ಮಣ್ಣು ತಿಂದು ಸತ್ತ ಮಕ್ಕಳದ್ದು ರಾಜಕೀಯ ಹತ್ಯೆ!

ಅಭಿವೃದ್ದಿ ಭಾರತ ಕುರಿತು ಮಾತನಾಡುವ ಹೊತ್ತು ಈಗ.

ಅಭಿವೃದ್ದಿಯ ವ್ಯಾಖ್ಯಾನಗಳು ಧರ್ಮ, ರಾಜಕೀಯ ಎಂಬ ಸೀಮಿತ ಚೌಕಟ್ಟಿಗೆ ಸಿಲುಕಿ ಮೆರೆಯುವ ಈ ಹೊತ್ತಿನಲ್ಲಿ ಅಭಿವೃದ್ದಿ ಭಾರತ ಕುರಿತಂತೆ ಹೊಸತೊಂದು ಕಟ್ಟುವ, ನಿಜ ವ್ಯಾಖ್ಯಾನವನ್ನು ಉತ್ಖನನ ಮಾಡುವ ನಿಟ್ಟಿನಲ್ಲಿ ಗದಗದಲ್ಲಿ ನಡೆಯುತ್ತಿದ್ದ ‘ಮೇ ಸಾಹಿತ್ಯ ಮೇಳ’ಕ್ಕೆ ದಾರಿ ಹಿಡಿದು ಹೊರಟೆ.

ಹರಿಹರದಿಂದ ರಾಷ್ಟ್ರೀಯ ಹೆದ್ದಾರಿ ತಲುಪಿದಾಗ ಆಗಲೇ ಕತ್ತಲೆ ಕವಿದಿತ್ತು. ಈಗಿರುವ ಹೈವೆಯನ್ನು ಅಗೆದು ಇನ್ನಷ್ಟು ಅಗಲ ಮತ್ತು ಉತ್ತಮ(?)ದ ರಸ್ತೆಯ ವಿಸ್ತರಣೆ ಅಭಿವೃದ್ದಿ ಕೆಲಸ ನಡೆಯುತ್ತಿರುವುದರಿಂದ ಗದಗ ಸೇರುವ ಸಲೀಸು ದಾರಿ ಯೊಂದು ತಪ್ಪಿ ಸಣ್ಣದೊಂದು ರಸ್ತೆಯನ್ನು ಸುತ್ತು ಬಳಸಿ (ಮುಖ್ಯರಸ್ತೆ ತಪ್ಪಿ ಹೋಗಿದ್ದರಿಂದ) ಹೋಗಬೇಕಾಯಿತು. ಕತ್ತಲಾಗಿದ್ದರಿಂದ ಸವಣೂರು-ಲಕ್ಷ್ಮೇಶ್ವರ- ಗದಗದ ದಾರಿ ಸಾಗುತ್ತಲೆ ಇರಲಿಲ್ಲ. ಅಲ್ಲಲ್ಲಿ ಸಣ್ಣ ಸಣ್ಣ ಹಳ್ಳಿಗಳು, ಇಕ್ಕಟ್ಟಾದ ರಸ್ತೆಗಳ ಗುಂಡಿಗಳನ್ನು ದಾಟಿಕೊಂಡು ಹೋಗುವಾಗ ಜನರು ಕತ್ತಲಲ್ಲಿ ಚೊಂಬು ಹಿಡಿದುಕೊಂಡು ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಸಾಲು ಸಾಲು ಹೋಗುತ್ತಿರುವುದು ಕಾಣಿಸುತ್ತಿತ್ತು. ನಾನಿದ್ದ ಕಾರಿನ ಲೈಟು ಬೀಳುತ್ತಲೆ ಎದ್ದು ನಿಲ್ಲುತ್ತಿದ್ದರು. ಹೀಗೆ ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಇಂತಹ ದೃಶ್ಯಗಳು ಗದಗ ನಗರದ ತುದಿ ಮುಟ್ಟುವವರೆಗೂ ಸಾಮಾನ್ಯವಾಗಿತ್ತು. ಕುಡಿಯುವ ನೀರಿಗಾಗಿ ತಳ್ಳುಗಾಡಿಯಲ್ಲಿ ಕೊಡಗಳನ್ನು ಎಳೆದಾಡಿಕೊಂಡು ದೂರದೂರಕೆ ಹೋಗುತ್ತಿದ್ದ ಜನರು ಎದುರಾಗುತ್ತಲೆ ಹೋದರು.

ಸ್ವಚ್ಛ ಭಾರತ್, ಬಯಲು ಶೌಚ ಮುಕ್ತ ಅಭಿಯಾನಗಳು ನಮ್ಮ ಹಳ್ಳಿಗಳನ್ನು ಇನ್ನೂ ತಲುಪಿಲ್ಲವೇ ಅಥವಾ ಈ ಅಭಿಯಾನಗಳನ್ನು ಜಾರಿಗೊಳಿಸುವಲ್ಲಿ ಅದ್ಯಾವ ಶಕ್ತಿ ತಡೆಯೊಡ್ಡಿತ್ತು ಎಂಬ ಪ್ರಶ್ನೆಯೂ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಮೊನ್ನೆ ಮೊನ್ನೆಯಷ್ಟೆ ಚುನಾವಣೆಗಳು ಮುಗಿದಿವೆ. ಚುನಾವಣೆ ಸಂದರ್ಭದಲ್ಲಿ ಮತಹಾಕುವವರೂ ಕೂಡ ಮತಯಾಚನೆಗೆ ಬಂದ ನಾಯಕರನ್ನು ಒಂದು ಕಕ್ಕಸ್ಸು ಮನೆ ಕಟ್ಟಿಸಿಕೊಡಿ ಎಂದಾಗಲಿ ಅಥವಾ ಯಾಕೆ ಇನ್ನೂ ಕಟ್ಟಿಸಿಕೊಟ್ಟಿಲ್ಲ ಎಂದು ಪ್ರಶ್ನಿಸಿದ ಯಾವ ಕುರುಹುಗಳು ಕಾಣಸಿಗಲಿಲ್ಲ. ಸ್ವಚ್ಛಭಾರತ್ ಅಭಿಯಾನದಡಿ ಗ್ರಾಮೀಣ ಭಾರತದಲ್ಲಿ 90 ಮಿಲಿಯನ್ ಶೌಚಾಲಯಗಳನ್ನು ಕಟ್ಟಲು ಮೀಸಲಿಟ್ಟ 1.96 ಲಕ್ಷ ಕೋಟಿ ರೂ.ಗಳ (ಯೋಜನೆ ಅರಂಭದಲ್ಲಿ ನಿಗದಿ ಪಡಿಸಿದ ಮೊತ್ತ) ಕಾರ್ಯಯೋಜನೆಯಲ್ಲಿ ಹಾವೇರಿ-ಸವಣೂರು-ಗದಗದ ಹಳ್ಳಿಗಳಿಗೆ ತಲುಪಿಲ್ಲವೆಂದಾದ ಮೇಲೆ ಅಭಿವೃದ್ಧಿ ಭಾರತದ ದೊಡ್ಡ ಘೋಷಣೆಯೇ ಒಂದು ಜನವಂಚನೆಯ ನಾಟಕ ಎಂಬ ತೀರ‍್ಮಾನಕ್ಕೆ ಬರಲು ಕಣ್ಣೆದುರೆ ಚೊಂಬು ಹಿಡಿದುಕೊಂಡು ಸಾಲು ಹೊರಟವರೆ ಸಾಕ್ಷಿ ಸಾಕಲ್ಲವೆ?

ಅಭಿವೃದ್ದಿಯನ್ನು ಕೇವಲ ರಾಜಕೀಯ ಪರಿಭಾಷೆಯಿಂದ ನೋಡುವುದಾದರೆ ಸಮುದಾಯ ಭವನ, ರಸ್ತೆ, ದೊಡ್ಡ ದೊಡ್ಡ ಸರ್ಕಾರಿ ಕಟ್ಟಡಗಳು, ಸೇತುವೆಗಳು, ಅಣೆಕಟ್ಟುಗಳಂತಹ ಸ್ಥಾವರಗಳನ್ನು ಆಧರಿಸಿದ್ದು, ಅದೇ ಮುಖ್ಯವಾಗಿ ಪ್ರತಿಪಾದನೆಯಾಗಿ ಜನರನ್ನು ಅಭಿವೃದ್ದಿ ಎಂದು ನಂಬಿಸುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.

ಕಳೆದ 10 ವರ್ಷಗಳಲ್ಲಿ ಭಾರತದ ಅಭಿವೃದ್ದಿ ಯ ಕಲ್ಪನೆಗೆ ಸೇರಿದ ಮತಷ್ಟು ಸಂಗತಿಗಳೆಂದರೆ ಅದು ಧರ್ಮ ಮತ್ತು ದೇಶಭಕ್ತಿ ಗುಜರಾತ್‌ನಲ್ಲಿ ಮನುಷ್ಯರ ಹತ್ಯಾಕಾಂಡವೂ ಅಭಿವೃದ್ದಿಯ ಮೈಲಿಗಲ್ಲಾಗಿ ರೂಪುಗೊಂಡದ್ದು ೨೧ ನೇ ಶತಮಾನದ ಹೊಸ ವ್ಯಾಖ್ಯಾನದ ದೌಭಾರ್ಗ್ಯವೆ ಸರಿ. ಗುಜರಾತ್ ಮಾದರಿ ಅಭಿವೃದ್ದಿಯ ಸೋಗು ದೆಹಲಿಯ ಗದ್ದುಗೆಯಲ್ಲೂ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡದ್ದು ಒಂದು ವಿಪರ್ಯಾಸ. ಇಂತಹ ಮಾದರಿಗಳ ಅಸಲಿತನಗಳು ಬಯಲಾಗುತ್ತಲೆ ಅಭಿವೃದ್ದಿಕಾರರು ಮೊರೆ ಈಗ ಹೋಗಿದ್ದು ದೇಶಭಕ್ತಿ ಎಂಬ ಹೊಸ ಕಾರ್ಯಸೂಚಿಗೆ.

ಇಲ್ಲಿ ಈ ದೇಶದ ಜನರ ಶಿಕ್ಷಣ, ಆರೋಗ್ಯ, ಉದ್ಯೋಗದ ಸವಾಲು- ಪ್ರಶ್ನೆಗಳಿಗಿಂತ ೩೦೦೦ ಕೋಟಿ ರೂಗಳ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಮುಗಿಲೆತ್ತರದ statue of unity ಅಭಿವೃದ್ದಿಯ ಸಂಕೇತವಾಗಿ ಎದ್ದು ನಿಲ್ಲುತ್ತದೆ. ದನದ ಮಾಂಸ ತಿಂದವರನ್ನು ಕೊಲುವುದು, ಐಷಾರಾಮಿ ಕಾರಿಗೆ ಕಟ್ಟಿ ಮನಸ್ಸೋಃ ಇಚ್ಛೆ ಬಡಿಯುವುದು ಕೂಡ ಅಭಿವೃದ್ದಿ ಮಾದರಿಯಾಗಿ ಮತ್ತು ಇದೆನ್ನೆಲ್ಲಾ ಪ್ರಶ್ನಿಸುವವರನ್ನು ದೇಶದ್ರೋಹಿಗಳನ್ನಾಗಿಸುವುದೂ ಕೂಡ ಆಧುನಿಕ ಭಾರತದ ಅಭಿವೃದ್ದಿ ಸ್ವರೂಪವಾಗಿ ಕಾಣುತ್ತಿದೆ.

ಈ ಬಾರಿಯ ‘ಮೇ ಸಾಹಿತ್ಯ ಮೇಳ’ದ ಮುಖ್ಯ ಆಶಯ, ಚರ್ಚೆ, ಸಂವಾದ ಎಲ್ಲವೂ ಅಭಿವೃದ್ದಿ ಭಾರತ ಕುರಿತೆ ಆಗಿತ್ತು. ಅಭಿವೃದ್ದಿಯನ್ನು ವ್ಯಾಖ್ಯಾನಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಹಿಂದಿನ ದಿನ ಕಂಡ ಬಯಲು ಬಹಿರ್ದೆಸೆಯ ಸನ್ನಿವೇಶಗಳಿಂದ ಮತ್ತಷ್ಟು ಖಾತರಿಯಾಗಿತ್ತು. ಅಧಿಕಾರ ರಾಜಕಾರಣದ ರಾಕ್ಷಸ ಹಿಡಿತದಲ್ಲಿರುವ ಅಭಿವೃದ್ದಿಯ ಸಿದ್ದಮಾದರಿಗಳನ್ನು ಒಡೆದು ಪುಡಿಗಟ್ಟಿ ಸಾಂಸ್ಕೃತಿಕ ರಾಜಕಾರಣ, ಮಾನವ  ಸಂಪನ್ಮೂಲ ಅಭಿವೃದ್ದಿಯ ರಾಜಕಾರಣವನ್ನು ಗಟ್ಟಿಗೊಳಿಸುವ ಮಾತು ಮತ್ತು ಕ್ರಿಯೆ ಇವತ್ತಿನ ಅಗತ್ಯವಾಗಿದೆ. ಈ ದೇಶದ ಕಟ್ಟಕಡೆಯ ಮನುಷ್ಯನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಯೂ ಅಭಿವೃದ್ದಿ ಭಾರತದ ಗುಣಲಕ್ಷಣವೆಂದು, ವಿಜ್ಞಾನ-ತಂತ್ರಜ್ಞಾನ, ಆರ್ಥಿಕ ವೇಗ, ಮಾನವನ ವ್ಯಕ್ತಿತ್ವ ವಿಕಸನಗಳು ಅಭಿವೃದ್ದಿ ಮಾದರಿಗಳು ಎಂಬ ಸತ್ಯವನ್ನು ಮರೆಮಾಚಿ ಸುಳ್ಳುಗಳ ಅಬ್ಬರದಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಸಂಚಿನ ದೊಡ್ಡ ಭಾಗವೇ ಆಗಿದೆ. ತನ್ನದೆ ನೆಲದ ಒಬ್ಬ ಆದಿವಾಸಿಯ ಬದುಕಿನ ಮೂಲಭೂತ ಹಕ್ಕನ್ನು ಅನುಷ್ಟಾನಗೊಳಿಸದ ಪ್ರಭುತ್ವವು ಅದೇ ಆದಿವಾಸಿಯನ್ನು ನಕ್ಸಲೈಟ್ ಆಗುವಂತೆ ಪ್ರೇರೇಪಿಸಿ ಬೇಟೆಯಾಡಿ ದೇಶಭಕ್ತಿಯನ್ನು ಸಾರುತ್ತದೆ. ಇಂತಹ ಅನೇಕ ಮಗ್ಗಲುಗಳನ್ನು ‘ಮೇ ಸಾಹಿತ್ಯ ಮೇಳ’ ಸಾಂಸ್ಕೃತಿಕ ಪ್ರತಿರೋಧದೊಂದಿಗೆ ಹೊಸ ಮೈಲಿಗಲ್ಲನ್ನು ಹುಟ್ಟುಹಾಕಿತು.

ಮರು ದಿನ ಬೆಳಗ್ಗೆ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿದಾಗ ಹಸಿವು ತಾಳದೆ ಮಣ್ಣು ತಿಂದು ಎರಡು ಕೂಸುಗಳು ಸಾವು ಕಂಡ ಸುದ್ದಿ ಕಣ್ಣಿಗೆ ಬಿದ್ದಿತು. ಆಂಧ್ರದ ಅನಂತಪುರ ಜಿಲ್ಲೆಯ ಕಮ್ಮಾರಮಂಡಲಪಲ್ಲಿ ಗ್ರಾಮದಲ್ಲಿ ಕರ್ನಾಟಕದ ಬಾಗೇಪಲ್ಲಿಯಿಂದ ವಲಸೆ ಹೋಗಿ ಕೂಲಿ ಮಾಡಿಕೊಂಡಿದ್ದ ಕುಟುಂಬದ ಈ ಎರಡು ಮಕ್ಕಳು ಹಸಿವು ತಾಳೆದ ಮಣ್ಣು ತಿಂದು ಸಾವು ಕಂಡಿದ್ದವು. ನನ್ನ ಹೊಟ್ಟೆ ಒಂದೆ ಸಮನೆ ಸಂಕಟದಿಂದ ಕಿವುಚಿತು.

ದೇಶದಲ್ಲಿ ಚುನಾವಣೆಯ ಜಾತ್ರೆಯೊಂದು ಬಿರುಸಾಗಿ ನಡೆದು ನಮ್ಮ ರಾಜಕೀಯ ನಾಯಕರುಗಳು ಬಗೆ ಬಗೆಯ ಭಕ್ತಿ, ಭರವಸೆಗಳನ್ನು ಉಣಿಸುತ್ತಿರುವಾಗ ಈ ದೇಶದ ಮಕ್ಕಳು ಅನ್ನವಿಲ್ಲದೆ ಮಣ್ಣು ತಿಂದು ಸತ್ತದ್ದು ನಮ್ಮ ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡ. ಇಂದಿಗೆ ನಾಲ್ಕಾರು ದಿನಗಳಾದರೂ ಮತಬೇಟೆಯಲ್ಲಿ ಮುಳುಗಿರುವ ಯಾವೊಬ್ಬ ನಾಯಕನೂ ಮಣ್ಣು ತಿಂದು ಸತ್ತ ನತದೃಷ್ಟ ಮಕ್ಕಳಿಗಾಗಿ ಒಂದೆರೆಡು ಹನಿ ಕಣ್ಣೀರು ಹಾಕಲಿಲ್ಲ. ಸಂತಾಪ ಸೂಚಿಸಲಿಲ್ಲ. ಈ ಮಕ್ಕಳ ಸಾವು ಈ ದೇಶದ ಅಧಿಕಾರಸ್ಥರು ನಡೆಸಿದ ರಾಜಕೀಯ ಹತ್ಯೆ .

‍ಲೇಖಕರು avadhi

May 9, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Sudha Hegde

    ಶೌಚಾಲಯಗಳಿದ್ದರೂ ನೀರಿನ ಕೊರತೆಯಿಂದ ಬಯಲನ್ನೇ ಆಶ್ರಯಿಸುವುದು ಬಯಲುಸೀಮೆಯಲ್ಲಿ ಸಾಮಾನ್ಯ. ನೀರಿನ ಕೊರತೆ ನೀಗುವವರೆಗೂ ಶೌಚಾಲಯಗಳು ಬಳಕೆಗೆ ಬರಲಾರವು

    ಪ್ರತಿಕ್ರಿಯೆ
  2. ashfaq peerzade

    ಮಕ್ಕಳ ಸಾವು ಈ ದೇಶದ ಅಧಿಕಾರಸ್ಥರು ನಡೆಸಿದ ರಾಜಕೀಯ ಹತ್ಯೆ . ನಿಜವಾದ ಮಾತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: