ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣಿಕಾಂತ್ ಬರೆದಿದ್ದಾರೆ: ಕರೆದರೂ ಕೇಳದೆ…?

ಎ ಆರ್ ಮಣಿಕಾಂತ್
ಚಿತ್ರ: ಸನಾದಿ ಅಪ್ಪಣ್ಣ . ಗೀತೆರಚನೆ: ಚಿ. ಉದಯಶಂಕರ್.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಎಸ್. ಜಾನಕಿ.
ಕರೆದರೂ ಕೇಳದೆ……
ಸುಂದರನೇ ಏಕೆ … ನನ್ನಲ್ಲೀ ಈ ಮೌನಾ…
ಕರೆದರೂ ಕೇಳದೆ
ಸುಂದರನೇ ಏಕೆ … ನನ್ನಲ್ಲೀ ಈ ಮೌನಾ…          ||ಪ||
ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೇ…. ಸೇರದೇ…..
ಏಕೆ … ನನ್ನಲ್ಲೀ ಈ ಮೌನಾ…  ಕರೆದರೂ ಕೇಳದೆ……         ||೧||
ಈ ನನ್ನ ಅಂದ  ಚೆಂದ ನೀ ಕಾಣಲೆಂದೆ
ಈ ನನ್ನ ಗಾನ  ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರ ಬಂದಾಗ
ಕಲ್ಲೆದೆ ನಿನ್ನದೇ… ಏಕೆ ನನ್ನಲ್ಲಿ … ಈ ಮೌನಾ
ಕರೆದರೂ ಕೇಳದೆ……
ಪರಶಿವನೆ ಏಕೆ … ನನ್ನಲ್ಲೀ ಈ ಮೌನಾ…
ಕರೆದರೂ ಕೇಳದೆ……          ||೨||
ಮಿಂ ಮಿಂ ಧ್ವನಿ  ಮೃದಂಗ ಕೇಳದೆ
ಕೊರಳ ನಾಗ  ನಲಿದಾಡಲು ನೋಡದೆ
ಮಾಘ ಮಾಮರಿ ಗರಗರ ಕಾಣದೆ
ಶರ ಖೂಲ ಡಮರುಗ  ಮೆರೆದಾಡಿ
ಶಿವ ಚಂಚಂಚಂ ತತೋಂ

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ. ಅವಳ ಮೇಲೆ ಊರಿನ ಸಾಹುಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಿನಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ, ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವುದು ಅವನ ಪ್ರೀತಿಯ ಕೆಲಸ. ಈ ಕಾರಣದಿಂದಲೇ ಊರ ತುಂಬಾ ಆತ ಸನಾದಿ ಅಪ್ಪಣ್ಣ ಎಂದೇ ಹೆಸರಾಗಿರುತ್ತಾನೆ. ಅವನ ಸನಾದಿಯ ನಿನಾದಕ್ಕೆ ತಲೆದೂಗದವರೇ  ಇರುವುದಿಲ್ಲ. ಹೀಗಿದ್ದಾಗಲೇ, ಅಪ್ಪಣ್ಣನ ಸನಾದಿಯ ನಿನಾದದ ಜತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ ತನ್ನ ಮನೆಯಲ್ಲಿ ಹೇಳುತ್ತಾಳೆ. ಈ ಮಾತು ಕೇಳಿಸಿಕೊಂಡ ಸಾಹುಕಾರ, ಸೀದಾ ಅಪ್ಪಣ್ಣನ ಬಳಿ ಬಂದು-‘ನೋಡಪ್ಪಾ, ನಾನು ಎಲ್ಲಾ ರೀತಿಯ ಸಂಗೀತ ಕೇಳಿದ್ದೀನಿ. ಆದ್ರೆ ನಿನ್ನ ಕಹಳೆ ಸಂಗೀತ ಕೇಳಿಲ್ಲ. ನಮ್ಮ ಬಸಂತಿ ಗೊತ್ತು ತಾನೆ? ಅವಳ ನಾಟ್ಯಕ್ಕೆ ನೀನು ಸನಾದಿ ನುಡಿಸು. ಆಗ ನಿನ್ನ ಖ್ಯಾತಿ ಕೀರ್ತಿ ಶಿಖರ ತಲುಪುತ್ತೆ. ಅದು ಬಿಟ್ಟು ಯಾವಾಗಲೂ ದೇವಸ್ಥಾನದಲ್ಲಿ ನುಡಿಸ್ತಾ ಇದ್ರೆ ಏನು ಪ್ರಯೋಜನ?’ ಎನ್ನುತ್ತಾನೆ.
ಅದಕ್ಕೆ ಅಪ್ಪಣ್ಣ-‘ನನ್ನ ವಾದ್ಯ ಮಂಗಳ ಕಾರ್ಯಕ್ಕೆ ಮಾತ್ರ ಮೀಸಲು. ನಾನು ನಾಟ್ಯಕ್ಕೆ ಸನಾದಿ ಬಾರಿಸುವುದಿಲ್ಲ. ಕ್ಷಮಿಸಿ’ ಅನ್ನುತ್ತಾನೆ. ಈ ನಿರಾಕರಣೆಯಿಂದ ಸಿಟ್ಟಾದ ಬಸಂತಿ-‘ಓಹ್, ನನ್ನ ನಾಟ್ಯಕ್ಕೆ ನುಡಿಸಿದರೆ ಸೋತು ಹೋಗುವ ಭಯ ಅವರಿಗೆ ಇರಬಹುದು. ಅದಕ್ಕೇ ಅವರು ಹಿಂಜರಿದಿರಬಹುದು’ ಎಂದು ವ್ಯಂಗ್ಯವಾಡುತ್ತಾಳೆ. ಈ ಚುಚ್ಚು ಮಾತಿಂದ ಅಪ್ಪಣ್ಣನೂ ಸಹಜವಾಗಿಯೇ -‘ಯಾರು ಸೋಲ್ತಾರೋ ನೋಡೇ ಬಿಡೋಣ’ ಎಂಬರ್ಥದ ಮಾತಾಡುತ್ತಾನೆ. ಪರಿಣಾಮವಾಗಿ, ಊರಿನ ಈಶ್ವರ ದೇಗುಲದ ಅಂಗಳದಲ್ಲಿ ಬಸಂತಿಯ ನೃತ್ಯಕ್ಕೆ ಅಪ್ಪಣ್ಣ ಸನಾದಿ ನುಡಿಸುವ ಸ್ಪರ್ಧೆ ಶುರುವಾಗುತ್ತದೆ. ಆಗ ಬಸಂತಿ, ಅಪ್ಪಣ್ಣನನ್ನು ಕಣ್ಣಲ್ಲೇ ಕೆಣಕುತ್ತ ಹಾಡುತ್ತಾಳೆ: ಕರೆದರೂ ಕೇಳದೆ… ಸುಂದರನೇ ಏಕೇ… ನನ್ನಲ್ಲೀ ಈ ಮೌನಾ…
‘ಸನಾದಿ ಅಪ್ಪಣ್ಣ’ ಚಿತ್ರ ನೋಡಿರುವ ಎಲ್ಲರಿಗೂ ಈ ದೃಶ್ಯ ನೆನಪಿರುತ್ತದೆ. ಈ ಚಿತ್ರದ ಒಂದೆರಡು ವಿಶೇಷಗಳನ್ನು ಇಲ್ಲಿ ತಪ್ಪದೇ ಹೇಳಬೇಕು. ಏನೆಂದರೆ, ‘ಸನಾದಿ ಅಪ್ಪಣ್ಣ’ ಕೃಷ್ಣ ಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿದ ಸಿನಿಮಾ. ನಿಮ್ಮ ಕಥೆಯನ್ನು ಆಧರಿಸಿ ಸಿನಿಮಾ ಮಾಡಬೇಕು ಎಂದು ನಿರ್ಮಾಪಕರು ಹೇಳಿದಾಗ-ನಾಯಕನ ಪಾತ್ರದಲ್ಲಿ ರಾಜ್‌ಕುಮಾರ್ ನಟಿಸಬೇಕು. ಹಾಗಿದ್ರೆ ಮಾತ್ರ ಒಪ್ಪಿಗೆ ಕೊಡ್ತೇನೆ. ಇಲ್ಲವಾದರೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಂತೆ ಪುರಾಣಿಕರು. ಇನ್ನೊಂದು ವಿಶೇಷವೆಂದರೆ ಈ ಚಿತ್ರಕ್ಕಾಗಿ ಶಹನಾಯ್ ನುಡಿಸಿದವರು ಉಸ್ತಾದ್ ಬಿಸ್ಮಿಲ್ಲಾಖಾನ್. ಎಲ್ಲರನ್ನೂ ಕನಸಿನಲ್ಲೂ ಕಾಡುವ ‘ಕರೆದರೂ ಕೇಳದೆ… ಹಾಡಿಗೆ ಜತೆಯಾಗಿ ಸನಾದಿಯ ನಾದ ಇವೆಯಲ್ಲ? ಅದು ಬಿಸ್ಮಿಲಾ ಖಾನ್ ಅವರ ದಮನಿ ದಮನಿಯಿಂದ ಮೂಡಿ ಬಂದದ್ದು. ಅಂದ ಹಾಗೆ, ಈ ಚಿತ್ರಕ್ಕೆ ಬಿಸ್ಮಿಲ್ಲಾಖಾನ್ ಅವರನ್ನು ಕರೆಸಬೇಕು ಎಂಬ ಪ್ರಸ್ತಾಪ ಬಂದದ್ದು; ಈ ಪ್ರಸ್ತಾಪಕ್ಕೆ ಖಾನ್ ಸಾಹೇಬರು ಒಪ್ಪಿಕೊಂಡದ್ದು-ಎಲ್ಲವೂ ಆಕಸ್ಮಿಕವೇ. ಆ ಸಂದರ್ಭದ ವಿವರಣೆ ಹೀಗೆ‘
‘ಸನಾದಿ ಅಪ್ಪಣ್ಣ’ ಸಿನಿಮಾದ ಚಿತ್ರಕಥೆ-ಸಂಭಾಷಣೆ-ಗೀತೆ ರಚನೆಯ ಕೆಲಸ ಶುರುವಾಯಿತಲ್ಲ? ಆಗ ಉದಯ ಶಂಕರ್ ಹೇಳಿದರಂತೆ: ‘ ದೇವಾಲಯದ ಅಂಗಳದಲ್ಲಿ ಅಪ್ಪಣ್ಣ- ಬಸಂತಿಯ ಮಧ್ಯೆ ಸ್ಪರ್ಧೆ ಶುರುವಾಗುತ್ತದಲ್ಲ? ಆ ಸಂದರ್ಭದಲ್ಲಿ -‘ಅಯ್ಯೋ ಪೆದ್ದಾ, ನಿನಗೆ ಇದೆಲ್ಲಾ ಬೇಕಿತ್ತಾ? ಸುಮ್ನೆ ನಾನು ಕರೆದಾಗಲೇ ಬಂದು ಸನಾದಿ ನುಡಿಸಿದ್ರೆ ಆಗ್ತಾ ಇರಲಿಲ್ವಾ?’ ಎಂಬುದನ್ನೇ ಬಸಂತಿ ವ್ಯಂಗ್ಯವಾಗಿ ಹೇಳುವ ಧಾಟಿಯಲ್ಲಿ ಹಾಡು ಇರಲಿ’. ಹೀಗೆ ಹೇಳಿದ್ದಷ್ಟೇ ಅಲ್ಲ, ನಂತರದ ಹತ್ತೇ ನಿಮಿಷದಲ್ಲಿ ‘ಕರೆದರೂ ಕೇಳದೆ…’ ಹಾಡನ್ನೂ ಬರೆದು ಮುಗಿಸಿದರಂತೆ ಚಿ.ಉ.
ಈ ಚಿತ್ರಕ್ಕೆ ಬಿಸ್ಮಿಲ್ಲಾ ಖಾನ್ ಅವರು ಶಹನಾಯ್ ಬಾರಿಸಿದರೆ ಚನ್ನಾಗಿರುತ್ತೆ ಅಂದವರು ಬೇರೆ ಯಾರೂ ಅಲ್ಲ;  ಡಾ. ರಾಜ್‌ಕುಮಾರ್! ಸರಿ, ಬಿಸ್ಮಿಲ್ಲಾರನ್ನು ಒಪ್ಪಿಸಲು ಅವರಿದ್ದ ಕಾಶಿಗೇ ಹೋದವರು ‘ಸನಾದಿ ಅಪ್ಪಣ್ಣ’ದ ನಿರ್ಮಾಪಕ ವಿಕ್ರಮ್ ಶ್ರೀನಿವಾಸ್. ಅಲ್ಲಿ ಎಂಟು ದಿನ ತಂಗಿದ್ದ ಶ್ರೀನಿವಾಸ್, ಖಾನ್‌ರನ್ನು ನೋಡುವ ಆಸೆಯಿಂದಲೇ ದಿನವೂ ಅವರ ಮನೆಗೆ ಹೋಗುತ್ತಿದ್ದರಂತೆ. ಆದರೆ, ಬಿಸ್ಮಿಲ್ಲಾಖಾನ್‌ರು ನಸುಕಿಗೇ ಎದ್ದು, ಶಹನಾಯ್ ಜತೆಯಲ್ಲಿ ಕಾಶಿ ವಿಶ್ವನಾಥನ ದೇವಾಲಯಕ್ಕೆ ಹೋಗಿ ಬಿಟ್ಟಿರುತ್ತಿದ್ದರಂತೆ. ಮುಂಜಾನೆಯೇ ದೇವರ ಸನ್ನಿಯಲ್ಲಿ ಷಹನಾಯ್ ನುಡಿಸಿ ಬರುವುದು ಅವರ ದಿನಚರಿ.
ಹೀಗಿದ್ದಾಗಲೇ ಅದೊಂದು ದಿನ, ಸಂದರ್ಭ ನೋಡಿ ಬಿಸ್ಮಿಲ್ಲಾರನ್ನು ಭೇಟಿಯಾದ ಶ್ರೀನಿವಾಸ್, ವಿಷಯ ತಿಳಿಸಿದ್ದಾರೆ. ಇವರ ಮಾತನ್ನೆಲ್ಲ ಕೇಳಿದ ಬಿಸ್ಮಿಲ್ಲಾಖಾನ್ ಕಡೆಗೆ ಹೇಳಿದರಂತೆ: ‘ಈ ಹಿಂದೆ ಗುಂಜುಟ್ಟಿ  ಶಹನಾಯ್ ಅಂತ ಒಂದು ಸಿನಿಮಾ ಬಂದಿತ್ತು. ಅದಕ್ಕೂ ನನ್ನ ಶಹನಾಯ್ ವಾದನ ಬಳಸಿಕೊಂಡ್ರು. ಆದರೆ, ನನಗೆ ಆ ಸಿನಿಮಾ ತಂಡದಿಂದ ಬೇಸರ ಆಗುವಂಥ ಸಂದರ್ಭಗಳು ಒದಗಿ ಬಂದ್ವು. ಹಾಗಾಗಿ ಸಿನಿಮಾದವರ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದೇನೆ. ನಾನು ಸಿನಿಮಾಕ್ಕೆ ಶಹನಾಯ್ ನುಡಿಸೋದಿಲ್ಲ. ಕ್ಷಮಿಸಿ.
ಖಾನರು ಹೀಗೆಂದ ನಂತರವೂ ಮೂರ್‍ನಾಲ್ಕು ದಿನ- ನೀವು ಬರ್‍ಲೇ ಬೇಕು ಸಾರ್ ಎಂದು ಒತ್ತಾಯಿಸಿದ್ದಾರೆ ಶ್ರೀನಿವಾಸ್. ಅದಕ್ಕೆ ಖಾನರು ಒಪ್ಪದಿದ್ದಾಗ, ಅದೊಂದು ದಿನ ಕಾಶಿ ವಿಶ್ವನಾಥನ ದೇವಸ್ಥಾನದ ಎದುರೇ ಅಂಗಿ, ಬನಿಯನ್ ತೆರೆದು ಜನಿವಾರ ತೋರಿಸಿ ಹೇಳಿದರಂತೆ: ಸಾರ್, ನಾನು ಬ್ರಾಹ್ಮಣ. ನಿಮ್ಮನ್ನು ಕರ್‍ಕೊಂಡೇ ಹೋಗಬೇಕು ಅಂತ ಬಂದಿದ್ದೀನಿ. ಸನಾದಿ ಊದುವವನ ಪಾತ್ರವನ್ನು ರಾಜ್‌ಕುಮಾರ್ ಮಾಡ್ತಾರೆ. ನಿಮ್ಮ ಶಹನಾಯ್ ಧ್ವನಿ ನಮಗೆ ಬೇಕೇ ಬೇಕು. ನೀವು ಬರೋದೇ ಇಲ್ಲ ಅಂತ ಹಟ ಹಿಡಿದ್ರೆ ನಾನು ನಿಮ್ಮ ಮನೆ ಮುಂದೆ ಉಪವಾಸ ಕೂರ್‍ತೇನೆ. ಅಗತ್ಯ ಬಂದ್ರೆ ಇಲ್ಲೇ ಪ್ರಾಣ ಬಿಡ್ತೇನೆಯೆ. ಹೊರತು ಊರಿಗಂತೂ ಹೋಗಲ್ಲ’ ಅಂದರಂತೆ.
ಈ ಮಾತಿಗೆ ಕರಗಿದ ಬಿಸ್ಮಿಲ್ಲಾ ಖಾನ್‌ರು ಅದೊಂದು ದಿನ ಒಂಬತ್ತು ಜನರ ತಂಡದೊಂದಿಗೆ ಮದ್ರಾಸ್‌ಗೆ ಬಂದೇ ಬಿಟ್ಟರಂತೆ. ಆಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಸಿನಿಮಾದ ಸಂದರ್ಭ ಹಾಗೂ ಶಹನಾಯ್‌ನ ರಾಗ ಹೇಗೆ ಬಂದರೆ ಚೆಂದ ಎಂಬುದನ್ನು ಬಿಸ್ಮಿಲ್ಲಾರಿಗೆ ಸೂಕ್ಷ್ಮವಾಗಿ ಹೇಳಿದರಂತೆ. ಅದಕ್ಕೆ ಬಿಸ್ಮಿಲ್ಲಾಖಾನರು- ನೋಡೀ, ನನಗೆ ಈ ಸಿನಿಮಾ ಸಂಗೀತ ಅಷ್ಟಾಗಿ ಒಗ್ಗಿ ಬರೋದಿಲ್ಲ. ನಾನು ಇಲ್ಲಿ ಎಂಟು ದಿನ ಇರ್‍ತೇನೆ. ಬೆಳಗ್ಗೆ ಏಳರಿಂದ ರಾತ್ರಿ ಒಂಬತ್ತು ಗಂಟೆಯ ತನಕ ನುಡಿಸ್ತೇನೆ. ನಂತರ ಈ ಟ್ಯೂನ್‌ಗಳನ್ನು ಸಿನಿಮಾದಲ್ಲಿ ನಿಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಿ. ಅಂದರಂತೆ. ಈ ಮಾತಿಗೆ ಒಪ್ಪಿದ ಜಿ.ಕೆ. ವೆಂಕಟೇಶ್- ಉಸ್ತಾದ್, ಆಪ್ ಬಜಾತೇ ರಹಿಯೇ’ ಎಂದರಂತೆ. ಎಂಟು ದಿನಗಳ ಕಾಲ ಶಹನಾಯ್ ನುಡಿಸಿದ ಮೇಲೆ- ‘ಕರೆದರೂ ಕೇಳದೆ’ ಹಾಡಿಗೆ ಟ್ಯೂನ್ ಹಾಕಿಕೊಟ್ಟು ಊರಿನ ಹಾದಿ ಹಿಡಿದರಂತೆ ಖಾನ್.
ಬಿಸ್ಮಿಲ್ಲಾರು ಉಳಿದಿದ್ದರಲ್ಲ; ಆ ಎಂಟು ದಿನಗಳ ಕಾಲವೂ ದೇವರ ಮುಂದೆ ನಿಲ್ಲುವ ಮಾತಿಲ್ಲದ ಭಕ್ತನಂತೆ, ಅಮ್ಮನ ಮುಂದೆ ಕೂರುವ ಕಂದನಂತೆ-ಖಾನ್ ಸಾಹೇಬರ ಮುಂದೆ ಕೂತಿದ್ದವರು ಡಾ. ರಾಜ್. ಈ ಅವಯಲ್ಲಿ ಶಹನಾಯ್ ಹಿಡಿವ ರೀತಿ, ರಾಗದ ಏರಿಳಿತಕ್ಕೆ ಮುಖ, ಕೆನ್ನೆ, ಹಣೆಯ ನೆರಿಗೆ ಅದುರಬೇಕಾದ ಸಂದರ್ಭ, ಹಾಡಿನ ಸಂದರ್ಭಕ್ಕೆ ತುಟಿ ಚಲನೆ ಹೊಂದಿಸಿಕೊಳ್ಳುವ ಪರಿ, ಕೈ ಬೆರಳುಗಳನ್ನು ನಿಯಮಿತವಾಗಿ ಚಲಿಸುವ ತಂತ್ರವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿದ್ದರು.
ಕೆಲ ದಿನಗಳ ನಂತರ ಯಾವುದೋ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಬಂದಿದ್ದರಂತೆ ಬಿಸ್ಮಿಲ್ಲಾ ಖಾನ್. ಆಗ ಸನಾದಿ ಅಪ್ಪಣ್ಣದ ಶೂಟಿಂಗ್ ಬೆಂಗಳೂರಲ್ಲಿ ನಡೀತಿತ್ತು. ಈ ಸುದ್ದಿ ತಿಳಿದ ಖಾನರು-ನಾನು ಒಮ್ಮೆ ಚಿತ್ರತಂಡದವರನ್ನು ನೋಡಬೇಕಲ್ಲ  ಎಂದು ನಿರ್ಮಾಪಕ ಶ್ರೀನಿವಾಸ್‌ಗೆ ಫೋನ್ ಮಾಡಿ ತಿಳಿಸಿದ್ದಾರೆ.  ತಕ್ಷಣವೇ ಅವರನ್ನು ಕರೆಸಿಕೊಂಡರಂತೆ ಶ್ರೀನಿವಾಸ್. ಆ ನಂತರ, ಅದುವರೆಗೆ ನಡೆದಿದ್ದ ಚಿತ್ರೀಕರಣದ ಭಾಗವನ್ನೆಲ್ಲ ಬಿಸ್ಮಿಲ್ಲಾರಿಗೆ ತೋರಿಸಿದರಂತೆ. ಎಲ್ಲವನ್ನೂ ನೋಡಿದ ಖಾನ್ ಕೊನೆಗೆ ಹೇಳಿದರಂತೆ: ‘ನಾನು ಇಷ್ಟು ವರ್ಷ ಸತತವಾಗಿ ಅಭ್ಯಾಸ ಮಾಡಿದೆ. ಪ್ರಯತ್ನಪಟ್ಟೆ. ಆದರೆ ರಾಜ್‌ಕುಮಾರ್ ಕೇವಲ ಒಂದು ಗಂಟೆಯೊಳಗೆ ಇದನ್ನೆಲ್ಲ  ಸಾಸಿಬಿಟ್ರು. ಈ ಚಿತ್ರಕ್ಕೆ  ಶಹನಾಯ್ ನುಡಿಸಿರೋದು ನಾನೋ ಅಥವಾ ಅವರೋ ಅರ್ಥವಾಗ್ತಾ ಇಲ್ಲ. ಅದರಲ್ಲೂ ‘ಕರೆದರೂ ಕೇಳದೆ…’ ಹಾಡಿಗಂತೂ ನಾನು ನುಡಿಸಲೇ ಇಲ್ಲ ಅನ್ನಬೇಕು. ಅಷ್ಟರಮಟ್ಟಿಗೆ ಆ ದೃಶ್ಯದಲ್ಲಿ ರಾಜ್‌ಕುಮಾರ್ ತಾದಾತ್ಮ್ಯ ಸಾಸಿದ್ದಾರೆ…
***
ಈಗ ‘ಕರೆದರೂ ಕೇಳದೆ’. ಹಾಡನ್ನು ಮತ್ತೊಮ್ಮೆ ನೋಡಿ. ಹಾಡು ಮುಗಿದಾಗ ಬಿಸ್ಮಿಲ್ಲಾ ಖಾನ್‌ರ ಥರಾನೇ ಉದ್ಗರಿಸುವಂತಾಗದಿದ್ದರೆ ಹೇಳಿ…

‍ಲೇಖಕರು avadhi

11 May, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading