಢ್ಯವನ್ನು ಕಲಕಿ ಎಚ್ಚರದ ತಿಳಿಮೂಡಿಸುವವರು ಯಾರು? ಎಷ್ಟೆಲ್ಲ ವೈಚಾರಿಕತೆಯ ಪ್ರಖರ ತಿಳಿವಿನ ಹಿಂದೆಯೇ ಇರುವ ನಾವುಗಳು ಕೂಡ ಪ್ರತೀವರ್ಷವೂ ಗುಡಿಯಂಗಳದಲ್ಲಿ ನಿಂತು ಕೈಮುಗಿಯುವ ನಂಬಿಕೆ ಮಾತ್ರ ವೈರುಧ್ಯದ ಉದರದಲ್ಲಿ ಕಾಯ್ದುಕೊಂಡು ಸ್ಥಾವರಗೊಳ್ಳದೆ ಬದುಕುತ್ತಿರುತ್ತವೆ.

ಬಕುತಿಯ ಭೀತಿಯೊಳಗೆ ಬಕುತರೇ ಕೊಟ್ಟ ಒಡವೆ ವಸ್ತ್ರಗಳನ್ನು ಧರಿಸಿ ಆರಾಧನೆಯ ಆಚರಣೆಯಾಗುವ ದೇವರುಗಳೆಲ್ಲ ಕಾರಂತರು ಹೇಳುವಂತೆ “ನಮ್ಮ ಅಳತೆಯನ್ನು ಎಂದೂ ಮೀರಲಾರವು……ಈ ಕಾರಣಕ್ಕಾಗಿಯೇ ನಾನು ಮೂರ್ತಿರಾಯರ “ದೇವರು” ಪುಸ್ತಕವನ್ನು ಮತ್ತೆ ಮತ್ತೆ ಓದುತ್ತೇನೆ. ಪರ್ಸೆಗಳ ಜೊತೆ ಈಗ ಆಯುಧಗಳು ಸಖ್ಯ ಬೆಳೆಸಿವೆ. ದೇವರ ಹೆಸರಿನಲ್ಲಿ ನಡೆಯುವ ಎಲ್ಲವೂ ಜಾಗತೀಕರಣ ಮತ್ತು ಪ್ರಭುತ್ವ ಹಾಗೂ ಧರ್ಮ ಜಾತಿಗಳ ಕವಚವನ್ನು ಮೆತ್ತಿಕೊಂಡು ಅರಿವನ್ನು ಅನೂಚಾನವಾಗಿ ಪಲ್ಲಟಗೊಳಿಸುವ ದುರಂತಕ್ಕೆ ಮದ್ದಿಲ್ಲ.


“ಆರಿವೇಗುರು; ನುಡಿ ಜ್ಯೋತಿರ್ಲಿಂಗ”
(ಬಸವಣ್ಣ)

” ಹಿಂದೆ ಪದವಿತ್ತು; ಪದವೇ ದೇವರಾಗಿತ್ತು”
(ಬೈಬಲ್).

January 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vinod

    ಇದು ಯಾರು ಬರೆದ ಕತೆಯೊ
    ನನಗಾಗಿ ಬಂದ ವ್ಯಥೆಯೊ….
    ಮನಸ್ಸಿನ ಕಹಿ..ದುಗುಡ..ದುಮ್ಮಾನ ಗಳನ್ನು ಹೊರಹಾಕಲು ಅವಧಿ ಬ್ಲಾಗ್ ಬಳಕೆ ಬೇಡ..ಅದಕ್ಕೆಲ್ಲಾ ಪ್ರಜಾವಾಣಿ ಅಂತ ಒಂದು ದಿನಪತ್ರಿಕೆಯೇ ಇದೆ..

    ಪ್ರತಿಕ್ರಿಯೆ
  2. Chaitrashree R nayak

    ನನಗೆ ಒಮ್ಮೆಗೆ ಬಾಲ್ಯದ ನೆನಪು ಕಣ್ಣಿಗೆ ಬಂದಂತಾಯಿತು ಮಣ್ಣಮ್ಮನ ಜಾತ್ರೆ ಎಂದರೆ ಮನೆಯ ತುಂಬಾ ಜನ ಎಲ್ಲ ರು ಅವರವರ ಕೆಲಸದಲ್ಲಿ ಮಗ್ನರಾಗಿರುವರು ನನಗೆ ಜಾತ್ರೆ ಅನ್ನು ವುದಕ್ಕಿಂತ ಮನೆಗೆ ಎಲ್ಲರೂ ಬಂದಿದ್ದಾರೆ ಅನ್ನುವುದೆ ಸಂತೋಷದ ಸಂಗತಿ ದೇವರ ಹೆಸರಲ್ಲಿ ಎಷ್ಟೇ ಕಂದಾಚಾರಗಳನ್ನು ಮಾಡಿದರು ನಮ್ಮ ಹಳ್ಗಿಗಳ ಮುಗ್ಧ ಜನರು ಅವೆಲ್ಲವೂಗಳನ್ನು ಒಪ್ಪಿಕೊಳ್ಳುತ್ತಾರೆ ಲಿಂಗ ಭೇದಗಳನ್ನು ತಾರತಮ್ಯವನ್ನು ಸಹಿಸುತ್ತಾ ಎಲ್ಲಾ ಆಚರಣೆ ನಡೆಯುತ್ತವೆ ಇದು ಇಂದಿಗೂ ಹಾಗೆಯೇ ನೆಡೆಯುತ್ತದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: