ಮಂಸೋರೆ ಸರ್ಕಲ್ ಹತ್ರ ನಿರ್ಮಾಪಕರ ಹುಡುಕಾಟ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ಅವಧಿಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.ಇವರ ಮೊದಲ ಚಿತ್ರ ಹರಿವು’ ನಿರ್ಮಾಣಗೊಂಡ ಕಥನವೂ ಅವಧಿಯಲ್ಲಿಯೇ ಪ್ರಕಟವಾಗಿತ್ತು.

ಓದುಗರಲ್ಲಿ ಮೊದಲಿಗೆ ಕ್ಷಮೆ ಕೇಳುತ್ತಿದ್ದೇನೆ. ಆಕ್ಟ್ 1978 ಸಿನೆಮಾದ ಬಿಡುಗಡೆಯ ಕೆಲಸಗಳ ಒತ್ತಡದಲ್ಲಿದ್ದ ಕಾರಣದಿಂದಾಗಿ ಧೀರ್ಘಾವಧಿಗೆ ಅಂಕಣ ಬರೆಯಲಾಗಲಿಲ್ಲ. ಸಿನೆಮಾದ ಕೆಲಸಗಳು ಇನ್ನೂ ಮುಗಿದಿಲ್ಲವಾದರೂ ‘ಅವಧಿ’ಯ ಶಿಸ್ತಿಗೆ ಮತ್ತೆ ಮತ್ತೆ ಭಂಗತರಲು ಮನಸ್ಸಾಗದೇ ಅಂಕಣ ಮುಂದುವರಿಸುತ್ತಿದ್ದೇನೆ.

|ಕಳೆದ ಸಂಚಿಕೆಯಿಂದ|

ಶೃತಿ ಹರಿಹರನ್ ಅವರ ಮ್ಯಾನೇಜರ್ ವಿಘ್ನೇಶ್ ಮೆದುಭಾಷಿ, ಕೆಲಸದ ವಿಷಯದಲ್ಲಿ ಅಷ್ಟೇ ಕರಾರುವಕ್ಕಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡುವ ವ್ಯಕ್ತಿ. ನಮ್ಮ ಸಿನೆಮಾ ಮಾಡಲು ಒಪ್ಪಿದ್ದ ನಿರ್ಮಾಪಕರು ಹಾಗೂ ವಿಘ್ನೇಶ್ ಒಮ್ಮೆ ಭೇಟಿ ಮಾಡಿ ಅಗ್ರಿಮೆಂಟ್ ಮಾತುಕತೆಯ ಜೊತೆಗೆ ಅವರ ಕಡೆಯಿಂದ ಸಿನೆಮಾಗೆ ಏನೆಲ್ಲಾ ಸಹಾಯ ಆಗಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿ, ಅವರ terms and conditions ಎಲ್ಲಾ ಕೇಳಿಕೊಂಡು, ಸದ್ಯದಲ್ಲೇ ಮತ್ತೊಮ್ಮೆ ಭೇಟಿ ಆಗುವ, ಅಡ್ವಾನ್ಸ್ ಮಾಡಿ ಅಗ್ರಿಮೆಂಟ್ ಮಾಡಿಕೊಳ್ಳೋಣ ಎಂದೆಲ್ಲಾ ಮಾತುಕತೆ ಆಯ್ತು.

ಈ ಮಾತುಕತೆ ಆದ ಒಂದು ವಾರದ ನಂತರ ನಿರ್ಮಾಪಕರಿಗೆ ಕಾಲ್ ಮಾಡಿದೆ, ಅಗ್ರಿಮೆಂಟ್ ಯಾವತ್ತು ಮಾಡಿಕೊಳ್ಳುವುದು ಎಂದು ವಿಚಾರಿಸಲು, ಅವರು ಎರಡು ದಿನ ಟೈಂ ಕೊಡಿ ಹೇಳ್ತೀನಿ ಅಂತ ಹೇಳಿದ್ರು. ಎರಡು ದಿನದ ನಂತರ ಮತ್ತೆ ಕಾಲ್ ಮಾಡಿದೆ, ರಿಸೀವ್ ಮಾಡ್ಲಿಲ್ಲಾ, ಮೆಸೇಜ್ ಮಾಡಿದೆ ರಿಪ್ಲೈ ಬರಲಿಲ್ಲ. ಇದು ಹತ್ತು ಹದಿನೈದು ದಿನಗಳ ನಡೆಯಿತು, ಮೊದಮೊದಲು ಬಹುಶಃ ಬ್ಯುಸಿ ಇರಬಹುದೇನೋ ಎಂದು ಭಾವಿಸಿದ್ದ ನನಗೆ ಹತ್ತು ಹದಿನೈದು ದಿನಗಳ ನಂತರವೂ ಅವರಿಂದ ಯಾವ ಪ್ರತಿಕ್ರಿಯೆ ಬರದೇ ಹೋದಾಗ ಆತಂಕ ಶುರುವಾಯಿತು. ಎಲ್ಲವೂ ಸರಿಯಾಗೇ ಇತ್ತಲ್ಲಾ, ಯಾಕೆ ಏನೂ ರಿಪ್ಲೈ ಮಾಡ್ತಿಲ್ಲ, ಎಂಬ ಚಿಂತೆ ಶುರುವಾಯ್ತು. ಅತ್ತ ವಿಘ್ನೇಶ್ ಅಗ್ರಿಮೆಂಟ್ ಮತ್ತು ಅಡ್ವಾನ್ಸ್ ವಿಷಯದ ಬಗ್ಗೆ ವಿಚಾರಿಸುತ್ತಲೇ ಇದ್ದರು. ಆದರೆ ನಿರ್ಮಾಪಕರು ಏನೂ ರೆಸ್ಪಾನ್ಸ್ ಮಾಡ್ತಿಲ್ಲ ಎಂಬ ವಿಷಯ ಹೇಗೆ ತಿಳಿಸುವುದೋ ತಿಳಿಯದೇ ಬೇರೇನೇನೋ ಕಾರಣ ಕೊಟ್ಟು ಮುಂದೂಡುತ್ತಿದ್ದೆ.

ಸಿನೆಮಾ ಬಗ್ಗೆ ಮತ್ತೆ ಆತಂಕ ಮೂಡಲು ಶುರುವಾಗಿತ್ತು, ಈ ಪ್ರಾಜೆಕ್ಟು ಟೇಕಾಫ್ ಆಗುವುದಿಲ್ಲವೇನೋ ಎಂಬ ಭಯ ಶುರುವಾಗಿತ್ತು. ನನ್ನ ಆತಂಕವನ್ನೆಲ್ಲಾ ಸಂಧ್ಯಾ ಮೇಡಂ ಹಾಗೂ ನಮ್ಮ ಎಡಿಟರ್ ನಾಗೇಂದ್ರ ಹತ್ರ ಮಾತ್ರ ಹಂಚಿಕೊಳ್ಳುತ್ತಿದ್ದೆ. ಸಂಧ್ಯಾ ಮೇಡಂ ಹಲವು ತಿದ್ದುಪಡಿಗಳ ನಂತರ ಫಸ್ಟ್ ವರ್ಷನ್ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಮುಂದೆ ಹೇಗಪ್ಪ ಎಂದು ಯೋಚಿಸುತ್ತಿರುವಾಗಲೇ ಅದೊಂದು ದಿನ ಬೆಳ್ಳಂಬೆಳಗ್ಗೆ ಪತ್ರಕರ್ತ ಮಿತ್ರರಾದ ಶರಣು ಹುಲ್ಲೂರ್ ಸರ್ ಕಾಲ್ ಮಾಡಿದರು. ಕಾಲ್ ಮಾಡಿ,

ಶರಣು ಹುಲ್ಲೂರು: ಏನ್ ಸರ್ ಹೊಸ ಸಿನೆಮಾ ಮಾಡ್ತಿದ್ದೀರಾ, ನಮಗೊಂದು ಮಾತು ಹೇಳ್ಲೇ ಇಲ್ಲಾ.’
ನನಗೆ ಗಾಬರಿ ಆದ್ರು ತೋರಿಸಿಕೊಳ್ಳದೆ,
ನಾನು: ಯಾವ್ ಸಿನೆಮಾ ಸರ್? ಯಾರು ಹೇಳಿದ್ದು, ಅಂತ ಅಮಾಯಕನಂತೆ ಮರು ಪ್ರಶ್ನೆ ಕೇಳಿದೆ.

ಶರಣು ಹುಲ್ಲೂರು: ಈ ನಾಟಕ ಎಲ್ಲಾ ಬೇಡ, ಶೃತಿ ಹರಿಹರನ್ ಅವರ ಜೊತೆ ಸಿನೆಮಾ ಮಾಡ್ತಿದ್ದೀರಂತೆ, ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ವಾ ಅಂತಂದ್ರು.
ಓ ವಿಷಯ ಹೇಗೋ ಗೊತ್ತಾಗಿದೆ, ಅಂದುಕೊಂಡು,
ನಾನು: ಹೌದು ಸರ್, ಮಾಡೋ ಪ್ಲಾನ್ ಇದೆ ಮಾತುಕತೆ ನಡೀತಿದೆ.
ಶರಣು: ಇದೆಲ್ಲಾ ಡೌ ಬೇಡ. ಇವತ್ತು ನಮ್ ಪತ್ರಿಕೇಲಿ ಸುದ್ದಿ ಆಗಿದೆ. ಶೃತಿ ಅವರೇ ಕನ್ಫರ್ಮ್ ಮಾಡಿದ್ದಾರೆ. ಇನ್ನೂ ಮಾತುಕತೆ ನಡೀತಿದೆ ಅಂತೆಲ್ಲಾ ಕತೇ ಹೊಡೀಬೇಡಿ.
ನಾನು: ಪತ್ರಿಕೇಲಿ ಬಂದಿದ್ಯಾ? ನನಗೇ ಗೊತ್ತಿಲ್ವಲ್ಲ ಸರ್. ನಿಜಾ ಇನ್ನೂ ಮಾತುಕತೆ ಹಂತದಲ್ಲಿದೆ.
ಶರಣು: ಓ ಹೌದಾ? ನಿನ್ನೆ ಪದ್ಮಾ ಮೇಡಂ ಇಂಟರ್ವ್ಯೂ ಮಾಡಿದಾಗ ಶೃತಿ ಅವರೇ ಹೇಳಿದ್ರಂತೆ. ಮಾತುಕತೆ ಫಲಪ್ರದವಾಗಲಿ ಆದಷ್ಟು ಬೇಗ ಸಿನೆಮಾ ಶುರು ಮಾಡಿ, ಆಲ್ ದ ಬೆಸ್ಟ್.
ನಾನು: ಥ್ಯಾಂಕ್ಯೂ ಸರ್. ಎಲ್ಲಾ ಸರಿ ಹೋಗಿ ಶುರು ಆದ್ರೆ ನಿಮಗೆ ಹೇಳ್ತೀನಿ.

ಕಾಲ್ ಕಟ್ ಮಾಡಿ ಎದ್ದು ಹೋಗಿ ಪೇಪರ್ ತೆಗೆದು ನೋಡಿದೆ. ಹೌದು ಮುಂದೆ ಮಂಸೋರೆ ಅವರ ಜೊತೆ ಸಿನೆಮಾ ಮಾಡ್ತಿದ್ದೀನಿ ಅಂತ ಶೃತಿ ಅವರು ಇಂಟರ್ವ್ಯೂ ಅಲ್ಲಿ ಹೇಳಿದ್ದರು. ಸ್ವಲ್ಪ ಹೊತ್ತಿಗೆ ಇನ್ನಿಬ್ಬರು ಪತ್ರಕರ್ತ ಮಿತ್ರರೂ ಕೂಡ ಸಣ್ಣ ಜಗಳ ಮಾಡಿ, ವಿಷಯ, ವಿವರ ತೆಗೆದುಕೊಂಡರು. ಅದು ಮರು ದಿನ ಸುದ್ದಿಯಾಗಿ ಊರಲ್ಲೆಲ್ಲಾ ದೊಡ್ಡ ಸುದ್ದಿಯಾಗೋಯ್ತು (ನನ್ನ ಗೆಳೆಯರ ವಲಯವೇ ನನ್ನ ಊರು-ಜಗತ್ತು).

ಎಲ್ಲಾ ಕಡೆಯಿಂದಲೂ ಶುಭ ಹಾರೈಕೆಗಳು ಬರುತ್ತಿದ್ದರೆ, ನನಗೆ ಒಳಗೆ ಆತಂಕ, ದುಗುಡ. ನಿರ್ಮಾಪಕರೇ ಇನ್ನೂ ಸಿಕ್ಕಿಲ್ಲ. ಸಿಕ್ಕಿದ್ದ ನಿರ್ಮಾಪಕರು ರೆಸ್ಪಾಂಡ್ ಮಾಡ್ತಿಲ್ಲ ಎಂದು ತಲೆ ಕೆಡಿಸಿಕೊಂಡು ಕುಳಿತಿದ್ದವನು. ನನ್ನ ಮೊಬೈಲ್ ನಲ್ಲಿ ಸೇವ್ ಆಗಿರೋ ನಿರ್ಮಾಪಕರಿಗೆಲ್ಲಾ ಈ ಪೇಪರ್ ಸುದ್ದಿಯನ್ನು ಕಳಿಸಿ, ನಿರ್ಮಾಣ ಮಾಡ್ತೀರಾ ಅಂತ ಕೇಳಲು ಶುರು ಮಾಡಿದೆ. ಒಂದಿಬ್ಬರು, ಕಾಲ್ ಮಾಡಿ ಬಡ್ಜೆಟ್ ಕೇಳಿ ಸುಮ್ಮನಾದರು, ಮತ್ತಿಬ್ಬರು ಸಿನೆಮಾದ ಕತೆ ಕೇಳಿ, ಇದೆಲ್ಲಾ ಯಾವ ಸೀಮೆ ಕತೆ, ಹರಿವು ತರ ಕತೆ ಮಾಡು ಬೇಕಿದ್ರೆ ಯೋಚ್ನೆ ಮಾಡ್ತೀವಿ ಅಂತ ಕಾಲ್ ಕಟ್ ಮಾಡಿದ್ರು.

ಛೇ ಯಾಕೋ ಈ ಸಿನೆಮಾನೂ ವರ್ಕೌಟ್ ಆಗಲ್ವೇನೋ ಎಂಬ ಚಿಂತೇಲಿ ಮಂಸೋರೆ ಸರ್ಕಲ್ ಹತ್ರ ಹೋಗಿ ಟೀ ಕುಡಿದುಕೊಂಡೇ ಇಡೀ ದಿನ ಕಳೆದೆ. ಅದಾದ ನಾಲ್ಕೈದು ದಿನಗಳು ಅಲ್ಲೇ ದಿನಪೂರ್ತಿ ಕುಳಿತುಕೊಂಡು, ಪರಿಚಯದವರಿಗೆ, ಅವರು ಕೊಡುವ ನಂಬರ್ ಮೂಲಕ ಇನ್ನೊಂದಷ್ಟು ಜನರಿಗೆ ಕಾಲ್ ಮಾಡಿ ಸಿನೆಮಾ ಪ್ರೊಡ್ಯೂಸ್ ಮಾಡ್ತೀರಾ ಅಂತ ಕೇಳ್ತಾ ಹೋದೆ. ಅದರ ಮಧ್ಯೆ ನಾಗೇಂದ್ರ ಬಂದು ಮಾತಾಡಿಸಿಕೊಂಡು ಹೋಗೋವ್ರು, ಜೊತೆಗೆ ಅವ್ರೂ ಒಂದಷ್ಟು ಕಾಂಟ್ಯಾಕ್ಟ್ಸ್ ಕೊಟ್ರು. ಅದ್ಯಾವುದೂ ವರ್ಕೌಟ್ ಆಗಲಿಲ್ಲ.

ಅವತ್ತು ಶುಕ್ರವಾರ ‘ಉಪ್ಪು ಹುಳಿ ಖಾರ’ ಅನ್ನೋ ಸಿನೆಮಾ ರಿಲೀಸ್ ಆಗಿತ್ತು. ನನ್ನ ಜೊತೆಯಲ್ಲೇ ಮಂಸೋರೆ ಸರ್ಕಲ್ ನಲ್ಲಿ ಇದ್ದ ನಾಗೇಂದ್ರ ಆ ಸಿನೆಮಾದ ಬಗ್ಗೆ ಅವರ ಸ್ನೇಹಿತರ ಜೊತೆ ಮಾತಾಡ್ತಾ ಇದ್ದವರು, ಸಡನ್ನಾಗಿ ನನ್ ಹತ್ರ ಬಂದು, ಸರ್, ‘ಉಪ್ಪು ಹುಳಿ ಖಾರ’ ಪ್ರೊಡ್ಯೂಸರ್ ನಿಮ್ಮೂರಿನ ಕಡೆಯವರಂತೆ, ಅವ್ರನ್ನೇ ಯಾಕೆ ಕೇಳ್ಬಾರ್ದು, ನಂಬರ್ ಬೇಕಿದ್ರೆ ನಾನೇ ಕಲೆಕ್ಟ್ ಮಾಡಿ ಕೊಡ್ತೀನಿ. ಒಂದು ಸಲ ಟ್ರೈ ಮಾಡಿ ನೋಡಿ ಅಂತಂದ್ರು. ನಾನು ಸರಿ ಸರ್ ಅಂತಷ್ಟೇ ಹೇಳಿದೆ.

ಯಾಕೆಂದರೆ ಅವ್ರ ಬಗ್ಗೆ ನನಗೆ ಮೊದ್ಲೇ ಗೊತ್ತಿತ್ತು. ಆ ಸಿನೆಮಾದ ಪೋಸ್ಟರ್ ಪೇಪರ್ರಲ್ಲಿ ನೋಡಿದ್ದೆ. ಅದರಲ್ಲಿ ರಮೇಶ್ ರೆಡ್ಡಿ ನಂಗ್ಲಿ (ನಂಗಲಿ) ಅಂತ ಓದಿದ್ದೆ. ಯಾರೋ ನಮ್ಮೂರ್ ಕಡೆಯವ್ರು, ಅಂತಂದುಕೊಂಡು ಸುಮ್ಮನಾಗಿದ್ದೆ. ಆಮೇಲೆ ಇನ್ನೊಂದು ದಿನ ನನ್ನ ಹೈಸ್ಕೂಲ್ ಕ್ಲಾಸ್ ಮೇಟ್ ಒಮ್ಮೆ ಸಿಕ್ಕಿದ್ದಾಗ ಅವನು ರಮೇಶ ರೆಡ್ಡಿ ಅವರ ಬಗ್ಗೆ ಉಳಿದ ಡೀಟೈಲ್ಸ್ ಕೊಟ್ಟಿದ್ದ. ಆ ವಿವರಗಳನ್ನು ನಮ್ಮ ತಾಯಿಯ ಜೊತೆ ಚರ್ಚೆ ಮಾಡಿದಾಗ ಅವರು ದೂರದ ಸಂಬಂಧಿಗಳು ಅನ್ನೋ ವಿಷಯ ಗೊತ್ತಾಗಿತ್ತು. ಸಂಬಂಧಿಗಳ ಬಳಿ ಸಹಾಯ ಕೇಳುವುದು ನನಗೆ ಇಷ್ಟವಿಲ್ಲದಿರುವುದರಿಂದ ಅವರನ್ನು ಇಗ್ನೋರ್ ಮಾಡಿದ್ದೆ.

ಈಗ ಇಗ್ನೋರ್ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಿನೆಮಾ ಮಾಡುವ ಪ್ರಯತ್ನ ಮತ್ತೆ ಹಳ್ಳ ಹಿಡಿಯುವುದೋ ಎಂಬ ಆತಂಕ ತುಸು ಹೆಚ್ಚೇ ಬಾಧಿಸುತ್ತಿತ್ತು. ಆದದ್ದಾಗಲಿ ಒಮ್ಮೆ ಪ್ರಯತ್ನಿಸಿ ನೋಡುವ ಎಂದು ನಿರ್ಧರಿಸಿ, ನನ್ನ ಇನ್ನೊಬ್ಬ ಹೈಸ್ಕೂಲ್ ಕ್ಲಾಸ್ ಮೇಟ್ ಸುಬ್ರಮಣಿಗೆ ಕಾಲ್ ಮಾಡಿ ರಮೇಶ್ ರೆಡ್ಡಿ ಅವರ ನಂಬರ್ ಬೇಕು ಅಂತ ಕೇಳಿದೆ. ಸುಬ್ರಮಣಿ ರಮೇಶ್ ರೆಡ್ಡಿಯವರ ದೊಡ್ದಪ್ಪನ ಮಗ. ಅವನು ಕೂಡಲೇ ನಂಬರ್ ಕಳಿಸಿದ.

ಮರುದಿನ ಶನಿವಾರ ಮೊದಲು ಹೋಗಿ ‘ಉಪ್ಪು ಹುಳಿ ಖಾರ’ ಸಿನೆಮಾ ನೋಡಿ ಬಂದೆ. ಸಂಜೆ, ನನ್ನ ವಿವರಗಳ ಜೊತೆಗೆ ಸಿನೆಮಾ ಮಾಡುವ ಉದ್ಧೇಶವನ್ನು ತಿಳಿಸಿ, ನಿರ್ಮಾಣ ಮಾಡಲು ಆಸಕ್ತಿ ಇದ್ದರೆ ತಿಳಿಸಿ ಎಂದು ಮೆಸೇಜ್ ಕಳಿಸಿದೆ. ಅವರು ಪ್ರತಿಕ್ರಿಯೆ ನೀಡಲಿಲ್ಲವೆಂದರೆ ಅವರಿಗೆ ಆಸಕ್ತಿ ಇಲ್ಲ ಎಂದು ಅರ್ಥ ಅಂದ್ಕೊಂಡು ಸುಮ್ಮನಾಗೋಣ ಎನ್ನುವುದು ನನ್ನ ಉದ್ಧೇಶ. ಮೆಸೇಜ್ ಡೆಲಿವರಿ ಆಯ್ತು, ಅವರು ಮೆಸೇಜ್ ಓದಿದ್ದಾರೆ ಎಂದು ಖಾತರಿಯಾಗಿ ಬ್ಲೂಟಿಕ್ ಕೂಡ ಕಾಣಿಸಿತು.  ಆದರೆ ಎಷ್ಟೊತ್ತಾದರೂ ರಿಪ್ಲೈ ಬರಲೇ ಇಲ್ಲ..!

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

December 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: