
ಎ ಆರ್ ಮಣಿಕಾಂತ್
ಆರು ವರ್ಷಗಳ ಹಿಂದಿನ ಮಾತು.
ಆ ದಿನಗಳಲ್ಲಿ ,ತಿಂಗಳ ಸಂಬಳ ಸಿಕ್ಕಿದ ತಕ್ಷಣ,ಜೆರಾಕ್ಸ್ ಅಂಗಡಿಯ ಕಡೆಗೆ ಓಡುತ್ತಿದ್ದೆ. ಹೇಗಾದರೂ ಮಾಡಿ ಒಂದು ಪುಸ್ತಕ ಮಾಡಬೇಕು ಅಂದುಕೊಂಡಿದ್ದ ಬರಹಗಳನ್ನು ಹೊರತೆಗೆದು ಅದನ್ನು ೫ ಸೆಟ್ ಜೆರಾಕ್ಸ್ ಮಾಡಿಸುತ್ತಿದ್ದೆ. ಆನಂತರ, ಹೊಸ ಪುಸ್ತಕಗಳನ್ನು ಪ್ರಕಟಿಸುವ ಉತ್ಸಾಹಿಗಳಿಗೆ ಮತ್ತು ಕೆಲವು ಪ್ರಕಾಶಕರಿಗೆ ನನ್ನ ಬರಹಗಳ ಒಂದೊಂದು ಸೆಟ್ ಅನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸುತ್ತಿದ್ದೆ.
” ಮಾನ್ಯರೇ, ನನ್ನ ಬರಹಗಳನ್ನು ಕಳಿಸಿದ್ದೇನೆ. ಈ ಬರಹಗಳನ್ನು ಒಳಗೊಂಡ ಒಂದು ಪುಸ್ತಕ ತರಬೇಕು ಅನ್ನುವುದು ನನ್ನ ಆಸೆ. ದಯವಿಟ್ಟು ನಿಮ್ಮ ಪ್ರಕಾಶನದ ಮೂಲಕ ಈ ಪುಸ್ತಕ ಪ್ರಕಟಿಸಲು ಸಾಧ್ಯವೇ? ನನಗೆ ರಾಯಲ್ಟಿ ಬೇಡ. ಪುಸ್ತಕವನ್ನು ನೀವು ಪ್ರಕಟಿಸಿದರೆ ಅಷ್ಟೇ ಸಾಕು. ೧೦೦ ಪುಸ್ತಕಗಳನ್ನು ಮಾರಾಟ ಮಾಡಿ ಕೊಡುವ ಜವಾಬ್ದಾರಿ ನನ್ನದು…. “‘ ಎಂದೆಲ್ಲಾ ಮನವಿ ಮಾಡಿಕೊಂಡು ಪತ್ರ ಬರೆಯುತ್ತಿದ್ದೆ.
ವಾರವೋ, ಹದಿನೈದಿಪ್ಪತ್ತು ದಿನವೋ ಅಥವಾ ತಿಂಗಳೋ ಕಳೆದ ನಂತರ ಆ ಕಡೆಯಿಂದ- ” ಈ ಬರಹಗಳು ಸುಮಾರಾಗಿವೆ. ಈ ಬರಹಗಳ ಸಂಕಲನ ತಂದರೆ ಅದರಿಂದ ಯಾವುದೇ ಲಾಭವಿಲ್ಲ. ಹಾಗಾಗಿ ನಿಮ್ಮ ಪುಸ್ತಕ ಪ್ರಕಟಿಸಲು ಸಾಧ್ಯವಿಲ್ಲ, ಕ್ಷಮಿಸಿ… ” ಅನ್ನುವ ಉತ್ತರ ಬರುತ್ತಿತ್ತು.ಇಂಥ ಪತ್ರಗಳು ಹಲವು ಕಡೆಯಿಂದ ಬಂದಮೇಲೆ- ಇನ್ಮುಂದೆ ಪುಸ್ತಕದ ಬಗ್ಗೆ ಯೋಚನೆಯನ್ನೇ ಮಾಡಬಾರದು ಅಂದುಕೊಂಡು, ಒಂದೆರಡು ದಿನ ವಿಪರೀತ ಯೋಚಿಸಿ, ಸುಸ್ತಾಗಿ, ಕಡೆಗೊಮ್ಮೆ ಸುಮ್ಮನಾಗುತ್ತಿದ್ದೆ.
ಆಮೇಲೆ ಏನಾಯಿತು ಅಂದರೆ…
ನೀಲಿ + ಮಾ( ಅಮ್ಮ) = ನೀಲಿಮಾ! 🙂
______________________________
”ನಿಮ್ಮ ಬರಹಗಳನ್ನು ಪುಸ್ತಕ ಮಾಡಲು ಸಾಧ್ಯವೇ ಇಲ್ಲ” ಎಂದು ಹತ್ತಕ್ಕೂ ಹೆಚ್ಚು ಪ್ರಕಾಶಕರು ಖಡಕ್ಕಾಗಿ ಹೇಳಿದ ನಂತರ, ಪುಸ್ತಕ ಪ್ರಕಟಿಸಬೇಕು ಅನ್ನುವ ಆಸೆಯನ್ನೇ ಕೈ ಬಿಟ್ಟೆ.
ಇದಾಗಿ ಆರೆಂಟು ತಿಂಗಳ ನಂತರ, ಆಗ ವಿಪ್ರೋದಲ್ಲಿ ಟೀಮ್ ಲೀಡರ್ ಆಗಿದ್ದ ಶ್ರೀನಿವಾಸ ವೆಂಕಟರಾಮ್ ಅವರು ಅದೊಮ್ಮೆ ವಿಜಯ ಕರ್ನಾಟಕ ಆಫೀಸ್ ಗೆ ಬಂದರು. ಅವರ ಬಳಿ, ನಾನು ವರ್ಷಗಳ ಹಿಂದೆ ಬರೆದು ಮರೆತೇಬಿಟ್ಟಿದ್ದ ”ಅಮ್ಮ” ಎಂಬ (ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕದಲ್ಲಿ ಇದು ೨ನೇ ಅಧ್ಯಾಯ) ಬರಹವಿತ್ತು. ಅದನ್ನು ತೋರಿಸಿ ಶ್ರೀನಿವಾಸ್ ಹೇಳಿದರು: ”ಸರ್, ನಾನು ನಿಮ್ಮ ಬರಹಗಳ ಅಭಿಮಾನಿ. ನಿಮ್ಮ ಬರಹಗಳ ಕಟ್ಟಿಂಗ್ಸ್ ನನ್ನಲ್ಲಿವೆ. ಆ ಪೈಕಿ ನನಗೆ ತುಂಬಾ ಇಷ್ಟವಾದ ಬರಹ ಇದು. ಇಲ್ಲಿನತನಕ ಈ ಬರಹದ ೧೦೦ ಕ್ಕೂ ಹೆಚ್ಚು ಕಾಪಿಗಳನ್ನು ಜೆರಾಕ್ಸ್ ಮಾಡಿಸಿ ಗೆಳೆಯರಿಗೆ, ಬಂಧುಗಳಿಗೆ ಕೊಟ್ಟಿದ್ದೇನೆ. ಓದಿದವರೆಲ್ಲಾ ತುಂಬಾ ಮೆಚ್ಚಿಕೊಂಡಿದ್ದಾರೆ. ಇಂಥಾ ಬರಹಗಳು ಹಾಗೆಯೇ ಉಳಿದುಹೋಗಬಾರದು. ದಯವಿಟ್ಟು ನಿಮ್ಮ ಬರಹಗಳನ್ನು ಸೇರಿಸಿ ಒಂದು ಬುಕ್ ಮಾಡಿ… ”
”ಸಾರ್, ಪುಸ್ತಕ ಮಾಡುವುದು ಬಹಳ ಕಷ್ಟ. ಯಾಕೆ ಅಂದರೆ, ಪುಸ್ತಕ ಮಾರಾಟ ಆಗುವುದಿಲ್ಲ ಎಂದು ತುಂಬಾ ಜನ ಹೇಳಿದ್ದಾರೆ. ಅನುಭವೀ ಪ್ರಕಾಶಕರು ಹೀಗೆ ಹೇಳಿದ ನಂತರವೂ ನಾನು ಬುಕ್ ಪ್ರಕಟಿಸಿದರೆ, ಮುಂದೊಮ್ಮೆ ಅವು ಮಾರಾಟ ಆಗದೆ ಉಳಿದುಹೋಗಬಹುದು. ಕೊನೆಗೆ ಅವನ್ನೆಲ್ಲಾ ತೂಕಕ್ಕೆ ಹಾಕಬೇಕಾಗುತ್ತೆ. ಬುಕ್ ಮಾಡಿ ಅದನ್ನು ಮಾರಾಟ ಮಾಡುವ ಚೈತನ್ಯ ನನಗಿಲ್ಲ. ಹಾಗಾಗಿ, ಬುಕ್ ಮಾಡು ಅಂತ ಮಾತ್ರ ಹೇಳಬೇಡಿ” ಎಂದು ಶ್ರೀನಿವಾಸ್ ಅವರಲ್ಲಿ ಮನವಿ ಮಾಡಿಕೊಂಡೆ.
ನನ್ನ ಮನವಿಗೆ ಶ್ರೀನಿವಾಸ್ ಅವರು ಕರಗಲಿಲ್ಲ. ”ನನ್ನ ಮಾತು ಕೇಳಿ ಸಾರ್. ಬರಹಗಳು ಚೆನ್ನಾಗಿವೆ. ಪುಸ್ತಕ ಖಂಡಿತ ಮಾರಾಟ ಆಗುತ್ತೆ. ನೀವು ಯೋಚನೆ ಮಾಡದೇ ಬುಕ್ ಪ್ರಿಂಟ್ ಮಾಡಿಸಿ… ” ಎಂದರು. ಈಗ ವಿಜಯ ಕರ್ನಾಟಕದಲ್ಲಿ ಸ್ಥಾನಿಕ ಸಂಪಾದಕರಾಗಿರುವ ಅಶೋಕ ರಾಮ್ ಅವರಿಂದ ಕೂಡ ಇದೇ ಮಾತು ಹೇಳಿಸಿದರು. ಆಗ ಕೂಡ ನಾನು – ”ದಯವಿಟ್ಟು ಕ್ಷಮಿಸಿ ಸರ್. ನನಗೆ ಪುಸ್ತಕ ಪ್ರಕಟಿಸಲು ಆಸಕ್ತಿಯಿಲ್ಲ ” ಅಂದೆ.
ಅವತ್ತು ಏನೂ ಮಾತಾಡದೆ ಎದ್ದು ಹೋದ ಶ್ರೀನಿವಾಸ್, ಮರುದಿನ ಮತ್ತೆ ಬಂದರು. ಅವತ್ತು ೧೫೦೦೦ ರೂಪಾಯಿಗಳನ್ನು ನನ್ನ ಕೈಗಿಟ್ಟವರೇ – ”ಪ್ರಕಾಶಕರು ಸಿಕ್ತಾ ಇಲ್ಲ ಅಂತ ಯೋಚನೆ ಮಾಡಬೇಡಿ. ನೀವೇ ಪ್ರಿಂಟ್ ಮಾಡಿಸಿ. ನನಗೆ ೧೦೦ ಬುಕ್ಸ್ ಕೊಡಿ” ಅಂದರು.
ಈಗ ತಪ್ಪಿಸಿಕೊಳ್ಳಲು ನನಗೆ ದಾರಿಯೇ ಇರಲಿಲ್ಲ. ನನ್ನ ಮಗಳು ನೀಲಿ ಮತ್ತು ಅವಳ ಅಮ್ಮನ ಚಿತ್ರ ಕಣ್ಮುಂದೆ ಬಂತು.ನೀಲಿ + ಮಾ( ಅಮ್ಮ) = ನೀಲಿಮಾ ಅಂದುಕೊಂಡು, ”ನೀಲಿಮಾ ಪ್ರಕಾಶನ”ದ ಹೆಸರಿನಲ್ಲಿ ಹೊಸ ಪುಸ್ತಕವನ್ನು ಪ್ರಕಟಿಸಲು ಸಿದ್ಧನಾದೆ.
ಆಮೇಲೆ ಏನಾಯಿತೆಂದರೆ..
ಕಾದು ಓದಿ..





0 Comments