ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

“ನಿಮ್ಮನ್ನ ಕಟ್ಟಿಕೊಂಡು ಏನು ಮಾಡಲಿ…?”

ರಿಪ್ಪನ್‌ಕಪೂರ್‌(೧೯೫೪-೧೯೯೪) ಆ ಹೊತ್ತು ಸಶಬ್ದವಾಗಿಯೇ ತನ್ನ ಬೇಸರ ಬೇಗುದಿಯನ್ನು ಹೊರಹಾಕಿದ್ದರು. ಅವರೆದುರು ಕುಳಿತಿದ್ದ ನಾವು ಸುಮಾರು ೨೫ ಜನ ಹೆಚ್ಚೂ ಕಡಿಮೆ ಮುಖಕ್ಕೆ ಹೊಡೆಸಿಕೊಂಡವರಂತೆ ತೆಪ್ಪಗಿದ್ದೆವು.

ದುಸ್ಥಿತಿಯಲ್ಲಿರುವ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಅಭಿವೃದ್ಧಿಯನ್ನೇ ಎದುರಿಟ್ಟುಕೊಂಡು ೧೯೭೯ರಲ್ಲಿ CRY – ಚೈಲ್ಡ್‌ ರಿಲೀಫ್‌ ಅಂಡ್‌ ಯೂ ಸಂಸ್ಥೆಯನ್ನು ರಿಪ್ಪನ್‌ ಸ್ಥಾಪಿಸಿದ್ದರು. ಆದರೆ ತಾವೇ ನೇರವಾಗಿ ಕ್ಷೇತ್ರಕಾರ್ಯಗಳನ್ನು ಮಾಡುವ ಬದಲು ಹಳ್ಳಿ ನಗರಗಳಲ್ಲಿ ಚಿಕ್ಕಪುಟ್ಟ ಸಂಸ್ಥೆಗಳನ್ನು ಕಟ್ಟಿಕೊಂಡು ಕೆಲಸ ಮಾಡುವವರಿಗೆ ಆರ್ಥಿಕ ನೆರವು, ಮಾಹಿತಿ ತರಬೇತಿ, ಸಂಪರ್ಕ ಒದಗಿಸುವುದು ಅತ್ಯಾವಶ್ಯಕ ಎಂದು ರಿಪ್ಪನ್‌ ಮತ್ತು ಆ ಮೂಲಕ ಕ್ರೈ ಸಂಸ್ಥೆ ಮನಗಂಡಿತ್ತು.

ಆ ಹೊತ್ತಿಗೆ ಸ್ವಯಂಸೇವಾ ಸಂಘಟನೆಗಳಿಗೆ ಮತ್ತು ಸರ್ಕಾರಕ್ಕೆ ಕೂಡಾ ಅಭಿವೃದ್ಧಿ ಕೆಲಸಗಳಿಗೆ ವಿದೇಶೀ ಮೂಲಗಳಿಂದ (ಸಂಸ್ಥೆಗಳು, ಸರ್ಕಾರಗಳು, ಇತ್ಯಾದಿ) ಧನ ಸಹಾಯ ಬರುತ್ತಿತ್ತು. ೧೯೭೬ರಲ್ಲಿ ವಿದೇಶೀ ದೇಣಿಗೆ ನಿಯಂತ್ರಣ ಕಾಯಿದೆ ಜಾರಿಗೆ ಬಂದಿತ್ತು. ಚಿಕ್ಕಪುಟ್ಟ ಸಂಸ್ಥೆಗಳಿಗೆ ಕಾಯಿದೆಯಂತೆ ದಾಖಲಾಗಲು ಒಂದಷ್ಟು ಕಷ್ಟವಿತ್ತು. 

ಇಂತಹ ಸಂಸ್ಥೆಗಳಿಗೆ ಧನ ಸಹಾಯ ಮಾಡುವ ಉದ್ದೇಶದಿಂದ ಭಾರತದಲ್ಲೇ ದೇಣಿಗೆ ಸಂಗ್ರಹ, ಶುಭಾಶಯ ಪತ್ರಗಳ ಮಾರಾಟ ಇತ್ಯಾದಿ ವಿಧಾನಗಳಿಂದ ನಿಧಿ ಕೂಡಿಸುವ ಸಂಸ್ಥೆಯಾಗಿ ಕ್ರೈ ಬೆಳೆಯಿತು. ಸಂಗ್ರಹಿಸಿದ ಹಣವನ್ನು ಸೂಕ್ತ ಸಂಸ್ಥೆಗಳಿಗೆ ವಿತರಿಸುವ ಮತ್ತು ಅವರು ನಿಧಿಯನ್ನು ಸೂಕ್ತವಾಗಿ ಬಳಸುತ್ತಿದ್ದಾರೆಂದು ನಿಗಾ ವಹಿಸುವ ಹಾಗೂ ಉದಾರವಾಗಿ ದೇಣಿಗೆ ನೀಡುವವರಿಗೆ ವರದಿ ಮಾಡುವ ಜವಾಬ್ದಾರಿ ಇತ್ತು. ಅದಕ್ಕಾಗಿ ಕಾರ್ಯಕ್ರಮ ನಿರ್ವಹಣಾ ಘಟಕವನ್ನು ಕ್ರೈ ಆರಂಭಿಸಿತ್ತು. ಆ ಘಟಕಕ್ಕೆ ನಾನು ಸೇರಿದ್ದು ಜೂನ್ ‌೧೯೯೨. ಸೇರಿದ ವಾರದಲ್ಲೇ ಮೊದಲೇ ನಿಗದಿಪಡಿಸಿದ್ದಂತೆ ಮುಂಬೈನಲ್ಲಿ ತರಬೇತಿ.

ಮಕ್ಕಳ ಸಮಗ್ರ ಚಿತ್ರಣ ದೇಶದಲ್ಲಿ ಹೇಗಿದೆ, ಅವುಗಳನ್ನು ಪ್ರಾದೇಶಿಕವಾಗಿ ಮತ್ತು ನಿರ್ದಿಷ್ಟ ಸಮುದಾಯ ಅಥವಾ ಭೌಗೋಳಿಕ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ಹೆಗ್ಗುರುತುಗಳು ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಸ್ವಯಂ ಸೇವಾ ಸಂಘಟನೆಗಳು, ಅವರ ಆವಶ್ಯಕತೆಗಳನ್ನು ಗುರುತಿಸುವುದು ಹೇಗೆ, ಅವರಿಗೆ ನೆರವು ನೀಡಲು ಎಂತಹ ಬರಹಗಳು ಬೇಕು, ದಾಖಲೆಗಳನ್ನು ನೀಡಬೇಕು, ಯಾವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಎಂತೆಂತಹ ರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳು ಕಾರ್ಯಕ್ರಮಗಳನ್ನು ಕುರಿತು ನಾವು ಗಮನಿಸುತ್ತಿರಬೇಕು, ನಾವು ಮೈಗೂಡಿಸಿಕೊಳ್ಳಬೇಕಾದ ಕೌಶಲ್ಯಗಳು, ನಡೆ ನುಡಿ ಯಾವುವು ಇತ್ಯಾದಿ ಕುರಿತು ಪರಿಣಿತರು ಹೇಳುತ್ತಿದ್ದಾಗ ರಿಪ್ಪನ್‌ಒಂದು ಮೂಲೆಯಲ್ಲಿ ಕುಳಿತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು.

ಎಂದಿಗೂ ಬೇರೆಯವರ ಮಾತಿನಲ್ಲಿ ತಲೆ ಹಾಕುತ್ತಿರಲಿಲ್ಲ. ಏನಾದರೂ ಗಹನವಾದುದನ್ನು ಅವರೆದುರು ನಾವು ಎತ್ತಲೆತ್ನಿಸಿದರೆ ತನಗೆ ಇದೆಲ್ಲಾ ಅರ್ಥವಾಗಲ್ಲ, ತಾನು ಕೇವಲ ಏರೋಪ್ಲೇನಿನಲ್ಲಿ ಪ್ರಯಾಣಿಕರಿಗೆ ಕಾಫಿ ಟೀ ಒದಗಿಸುವ ವ್ಯಕ್ತಿ, ಪರಿಣಿತರನ್ನು ಕೇಳಿ ಎಂದು ಜಾರಿಕೊಳ್ಳುತ್ತಿದ್ದರು.

ಇಂತಹ ರಿಪ್ಪನ್ ‌ತರಬೇತಿಯ ಮೂರನೇ ದಿನ ಅದೇನೋ ಮಾತಿಗೆ ಬಂದು, ʼನೀವ್ಯಾರಾದರೂ ಸಿ.ಆರ್.ಸಿ. ಓದಿದ್ದೀರಾ?ʼ ಎಂದರು. ಆ…ಊ…ಎನ್ನುತ್ತಿದ್ದಾಗ, ʼಕನ್ವೆನ್ಷನ್ ‌ಆನ್ ‌ದ ರೈಟ್ಸ್‌ಆಫ್‌ ದ ಚೈಲ್ಡ್‌ʼ ಎಂದು ಸ್ಪಷ್ಟಪಡಿಸಿದರು. ಆಗ [ಸಮಾಜಕಾರ್ಯ, ಸಂವಹನ, ಸಮಾಜಶಾಸ್ತ್ರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಕ್ಕಳ ಅಭಿವೃದ್ಧಿ, ಮಹಿಳಾ ಅಧ್ಯಯನ, ಇನ್ನೂ ಏನೇನೋ ಓದಿಕೊಂಡಿದ್ದ] ನಾವೊಂದಷ್ಟು ಜನ ಏನೇನೋ ತಡವರಿಸಿದೆವು. ಓದಿಲ್ಲ ಅಂತಾನೋ, ಗೊತ್ತಿಲ್ಲ ಅಂತಾನೋ ನೇರವಾಗಿ ಹೇಳಲೂ ಮಿಸುಕಾಡಿದೆವು. ಆಗಲೇ ರಿಪ್ಪನ್‌ ಸಶಬ್ದವಾಗಿಯೇ ʼWhat can I do with this bunch?’ ಎಂದದ್ದು.

ನನ್ನ ಬಳಿ ಸಿ.ಆರ್.ಸಿ. ಪ್ರತಿ ಇತ್ತು. ೧೯೯೦ರಲ್ಲೇ ಓದುವ ಯತ್ನ ಮಾಡಿ ಮುಗ್ಗರಿಸಿದ್ದೆ. ರಾಷ್ಟ್ರೀಯ ಕಾನೂನು ಶಾಲೆ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಂಸ್ಥೆಯ ಆಗಿನ ಅಧ್ಯಕ್ಷೆ ಲಲಿತಾ ಸುಬ್ಬುರತ್ನಂ ಅವರ ನೆರಳಿನಲ್ಲಿ ಭಾಗವಹಿಸಿದ್ದೆ. ಆಗ ಸಿ.ಆರ್.ಸಿ. ಇಂಗ್ಲಿಷ್ ‌ನೋಡಿ ಬೆದರಿದ್ದು ಬಿಟ್ಟರೆ ಹೆಚ್ಚೇನೂ ಅದರತ್ತ ಗಮನಿಸಿರಲಿಲ್ಲ.

ಮುಂಬೈನ ತರಬೇತಿ ಮುಗಿಸಿ ಬೆಂಗಳೂರಿಗೆ ಬಂದವನು ಆ ವಿಶ್ವಸಂಸ್ಥೆಯ ಕಬ್ಬಿಣದ ಕಡಲೆ-ಇಂಗ್ಲಿಷ್‌ ಭಾಷೆಯನ್ನು ಅರಗಿಸಿಕೊಳ್ಳಲು ಯತ್ನಿಸಿ, ಮತ್ತೆ ಸೋತೆ. ಹಾಗೂ ಹೀಗೂ ಮಾಡಿ ಅಲ್ಲಲ್ಲಿ ತಡಕಿ ಬೆದಕಿದಾಗ ಯುನಿಸೆಫ್‌ ಪ್ರಕಟಿಸಿದ್ದ ಕನ್ನಡದ ಪ್ರತಿ ಸಿಕ್ಕಿತ್ತು. ಅದನ್ನೋದಿ ಅರ್ಥ ಮಾಡಿಕೊಳ್ಳುವುದಕ್ಕಿಂತಾ ಇಂಗ್ಲಿಷ್ ‌ಪ್ರತಿಯೊಡನೆ ಗುದ್ದಾಡುವುದೇ ಒಳಿತು ಅಂತ ಅನಿಸಿದ್ದಂತೂ ನಿಜ. 

ಈ ನನ್ನ ಬೇಗುದಿಯನ್ನು ಇಬ್ಬರು ಹತ್ತಿರದಿಂದ ನೋಡುತ್ತಿದ್ದರು. ನನ್ನಪ್ಪ ವಿಶ್ವನಾಥ ಮತ್ತು ನನ್ನ ಹೆಂಡತಿ ಎನ್.‌ಲಕ್ಷ್ಮೀ. ʼಕನ್ನಡದಲ್ಲಿರುವುದು ಸರಿಯಿಲ್ಲ ಅಂತ ಅನ್ನಿಸಿದರೆ ನೀನೇ ಸರಿಯಾಗಿ ಅನುವಾದ ಮಾಡಿಕೊಂಡು ಬರೆದುಕೋʼ ಅಪ್ಪನ ಸಲಹೆ. ಅದು ಒಂದು ರೀತಿ ನನ್ನನ್ನು ಕೆಣಕಿದಂತೆಯೇ ಸೈ. ಅವರಿಗೂ ಗೊತ್ತಿತ್ತು ನನ್ನ ಭಾಷಾ ಪ್ರಾವೀಣ್ಯತೆ!

ಬೆಂಗಳೂರಿನ ಬನಶಂಕರಿಯಲ್ಲಿರುವ ಮಾತೃ ಛಾಯಾ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಪದ್ಮಾ ಸುಬ್ಬಯ್ಯನವರು ೧೯೯೪ರಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಲು ನನ್ನನ್ನು ಆಹ್ವಾನಿಸಿದ್ದರು. ಆ ಶಿಬಿರದಲ್ಲಿ ಮಕ್ಕಳ ಹಕ್ಕುಗಳ ವಿಚಾರ ಪ್ರಸ್ತಾಪಿಸಿದರೆ ಹೇಗೆ ಎನ್ನುವ ಕಲ್ಪನೆ ಬಂದಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಲಕ್ಷ್ಮೀಯನ್ನೇ ಕೋರಿದ್ದಾಯಿತು. ಆಗ ಆಕೆ ದಿ ಕನ್ಸರ್ನ್ಡ್ ‌ಫಾರ್ ‌ವರ್ಕಿಂಗ್‌ ಚಿಲ್ಡ್ರನ್ ‌ಎಂಬ ಸಂಸ್ಥೆಯಲ್ಲಿ ಸಂವಹನ ವಿಭಾಗದಲ್ಲಿದ್ದಳು.

ಗೆಳತಿ ಕವಿತಾ ರತ್ನಾ ಆ ವಿಭಾಗದ ಮುಖ್ಯಸ್ಥೆ. ಅವರಿಬ್ಬರ ಮಾತುಕತೆ, ತಯ್ಯಾರಿ ಫಲ ನನಗೆ ಸಿಕ್ಕಿತು. ಲಕ್ಷ್ಮೀ ಮಕ್ಕಳೊಡನೆ ಒಂದೆರೆಡು ಗಂಟೆಗಳ ಕಾಲ ಮಕ್ಕಳ ಹಕ್ಕುಗಳನ್ನು ಕುರಿತು ವಿಚಾರ ಹಂಚಿಕೊಂಡಳು. ನಮ್ಮ ಆರೇಳು ತಿಂಗಳ ಮಗು ಶ್ರದ್ಧಾಳನ್ನು ಎತ್ತಿಕೊಂಡು ನಾನೂ ಲಕ್ಷ್ಮೀ ನೀಡಿದ ವಿವರಣೆಗಳನ್ನು ಆಲಿಸಿದೆ.

ಕ್ರೈ ಸಂಸ್ಥೆಯ ಸಹವರ್ತಿಗಳೊಡನೆ ನಮ್ಮ ಮಾತುಕತೆ ಆರಂಭವಾಗಿ ಮುಂದಿನ ಹೆಜ್ಜೆಗಳನ್ನು ಹೇಗೆ ತೆಗೆದುಕೊಂಡು ಹೋಗುವುದು ಎಂಬ ಸಮಗ್ರ ಯೋಜನೆಗಳು ಹರಳುಗಟ್ಟುವ ಸಮಯದಲ್ಲೇ ರಿಪ್ಪನ್‌ ಅಪ್ಲಾಸ್ಟೋ ಅನೀಮಿಯಾ ಎಂಬ ರೋಗ ಲಕ್ಷಣಗಳಿಗಾಗಿ ಪಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ಅಕಾಲಿಕ ಮರಣಕ್ಕೆ ಈಡಾದರು.

ರಿಪ್ಪನ್‌ ಕಪೂರ್‌ ಹೆಸರಿನಲ್ಲಿ ಒಂದು ಫೆಲೋಶಿಪ್‌ ಕಾರ್ಯಕ್ರಮವನ್ನು ಕ್ರೈ ಆರಂಭಿಸಿತು (೧೯೯೫). ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಈ ಫೆಲೋಶಿಪ್‌ಗೆ ಸೂಕ್ತ ವ್ಯಕ್ತಿಗಳನ್ನು ಹುಡುಕುವ ಜವಾಬ್ದಾರಿ ನನ್ನ ತಂಡದ್ದಾಯಿತು. ಹೊಸ ಪಾತ್ರ. ಹೊಸ ಸವಾಲು. ಅದೆಷ್ಟೊಂದು ಹೊಸ ಹೊಸ ಕಲ್ಪನೆಗಳಿರುವವರೊಡನೆ ನೇರವಾಗಿ ಸಮಾಲೋಚಿಸುವ ಅವಕಾಶ.  ಆಗಲೇ ಸಾಕಷ್ಟು ಪ್ರಸಿದ್ಧವಾಗಿದ್ದ ಅಶೋಕ ಇನ್ನೋವೇಟರ್ಸ್ ‌ಫಾರ್‌  ದಿ ಪಬ್ಲಿಕ್‌ನ ಪ್ರತಿನಿಧಿ ನಳಿನಿ ಗಂಗಾಧರ್ ‌ಅವರನ್ನು ಹೈದರಾಬಾದಿನಲ್ಲಿ ಭೇಟಿಯಾಗಿ ಸಮಾಲೋಚನೆಗಳನ್ನು ನಡೆಸಿ ಫೆಲೋಶಿಪ್‌ ಕಾರ್ಯಕ್ರಮವನ್ನು ಬೆಳೆಸಬೇಕಿತ್ತು. 

ವಿಜಯಪುರದ ವಾಸುದೇವ ತೋಳಬಂದಿ; ಬಾಗಲಕೋಟೆಯ ಬೂದೆಪ್ಪ; ಮಂಡ್ಯದ ಅಶ್ವತ್ಥ ನಾರಾಯಣ; ಬೆಂಗಳೂರಿನ ಮುಸ್ಲಿಂ ವಿಮೆನ್ಸ್‌ ಆರ್ಗನೈಸೇಷನ್‌ನ ತಸ್ಲೀಂ, ದಾವಣಗೆರೆಯ ಹರೀಶ್ ಮತ್ತು ರೇಣುಕಾ‌; ಹೊಳಲ್ಕೆರೆಯ ಬಾಲರಾಜ್‌; ಮೊಳಕಾಲ್ಮೂರಿನ ವಿರೂಪಾಕ್ಷಪ್ಪ ಮತ್ತು ಪ್ರಕಾಶ್‌, ಕೈವಾರದ ಶಂಕರ್‌; ಎಚ್ ‌ಕ್ರಾಸಿನ ವೆಂಕಟರಮಣಸ್ವಾಮಿ ಹಾಗೆಯೇ ಆಂಧ್ರಪ್ರದೇಶದ ತೆನಾಲಿಯ ರಾಮಕೃಷ್ಣ; ಹೈದರಾಬಾದಿನ ತನುಜ, ಭದ್ರಾಚಲಂನ ಕೋಯಾ ಸಮುದಾಯದ ವೀರಯ್ಯ; ವಿಶಾಖಪಟ್ನಂನ ಭೀಮಲಿಂಗ, ವಿಜಯನಗರಂನ ಎಂ.ಎಚ್.ವಿ.ಎಚ್.‌ಮೆಹರ್‌; ಅಪ್ಪಲ್‌ನಾಯ್ಡು, ಚಿತ್ತೂರಿನ ರಮಣ … ಇನ್ನೂ ಅನೇಕರು.

ಆಗಿನ್ನೂ ಕ್ಷೇತ್ರದಲ್ಲಿ ಹೊಸತನ್ನು ಯೋಚಿಸುತ್ತಿದ್ದ ಇವರಿಗೆ ಅವಕಾಶಗಳನ್ನು ಹೊಸ ದೃಷ್ಟಿಕೋನದಲ್ಲಿ ಸೃಷ್ಟಿಸುವ ಇರಾದೆ ಈ ಫೆಲೋಷಿಪ್‌ನದ್ದಾಗಿತ್ತು.

ಈ ಕ್ರೈ ಫೆಲೋಗಳೊಂದಿಗೆ ಹಾಗೂ ಕ್ರೈ ಬೆಂಬಲ ನೀಡುತ್ತಿದ್ದ ಸುಮಾರು ೨೫ ಸಂಸ್ಥೆಗಳೊಂದಿಗೆ ಆರಂಭದ ಸಮಾಲೋಚನೆ, ತರಬೇತಿಗಳನ್ನು ನಡೆಸುತ್ತಿದ್ದಾಗ ಬಂದ ಹೊಳಹು, ಇವರಿಗೆ ಮಕ್ಕಳ ಹಕ್ಕುಗಳು ಮತ್ತು ಸಂಬಂಧಿತ ಕಾನೂನು ಇತರ ಮಾಹಿತಿಗಳನ್ನು ಕುರಿತು ತಿಳಿಸಲೇಬೇಕು. ಮುಖ್ಯ ಮಕ್ಕಳನ್ನು ಕುರಿತು ನಡೆಯುವ ಅಭಿವೃದ್ಧಿ ಪ್ರಯತ್ನಗಳು ʼಏಕೆʼ ಎಂಬುದು ಎಲ್ಲರಲ್ಲೂ ಅಂತರ್ಗತವಾಗಬೇಕಿತ್ತು.

ಬಾಲಕಾರ್ಮಿಕರನ್ನು ಏಕೆ ಸಂರಕ್ಷಿಸಬೇಕು? ಮಕ್ಕಳಿಗೆ ಶಿಕ್ಷಣ ಏಕೆ ಮುಖ್ಯ? ಬಡ ಕುಟುಂಬಗಳು, ಹಿಂದುಳಿದ ಜಾತಿ ವರ್ಗ ಪಂಗಡಗಳು, ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳೇ ಏಕೆ ಶೋಷಣೆಗೆ ಬಲಿಯಾಗುತ್ತಿದ್ದಾರೆ? ಹೆಣ್ಣುಮಕ್ಕಳ ಮೇಲೇಕೆ ಅಭಿವೃದ್ಧಿ ಚಿಂತನೆಗಳು ಕೇಂದ್ರೀಕರಿಸುತ್ತಿವೆ? ಬಾಲ್ಯವಿವಾಹ, ದೇವದಾಸಿ ಪದ್ಧತಿ ತಡೆಯಬೇಕು ಏಕೆ? ಮಕ್ಕಳ ಸಾಗಣೆ ತಪ್ಪಿಸಬೇಕು, ಹಾಗೆ ತೊಂದರೆಯಲ್ಲಿರುವವರ ಪುನರ್ವಸತಿ ಮಾಡಬೇಕು ಏಕೆ? ಇದರಲ್ಲಿ ಮಕ್ಕಳ ಹಕ್ಕುಗಳ ಜಾಡು ಎಲ್ಲಿದೆ? 

ಈ ಹಿಂದೆ ಡಾ. ಫಾದರ್‌ ಗೋಮೇಜ್‌(ನೀಪಾ, ದೆಹಲಿ ೧೯೯೧) ಹಾಗೂ ಡೆಸ್ಮೆಂಡ್ ‌ಡಿ ʼಅಬ್ರೋ (ಮಂಗಳೂರು, ಶಿವಮೊಗ್ಗ, ಡೀಡ್ಸ್‌ ೧೯೯೧-೯೨) ಹಾಗೂ ಮೋಹನಚಂದ್ರ, ಉಮಾಶಂಕರ್ ‌ಪೆರಿಯೋಡಿ, ಕಿಶೋರ್‌ ಅತ್ತಾವರ್‌ ನಡೆಸಿದ್ದ ʼವ್ಯವಸ್ಥಾ ವಿ‍ಶ್ಲೇಷಣೆ ಮತ್ತು ಶಿಕ್ಷಣʼ  ಕುರಿತು ಕಾರ್ಯಾಗಾರಗಳು ವಾಣಿ ಪೆರಿಯೋಡಿ ಮತ್ತು ಶ್ರೀಲತಾ ಬಾಟ್ಲೀವಾಲ ನಡೆಸಿದ್ದ ಮಹಿಳಾ ಸಶಕ್ತೀಕರಣದ ತರಬೇತಿಗಳು, ನಿಕಟವಾಗಿದ್ದುಕೊಂಡು ನಡೆಸಿದ ಮಾತುಕತೆಗಳು ಮಕ್ಕಳ ಹಕ್ಕುಗಳೊಡನೆ ಬೆಸೆದುಕೊಳ್ಳತೊಡಗಿತ್ತು. 

ದೆಹಲಿ ಮುಂಬೈನಿಂದ ಬರುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು ಗಹನವಾದ ವಿಚಾರ ಹೇಳಿದರೂ ಇಂಗ್ಲಿಷ್‌ ಅಡ್ಡ ಗೋಡೆಯೇ ಆಗುತ್ತಿತ್ತು. ಕನ್ನಡದಲ್ಲಿ ಆಗಬೇಕಿತ್ತು. ನಾವೇ ಆಯೊಜಿಸಿದ ನಮ್ಮ ಮೊದಲ ಕಾರ್ಯಕ್ರಮದಲ್ಲಿ ಸ್ಥಳೀಯರಾದ ಡಾ. ಶ್ರೀಧರ್‌, ವಾಣಿ ಪೆರಿಯೋಡಿ ಮತ್ತು ಕವಿತಾ ರತ್ನ ಮಕ್ಕಳ ಆರೋಗ್ಯ, ಹೆಣ್ಣುಮಕ್ಕಳ ಬದುಕು ಮತ್ತು ಮಕ್ಕಳ ಭಾಗವಹಿಸುವಿಕೆ ಕುರಿತು ಸೊಗಸಾಗಿ ತಿಳಿಸಿದರು. ನಾನೂ ಮಕ್ಕಳ ಶಿಕ್ಷಣ ಮತ್ತು ರಕ್ಷಣೆ ಕುರಿತು ಹಂಚಿಕೊಂಡೆ.

ಆದರೂ,  ಕನ್ನಡದಲ್ಲಿ ಮಕ್ಕಳ ಹಕ್ಕುಗಳ ವಿಚಾರಗಳನ್ನು ಸಮಗ್ರವಾಗಿ ತರಬೇತಿ ನಡೆಸಬಲ್ಲವರನ್ನು ಹುಡುಕುವ ಸವಾಲಿಗಿನ್ನೂ ಪೂರ್ಣ ಉತ್ತರ ಸಿಕ್ಕಿರಲಿಲ್ಲ. ಮತ್ತೆ ಡೆಆರಂಭವಾಯಿತು ಭಾಷೆಯೊಡನೆ ಗುದ್ದಾಟ. ಅಂತೂ ಇಂತೂ ನನ್ನ ಕನ್ನಡಕ್ಕೆ ಸಿ.ಆರ್.ಸಿ. ಒಗ್ಗ ತೊಡಗಿತು. ಓವರ್‌ ಹೆಡ್ ‌ಪ್ರೊಜೆಕ್ಟರ್‌ನ ಸ್ಲೈಡ್‌ಗಳ ಮೇಲೆ ಸಿ.ಆರ್.ಸಿ. ಕನ್ನಡದಲ್ಲಿ ಮೂಡತೊಡಗಿತು. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿದ್ದ ಕ್ರೈ ಸಂಗಾತಿಗಳೊಡನೆ ಮಕ್ಕಳ ಹಕ್ಕುಗಳ ತರಬೇತಿ ಚಿಕ್ಕಪುಟ್ಟದಾಗಿ ನಡೆದವು.

ಬೆಂಗಳೂರಿನ ಬಾಸ್ಕೋ, ಸಿಕ್ರಂ, ರೆಡ್ಸ್‌, ಜೀವಿಕಾ, ಮೈಸೂರಿನ ಒಡನಾಡಿ, ಆರ್.ಎಲ್‌.ಎಚ್.ಪಿ.; ಬಳ್ಳಾರಿಯ ಸ್ನೇಹ, ಬೀದರ್‌ನ ಅರಳು, ಮಾಗಡಿಯ ಚಿಗುರು, ಚನ್ನಪಟ್ಟಣದ ವಿಕಾಸ, ಮಂಗಳೂರಿನ ಪಡಿ, ಮಹಿಳಾ ಸಮಾಖ್ಯಾ, ಹೈದರಾಬಾದಿನ ಮಹಿತಾ, ಎಂ.ವಿ. ಫೌಂಡೇಶನ್‌, ಸಾಧನಾ, ಮಾರ್ಕಾಪುರಂನಲ್ಲಿ ಕಫೋರ್ಡ್‌ ಮತ್ತು ಓಂಗೋಲಿನ ಹೆಲ್ಪ್‌, ಹೀಗೆ ಹಲವರೊಡನೆ ಮಕ್ಕಳ ಹಕ್ಕುಗಳ ತರಬೇತಿ ಪ್ರಯೋಗ ಸಾಗತೊಡಗಿತು.

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯ ವಿವಿಧ ಹಂತಗಳ ಸಿಬ್ಬಂದಿಗೆ ಮಕ್ಕಳ ನ್ಯಾಯ ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ, ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ, ಶಿಕ್ಷಣ ಹಕ್ಕು ಕುರಿತು ಸರ್ವೋಚ್ಚ ನ್ಯಾಯಾಲಯ ತೀರ್ಪು ಇವೇ ಮೊದಲಾದವುಗಳನ್ನು ಕುರಿತು ನಾನು ತರಬೇತಿ ಕೊಡುವಾಗಲೆಲ್ಲಾ ಸಂವಿಧಾನದಲ್ಲಿನ ಮಕ್ಕಳ ವಿಚಾರಗಳಿಗೆ ಮಕ್ಕಳ ಹಕ್ಕುಗಳನ್ನು ಪೋಣಿಸತೊಡಗಿದೆ. 

ಗೆಳೆಯ ಡಾ ಮಹೇಂದ್ರ ಮತ್ತು ನಾನು ಯುನಿಸೆಫ್‌ನ ಸುಧಾ ಮುರಳಿಯವರ ಮುಂದೆ ಮಕ್ಕಳ ಹಕ್ಕುಗಳ ಪ್ರಚಾರದ ಪ್ರಸ್ತಾಪವಿಟ್ಟು ಕ್ರೈಗೆ ದೇಣಿಗೆ ಪಡೆದೆವು (೧೯೯೬). ಅದೇ ಅವಧಿಯಲ್ಲಿ ʼಸಮುಚ್ಚಯʼದ ಗೆಳೆಯರು ಸೇರಿದ್ದ ʼಚೌಕಿʼ ಮೂಲಕ  ಉಮಾಶಂಕರ್ ‌ಪೆರಿಯೋಡಿ, ಮೋಹನ ಚಂದ್ರ, ಕಿಶೋರ್‌ ಅತ್ತಾವರ್‌ ಮತ್ತು ಗೆಳೆಯರು ಪರ್ಯಟನದ ವಿನ್ಯಾಸ ಕಲ್ಪಿಸಿಕೊಂಡಿದ್ದರು. ಮಕ್ಕಳ ಹಕ್ಕುಗಳ ವಿಚಾರದ ಪ್ರಚಾರಕ್ಕೆ ಸೂಕ್ತ ವೇದಿಕೆಯೇ ಅದು ಆಯಿತು. ಮಕ್ಕಳ ಹಕ್ಕುಗಳನ್ನು ಕುರಿತು ತಂಡಕ್ಕೆ ಪರಿಚಯ ಪ್ರವೇಶ ಮಾಡಿದ್ದು ಪರ್ಯಟನಕ್ಕೆ ʼಮಕ್ಕಳ ಹಕ್ಕುʼಗಳೇ ಕೇಂದ್ರ ವಸ್ತುವಾಯಿತು.

ಮೋಹನ್ ‌ಚಂದ್ರ (ಮೋಚ) ಮತ್ತು ಉಮಾಶಂಕರ್‌ ಪೆರಿಯೋಡಿ ಬೀದೀ ನಾಟಕ, ರಂಗ ನಾಟಕ, ಬೊಂಬೆ ಆಟ, ಕಲೆ, ಹಾಡು ಮಕ್ಕಳ ಹಕ್ಕುಗಳ ಹಿನ್ನೆಲೆಯ ದೃಷ್ಟಿ ಕೊಟ್ಟರು, ಜಗದೀಶ್‌ ಅಮ್ಮುಂಜೆ ಮತ್ತು ಪ್ರವೀಣ್ ‌ಜಿ.ಎಸ್‌. (ಈಗ ವಿಶ್ವವಿನ್ಯಾಸ) ಚಿತ್ರ ಬರೆದರು; ಅನೇಕ ಗೆಳೆಯರು ಸೇರಿ ಹಾಡು ನಾಟಕ ರಚಿಸಿದೆವು. ಉತ್ಸಾಹೀ ಯುವಕರ ತಂಡವೊಂದು ಸಿದ್ಧವಾಯಿತು. ಬೆಂಗಳೂರಿನ ಕಬ್ಬನ್ ‌ಪಾರ್ಕ್‌ನಲ್ಲಿರುವ ಬಾಲಭವನದ ಎದುರು ಡಾ.ಜಿ.ರಾಮಕೃಷ್ಣ ಮತ್ತು ಬಾಲನಟರೊಬ್ಬರು ಉದ್ಘಾಟನಾ ಕಾರ್ಯಕ್ರಮ ನಡೆಸಿಕೊಟ್ಟರು. ‘ಮಕ್ಕಳ ಹಕ್ಕುಗಳ ಪರ್ಯಟನ’ ಹೊರಟೇ ಬಿಟ್ಟಿತು. ಮುರಹರಿಯ ನೆತೃತ್ವದಲ್ಲಿ ಇಡೀ ಕರ್ನಾಟಕ ಸುತ್ತಿ ಬಂದಿತು. ನಾನೂ ಕೆಲವೊಂದು ಜಿಲ್ಲೆಗಳಲ್ಲಿ ಜೊತೆಯಾಗಿ ಅದರಿಂದ ರೋಮಾಂಚಿತನಾದೆ.

ಈ ಮಧ್ಯ ಪ್ರವೀಣ್ ‌ಜಿ.ಎಸ್‌. ಮಕ್ಕಳ ಹಕ್ಕುಗಳ ಎಲ್ಲ ಒಡಂಬಡಿಕೆಗಳನ್ನು ಸಾರ ಸಂಗ್ರಹವಾಗಿ ವಿವರಿಸುವ ದೊಡ್ಡ ದೊಡ್ಡ ಚಿತ್ರಪಟಗಳನ್ನು ರಚಿಸಿದರು. ಅದಕ್ಕೆ ಚಿತ್ರಗಳ ಭಾವ ಹೇಗಿರಬೇಕು ಎನ್ನುವ ವಿವರಣೆ ಹಾಗೂ ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಾನೂ ಮತ್ತು ಡಾ. ವಿನತೆ ಜೊತೆಗೂಡಿ ಸಿದ್ಧ ಮಾಡಿದೆವು. ಅದು ಇಷ್ಟು ವರ್ಷಗಳಲ್ಲಿ ವಿವಿಧ ರೂಪದಲ್ಲಿ ಎಲ್ಲೆಡೆ ಹರಡಿಹೋಗಿದೆ. ಬಳಕೆಯಾಗುತ್ತಿದೆ.

ಪೂರ್ಣಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ವಿಚಾರಗಳನ್ನು ಕನ್ನಡದಲ್ಲೇ ನೀಡಬೇಕು ಎನ್ನುವ ತುಡಿತ ಸ್ಪಷ್ಟವಾಗಿ ಕಾಣತೊಡಗಿದ್ದು ಪರ್ಯಟನ ಮುಗಿಸಿ ಅದರ ಅನುಭವ ಹಂಚಿಕೆ ಮತ್ತು ವಿಶ್ಲೇಷಣೆಗೆ ಗೆಳೆಯರು ಸೇರಿದಾಗ. ಅದೆಷ್ಟು ಪ್ರಶ್ನೆಗಳು, ಸಂದೇಹಗಳು, ಪ್ರಕರಣಗಳು ಮತ್ತು ಸಾಧ್ಯತೆಗಳು. ಇದೇ ಸಮಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಮುಂದಾಳತ್ವದಲ್ಲಿ ಅನೇಕ ಚಳವಳಿಗಳು, ಸಭೆಗಳು ನಡೆದಿದ್ದವು.

ಬಾಲಕಾರ್ಮಿಕರ ಮೇಲಿನ ಶೋಷಣೆ, ಸಾವು ಪ್ರಕರಣಗಳಲ್ಲಿ ಪ್ರತಿಭಟನೆಗಳು, ನಿರ್ದಿಷ್ಟ ಪ್ರಕರಣಗಳನ್ನು ಎದುರಿಸಲು ಹಲವು ಸುತ್ತಿನ ಕ್ರಿಯಾ ಯೋಜನೆಗಳ ಕಸರತ್ತು ನಡೆದಿತ್ತು. ಶಿಕ್ಷಣ ಹಕ್ಕು ಕುರಿತು ಚರ್ಚೆಗಳು ದೊಡ್ಡ ದನಿಯಲ್ಲಿ ಆರಂಭವಾಗಿತ್ತು. ಮಧ್ಯದಲ್ಲಿ ಮಕ್ಕಳ ಹಕ್ಕುಗಳನ್ನು ಈ ಎಲ್ಲದರಲ್ಲಿ ಬಳಸುವುದು ಹೇಗೆ ಎನ್ನುವ ಪ್ರಶ್ನೆಗಳು ಬರುತ್ತಿದ್ದವು. 

ಇವುಗಳಿಗಾಗಿ ಎಂದೇ ನಾನು ಕೆಲವು ಪ್ರಶ್ನೆಗಳು, ಪ್ರಕರಣಗಳನ್ನು ಇಟ್ಟುಕೊಂಡು ಮಕ್ಕಳ ಹಕ್ಕುಗಳು, ಸಂವಿಧಾನ, ಕಾನೂನುಗಳ ವಿಚಾರಗಳನ್ನು ಹೆಣೆದು ಓದುವ ಸಾಮಗ್ರಿಗಳನ್ನು ಕನ್ನಡದಲ್ಲಿ ತಯಾರಿಸತೊಡಗಿದೆ. ಬಿಡಿ ಲೇಖನಗಳನ್ನು ತರಬೇತಿಗಳಲ್ಲಿ ಹಂಚತೊಡಗಿದೆ. ಈ ಹೊತ್ತಿಗೆ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಪ್ರತಿನಿಧಿಯಾಗಿದ್ದ ಗೆಳೆಯ ರಾಘವೇಂದ್ರ ಕೊಣಿಲ ಮಕ್ಕಳ ಹಕ್ಕುಗಳ ತರಬೇತಿಗಳನ್ನು ನಡೆಸಲು ಜೊತೆಯಾದರು.

೧೯೯೮ರ ಅಂತ್ಯದಲ್ಲಿ ಯುನಿಸೆಫ್‌ನಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ ಡಾ.ಪದ್ಮಿನಿ ಮತ್ತು ಮೈತ್ರಿ ಸರ್ವ ಸೇವಾ ಸಮಿತಿಯ ಆನ್ಸಲೆಂ ರೊಸಾರಿಯೋ  ಸೇರಿ ಬೆಂಗಳೂರಿನಲ್ಲಿ ಮಕ್ಕಳ ಹಕ್ಕುಗಳನ್ನು ಕುರಿತು ಸರಣಿ ತರಬೇತಿಗಳನ್ನು ಆಯೋಜಿಸಿದ್ದರು. ಆ ತರಬೇತಿಗೆ ಆನ್ಸ್‌ಲೆಂ ಅವರ ಆಹ್ವಾನದಂತೆ ಹೋಗಿ ವಿಶ್ವ ವಿನ್ಯಾಸ್‌ ರಚಿಸಿದ್ದ ಮಕ್ಕಳ ಹಕ್ಕುಗಳ ದೊಡ್ಡ ಚಿತ್ರಪಟಗಳನ್ನು ಪ್ರದರ್ಶಿಸಿದೆ. ಅವುಗಳನ್ನು ತಗಲು ಹಾಕಿ ಹೊರಡುವವನಿದ್ದ ನನಗೆ ಡಾ. ಪದ್ಮಿನಿ ತಡೆದು, ಇವುಗಳನ್ನು ಹಾಕಿದರೆ ಸಾಲದು ಅದೇನದು ಎಂದು ಹೇಳಿದರೆ ಒಳ್ಳೆಯದು ಎಂದರು.

ಕನ್ನಡದಲ್ಲಿ ಪರಿಚಯಿಸಿದೆ. ಆಕೆ ಉದ್ಗರಿಸಿದ್ದು, ʼನಾವು ಮೂರು ದಿನದಿಂದ ಹೇಳ್ತಿರೋದನ್ನ ಅಚ್ಚುಕಟ್ಟಾಗಿ ಎಲ್ಲರಿಗೂ ಅರ್ಥ ಆಗೋ ಹಾಗೆ ಹದಿನೈದು ನಿಮಿಷಲ್ಲಿ ಮುಗಿಸಿಬಿಟ್ರಲ್ಲಾ!ʼ ಮುಂದೆ ಅವರ ಆಹ್ವಾನದ ಮೇರೆಗೆ ಕರ್ನಾಟಕದ ಹತ್ತು ಹನ್ನೆರೆಡು ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಘಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳಿಗೆ, ಮಾಧ್ಯಮದವರಿಗೆ ಮಕ್ಕಳ ಹಕ್ಕುಗಳ ಅನುಷ್ಠಾನವನ್ನು ತಮ್ಮ ತಮ್ಮ ಕೆಲಸಗಳಲ್ಲೇ ಹೇಗೆ ನಡೆಸಬೇಕೆಂಬ ತರಬೇತಿಗಳನ್ನು, ಕಾರ್ಯಾಗಾರಗಳನ್ನು ನಡೆಸಿಕೊಟ್ಟೆ. ಕನ್ನಡದಲ್ಲಿ! 

ಆಗಲೇ ʼಮಕ್ಕಳ ಹಕ್ಕುಗಳನ್ನು ಕುರಿತು ಪೂರ್ಣಪ್ರಮಾಣದ ಸಂಪನ್ಮೂಲ ಕೇಂದ್ರʼ ಆರಂಭಿಸುವ ಕಲ್ಪನೆ ಚಿಗುರೊಡೆದಿತ್ತು. 

ನನಗಿತ್ತಿದ್ದ ಇತರ ಜವಾಬ್ದಾರಿಗಳೊಡನೆ, ʼತರಬೇತಿ ಸಂಯೋಜಕʼ ಎಂದು ಹೆಸರಿಸಿ ಕ್ರೈ ತನ್ನ ಎಲ್ಲ ಸಿಬ್ಬಂದಿಗೂ ಮಕ್ಕಳ ಹಕ್ಕುಗಳನ್ನು ಕುರಿತು  ʼಇಂಗ್ಲಿಷ್‌ʼನಲ್ಲಿ ತರಬೇತಿ ನಡೆಸಲು ಆಹ್ವಾನ ಕೊಟ್ಟಿತು. ಅದಕ್ಕಾಗಿ ವ್ಯವಸ್ಥಿತವಾದ ತರಬೇತಿ ಆಯೋಜನೆ ಮಾಡಿಕೊಂಡು ಮಕ್ಕಳೊಂದಿಗೆ ನಡೆಸುವ ಕೆಲಸಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಅರಿತುಕೊಳ್ಳುವ, ವಿಶ್ಲೇಷಿಸುವ ಮತ್ತು ಮತ್ತೆ ಪರಿಣಾಮಕಾರಿಯಾಗಿಸುವ ಕುರಿತು ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿ ಕಛೇರಿಗಳಲ್ಲಿ ಇಂಗ್ಲಿಷ್‌ನಲ್ಲೇ ತರಬೇತಿ ನಡೆಸಿದೆ! 

ʼಇವರನ್ನು ಕಟ್ಟಿಕೊಂಡು ಏನು ಮಾಡಲಿ?ʼ ಎಂದಿದ್ದ ರಿಪ್ಪನ್‌ಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳುತ್ತಿದ್ದೆ.

ಆಗಲೇ ಮಕ್ಕಳ ಹಕ್ಕುಗಳನ್ನು ಪರಿಚಯಿಸುವ ಪುಸ್ತಕ ಕನ್ನಡದಲ್ಲಿ ಬರೆಯಬೇಕೆಂಬ ಕಲ್ಪನೆ ಬಂದದ್ದು. ಅಚಾನಕ್‌ಆಗಿ ಗೆಳತಿ ಕಲ್ಪನಾ ಸಂಪತ್‌ನಿಂದ ಒದಗಿ ಬಂದದ್ದು ಬಳ್ಳಾರಿಯ ದೋಣಿಮಲೈನಲ್ಲಿರುವ ಎನ್.ಎಂ.ಡಿ.ಸಿ. ಗಣಿಗಳ ಕಾರ್ಮಿಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನಡೆಸುವ ಅವಕಾಶ. [ಕಬ್ಬಿಣಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆಯೆಂದೂ ಎನ್.ಎಂ.ಡಿ.ಸಿ. ತನ್ನ ಗಣಿಗಳನ್ನು ಮುಚ್ಚುತ್ತಾ ಕಾರ್ಮಿಕರನ್ನು ನಿವೃತ್ತಿಗೊಳಿಸುವ ಯೋಜನೆಗೆ ತಯ್ಯಾರಿ. ಆದರೆ ಮುಂದಿನ ನಾಲ್ಕೈದು ತಿಂಗಳಲ್ಲೇ ಎಲ್ಲವೂ ತಿರುವುಮುರುವಾಯಿತು!]

ಪ್ರತಿ ದಿನ ಕೆಲವು ಗಂಟೆಗಳ ತರಬೇತಿಯ ನಂತರ ಸಾಕಷ್ಟು ಸಮಯವಿತ್ತು. ಅಲ್ಲಿನ ಅತಿಥಿ ಗೃಹದಲ್ಲಿ ಕುಳಿತು ಆ ಸಮಯದಲ್ಲಿ ʼಮಕ್ಕಳ ಹಕ್ಕುಗಳು – ಚರ್ಚೆಗಾಗಿ ಲೇಖನಗಳುʼ ಪುಸ್ತಕ ಸಿದ್ಧಪಡಿಸಿದೆ.  

೧೯೯೯ರಲ್ಲಿ (ಕೆಂಪು ಪುಸ್ತಕ ಎಂದು ಗೆಳೆಯರು ಹೇಳುವ) ಮಕ್ಕಳ ಹಕ್ಕುಗಳ ಪರಿಚಯ ಪುಸ್ತಕಕ್ಕೆ ಗೆಳೆಯ ಡಾ. ನಿರಂಜನಾರಾಧ್ಯರ ನೆರವಿನಿಂದ ರಾಷ್ಟ್ರೀಯ ಕಾನೂನು ಶಾಲೆಯ ಅಂದಿನ ರಿಜಿಸ್ಟ್ರಾರ್ ‌ಪ್ರೊ. ಬಾಬು ಮಾಥ್ಯೂ ಮುನ್ನುಡಿ ಬರೆದರು. ಮಕ್ಕಳ ಹಕ್ಕುಗಳ ಬಗ್ಗೆ ಕನ್ನಡದಲ್ಲಿ ಮೊದಲ ಪುಸ್ತಕ ಎನ್ನುವ ಸಂಭ್ರಮದಿಂದ ಹಸ್ತಪ್ರತಿ ಇಟ್ಟುಕೊಂಡು ಕೆಲವು ಪ್ರಕಾಶಕರ ಬಳಿ ಹೋಗಿದ್ದೆ.

ಇದೆಲ್ಲಾ ಯಾರು ಕೊಳ್ಳುತ್ತಾರೆ ಎನ್ನುವ ತಿರಸ್ಕಾರ ಅಥವಾ ಉಡಾಫೆಯ ಮಾತು ಕೇಳಿ ಬೇಸರವೂ ಆಗಿತ್ತು. ಆಗಲೇ ನನ್ನಪ್ಪ ಪರಿಚಯಿಸಿದ ಅವರ ಗೆಳೆಯ ಸತ್ಯಕುಮಾರ್ ‌ಅವರ ಮನವರ್ತಿ ಪೇಟೆಯಲ್ಲಿದ್ದ ಸುಬ್ರಮಣ್ಯೇಶ್ವರ ಪ್ರಿಂಟರ್ಸ್‌ ಅರೆ ಮನಸ್ಸಿನಲ್ಲೇ ಹೋದೆ. ನಂಬಲಿಕ್ಕೇ ಆಗದಷ್ಟು ಕಡಿಮೆ ಬೆಲೆಗೆ ಅತ್ಯುತ್ತಮವಾದ ಕಾಗದ ಬಳಸಿ ಮುದ್ರಿಸಿ ಕೊಟ್ಟರು. ಅದೇ ಪ್ಲೇಟ್‌ಗಳನ್ನು ಬಳಸಿ ಮತ್ತೆ ಮೂರು ಬಾರಿ ಪುಸ್ತಕ ಮುದ್ರಿಸಬೇಕಾಯಿತು. ಅಷ್ಟೂ ಮಾರಾಟವಾದವು!

ಕ್ರೈನಲ್ಲಿ ಸಹೋದ್ಯೋಗಿಯಾಗಿದ್ದ ಸೋನಿ ಕುಟ್ಟಿ ಜಾರ್ಜ್‌ಆಹ್ವಾನ ಮೇರೆಗೆ ಚೆನ್ನೈನಲ್ಲಿ ತಮಿಳುನಾಡಿನ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳಿಗೆ ಮಕ್ಕಳ ಹಕ್ಕುಗಳ ತರಬೇತಿ ಮಾಡಲು ಹೋದಾಗ (೨೦೦೦) ಏನಾದರೂ ಹೊಸತು ಸೃಜಿಸುವ ಕಲ್ಪನೆಗೆ ಹೊಳೆದದ್ದು ಬಾಲ್ಯದಲ್ಲಿ ಆಡಿದ್ದ ʼಪರಮಪದ ಸೋಪಾನ ಪಟಮುʼ – ಹಾವು ಏಣಿ ಆಟ. ಮಕ್ಕಳ ಹಕ್ಕುಗಳಿಗೆ ಅದನ್ನು ಹೊಂದಿಸಿದೆ. ಆದರೆ ಅದು ಬರಿ ಹಾವು ಏಣಿ ಆಗದಂತೆ ಮಾಡಿದ ಕಸರತ್ತು ಹೊಸ ರೂಪ ತಾಳಿತ್ತು. 

ಬೆಂಗಳೂರಿನ ʼಸಮಾಜ ವಿಕಾಸ ಟ್ರಸ್ಟ್‌ ಮತ್ತು ಪರಸ್ಪರʼದ ಗೆಳೆಯರು ಉದಯಕುಮಾರ್ ‌ಮತ್ತು ವೆಂಕಟೇಶ್‌ ಕಲ್ಪಿಸಿಕೊಂಡಿದ್ದ ಮಕ್ಕಳ ಹಕ್ಕುಗಳನ್ನು ಕುರಿತು ರಾಜ್ಯದ ಎಲ್ಲ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಕ್ಕಾಗಿ ಮೂರು ದಿನಗಳ ತರಬೇತಿ ಮಾಡ್ಯೂಲ್ ‌ಸಿದ್ಧಪಡಿಸಿದೆ. ಅದಕ್ಕಾಗಿ ಆಟಗಳು ಮತ್ತು ಫ್ಲಿಪ್‌ಚಾರ್ಟ್ ‌ಅನ್ನು ಡಾ. ಷಣ್ಮುಖಾನಂದ ಮತ್ತು ವಿಶ್ವವಿನ್ಯಾಸ್‌ಜೊತೆ ಸೇರಿ ನಿಜವಾಗಿಯೂ ಹಗಲೂ ರಾತ್ರಿ ಕೆಲಸ ಮಾಡಿ ಸಿದ್ಧ ಮಾಡಿದೆವು. ಇಡೀ ರಾಜ್ಯದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ತರಬೇತಿದಾರರಿಗೆ ಮಕ್ಕಳ ಹಕ್ಕುಗಳ ವಿಚಾರವನ್ನು ಜನರಿಗೆ ಆಸಕ್ತಿದಾಯಕವಾಗಿ ತಿಳಿಸುವ ವಿಧಾನ ಮುಂದಿಟ್ಟು ಸಿದ್ಧಮಾಡಿದೆವು. ೨೦೦೦ದಲ್ಲಿ ಆರಂಭವಾದ ಕಾರ್ಯಕ್ರಮ ೨೦೦೧ರವರೆಗೂ ನಡೆಯಿತು.

ನೋಡು ನೋಡುತಿದ್ದಂತೆಯೇ ೧೯೯೬-೯೭ರ ನಂತರದ ದಿನಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ; ಶಿಕ್ಷಣ ಹಕ್ಕು ಆಂದೋಲನ, ಬಾಲ್ಯವಿವಾಹ ವಿರೋಧೀ ಆಂದೋಲನ, ಮಕ್ಕಳ ಸಾಗಣೆ ತಡೆ ಆಂದೋಲನಗಳ ಹಿನ್ನೆಲೆಯಲ್ಲಿ ಸಾವಿರಾರು ಸಹವರ್ತಿಗಳು ಹುಟ್ಟಿಕೊಂಡರು.

ರಾಜ್ಯದಾದ್ಯಂತ ಓಡಾಡಿ ಈ ಎಲ್ಲ ಕಾರ್ಯಕರ್ತರಿಗೆ ಕಾರ್ಯಾಗಾರಗಳು, ತರಬೇತಿಗಳನ್ನು ಮಕ್ಕಳ ಹಕ್ಕುಗಳ ಮೂಲದಿಂದ ತೆಗೆದ ವಿಚಾರಗಳನ್ನಿಟ್ಟುಕೊಂಡು ಸುಲಲಿತವಾಗಿ ಕನ್ನಡದಲ್ಲಿ ವಿಶ್ಲೇಷಣೆ ಮಾಡಿ, ಸರ್ಕಾರದೊಡನೆ ವಕೀಲಿ ಮಾಡುವವರ ಸಂಖ್ಯೆ ದೊಡ್ಡದಾಗ ತೊಡಗಿತು. ಮುಖ್ಯವಾಗಿ ಕ್ರೈನಲ್ಲಿ‌ನನ್ನೊಟ್ಟಿಗೆ ಮಹೇಂದ್ರ ರಾಜನ್, ವಿನತೆ ಶರ್ಮಾ, ಪ್ರಕಾಶ್ ಕಾಮತ್, ಅರಣ್ ಸೆರಾವ್ ಮತ್ತು ‌ವಿಕ್ಟರ್ ಟಾರೋ ಮಕ್ಕಳ ಹಕ್ಕುಗಳ ಮಾತುಕತೆಗೆ ಬೇರೆ ಬೇರೆ ಸಮಯದಲ್ಲಿ ಜೊತೆಯಾದರು.

ಮುಂದಿನ ಸವಾಲುಗಳನ್ನು ಕೈಗೆತ್ತಿಕೊಳ್ಳಲು ನಾವು ಇನ್ನೂ ಪಳಗಬೇಕಿತ್ತು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಆಳ ಅಗಲದ ಪರಿಚಯ ಪಾಠಕ್ಕೆ ಭೂಮಿಕೆ ಸಿದ್ಧವಾಗತೊಡಗಿತ್ತು.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

November 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: