ಮಂಸೋರೆ ಅಂಕಣ: ‘ವಿಲ್ಲಾ’ ಹುಡುಕಾಟದಲ್ಲಿ…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ನನ್ನ ಮೆಚ್ಚಿನ ಸಿನೆಮಾಗಳಲ್ಲಿ ಒಂದಾದ ‘ಬಾಬೆಲ್’ನಲ್ಲಿ ಒಂದು ದೃಶ್ಯವಿದೆ. ಸಿನೆಮಾದ ಮುಖ್ಯ ಪಾತ್ರಧಾರಿ ವಿರಹ, ಒಂಟಿತನ, ಪೋಷಕರ ಪ್ರೀತಿಯಿಂದ ವಂಚಿತ ಹುಡುಗಿಯೊಬ್ಬಳು, ಸಿನೆಮಾದ ಕೊನೆಯಲ್ಲಿ ಬಹುಮಹಡಿ ಕಟ್ಟಡದಲ್ಲಿ ಮನೆಯ ಬಾಲ್ಕನಿಯಲ್ಲಿ ಬಂದು ನಿಲ್ಲುತ್ತಾಳೆ. ಅಲ್ಲಿಂದ ಇಡೀ ನಗರ ಕಾಣಿಸುತ್ತಿರುತ್ತದೆ. ನನಗೆ ಹೆಚ್ಚು ಕಾಡುವ ದೃಶ್ಯವದು.

ವಿಷಯ, ಪರಿಸ್ಥಿತಿ ಬೇರೆಯಾದರು ಗೌರಿ ಸಿನೆಮಾದ ಕೊನೆಯಲ್ಲಿ ನಿರ್ಲಿಪ್ತ ಭಾವದ ಜೊತೆಗೆ, ತನ್ನನ್ನು ತಾನು ಹುಡುಕಿಕೊಳ್ಳುವ ಸಂದರ್ಭ, ಅಲ್ಲಿಯವರೆಗೂ ತಾನು ಅನುಭವಿಸಿದ ಒತ್ತಡದಿಂದ ಬಿಡುಗಡೆ ಹೊಂದಿದ ಭಾವಗಳ ಮಿಶ್ರಭಾವದಲ್ಲಿ ಮನೆಯ ಬಾಲ್ಕನಿಯಲ್ಲಿ ಬಂದು ಕೂರುವ ದೃಶ್ಯವನ್ನು ‘ಬಾಬೆಲ್’ ಮಾದರಿಯಲ್ಲೇ ಚಿತ್ರಿಸಬೇಕು ಅನ್ನೋದು ನನ್ನಾಸೆಯಾಗಿತ್ತು. ಅದು ಚಿತ್ರಕಥೆ ಬರೆಯುವ ಸಂದರ್ಭದಲ್ಲೇ ಮನಸ್ಸಲ್ಲಿ ಅಚ್ಚಾಗಿ ಹೋಗಿತ್ತು. ಆದರೆ ಅದನ್ನು ಚಿತ್ರೀಕರಿಸಲು ಇದ್ದ ತೊಡಕು ಎದುರಾಗಿದ್ದೇ, ಲೊಕೇಷನ್ ಹುಡುಕಲು ಹೊರಟಾಗ.

ಖಾಸಗಿ ಏಜೆನ್ಸಿಯ ಹುಡುಗನೊಬ್ಬ ಲೊಕೇಷನ್ಸ್ ಹುಡುಕಿಕೊಡುವುದಾಗಿ ಮುಂದೆ ಬಂದಿದ್ದ. ಆ ಹುಡುಗನ ಜೊತೆ ಏನಿಲ್ಲವೆಂದರು ಐವತ್ತಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಗಳನ್ನು ಹುಡುಕಿದೆವು. ಒಂದೊಂದು ಕಡೆ ಒಂದು ಸಮಸ್ಯೆ, ಕೆಲವು ಕಡೆ ಅತಿಯಾದ ಬಾಡಿಗೆ, ಜೊತೆಗೆ ಚಿತ್ರೀಕರಣ ಮಾಡಲು ಸಾಧ್ಯವೇ ಇಲ್ಲದಂತಹ ಶರತ್ತುಗಳು. ಮತ್ತು ಕೆಲವು ಕಡೆ, ಅಪಾರ್ಟ್‌ಮೆಂಟ್ ನಲ್ಲಿ ಇರುವಂತಹ ಉತ್ತರ ಭಾರತದ ಕಡೆಯವರಿಂದ ವಿರೋಧ. ಅಪಾರ್ಟ್‌ ಮೆಂಟ್ ನ ಸೊಸೈಟಿಗಳಲ್ಲಿ ಹೆಚ್ಚಾಗಿ ಅವರೇ ಇದ್ದಿದ್ದರಿಂದ, ಕನ್ನಡದವರು ಲೊಕೇಷನ್ ಪರ್ಮೀಷನ್ ಕೊಡುವುದಕ್ಕೆ ಒಪ್ಪಿಗೆ ನೀಡಿದರು, ಉತ್ತರದವರು ವಿರೋಧಿಸುತ್ತಿದ್ದರು.

ಇನ್ನು ಕೆಲವು ಕಡೆ ನಮ್ಮ ಸಿನೆಮಾದವರ ಕೃಪೆಯಿಂದಾಗಿ ಲೊಕೇಷನ್ ಸಿಗದೇ ವಾಪಸ್ಸು ಬರುವಂತಾಯಿತು. ಕಾರಣ ನನಗೂ ಗೊತ್ತಿರುವಂತಹುದೇ. ನಮ್ಮ ಸಿನೆಮಾರಂಗದಲ್ಲಿ, ವೃತ್ತಿಪರವಾಗಿ ನಡೆದುಕೊಳ್ಳುವವರ ಸಂಖ್ಯೆ ಬಹು ವಿರಳ. ಖಾಸಗಿ ಸ್ಥಳಗಳಲ್ಲಿ ಚಿತ್ರೀಕರಿಸುವಾಗ ಅನುಸರಿಸಬೇಕಾದ ಯಾವ ಮಾರ್ಗ ಸೂತ್ರಗಳನ್ನು ಪಾಲಿಸುವುದಿಲ್ಲಾ. ಅದರ ಜೊತೆಗೆ ಅಂತರ್ ಶಿಸ್ತು ಕಡಿಮೆ.

ನಮ್ಮ ಹಿಂದಿನ ಸಿನೆಮಾದವರು (ಎಲ್ಲರೂ ಅಲ್ಲಾ. ಆದರೆ ಬಹುತೇಕರು) ಅಪಾರ್ಟ್ಮೆಂಟ್ ಗಳಲ್ಲಿ ಚಿತ್ರೀಕರಣ ನಡೆಸಲು ಹೋಗಿ, ಅಲ್ಲಿ ಗಲಾಟೆ ಮಾಡಿಕೊಂಡು, ಗೋಡೆಗಳೆಲ್ಲಾ ಡ್ಯಾಮೇಜ್ ಮಾಡಿ, ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಟ್ಟು, ಅವರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದೆ, ಸಿನೆಮಾದವರೆಂದರೆ ಅವರ ಬಗ್ಗೆ ನಕಾರಾತ್ಮಕ ಭಾವ ಬರುವಂತೆ ಮಾಡಿಬಿಡುತ್ತಾರೆ. ನಾನು ಕಲಾ ನಿರ್ದೇಶನ ಮಾಡುವಾಗ ಇದೆಲ್ಲಾ ಗೊತ್ತಾಗುತ್ತಿರಲಿಲ್ಲಾ. ಆದರೆ ಆ ಸಣ್ಣ ಪುಟ್ಟ ತಪ್ಪುಗಳು ಮುಂದೆ ಬರುವವರಿಗೆ ಏನೆಲ್ಲಾ ಸಮಸ್ಯೆ ತಂದೊಡ್ಡಬಹುದೆಂಬುದು, ನಾನು ನಿರ್ದೇಶಕನಾದ ಮೇಲೆ ಅರಿವಿಗೆ ಬಂತು. ಹಾಗಾಗಿ ನನ್ನ ತಂಡದವರಿಗೆ ಮೊದಲೇ ಇದೆಲ್ಲಾ ವಿಷಯಗಳ ಬಗ್ಗೆ ಪದೇ ಪದೇ ಸೂಚನೆ ನೀಡುತ್ತಲೇ ಇರುತ್ತೇನೆ. ಹಾಗೂ ಸಾಧ್ಯವಾದಾಗೆಲ್ಲಾ ನಾನೇ ಅದರ ಬಗ್ಗೆ ಗಮನ ಕೊಟ್ಟು ಎಚ್ಚರಿಕೆ ವಹಿಸುತ್ತಿರುತ್ತೇನೆ.

ಹೀಗೆಲ್ಲಾ ಸಮಸ್ಯೆಗಳಿಂದಾಗಿ ನನಗೆ ಬೇಕಾದಂತಹ ಲೊಕೇಷನ್ ಸಿಗಲೇ ಇಲ್ಲಾ. ಚಿತ್ರೀಕರಣ ಆರಂಭಿಸಲು ದಿನಗಳು ಹತ್ತಿರವಾಗುತ್ತಿತ್ತು, ಮುಖ್ಯವಾದ ಲೋಕೇಷನ್ ನನಗೆ ಸಿಕ್ಕೇ ಇರಲಿಲ್ಲಾ. ಅದರಲ್ಲೂ ಶೃತಿ ಅವರದ್ದು ಆಗ ತುಂಬಾ ಟೈಟ್ ಶ್ಕೆಡ್ಯೂಲ್ ಹಾಕಿಕೊಂಡಿದ್ದೆ. ಬೇರೆಲ್ಲಾ ಟೆನ್ಷನ್ ಗಳ ಮಧ್ಯೆ ಇದೂ ಒಂದು. ಕೊನೆಗೆ ಅಪಾರ್ಟ್‌ ಮೆಂಟ್ ನ ಆಸೆ ಬಿಟ್ಟು, ವಿಲ್ಲಾಗಳನ್ನು ಹುಡುಕಲು ಪ್ರಾರಂಭಿಸಿದೆ.

ಸಾಮಾನ್ಯವಾಗಿ ಹೊಸದಾಗಿ ನಿರ್ಮಿಸುತ್ತಿರುವ ವಿಲ್ಲಾಗಳಲ್ಲಿ ‘ಮಾಡೆಲ್’ ವಿಲ್ಲಾಗಳಿರುತ್ತವೆ. ಅದರ ಒಳಾಂಗಣವನ್ನು ಪೂರ್ಣವಾಗಿ ಸಿದ್ಧಪಡಿಸಿರುತ್ತಾರೆ. ವಿಲ್ಲಾ ಕೊಂಡುಕೊಳ್ಳಲು ಬರುವವರಿಗಾಗಿ ತೋರಿಸಲು ಸಿದ್ಧ ಪಡಿಸಿರುವ ಮಾದರಿ ವಿಲ್ಲಾಗಳವು. ಸಾಮಾನ್ಯವಾಗಿ ಚಿತ್ರೀಕರಣಕ್ಕೆ ಬಾಡಿಗೆಗೆ ಸಿಗುವ ಮನೆಗಳು ಹಾಳಾಗಿರುತ್ತವೆ. ಅವನ್ನು ಸರಿಪಡಿಸುವುದು ತುಂಬಾ ಖರ್ಚಿನ ಕೆಲಸ ಆದ್ದರಿಂದ ಹೊಸ ಕಡೆ ನಾನು ಹುಡುಕುತ್ತಿದ್ದುದು.

ಐಡಿಯಾ ಅಪಾರ್ಟ್‌ಮೆಂಟ್ ನಿಂದ ವಿಲ್ಲಾಗೆ ಬದಲಿಸಿಕೊಂಡಷ್ಟು ಸುಲಭವಾಗಿ ವಿಲ್ಲಾಗಳು ನನಗೆ ಸಿಗಲಿಲ್ಲಾ. ಅದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ ಮೇಲೆ ಕನಕಪುರ ರಸ್ತೆಯಲ್ಲಿ ಒಂದು ಕಡೆ ವಿಲ್ಲಾದಲ್ಲಿ ಇತ್ತೀಚೆಗೆ ಯಾವುದೋ ಕನ್ನಡ ಸಿನೆಮಾ ಚಿತ್ರೀಕರಣ ಮಾಡಿರುವ ವಿಷಯ ತಿಳಿಯಿತು. ಕೂಡಲೇ ಆ ಜಾಗಕ್ಕೆ ಹೋಗಿ ವಿಲ್ಲಾ ನೋಡಿದೆವು. ಬಹುಮಹಡಿಯ ಕಟ್ಟಡದಲ್ಲಿ ಇಲ್ಲಾ ಎಂಬುದನ್ನು ಹೊರತುಪಡಿಸಿ ಸಂಪೂರ್ಣವಾಗಿ ನನ್ನ ಕಲ್ಪನೆಗೆ ಪೂರಕವಾಗಿತ್ತು ಆ ಮನೆ. ಮನೆ ಎಲ್ಲಾ ನೋಡಿ, ನಮ್ಮ ಛಾಯಾಗ್ರಾಹಕ ಗುರು ಜೊತೆ ಬ್ಲಾಕಿಂಗ್ಸ್ ಎಲ್ಲಾ ಡಿಸ್ಕಸ್ ಮಾಡ್ಕೊಂಡು ಹೊರ ಬಂದೆ. ಹೊರ ಬಂದು ಕಂಪೆನಿಯವರ ಆಫೀಸಿನಲ್ಲಿ ಹೋಗಿ ಚಿತ್ರೀಕರಣಕ್ಕೆ ಅನುಮತಿ ಕೇಳಿದೆ. ಅಲ್ಲಿದ್ದ ಮಹಿಳೆ ಸರ್ ಮ್ಯಾನೇಜರ್ ಬರಬೇಕು, ಹತ್ತು ನಿಮಿಷ ವೇಟ್ ಮಾಡಿ ಅಂತ ನಗುಮುಖದಲ್ಲೆ ಹೇಳಿದರು.

ಹತ್ತು ನಿಮಿಷ ಆರು ಬಾರಿ ಆದ ನಂತರ ಮ್ಯಾನೇಜರ್ ಬಂದರು, ನಾನು ಎದ್ದು ನಿಂತು ನಮಸ್ಕಾರ ಹೇಳಿ, ನನ್ನ ಪರಿಚಯ ಮಾಡಿಕೊಂಡು ಚಿತ್ರೀಕರಣಕ್ಕೆ ಅನುಮತಿ ಕೇಳಿದ. ಮುಖ ಬಿಗಿದು ಆ ವ್ಯಕ್ತಿ, ಕೊಡೋದಿಕ್ಕಾಗಲ್ರೀ ಅಂತ ಮುಖದ ಮೇಲೆ ಹೇಳಿ, ಸ್ವಲ್ಪವೂ ಸೌಜನ್ಯ ತೋರಿಸದೇ ಎದ್ದು ಹೋಗಿಬಿಟ್ಟ. ಯಾಕೋ ಮನಸ್ಸಿಗೆ ಹರ್ಟ್ ಆಗೋಯ್ತು. ಹೊರ ಬಂದು ನಮ್ ಹುಡುಗರಿಗೆ ಇದರ ಓನರ್ ಯಾರು ಕೇಳ್ಕೊಂಡು ಬಾ ಎಂದು ಹೇಳಿದೆ.

ಓನರ್ ಜೆ ಪಿ ನಗರದಲ್ಲಿ ಇರೋದು ಎಂದು ತಿಳಿಯಿತು. ಹೇಗಾದರು ಮಾಡಿ ಇಲ್ಲಿ ಅನುಮತಿ ಪಡೆಯಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿ, ನಮ್ ನಿರ್ಮಾಪಕರಾದ ರಮೇಶ್ ರೆಡ್ಡಿ ಸರ್ ಅವರಿಗೆ ಕಾಲ್ ಮಾಡಿ, ಬಿಲ್ಡರ್ ಹೆಸರು ಡಿಟೇಲ್ಸ್ ಎಲ್ಲಾ ಕೊಟ್ಟು, ಹೇಗಾದರು ಮಾಡಿ ಅನುಮತಿ ಕೊಡಿಸಿ ಎಂದು ಕೇಳಿದೆ.

ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ನಾನು ಕೇಳಿದ ಮೊದಲ ಸಹಾಯ ಅದೇ. ಅವರು ಕನ್ಸ್ಟ್ರ ಕ್ಷನ್ ಫೀಲ್ಡಲ್ಲೇ ಇರೋದ್ರಿಂದ ತಕ್ಕಮಟ್ಟಿಗೆ ಪ್ರಭಾವಿಗಳೇ. ಯಾರ ಕಡೆಯಿಂದ ಕಾಲ್ ಮಾಡಿಸಿದರೋ ಏನೋ ಎರಡೇ ದಿನದಲ್ಲಿ ಅನುಮತಿಯೂ ಸಿಕ್ತು, ಅನುಪತಿ ಪತ್ರ ಪಡೆಯಲು ಡೆಪಾಸಿಟ್ ಕೂಡ ಕಟ್ಟಿದ್ದಾಯ್ತು. ಚಿತ್ರೀಕರಣಕ್ಕೊ ಮೊದಲೇ ಅನುಮತಿ ಪತ್ರ ಕೊಡ್ತೀವಿ ಅಂತ ಹೇಳಿದ್ರು. ಇಗೋ ಸ್ಯಾಟಿಸ್ಫೈ ಆದ ಖುಷಿಯಲ್ಲಿ ಬೇರೆ ಕೆಲಸಗಳ ಕಡೆ ಗಮನ ಹರಿಸಿದೆ. ‌

ಚಿತ್ರೀಕರಣ ಆರಂಭವಾಗಿ ಗೌರಿ ಮನೆಯ ಭಾಗದ ಆರಂಭಕ್ಕೂ ಮೊದಲು ಬೇರೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸುವುದರ ಕಡೆಗೆ ಗಮನ ನೀಡಿದ್ದೆ. ಇದರ ಮಧ್ಯೆ ಅನುಮತಿ ಪತ್ರ ಪಡೆದುಕೊಳ್ಳುವುದು ಮರೆತೇ ಹೋಗಿತ್ತು. ಮರುದಿನ ಗೌರಿ ಮನೆಯ ಚಿತ್ರೀಕರಣ ಆರಂಭವಾಗಬೇಕಿತ್ತು, ರಾತ್ರಿ ನೆನಪಾಯ್ತು ಅನುಮತಿ ಪತ್ರ ಇನ್ನೂ ಪಡೆದುಕೊಂಡಿಲ್ಲಾ ಅಂತ. ಸ್ವಲ್ಪ ಟೆನ್ಷನ್ ಆದ್ರು ಧೈರ್ಯ ಮಾಡಿಕೊಂಡೆ. ಹೇಗಿದ್ರು ಡೆಪಾಸಿಟ್ ಕಟ್ಟಿದ್ದೀವಲ್ಲಾ, ಏನೂ ಸಮಸ್ಯೆ ಆಗೋದಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಮರುದಿನ ಬೆಳಿಗ್ಗೆ ಅನುಮತಿ ಪತ್ರ ಪಡೆದುಕೊಳ್ಳಲು ಶರತ್ನನ್ನು ಕಳಿಸಿ, ನಾನು ಚಿತ್ರೀಕರಣದ ಸ್ಥಳಕ್ಕೆ ಹೊರಟೆ. ಶೃತಿ ಅವರೂ ಬರ್ತಿದ್ರು. ಮೈಸೂರಿನಿಂದ ಪೂರ್ಣ ಕೂಡ ಬಂದಿದ್ರು.

ಎಲ್ಲಾ ಲೋಕೇಶನ್ ಹತ್ತಿರದ ಒಂದು ಹೋಟೆಲ್ ಬಳಿ ತಲುಪಿದ್ವಿ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತಿರುವಾಗ ಶರತ್ಕಾಲ್ ಮಾಡಿ, ಸರ್ ಅನುಮತಿ ಪತ್ರ ಕೊಟ್ಟಿದ್ದಾರೆ. ಆದರೆ ಅದರೊಂದಿಗೆ ಕೆಲವು ಶರತ್ತುಗಳಿವೆ. ಆ ಶರತ್ತುಗಳನ್ನು ಅಳವಡಿಸಿಕೊಂಡು ಚಿತ್ರೀಕರಣ ಮಾಡೋದು ತುಂಬಾ ಕಷ್ಟ ಎಂದು ಹೇಳಿ, ಆ ಶರತ್ತಿನ ಪತ್ರವನ್ನು ವಾಟ್ಸಪ್ ಮಾಡಿದ. ಆ ಪತ್ರ ನೋಡಿ ನನಗೆ ತಲೆ ಚಕ್ಕರ್ ಹೊಡೆದಂತಾಯಿತು. ಆ ರೀತಿ ಇದ್ದವು ಅವು. ಏನು ಮಾಡುವುದೋ ತೋಚದ ಪರಿಸ್ಥಿತಿ ಇಡೀ ತಂಡ ಬಂದು ನಿಂತಿದೆ. ನಟಿ-ನಟ ಕೂಡ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಇದೆಂತಹ ತೊಡಕು. ಅದೂ ಚಿತ್ರೀಕರಣ ಒಂದೆರೆಡು ದಿನವಲ್ಲಾ. ಹದಿನೈದು ದಿನಗಳು ಒಂದೇ ಸ್ಥಳದಲ್ಲಿ ಚಿತ್ರೀಕರಿಸಬೇಕಿತ್ತು.

ಮುಂದೇನು ಮಾಡುವುದು ಎಂದು ತೋಚದೆ ತಲೆಕೆಡಿಸ್ಕೊಂಡಿರುವಾಗಲೇ ನಮ್ಮ ಕಾಸ್ಟ್ಯೂಮ್ ಡಿಸೈನರ್ ಮಾನಸ ಅವರ ಕಾಲ್ ಬಂತು. ಅವರು ಕಾಲ್ ಮಾಡಿ, ಚಿತ್ರೀಕರಣಕ್ಕೆ ದೂರವಾಗುತ್ತದೆ ಎಂಬ ಕಾರಣಕ್ಕೆ ನಾನು ಬೇಡವೆಂದು ಹೇಳಿದ್ದ ವಿಲ್ಲಾ ಬಗ್ಗೆ ನೆನಪಿಸಿದರು. ಅದು ಬನ್ನೇರುಘಟ್ಟ ಹತ್ತಿರದಲ್ಲಿತ್ತು. ಅಲ್ಲಿಂದ ಪ್ರತಿದಿನ ಹೋಗಿ ಬರುವುದು ಎಲ್ಲರಿಗು ತ್ರಾಸ ಆಗುತ್ತೆ ಎಂಬ ಕಾರಣಕ್ಕೆ ನಾನು ರಿಜೆಕ್ಟ್ ಮಾಡಿದ್ದೆ. ಆದರೆ ಈಗ ವಿಧಿ ಇರಲಿಲ್ಲ. ಕೂಡಲೇ ಸರವಣ ಗುರುನ ಕರೆದು, ಬಂದವರನ್ನು ಸುಮ್ಮನೆ ವಾಪಸ್ಸು ಕಳಿಸಿದರೂ ದಿನದ ಪೇಮೆಂಟ್ ಕೊಡಲೇಬೇಕು. ಅದರ ಬದಲು, ಹಾಡಿಗೆ ಬೇಕಾದ ಇನ್ನೊಂದಷ್ಟು ಮಾಂಟೇಜಸ್ ಚಿತ್ರೀಕರಣ ಮಾಡಿ ಎಂದು ತಿಳಿಸಿ, ಶರತ್ ಜೊತೆಗೆ ಹೊರಟೆ, ಆ ಬನ್ನೇರುಘಟ್ಟದ ವಿಲ್ಲಾದ ಬಿಲ್ಡರ್ಸ್ ಆಫೀಸು ಇದ್ದದ್ದು, ಲಾಲ್ ಬಾಗ್ ರಸ್ತೆಯಲ್ಲಿ. ನಾವು ತಲುಪುವ ವೇಳೆಗೆ ಮಾನಸ ಅವರೂ ಬಂದರು. ಮೂವರೂ ಹೋಗಿ, ದಿನವೆಲ್ಲಾ ಕುಳಿತು, ಮಾತನಾಡಿ, ಅಲ್ಲಿನ ಹೆಚ್ ಆರ್, ಮ್ಯಾನೇಜರ್, ಸಿಇಓ, ಮಾರ್ಕೆಟಿಂಗ್ ಹೆಡ್ ಅವರನ್ನೆಲ್ಲಾ ಒಪ್ಪಿಸಿ, ಡೆಪಾಸಿಟ್ ದುಡ್ದು ಕೊಟ್ಟು ಸಂಜೆಯ ವೇಳೆಗೆ ಹೇಗೋ ಅನುಮತಿ ಪಡೆದುಕೊಂಡೆವು.

ಆಫೀಸಿಂದಲೇ ಕರೆ ಮಾಡಿ, ಗುರು, ಸಂತೋಷ್ ಪಾಂಚಾಲ್ ಹಾಗೂ ನಿರ್ದೇಶನ ವಿಭಾಗದವರಿಗೆ ಮಾತ್ರ ಲೊಕೇಷನ್ಗೆ ಬರಲು ಹೇಳಿ, ಉಳಿದವರನ್ನು ಪ್ಯಾಕಪ್ ಹೇಳಿ ಕಳುಹಿಸಲು ಹೇಳಿ. ನಾನು ನಾಳೆ ಬೆಳಗ್ಗೆ ಚಿತ್ರೀಕರಣ ಮಾಡಬೇಕಿದ್ದ ಜಾಗ ನೋಡಲು ಸಂಜೆ ಹೊರಟೆ. ಅದೂ ನನ್ನ ಸಿನೆಮಾದ ಬಹುಭಾಗ ಚಿತ್ರೀಕರಿಸಬೇಕಾದ ಜಾಗ. ಆ ವಿಲ್ಲಾ ಹೇಗಿದೆಯೋ ಏನೋ ಎಂಬ ಆತಂಕದಲ್ಲಿ.

| ಮುಂದುವರೆಯುವುದು |

‍ಲೇಖಕರು ಮಂಸೋರೆ

February 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: