ಮೊದಲು ಸೋಲುವುದನ್ನು ಕಲಿಸಿ
ಶ್ರೀದೇವಿ ಕೆರೆಮನೆ
ಮಕ್ಕಳು ಗೆದ್ದು ಬಂದಾಗ ಎಲ್ಲಿಲ್ಲದ ಹೆಮ್ಮೆ ಪಡುವ ನಾವು, ಅದೇ ಮಕ್ಕಳು ನಂಬರ್ ಬರದೇ ಬಂದಾಗ ಅವರಿಗಿಂತ ಹೆಚ್ಚು ಅಳುಕುತ್ತೇವೆ. ಜೊತೆಗೆ ಅವರೂ ಅಳುಕುವಂತೆ ಮಾಡುತ್ತೇವೆ. ಒಂದು ಸ್ಪರ್ದೆಯ ಸೋಲು, ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುವುದು ಜೀವನದ ಅಂತ್ಯ ಎಂಬ ಭಾವನೆಯನ್ನು ಆ ಮಕ್ಕಳಲ್ಲಿ ತುಂಬುತ್ತಿದ್ದೇವೆ. ತಮ್ಮ ಸೋಲನ್ನು ಒಪ್ಪಿಕೊಂಡು ಆ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿಕೊಳ್ಳುವುದನ್ನು ಎಷ್ಟು ಪಾಲಕರು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ? ಚಿಕ್ಕಂದಿನಿಂದಲೇ ಮಕ್ಕಳು ಕೇಳಿದ್ದನ್ನೆಲ್ಲ ನಿಮಿಷಾರ್ದದಲ್ಲಿ ತಂದುಕೊಡುವ ಪಾಲಕರು ತನ್ನ ಮಗು ಯಾವುದಕ್ಕೂ ಇಲ್ಲ ಎನ್ನಿಸಿಕೊಳ್ಳದೇ ಬೆಳೆಯಬೇಕು ಎಂಬ ಆದರ್ಶ ಪಾಲಕರೆನ್ನಿಸಿಕೊಳ್ಳುವ ಹುಕಿಯಲ್ಲಿ ಕೇಳಿದ್ದಕ್ಕೆ ಇಲ್ಲ ಎನ್ನದ ಹುಚ್ಚು ಕುದುರೆಯ ಬೆನ್ನು ಹತ್ತುತ್ತಿದ್ದಾರೆ. ತನಗೆ ಬೇಕಾದುದೆಲ್ಲ ನಿಮಿಷಾರ್ಧದಲ್ಲಿ ಸಿಗುತ್ತಿರುವಾಗ ನಿರಾಸೆ ಎನ್ನುವ ಪದಕ್ಕೆ ಆ ಮಗುವಿಗೆ ಅರ್ಥವೆಲ್ಲಿ ಗೊತ್ತಿರಬೇಕು? ಇದರಿಂದಾಗಿಯೇ ಜೀವನದಲ್ಲಿ ಅಪರೂಪಕ್ಕೊಮ್ಮೆ ಬರುವ ಸೋಲನ್ನು ಸ್ವೀಕರಿಸುವ ಮನೋಭಾವವಾಗಲಿ, ಆ ಸೋಲನ್ನು ಎದುರಿಸುವ ಶಕ್ತಿಯಾಗಲಿ ಆ ಮಗುವಿನಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಬದುಕು ಬದಲಾಗಲೇ ಬೇಕು ಎನ್ನುವುದಿದ್ದರೆ ಮಗುವಿಗೆ ಕೇವಲ ಸೋಲಿಸುವುದನ್ನು ಕಲಿಸಿದರೆ ಸಾಕಾಗುವುದಿಲ್ಲ, ಸೋಲುವುದನ್ನು ಕಲಿಸಿ; ಸೋಲಿಸಿ ಕೊಳ್ಳುವುದನ್ನು ಕಲಿಸಿ; ಆ ಸೋಲನ್ನು ಹೇಗೆ ಗೆಲುವಿನ ಚಿಮ್ಮು ಹಲಗೆಯನ್ನಾಗಿ ಬದಲಿಸಿಕೊಳ್ಳಬಹುದು ಎನ್ನುವುದನ್ನು ಕಲಿಸಿ. ಜೀವನದ ಹಾದಿಯಲ್ಲಿ ಬರುವ ಚಿಕ್ಕ ಪುಟ್ಟ ಸೋಲುಗಳು ಹೇಗೆ ಬದುಕನ್ನು ಗೆಲುವಿನ ಪಥದತ್ತ ಕೊಂಡೊಯ್ಯುತ್ತದೆ ಎಂಬುದನ್ನು ಆತ್ಮೀಯತೆಯಿಂದ ತಿಳಿಹೇಳಿ. ಆಗ ಮಗು ತನ್ನ ಇಡೀ ಬದುಕನ್ನು ಗೆಲುವನ್ನಾಗಿ ಬದಲಾಯಿಸಿಕೊಳ್ಳಲು ಸಮರ್ಥವಾಗುತ್ತದೆ.
ಕೆಲವು ದಿನಗಳ ಹಿಂದೆ ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಬೆಳ್ತಂಗಡಿಯ ಸಮೀದ ಹಳ್ಳಿಯಿಂದ ಪಕ್ಕದ ಮನೆಯವರು ಫೋನಾಯಿಸಿದ್ದರು. ಮಾಮೂಲಿ ಕುಶಲೋಪರಿ, ಕೌಟುಂಬಿಕ ಚರ್ಚೆ, ಊಟ ತಿಂಡಿ, ಹವಾಮಾನ ವರದಿ, ಭೌಗೋಳಿಕ ನೀಲನಕ್ಷೆ, ಊರಿನ ಸಾಮಾಜಿಕ ಮಾಹಿತಿ, ರಾಜಕೀಯ ವಿವರಣೆಗಳೆಲ್ಲ ವಿನಿಮಯ ಆದ ಮೇಲೆ ಕೇಳಿದೆ ನಿಮ್ಮ ಅಕ್ಕನ ಮಗ ಹೇಗಿದ್ದಾನೆ? ಈಗ ಏನು ಓದ್ತಿದ್ದಾನೆ? ನಾನು ಅಲ್ಲಿಂದ ಬಂದೇ ಆರು ವರ್ಷ ಆಯ್ತು… ಯಾವುದಾದರೂ ಕೋರ್ಸ ಮಾಡ್ತಿರಬೇಕಲ್ಲ? ವಿಚಾರಿಸಿದೆ. ಆ ಕಡೆಯಿಂದ ನಿಶ್ಯಬ್ಧ. ನನಗೆ ಅರ್ಥ ಆಗಲಿಲ್ಲ. ಏನಾಯ್ತುರಿ..? ಕೇಳಿದೆ. ಆತ ಆತ್ಮಹತ್ಯೆ ಮಾಡಿಕೊಂಡ. ಹದಿನೈದು ದಿನಗಳ ಹಿಂದೆ ಫೋನಲ್ಲಿ ಕೇಳಿ ಬಂದ ಧ್ವನಿ ಯಾವುದೋ ಆಳವಾದ ಬಾವಿಯಿಂದ ಕೇಳಿ ಬಂದಂತಿತ್ತು. ಒಂದು ಕ್ಷಣ ನನಗೇನೂ ಅರ್ಥವಾಗಲಿಲ್ಲ.
ನಾನು ಕೆಲಸಕ್ಕೆ ಸೇರಿದ್ದ ಹೊಸತದು. ಆ ಹುಡುಗ ಉಜಿರೆಯಲ್ಲಿ ಎಂಟೋ ಒಂಬತ್ತನೆಯ ತರಗತಿಯಲ್ಲಿದ್ದ. ತುಂಬಾ ಬುದ್ಧಿವಂತ. ಅಷ್ಟೇ ಛಲವಂತ ಕೂಡ. ಯಾವ ಚಟುವಟಿಕೆಯೂ ಆತನಿಗೆ ಬರುವುದಿಲ್ಲ ಎಂಬುದು ಗೊತ್ತಿರಲಿಲ್ಲ. ಹಾಡು ಹೇಳುವುದು, ಚಿತ್ರಕಲೆ ಎಲ್ಲದರಲ್ಲೂ ಆತನಿಗೆ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿ. ಆದರೆ ನನಗೆ ಭಯ ಹುಟ್ಟಿಸುತ್ತಿದ್ದುದು ಆತನ ನಡವಳಿಕೆ. ಆತ ಯಾವ ಸ್ಪರ್ದೆಯಲ್ಲಿ ಭಾಗವಹಿಸಿದರೂ ಅದರಲ್ಲಿ ಆತನಿಗೆ ಮೊದಲ ಸ್ಥಾನವೇ ಸಿಗಬೇಕು. ಹಾಗೆ ಬಹುಮಾನ ಸಿಗುವುದಿಲ್ಲ ಎನ್ನಿಸಿದರೆ ಆತ ಆ ಸ್ಪರ್ದೆಗಳಲ್ಲಿ ಭಾಗವಹಿಸುತ್ತಲೇ ಇರಲಿಲ್ಲ. ಅಂತಹ ಹಠವಾದಿ. ಒಂದು ರೀತಿಯ ಫರ್ಪೆಕ್ಷನಿಸ್ಟ. ಆ ಎಳೆಯ ವಯಸ್ಸಿಗೇ ಈ ಗ್ರಾಮರ್ ಅರ್ಥ ಆಗ್ಲಿಲ್ಲ ಟೀಚರ್. ಎಂದು ಬೆನ್ನು ಬೀಳುತ್ತಿದ್ದ ಆತನ ಮೇಲೆ ನನಗೆ ಅದೇನೋ ವಾತ್ಸಲ್ಯ. ನಮ್ಮ ಶಾಲೆಯ ವಿದ್ಯಾರ್ಥಿ ಅಲ್ಲದಿದ್ದರೂ ವಾರಕ್ಕೊಮ್ಮೆ ಅಜ್ಜಿಯ ಮನೆಗೆಂದು ಬರುತ್ತಿದ್ದ ಆತ ನಮ್ಮ ವಿದ್ಯಾರ್ಥಿಗಳಿಗಿಂತ ಹೆಚ್ಚು ಹೇಳಿಕೊಡುವಂತೆ ಮಾಡುತ್ತಿದ್ದ. ಅರ್ಥ ಆಗದ್ದನ್ನು ಪುನಃ ಪುನಃ ಕೇಳಿ ಅರ್ಥ ಆಗುವಂತೆ ಮಾಡಿಕೊಳ್ಳುತ್ತಿದ್ದ ಆತನ ರೀತಿ ನಿಜಕ್ಕೂ ನನಗಿಷ್ಟವಾಗಿತ್ತು. ಅಂತಹ ಹುಡುಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಂಡ್ ಅಂದರೆ ಎಂದರೆ ನನಗೆ ನಂಬಿಕೆಯೇ ಬರುತ್ತಿರಲಿಲ್ಲ.
ಅವರು ಬಿಕ್ಕುತ್ತ ಹೇಳುತ್ತಿದ್ದರು. ಅಂದು ನೀವು ಹೇಳಿದ ಮಾತು ನಿಜ. ಆದರೆ ಅಂದು ನಿಮ್ಮ ಬಗ್ಗೆ ಒಂದು ರೀತಿಯ ಇರುಸುಮುರುಸಾಗಿತ್ತು. ಬೇಸರವೂ ಆಗಿತ್ತು. ‘ಮಕ್ಕಳಿಗೆ ಸೋಲುವುದನ್ನು ಕಲಿಸಿ ಎನ್ನುವ ಇವರೆಂತಹ ಶಿಕ್ಷಕಿ’ ಎನ್ನುವ ಕೋಪ ಕೂಡ ಇತ್ತು. ಆದರೆ ಈಗ ನೀವು ಹೇಳಿದ್ದು ನಿಜ ಅನ್ನಿಸ್ತಿದೆ. ಆತ ಆತ್ಮಹತ್ಯೆ ಮಾಡಿಕೊಂಡ ದಿನ ಎಲ್ಲರಿಗೂ ನೆನಪಾಗಿದ್ದು ನೀವೇ. ಅವರು ಅಲವತ್ತುಕೊಳ್ಳುತ್ತ ಹೇಳುತ್ತಿದ್ದರೆ ನನಗೆ ಆ ಕ್ಷಣಕ್ಕೆ ಆ ಘಟನೆ ನೆನಪಾಯ್ತು. ಒಮ್ಮೆ ಆತನ ಗಡಿಬಿಡಿಯಿಂದಲೋ ಅಥವಾ ಸಣ್ಣ ನಿರ್ಲಕ್ಷದಿಂದಲೋ ಗಣಿತದಲ್ಲಿ ಎರಡು ಅಂಕ ಕಡಿಮೆ ಬಂದಿತ್ತಂತೆ. ತಾನು ಎರಡನೇ ನಂಬರ್ ಆಗಿಬಿಡುತ್ತೇನೆ ಎಂಬ ಅಂಜಿಕೆಯಲ್ಲಿ ಶಾಲೆಗೆ ಹೋಗಲೇ ನಿರಾಕರಿಸುತ್ತಿದ್ದವನನ್ನು ನನ್ನ ಬಳಿ ಕರೆತಂದಿದ್ದರು. ಏನೂ ಆಗಿಲ್ಲ. ಎರಡು ಮಾರ್ಕ್ಸ ಕಡಿಮೆ ಬಂದರೆ ಅದೇನೂ ಪ್ರಾಣ ಹೋಗುವಂತಹ ಪ್ರಮಾದವಲ್ಲ. ಜೀವನ ಅಷ್ಟಕ್ಕೇ ಮುಗಿದು ಹೋಗುವುದಿಲ್ಲ ಎಂದು ಆತನನ್ನು ಒಪ್ಪಿಸಿ ಶಾಲೆಗೆ ಹೋಗುವಂತೆ ಮಾಡುವಷ್ಟರಲ್ಲಿ ನನ್ನ ಹೆಣ ಬಿದ್ದು ಹೋಗಿತ್ತು. ಆಗಲೇ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ನಿಮ್ಮ ಅಕ್ಕನ ಮಗನಿಗೆ ಸೋಲುವುದನ್ನು ಕಲಿಸಿ. ಇಲ್ಲವೆಂದರೆ ಜೀವನ ಬಹಳ ಕಷ್ಟವಿದೆ. ಆಗ ಅವರು ನನ್ನ ಮುಖವನ್ನು ಆಶ್ಚರ್‍ಯದಿಂದ ನೋಡಿದ್ದರು.
ಹೌದು ಮಕ್ಕಳಿಗೆ ಸೋಲುವುದನ್ನು ಚಿಕ್ಕಂದಿನಿಂದಲೇ ಕಲಿಸಬೇಕಿದೆ. ಸೋಲನ್ನು ಸ್ವೀಕರಿಸುವುದನ್ನು ಅಭ್ಯಾಸ ಮಾಡಿಸಬೇಕಿದೆ. ಮೊನ್ನೆ ಯಾವುದೋ ಪೇಪರ್‌ನಲ್ಲಿ ಒಂದು ವಿಷಯ ಪ್ರಕಟವಾಗಿತ್ತು. ತನ್ನನ್ನು ಪರೀಕ್ಷೆಯಲ್ಲಿ ಹಿಂದಿಕ್ಕಿದ ಎಂಬ ಕಾರಣಕ್ಕಾಗಿ ಆರನೆಯ ತರಗತಿಯ ಒಬ್ಬ ಹುಡುಗ ತನ್ನ ಸಹಪಾಠಿಯೊಬ್ಬನನ್ನು ಶೂಟ್ ಮಾಡಿದ್ದ. ಆತ ಇವನ ವೈರಿಯೇನಲ್ಲ. ಇಬ್ಬರೂ ಆತ್ಮೀಯ ಸ್ನೇಹಿತರೇ. ಆದರೆ ತನಗಿಂತ ಹೆಚ್ಚಿಗೆ ಅಂಕ ತೆಗೆದು ತನ್ನನ್ನು ಹಿಂದಿಕ್ಕಿದ ಏಕೈಕ ಕಾರಣದಿಂದ ಆತನನ್ನು ಶೂಟ್ ಮಾಡಲಾಗಿತ್ತು. ಆತನ ತಂದೆ ವೈಯಕ್ತಿಕ ಭದ್ರತೆಗೆಂದು ಹೊಸದಾಗಿ ಗನ್ ಖರೀದಿಸಿದ್ದರು. ಅವರು ಅದನ್ನು ಸ್ವಚ್ಛಗೊಳಿಸುವಾಗ ಈತ ಕುತೂಹಲದಿಂದ ಅದನ್ನು ಉಪಯೋಗಿಸುವುದನ್ನು ಕೇಳುತ್ತಿದ್ದ. ಆತನ ಪ್ರಶ್ನೆಗಳನ್ನು ಮಕ್ಕಳ ಸಹಜ ಕುತೂಹಲ ಎಂದುಕೊಂಡ ಅವರ ತಂದೆ ಅದನ್ನು ಬಳಸುವುದನ್ನು ವಿವರಿಸಿದ್ದರು. ಆದರೆ ತಂದೆ ಮನೆಯಲ್ಲಿ ಇಲ್ಲದ ಹೊತ್ತಿನಲ್ಲಿ ಬೀರುವಿನಿಂದ ಗನ್ ತೆಗೆದುಕೊಂಡ ಹುಡುಗ ಶಾಲೆಗೆ ತಂದು ತನ್ನ ಸ್ನೇಹಿತನತ್ತ ಗುರಿ ಮಾಡಿದ್ದಾನೆ. ತಪ್ಪಿಸಲು ಬಂದ ಇಬ್ಬರು ಸ್ನೇಹಿತರಿಗೆ ಕಾಲಿಗೆ ಹಾಗೂ ಶಿಕ್ಷಕರೋರ್ವರಿಗೆ ಮುಂಗೈಗೆ ಶೂಟ್ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ತನ್ನನ್ನು ಅಭ್ಯಾಸದಲ್ಲಿ ಹಿಂದಿಕ್ಕಿದ ಸ್ನೇಹಿತನ ಎದೆಗೇ ಗುಂಡು ಹಾರಿಸಿ ಸಾಯಿಸಿದ್ದಾನೆ.
ಒಮ್ಮೆ ಯೋಚಿಸಿ. ಪ್ರಥಮ ಸ್ಥಾನ ಪಡೆಯಲು ಪೈಪೋಟಿ ನಡೆಸುವುದೂ ಕೂಡ ಸಾವಿಗೆ ರಹದಾರಿ ಮಾಡಿಕೊಟ್ಟಂತೆ ಎಂಬಂತಾಗಿದೆ ಇಂದಿನ ಸ್ಥಿತಿ. ತಾನೇ ಎಲ್ಲರಿಗಿಂತ ಮುಂದಿರಬೇಕು ಎಂದು
ಬಯಸುವ, ಮತ್ತು ಆ ನಿಟ್ಟಿನಲ್ಲಿ ಕೊಲೆ ಮಾಡಲೂ ಹಿಂಜರೆಯದ ಆ ಪುಟ್ಟ ಬಾಲಕನ ಮನಃಸ್ಥಿತಿ ಎಂತಹುದ್ದಿರಬಹುದು ಯೋಚಿಸಿ. ತನ್ನ ಪ್ರಥಮ ಸ್ಥಾನವನ್ನು ಇನ್ನೊಬ್ಬ ಲಪಟಾಯಿಸಿದ ಎಂಬ ಕ್ರೋಧ, ಮೊದಲ ಸ್ಥಾನ ತಪ್ಪಿ ಹೊಗಿದ್ದರ ಆತಂಕs ಆತನನ್ನು ಕಾಡಿದ್ದಿರಬಹುದು. ಬಹುಶಃ ಆ ಬಾಲಕನಿಗೆ ತಾನು ಕೊಲೆ ಮಾಡಿದರೆ ಏನಾಗ ಬಹುದು…ಎಂತಹ ಶಿಕ್ಷೆ ಅನುಭವಿಸಬೇಕಾಗಬಹುದು ಎನ್ನುವ ವಿಷಯವೇ ಗೊತ್ತಿರಲಿಕ್ಕಿಲ್ಲ. ಆತನ ತಲೆಯಲ್ಲಿರುವುದು ಒಂದೇ. ತನಗಿಂತ ಹೆಚ್ಚು ಅಂಕ ಪಡೆದವನು ಇರಬಾರದು ಅಷ್ಟೆ. ಮುಂದೆ ಆಗಬಹುದಾದ ಅನಾಹುತಗಳ ಚಿಂತೆ ಆತನಿಗಿಲ್ಲ. ಪ್ರಥಮ ಸ್ಥಾನ ತನ್ನೊಬ್ಬನದ್ದೇ ಸ್ವತ್ತು ಎಂದು ನಂಬಿಕೊಂಡು, ಸೋಲೊಪ್ಪಿಕೊಳ್ಳಲು ಸಿದ್ಧನಿಲ್ಲದ ಆ ಹುಡುಗನ ಮನಃಸ್ಥಿತಿಯಿಂದಾಗಿ ಒಂದು ಮುಗ್ಧ ಜೀವ ಬಲಿಯಾಗಿರುವುದು ಮಾತ್ರ ದುರಂತ.
ಕೆಲವು ವರ್ಷಗಳ ಹಿಂದೆ ತನಗೆ ಅಂಕ ಕಡಿಮೆ ಬಂದಿರಬಹುದಾದ ಸಾಧ್ಯತೆಗಳನ್ನು ಊಹಿಸಿಯೇ ಮನೆಯ ಹಿಂದಿನ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ನನ್ನ ಪುಟ್ಟ ಂಬಂಧಿಯೋರ್ವಳ ಮನಸ್ಥಿತಿ ಇಂದಿಗೂ ನನ್ನನ್ನು ಕಾಡುತ್ತಿದೆ. ಬುದ್ಧಿವಂತ ಹುಡುಗಿ ಆಕೆ. ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾದರೆ ಎನ್ನುವ ಆತಂಕದಲ್ಲಿಯೇ ಜೀವನವನ್ನು ಮುಗಿಸಿಕೊಂಡ ಹುಡುಗಿ ನಂತರ ಉತ್ತರ ಪತ್ರಿಕೆಯನ್ನು ನೋಡಿದಾಗ ಉತ್ತಮ ಅಂಕಗಳನ್ನೇ ಪಡೆದಿದ್ದಳು. ಅವಸರದಲ್ಲಿ ಬದುಕನ್ನು ನಿರ್ದಯವಾಗಿ ಎಡಗಾಲಲ್ಲಿ ತುಳಿದು ಹೋದ ರೀತಿ ಮಾತ್ರ ಆತಂಕ ಹುಟ್ಟಿಸುವಂತಹುದ್ದು. ಯಾವುದೋ ಆತಂಕಕ್ಕೆ ಬಿದ್ದು ಚಿನ್ನದಂತಹ ಬದುಕನ್ನು ಬಂಗಾರದ ಹರಿವಾಣದಲ್ಲಿಟ್ಟು ಯಮನ ಪಾದಕ್ಕೆ ಅರ್ಪಿಸುವ ಮುಗ್ಧ ಬಾಲಕ ಬಾಲಕಿಯರ ಮನಸ್ಥಿತಿ ನಿಜಕ್ಕೂ ಆತಂಕಕಾರಿ.
ಅವರಿಬ್ಬರ ಮನೆಯವರೂ ಆತ್ಮೀಯ ಮಿತ್ರರು. ಆಕೆ ಇನ್ನೂ ಹೈಸ್ಕೂಲು ಓದುತ್ತಿರುವ ಬಾಲಕಿ. ಆಕೆಗೆ ಅವನನ್ನು ಕಂಡರೆ ಅದೇನೋ ಸೆಳೆತ. ಅದನ್ನು ಆತನಲ್ಲಿ ಹೇಳಿಕೊಂಡೂ ಬಿಟ್ಟಳು. ಆದರೆ ತನ್ನ ವಿದ್ಯಾಭ್ಯಾಸ ಮುಗಿಸಿ ಆಗತಾನೆ ಕೆಲಸಕ್ಕೆ ಸೇರಿದ ಅವನ ಪಾಲಿಗೆ ಅವಳಿನ್ನೂ ಚಿಕ್ಕ ಮಗು. ಒಂದು ದಿನ ಜೊತೆ ಕುಳ್ಳಿಸಿಕೊಂಡು ತಮ್ಮಿಬ್ಬರ ನಡುವಿನ ವಯಸ್ಸಿನ ಅಂತರವನ್ನೂ, ಜೀವನದಲ್ಲಿ ಆಕೆ ಇನ್ನೂ ಕ್ರಮಿಸ ಬೇಕಾದ ಉದ್ದವಾದ ಹಾದಿಯ ಕುರಿತು, ಪ್ರೀತಿ ಪ್ರೇಮ ಎಂದು ಆ ವಯಸ್ಸಿಗೆ ಉಂಟಾಗಬಹುದಾದ ಸಹಜ ಆಕರ್ಷಣೆಯನ್ನು ವಿವರಿಸಿ ಬುದ್ಧಿ ಮಾತು ಹೇಳಿದ. ಆತನ ಮಾತಿಗೆಲ್ಲ ತಲೆಯಾಡಿಸಿ ಬಂದ ಆಕೆ ಅದೇ ರಾತ್ರಿ ತನ್ನ ದುಪಟ್ಟಾದಿಂದ ನೇಣು ಹಾಕಿಕೊಂಡಳು. ತನ್ನ ಮೊದಲ ಪ್ರೀತಿ ಫಲಿಸದ ಕಾರಣ ಕೊಟ್ಟು ಆತ್ಮಹತ್ಯೆಗೆ ಶರಣಾದ ಆಕೆಯ ಈ ಕೃತ್ಯದಿಂದ ಏನೂ ತಪ್ಪು ಮಾಡದ ಆತನಿಗೀಗ ಅಪರಾಧಿ ಭಾವ.
ಅವರಿಬ್ಬರೂ ಒಂದೆ ತರಗತಿಯಲ್ಲಿ ಓದುತ್ತಿದ್ದಾರೆ. ಆತ ಆಗರ್ಭ ಶ್ರೀಮಂತರ ಮಗ. ಆಕೆ ತಂದೆ ತಾಯಿ ಇಲ್ಲದೇ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿರುವ, ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಮುಂದೆ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ಹೊತ್ತವಳು. ಆಕೆಯ ಬುದ್ಧಿವಂತಿಕೆಯ ಕುರಿತು ಈತನಿಗೆ ಅದೇನೋ ಸೆಳೆತ. ತೋಡಿಕೊಂಡ ಆತನ ಪ್ರೀತಿಯನ್ನು ಅವಳು ನಿರಾಕರಿಸಿದಳು ಎನುವ್ನ ಕಾರಣ ಮುಂದಿಟ್ಟು ಹತ್ತನೇ ತರಗತಿಯ ಆ ಬಾಲಕ ಅವಳ ಮೇಲೆ ಎಸಿಡ್ ಎರೆಚಿದ್ದಾನೆ. ಆಕೆ ಈಗ ಮುಖ, ಕೈಕಾಲು ಸುಟ್ಟುಕೊಂಡು, ಒಂದು ಕಣ್ದನ್ನೂ ಕಳೆದುಕೊಂಡು ಅಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ. ಆತ ತನ್ನ ತಪ್ಪಿಗಾಗಿ ರಿಮಾಂಡ ಹೋಂ ಸೇರಿದ್ದಾನೆ. ತಾವಂದುಕೊಂಡದ್ದು ನಡೆಯಲೇ ಬೇಕು ಎಂದುಕೊಳ್ಳುವ, ತಾನು ಕೈ ಹಾಕಿದ ಕೆಲಸದಲ್ಲಿ ಸೋಲೇ ಇರಬಾರದು ಎಂದು ನಂಬಿರುವ ಯುವ ಜನತೆ ಮಾಡುತ್ತಿರುವ ಅನಾಹುತಗಳು ಇವು.
ಇದಕ್ಕೆ ಕಾರಣವೂ ಇಲ್ಲದಿಲ್ಲ.ತಮ್ಮ ಮಕ್ಕಳು ಪ್ರಥಮ ಸ್ಥಾನ ಪಡೆಯಲೇಬೇಕು ಎಂದುಕೊಂಡ ಪಾಲಕರ ಬುದ್ಧಿಗೇಡಿತನವೇ ಈ ಎಲ್ಲ ಅನಾಹುತಗಳಿಗೆ ಮೂಲ ಕಾರಣ ಎಂದರೆ ತಪ್ಪಾಗಲಾರದು. ಮಕ್ಕಳು ಗೆದ್ದು ಬಂದಾಗ ಎಲ್ಲಿಲ್ಲದ ಹೆಮ್ಮೆ ಪಡುವ ನಾವು, ಅದೇ ಮಕ್ಕಳು ನಂಬರ್ ಬರದೇ ಬಂದಾಗ ಅವರಿಗಿಂತ ಹೆಚ್ಚು ಅಳುಕುತ್ತೇವೆ. ಜೊತೆಗೆ ಅವರೂ ಅಳುಕುವಂತೆ ಮಾಡುತ್ತೇವೆ. ಒಂದು ಸ್ಪರ್ದೆಯ ಸೋಲು, ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುವುದು ಜೀವನದ ಅಂತ್ಯ ಎಂಬ ಭಾವನೆಯನ್ನು ಆ ಮಕ್ಕಳಲ್ಲಿ ತುಂಬುತ್ತೇವೆ. ಒಮ್ಮೆ ಪಾಲಕರು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವ ಅನಿವಾರ್‍ಯತೆಯಿದೆ.ಎಷ್ಟು ಮಕ್ಕಳು ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಮರ್ಥರಾಗಿದ್ದಾರೆ? ತಮ್ಮ ಸೋಲನ್ನು ಒಪ್ಪಿಕೊಂಡು ಆ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿಕೊಳ್ಳುವುದನ್ನು ಎಷ್ಟು ಪಾಲಕರು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ? ಇಂದಿನ ಪಾಲಕರು ಮಕ್ಕಳನ್ನು ಬೆಳೆಸುವ ಕ್ರಮವೇ ‘ಏನಾದರಾಗಲಿ ಮೊದಲಲ್ಲಿ ಇರುವುದು ಮುಖ್ಯ’ ಎಂಬಂತಾಗಿದೆ.
ಮಕ್ಕಳನ್ನು ಬೆಳೆಸುವ ಕ್ರಮವೇ ಬದಲಾಗಬೇಕಿದೆ. ಚಿಕ್ಕಂದಿನಿಂದಲೇ ಮಕ್ಕಳು ಕೇಳಿದ್ದನ್ನೆಲ್ಲ ನಿಮಿಷಾರ್ದದಲ್ಲಿ ತಂದುಕೊಡುವ ಪಾಲಕರು ತನ್ನ ಮಗು ಯಾವುದಕ್ಕೂ ಇಲ್ಲ ಎನ್ನಿಸಿಕೊಳ್ಳದೇ ಬೆಳೆಯಬೇಕು ಎಂಬ ಆದರ್ಶ ಪಾಲಕರೆನ್ನಿಸಿಕೊಳ್ಳುವ ಹುಕಿಯಲ್ಲಿ ಕೇಳಿದ್ದಕ್ಕೆ ಇಲ್ಲ ಎನ್ನದ ಹುಚ್ಚು ಕುದುರೆಯ ಬೆನ್ನು ಹತ್ತಿದ್ದಾರೆ. ತನಗೆ ಬೇಕಾದುದೆಲ್ಲ ನಿಮಿಷಾರ್ಧದಲ್ಲಿ ಸಿಗುತ್ತಿರುವಾಗ ನಿರಾಸೆ ಎನ್ನುವ ಪದಕ್ಕೆ ಆ ಮಗುವಿಗೆ ಅರ್ಥವೆಲ್ಲಿ ಗೊತ್ತಿರಬೇಕು ಹೇಳಿ.ಇದರಿಂದಾಗಿಯೇ ಜೀವನದಲ್ಲಿ ಅಪರೂಪಕ್ಕೊಮ್ಮೆ ಬರುವ ಸೋಲನ್ನೂ ಸ್ವೀಕರಿಸುವ ಮನೋಭಾವವಾಗಲಿ, ಆ ಸೋಲನ್ನು ಎದುರಿಸುವ ಶಕ್ತಿಯಾಗಲಿ ಆ ಮಗುವಿನಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಮೊದಲ ಸೋಲಿಗೇ ಬದುಕಿಗೆ ಬೆನ್ನು ತೋರಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅಥವಾ ಆ ಸೋಲಿಗೆ ಕಾರಣವಾದವರ ಮೇಲೆ ಸೇಡು ತೀರಿಸಿಕೊಳ್ಳುವ ಉನ್ಮಾದಕ್ಕೆ ಬಲಿಯಾಗುತ್ತಿದ್ದಾರೆ.
ಬದುಕು ಬದಲಾಗಲೇ ಬೇಕು ಎನ್ನುವುದಿದ್ದರೆ ಮಗುವಿಗೆ ಕೇವಲ ಸೋಲಿಸುವುದನ್ನು ಕಲಿಸಿದರೆ ಸಾಕಾಗುವುದಿಲ್ಲ, ಸೋಲುವುದನ್ನು ಕಲಿಸಿ; ಸೋಲಿಸಿ ಕೊಳ್ಳುವುದನ್ನು ಕಲಿಸಿ; ಆ ಸೋಲನ್ನು ಹೇಗೆ ಗೆಲುವಿನ ಚಿಮ್ಮು ಹಲಗೆಯನ್ನಾಗಿ ಬದಲಿಸಿಕೊಳ್ಳಬಹುದು ಎನ್ನುವುದನ್ನು ಕಲಿಸಿ. ಜೀವನದ ಹಾದಿಯಲ್ಲಿ ಬರುವ ಚಿಕ್ಕ ಪುಟ್ಟ ಸೋಲುಗಳು ಹೇಗೆ ಬದುಕನ್ನು ಗೆಲುವಿನ ಪಥದತ್ತ ಕೊಂಡೊಯ್ಯತುತ್ತದೆ ಎಂಬುದನ್ನು ಆತ್ಮೀಯತೆಯಿಂದ ತಿಳಿಹೇಳಿ. ಆಗ ಮಗು ತನ್ನ ಇಡೀ ಬದುಕನ್ನು ಗೆಲುವನ್ನಾಗಿ ಬದಲಾಯಿಸಿಕೊಳ್ಳಲು ಸಮರ್ಥವಾಗುತ್ತದೆ.






tumba maarmika lekhana. elfl tamde-taayandiru gamanavittu odi, paalisalebekaada neetibodhaka lekhana. solu ennuvadu illadiddare eshto prakhyataru khyati galisutftle iralilla.
Hats off!
ಅತ್ಯುತ್ತಮ ಬರಹ.
Current generation trend.I dont know how and when it will get changed.
olleya lekhana ….
ಬರಹಗಳು ತುಂಬಾನೆ ಚೆನ್ನಾಗಿ ಮುಡಿಬಂದಿದೆ ಧನ್ಯವಾದಗಳು
lekhana tumba chennagide. makkalanna poshakaru hegella belesabeku embudannanna chennagi kattikottiddira….jadekunte manjunatha. challakere.
Its not about learning how to lose! but about accepting the defeat and working towards the goal that matters
A very good article. The article made me remember one of my close friends who decided to end her life very tragically, unable to face the fact that she had lost one subject in her first year engineering. Her parents were from an agricultural background. Forget pressurizing her, they never even knew there was a rat race out there for even a single mark. What do you tell them? How do you console them?
ತುಂಬಾ ಚೆನ್ನಾಗಿದೆ, ಧನ್ಯವಾದ.
mana kalakida lekhana.
ಸೋಲು ಗೆಲುವಿನ ಸೋಪಾನ ಅನ್ನುವ ಪಾಠವನ್ನೆ ಹೇಳಿಕೊಡದ ಪೊಷಕರು ತಮ್ಮ ಮಕ್ಕಳನ್ನ ಎತ್ತರದ ಸ್ಥಾನದಲ್ಲೆ ನೋಡಲು ಇಷ್ಟಪಡುತ್ತಾರೆ . ಮಕ್ಕಳು ಕಡಿಮೆ ಅಂಕ ತೆಗೆದುಕೊಂಡಿದ್ದರೂ ನರೆಹೊರೆಯವರ ಎದುರು ಒಂದಿಷ್ಟು ಸುಳ್ಳನ್ನು ಪೋಣಿಸಿ ಮಗನನ್ನೊ ಮಗಳನ್ನೋ ಸಮರ್ಥಿಸಿಕೊಳ್ಳುತ್ತಾರೆ.ಅದು ಕೂಡ ಮಕ್ಕಳ ಎದುರಲ್ಲೆ ಈ ಸಂಭಾಷಣೆಗಳನ್ನ ನಡೆಸುತ್ತಾರೆ.ದೊಡ್ಡವರ ಸ್ವಾರ್ಥ ಪರ ಸುಳ್ಳುಗಳನ್ನ ಮಕ್ಕಳು ತಮ್ಮದೆ ರೀತಿಯಲ್ಲಿ ಅರ್ಥೈಸಿಕೊಂಡು ಸುಳ್ಳು ಹೇಳುವುದನ್ನ ಕಲಿಯುತ್ತವೆ. ಮತ್ತೆ ಕೆಲವೊಮ್ಮೆ ಯಾವುದೋ ಚಟುವಟಕೆಯನ್ನ ಗುರಿಮಾಡಿಕೊಂಡು ತಮ್ಮ ಮಕ್ಕಳನ್ನ ಇನ್ನೊಬ್ಬರ ಮಕ್ಕಳಿಗೆ ಹೋಲೀಕೆ ಮಾಡುವುದು ಉಂಟು. ಅವನನ್ನ ನೋಡು ಅವನ ಕಾಲಡಿ ನುಸಿ ಅಂತ ಬೈಯುತ್ತಲೆ ಸ್ವಂತ ಮಕ್ಕಳಲ್ಲಿ ತಿರಸ್ಕಾರ ಬಾವನೆಯನ್ನ ತುರುಕುತ್ತಾರೆ . ಇದು ಕೂಡ ಚಿಕ್ಕಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ ಅನ್ನೊದನ್ನ ರ್ಥಮಾಡಿಕೊಳ್ಲಲಾರರು ಈ ಪೋಷಕರು . ಹಿಂದೆಲ್ಲ ಮನೆಯ ಮಕ್ಕಳ ಮೇಲೆ ನೆರೆಹೊರೆಯರಿಂದ ಹಿಡಿದು , ಮನೆಯ ಪ್ರತಿಯೊಂದು ಸದಸ್ಯರು ಕಣ್ಣಿಟ್ಟುರುತ್ತಿದ್ದರು .ಸಾಲದಕ್ಕೆ ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳ ಆಸಕ್ತಿಯನ್ನ ತೀದ್ದಿ ತೀಡಿ ಸರಿಪಡಿಸುತ್ತಿದ್ದರು . ಆದರೆ ಈಗ ಕಾಲ ಬದಲಾಗಿದೆ ಮಗ ಮಣ್ಣಿಗಿಳಿದರೆ ಅಲರ್ಜಿಯಾಗುತ್ತೆ ಅಂತ ತಡೆಯೋ ಪೊಷಕರು ಮಕ್ಕಳ ಪುಟ್ಟಪುಟ್ಟ ಸಾಹಸಕ್ಕೂ ತಡೆಯೊಡ್ಡುತ್ತಾರೆ . ಇನ್ನು ಮೆಷ್ಟ್ರು ದಂಡ ಪ್ರಯೋಗ ಮಾಡಿದರಂತು ಮುಗಿದೆ ಹೋಯಿತು , ಪೊಷಕರಿಂದ ಶಿಕ್ಷಕರ ಗರ್ವಭಂಗವೆ ನಡೆದುಹೋಗುತ್ತದೆ . ಹೀಗಾಗಿ ಇತ್ತೀಚಿನ ಶಿಕ್ಷಕರು ತಮಗೇಕೆ ಅನ್ನುವ ರೀತಿಯಲ್ಲೆ ಪಾಠ ಮಾಡಿ ಸುಮ್ಮನಾಗುತ್ತಿದ್ಧಾರೆ . ಒಟ್ಟಿನಲ್ಲಿ ಮಕ್ಕಳನ್ನ ಸಾಕುವ ಪೊಷಕರ ಕೆಲ ಅಧಿಕ ಪ್ರಸಂಗಗಳೆ ಇವಕ್ಕೆಲ್ಲ ಕಾರಣ ಅನ್ನುಬಹುದು .ಈ ನಿಟ್ಟಿನಲ್ಲಿ ನಿಮ್ಮ ಬರಹ ಸ್ವಾಗತಾರ್ಹ ,