ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗುವನ್ನೇ ಮರೆತಿದ್ದಳು ಆ ತಾಯಿ!

ಸಂಗಮೇಶ ಮೆಣಸಿನಕಾಯಿ

ಹಂಪಿ ಎಕ್ಸ್ಪ್ರೆಸ್ನಲ್ಲಿ ಪ್ರತಿದಿನ ಬುತ್ತಿ ಬರುತ್ತಿತ್ತು. ಕಾಲೇಜು ಮುಗಿಸಿ ಸಂಜೆ 7 ಗಂಟೆಗೆ ಕೊಪ್ಪಳದ ರೇಲ್ವೆ ಸ್ಟೇಷನ್ ಕಾಯೋದು ನಿತ್ಯದ ಕೆಲವಾಗಿತ್ತು. ಆವತ್ತು ಎಲ್ಲೆಲ್ಲೂ ಮಹಿಳೆಯರೇ. ಸ್ಟೇಷನ್ನಿನಲ್ಲಿ ಕಾಲಿಡಲೂ ಜಾಗ ಇರಲಿಲ್ಲ. ಅದು `ಬೆಂಗಳೂರು ಚಲೊ’ನಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅಂಗನವಾಡಿ ಕಾರ್ಯಕತರ್ೆಯರ ಹಾಗೂ ಸಹಾಯಕಿಯರ ದಂಡು. ಕೆಲವು ಮಹಿಳೆಯರ ಜತೆಗೆ ಅವರ ಗಂಡಂದಿರೊ, ಸಹೋದರರೋ ಒಟ್ಟಾರೆ ಕೆಲವು ಗಂಡಸರೂ ಇದ್ದರು- ಬೆಂಗಳೂರಿಗೆ ಪುಕ್ಕಟ್ಟೆ ಪ್ರಯಾಣ ಮಾಡುವ ಸಲುವಾಗಿ!

ಎಂಜಿನ್ ನಿಲ್ಲುವ ಜಾಗದ ಬಳಿ ನಿಂತುಕೊಂಡಾಗ ಅಲ್ಲೊಂದು ಎರಡು ವರ್ಷದ ಮಗು ಮುದ್ದುಮುದ್ದಾಗಿ ಆಡುತ್ತಿತ್ತು. ಹತ್ತಿರದಲ್ಲಿದ್ದ ಗುಂಪಿನವರದೇ. ಅದು ಒಮ್ಮೆ ಉಚ್ಚೆ ಹೊಯ್ದ ನಂತರ ತಾಯಿ ಚೆಡ್ಡಿ ಬದಲಿಸಿದಳು. ಹಿಂದಿನ ಎಲ್ಲ ನಿಲ್ದಾಣಗಳಲ್ಲೂ ಇಂಥ ಪ್ರಯಾಣಿಕರನ್ನು ಹೇರಿಕೊಳ್ಳುತ್ತ, ತೆವಳುತ್ತ ಅಂತೂ ರೈಲು ಮುಕ್ಕಾಲು ಗಂಟೆ ಲೇಟಾಗಿ ಬಂತು. ಅದಾಗಲೇ ಫುಲ್. ಇಲ್ಲಿರುವ `ಅಂಗನವಾಡಿ ಅಕ್ಕಾವ್ರೂ’ ಅದರಲ್ಲೇ ತೂರಿಕೊಳ್ಳಬೇಕು. ಎಂಜಿನ್ನಲ್ಲಿದ್ದ ಬುತ್ತಿ ತೊಗೊಂಡೆ. ಟ್ರೇನು ಸ್ವಲ್ಪ ಜಾಸ್ತಿ ಹೊತ್ತೇ ನಿಂತಿತ್ತು.

ಸರಿ, ಟ್ರೇನು ಹೊರಟು 5-6 ಬೋಗಿಗಳು ಪ್ಲ್ಯಾಟ್ಫಾಮರ್್ ದಾಟಿರಬೇಕು. ಆ ಮಗು ಅಲ್ಲೇ ಆಡ್ತಿದೆ! ಕೂಡಲೇ ಆ ಮಗೂನ್ನ ಎತ್ತಿಕೊಂಡೆ. ಸ್ಟೇಷನ್ ಮಾಸ್ತರಗೆ ಕೂಗಿದೆನಾದರೂ ರೈಲಿನ ಶಬ್ದದಲ್ಲಿ ಅವರಿಗೆ ಕೇಳಿಸೋದು ಸಾಧ್ಯನೇ ಇಲ್ಲ. ರೈಲು ಹತ್ತಿ ಚೈನು ಎಳೆಯಬೇಕೆಂದರೆ ಎಲ್ಲ ಬೋಗಿಗಳ ಬಾಗಿಲಲ್ಲಿಯೂ ಜನ ಜೋತು ಬಿದ್ದಿದ್ದಾರೆ. ಅಂಗೈಯಲ್ಲಿ ಜೀವ ಹಿಡಿದುಕೊಂಡಿರುವ ಅವರಿಂದ ಅದ್ಯಾವ ಸಹಾಯ ಸಿಕ್ಕೀತು? ಗಾಡರ್್ಗೆ ಜೇಬಿನಲ್ಲಿದ್ದ ಬ್ಯಾಟರಿ ತೆಗೆದು ಬೋಗಿ ದೂರ ಇರುವಾಗಲೇ ಅಲ್ಲಾಡಿಸಿದೆ. ಅವರು ಹತ್ತಿರ ಬಂದಾಗ `ಈಗ ನಿಲ್ಲಿಸೋದು ನಾಟ್ ಪಾಸಿಬಲ್…’ ಎಂಬಂತೆ ಸಂಜ್ಞೆ ಮಾಡ್ತಿದ್ದ. `ಹಾಗಲ್ಲ…ಯಾರೋ ಪ್ಯಾಸೆಂಜರ್ ಮಗು ಬಿಟ್ಟು ಹತ್ತಿದ್ದಾರೆ…’ ಎಂದು ಮಗೂನ್ನ ಎತ್ತಿ ಎತ್ತಿ ತೋರಿಸಿದೆ. ಅವರಿಗೆ ಸ್ಥಿತಿ ಅರ್ಥವಾಯ್ತು. ಕೂಡಲೇ ಬ್ರೇಕ್ ಹಾಕಿದರೂ ರೈಲು ಮತ್ತೆ ನೂರಿನ್ನೂರು ಮೀಟರ್ ದೂರ ಹೋಗಿ ನಿಂತಿತು. ಅಂದರೆ ಮುಂದಿನ ಬೋಗಿಯಲ್ಲಿರಬಹುದಾದ ಆ ತಾಯಿಯನ್ನು ಹುಡುಕಲು ಕನಿಷ್ಠ ಮುಕ್ಕಾಲು ಕಿ.ಮೀ. ಆದರೂ ಓಡಬೇಕು!

`ಯಾರೋ ಈ ಮಗೂನ್ನ ಬಿಟ್ಟು ಹತ್ಯಾರ…ಸ್ವಲ್ಪ ನಿಮ್ಮ ಡಬ್ಯಾಗ ಎಲ್ರಿಗೂ ಹೇಳ್ರಿ…’ಎನ್ನುತ್ತ ಓಡಿದ್ದೇ ಓಡಿದ್ದು. ಅದಾಗಲೇ ಕತ್ತಲು. ಹಳಿ ಪಕ್ಕದಲ್ಲಿ ಕಡಿ, ಕಾಲುದಾರಿಗೆ ಹತ್ತಿಕೊಂಡೇ ಬೆಳೆದಿರುವ ಜಾಲಿ ಮುಳ್ಳು. ಕೊನೆಗೂ ಎಂಜಿನ್ ಹಿಂದೆಯೇ ಇದ್ದ ಬೋಗಿ ತಲುಪಿದೆ. ಬೋಗಿಯ ಹೊರಗೆ ಜೋತು ಬಿದ್ದವರಿಗೆ ಹೇಳಿದೆ-`ಈ ಕೂಸಿನ ತಾಯಿ ಇದ ಡಬ್ಯಾಗ ಹತ್ಯಾಳ. ಸ್ವಲ್ಪ ಒದರಿ ಹೇಳ್ರಿ.. ಈ ಕೂಸಿನ ಸಲುವಾಗೇ ಗಾಡಿ ನಿಂತೈತಿ..’ ಎಂದಾಗ ಎಲ್ಲರೂ ಕೂಗಾಡೋಕೆ ಶುರು ಮಾಡಿದರು. ಆಗ ಇಣುಕಿದಳು ಮಹಾತಾಯಿ! `ಅಯ್ಯ ನಾನು ನಮ್ಮ ಮನಿಯವರ ಹತ್ರ ಐತಿ ಅಂತ ತಿಳ್ಕೊಂಡಿದ್ದೇರಿ..ನಮ್ಮನಿಯವರು ಹಿಂದಿನ ಡಬ್ಯಾಗ ಅದಾರ್ರಿ. ಅವರ ಕೈಯಾಗ ಕೊಟ್ಟು ಬಿಡ್ರಿ’ ಅಂದಾಗ ನನ್ನ ಸ್ಥಿತಿ ಹೇಗಾಗಿರಬೇಡ? `ರೀ ಅಕ್ಕೋರ ನಿಮ್ಮ ಕೂಸಿನ ಸಲುವಾಗಿ ಇಡೀ ಗಾಡಿ ನಿಂತೈತಿ. ನಿಮ್ಮನ್ನ ಹುಡುಕುದರಾಗ ಸಾಕಾಗೈತಿ. ಇನ್ನ ನಿಮ್ಮ ಮನಿಯವರನ್ನ ಹೆಂಗ ಹುಡುಕಲಿ? ನಿಮ್ಮ ಕೂಸು ನೀವು ನೋಡಿಕೊಳ್ಳಲಾರದವರು ಅಂಗನವಾಡಿಗೆ ಬರೋ 40-50 ಮಕ್ಕಳನ್ನ ಹೆಂಗ ನೋಡಿಕೋಂತೀರಿ…’ ಎಂದೆಲ್ಲ ರೇಗಾಡಿದೆ. `ಅಯ್ಯ ಕೊಡ್ರಿ. ನನಗ ಇಲ್ಲಿ ನಿಲ್ಲಾಕ ಜಾಗ ಇಲ್ಲ. ಅದಕ್ಕ ನಮ್ಮನಿಯವರಿಗೆ ಕೊಡ್ರಿ ಅಂದೆ. ಅದಕ ಇಷ್ಟು ಮಾತಾಡ್ತೀರಿ ಅಂದರ ಬ್ಯಾಡ ಕೊಡ್ರಿ’ ಅನ್ನಬೇಕಾ? ಆಗ ನನಗ್ಯಾಕ ಬೇಕಿತ್ತು ಈ ಉಸಾಬರಿ ಅಂತ ಅನ್ನಿಸ್ತು.

 

 

 

‍ಲೇಖಕರು G

2 March, 2011

1 Comment

  1. Basava Raju L

    “ನಿಮ್ಮ ಕೂಸು ನೀವು ನೋಡಿಕೊಳ್ಳಲಾರದವರು ಅಂಗನವಾಡಿಗೆ ಬರೋ 40-50 ಮಕ್ಕಳನ್ನ ಹೆಂಗ ನೋಡಿಕೋಂತೀರಿ?” – ಎಂದು ನೀವು ಕೇಳಿದ್ದು ಅಭಿನಂದನೀಯ.
    ಜೊತೆಗೆ ಒಂದು ಕಾಲದಲ್ಲಿ `ಬೆಂಗಳೂರು ಚಲೊ’ನಲ್ಲಿ ಪಾಲ್ಗೊಳ್ಳಲು ಇದೇ ರೈಲಿಗೆ ನುಗ್ಗುತ್ತಿದ್ದ ನಮ್ಮ ‘ಆ ದಿನಗಳು’ ನೆನಪಾದವು. ಕುರಿಗಳಂತೆ ನುಗ್ಗಿರುತ್ತಿದ್ದ ನಮ್ಮ ಪಾಡೇನೋ ಸರಿ ಆದರೆ, ಪಾಪ ಸೀಟು/ಬೆರ್ತುಗಳನ್ನು ಕಾಯ್ದಿರಿಸಿಕೊಂಡು ಬಂದಿದ್ದ ಪ್ರಯಾಣಿಕರ ಪಾಡಂತೂ ನೋಡಲಾಗುತ್ತಿರಲಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading